ನೆನಪಿನ ಶಕ್ತಿ ಮತ್ತು ಏಕಾಗ್ರತೆಗೆ ಬೇಕು ನಿತ್ಯದ ನಡಿಗೆಯ ಮದ್ದು!

ಸಾಂದರ್ಭಿಕ ಚಿತ್ರ (AI)
ನಡಿಗೆ ಸರಳ ವ್ಯಾಯಾಮದಂತೆ ಕಂಡರೂ ಮೆದುಳಿನಲ್ಲಿ ಸಾಕಷ್ಟು ಚಟುವಟಿಕೆ ನಡೆಯುತ್ತಿರುತ್ತವೆ ಮತ್ತು ಮೆದುಳನ್ನು ಸಕ್ರಿಯವಾಗಿಡಲು ಸಹಾಯ ಮಾಡುತ್ತದೆ.
ನಿತ್ಯವೂ ಬೆಳಿಗ್ಗೆ ಮತ್ತು ರಾತ್ರಿ ನಡೆಯುತ್ತೀರಾ? ಈ ನಡಿಗೆ ತೂಕ ಇಳಿಸಿಕೊಳ್ಳುವುದಕ್ಕಿಂತ ಹೆಚ್ಚಿನ ಲಾಭ ಕೊಡಲಿದೆ. ಮೆದುಳಿಗೂ ಪ್ರಯೋಜನಗಳಿವೆ. ಒಂದು ಸಾಮಾನ್ಯ ನಡಿಗೆ ನಿಮ್ಮ ನರಮಂಡಲದ ಆರೋಗ್ಯವನ್ನೂ ಸುಧಾರಿಸಲಿದೆ. ನಡಿಗೆ ಸರಳ ವ್ಯಾಯಾಮದಂತೆ ಕಂಡರೂ ಮೆದುಳಿನಲ್ಲಿ ಸಾಕಷ್ಟು ಚಟುವಟಿಕೆಗಳು ನಡೆಯುತ್ತಿರುತ್ತವೆ ಮತ್ತು ಮೆದುಳನ್ನು ಸಕ್ರಿಯವಾಗಿಡಲು ಸಹಾಯ ಮಾಡುತ್ತದೆ.
ಯಥಾರ್ಥ್ ಆಸ್ಪತ್ರೆಗಳ ನರ ವಿಜ್ಞಾನ ವಿಭಾಗದ ಅಧ್ಯಕ್ಷರು ಮತ್ತು ಗುಂಪು ನಿರ್ದೇಶಕರಾದ ಡಾ. ಕುನಾಲ್ ಬಹ್ರಾನಿ ಅವರು ಮಾಧ್ಯಮಗಳಿಗೆ ತಿಳಿಸಿರುವ ಪ್ರಕಾರ, ನಡಿಗೆ ಮೇಲ್ನೋಟಕ್ಕೆ ಕಾಣುವುದಕ್ಕಿಂತಲೂ ಕುತೂಹಲಕರವಾಗಿದೆ.
►ನಡಿಗೆ ಮೆದುಳನ್ನು ಸಕ್ರಿಯಗೊಳಿಸುವುದು ಹೇಗೆ?
ನಡಿಗೆ ಸಾಮಾನ್ಯ ಚಟುವಟಿಕೆಯಂತೆ ಕಂಡರೂ, ಆ ಸಮಯದಲ್ಲಿ ನಿಮ್ಮ ಮೆದುಳಿನಲ್ಲಿ ಸಾಕಷ್ಟು ಪ್ರಕ್ರಿಯೆಗಳು ನಡೆಯುತ್ತವೆ. ಮೆದುಳು ಏಕಕಾಲದಲ್ಲಿ ಅನೇಕ ಕೆಲಸಗಳನ್ನು ಮಾಡುತ್ತಿರುತ್ತದೆ. ಕಣ್ಣುಗಳು, ಕಿವಿಗಳು, ಸ್ನಾಯುಗಳು ಮತ್ತು ಕೀಲುಗಳಿಂದ ಮಾಹಿತಿ ಸ್ವೀಕರಿಸುತ್ತದೆ. “ಪಾದ ಎಲ್ಲಿ ಇಡಬೇಕು ಎಂದು ನಿರ್ಧರಿಸುವುದು, ದೇಹದ ಸಮತೋಲನ ಕಾಪಾಡುವುದು, ವೇಗವನ್ನು ಹೊಂದಾಣಿಕೆ ಮಾಡಿಕೊಳ್ಳುವುದು ಮತ್ತು ಹಠಾತ್ತಾಗಿ ದಾರಿಯಲ್ಲಿ ಏನಾದರೂ ಅಡ್ಡಬಂದರೆ ಅದಕ್ಕೆ ಪ್ರತಿಕ್ರಿಯಿಸುವುದು ಎಲ್ಲವನ್ನೂ ಮೆದುಳು ನಿರ್ವಹಿಸಬೇಕಾಗುತ್ತದೆ” ಎಂದು ಅವರು ವಿವರಿಸಿದರು.
ನಿಯಮಿತ ನಡಿಗೆ ಹೃದಯರಕ್ತನಾಳದ ಕ್ಷಮತೆ ಸುಧಾರಿಸುತ್ತದೆ. ಮತ್ತು ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ ಮಟ್ಟ ಮತ್ತು ತೂಕ ನಿರ್ವಹಿಸಲು ಸಹಾಯ ಮಾಡುತ್ತದೆ ಎಂದು ತಜ್ಞರು ಒತ್ತಿ ಹೇಳಿದರು. ಮೆದುಳು ಆರೋಗ್ಯಕರ ರಕ್ತ ಪೂರೈಕೆಯ ಮೇಲೆ ಅವಲಂಬಿತವಾಗಿರುವುದರಿಂದ ಈ ಅಂಶಗಳನ್ನು ನಿರ್ವಹಿಸುವುದು ಮೆದುಳಿಗೆ ರಕ್ತ ಪೂರೈಸುವ ರಕ್ತನಾಳಗಳ ಆರೋಗ್ಯಕ್ಕೂ ಪೂರಕವಾಗಿರುತ್ತದೆ.
►ಮಾನಸಿಕವಾಗಿ ದಣಿವು ಪರಿಹಾರ ಸಾಧ್ಯವಿದೆಯೆ?
ನೀವು ಮಾನಸಿಕವಾಗಿ ದಣಿದಿದ್ದೀರಿ ಎಂದು ಅನಿಸಿದರೆ ಸಾಕಷ್ಟು ಚಲನವಲನಗಳನ್ನು ಮಾಡುತ್ತಿಲ್ಲದಿರುವ ಸಾಧ್ಯತೆಯಿದೆ. ಇಂತಹ ಸಮಸ್ಯೆಗಳನ್ನು ಹೇಳಿಕೊಳ್ಳುವ ರೋಗಿಗಳು ಸಾಮಾನ್ಯವಾಗಿ ಬಹಳ ಕಡಿಮೆ ದೈಹಿಕ ಚಟುವಟಿಕೆ ಇರುವ ದಿನಚರಿ ಹೊಂದಿರುತ್ತಾರೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
“ದೈನಂದಿನ ವೈದ್ಯಕೀಯ ಅಭ್ಯಾಸದಲ್ಲೂ ಈ ಸಂಪರ್ಕ ಗಮನಿಸುತ್ತೇನೆ. ಮಾನಸಿಕ ಆಯಾಸ, ಏಕಾಗ್ರತೆಯ ಕೊರತೆ ಅಥವಾ ‘ಹಿಂದಿನಷ್ಟು ಚುರುಕಾಗಿಲ್ಲ’ ಎಂಬ ದೂರುಗಳನ್ನು ನೀಡುವ ರೋಗಿಗಳು ಸಾಮಾನ್ಯವಾಗಿ ದಿನವಿಡೀ ಕಡಿಮೆ ಚಲನವಲನ ಹೊಂದಿರುತ್ತಾರೆ. ಸಹಜವಾಗಿ ಕಳಪೆ ನಿದ್ರೆ, ಒತ್ತಡ, ಔಷಧಿ ಅಥವಾ ಇತರ ಆರೋಗ್ಯ ಸಮಸ್ಯೆಗಳಂತಹ ಅನೇಕ ಕಾರಣಗಳಿಂದ ಈ ಲಕ್ಷಣಗಳು ಉಂಟಾಗಬಹುದು. ಆದರೆ ದಿನದ ಬಹುಭಾಗವನ್ನು ಕುಳಿತುಕೊಳ್ಳುವುದರಲ್ಲೇ ಕಳೆದರೆ ದೈಹಿಕ ಚಟುವಟಿಕೆಯನ್ನು ಹೆಚ್ಚಿಸುವುದನ್ನು ಪರಿಗಣಿಸುವುದು ಪ್ರಾಯೋಗಿಕ ಬದಲಾವಣೆಯಾಗಿದೆ. ಇದರಿಂದ ದೈಹಿಕ ಮತ್ತು ಮಾನಸಿಕ ಎರಡೂ ಪ್ರಯೋಜನಗಳು ಸಿಗುತ್ತವೆ” ಎನ್ನುತ್ತಾರೆ ಕುನಾಲ್.
►ನಡಿಗೆಯು ಅರಿವಿನ ಕಾರ್ಯಗಳನ್ನು ಸುಧಾರಿಸುತ್ತದೆಯೆ?
ನಿಯಮಿತ ನಡಿಗೆಯು ಅರಿವಿನ ಕಾರ್ಯಗಳನ್ನು ಬೆಂಬಲಿಸಬಹುದು. ಇದರಲ್ಲಿ ಯೋಜನೆ, ಸಂಘಟಿಸುವುದು, ನಿರ್ಧಾರ ಕೈಗೊಳ್ಳುವುದು ಮತ್ತು ಸ್ಪರ್ಧಾತ್ಮಕ ಬೇಡಿಕೆಗಳನ್ನು ನಿರ್ವಹಿಸುವ ಸಾಮರ್ಥ್ಯವೂ ಸೇರಿದೆ. ದೈಹಿಕ ಚಟುವಟಿಕೆ ಸ್ಮರಣೆಯನ್ನೂ ಬೆಂಬಲಿಸಬಹುದು” ಎನ್ನುತ್ತಾರೆ ತಜ್ಞರು.
ಆದರೆ ನಡಿಗೆ ಎಂದರೆ ಉತ್ತಮ ಸ್ಮರಣೆ ಎಂದರ್ಥವಲ್ಲ. ದೈಹಿಕವಾಗಿ ಸಕ್ರಿಯವಾಗಿರುವುದು ವಯಸ್ಸಾದಂತೆ ಮೆದುಳಿನ ಆರೋಗ್ಯ ಕಾಪಾಡಿಕೊಳ್ಳುವ ಒಂದು ಭಾಗವೆಂದು ಹೆಚ್ಚು ಗುರುತಿಸಲಾಗಿದೆ. ಇದನ್ನು ಹೊರತುಪಡಿಸಿ ಉತ್ತಮ ಒತ್ತಡ ನಿರ್ವಹಣೆ ಮತ್ತು ಸುಧಾರಿತ ನಿದ್ರೆಯಂತಹ ಕೆಲವು ಪರೋಕ್ಷ ಪ್ರಯೋಜನಗಳನ್ನೂ ಅವರು ಉಲ್ಲೇಖಿಸಿದ್ದಾರೆ. ಇವೆರಡೂ ಏಕಾಗ್ರತೆಯನ್ನು ಬೆಂಬಲಿಸುತ್ತವೆ. ವಯಸ್ಸಾದವರಿಗೆ ನಿಯಮಿತವಾಗಿ ಮತ್ತು ಸುರಕ್ಷಿತವಾಗಿ ನಡೆಯುವುದು ಚಲನಶೀಲತೆ ಮತ್ತು ಸ್ವತಂತ್ರವಾಗಿ ಚಲಿಸಲು ಸಹಾಯ ಮಾಡುತ್ತದೆ.
ಸೌಜನ್ಯ: hindustantimes.com






