ಬ್ರೆಝಿಲ್ ಅಧ್ಯಕ್ಷೀಯ ಚುನಾವಣೆ: ಲೂಯಿಝ್ ಇನಾಸಿಯೊ ಲುಲಾ ಡ ಸಿಲ್ವಾ ನಾಲ್ಕನೇ ಬಾರಿಗೆ ಅಧಿಕಾರದ ಗದ್ದುಗೆಗೇರಿದ್ದು ಹೇಗೆ?

Photo Credit : AP
ರಾಜಕೀಯದಲ್ಲಿ ಮೂರು ವಾರಗಳ ಅವಧಿ ಅತ್ಯಂತ ದೀರ್ಘವಾದುದು. ಇದನ್ನು ಬ್ರೆಝಿಲ್ನ ಲೂಯಿಝ್ ಇನಾಸಿಯೊ ಲುಲಾ ಡ ಸಿಲ್ವಾ ಮತ್ತೆ ಸಾಬೀತುಪಡಿಸಿದ್ದಾರೆ.
ಅಕ್ಟೋಬರ್ 4ರಂದು ನಡೆದ ಮೊದಲ ಹಂತದ ಮತದಾನದಲ್ಲಿ ಎಡಪಂಥೀಯ ನಾಯಕರಾದ ಹಾಲಿ ಅಧ್ಯಕ್ಷ ಲುಲಾ, ಮಾಜಿ ಅಧ್ಯಕ್ಷ ಜೈರ್ ಬೊಲ್ಸೊನಾರೊ ಅವರ ಹಿರಿಯ ಮಗ ಫ್ಲೇವಿಯೊ ಬೊಲ್ಸೊನಾರೊ ವಿರುದ್ಧ ಅಲ್ಪ ಅಂತರದ ಹಿನ್ನಡೆ ಅನುಭವಿಸಿದ್ದರು. ಮೊದಲ ಹಂತದಲ್ಲಿ ಬಲಪಂಥೀಯ ಸೆನೆಟರ್ ಫ್ಲೇವಿಯೊ ಶೇ. 47ರಷ್ಟು ಮತಗಳನ್ನು ಪಡೆದರೆ, ಲುಲಾ ಶೇ. 45ರಷ್ಟು ಮತಗಳನ್ನು ಗಳಿಸಿದ್ದರು. ರನ್ಆಫ್ (ಎರಡನೇ ಹಂತದ ಸ್ಪರ್ಧೆ) ತಪ್ಪಿಸಲು ಅಗತ್ಯವಿದ್ದ ಶೇ. 51ರಷ್ಟು ಮತಗಳು ಇಬ್ಬರಿಗೂ ಸಿಕ್ಕಿರಲಿಲ್ಲ.
ಇದರಿಂದ ಲುಲಾ ಅವರ ರಾಜಕೀಯ ಭವಿಷ್ಯ ಅನಿಶ್ಚಿತತೆಗೆ ಸಿಲುಕಿತ್ತು. ದೇಶದ ಪ್ರಗತಿಪರ ಬೆಂಬಲಿಗರು ಮೂರು ವಾರಗಳ ಕಾಲ ತೀವ್ರ ಆತಂಕದಲ್ಲಿದ್ದರು. ಏಕೆಂದರೆ, 1980ರ ದಶಕದ ನಂತರ ಮೊದಲ ಹಂತದಲ್ಲಿ ಹಿನ್ನಡೆ ಅನುಭವಿಸಿದ ಯಾವೊಬ್ಬ ಅಭ್ಯರ್ಥಿಯೂ ಎರಡನೇ ಹಂತದ ಮತದಾನದಲ್ಲಿ ಗೆದ್ದ ಇತಿಹಾಸವಿರಲಿಲ್ಲ.
ಎಲ್ಲ ಸವಾಲುಗಳನ್ನು ಮೆಟ್ಟಿ ನಿಂತ 80 ವರ್ಷದ ಲುಲಾ, ರವಿವಾರ (ಅಕ್ಟೋಬರ್ 25) ರೋಚಕ ರೀತಿಯಲ್ಲಿ ಕಂಬ್ಯಾಕ್ ಮಾಡಿ ನಾಲ್ಕನೇ ಬಾರಿಗೆ ಅಧ್ಯಕ್ಷೀಯ ಅಧಿಕಾರವನ್ನು ತಮ್ಮದಾಗಿಸಿಕೊಂಡರು.
ಲುಲಾ ಬರೆದ ಐತಿಹಾಸಿಕ ಗೆಲುವಿನ ದಾಖಲೆ
ಅಕ್ಟೋಬರ್ 25ರ ರವಿವಾರದಂದು 80 ವರ್ಷದ ಲುಲಾ, ಬ್ರೆಝಿಲ್ ರಾಜಕೀಯ ಇತಿಹಾಸದಲ್ಲೇ ಯಾರೂ ಮಾಡದ ಸಾಧನೆ ಮಾಡಿದರು. ಮೊದಲ ಹಂತದ ಮತದಾನದಲ್ಲಿ ಬೊಲ್ಸೊನಾರೊ ಅವರಿಗಿಂತ ಹಿನ್ನಡೆಯಲ್ಲಿದ್ದರೂ, ಬಳಿಕ ಮುನ್ನಡೆ ಸಾಧಿಸಿ ತಮ್ಮ ರಾಜಕೀಯ ಭವಿಷ್ಯವನ್ನು ಸಂಪೂರ್ಣವಾಗಿ ಬದಲಾಯಿಸಿಕೊಂಡರು.
ಅಕ್ಟೋಬರ್ 4ರಂದು ನಡೆದ ಮೊದಲ ಹಂತದಲ್ಲಿ ಲುಲಾ ಶೇ. 45ರಷ್ಟು ಮತಗಳನ್ನು ಪಡೆದರೆ, ಮಾಜಿ ಅಧ್ಯಕ್ಷರ ಮಗ ಶೇ. 47ರಷ್ಟು ಮತಗಳನ್ನು ಗಳಿಸಿ ಮುನ್ನಡೆಯಲ್ಲಿದ್ದರು. ಕೇವಲ ಮೂರೇ ವಾರಗಳಲ್ಲಿ ಪರಿಸ್ಥಿತಿಯನ್ನು ತಮ್ಮತ್ತ ತಿರುಗಿಸಿಕೊಂಡ ಲುಲಾ, ಅಕ್ಟೋಬರ್ 25ರ ಅಂತಿಮ ಹಂತದಲ್ಲಿ ಶೇ. 51.7ರಷ್ಟು ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಫ್ಲೇವಿಯೊ ಬೊಲ್ಸೊನಾರೊ ಶೇ. 48.2ರಷ್ಟು ಮತಗಳನ್ನು ಪಡೆದಿದ್ದರು.
ಫಲಿತಾಂಶ ಹೊರಬೀಳುತ್ತಿದ್ದಂತೆ ರಿಯೊ ಡಿ ಜನೈರೊದಲ್ಲಿ ಪಟಾಕಿ ಸಿಡಿಸಿ, ವುವುಜೆಲಾ (ಪೀಪಿ) ಊದಿ ಸಂಭ್ರಮಿಸಲಾಯಿತು. ಇತ್ತ ಸಾವೊ ಪಾಲೊ ನಗರದ ರಸ್ತೆಗಳಲ್ಲಿ ಲುಲಾ ಅವರ ವರ್ಕರ್ಸ್ ಪಾರ್ಟಿಯ ಕೆಂಪು ಬಣ್ಣದ ಉಡುಪು ಧರಿಸಿದ ಸಾವಿರಾರು ಬೆಂಬಲಿಗರು ಜಮಾಯಿಸಿ ಸಂಭ್ರಮಿಸಿದರು. ಬ್ರೆಝಿಲ್ನ ಕೆಲವು ಕಡೆ ಬೆಂಬಲಿಗರು ಆನಂದಬಾಷ್ಪ ಸುರಿಸಿದರು.
ಸಾವೊ ಪಾಲೊದ ಹೊಟೇಲೊಂದರಲ್ಲಿ ಕೆಂಪು ಬಣ್ಣದ, ನಕ್ಷತ್ರದ ಆಕಾರದ ಕನ್ನಡಕ ಧರಿಸಿ ಸಂತೋಷದಿಂದ ಕುಣಿದಾಡಿದ ಲುಲಾ, ಫಲಿತಾಂಶದ ಸಂಭ್ರಮದಲ್ಲಿ ಮಿಂದೆದ್ದರು.
ಬಳಿಕ ಸಾವೊ ಪಾಲೊದಲ್ಲಿ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಲುಲಾ, "ಬ್ರೆಝಿಲ್ನ ಪ್ರಜಾಪ್ರಭುತ್ವವನ್ನು ರಕ್ಷಿಸಲು ರಸ್ತೆಗೆ ಇಳಿದ ಪ್ರತಿಯೊಬ್ಬರಿಗೂ" ಧನ್ಯವಾದ ಅರ್ಪಿಸಿದರು. ಮುಂದುವರಿದು, "ದೇಶದ ಸಾರ್ವಭೌಮತ್ವಕ್ಕೆ ಮತ ಎಷ್ಟು ಮುಖ್ಯ ಎಂಬುದನ್ನು ನಾವು ಜನರಿಗೆ ಮನವರಿಕೆ ಮಾಡಿಕೊಟ್ಟಿದ್ದರಿಂದ ಅವರು ಮತ ಚಲಾಯಿಸಿದ್ದಾರೆ. ಈ ಚುನಾವಣೆ ನಕಾರಾತ್ಮಕತೆ ಮತ್ತು ಸುಳ್ಳುಗಳಿಗೆ ಸಿಕ್ಕ ಸೋಲು" ಎಂದು ಹೇಳಿದರು.
ಅಲ್ಲದೆ, ಬ್ರೆಝಿಲ್ "ಯಾರದೇ ಹಿತ್ತಲಾಗಿರಲು ಒಪ್ಪುವುದಿಲ್ಲ" ಎಂದರು. ಇದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ನೀಡಿದ ತಿರುಗೇಟು ಎಂದೇ ವಿಶ್ಲೇಷಿಸಲಾಗಿದೆ.
ಇನ್ನೊಂದೆಡೆ, ವಿಜಯೋತ್ಸವದ ಭಾಷಣ ಮಾಡುವ ನಿರೀಕ್ಷೆಯಲ್ಲಿದ್ದ ಬೊಲ್ಸೊನಾರೊ, ಪ್ರಕಟವಾದ ಫಲಿತಾಂಶ "ಅಸಾಧ್ಯ" ಮತ್ತು "ವಿವರಿಸಲಾಗದ್ದು" ಎಂದು ಪ್ರತಿಕ್ರಿಯಿಸಿ, ಚುನಾವಣಾ ಫಲಿತಾಂಶವನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
ಬೊಲ್ಸೊನಾರೊ ವಿರುದ್ಧ ಲುಲಾ ಸಾಧಿಸಿದ ಐತಿಹಾಸಿಕ ಗೆಲುವಿನ ಹಾದಿ
ಮೊದಲ ಹಂತದ ಮತದಾನದಲ್ಲಿ ಹಿನ್ನಡೆ ಅನುಭವಿಸಿದ್ದ ಲುಲಾ, ರನ್ಆಫ್ ಹಂತದಲ್ಲಿ ಗೆಲ್ಲಲು ಜನಪ್ರಿಯ ಕಲ್ಯಾಣ ಯೋಜನೆಗಳು ಮತ್ತು ಭರವಸೆಗಳ ಮೊರೆ ಹೋದರು.
ಸೆಪ್ಟೆಂಬರ್ನಲ್ಲಿ ಲುಲಾ, ಕುಟುಂಬದ ಗಾತ್ರ ಮತ್ತು ಮಕ್ಕಳ ಸಂಖ್ಯೆಯನ್ನು ಆಧರಿಸಿ ನಗದು ನೆರವು ನೀಡುವ ಬ್ರೆಝಿಲ್ನ ಪ್ರಮುಖ 'ಬೋಲ್ಸಾ ಫ್ಯಾಮಿಲಿಯಾ' (Bolsa Família) ಯೋಜನೆಯ ಮೊತ್ತವನ್ನು ಶೇ. 15ರಷ್ಟು ಹೆಚ್ಚಿಸುವುದಾಗಿ ಘೋಷಿಸಿದ್ದರು. ಚುನಾವಣೆಗೂ ಕೆಲವೇ ದಿನಗಳ ಮೊದಲು ಜಾರಿಗೆ ಬಂದ ಈ ನಿರ್ಧಾರವು ಸುಮಾರು 5 ಕೋಟಿ ಜನರಿಗೆ ಅನುಕೂಲವಾಯಿತು.
ಕಳೆದ ಬುಧವಾರ (ಅಕ್ಟೋಬರ್ 21), ಸಣ್ಣ ಉದ್ಯಮಗಳಿಗೆ ಸಾಲ ಪರಿಹಾರ ಮತ್ತು ತೆರಿಗೆ ವಿನಾಯಿತಿಗಳನ್ನು ಲುಲಾ ಘೋಷಿಸಿದರು. ಸರ್ಕಾರಿ ಬ್ಯಾಂಕ್ಗಳ ಮೂಲಕ ಕಡಿಮೆ ಬಡ್ಡಿದರದಲ್ಲಿ ಸಾಲ ಸಿಗುವಂತೆ ಮಾಡಿ, ಸಾಲ ಮರುಪಾವತಿಗೆ ಕಾಲಾವಕಾಶ ಕಲ್ಪಿಸಿದರು. ಜೊತೆಗೆ, ಲಕ್ಷಾಂತರ ಕಡಿಮೆ ಆದಾಯದ ಬ್ರೆಝಿಲ್ನವರ ಸಾಲದ ಸುಸ್ತಿದಾರರ ದಾಖಲೆಗಳನ್ನು ತೆರವುಗೊಳಿಸಲು ರಾಷ್ಟ್ರೀಯ ಸಾಲ ಮರುಪಾವತಿ ಯೋಜನೆಯನ್ನು ಪರಿಚಯಿಸಿದರು. ವಾರಾಂತ್ಯದಲ್ಲಿ ಉಚಿತ ಸಾರಿಗೆ ಸೌಲಭ್ಯ ಒದಗಿಸುವ ಸುಳಿವನ್ನೂ ನೀಡಿದ್ದರು.
ಯುವಜನರನ್ನು ತಲುಪಲು ಲುಲಾ ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡರು. ರಾಯಿಟರ್ಸ್ ವರದಿಯಂತೆ, ಎರಡನೇ ಹಂತದ ಸ್ಪರ್ಧೆಗೆ ಕೆಲವೇ ದಿನಗಳ ಮೊದಲು ಅವರು ತಮ್ಮ ಮೊದಲ ಸ್ಮಾರ್ಟ್ಫೋನ್ ಖರೀದಿಸಿದರು. ಪ್ರಚಾರದ ವೇಳೆ ಅವರು, "ನಾನು ಸೆಲ್ಫಿಗಳ ರಾಜನಾಗುತ್ತಿದ್ದೇನೆ, ನಿಜವಾದ ಇಂಟರ್ನೆಟ್ ಬಳಕೆದಾರನಾಗುತ್ತಿದ್ದೇನೆ" ಎಂದು ಹೇಳಿದ್ದರು.
ಲುಲಾ ಅವರ ಈ ಅದ್ಭುತ ಕಂಬ್ಯಾಕ್ಗೆ ಮತ್ತೊಂದು ಪ್ರಮುಖ ಕಾರಣವೆಂದರೆ, ಮತದಾರರನ್ನು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ಕರೆತಂದಿದ್ದು. ಮೊದಲ ಹಂತದಲ್ಲಿ ಶೇ. 21.08ರಷ್ಟು ದಾಖಲೆಯ ಪ್ರಮಾಣದ ಮತದಾರರು ಮತದಾನದಿಂದ ಹೊರಗುಳಿದಿದ್ದರು. ಮತಗಟ್ಟೆಗಳಿಂದ ದೂರ ವಾಸಿಸುವ ಲುಲಾ ಬೆಂಬಲಿಗರಿಗೆ ಇದು ಹಿನ್ನಡೆಯಾಗಿತ್ತು. ಆದರೆ, ಎರಡನೇ ಹಂತದಲ್ಲಿ ಈ ಪ್ರಮಾಣ ಶೇ. 19.21ಕ್ಕೆ ಇಳಿಯಿತು. ನಿರೀಕ್ಷೆಗಿಂತ ಹೆಚ್ಚಿನ ಮತದಾನ ನಡೆದದ್ದು ಲುಲಾ ಅವರ ಗೆಲುವಿಗೆ ಬಲ ನೀಡಿತು ಎಂದು ಸಮೀಕ್ಷೆಗಳು ತಿಳಿಸಿವೆ.
'ಥಿಂಕ್ ಪಾಲಿಸಿ' ಕನ್ಸಲ್ಟೆನ್ಸಿಯ ಸಹ-ಸಂಸ್ಥಾಪಕ ಲಿಯೊನಾರ್ಡೊ ಬ್ಯಾರೇಟೊ ಮಾತನಾಡಿ, ಮತದಾರರು ಬೊಲ್ಸೊನಾರೊ ಅವರ ಹೊಸ ಪ್ರಯೋಗಗಳಿಗಿಂತ ಲುಲಾ ಅವರ ಪರಿಚಿತ ಆಡಳಿತವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ವಿಶ್ಲೇಷಿಸಿದ್ದಾರೆ. "ಜನರು ಇಂದು ಅನಿಶ್ಚಿತತೆಯ ಬದಲಾವಣೆ ಮತ್ತು ಹಕ್ಕುಗಳನ್ನು ಖಾತರಿಪಡಿಸುವ ಪರಿಚಿತ ಹಾದಿಯ ನಡುವೆ ಲುಲಾ ಅವರ ಹಾದಿಯನ್ನು ಆಯ್ದುಕೊಂಡಿದ್ದಾರೆ" ಎಂದು ಅವರು ಹೇಳಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ.
ಪ್ರಕೃತಿಯೂ ಲುಲಾ ಪರವಾಗಿದ್ದಂತೆ ಕಾಣುತ್ತಿತ್ತು. ಬೊಲ್ಸೊನಾರೊ ಅವರ ಭದ್ರಕೋಟೆ ಎನಿಸಿದ ದಕ್ಷಿಣ ಪ್ರದೇಶಗಳಲ್ಲಿ ಭಾರೀ ಮಳೆಯಾಗಿದ್ದು, ಜನರು ಮತಗಟ್ಟೆಗಳಿಗೆ ಬರುವುದನ್ನು ತಡೆಯಿತು.
ಲುಲಾ ಸಾಧನೆ
ಈ ಗೆಲುವಿನೊಂದಿಗೆ ಲುಲಾ ಅವರು ಅಭೂತಪೂರ್ವ ರೀತಿಯಲ್ಲಿ ನಾಲ್ಕನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಜೈಲು ವಾಸ ಸೇರಿದಂತೆ ಹಲವು ಏಳುಬೀಳುಗಳಿಂದ ಕೂಡಿದ ದೀರ್ಘ ರಾಜಕೀಯ ಜೀವನದ ಬಳಿಕ ಈ ಅಚ್ಚರಿಯ ಗೆಲುವು ಒಲಿದಿದೆ.
ಲುಲಾ ಅವರು ಪೆರ್ನಂಬುಕೊ ರಾಜ್ಯದ ಬಡ ಕುಟುಂಬದಲ್ಲಿ ಎಂಟು ಮಕ್ಕಳಲ್ಲಿ ಏಳನೆಯವರಾಗಿ ಜನಿಸಿದರು. ಸಾಕ್ಷರರಲ್ಲದ ರೈತ ಕುಟುಂಬದಲ್ಲಿ ಬೆಳೆದ ಅವರು, ಲೋಹದ ಕಾರ್ಖಾನೆಯಲ್ಲಿ ಕೆಲಸಗಾರರಾಗಿ ಮತ್ತು ಟ್ರೇಡ್ ಯೂನಿಯನ್ ನಾಯಕರಾಗುವ ಮೊದಲು ಶೂ ಪಾಲಿಶ್ ಮಾಡುವುದು ಹಾಗೂ ಕಡ್ಲೆಕಾಯಿ ಮಾರಾಟ ಮಾಡುವ ಕೆಲಸ ಮಾಡುತ್ತಿದ್ದರು. 1960ರ ದಶಕದಲ್ಲಿ ಕಾರ್ಖಾನೆಯಲ್ಲಿ ಸಂಭವಿಸಿದ ಅಪಘಾತವೊಂದರಲ್ಲಿ ಅವರು ತಮ್ಮ ಒಂದು ಬೆರಳನ್ನು ಕಳೆದುಕೊಂಡಿದ್ದರು.
ಮೂರು ಬಾರಿ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋತ ಬಳಿಕ, 2003ರಲ್ಲಿ ಲುಲಾ ಮೊದಲ ಬಾರಿಗೆ ಅಧ್ಯಕ್ಷರಾಗಿ ಬ್ರೆಸಿಲಿಯಾದ ಅಧ್ಯಕ್ಷೀಯ ಭವನವನ್ನು ಪ್ರವೇಶಿಸಿದರು. ಬಳಿಕ 2006ರಲ್ಲಿ ಎರಡನೇ ಬಾರಿಗೆ ಮರುಆಯ್ಕೆಯಾದರು. ಆದರೆ, ಅವರ ಹಿಂದಿನ ಆಡಳಿತಾವಧಿಯಲ್ಲಿ ಬೃಹತ್ ಭ್ರಷ್ಟಾಚಾರ ಹಗರಣಗಳು ಕೇಳಿಬಂದು, ಅವರು ಬಂಧನವನ್ನೂ ಎದುರಿಸಬೇಕಾಯಿತು.
ಹಿನ್ನಡೆಗಳ ನಡುವೆಯೂ 2022ರ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷರಾಗಿದ್ದ ಜೈರ್ ಬೊಲ್ಸೊನಾರೊ ಅವರನ್ನು ಸೋಲಿಸುವ ಮೂಲಕ ಲುಲಾ ಮೂರನೇ ಬಾರಿಗೆ ಅಧಿಕಾರಕ್ಕೇರಿ ಕಂಬ್ಯಾಕ್ ಮಾಡಿದ್ದರು.
ತಮ್ಮ ಮೂರನೇ ಅವಧಿಯಲ್ಲಿ ಲುಲಾ ಅವರು ಹಿಂದಿನ ಸರಕಾರದಿಂದ ಕುಂಠಿತಗೊಂಡಿದ್ದ ಸಾಮಾಜಿಕ ಯೋಜನೆಗಳನ್ನು ಮರುಸ್ಥಾಪಿಸಿದರು. ಜೊತೆಗೆ, ಅಮೆಜಾನ್ ಮಳೆಕಾಡುಗಳ ನಾಶವನ್ನು ತಡೆದು, ಬ್ರೆಝಿಲ್ನ ಪ್ರಜಾಪ್ರಭುತ್ವವನ್ನು ಮತ್ತಷ್ಟು ಗಟ್ಟಿಮುಟ್ಟುಗೊಳಿಸಿದ ಕೀರ್ತಿಗೆ ಭಾಜನರಾಗಿದ್ದರು.
ಲುಲಾ ಮುಂದೆ ಸವಾಲಿನ ನಾಲ್ಕನೇ ಅವಧಿ
ಈ ಗೆಲುವು ಲುಲಾ ಅವರನ್ನು ಬ್ರೆಝಿಲ್ನ ಆಧುನಿಕ ಇತಿಹಾಸದ ಅತ್ಯಂತ ಪ್ರಭಾವಿ ನಾಯಕರಲ್ಲಿ ಒಬ್ಬರನ್ನಾಗಿ ಮಾಡಿದೆ. ಬ್ರೆಝಿಲ್ನ ಪ್ರಮುಖ ಪತ್ರಿಕೆಗಳು ಮತ್ತು ಮಾಧ್ಯಮಗಳು ಈ ಫಲಿತಾಂಶವನ್ನು ಲುಲಾ ಅವರ "ಐತಿಹಾಸಿಕ ತಿರುವು" ಎಂದು ಬಣ್ಣಿಸಿವೆ.
ಅಲ್ಲದೆ, ಜಗತ್ತಿನ ಹಲವಾರು ಪ್ರಮುಖ ನಾಯಕರಿಂದ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.
ಆದರೆ, ಲುಲಾ ಅವರ ನಾಲ್ಕನೇ ಆಡಳಿತಾವಧಿ ಸುಲಭವಾಗಿರಲಾರದು. ಅವರ ಪಕ್ಷಕ್ಕೆ ಸಂಸತ್ತಿನಲ್ಲಿ ಸ್ಪಷ್ಟ ಬಹುಮತವಿಲ್ಲದ ಕಾರಣ, ಕಾನೂನು ಮತ್ತು ಮಸೂದೆಗಳನ್ನು ಅಂಗೀಕರಿಸಲು ಅವರು ಕೇಂದ್ರ-ಬಲಪಂಥೀಯ ಪಕ್ಷಗಳ ಮೈತ್ರಿಕೂಟವನ್ನು ಅವಲಂಬಿಸಬೇಕಾಗಿದೆ. ರಿಯೊ ಡಿ ಜನೈರೊ ಫೆಡರಲ್ ವಿಶ್ವವಿದ್ಯಾಲಯದ ರಾಜಕೀಯ ವಿಜ್ಞಾನಿ ಮೈರಾ ಗೌಲಾರ್ಟ್ ಎಎಫ್ಪಿಗೆ ತಿಳಿಸಿರುವಂತೆ, ಈ ಪಕ್ಷಗಳೊಂದಿಗೆ ಸಂಧಾನ ಮಾಡಿಕೊಳ್ಳುವುದು ಲುಲಾ ಅವರಿಗೆ ಬಹುದೊಡ್ಡ ಸವಾಲಾಗಿದೆ.
ಮತ್ತೊಂದೆಡೆ, ಬ್ರೆಝಿಲ್ನ ಆರ್ಥಿಕತೆಯನ್ನು ಸರಿದೂಗಿಸುವ ಸವಾಲೂ ಇದೆ. ದೇಶದ ಸಾರ್ವಜನಿಕ ಸಾಲವು ಜಿಡಿಪಿಯ ಶೇ. 80ಕ್ಕಿಂತ ಹೆಚ್ಚಿದ್ದು, ಸಾಲದ ಹೊರೆ ಬೆಳೆಯುತ್ತಿದೆ. 'ಸೆರಾಸಾ' ಸಾಲ ಮಾಹಿತಿ ಸಂಸ್ಥೆಯ ಪ್ರಕಾರ, ದಾಖಲೆಯ ಸುಮಾರು 8.4 ಕೋಟಿ ಜನರು ಮತ್ತು 93 ಲಕ್ಷ ಉದ್ಯಮಗಳು ಸಾಲ ಮರುಪಾವತಿಯಲ್ಲಿ ಬಾಕಿ ಉಳಿಸಿಕೊಂಡಿವೆ.
ಇದರೊಂದಿಗೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸವಾಲನ್ನೂ ಲುಲಾ ಎದುರಿಸಬೇಕಾಗಿದೆ. ತಮ್ಮ ಮಿತ್ರ ಜೈರ್ ಬೊಲ್ಸೊನಾರೊ ವಿರುದ್ಧದ ಕಾನೂನು ಕ್ರಮಗಳಿಗೆ ಪ್ರತಿಯಾಗಿ ಟ್ರಂಪ್ ಕಳೆದ ವರ್ಷ ಬ್ರೆಝಿಲ್ ಉತ್ಪನ್ನಗಳ ಮೇಲೆ ಸುಂಕ ವಿಧಿಸಿದ್ದರು. ಈ ವರ್ಷವೂ ಕೆಲವು ಉತ್ಪನ್ನಗಳ ಮೇಲೆ ಶೇ. 25ರಷ್ಟು ಹೆಚ್ಚುವರಿ ಸುಂಕ ಹೇರಿದ್ದಾರೆ.
ಈ ಎಲ್ಲ ಬೆಳವಣಿಗೆಗಳ ನಡುವೆ, ಅಮೆರಿಕದೊಂದಿಗಿನ ರಾಜತಾಂತ್ರಿಕ ಬಾಂಧವ್ಯವನ್ನು ಸರಿದೂಗಿಸಿಕೊಂಡು ಹೋಗುವ ಹೊಣೆಗಾರಿಕೆ ಈಗ ಲುಲಾ ಅವರ ಮೇಲಿದೆ.
ಸೌಜನ್ಯ: firstpost.com






