ಕೇರಳದಲ್ಲಿ ಮೆದುಳು ತಿನ್ನುವ ರೋಗ; ಬಾವಿ ನೀರಿಗೂ ರೋಗಕ್ಕೆ ಸಂಬಂಧವಿದೆ ಎಂದ ICMR ಅಧ್ಯಯನ ವರದಿ

ಸಾಂದರ್ಭಿಕ ಚಿತ್ರ | Photo Credit : magnific.com
ಕೇರಳದಲ್ಲಿ ಬಾವಿ ನೀರಿನ ಗುಣಮಟ್ಟದ ಬಗ್ಗೆ ಅಧ್ಯಯನದಲ್ಲಿ ಕಾಳಜಿ ವ್ಯಕ್ತಪಡಿಸಲಾಗಿದ್ದು, ಜನಸಂಖ್ಯೆಯ ದೊಡ್ಡ ಭಾಗವು ಗೃಹಬಳಕೆಗೆ ಬಾವಿ ನೀರನ್ನು ಬಳಸುತ್ತಿರುವುದು ಆರೋಗ್ಯದ ಅಪಾಯವನ್ನು ಹೆಚ್ಚಿಸಿದೆ.
2025ರಲ್ಲಿ ಕೇರಳದಲ್ಲಿ ವರದಿಯಾದ ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ (AME) ಪ್ರಕರಣಗಳಿಗೆ ಸಂಬಂಧಿಸಿ ನಡೆದ ಸಂಶೋಧನೆಯಲ್ಲಿ ನೈಸರ್ಗಿಕ ಜಲಮೂಲಗಳಿಗೆ ಒಡ್ಡಿಕೊಳ್ಳುವುದು ಮತ್ತು ಸ್ನಾನ ಮತ್ತು ಇತರ ಗೃಹಬಳಕೆಯ ಉದ್ದೇಶಗಳಿಗಾಗಿ ಕ್ಲೋರಿನೇಟೆಡ್ ಅಲ್ಲದ ನೀರನ್ನು ಬಳಸುವುದನ್ನು ಗಮನಾರ್ಹ ಅಪಾಯಕಾರಿ ಅಂಶಗಳೆಂದು ಗುರುತಿಸಲಾಗಿದೆ. ಕೇರಳಂ ಆರೋಗ್ಯ ಇಲಾಖೆ ಮತ್ತು ಚೆನ್ನೈನಲ್ಲಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ರಾಷ್ಟ್ರೀಯ ಸಾಂಕ್ರಾಮಿಕ ರೋಗಶಾಸ್ತ್ರ ಸಂಸ್ಥೆಯ ತಜ್ಞರು ನಡೆಸಿದ ಮೊದಲ ಜಂಟಿ ಕ್ಷೇತ್ರ ಮಟ್ಟದ ಅಧ್ಯಯನದಲ್ಲಿ ಈ ವಿಚಾರ ಗೋಚರವಾಗಿದೆ.
ಕೇರಳಂನಲ್ಲಿ ಬಾವಿ ನೀರಿನ ಪ್ರಶ್ನಾರ್ಹ ಗುಣಮಟ್ಟದ ಕುರಿತ ಮೊದಲ ವೈಜ್ಞಾನಿಕ ಪುರಾವೆ ಈ ಕೇಸ್-ಕಂಟ್ರೋಲ್ ಅಧ್ಯಯನವಾಗಿದೆ. ಕೇರಳಂನಲ್ಲಿ ಜನಸಂಖ್ಯೆಯ ಬಹುತೇಕ ಭಾಗವು ಸ್ನಾನ ಮತ್ತು ಇತರ ಗೃಹಬಳಕೆಗೆ ಬಾವಿ ನೀರನ್ನೇ ಅವಲಂಬಿಸಿದೆ.
ಈ ಅಧ್ಯಯನಕ್ಕೆ ಮೊದಲೇ ವೈಜ್ಞಾನಿಕ ಸಮುದಾಯವು ಕೆಲವು ಅಪಾಯಕಾರಿ ನಡವಳಿಕೆಯನ್ನು ಚೆನ್ನಾಗಿ ವಿವರಿಸಿದೆ. ನೈಸರ್ಗಿಕ ಜಲಮೂಲಗಳಿಗೆ ಒಡ್ಡಿಕೊಳ್ಳುವುದು (ಮುಖ್ಯವಾಗಿ ನೀರಿನಲ್ಲಿ ಧುಮುಕುವುದು ಮತ್ತು ಮೂಗಿನ ಹೊಳ್ಳೆಗಳಿಗೆ ನೀರು ಹಾಕುವುದು) ಅಪಾಯಕಾರಿ. ಏಕೆಂದರೆ ಮುಖ ಅಥವಾ ಮೂಗಿನಲ್ಲಿ ಗಾಯಗಳಿದ್ದರೆ ಮತ್ತು ಹುಣ್ಣುಗಳು ಅಥವಾ ಚರ್ಮದ ಗಾಯಗಳಿದ್ದಾಗ ನೈಸರ್ಗಿಕ ಜಲಮೂಲ ಪ್ರವೇಶಿಸುವುದರಿಂದ ಅಕಾಂತಮೀಬಾದಿಂದ ಉಂಟಾಗುವ AME ಗೆ ಒಡ್ಡಿಕೊಂಡಂತಾಗುತ್ತದೆ. ಇದು ಅಂಗಾಂಶ ಅಥವಾ ಉಸಿರಾಟದ ಪ್ರದೇಶದ ಮೂಲಕ ದೇಹವನ್ನು ಪ್ರವೇಶಿಸಬಹುದು.
“ಈಗಿನ ಅಧ್ಯಯನದಲ್ಲಿ ಕಂಡುಕೊಂಡಿರುವ ಪ್ರಕಾರ ಕ್ಲೋರಿನೇಟೆಡ್ ಅಲ್ಲದ ನೀರು ಅಥವಾ ಬಾವಿ ನೀರಿನ ಬಳಕೆ ಅಕಾಂತಮೀಬಾದಿಂದ ಉಂಟಾಗುವ AME ಜೊತೆಗೆ ಸಂಬಂಧಿಸಿದೆ. ಕೇರಳಂನಲ್ಲಿ ಜನಸಂಖ್ಯೆಯ ಒಂದು ಸಣ್ಣ ಭಾಗ ಮಾತ್ರ ಕ್ಲೋರಿನೇಟೆಡ್, ಸುರಕ್ಷಿತ, ಪೈಪ್ ಮೂಲಕ ನೀರು ಸರಬರಾಜು ಸೌಲಭ್ಯವನ್ನು ಹೊಂದಿದೆ. ಸ್ನಾನ ಮಾಡಲು ಅಥವಾ ಮುಖ ತೊಳೆಯಲು ಬಾವಿ ನೀರು ಬಳಸುವ ಜನರು AME ಪಡೆಯುವ ಸಾಧ್ಯತೆ 2.95 ಪಟ್ಟು ಹೆಚ್ಚಾಗಿದೆ ಎಂದು ಅಧ್ಯಯನಗಳು ತೋರಿಸಿವೆ” ಎಂದು ತಿರುವನಂತಪುರಂ ಸರ್ಕಾರಿ ವೈದ್ಯಕೀಯ ಕಾಲೇಜಿನ ಸಾಂಕ್ರಾಮಿಕ ರೋಗಗಳ ಮುಖ್ಯಸ್ಥ ಮತ್ತು ಅಧ್ಯಯನದಲ್ಲಿ ಭಾಗಿಯಾಗಿರುವ ಪ್ರಮುಖ ಸಂಶೋಧಕರಲ್ಲಿ ಒಬ್ಬರಾದ ಆರ್ ಅರವಿಂದ್ ತಿಳಿಸಿದ್ದಾರೆ.
ಅಂದಾಜು ಮಾಡಲಾದ ಜನಸಂಖ್ಯಾ ಕಾರಣ ಭಾಗ (PAF) ಅಂದರೆ- ಒಂದು ನಿರ್ದಿಷ್ಟ ರೋಗಕ್ಕೆ ಕಾರಣವಾಗುವ ಅಪಾಯಕಾರಿ ಅಂಶವನ್ನು ಸಂಪೂರ್ಣವಾಗಿ ತೆಗೆದು ಹಾಕಿದರೆ, ಆ ಜನಸಂಖ್ಯೆಯಲ್ಲಿ ಎಷ್ಟು ಪ್ರಮಾಣದ ಪ್ರಕರಣಗಳು ತಪ್ಪಿಸಿಕೊಳ್ಳಬಹುದೆಂಬುದನ್ನು ಅಂದಾಜು ಮಾಡುವ ಸಾಂಕ್ರಾಮಿಕ ಶಾಸ್ತ್ರದ ಅಳತೆ ಶೇ 34.2 ಆಗಿತ್ತು. ಅಂದರೆ ಕ್ಲೋರಿನೇಟೆಡ್ ಅಲ್ಲದ ಬಾವಿ ನೀರನ್ನು ನಿರ್ದಿಷ್ಟ ಅಪಾಯಕಾರಿ ಅಂಶವಾಗಿ ತೆಗೆದು ಹಾಕಿದರೆ ಜನಸಂಖ್ಯೆಯಲ್ಲಿ AME ಪ್ರಕರಣದಲ್ಲಿ ಶೇ 34.2ರಷ್ಟು ಅಂದರೆ ಸುಮಾರು ಮೂರನೇ ಭಾಗದಷ್ಟು ಮಂದಿ ಅಪಾಯದಿಂದ ತಪ್ಪಿಸಿಕೊಳ್ಳಬಹುದು.
PAF ಒಂದು ಸಾಂಕ್ರಾಮಿಕ ರೋಗಶಾಸ್ತ್ರೀಯ ಅಳತೆಯಾಗಿದ್ದು, ನಿರ್ದಿಷ್ಟ ಅಪಾಯಕಾರಿ ಅಂಶವನ್ನು ತೆಗೆದು ಹಾಕಿದರೆ ಜನಸಂಖ್ಯೆಯಲ್ಲಿ ಸಂಭವಿಸದ ರೋಗ ಪ್ರಕರಣಗಳ ಪ್ರಮಾಣವನ್ನು ಅಂದಾಜಿಸುತ್ತದೆ.
ಮುಖ್ಯವಾಗಿ ಅಧ್ಯಯನದಲ್ಲಿ ಕೌಟುಂಬಿಕ ನೀರಿನ ಬಳಕೆ ಎಂದರೆ ಮುಖ, ತಲೆ, ಚರ್ಮ ಅಥವಾ ದೇಹದೊಂದಿಗೆ ನೇರ ಸಂಪರ್ಕ ಒಳಗೊಂಡ ಚಟುವಟಿಕೆ ಸೂಚಿಸುತ್ತದೆಯೇ ವಿನಾ ನೀರು ಕುಡಿಯುವುದನ್ನು ಸೂಚಿಸುವುದಿಲ್ಲ.
ಕೇರಳಂನಲ್ಲಿ ಅನೇಕ ಮನೆಗಳು ವೈಯಕ್ತಿಕ ಅಥವಾ ಸಾರ್ವಜನಿಕ ಬಾವಿಗಳನ್ನು ಅವಲಂಬಿಸಿವೆ. ಭಾರೀ ಮಳೆ, ಪ್ರವಾಹ, ಒಳಚರಂಡಿ ಮಾಲಿನ್ಯ, ಸಾವಯವ ವಸ್ತುಗಳು ಮತ್ತು ಪಾಚಿಗಳ ಬೆಳವಣಿಗೆಯು ಕಳಪೆ ನಿರ್ವಹಣೆಯ ಬಾವಿಗಳಲ್ಲಿ ಮುಕ್ತವಾಗಿ ವಾಸಿಸುವ ಅಮೀಬಾ ಮಾಲಿನ್ಯ ಅಥವಾ ಪ್ರಸರಣಕ್ಕೆ ಕಾರಣವಾಗಬಹುದು.
ಈ ಕೇಸ್-ಕಂಟ್ರೋಲ್ ಅಧ್ಯಯನವು ನೀರಿನ ಗುಣಮಟ್ಟವು ಮುಂದಿನ ದಿನಗಳಲ್ಲಿ ರಾಜ್ಯವು ಹೂಡಿಕೆ ಮಾಡಬೇಕಾದ ಪ್ರಮುಖ ಸಾರ್ವಜನಿಕ ಆರೋಗ್ಯ ಸಮಸ್ಯೆ ಎಂಬುದಕ್ಕೆ ಅತ್ಯುನ್ನತ ಮಟ್ಟದ ವೈಜ್ಞಾನಿಕ ಪುರಾವೆಯಾಗಿದೆ. ಕಾಲ ಕಾಲಕ್ಕೆ ಕ್ಲೋರಿನೀಕರಣ ಮತ್ತು ಬಾವಿಗಳ ನಿರ್ವಹಣೆಯ ಜೊತೆಗೆ ನೀರಿನ ಗುಣಮಟ್ಟದ ಕಣ್ಗಾವಲು ಸ್ಥಳೀಯ ಸ್ವ-ಸರ್ಕಾರಗಳ ಮೂಲಕ ವರ್ಷಪೂರ್ತಿ ಚಟುವಟಿಕೆಯಾಗಿರಬೇಕು. ಹಾಗಾದಲ್ಲಿ ಮಾತ್ರ ಜನರು AME ಸೋಂಕಿಗೆ ಒಳಗಾಗುವ ಅಪಾಯವನ್ನು ಕಡಿಮೆ ಮಾಡಬಹುದು.
ಜಲಮೂಲಗಳು ಹೆಚ್ಚಿರುವ ರಾಜ್ಯದಲ್ಲಿ AME ಬಗ್ಗೆ ಸಾರ್ವಜನಿಕ ಆರೋಗ್ಯ ಸಂದೇಶ ಕಳುಹಿಸುವುದರಿಂದ, ವಿಶೇಷವಾಗಿ ಗೃಹಬಳಕೆಯ ಜಲಮೂಲಗಳ ನಿಯಮಿತ ಕ್ಲೋರಿನೀಕರಣದೊಂದಿಗೆ ಮುಂಗಾರು ಮತ್ತು ಮುಂಗಾರು ನಂತರದ ಅವಧಿಯಲ್ಲಿ ಅಪಾಯ ಕಡಿಮೆ ಮಾಡಬಹುದು.
ಅಮೆರಿಕದ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಆಂಡ್ ಪ್ರಿವೆನ್ಷನ್ ಜರ್ನಲ್ ಎಮರ್ಜಿಂಗ್ ಇನ್ಫೆಕ್ಷಿಯಸ್ ಡಿಸೀಸ್ನ ಇತ್ತೀಚೆಗಿನ ಸಂಚಿಕೆಯಲ್ಲಿ ಪ್ರಕಟವಾದ ‘ಅಮೀಬಿಕ್ ಮೆನಿಂಗೊಎನ್ಸೆಫಾಲಿಸಿಟ್, ಕೇರಳ 2025ರ ಸಾಂಕ್ರಾಮಿಕ ರೋಗ ಮತ್ತು ಅಪಾಯಕಾರಿ ಅಂಶಗಳು’ ಎಂಬ ಅಧ್ಯಯನವು ಜನವರಿ 1 ಮತ್ತು ನವೆಂಬರ್ 11, 2025ರ ನಡುವೆ ಕೇರಳದಲ್ಲಿ ವರದಿಯಾದ 159 AME ಪ್ರಕರಣಗಳನ್ನು ವಿಶ್ಲೇಷಿಸಿದೆ. ಇವುಗಳಲ್ಲಿ 76 ರಿಯಲ್ ಟೈಮ್ PCR ಮತ್ತು 83 ಸೆರೆಬ್ರೊಸ್ಪೈನಲ್ ದ್ರವದ ಸೂಕ್ಷ್ಮದರ್ಶಕ ಪರೀಕ್ಷೆಯಿಂದ ದೃಢೀಕರಿಸಲಾಗಿದೆ.
159 ಪ್ರಕರಣಗಳಲ್ಲಿ 41 ಮಂದಿ ಸಾವನ್ನಪ್ಪಿದ್ದರು. 2016ರಿಂದ 2024 ರ ನಡುವೆ ಕೇರಳದಲ್ಲಿ 45 AME ಪ್ರಕರಣಗಳು ಮತ್ತು 15 ಮರಣಗಳು ಸಂಭವಿಸಿವೆ. ಹೆಚ್ಚಿನ ವೈದ್ಯಕೀಯ ಅರಿವು, ಆಣ್ವಿಕ ರೋಗನಿರ್ಣಯದ ವ್ಯಾಪಕ ಲಭ್ಯತೆ ಮತ್ತು ಸುಧಾರಿತ ಕಣ್ಗಾವಲು 2025ರಲ್ಲಿ ದೃಢೀಕೃತ AME ಪ್ರಕರಣಗಳು ಹೆಚ್ಚಾಗಲು ಕಾರಣವಾಗಿರಬಹುದು ಎಂದು ಅಧ್ಯಯನ ಅಭಿಪ್ರಾಯಪಟ್ಟಿದೆ.
ಅಧ್ಯಯನದಲ್ಲಿ ನೈಸರ್ಗಿಕವಾಗಿ ಜಲಮೂಲಗಳಿಗೆ ಒಡ್ಡಿಕೊಳ್ಳುವುದು -ಹಿಂದಿನ ಮೂರು ತಿಂಗಳಲ್ಲಿ ಕೊಳಗಳು ಮತ್ತು ಕಾಲುವೆಗಳಲ್ಲಿ ಈಜು ಅಥವಾ ಡೈವ್ ಮಾಡಿರುವುದು- ವಿಶೇಷವಾಗಿ ಮ್ಯಾಕ್ಸಿಲೊಫೇಶಿಯಲ್ ಗಾಯ ಅಥವಾ ಮೂಗಿನ ಶಸ್ತ್ರಚಿಕಿತ್ಸೆ ಇತಿಹಾಸ ಹೊಂದಿರುವ ವ್ಯಕ್ತಿಗಳಲ್ಲಿ 4.7 ಪಟ್ಟು ಹೆಚ್ಚಿನ ರೋಗದ ಸಾಧ್ಯತೆ ಕಂಡುಬಂದಿದೆ. ಚರ್ಮದ ಗಾಯಗಳು ಅಥವಾ ಹುಣ್ಣುಗಳಿರುವವರು ನೈಸರ್ಗಿಕ ಜಲಮೂಲಗಳಿಗೆ ಒಡ್ಡಿಕೊಂಡಿರುವುದು AME ಜೊತೆಗೆ ಬಲವಾದ ಸಂಬಂಧ ಹೊಂದಿದ್ದು, ಸಾಧ್ಯತೆಗಳು 25.4 ಪಟ್ಟು ಹೆಚ್ಚಿದ್ದವು. ಅಂದರೆ ಚರ್ಮದ ಬಿರುಕುಗಳ ಮೂಲಕ ಪ್ರವೇಶಿಸಿ ಕೇಂದ್ರ ನರಮಂಡಲಕ್ಕೆ ಹರಡುವ ಅಕಾಂತಮೀಬಾದ ಸಾಮರ್ಥ್ಯ ಇದರಿಂದ ಸಾಬೀತಾಗಿದೆ.
ಆದರೆ ಅಧ್ಯಯನವು ಸ್ಪಷ್ಟವಾಗಿ ಹೇಳಿರುವ ಪ್ರಕಾರ ಬಾವಿ ನೀರು ಅಥವಾ ಪ್ರಾಕೃತಿಕ ನೀರಿನ ಸಂಪರ್ಕವು ರೋಗಕ್ಕೆ ಕಾರಣವಾಗಿರಬಹುದು ಎಂಬ ಸಂಬಂಧ ಕಂಡುಬಂದಿದೆ. ಆದರೆ ಇದು ನೇರ ಕಾರಣ ಎಂದು ಸಾಬೀತಾಗಿಲ್ಲ. ಅದನ್ನು ಖಚಿತಪಡಿಸಲು ಇನ್ನಷ್ಟು ವೈಜ್ಞಾನಿಕ ಅಧ್ಯಯನಗಳು ಬೇಕು.
ಸೌಜನ್ಯ: thehindu.com






