ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬ್ರಿಜ್ ಭೂಷಣ್ ಸಿಂಗ್ ಖುಲಾಸೆ: 2023ರ ಜಂತರ್ ಮಂತರ್ ಪ್ರತಿಭಟನೆಯಿಂದ 2026ರ ತೀರ್ಪಿನವರೆಗಿನ ಬೆಳವಣಿಗೆಗಳು

Photo Credit: PTI
ಹಲವು ಮಹಿಳಾ ಕುಸ್ತಿಪಟುಗಳು ದಾಖಲಿಸಿದ್ದ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಮಾಜಿ ಬಿಜೆಪಿ ಸಂಸದ ಹಾಗೂ ಭಾರತೀಯ ಕುಸ್ತಿ ಫೆಡರೇಶನ್ (WFI) ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ದಿಲ್ಲಿ ನ್ಯಾಯಾಲಯ ಸೋಮವಾರ ಖುಲಾಸೆಗೊಳಿಸಿದೆ. ಪ್ರಕರಣದಲ್ಲಿ ಡಬ್ಲ್ಯೂಎಫ್ಐನ ಅಂದಿನ ಸಹಾಯಕ ಕಾರ್ಯದರ್ಶಿ ವಿನೋದ್ ತೋಮರ್ ಅವರನ್ನು ಸಹ ಖುಲಾಸೆಗೊಳಿಸಲಾಗಿದೆ.
ರೌಸ್ ಅವೆನ್ಯೂ ನ್ಯಾಯಾಲಯದ ತೀರ್ಪಿಗೆ ಪ್ರತಿಕ್ರಿಯಿಸಿದ ಬ್ರಿಜ್ ಭೂಷಣ್, "ನಾನು ಆರಂಭದಲ್ಲಿ ಹೇಳಿದ್ದು ಈಗ ನಿಜವಾಗಿದೆ. ನನ್ನ ವಿರುದ್ಧ ಇದ್ದವರ ಬಗ್ಗೆ ನನಗೆ ತಿಳಿದಿರಲಿಲ್ಲ. ನನ್ನ ಮೇಲಿನ ಆರೋಪ ಸಾಬೀತಾದರೆ ನಾನೇ ಸ್ವತಃ ಗಲ್ಲಿಗೇರುವುದಾಗಿ ಮೊದಲೇ ಹೇಳಿದ್ದೆ. ನ್ಯಾಯಾಲಯ ನನ್ನನ್ನು ಗೌರವಯುತವಾಗಿ ಖುಲಾಸೆಗೊಳಿಸಿದೆ. ಇದು ನನಗೂ ಮತ್ತು ನನ್ನ ಬೆಂಬಲಿಗರಿಗೂ ಸಂತೋಷದ ವಿಚಾರ. ಇಂದು ನಮಗೆ ಅತ್ಯಂತ ಸಂತಸದ ದಿನ" ಎಂದಿದ್ದಾರೆ.
ಬ್ರಿಜ್ ಭೂಷಣ್ ವಿರುದ್ಧ ಚಾರ್ಜ್ಶೀಟ್ ಸಲ್ಲಿಕೆಯಾದ ಮೂರು ವರ್ಷಗಳ ನಂತರ ಪ್ರಕರಣದ ವಿಚಾರಣೆ ಪೂರ್ಣಗೊಂಡಿದೆ. ಪ್ರಾಸಿಕ್ಯೂಷನ್ ಪರವಾಗಿ ಒಟ್ಟು 32 ಸಾಕ್ಷಿಗಳ ವಿಚಾರಣೆ ನಡೆಸಲಾಗಿತ್ತು.
ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಈ ತೀರ್ಪನ್ನು ಪ್ರಾಸಿಕ್ಯೂಷನ್ ದೆಹಲಿ ಹೈಕೋರ್ಟ್ನಲ್ಲಿ ಪ್ರಶ್ನಿಸಬಹುದಾಗಿದೆ.
► ಪ್ರಕರಣದ ಹಿನ್ನೆಲೆ
ಈ ಪ್ರಕರಣವು ಜನವರಿ 2023ರದ್ದು. ಒಲಿಂಪಿಕ್ಸ್ ಪಟುಗಳಾದ ವಿನೇಶ್ ಫೋಗಟ್, ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪುನಿಯಾ ಸೇರಿದಂತೆ ಹಲವು ಕುಸ್ತಿಪಟುಗಳು ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ಆರಂಭಿಸಿದ್ದರು. ಬ್ರಿಜ್ ಭೂಷಣ್ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಬೆದರಿಕೆ ಆರೋಪ ಹೊರಿಸಿದ್ದ ಅವರು, ಡಬ್ಲ್ಯೂಎಫ್ಐ ಅಧ್ಯಕ್ಷ ಸ್ಥಾನಕ್ಕೆ ಅವರ ರಾಜೀನಾಮೆ ಹಾಗೂ ಫೆಡರೇಶನ್ನಿಂದ ವಜಾಗೊಳಿಸುವಂತೆ ಆಗ್ರಹಿಸಿದ್ದರು.
ಪ್ರಕರಣದ ತನಿಖೆ ಪೂರ್ಣಗೊಳಿಸಿದ್ದ ದೆಹಲಿ ಪೊಲೀಸರು ಜೂನ್ 15, 2023ರಂದು 1,500 ಪುಟಗಳ ಚಾರ್ಜ್ಶೀಟ್ ಸಲ್ಲಿಸಿದ್ದರು.
ಭಾರತೀಯ ಒಲಿಂಪಿಕ್ ಸಂಸ್ಥೆಯ (IOA) ಅಧ್ಯಕ್ಷೆ ಪಿ.ಟಿ. ಉಷಾ ಅವರಿಗೆ ದೂರು ನೀಡಿದ ನಂತರ, ಮೇರಿ ಕೋಮ್ ಮತ್ತು ಯೋಗೇಶ್ವರ್ ದತ್ ಸೇರಿದಂತೆ ಪ್ರಮುಖ ಕ್ರೀಡಾಪಟುಗಳನ್ನೊಳಗೊಂಡ ತನಿಖಾ ಸಮಿತಿಯನ್ನು ರಚಿಸಲಾಗಿತ್ತು. ಆ ಸಮಯದಲ್ಲಿ ಡಬ್ಲ್ಯೂಎಫ್ಐ ತನ್ನ ಅಧ್ಯಕ್ಷರು ಮತ್ತು ತರಬೇತುದಾರರ ಮೇಲಿನ ಎಲ್ಲಾ ಆರೋಪಗಳನ್ನು ತಳ್ಳಿಹಾಕಿತ್ತು.
2023ರಲ್ಲಿ ದಿಲ್ಲಿಯಲ್ಲಿ ಸಾಕ್ಷಿ ಮಲಿಕ್, ವಿನೇಶ್ ಫೋಗಟ್, ಬಜರಂಗ್ ಪುನಿಯಾ ಹಾಗೂ ಸಂಗೀತಾ ಫೋಗಟ್ ಸೇರಿದಂತೆ ಹಲವು ಪ್ರಮುಖ ಕುಸ್ತಿಪಟುಗಳು ತಿಂಗಳುಗಟ್ಟಲೆ ಸುದೀರ್ಘ ಪ್ರತಿಭಟನೆ ನಡೆಸಿದ್ದರು. ಅಪ್ರಾಪ್ತ ಬಾಲಕಿ ಸೇರಿದಂತೆ ಹಲವು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಿಜೆಪಿ ನಾಯಕ ಬ್ರಿಜ್ ಭೂಷಣ್ ಅವರನ್ನು ಬಂಧಿಸುವಂತೆ ಅವರು ಒತ್ತಾಯಿಸಿದ್ದರು. 2016 ಮತ್ತು 2019ರ ನಡುವೆ ಡಬ್ಲ್ಯೂಎಫ್ಐ ಕಚೇರಿ, ಬ್ರಿಜ್ ಭೂಷಣ್ ಸಿಂಗ್ ಅವರ ಅಧಿಕೃತ ನಿವಾಸ ಹಾಗೂ ವಿದೇಶಿ ಪ್ರವಾಸಗಳ ಸಂದರ್ಭದಲ್ಲಿ ಈ ಕಿರುಕುಳ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
2023ರಲ್ಲಿ ಪ್ರತಿಭಟನೆ ತೀವ್ರಗೊಂಡಾಗ, ಈ ವಿಷಯದ ಆಂತರಿಕ ತನಿಖೆಗೆ ಕ್ರೀಡಾ ಸಚಿವಾಲಯವು ಓವರ್ಸೈಟ್ ಕಮಿಟಿ ರಚಿಸಿತ್ತು. ಮೇ 2023ರಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿದ ನಂತರ ಪೊಲೀಸರು ಬ್ರಿಜ್ ಭೂಷಣ್ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ಜೂನ್ ನಲ್ಲಿ ರೌಸ್ ಅವೆನ್ಯೂ ನ್ಯಾಯಾಲಯಕ್ಕೆ ಪೊಲೀಸರು 1,000 ಪುಟಗಳ ಚಾರ್ಜ್ಶೀಟ್ ಸಲ್ಲಿಸಿದ್ದರು.
ವಿಚಾರಣಾ ನ್ಯಾಯಾಲಯವು ತಮ್ಮ ವಿರುದ್ಧ ಲೈಂಗಿಕ ಕಿರುಕುಳ, ಬೆದರಿಕೆ ಹಾಗೂ ಮಹಿಳೆಯರ ಮಾನಭಂಗ ಆರೋಪಗಳನ್ನು ಹೊರಿಸಿದ ನಂತರ, ಬ್ರಿಜ್ ಭೂಷಣ್ ಹೈಕೋರ್ಟ್ ಮೆಟ್ಟಿಲೇರಿದ್ದರು. ತಮ್ಮನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಹಾಗೂ ಪ್ರಾಸಿಕ್ಯೂಷನ್ ಆರೋಪಿಸಿದಂತೆ ಯಾವುದೇ ಅಪರಾಧ ಎಸಗಿಲ್ಲ ಎಂದು ಅವರು ಪ್ರತಿಪಾದಿಸಿದ್ದರು.
ತಮ್ಮ ಮೇಲಿನ ಸೇಡು ತೀರಿಸಿಕೊಳ್ಳಲು ಆಸಕ್ತಿ ಹೊಂದಿದ್ದ ಸಂತ್ರಸ್ತರ ಹೇಳಿಕೆಗಳನ್ನು ಮಾತ್ರ ಪರಿಗಣಿಸಿ ಪಕ್ಷಪಾತದಿಂದ ತನಿಖೆ ನಡೆಸಲಾಗಿದೆ ಎಂದು ಬ್ರಿಜ್ ಭೂಷಣ್ ಅರ್ಜಿಯಲ್ಲಿ ವಾದಿಸಿದ್ದರು. ಆರೋಪಗಳ ಸತ್ಯಾಸತ್ಯತೆಯನ್ನು ಪರಿಶೀಲಿಸದೆ ವಿಚಾರಣಾ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಲಾಗಿದೆ ಎಂದು ಅವರು ಹೇಳಿದ್ದರು.
ದೂರು ದಾಖಲಿಸುವ ಸಮಯದಲ್ಲಿ ಅಪ್ರಾಪ್ತೆಯಾಗಿದ್ದ ಕುಸ್ತಿಪಟು ನೀಡಿದ್ದ ಲೈಂಗಿಕ ಕಿರುಕುಳ ಪ್ರಕರಣವನ್ನು ರದ್ದುಗೊಳಿಸುವಂತೆ ದಿಲ್ಲಿ ಪೊಲೀಸರು ಸಲ್ಲಿಸಿದ್ದ ಪ್ರಕರಣ ತನಿಖೆ ಮುಕ್ತಾಯ ವರದಿಯನ್ನು ಕಳೆದ ವರ್ಷದ ಮೇ ತಿಂಗಳಲ್ಲಿ ದಿಲ್ಲಿ ನ್ಯಾಯಾಲಯವು ಅಂಗೀಕರಿಸಿತ್ತು. ಅಪ್ರಾಪ್ತ ಕುಸ್ತಿಪಟುವಿನ ದೂರಿಗೆ ಸಂಬಂಧಿಸಿದಂತೆ ಯಾವುದೇ ಪೂರಕ ಸಾಕ್ಷ್ಯಾಧಾರಗಳು ಸಿಗದ ಕಾರಣ ಪ್ರಕರಣ ರದ್ದುಗೊಳಿಸಲು ಪೊಲೀಸರು ಶಿಫಾರಸು ಮಾಡಿದ್ದರು.
► ಪ್ರಕರಣ ಸಾಗಿಬಂದ ಹಾದಿ
ಎಪ್ರಿಲ್ 28, 2023: ಮಹಿಳಾ ಕುಸ್ತಿಪಟುಗಳು ನೀಡಿದ ಆರು ದೂರುಗಳ ಆಧಾರದ ಮೇಲೆ ಬ್ರಿಜ್ ಭೂಷಣ್ ಮತ್ತು ವಿನೋದ್ ತೋಮರ್ ವಿರುದ್ಧ ಕನ್ನಾಟ್ ಪ್ಲೇಸ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಯಿತು. ಅಪ್ರಾಪ್ತ ಸಂತ್ರಸ್ತೆಯ ದೂರಿನ ಮೇರೆಗೆ ಅದೇ ಪೊಲೀಸ್ ಠಾಣೆಯಲ್ಲಿ ಪೊಕ್ಸೊ (POCSO) ಕಾಯ್ದೆಯಡಿಯೂ ಪ್ರತ್ಯೇಕ ಎಫ್ಐಆರ್ ದಾಖಲಿಸಲಾಯಿತು.
ಜೂನ್ 15, 2023: ಆರು ಮಂದಿ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ, ಹಲ್ಲೆ ಮತ್ತು ಚುಡಾಯಿಸಿದ ಆರೋಪದ ಮೇಲೆ ದೆಹಲಿ ಪೊಲೀಸರು ಬ್ರಿಜ್ ಭೂಷಣ್ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿದರು. ತಮ್ಮ 1,500 ಪುಟಗಳ ಚಾರ್ಜ್ಶೀಟ್ನಲ್ಲಿ ಕುಸ್ತಿಪಟುಗಳು, ರೆಫ್ರಿ, ತರಬೇತುದಾರರು ಮತ್ತು ಫಿಸಿಯೋಥೆರಪಿಸ್ಟ್ ಸೇರಿದಂತೆ ನಾಲ್ಕು ರಾಜ್ಯಗಳ ಕನಿಷ್ಠ 22 ಸಾಕ್ಷಿಗಳ ಹೇಳಿಕೆಗಳನ್ನು ಪೊಲೀಸರು ಉಲ್ಲೇಖಿಸಿದ್ದರು.
ಜೂನ್ 15, 2023: ಅಪ್ರಾಪ್ತ ಬಾಲಕಿ ಮತ್ತು ಆಕೆಯ ತಂದೆ ತಮ್ಮ ಆರೋಪಗಳನ್ನು ಹಿಂಪಡೆದ ನಂತರ, ಪೊಲೀಸರು ಬ್ರಿಜ್ ಭೂಷಣ್ ವಿರುದ್ಧದ ಪೊಕ್ಸೊ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ವರದಿ ಸಲ್ಲಿಸಿದರು.
ಆಗಸ್ಟ್ 1, 2023: ಮುಚ್ಚಿದ ಕೊಠಡಿಯಲ್ಲಿ ನಡೆದ ನ್ಯಾಯಾಲಯದ ವಿಚಾರಣೆ ವೇಳೆ ಅಪ್ರಾಪ್ತ ದೂರುದಾರಳ ತಂದೆ, ಬ್ರಿಜ್ ಭೂಷಣ್ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳು ಸಿಗದ ಕಾರಣ ಪೊಲೀಸರು ನಡೆಸಿದ ತನಿಖೆಯ ಬಗ್ಗೆ ತಮಗೆ ತೃಪ್ತಿಯಿದೆ ಎಂದು ತಿಳಿಸಿದ್ದರು.
ಮೇ 2024: ಮಹಿಳೆಯ ಮಾನಭಂಗ ಮತ್ತು ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ದೆಹಲಿ ನ್ಯಾಯಾಲಯವು ಬ್ರಿಜ್ ಭೂಷಣ್ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) ವಿವಿಧ ವಿಭಾಗಗಳಡಿ ದೋಷಾರೋಪಣೆ ಹೊರಿಸಿತು.
ಮೇ 2025: ಪೊಕ್ಸೊ ಪ್ರಕರಣವನ್ನು ರದ್ದುಗೊಳಿಸುವಂತೆ ಪೊಲೀಸರು ಸಲ್ಲಿಸಿದ್ದ ವರದಿಯನ್ನು ದೆಹಲಿ ನ್ಯಾಯಾಲಯವು ಪುರಸ್ಕರಿಸಿತು.
► ನ್ಯಾಯಾಲಯದಲ್ಲಿ ನಡೆದ ವಾದ–ಪ್ರತಿವಾದ
ನ್ಯಾಯಾಲಯದ ವಿಚಾರಣೆ ವೇಳೆ ವಕೀಲರಾದ ರಾಜೀವ್ ಮೋಹನ್, ರಿಷಭ್ ಭಾಟಿ ಮತ್ತು ರೆಹಾನ್ ಖಾನ್ ನೇತೃತ್ವದ ಆರೋಪಿಗಳ ಪರ ವಕೀಲರು, ದೂರುದಾರರು ಪದೇ ಪದೇ ತಮ್ಮ ಹೇಳಿಕೆಗಳನ್ನು ಬದಲಾಯಿಸುತ್ತಿದ್ದಾರೆ ಎಂದು ವಾದಿಸಿದ್ದರು.
ಆರೋಪಿಸಲಾದ ಘಟನೆಯ ಸ್ಥಳ ಅಥವಾ ದಿನಾಂಕವನ್ನು ದೂರುದಾರರು ಬದಲಾಯಿಸಿದ್ದಾರೆ, ಇಲ್ಲವೇ ಘಟನೆ ನಡೆದಿದೆ ಎನ್ನಲಾದ ಸ್ಥಳದಲ್ಲಿ ಆರೋಪಿ ಉಪಸ್ಥಿತರಿರಲಿಲ್ಲ ಎಂದು ವಕೀಲರು ಪ್ರತಿಪಾದಿಸಿದರು. ಜೊತೆಗೆ, ಪ್ರಕರಣ ದಾಖಲಿಸುವಲ್ಲಿ ಆಗಿರುವ ವಿಳಂಬವನ್ನು ಉಲ್ಲೇಖಿಸಿದ ಅವರು, ಕೆಲವು ಘಟನೆಗಳು 7ರಿಂದ 8 ವರ್ಷ ಹಳೆಯವು ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ಇನ್ನೊಂದೆಡೆ, ದೋಷಾರೋಪಣೆ ಹಂತದಿಂದ ವಿಚಾರಣೆಯವರೆಗೂ ಸಂತ್ರಸ್ತರ ಹೇಳಿಕೆಗಳು ಒಂದೇ ರೀತಿಯಾಗಿವೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಮನೀಷ್ ರಾವತ್ ವಾದಿಸಿದರು. ಇತರ ಸಾಕ್ಷಿಗಳು ಸಹ ಅವರ ಹೇಳಿಕೆಗಳನ್ನು ಬೆಂಬಲಿಸಿದ್ದಾರೆ ಎಂದು ಅವರು ನ್ಯಾಯಪೀಠಕ್ಕೆ ತಿಳಿಸಿದರು.
ಆರು ಮಂದಿ ಸಂತ್ರಸ್ತರಲ್ಲಿ ಇಬ್ಬರು ನಂತರ ತಮ್ಮ ಹೇಳಿಕೆಗಳಿಂದ ಹಿಂದೆ ಸರಿದರು. ಒಬ್ಬ ಸಂತ್ರಸ್ತೆಗೆ ಸಂಬಂಧಿಸಿದ ಆರೋಪಗಳಲ್ಲಿ ದೋಷಾರೋಪಣೆ ಹೊರಿಸಲಾಗಿರಲಿಲ್ಲ.
ನಾಲ್ವರು ದೂರುದಾರರ ಪರ ವಾದ ಮಂಡಿಸಿದ ಹಿರಿಯ ವಕೀಲರಾದ ರೆಬೆಕಾ ಜಾನ್, ಭವೂಕ್ ಚೌಹಾಣ್, ಹರ್ಷ ಬೋರಾ ಮತ್ತು ಅನುಷ್ಕಾ ಬರುವಾ, ಆರೋಪಿಯಿಂದ ನಡೆದ ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳದ ವಿವಿಧ ಘಟನೆಗಳ ಕುರಿತು ಸಂತ್ರಸ್ತರು ವಿವರವಾಗಿ ಸಾಕ್ಷ್ಯ ನುಡಿದಿದ್ದಾರೆ. ಕ್ರಾಸ್ ಎಕ್ಸಾಮಿನೇಷನ್ ವೇಳೆಯೂ ಅವರ ಹೇಳಿಕೆಗಳು ಬದಲಾಗಿಲ್ಲ ಎಂದು ವಾದಿಸಿದರು.
"ಈ ಕೆಲವು ಘಟನೆಗಳಿಗೆ ಸಾಕ್ಷಿಯಾಗಿದ್ದ ಇತರರೂ ವಿಚಾರಣೆಗೆ ಒಳಪಟ್ಟಿದ್ದು, ಅವರು ಮಹಿಳಾ ಕುಸ್ತಿಪಟುಗಳ ಹೇಳಿಕೆಗಳನ್ನು ಸಂಪೂರ್ಣವಾಗಿ ಬೆಂಬಲಿಸಿದ್ದಾರೆ" ಎಂದು ರೆಬೆಕಾ ಜಾನ್ ದಿ ಇಂಡಿಯನ್ ಎಕ್ಸ್ಪ್ರೆಸ್ಗೆ ತಿಳಿಸಿದ್ದಾರೆ.
"ಲೈಂಗಿಕ ಕಿರುಕುಳದ ಪ್ರಕರಣಗಳಲ್ಲಿ ಮಹಿಳೆಯರು ಘಟನೆ ನಡೆದ ಸುದೀರ್ಘ ಸಮಯದ ನಂತರ ದೂರು ನೀಡಬಹುದು. ಈ ಪ್ರಕರಣದ ದೂರುದಾರರು ಮೂಲತಃ ಗ್ರಾಮೀಣ ಹಿನ್ನೆಲೆಯಿಂದ ಬಂದವರು. ಫೆಡರೇಶನ್ನ ಮುಖ್ಯಸ್ಥರು ಅತ್ಯಂತ ಪ್ರಭಾವಿ ವ್ಯಕ್ತಿಯಾಗಿದ್ದು, ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಬದಲು ಅವರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರು. ಅವರ ನಡುವಿದ್ದ ಅಧಿಕಾರದ ವ್ಯತ್ಯಾಸವನ್ನು ಗಮನಿಸಿದರೆ, ತಕ್ಷಣವೇ ಈ ಘಟನೆಗಳ ಬಗ್ಗೆ ದೂರು ನೀಡಲು ಅವರು ಹೆದರಿದ್ದು ಸಹಜವೇ ಆಗಿತ್ತು" ಎಂದು ಅವರು ಹೇಳಿದ್ದರು.
"ಮಹಿಳೆಯರ ದೂರಿಗೆ ಸಂಬಂಧಿಸಿದಂತೆ ವಿಳಂಬಕ್ಕೆ ವಿನಾಯಿತಿ ನೀಡಬೇಕು ಹಾಗೂ ಅದನ್ನು ಇತರ ಸಾಮಾನ್ಯ ಪ್ರಕರಣಗಳಂತೆ ನೋಡಬಾರದು ಎಂದು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ. ನಾಲ್ವರು ದೂರುದಾರರು ಕ್ರಾಸ್ ಎಕ್ಸಾಮಿನೇಷನ್ ವೇಳೆಯೂ ತಮ್ಮ ಹೇಳಿಕೆಗೆ ಬದ್ಧರಾಗಿ ನಿಂತಿದ್ದಾರೆ" ಎಂದಿದ್ದರು.
► ಕುಸ್ತಿಪಟುಗಳು ತಮ್ಮ ನೋವಿನ ಬಗ್ಗೆ ಹೇಳಿಕೊಳ್ಳುತ್ತಾರೆ, ನನಗಂತೂ ಸಂತೋಷವಾಗಿದೆ
ಮಹಿಳಾ ಕುಸ್ತಿಪಟುಗಳು ದಾಖಲಿಸಿದ್ದ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ದೆಹಲಿ ನ್ಯಾಯಾಲಯದಿಂದ ಸೋಮವಾರ ಖುಲಾಸೆಗೊಂಡ ನಂತರ NDTV ಜೊತೆ ಮಾತನಾಡಿದ 69 ವರ್ಷದ ಬಿಜೆಪಿ ನಾಯಕ ಬ್ರಿಜ್ ಭೂಷಣ್ ಶರಣ್ ಸಿಂಗ್, ಕುಸ್ತಿಪಟುಗಳ ನೋವಿನ ಬಗ್ಗೆ ಅವರೇ ಹೇಳಬೇಕು, ನಮಗಂತೂ "ಬಹಳ ಸಂತೋಷವಾಗಿದೆ" ಎಂದಿದ್ದಾರೆ.
ಭಾರತೀಯ ಕುಸ್ತಿ ಫೆಡರೇಶನ್ನ ಮಾಜಿ ಅಧ್ಯಕ್ಷರಾದ ಸಿಂಗ್, "ಇದು ಅವರಿಗೆ (ಕುಸ್ತಿಪಟುಗಳಿಗೆ) ಅತ್ಯಂತ ಸಂಕಟದ ಸಮಯ" ಎಂದು ಹೇಳುತ್ತಿದ್ದಂತೆ ಅವರ ಪಕ್ಕದಲ್ಲಿದ್ದ ಬೆಂಬಲಿಗರು ಜೋರಾಗಿ ನಕ್ಕರು. ಆದರೆ ಬಿಜೆಪಿ ನಾಯಕ ಯಾವುದೇ ಭಾವ ತೋರದೆ ಗಂಭೀರವಾಗಿಯೇ ಕುಳಿತಿದ್ದರು.
"ಅವರ ನೋವಿನ ಬಗ್ಗೆ ಅವರಷ್ಟೇ ಮಾತನಾಡಲು ಸಾಧ್ಯ, ನಾನಲ್ಲ. ನಾನು ಮತ್ತು ನನ್ನ ಜನರು ತುಂಬಾ ಸಂತೋಷವಾಗಿದ್ದೇವೆ" ಎಂದು ಹೇಳಿದ ಅವರು, ಕುಸ್ತಿಪಟುಗಳ ಕುರಿತು ಹೆಚ್ಚಿನ ಮಾತುಕತೆಗೆ ನಿರಾಕರಿಸಿದರು ಎಂದು NDTV ವರದಿ ಮಾಡಿದೆ.
"ನನ್ನ ಮೇಲೆ ಆರೋಪ ಬಂದ ದಿನವೇ, ಆರೋಪ ಸಾಬೀತಾದರೆ ನಾನೇ ಸ್ವತಃ ಗಲ್ಲಿಗೇರುವುದಾಗಿ ಹೇಳಿದ್ದೆ. ಇಂದು ನ್ಯಾಯಾಲಯ ನನ್ನನ್ನು ಖುಲಾಸೆಗೊಳಿಸಿದೆ ಮತ್ತು 'ಗೌರವಯುತವಾಗಿ ಖುಲಾಸೆಗೊಳಿಸಲಾಗಿದೆ' ಎಂಬ ಪದ ಬಳಸಿದೆ" ಎಂದು ಖುಲಾಸೆಗೊಂಡ ತಕ್ಷಣವೇ ಎನ್ಡಿಟಿವಿಗೆ ಪ್ರತಿಕ್ರಿಯೆ ನೀಡಿದ ಸಿಂಗ್ ಹೇಳಿದ್ದಾರೆ.
ತಮ್ಮ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಮಹಿಳೆಯರನ್ನು ಏಕೆ ಭೇಟಿಯಾಗಲಿಲ್ಲ ಎಂಬ ಪ್ರಶ್ನೆಗೆ ಬ್ರಿಜ್ ಭೂಷಣ್, "ನಾನು ನಿಮ್ಮೊಂದಿಗೆ ಮಾತನಾಡಲು ಸಾಧ್ಯವಿಲ್ಲ, ಆ ಮಹಿಳೆಯರಷ್ಟೇ ನಿಮಗೆ ಉತ್ತರಿಸಬಲ್ಲರು" ಎಂದರು.
► ಹೈಕೋರ್ಟ್ಗೆ ಮೇಲ್ಮನವಿ: ವಿನೇಶ್ ಫೋಗಟ್
ಮಾಜಿ ಡಬ್ಲ್ಯೂಎಫ್ಐ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಖುಲಾಸೆಗೊಳಿಸಿದ ದೆಹಲಿ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವುದಾಗಿ ಲೈಂಗಿಕ ಕಿರುಕುಳದ ದೂರು ನೀಡಿದ್ದ ಮಹಿಳಾ ಕುಸ್ತಿಪಟುಗಳು ತಿಳಿಸಿದ್ದಾರೆ ಎಂದು ವಿಶ್ವ ಚಾಂಪಿಯನ್ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಹೇಳಿದ್ದಾರೆ.
"ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವಂತೆ ಮಹಿಳಾ ಕುಸ್ತಿಪಟುಗಳು ತಮ್ಮ ವಕೀಲರಿಗೆ ಸೂಚನೆ ನೀಡಿದ್ದು, ಶೀಘ್ರದಲ್ಲೇ ಮೇಲ್ಮನವಿ ಸಲ್ಲಿಸಲಾಗುವುದು. ನಾವು ಭರವಸೆ ಕಳೆದುಕೊಂಡಿಲ್ಲ. ಕುಸ್ತಿಪಟುಗಳು ತಮ್ಮ ಹೋರಾಟವನ್ನು ಮುಂದುವರಿಸಲಿದ್ದಾರೆ" ಎಂದು ಫೋಗಟ್ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
ಸರಕಾರವು ಬ್ರಿಜ್ ಭೂಷಣ್ ಅವರನ್ನು "ರಕ್ಷಿಸುತ್ತಿದೆ" ಎಂದು ಆರೋಪಿಸಿದ ಅವರು, "ಅವರು ಹಲವು ಹೆಣ್ಣುಮಕ್ಕಳಿಗೆ ಬೆದರಿಕೆ ಹಾಕಿ ದೂರು ಹಿಂಪಡೆಯುವಂತೆ ಮಾಡಿದ್ದಾರೆ" ಎಂದಿದ್ದಾರೆ.
"ಮಹಿಳಾ ಕುಸ್ತಿಪಟುಗಳು ಮಾಡಿದ ಲೈಂಗಿಕ ದೌರ್ಜನ್ಯದ ಆರೋಪಗಳಲ್ಲಿ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ನ್ಯಾಯಾಲಯ ದೋಷಿ ಎಂದು ಪರಿಗಣಿಸದಿರುವುದು ನಮಗೆ ತೀವ್ರ ಬೇಸರ ತಂದಿದೆ. ಮೊದಲಿನಿಂದಲೂ ಇಡೀ ಆಡಳಿತ, ಸರಕಾರ ಮತ್ತು ವ್ಯವಸ್ಥೆಯು ಬ್ರಿಜ್ ಭೂಷಣ್ ಅವರನ್ನು ರಕ್ಷಿಸುವಲ್ಲಿ ನಿರತವಾಗಿದೆ. ಆಡಳಿತ ಪಕ್ಷದ ಪ್ರಭಾವಿ ನಾಯಕನ ವಿರುದ್ಧ ರಸ್ತೆಗಿಳಿದು ಎಫ್ಐಆರ್ ದಾಖಲಿಸಲು ನಾವು ಅಪಾರ ಧೈರ್ಯ ತಳೆಬೇಕಾಯಿತು. ತಮ್ಮ ಪ್ರಭಾವ ಮತ್ತು ರಾಜಕೀಯ ಶಕ್ತಿಯನ್ನು ಬಳಸಿ ಬ್ರಿಜ್ ಭೂಷಣ್ ಹಲವು ಹೆಣ್ಣುಮಕ್ಕಳಿಗೆ ಬೆದರಿಕೆ ಹಾಕಿ ತಮ್ಮ ಹೆಸರುಗಳನ್ನು ಹಿಂಪಡೆಯುವಂತೆ ಮಾಡಿದರು. ಆದರೂ, ಹಲವು ಮಹಿಳಾ ಕುಸ್ತಿಪಟುಗಳು ಛಲ ಬಿಡದೆ ನ್ಯಾಯಾಲಯದಲ್ಲಿ ಬ್ರಿಜ್ ಭೂಷಣ್ ವಿರುದ್ಧ ಹೋರಾಟ ಮುಂದುವರಿಸಿದ್ದಾರೆ" ಎಂದು ಅವರು ಹೇಳಿದ್ದಾರೆ.
► ಕಿರಿಯ ಆಟಗಾರರ ಗೆಲುವು: ಬ್ರಿಜ್ ಭೂಷಣ್
ಸುದ್ದಿ ಸಂಸ್ಥೆ IANSಗೆ ನೀಡಿದ ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ, ಕುಸ್ತಿಪಟುಗಳ ಲೈಂಗಿಕ ಕಿರುಕುಳ ಪ್ರಕರಣದ ನ್ಯಾಯಾಲಯದ ತೀರ್ಪು "ಕಿರಿಯ ಆಟಗಾರರ ಗೆಲುವು" ಹಾಗೂ "ಒಲಿಂಪಿಕ್ಸ್ ಆಟಗಾರರು ತಮ್ಮ ಸ್ವಾರ್ಥಕ್ಕಾಗಿ ಸುಳ್ಳು ಹೇಳಬಹುದು ಎಂಬುದನ್ನು ಇದು ಸಾಬೀತುಪಡಿಸಿದೆ" ಎಂದಿದ್ದಾರೆ.
ವಿರೋಧ ಪಕ್ಷಗಳ ತೀವ್ರ ವಾಗ್ದಾಳಿ ಹಾಗೂ ಸಾರ್ವಜನಿಕ ಅಭಿಪ್ರಾಯಕ್ಕೆ ಅಂಜಿದ ಬಿಜೆಪಿ, 2024ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ಕೈಸರ್ಗಂಜ್ ಕ್ಷೇತ್ರದಿಂದ ಬ್ರಿಜ್ ಭೂಷಣ್ ಅವರಿಗೆ ಟಿಕೆಟ್ ನಿರಾಕರಿಸಿತ್ತು. ಬದಲಿಗೆ, ಅವರ ಪುತ್ರ ಕರಣ್ ಭೂಷಣ್ ಸಿಂಗ್ ಅವರನ್ನು ಕಣಕ್ಕಿಳಿಸಿತ್ತು. ಕರಣ್ ಸಿಂಗ್ ಆ ಕ್ಷೇತ್ರದಲ್ಲಿ ಜಯಗಳಿಸಿದ್ದರು.
ಮತ್ತೆ ಸಂಸತ್ತಿಗೆ ಹಿಂತಿರುಗುತ್ತೀರಾ ಎಂದು ಕೇಳಿದ ಪ್ರಶ್ನೆಗೆ, "ಅದನ್ನು ಪಕ್ಷ ಮತ್ತು ಜನ ನಿರ್ಧರಿಸಬೇಕು" ಎಂದು ಉತ್ತರಿಸಿದ್ದಾರೆ ಬಿಜೆಪಿ ನಾಯಕ ಬ್ರಿಜ್ ಭೂಷಣ್ ಸಿಂಗ್.






