ರಾಜಕೀಯ ಪಕ್ಷವೊಂದು ‘ಜಿರಳೆ’ಯನ್ನು ತನ್ನ ಚುನಾವಣಾ ಚಿಹ್ನೆಯಾಗಿ ಪಡೆಯಬಹುದೇ? ಚುನಾವಣಾ ಆಯೋಗದ ನಿಯಮಗಳು ಏನು ಹೇಳುತ್ತವೆ?

Photo Credit : Cockroach Janta Party
ನಿರುದ್ಯೋಗಿ ಯುವಕರ ಒಂದು ವರ್ಗವು "ಜಿರಳೆಗಳಂತೆ" ಆಗಿದೆ ಎಂದು ಕಳೆದ ತಿಂಗಳು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ವಿಚಾರಣೆಯೊಂದರ ಸಂದರ್ಭದಲ್ಲಿ ಉಲ್ಲೇಖಿಸಿದ್ದರು. ಅಂದಿನಿಂದ, ಈ ಹೇಳಿಕೆಯ ವಿರುದ್ಧ ಪ್ರತಿಭಟಿಸುತ್ತಿರುವವರು ಮತ್ತು ವ್ಯಂಗ್ಯಾತ್ಮಕವಾಗಿ ರಚನೆಯಾಗಿರುವ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಈ ಕೀಟದ ಚಿತ್ರವನ್ನು ತಮ್ಮ ಪ್ರತಿಭಟನೆಯ ಸಂಕೇತವಾಗಿ ಬಳಸುತ್ತಿವೆ.
ಅದರ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರ ಪ್ರಕಾರ, CJP ಒಂದು ರಾಜಕೀಯ ಪಕ್ಷವಲ್ಲ, ಬದಲಿಗೆ ಅದೊಂದು "ಯುವಕರ ಗುಂಪು". ದೀಪ್ಕೆ ಅವರು ಭವಿಷ್ಯದಲ್ಲಿ ಇದನ್ನು ಚುನಾವಣಾ ಆಯೋಗದಲ್ಲಿ ರಾಜಕೀಯ ಪಕ್ಷವಾಗಿ ನೋಂದಾಯಿಸುವ ಸಾಧ್ಯತೆಯನ್ನು ತಳ್ಳಿಹಾಕಿಲ್ಲ. ಆದರೆ ಸದ್ಯಕ್ಕೆ, ಈ ಗುಂಪು ಆನ್ಲೈನ್ನಲ್ಲಿ ಸಕ್ರಿಯವಾಗಿದ್ದು, ಜೂನ್ 6ರಂದು ಹೊಸದಿಲ್ಲಿಯ ಜಂತರ್ ಮಂತರ್ನಲ್ಲಿ ತನ್ನ ಮೊದಲ ಪ್ರತಿಭಟನೆಯನ್ನು ನಡೆಸಿದೆ.
ಒಂದು ವೇಳೆ CJP ಪಕ್ಷವಾಗಿ ನೋಂದಾಯಿಸಿಕೊಂಡು, ಜಿರಳೆಯನ್ನು ತನ್ನ ಚುನಾವಣಾ ಚಿಹ್ನೆಯಾಗಿ ನೀಡುವಂತೆ ಅರ್ಜಿ ಸಲ್ಲಿಸಿದರೂ ಸಹ, ಚುನಾವಣಾ ಆಯೋಗವು ಅದನ್ನು ಮಂಜೂರು ಮಾಡುವ ಸಾಧ್ಯತೆ ತೀರಾ ಕಡಿಮೆ. ಹಾಗಾದರೆ ಈ ಬಗ್ಗೆ ಚುನಾವಣಾ ಆಯೋಗದ ನಿಯಮಗಳು ಏನು ಹೇಳುತ್ತವೆ? ಹೊಸ ಪಕ್ಷಗಳಿಗೆ ಯಾವೆಲ್ಲಾ ಚುನಾವಣಾ ಚಿಹ್ನೆಗಳು ಲಭ್ಯವಿರುತ್ತವೆ ಎಂಬುದರ ವಿವರ ಇಲ್ಲಿದೆ:
►ನಿಯಮಗಳು ಏನು ಹೇಳುತ್ತವೆ?
ಚುನಾವಣಾ ಆಯೋಗವು ‘ಚುನಾವಣಾ ಚಿಹ್ನೆಗಳ (ಸಂರಕ್ಷಣೆ ಮತ್ತು ಹಂಚಿಕೆ) ಆದೇಶ, 1968’ರ ಅಡಿಯಲ್ಲಿ ಪಕ್ಷಗಳಿಗೆ ಮತ್ತು ಪಕ್ಷೇತರ ಅಭ್ಯರ್ಥಿಗಳಿಗೆ ಚಿಹ್ನೆಗಳನ್ನು ಹಂಚಿಕೆ ಮಾಡುತ್ತದೆ. ಈ ನಿಯಮಾವಳಿಗಳ ಪ್ರಕಾರ, ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳ ಅಭ್ಯರ್ಥಿಗಳಿಗೆ ಆಯಾ ಪಕ್ಷಗಳ ಮೀಸಲು ಚಿಹ್ನೆಗಳನ್ನು ನೀಡಲಾಗುತ್ತದೆ. ಉದಾಹರಣೆಗೆ ಬಿಜೆಪಿಗೆ ‘ಕಮಲ’ ಅಥವಾ ಕಾಂಗ್ರೆಸ್ ಗೆ ‘ಹಸ್ತ’ ಚಿಹ್ನೆ ಇರುವಂತೆ.
ಆದರೆ ಮಾನ್ಯತೆ ಪಡೆಯದ ಪಕ್ಷಗಳಿಗೆ (ನೋಂದಾಯಿತವಾಗಿದ್ದರೂ ರಾಷ್ಟ್ರೀಯ ಅಥವಾ ರಾಜ್ಯ ಪಕ್ಷದ ಸ್ಥಾನಮಾನದ ಮಾನದಂಡಗಳನ್ನು ತಲುಪದ ಪಕ್ಷಗಳು) ಅಥವಾ ಪಕ್ಷೇತರ ಅಭ್ಯರ್ಥಿಗಳಿಗೆ, ಚುನಾವಣಾ ಆಯೋಗವು ‘ಮುಕ್ತ ಚಿಹ್ನೆಗಳ’ ಪಟ್ಟಿಯಿಂದ ಚಿಹ್ನೆಗಳನ್ನು ಹಂಚಿಕೆ ಮಾಡುತ್ತದೆ. ಈ ಅಭ್ಯರ್ಥಿಗಳು ಮತ್ತು ಮಾನ್ಯತೆ ಪಡೆಯದ ಪಕ್ಷಗಳು ತಮಗೆ ಬೇಕಾದ ಚಿಹ್ನೆಯನ್ನು ಈ ಪಟ್ಟಿಯಿಂದ ಆಯ್ಕೆ ಮಾಡಿ ವಿನಂತಿಸಬಹುದು, ಆದರೆ ಅದೇ ಚಿಹ್ನೆ ತಮಗೆ ಸಿಗುತ್ತದೆ ಎಂಬ ಖಾತರಿ ಇರುವುದಿಲ್ಲ.
►ಯಾವ್ಯಾವ ಚಿಹ್ನೆಗಳನ್ನು ಅನುಮತಿಸಲಾಗುತ್ತದೆ?
ಚುನಾವಣಾ ಆಯೋಗವು ಕಾಲಕಾಲಕ್ಕೆ ಪರಿಷ್ಕರಿಸುವ ಈ ಮುಕ್ತ ಚಿಹ್ನೆಗಳ ಪಟ್ಟಿಯಲ್ಲಿ ಹಣ್ಣುಗಳು, ತರಕಾರಿಗಳು, ಗೃಹೋಪಯೋಗಿ ಉಪಕರಣಗಳು, ಕೃಷಿ ಉಪಕರಣಗಳು, ಕ್ರೀಡಾ ಸಾಮಾಗ್ರಿಗಳು ಮುಂತಾದ ಚಿತ್ರಗಳು ಇರುತ್ತವೆ. 2025ರ ಮೇ 23ರಂದು ಚುನಾವಣಾ ಆಯೋಗ ಪ್ರಕಟಿಸಿದ ಇತ್ತೀಚಿನ ಪಟ್ಟಿಯಲ್ಲಿ ಒಟ್ಟು 184 ಚಿಹ್ನೆಗಳಿದ್ದು, ಅದರಲ್ಲಿ ಏರ್ ಕಂಡಿಷನರ್, ಬಲೂನ್, ಡೋರ್ ಬೆಲ್, ಕಸದ ಬುಟ್ಟಿ, ಫ್ರೈಯಿಂಗ್ ಪ್ಯಾನ್, ಹಲಸಿನ ಹಣ್ಣು ಮತ್ತು ದ್ರಾಕ್ಷಿ ಸೇರಿವೆ.
ಇಮ್ಮರ್ಶನ್ ರಾಡ್, ಚಿಲಕ, ಮಿಕ್ಸರ್, ಟೂತ್ ಬ್ರಷ್ ಮತ್ತು ಟಿವಿ ರಿಮೋಟ್ನಂತಹ ಕೆಲವು ಗೃಹಬಳಕೆಯ ವಸ್ತುಗಳೂ ಈ ಪಟ್ಟಿಯಲ್ಲಿವೆ. ಕೇಕ್ ಮತ್ತು ಟಾಫಿಗಳೂ ಸೇರಿದಂತೆ ವಿವಿಧ ರೀತಿಯ ಹಣ್ಣುಗಳು, ತರಕಾರಿಗಳು ಮತ್ತು ಇತರ ಆಹಾರ ಪದಾರ್ಥಗಳ ಚಿತ್ರಗಳೂ ಇವೆ.
ಕೆಲವು ನಿರ್ದಿಷ್ಟ ಚಿಹ್ನೆಗಳನ್ನು ಕೆಲವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಹೊರತುಪಡಿಸಿ ಉಳಿದೆಡೆ ಮುಕ್ತವಾಗಿ ಹಂಚಿಕೆ ಮಾಡಬಹುದು ಎಂದು ಆಯೋಗದ ಪಟ್ಟಿ ತಿಳಿಸುತ್ತದೆ. ಉದಾಹರಣೆಗೆ, ‘ಸೇಬು’ ಚಿಹ್ನೆಯನ್ನು ಅರುಣಾಚಲ ಪ್ರದೇಶ, ಅಸ್ಸಾಂ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರ, ಪುದುಚೇರಿ, ತಮಿಳುನಾಡು, ಕೇರಳ ಮತ್ತು ಕರ್ನಾಟಕ ರಾಜ್ಯಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪಕ್ಷಗಳಿಗೆ ಹಂಚಿಕೆ ಮಾಡಬಹುದು.
ಏಕೆಂದರೆ, ಮೇಲೆ ಉಲ್ಲೇಖಿಸಲಾದ ರಾಜ್ಯಗಳಲ್ಲಿ ಈ ಚಿಹ್ನೆಯನ್ನು ಈಗಾಗಲೇ ಮಾನ್ಯತೆ ಪಡೆದ ಪ್ರಾದೇಶಿಕ ಪಕ್ಷವೊಂದಕ್ಕೆ ಹಂಚಿಕೆ ಮಾಡಲಾಗಿರುತ್ತದೆ. ಇದರರ್ಥ, ಎರಡು ವಿಭಿನ್ನ ರಾಜ್ಯಗಳ ಎರಡು ವಿಭಿನ್ನ ಮಾನ್ಯತೆ ಪಡೆದ ಪಕ್ಷಗಳು ಒಂದೇ ಚುನಾವಣಾ ಚಿಹ್ನೆಯನ್ನು ಹೊಂದಿರಬಹುದು. ಇದಕ್ಕೆ ನಿಯಮಗಳಲ್ಲಿ ಯಾವುದೇ ಅಡ್ಡಿಯಿಲ್ಲ ಮತ್ತು ಈ ಪಕ್ಷಗಳು ಪರಸ್ಪರ ಎದುರಾಗಿ ಸ್ಪರ್ಧಿಸುವ ಸಾಧ್ಯತೆಯೂ ಇರುವುದಿಲ್ಲ.
►ಜಿರಳೆ ಚುನಾವಣಾ ಚಿಹ್ನೆಯಾಗಬಹುದಾ?
1990ರ ದಶಕದಲ್ಲಿ ಪ್ರಾಣಿಗಳ ರಕ್ಷಣಾ ಕಾರ್ಯಕರ್ತರು ನೀಡಿದ ಮನವಿಗಳ ಬೆನ್ನಲ್ಲೇ, ಚುನಾವಣಾ ಆಯೋಗವು ಪ್ರಾಣಿ ಮತ್ತು ಪಕ್ಷಿಗಳನ್ನು ಚುನಾವಣಾ ಚಿಹ್ನೆಗಳಾಗಿ ಹಂಚಿಕೆ ಮಾಡುವುದನ್ನು ನಿಲ್ಲಿಸಿತು.
ಕೇಂದ್ರದ ಮಾಜಿ ಸಚಿವೆ ಹಾಗೂ ‘ಪೀಪಲ್ ಫಾರ್ ಅನಿಮಲ್ಸ್’ ಸಂಸ್ಥೆಯ ಸಂಸ್ಥಾಪಕಿ ಮೇನಕಾ ಗಾಂಧಿ ಅವರು ತಮ್ಮ ವೆಬ್ಸೈಟ್ ನಲ್ಲಿ ಬರೆದಿರುವ ಲೇಖನವೊಂದರ ಪ್ರಕಾರ, 1989ರ ತಮಿಳುನಾಡು ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಜೆ. ಜಯಲಲಿತಾ ನೇತೃತ್ವದ AIADMK ಬಣಕ್ಕೆ ‘ಕೋಳಿ’ ಚಿಹ್ನೆಯನ್ನು ನೀಡಲಾಗಿತ್ತು. ಆ ಚುನಾವಣೆಯ ಸಮಯದಲ್ಲಿ ಸಾವಿರಾರು ಕೋಳಿಗಳನ್ನು ವೇಗವಾಗಿ ಚಲಿಸುವ ವಾಹನಗಳ ಮೇಲೆ ಕಟ್ಟಿ ಪ್ರಚಾರ ಮಾಡಲಾಗಿತ್ತು. ಇದರಿಂದಾಗಿ ಸಾವಿರಾರು ಕೋಳಿಗಳು ಸತ್ತವು. ಪ್ರತಿದಿನ ಸಂಜೆ ತಮಿಳುನಾಡಿನಾದ್ಯಂತ ಸತ್ತ ಕೋಳಿಗಳು ಬಿದ್ದಿರುತ್ತಿದ್ದವು ಎಂದು ಅವರು ಉಲ್ಲೇಖಿಸಿದ್ದಾರೆ.
ಆದರೆ ಈ ನಿಷೇಧ ಜಾರಿಗೆ ಬರುವ ಮುನ್ನವೇ ರಚನೆಯಾಗಿದ್ದ ‘ಬಹುಜನ ಸಮಾಜ ಪಕ್ಷ’ ಮಾತ್ರ ತನ್ನ ಚುನಾವಣಾ ಚಿಹ್ನೆಯಾದ ‘ಆನೆ’ಯನ್ನು ಇಂದಿಗೂ ಉಳಿಸಿಕೊಂಡಿದೆ. ಇದು ಈ ನಿಯಮಕ್ಕಿರುವ ಕೆಲವು ಅಪರೂಪದ ವಿನಾಯಿತಿಗಳಲ್ಲಿ ಒಂದಾಗಿದೆ.
ಪ್ರಾಣಿ ಮತ್ತು ಕೀಟಗಳನ್ನು ಚುನಾವಣಾ ಚಿಹ್ನೆಯಾಗಿ ನೀಡಬಾರದು ಎಂಬ ಚುನಾವಣಾ ಆಯೋಗದ ಪ್ರಸ್ತುತ ಕಠಿಣ ನಿಲುವನ್ನು ಗಮನಿಸಿದರೆ, ಯಾರೇ ವಿನಂತಿಸಿದರೂ ‘ಜಿರಳೆ’ ಚಿಹ್ನೆಯನ್ನು ಮಂಜೂರು ಮಾಡುವ ಸಾಧ್ಯತೆ ಇಲ್ಲ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.






