ಭಾರತದ ರಸ್ತೆಗಳಲ್ಲಿ 4,218 ಕಿ.ಮೀ. ಸುತ್ತಾಡಿಸಿದ ಪ್ರೀತಿಯ ಆಟೋವನ್ನೇ ಲಂಡನ್ ಗೆ ಕೊಂಡೊಯ್ದ ಬ್ರಿಟಿಷ್ ದಂಪತಿ!
75 ದಿನಗಳ ಪ್ರವಾಸದ ನೆನಪಿಗಾಗಿ 'ಟಿಮ್ಮಿ'ಗೆ ಹಡಗಿನ ಟಿಕೆಟ್; 6 ತಿಂಗಳ ಬಳಿಕ ಲಂಡನ್ ಬಂದರು ಸೇರಿದ ಭಾರತದ ʼರಿಕ್ಷಾʼ

Photo Credit : indiatoday.in
ಲಂಡನ್: ಪ್ರವಾಸ ಮುಗಿದ ಬಳಿಕ ನೆನಪಿಗಾಗಿ ಕೆಲವರು ಛಾಯಾಚಿತ್ರ, ಪೋಸ್ಟ್ ಕಾರ್ಡ್ ಅಥವಾ ಸಣ್ಣ ಉಡುಗೊರೆಗಳನ್ನು ಕೊಂಡೊಯ್ಯುತ್ತಾರೆ. ಆದರೆ, ಬ್ರಿಟನ್ ನ ಹೆಲೆನ್ ಮತ್ತು ಮಿಕ್ ದಂಪತಿ ಭಾರತ ಪ್ರವಾಸದ ನೆನಪನ್ನು ಶಾಶ್ವತವಾಗಿಸಿಕೊಳ್ಳಲು ಮಾಡಿದ್ದೇ ಬೇರೆ. 75 ದಿನಗಳ ಕಾಲ ಭಾರತದ ರಸ್ತೆಗಳಲ್ಲಿ ತಮ್ಮೊಂದಿಗೆ 4,218 ಕಿ.ಮೀ. ಸುತ್ತಾಡಿದ ಆಟೋ-ರಿಕ್ಷಾವನ್ನೇ ಹಡಗಿನ ಮೂಲಕ ಬ್ರಿಟನ್ಗೆ ಕೊಂಡೊಯ್ದಿದ್ದಾರೆ!
ಕೈಗಾರಿಕೋದ್ಯಮಿ ಹರ್ಷ್ ಗೋಯೆಂಕಾ ಅವರು ಈ ಅಪರೂಪದ ಪ್ರೇಮಕಥೆಯಂತಿರುವ ಪ್ರಯಾಣದ ವಿವರವನ್ನು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಹಂಚಿಕೊಂಡಿದ್ದಾರೆ. ಭಾರತದ ಮೇಲಿನ ಪ್ರೀತಿಗೆ ಸಾಕ್ಷಿಯಾಗಿರುವ ಈ ದಂಪತಿಯ ನಡೆ ಇದೀಗ ಗಮನ ಸೆಳೆದಿದೆ.
ಹೆಲೆನ್ ಮತ್ತು ಮಿಕ್ ದಂಪತಿ ಭಾರತದಲ್ಲಿ 75 ದಿನಗಳ ಕಾಲ ಪ್ರವಾಸ ಮಾಡಿದ್ದು, ತಮ್ಮ ಮೂರು ಚಕ್ರದ ವಾಹನದಲ್ಲಿ ಒಟ್ಟು 4,218 ಕಿ.ಮೀ. ಕ್ರಮಿಸಿದ್ದಾರೆ. ಆಗ್ರಾ, ತಾಜ್ ಮಹಲ್ ಸೇರಿದಂತೆ ವಿವಿಧ ನಗರಗಳು, ರಾಜ್ಯಗಳು ಹಾಗೂ ಪ್ರಮುಖ ಪ್ರವಾಸಿ ತಾಣಗಳನ್ನು ಸುತ್ತಾಡಿದ್ದಾರೆ. ತಮಿಳುನಾಡಿನ ಚೆನ್ನೈನಲ್ಲಿ ನೋಂದಣಿಯಾಗಿದ್ದ ಕೆಂಪು ಮತ್ತು ಕಪ್ಪು ಬಣ್ಣದ ಬಜಾಜ್ ಆಟೋ-ರಿಕ್ಷಾ ಈ ಪ್ರವಾಸದ ಅವಿಭಾಜ್ಯ ಅಂಗವಾಗಿತ್ತು.
ದಂಪತಿ ತಮ್ಮ ಆಟೋಗೆ ಪ್ರೀತಿಯಿಂದ 'ಟಿಮ್ಮಿ ದಿ ಟಿನ್ ಕ್ಯಾನ್' (Timmy the Tin Can) ಎಂದು ಹೆಸರಿಟ್ಟಿದ್ದರು. ಅದರ ಮುಂಭಾಗದಲ್ಲಿ ಕಾರ್ಟೂನ್ ಕಣ್ಣುಗಳು ಮತ್ತು ನಗುವ ಮುಖವನ್ನು ಚಿತ್ರಿಸಿದ್ದರು. ಹೀಗಾಗಿ, 'ಟಿಮ್ಮಿ' ರಸ್ತೆಯಲ್ಲಿ ಸಾಗುತ್ತಿದ್ದರೆ ಗಮನ ಸೆಳೆಯುವಂತಿತ್ತು. ದಿನಕಳೆದಂತೆ ಈ ಮೂರು ಚಕ್ರದ ವಾಹನ ಕೇವಲ ಪ್ರಯಾಣದ ಸಾಧನವಾಗಿ ಉಳಿಯದೆ, ದಂಪತಿಯ ಪಾಲಿಗೆ ಆತ್ಮೀಯ ಸಂಗಾತಿಯಾಯಿತು.
ಪ್ರವಾಸದ ದಿನಗಳು ಮುಗಿದು ತವರಿಗೆ ಮರಳುವ ಸಮಯ ಬಂದಾಗ, ತಮ್ಮ ಪ್ರೀತಿಯ 'ಟಿಮ್ಮಿ'ಯನ್ನು ಭಾರತದಲ್ಲೇ ಬಿಟ್ಟು ಹೋಗುವುದು ದಂಪತಿಗೆ ಇಷ್ಟವಾಗಲಿಲ್ಲ. ಸಾವಿರಾರು ಕಿಲೋಮೀಟರ್ ಗಳ ಕಾಲ ತಮ್ಮೊಂದಿಗೆ ಹೆಜ್ಜೆ ಹಾಕಿದ್ದ ಆಟೋವನ್ನು ಅಲ್ಲಿಯೇ ಬಿಟ್ಟುಬರುವ ಬದಲು, ಅದನ್ನೂ ತಮ್ಮೊಂದಿಗೆ ಬ್ರಿಟನ್ ಗೆ ಕರೆದೊಯ್ಯಲು ನಿರ್ಧರಿಸಿದರು.
ಅದರಂತೆ, ಆಟೋವನ್ನು ಹಡಗಿನ ಮೂಲಕ ಯುಕೆಗೆ ರವಾನಿಸಿದರು. ಆದರೆ, 'ಟಿಮ್ಮಿ'ಯ ಈ ಸಮುದ್ರಯಾನ ತಕ್ಷಣವೇ ಮುಗಿಯಲಿಲ್ಲ. ಆರು ತಿಂಗಳ ಸುದೀರ್ಘ ಕಾಯುವಿಕೆಯ ಬಳಿಕ 2026ರ ಅಕ್ಟೋಬರ್ 23ರಂದು ಅದು ಲಂಡನ್ ಗೇಟ್ ವೇ ಬಂದರನ್ನು ತಲುಪಿತು. ಅಲ್ಲಿ ಹೆಲೆನ್ ಮತ್ತು ಮಿಕ್ ದಂಪತಿ ತಮ್ಮ ಪ್ರೀತಿಯ ವಾಹನವನ್ನು ಸ್ವಾಗತಿಸಿದರು. ಭಾರತದ ರಸ್ತೆಗಳಲ್ಲಿ ಸಾವಿರಾರು ಕಿಲೋಮೀಟರ್ ಕ್ರಮಿಸಿದ್ದ ಆಟೋ, ಕೊನೆಗೂ ಸಮುದ್ರ ದಾಟಿ ದಂಪತಿಯ ತವರಿಗೆ ಸೇರಿತು.
ಹರ್ಷ್ ಗೋಯೆಂಕಾ ಅವರು ಈ ವಿಶೇಷ ಪ್ರಯಾಣದ ಕುರಿತು ಎಕ್ಸ್ನಲ್ಲಿ, 'ಭಾರತೀಯ ತ್ರಿಚಕ್ರ ವಾಹನವೊಂದು ಯುಕೆಗೆ ತಲುಪಿದೆ! ಭಾರತದ ರಸ್ತೆಗಳಿಂದ ಬ್ರಿಟನ್ ನ ಬೀದಿಗಳವರೆಗೆ... ಎಂತಹ ಅದ್ಭುತ ಪ್ರಯಾಣ!' ಎಂದು ಬರೆದುಕೊಂಡಿದ್ದಾರೆ.
►ಬ್ರಿಟನ್ ರಸ್ತೆಗಳಲ್ಲಿ ಓಡಲು ಇನ್ನೂ ಸಿದ್ಧವಾಗಿಲ್ಲ!
'ಟಿಮ್ಮಿ' ಸುರಕ್ಷಿತವಾಗಿ ಬ್ರಿಟನ್ ತಲುಪಿದ್ದರೂ, ಅಲ್ಲಿನ ರಸ್ತೆಗಳಲ್ಲಿ ಕಾನೂನುಬದ್ಧವಾಗಿ ಸಂಚರಿಸಲು ಇನ್ನೂ ಕೆಲವು ಅಡೆತಡೆಗಳನ್ನು ದಾಟಬೇಕಿದೆ. ಹೆಲೆನ್ ಮತ್ತು ಮಿಕ್ ಸ್ಥಳೀಯ ನಿಯಮಾವಳಿಗಳಿಗೆ ಅನುಗುಣವಾಗಿ ಅಗತ್ಯ ದಾಖಲೆಗಳನ್ನು ಪೂರ್ಣಗೊಳಿಸಬೇಕು. ಆಟೋ ಯುಕೆಯ ವಾಹನ ನಿಯಮಗಳಿಗೆ ಹೊಂದಿಕೆಯಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ವಾಹನ ನೋಂದಣಿ ಸೇರಿದಂತೆ ಅಗತ್ಯ ಕಾನೂನು ಪ್ರಕ್ರಿಯೆಗಳನ್ನೂ ಪೂರ್ಣಗೊಳಿಸಬೇಕಿದೆ.
ಸೌಜನ್ಯ: India Today






