ಭಾರತೀಯ ಟೆಕ್ಕಿ ʼವ್ಯಾಲಿ ಫಿವರ್ʼ ಗೆ ಬಲಿ; ಏನಿದು ವ್ಯಾಲಿ ಜ್ವರ? ವೈದ್ಯರು ಹೇಳುವುದೇನು?

Photo Credit : indianexpress.com
ಭಾರತೀಯ ಟೆಕ್ಕಿ ʼವ್ಯಾಲಿ ಫಿವರ್ʼ ಗೆ ಬಲಿ; ಏನಿದು ವ್ಯಾಲಿ ಜ್ವರ? ವೈದ್ಯರು ಹೇಳುವುದೇನು?
ʼವ್ಯಾಲಿ ಫಿವರ್ʼ ನೈರುತ್ಯ ಅಮೆರಿಕದ ಕೆಲವು ಭಾಗಗಳಲ್ಲಿ ಮಣ್ಣಿನಲ್ಲಿ ಕಂಡುಬರುವ ಕೋಕಿಡಿಯೋಯಿಡ್ಸ್ ಶಿಲೀಂಧ್ರಗಳಿಂದ ಉಂಟಾಗುವ ಸೋಂಕಾಗಿರುತ್ತದೆ.
ಭಾರತೀಯ ಟೆಕ್ಕಿ 37 ವರ್ಷದ ಚಿರಂಜೀವಿ ಕೊಲ್ಲ ವ್ಯಾಲಿ ಜ್ವರದೊಂದಿಗೆ ಒಂದು ತಿಂಗಳ ಕಾಲ ಹೋರಾಡಿದ ನಂತರ ಮೃತಪಟ್ಟಿದ್ದಾರೆ. ಹೀಗಾಗಿ ಎಂದೂ ಕೇಳಿರದ ಶಿಲೀಂಧ್ರ ಸೋಂಕಿನತ್ತ ಜನರ ಗಮನ ಸೆಳೆದಿದೆ. ಚಿರಂಜೀವಿ ಕ್ಯಾಲಿಫೋರ್ನಿಯದ ಸ್ಯಾನ್ ಫ್ರಾನ್ಸಿಸ್ಕೋ ಬೇ ಏರಿಯಾದಲ್ಲಿ ಆರೋಗ್ಯ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರು. ಆರಂಭದಲ್ಲಿ ಅವರಿಗೆ ಕೆಮ್ಮು ಸೇರಿದಂತೆ ಸಾಮಾನ್ಯ ಜ್ವರವನ್ನು ಹೋಲುವ ಲಕ್ಷಣಗಳು ಕಂಡುಬಂದಿದ್ದವು. ತ್ವರಿತವಾಗಿ ಅವರ ಆರೋಗ್ಯ ಹದಗೆಟ್ಟಾಗ ಮೊದಲಿಗೆ ವೈದ್ಯರು ನ್ಯುಮೋನಿಯ ಎಂದು ಅನುಮಾನಿಸಿದ್ದರು. ನಂತರ ವ್ಯಾಲಿ ಫಿವರ್ ಎನ್ನುವ ರೋಗದಿಂದ ಬಳಲುತ್ತಿರುವುದು ದೃಢಪಟ್ಟಿದೆ. ಈ ರೋಗವು ಕೋಕಿಡಿಯೋಯಿಡ್ಸ್ ಶಿಲೀಂಧ್ರಗಳಿಂದ ಉಂಟಾಗುವ ಸೋಂಕು. ನೈರುತ್ಯ ಅಮೆರಿಕದ ಕೆಲವು ಭಾಗಗಳಲ್ಲಿ ಮಣ್ಣಿನಲ್ಲಿ ಕೋಕ್ಸಿಡಿಯೋಯಿಡ್ಸ್ ಕಂಡುಬರುತ್ತದೆ.
ಚಿರಂಜೀವಿಯ ಕುಟುಂಬದ ಮೂಲಗಳ ಪ್ರಕಾರ ಈ ರೋಗ ತಗಲಿದ ಬಹಳಷ್ಟು ಮಂದಿಗೆ ವ್ಯಾಲಿ ಫಿವರ್ ಬಂದಿದೆ ಎಂದು ತಿಳಿಯುವುದೇ ಇಲ್ಲ. ಈ ಪ್ರಕರಣದಲ್ಲಿ ಅವರ ಶ್ವಾಸಕೋಶಕ್ಕೆ ರೋಗ ತಗಲಿತ್ತು. ಚಿರಂಜೀವಿ ಸ್ಥಿತಿ ಗಂಭೀರವಾದಾಗ ವೆಂಟಿಲೇಟರ್ ನಲ್ಲಿ ಇರಿಸಲಾಯಿತು. ಸುಮಾರು ಒಂದು ತಿಂಗಳ ಬಳಿಕ ಅವರು ಮೃತಪಟ್ಟರು.
ವ್ಯಾಲಿ ಫಿವರ್ ಮುಖ್ಯವಾಗಿ ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ. ಬಹುತೇಕ ಪ್ರಕರಣಗಳು ಸೌಮ್ಯ ಅಥವಾ ರೋಗ ಲಕ್ಷಣಗಳು ಕಂಡುಬಾರದೆ ಇದ್ದರೂ, ಕೆಲವು ಸೋಂಕುಗಳು ತೀವ್ರವಾಗಿ ನ್ಯುಮೋನಿಯವನ್ನು ಹೋಲುತ್ತವೆ. ಜ್ವರ, ಆಯಾಸ, ಕೆಮ್ಮು, ಎದೆನೋವು ಮತ್ತು ಉಸಿರಾಟದ ತೊಂದರೆಗಳಂತಹ ಲಕ್ಷಣಗಳನ್ನು ತೋರಿಸಬಹುದು. ಅಪರೂಪದ ಸಂದರ್ಭಗಳಲ್ಲಿ ಸೋಂಕು ಶ್ವಾಸಕೋಶ ಮೀರಿ ಹರಡಬಹುದು. ಚಿರಂಜೀವಿ ಪ್ರಕರಣದಲ್ಲಿ ಇದೇ ಸಮಸ್ಯೆಯಾಗಿತ್ತು.
ವ್ಯಾಲಿ ಫಿವರ್ ಅನ್ನು ವೈದ್ಯಕೀಯವಾಗಿ ಕೋಕ್ಸಿಡಿಯೋಆಯ್ಡೋಮೈಕೋಸಿಸ್ ಎಂದು ಕರೆಯಲಾಗುತ್ತದೆ. ಇದು ಒಣ ಮಣ್ಣಿನಲ್ಲಿ ಕಂಡುಬರುವ ಬೀಜಕಗಳನ್ನು ಉಸಿರಾಡುವುದರಿಂದ ಉಂಟಾಗುವ ಶಿಲೀಂಧ್ರ ಸೋಂಕು ಆಗಿದ್ದು, ವಿಶೇಷವಾಗಿ ನೈಋತ್ಯ ಅಮೆರಿಕದ ಕೆಲವು ಭಾಗಗಳಲ್ಲಿ ಕಂಡುಬರುತ್ತದೆ.
ಗುರುಗ್ರಾಮ್ನ ಮಾರೆಂಗೊ ಏಷ್ಯಾ ಹಾಸ್ಪಿಟಲ್ಸ್ ನ ಇಂಟರ್ನಲ್ ಮೆಡಿಸಿನ್ ತಜ್ಞರಾದ ಡಾ. ದೀಕ್ಷಾ ಗೋಯಲ್ ಅವರ ಪ್ರಕಾರ ಎರಡು ರೀತಿಯ ಕೋಕ್ಸಿಡಿಯೋಆಯ್ಡ್ಸ್ ಶಿಲೀಂಧ್ರಗಳು ವ್ಯಾಲಿ ಫಿವರ್ ಗೆ ಕಾರಣವಾಗುತ್ತವೆ.
* ಕೋಕ್ಸಿಡಿಯೋಆಯ್ಡ್ಸ್ ಇಮಿಟಿಸ್ (ಸಿ. ಇಮಿಟಿಸ್) ಎನ್ನುವ ಶಿಲೀಂಧ್ರವು ಕ್ಯಾಲಿಫೋರ್ನಿಯದ ಮಣ್ಣಿನಲ್ಲಿ ಬೆಳೆಯುತ್ತದೆ.
* ಕೋಕ್ಸಿಡಿಯೋಆಯ್ಡ್ಸ್ ಪೊಸಾಡಾಸಿ (ಸಿ. ಪೊಸಾಡಾಸಿ) ಶಿಲೀಂಧ್ರವು ಅಮೆರಿಕ ಮತ್ತು ಮಧ್ಯ-ದಕ್ಷಿಣ ಅಮೆರಿಕದ ಇತರ ಬಾಗಗಳಲ್ಲಿ ಬೆಳೆಯುತ್ತದೆ.
ವೈದ್ಯರ ಪ್ರಕಾರ, ಇದು ಸಾಮಾನ್ಯ ವೈರಲ್ ಅಥವಾ ಉಸಿರಾಟದ ರೋಗವನ್ನು ಹೋಲುತ್ತದೆ. ಹೀಗಾಗಿ ರೋಗ ನಿರ್ಣಯ ತಡವಾಗುತ್ತದೆ. “ನಿರಂತರ ಜ್ವರ, ಹದಗೆಡುತ್ತಿರುವ ಕೆಮ್ಮು, ಎದೆನೋವು, ಉಸಿರಾಟದ ತೊಂದರೆ, ತೀವ್ರ ಆಯಾಸ, ರಾತ್ರಿ ಬೆವರು ಅಥವಾ ವಿವರಿಸಲಾಗದ ತೂಕ ನಷ್ಟ ನಿರ್ಲಕ್ಷಿಸಬಾರದು. ವಿಶೇಷವಾಗಿ ಲಕ್ಷಣಗಳು ಒಂದೆರಡು ವಾರ ಮೀರಿ ಮುಂದುವರಿದರೆ ವ್ಯಾಲಿ ಫಿವರ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ರೋಗದ ಮೂಲಗಳಿರುವ ಪ್ರದೇಶಗಳಲ್ಲಿ ಸಾಮಾನ್ಯ ಚಿಕಿತ್ಸೆಗೆ ಪ್ರತಿಕ್ರಿಯಿಸದ ದೀರ್ಘಕಾಲದ ಉಸಿರಾಟದ ಲಕ್ಷಣಗಳು ಕಂಡುಬಂದರೆ ಶಿಲೀಂಧ್ರ ಸೋಂಕಿನ ಸಾಧ್ಯತೆ ಅಲ್ಲಗಳೆಯಬಾರದು” ಎನ್ನುತ್ತಾರೆ ವೈದ್ಯರು.
ವೈದ್ಯರ ಪ್ರಕಾರ, ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗುವವರು ಟ್ರಾನ್ಸ್ಪ್ಲಾಂಟ್ ಸ್ವೀಕರಿಸುವವರು, ಮಧುಮೇಹಿಗಳು, ಗರ್ಭಿಣಿಯರು ಮತ್ತು ಎಚ್ಐವಿ ಪೀಡಿತ ವ್ಯಕ್ತಿಗಳು ಸೇರಿದಂತೆ ದುರ್ಬಲ ರೋಗ ನಿರೋಧಕ ಶಕ್ತಿ ಹೊಂದಿರುವ ಜನರು ತೊಡಕುಗಳ ಹೆಚ್ಚಿನ ಅಪಾಯ ಎದುರಿಸುತ್ತಾರೆ.
“ವಯಸ್ಸಾದವರು ಮತ್ತು ಮೊದಲೇ ಅಸ್ತಿತ್ವದಲ್ಲಿರುವ ಶ್ವಾಸಕೋಶದ ಸ್ಥಿತಿಗಳು ಫಲಿತಾಂಶಗಳನ್ನು ಹದಗೆಡಿಸಬಹುದು. ಕೆಲವು ಸಂದರ್ಭಗಳಲ್ಲಿ ಸೋಂಕು ಶ್ವಾಸಕೋಶ ಮೀರಿ ಚರ್ಮ, ಮೂಳೆಗಳು ಅಥವಾ ಮೆದುಳಿಗೆ ಹರಡುತ್ತದೆ. ಇದನ್ನು ಮೊದಲೇ ಗುರುತಿಸದಿದ್ದರೆ ಜೀವಕ್ಕೆ ಅಪಾಯಕಾರಿಯಾಗಬಹುದು. ವ್ಯಾಲಿ ಫಿವರ್ ಸಾಮಾನ್ಯ ಉಸಿರಾಟದ ಸೋಂಕುಗಳನ್ನು ಹೋಲುವ ಕಾರಣದಿಂದ ರೋಗ ನಿರ್ಣಯ ತಡವಾಗುವುದೇ ಅಪಾಯಕಾರಿಯಾಗಿ ಪರಿಣಮಿಸಲು ಕಾರಣವಾಗಿರುತ್ತದೆ” ಎನ್ನುತ್ತಾರೆ ವೈದ್ಯರು.
ವ್ಯಾಲಿ ಫಿವರ್ ಸಾಂಕ್ರಾಮಿಕವಲ್ಲ. ಒಬ್ಬ ವ್ಯಕ್ತಿಯಿಂದ ಮತ್ತೊಬ್ಬರಿಗೆ ಹರಡುವುದಿಲ್ಲ. ಕೆಲವೊಮ್ಮೆ ಕೊಳಕು ಮತ್ತು ಧೂಳು ಗಾಳಿಯ ಜೊತೆಗೂಡಿರುವ ಸ್ಥಳದಲ್ಲಿ ಹಠಾತ್ ಆಗಿ ವ್ಯಾಲಿ ಫಿವರ್ ಕಾಣಿಸಿಕೊಳ್ಳುತ್ತದೆ. ಹೀಗಾಗಿ ಹೆಚ್ಚಿನ ಅಪಾಯವಿರುವ ಪ್ರದೇಶಗಳಲ್ಲಿ ಧೂಳಿಗೆ ಒಡ್ಡಿಕೊಳ್ಳುವುದನ್ನು ಕಡಿಮೆ ಮಾಡಬೇಕು. ಧೂಳಿನ ಬಿರುಗಾಳಿ, ನಿರ್ಮಾಣ ಚಟುವಟಿಕೆ ಅಥವಾ ಹೊರಾಂಗಣ ಮಣ್ಣಿನ ಕೆಲಸದ ಸಮಯದಲ್ಲಿ ವ್ಯಕ್ತಿಗಳು ನೇರವಾಗಿ ಒಡ್ಡಿಕೊಳ್ಳುವುದನ್ನು ಕಡಿಮೆ ಮಾಡಬೇಕು. ಸಾಧ್ಯವಾದಲ್ಲಿ N95 ರೆಸ್ಪಿರೇಟರ್ಗಳಂತಹ ಮಾಸ್ಕ್ಗಳನ್ನು ಬಳಸಬೇಕು.
ಧೂಳಿನ ವಾತಾವರಣಗಳಲ್ಲಿ ಕಿಟಕಿ ಮುಚ್ಚುವುದು ಮತ್ತು ಬಿರುಗಾಳಿಗಳ ಸಮಯದಲ್ಲಿ ಅನಗತ್ಯ ಹೊರಾಂಗಣ ಚಟುವಟಿಕೆ ತಪ್ಪಿಸುವುದು ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮುಖ್ಯವಾಗಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಜನರು ಸ್ಥಳೀಯ ಪ್ರದೇಶಗಳಲ್ಲಿ ಜಾಗರೂಕರಾಗಿರಬೇಕು. ಏಕೆಂದರೆ ನಿತ್ಯದ ಒಡ್ಡಿಕೊಳ್ಳುವಿಕೆಯು ಹೆಚ್ಚು ಗಂಭೀರ ಸೋಂಕಿಗೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
ಕೃಪೆ: indianexpress.com






