ಮೆಟಾದ ಹೊಸ ಹದಿಹರೆಯದವರ ಸೋಷಿಯಲ್ ಮೀಡಿಯಾ ನಿಯಮಗಳು ನಿಜಕ್ಕೂ ಮಕ್ಕಳ ಮಾನಸಿಕ ಆರೋಗ್ಯವನ್ನು ರಕ್ಷಿಸಬಲ್ಲವೇ? ತಜ್ಞರು ಏನಂತಾರೆ?
► ರಿಂಕು ಘೋಷ್ - indianexpress. com ವರದಿ

ಸಾಂದರ್ಭಿಕ ಚಿತ್ರ | Photo Credit : magnific.com
ತನ್ನ ಸೋಷಿಯಲ್ ಮೀಡಿಯಾ ವೇದಿಕೆಗಳ ಚಟ ಹಚ್ಚಿಸುವ ಸ್ವರೂಪದಿಂದ ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರಿದೆ ಹಾಗೂ ಮಕ್ಕಳ ಗೌಪ್ಯತೆಯ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಒಡೆತನದ ‘ಮೆಟಾ’ ಸಂಸ್ಥೆ ಭಾರೀ ಬೆಲೆ ತೆರಲು ಒಪ್ಪಿಕೊಂಡಿದೆ. ಈ ಪ್ರಕರಣದ ಇತ್ಯರ್ಥಕ್ಕಾಗಿ ಮೆಟಾ ಬರೋಬ್ಬರಿ 17.1 ಬಿಲಿಯನ್ ಡಾಲರ್ (ಸುಮಾರು 1.4 ಲಕ್ಷ ಕೋಟಿ ರೂಪಾಯಿ) ವರೆಗೆ ದಂಡ ಪಾವತಿಸಲು ಹಾಗೂ ತನ್ನ ಉತ್ಪನ್ನಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲು ಸಮ್ಮತಿಸಿದೆ. ಅಮೆರಿಕದ 47 ರಾಜ್ಯಗಳು, ಡಿಸ್ಟ್ರಿಕ್ಟ್ ಆಫ್ ಕೊಲಂಬಿಯಾ ಮತ್ತು ಯುಎಸ್ ಪ್ರಾಂತ್ಯಗಳೊಂದಿಗೆ ಈ ಐತಿಹಾಸಿಕ ಒಪ್ಪಂದ ನಡೆದಿದೆ.
ಹದಿಹರೆಯದವರು ತನ್ನ ವೇದಿಕೆಗಳಲ್ಲಿ ಕಳೆಯುವ ಸಮಯಕ್ಕೆ ಮಿತಿ ಹೇರಲು ಹಾಗೂ ಮಾನಸಿಕ ಆರೋಗ್ಯದ ಸಮಸ್ಯೆಗಳನ್ನು ಹೆಚ್ಚಿಸುವ ಫೀಚರ್ಗಳನ್ನು ನಿಷೇಧಿಸಲು ಮೆಟಾ ಒಪ್ಪಿಕೊಂಡಿದೆ. ಜಾಹೀರಾತು ಆದಾಯಕ್ಕಾಗಿ ಬಳಕೆದಾರರನ್ನು ಹೆಚ್ಚು ಸಮಯ ತೊಡಗಿಸಿಕೊಳ್ಳುವಂತೆ ಮಾಡುತ್ತಿದ್ದ ಕಂಪನಿಯ ಮೂಲ ಉದ್ಯಮ ಮಾದರಿಗೆ ಈ ನಿರ್ಧಾರ ದೊಡ್ಡ ಹೊಡೆತ ನೀಡಿದೆ.
ಈ ಒಪ್ಪಂದದ ಭಾಗವಾಗಿ, 18 ವರ್ಷದೊಳಗಿನ ಬಳಕೆದಾರರಿಗೆ ಮೆಟಾ ಬಲವಾದ ರಕ್ಷಣೆಗಳನ್ನು ಪರಿಚಯಿಸುವ ನಿರೀಕ್ಷೆಯಿದೆ. ಇದರ ಪ್ರಮುಖ ಬದಲಾವಣೆಗಳಲ್ಲಿ ಒಂದಾಗಿ, ಹದಿಹರೆಯದವರಿಗೆ ದಿನಕ್ಕೆ ಗರಿಷ್ಠ ಎರಡು ಗಂಟೆಗಳ ಬಳಕೆಯ ಮಿತಿಯನ್ನು ಸ್ವಯಂಚಾಲಿತವಾಗಿ ನಿಗದಿಪಡಿಸಲಾಗುವುದು.
ರಾತ್ರಿ ವೇಳೆಯ ನಿರ್ಬಂಧಗಳನ್ನು ಜಾರಿಗೆ ತರಲು ಮೆಟಾ ಯೋಜಿಸಿದ್ದು, ಸರಿಸುಮಾರು ಮಧ್ಯರಾತ್ರಿಯಿಂದ ಬೆಳಿಗ್ಗೆ 6 ಗಂಟೆಯವರೆಗಿನ ಅವಧಿಯಲ್ಲಿ ಸೋಷಿಯಲ್ ಮೀಡಿಯಾ ಬಳಕೆಗೆ ಮಿತಿ ಹೇರಲಿದೆ. ಮಕ್ಕಳು ಕಲಿಯುವ ಸಮಯದಲ್ಲಿ ಏಕಾಗ್ರತೆಗೆ ಭಂಗವಾಗುವುದನ್ನು ತಡೆಯಲು, ಶಾಲೆಯ ಅವಧಿಯಲ್ಲಿ ನೋಟಿಫಿಕೇಶನ್ಗಳು ಮತ್ತು ಕೆಲವು ಫೀಚರ್ ಗಳನ್ನು ಕಡಿಮೆ ಮಾಡಲಾಗುತ್ತದೆ.
ಮೆಟಾ, ಪೋಷಕರಿಗೆ ಹೆಚ್ಚಿನ ನಿಯಂತ್ರಣಾಧಿಕಾರವನ್ನೂ ನೀಡಲಿದೆ. ಇದರಿಂದ ಮಕ್ಕಳು ಸೋಷಿಯಲ್ ಮೀಡಿಯಾವನ್ನು ಹೇಗೆ ಬಳಸುತ್ತಿದ್ದಾರೆ ಎಂಬ ವಿವರ ಪೋಷಕರಿಗೆ ದೊರೆಯಲಿದ್ದು, ಕೆಲವು ಸೆಟ್ಟಿಂಗ್ಗಳನ್ನು ನಿಯಂತ್ರಿಸುವ ಹೆಚ್ಚಿನ ಅವಕಾಶ ಸಿಗಲಿದೆ. 13 ವರ್ಷದೊಳಗಿನ ಮಕ್ಕಳು ತಮ್ಮ ವಯಸ್ಸಿಗೆ ಸೂಕ್ತವಲ್ಲದ ಖಾತೆಗಳನ್ನು ತೆರೆಯುವುದನ್ನು ತಡೆಯಲು ವಯಸ್ಸಿನ ದೃಢೀಕರಣ ಪ್ರಕ್ರಿಯೆಯನ್ನು ಕಟ್ಟುನಿಟ್ಟುಗೊಳಿಸಲು ಮೆಟಾ ನಿರ್ಧರಿಸಿದೆ. ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯವಾಗಿರುವಂತೆ ಪ್ರೇರೇಪಿಸುವ ಫೀಚರ್ಗಳನ್ನು ಕಡಿಮೆ ಮಾಡುವುದು ಮತ್ತೊಂದು ಪ್ರಮುಖ ಬದಲಾವಣೆಯಾಗಿದೆ. ಹದಿಹರೆಯದವರಿಗೆ ಲೈಕ್ಗಳ ಸಂಖ್ಯೆಯನ್ನು ಮರೆಮಾಡುವುದು ಮತ್ತು ಕೆಲವು ಕಾಸ್ಮೆಟಿಕ್ ಫೀಚರ್ ಗಳನ್ನು ಮಿತಿಗೊಳಿಸುವುದು ಇದರಲ್ಲಿ ಸೇರಿವೆ. ಹೊಸ ನಿಯಮಗಳನ್ನು ಕಂಪನಿಯು ಸರಿಯಾಗಿ ಪಾಲಿಸುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಹೆಚ್ಚಿನ ಉಸ್ತುವಾರಿಯನ್ನೂ ವಹಿಸಲಾಗುತ್ತದೆ.
"ಇದು ಸರಿಯಾದ ದಿಸೆಯಲ್ಲಿ ಇಟ್ಟ ಒಂದು ಹೆಜ್ಜೆ ಎಂದು ನಾನು ಭಾವಿಸುತ್ತೇನೆ. ಅಮೆರಿಕದಲ್ಲಿ ಇದುವರೆಗೆ ಬಂದಿರುವ ಯಾವುದೇ ನಿಯಮಗಳಿಗಿಂತ ಈ ವಿನ್ಯಾಸದ ಅಗತ್ಯತೆಗಳು ಸ್ಪಷ್ಟವಾಗಿವೆ. ಇದರಲ್ಲಿ ರಾತ್ರಿಯ ಸ್ವಯಂಚಾಲಿತ ನಿರ್ಬಂಧಗಳು, ದೈನಂದಿನ ಬಳಕೆಯ ಮಿತಿಗಳು ಮತ್ತು ಪರೀಕ್ಷಿತ ವಯಸ್ಸಿನ ದೃಢೀಕರಣ ಸೇರಿವೆ" ಎಂದು ಜಾನ್ಸ್ ಹಾಪ್ಕಿನ್ಸ್ ಬ್ಲೂಮ್ಬರ್ಗ್ ಸಾರ್ವಜನಿಕ ಆರೋಗ್ಯ ಶಾಲೆಯ ಮಾನಸಿಕ ಆರೋಗ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಜೊಹಾನ್ಸ್ ಥ್ರುಲ್ ಹೇಳಿದ್ದಾರೆ. ತೀರ್ಪಿಗೆ ಪ್ರತಿಕ್ರಿಯಿಸಿದ ಅವರು, ಪ್ಲಾಟ್ಫಾರ್ಮ್ಗಳ ವಿನ್ಯಾಸವು, ಅದರಲ್ಲೂ ವಿಶೇಷವಾಗಿ ಯುವ ಬಳಕೆದಾರರ ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದಿದ್ದು, ಸುರಕ್ಷಿತ ಪ್ಲಾಟ್ಫಾರ್ಮ್ ವಿನ್ಯಾಸಕ್ಕಾಗಿ ಸಾಕ್ಷ್ಯಾಧಾರಿತ ಮಾನದಂಡಗಳಿರಬೇಕು ಎಂದು ಹೇಳಿದ್ದಾರೆ.
ಹದಿಹರೆಯದವರು ಸೋಷಿಯಲ್ ಮೀಡಿಯಾದಲ್ಲಿ ಕಳೆಯುವ ಸಮಯವನ್ನು ಮಿತಿಗೊಳಿಸುವುದರಿಂದ ಅವರ ಮಾನಸಿಕ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರಲಿದೆಯೇ?
"ಖಂಡಿತವಾಗಿಯೂ ಮಾನಸಿಕ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರುವ ನಿರೀಕ್ಷೆಯಿದೆ. ವಿಶೇಷವಾಗಿ ರಾತ್ರಿ ವೇಳೆಯ ಬಳಕೆಯ ನಿರ್ಬಂಧಗಳಿಂದ ಯುವಜನರಿಗೆ ಹೆಚ್ಚಿನ ನಿದ್ರೆ ಸಿಗಲಿದೆ. ವಾಸ್ತವವಾಗಿ, ಸೋಷಿಯಲ್ ಮೀಡಿಯಾ ಬಳಕೆಯಿಂದಾಗಿ ನಿದ್ರೆ ಕೆಡುವುದು ಮತ್ತು ಅದರಿಂದ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವುದರ ನಡುವೆ ನೇರ ಸಂಬಂಧವಿದೆ ಎಂಬುದಕ್ಕೆ ಬಲವಾದ ಆಧಾರಗಳಿವೆ" ಎಂದಿದ್ದಾರೆ ಡಾ. ಥ್ರುಲ್.
ಸೋಷಿಯಲ್ ಮೀಡಿಯಾ ಮತ್ತು ಸ್ಕ್ರೀನ್ ನೋಡುವ ಸಮಯವನ್ನು ಕಡಿಮೆ ಮಾಡುವುದರಿಂದ ಯುವಜನರ ಮಾನಸಿಕ ಆರೋಗ್ಯ, ವಿಶೇಷವಾಗಿ ಆತಂಕ, ಖಿನ್ನತೆ, ಒಂಟಿತನ, ನಿದ್ರಾಹೀನತೆ ಹಾಗೂ ಭಾವನಾತ್ಮಕ ಸಮಸ್ಯೆಗಳು ಸುಧಾರಿಸುತ್ತವೆ ಎಂಬುದಕ್ಕೆ ಪ್ರಯೋಗಾತ್ಮಕ ಆಧಾರಗಳಿವೆ. ಭಾವನಾತ್ಮಕ ಒತ್ತಡದಲ್ಲಿದ್ದ 220 ಯುವಕರನ್ನು ಒಳಗೊಂಡ 2025ರ ಅಧ್ಯಯನವೊಂದರಲ್ಲಿ, ಮೂರು ವಾರಗಳ ಕಾಲ ತಮ್ಮ ಸ್ಮಾರ್ಟ್ಫೋನ್ ಸೋಷಿಯಲ್ ಮೀಡಿಯಾ ಬಳಕೆಯನ್ನು ದಿನಕ್ಕೆ ಸುಮಾರು ಒಂದು ಗಂಟೆಗೆ ಮಿತಿಗೊಳಿಸಿದ ಗುಂಪಿನಲ್ಲಿ ಖಿನ್ನತೆ, ಆತಂಕ ಮತ್ತು ಹಿಂದುಳಿದುಬಿಡುವ ಭೀತಿ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದ್ದು, ನಿದ್ರೆಯಲ್ಲಿ ಸುಧಾರಣೆ ಕಂಡುಬಂದಿದೆ.
2026ರಲ್ಲಿ ನಡೆದ ಮತ್ತೊಂದು ಅಧ್ಯಯನದ ಪ್ರಕಾರ, ಆತಂಕ ಅಥವಾ ಖಿನ್ನತೆಯ ಲಕ್ಷಣ ಹೊಂದಿದ್ದ ಯುವಕರು ದಿನಕ್ಕೆ ಸುಮಾರು 78 ನಿಮಿಷ ಸೋಷಿಯಲ್ ಮೀಡಿಯಾ ಬಳಕೆಯನ್ನು ಕಡಿಮೆ ಮಾಡಿದಾಗ ಅವರ ಒಂಟಿತನದ ಭಾವನೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ.
ಬಳಕೆದಾರರನ್ನು ಸೆಳೆದಿಡುವ ಉದ್ದೇಶದಿಂದ ರೂಪಿಸಲಾದ ಸೋಷಿಯಲ್ ಮೀಡಿಯಾ ಫೀಚರ್ಗಳು ಹದಿಹರೆಯದವರಲ್ಲಿ ಆತಂಕ, ಖಿನ್ನತೆ, ಕೀಳರಿಮೆ, ನಿದ್ರಾಹೀನತೆ ಅಥವಾ ಇತರ ಮಾನಸಿಕ ಸಮಸ್ಯೆಗಳಿಗೆ ಎಷ್ಟರಮಟ್ಟಿಗೆ ಕಾರಣವಾಗುತ್ತವೆ?
"ಈ ಕೆಲವು ಫೀಚರ್ಗಳು ಸೋಷಿಯಲ್ ಮೀಡಿಯಾದ ದಾಸರಾಗುವಂತೆ ಮಾಡುತ್ತವೆ ಮತ್ತು ಈ ಮೂಲಕ ಮಾನಸಿಕ ಸವಾಲುಗಳನ್ನು ತಂದೊಡ್ಡುತ್ತವೆ ಎಂಬುದಕ್ಕೆ ಸಾಕಷ್ಟು ಆಧಾರಗಳಿವೆ. ದೈಹಿಕ ರೂಪವನ್ನು ಆಧರಿಸಿದ ಹೋಲಿಕೆಗಳು, ಲೈಕ್ಗಳ ಸಂಖ್ಯೆಯನ್ನು ತೋರಿಸುವ ಪ್ರತಿಕ್ರಿಯೆಗಳು ಹಾಗೂ ತಡರಾತ್ರಿಯ ನೋಟಿಫಿಕೇಶನ್ಗಳು ನೇರವಾಗಿ ದುಷ್ಪರಿಣಾಮ ಬೀರುತ್ತವೆ" ಎಂದು ಡಾ. ಥ್ರುಲ್ ವಿವರಿಸಿದ್ದಾರೆ.
ಅಮೆರಿಕನ್ ಸೈಕಾಲಜಿಕಲ್ ಅಸೋಸಿಯೇಷನ್ (APA) ಪ್ರಕಾರ, ಹದಿಹರೆಯದವರಿಗಾಗಿ ಪ್ಲಾಟ್ಫಾರ್ಮ್ ಗಳನ್ನು ವಿನ್ಯಾಸಗೊಳಿಸುವಾಗ ಲೈಕ್ಗಳು, ಶಿಫಾರಸು ಮಾಡಿದ ವಿಷಯಗಳು, ಮಿತಿಯಿಲ್ಲದ ಸಮಯ ಹಾಗೂ ನಿರಂತರ ಸ್ಕ್ರೋಲಿಂಗ್ ಮುಂತಾದ ಫೀಚರ್ಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕಿದೆ. 10 ಲಕ್ಷಕ್ಕೂ ಹೆಚ್ಚು ಹದಿಹರೆಯದವರನ್ನು ಒಳಗೊಂಡ 143 ಅಧ್ಯಯನಗಳ 2024ರ ವಿಶ್ಲೇಷಣೆಯ ಪ್ರಕಾರ, ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ತೊಡಗಿಸಿಕೊಳ್ಳುವುದಕ್ಕೂ ಹಾಗೂ ಆತಂಕ ಮತ್ತು ಖಿನ್ನತೆ ಹೆಚ್ಚಾಗುವುದಕ್ಕೂ ನೇರ ಸಂಬಂಧವಿದೆ ಎಂಬುದು ತಿಳಿದುಬಂದಿದೆ.
ಮಕ್ಕಳು ಮತ್ತು ಹದಿಹರೆಯದವರ ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಫೀಚರ್ಗಳನ್ನು ನಿಯಂತ್ರಿಸಲು ಸೋಷಿಯಲ್ ಮೀಡಿಯಾ ಕಂಪನಿಗಳನ್ನು ಕಾನೂನಾತ್ಮಕವಾಗಿ ಜವಾಬ್ದಾರರನ್ನಾಗಿ ಮಾಡಬೇಕೇ?
"ನಾನು ವಕೀಲನಲ್ಲ, ಹಾಗಾಗಿ ಒಬ್ಬ ವಿಜ್ಞಾನಿಯಾಗಿ ಉತ್ತರಿಸುತ್ತೇನೆ. ಪ್ಲಾಟ್ಫಾರ್ಮ್ಗಳ ವಿನ್ಯಾಸದ ನಿರ್ಧಾರಗಳು ಕಂಪನಿಯ ಕೈಯಲ್ಲಿರುತ್ತವೆ. ನಿರ್ದಿಷ್ಟ ಫೀಚರ್ ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತದೆ ಎಂದು ತಿಳಿದಿದ್ದರೂ ಕಂಪನಿಯು ಅದನ್ನು ಜಾರಿಗೆ ತಂದರೆ, ಅದು ಆ ಕಂಪನಿಯು ತಿಳಿದೇ ಮಾಡಿದ ಆಯ್ಕೆಯ ಪರಿಣಾಮವಾಗಿರುತ್ತದೆ" ಎನ್ನುತ್ತಾರೆ ಡಾ. ಥ್ರುಲ್.
70 ವರದಿಗಳ 2025ರ ಅಧ್ಯಯನವೊಂದರ ಪ್ರಕಾರ, ಸರ್ಕಾರಗಳು ಸೋಷಿಯಲ್ ಮೀಡಿಯಾ ಕಂಪನಿಗಳ ಮೇಲೆ ಹೆಚ್ಚಿನ ನಿಯಂತ್ರಣ ಮತ್ತು ಹೊಣೆಗಾರಿಕೆಯನ್ನು ತರಬೇಕು ಹಾಗೂ ಯುವ ಬಳಕೆದಾರರನ್ನು ರಕ್ಷಿಸಲು ವಿಫಲವಾದಾಗ ದಂಡ ವಿಧಿಸಬೇಕು ಎಂಬ ಅಭಿಪ್ರಾಯಕ್ಕೆ ಬಲವಾದ ಬೆಂಬಲ ವ್ಯಕ್ತವಾಗಿದೆ. ಸೋಷಿಯಲ್ ಮೀಡಿಯಾದ ಪ್ರಭಾವವು ಪ್ಲಾಟ್ಫಾರ್ಮ್ಗಳ ವಿನ್ಯಾಸದ ಮೇಲೆಯೂ ಆಧರಿಸಿರುವುದರಿಂದ, ಇದರ ಸಂಪೂರ್ಣ ಹೊಣೆಯನ್ನು ಹದಿಹರೆಯದವರು ಮತ್ತು ಅವರ ಪೋಷಕರ ಮೇಲೆಯೇ ಹಾಕುವುದು ಸರಿಯಲ್ಲ ಎಂಬುದು ಸಂಶೋಧನೆಯಿಂದ ತಿಳಿದುಬಂದಿದೆ. ಹೀಗಾಗಿ, ತಂತ್ರಜ್ಞಾನ ಕಂಪನಿಗಳು ತಮ್ಮ ಪ್ಲಾಟ್ಫಾರ್ಮ್ಗಳನ್ನು ವಿನ್ಯಾಸಗೊಳಿಸುವಾಗ ಮಕ್ಕಳ ಆರೋಗ್ಯ ಮತ್ತು ಸುರಕ್ಷತೆಗೆ ಆದ್ಯತೆ ನೀಡಬೇಕು ಹಾಗೂ ಸರ್ಕಾರಗಳು ಕಟ್ಟುನಿಟ್ಟಿನ ಸುರಕ್ಷತಾ ಮಾನದಂಡಗಳನ್ನು ಜಾರಿಗೆ ತರಬೇಕು ಎಂದು ಅಮೆರಿಕದ ಸರ್ಜನ್ ಜನರಲ್ ಶಿಫಾರಸು ಮಾಡಿದ್ದಾರೆ.
ಯುವಜನರಲ್ಲಿ ಕಂಡುಬರುವ ಮಾನಸಿಕ ಆರೋಗ್ಯ ಕಾಳಜಿಗಳು ಸೋಷಿಯಲ್ ಮೀಡಿಯಾದ ಅತಿಯಾದ ಅಥವಾ ಅಸ್ತವ್ಯಸ್ತ ಬಳಕೆಗೆ ಸಂಬಂಧಿಸಿವೆಯೇ?
"ನಮ್ಮ ಸಂಶೋಧನೆಯಲ್ಲಿ ಕಂಡುಬಂದಂತೆ, ಸೋಷಿಯಲ್ ಮೀಡಿಯಾ ಬಳಕೆಯ ಅತಿಯಾದ ಚಟವು ಯುವಜನರಲ್ಲಿ ಒಂಟಿತನ, ಖಿನ್ನತೆ ಮತ್ತು ಆತಂಕಕ್ಕೆ ಕಾರಣವಾಗುತ್ತಿದೆ. ಸೋಷಿಯಲ್ ಮೀಡಿಯಾ ಬಳಕೆಯನ್ನು ಕಡಿಮೆ ಮಾಡುವುದು ಅಥವಾ ಕೆಲವು ದಿನ ವಿರಾಮ ತೆಗೆದುಕೊಳ್ಳುವುದು ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ ಎಂಬುದನ್ನು ನಾವು ಕಂಡುಕೊಂಡಿದ್ದೇವೆ" ಎಂದು ಡಾ. ಥ್ರುಲ್ ಹೇಳಿದ್ದಾರೆ.
ಸೌದಿ ಅರೇಬಿಯಾದ 2,990 ಪ್ರೌಢಶಾಲಾ ವಿದ್ಯಾರ್ಥಿಗಳನ್ನು ಒಳಗೊಂಡಂತೆ ಅಧ್ಯಯನ ನಡೆಸಿದ್ದ ಡಾ. ಥ್ರುಲ್, ಅತಿಯಾಗಿ ಸೋಷಿಯಲ್ ಮೀಡಿಯಾ ಬಳಸುವ ವಿದ್ಯಾರ್ಥಿಗಳು ಇತರರಿಗಿಂತ ಹೆಚ್ಚಿನ ಒಂಟಿತನ ಮತ್ತು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ ಎಂಬುದನ್ನು ಕಂಡುಕೊಂಡಿದ್ದಾರೆ. ಸ್ವಯಂ ನಿಯಂತ್ರಣದ ಕೊರತೆ, ದುಷ್ಪರಿಣಾಮಗಳಿದ್ದರೂ ಬಳಕೆ ಮುಂದುವರಿಸುವುದು, ದೈನಂದಿನ ಜೀವನಕ್ಕೆ ಅಡಚಣೆ ಮತ್ತು ನಿದ್ರೆಯ ಮೇಲಿನ ನಕಾರಾತ್ಮಕ ಪರಿಣಾಮಗಳನ್ನು ವಿದ್ಯಾರ್ಥಿಗಳು ಉಲ್ಲೇಖಿಸಿದ್ದಾರೆ. "ದಾಖಲಾದ ವಿದ್ಯಾರ್ಥಿಗಳಲ್ಲಿ ಸುಮಾರು ಮೂರನೇ ಒಂದು ಭಾಗದಷ್ಟು ವಿದ್ಯಾರ್ಥಿಗಳಲ್ಲಿ ಒಂಟಿತನ ಹಾಗೂ ಶೇಕಡಾ 40ಕ್ಕೂ ಹೆಚ್ಚು ಜನರಲ್ಲಿ ಖಿನ್ನತೆ ಅಥವಾ ಆತಂಕದ ಲಕ್ಷಣಗಳು ಕಂಡುಬಂದಿವೆ. ಅನೇಕ ದೇಶಗಳಂತೆ ಸೌದಿ ಅರೇಬಿಯಾವೂ ವೇಗದ ಡಿಜಿಟಲೀಕರಣಕ್ಕೆ ಒಳಪಡುತ್ತಿದೆ. ಹೀಗಾಗಿ, ತಂತ್ರಜ್ಞಾನದ ಅತಿಯಾದ ಬಳಕೆಯನ್ನು ತಡೆಯಲು ಅಗತ್ಯವಿರುವ ವೈದ್ಯಕೀಯ ತರಬೇತಿ, ಶಾಲಾ ಮಟ್ಟದ ಕಾರ್ಯಕ್ರಮಗಳು ಮತ್ತು ಸಾರ್ವಜನಿಕ ಜಾಗೃತಿ ಮೂಲಸೌಕರ್ಯಗಳು ಈ ವೇಗಕ್ಕೆ ತಕ್ಕಂತೆ ಬೆಳೆಯಬೇಕಿದೆ" ಎಂದು ಅವರು ಹೇಳಿದ್ದಾರೆ.
ಮಕ್ಕಳು ಮತ್ತು ಹದಿಹರೆಯದವರನ್ನು ಒಳಗೊಂಡ 34 ಅಧ್ಯಯನಗಳ 2025ರ ವ್ಯವಸ್ಥಿತ ವಿಶ್ಲೇಷಣೆಯ ಪ್ರಕಾರ, ಪಾಠದ ನಡುವೆ ಸೋಷಿಯಲ್ ಮೀಡಿಯಾ ಮತ್ತು ಸ್ಮಾರ್ಟ್ಫೋನ್ ಬಳಸುವುದು ಶೈಕ್ಷಣಿಕ ಹಿನ್ನಡೆಗೆ ಕಾರಣವಾಗುತ್ತಿದೆ. ಮೇಲಿಂದ ಮೇಲೆ ಫೋನ್ ಪರಿಶೀಲಿಸುವುದು ಅಥವಾ ಸ್ಕ್ರಾಲ್ ಮಾಡುವುದು ಶಾಲೆಯ ಕೆಲಸಗಳಿಗೆ ಮತ್ತು ಏಕಾಗ್ರತೆಗೆ ಭಂಗ ತರುತ್ತದೆ ಎಂಬುದು ಇದರಿಂದ ತಿಳಿದುಬಂದಿದೆ.
"ನನ್ನ ಪ್ರಕಾರ, ಸುಖ ನಿದ್ರೆಗೆ ನೆರವಾಗುವ ರಾತ್ರಿ ವೇಳೆಯ ಬಳಕೆಯ ನಿರ್ಬಂಧ, ಲೈಕ್ ಸಂಖ್ಯೆಗಳನ್ನು ಮರೆಮಾಡುವುದು ಮತ್ತು ಕಾಸ್ಮೆಟಿಕ್ ಫಿಲ್ಟರ್ಗಳನ್ನು ಸ್ವಯಂಚಾಲಿತವಾಗಿ ನಿಷ್ಕ್ರಿಯಗೊಳಿಸುವ ನಿರ್ಧಾರಗಳು ಪರಿಣಾಮಕಾರಿಯಾಗಬಲ್ಲವು. ಏಕೆಂದರೆ ಇವು ಪರಸ್ಪರ ಹೋಲಿಕೆ ಮಾಡಿಕೊಳ್ಳುವ ಪ್ರವೃತ್ತಿಗೆ ತಡೆ ನೀಡುತ್ತವೆ" ಎಂದು ಡಾ. ಥ್ರುಲ್ ಹೇಳಿದ್ದಾರೆ.
ಮೆಟಾ ಮೇಲಿನ ಈ ತೀರ್ಪು ಮಕ್ಕಳು ಮತ್ತು ಹದಿಹರೆಯದವರನ್ನು ರಕ್ಷಿಸುವ ದಿಸೆಯಲ್ಲಿ ಸೂಕ್ತ ಹೆಜ್ಜೆಯೇ?
ಇದು "ಸರಿಯಾದ ದಿಸೆಯಲ್ಲಿ ಇಟ್ಟ ದಿಟ್ಟ ಹೆಜ್ಜೆ" ಎಂದು ಪ್ರತಿಪಾದಿಸುವ ಡಾ. ಥ್ರುಲ್, "ಮೆಟಾ ಒಂದು ಕಂಪನಿ ಮಾತ್ರ. ಟಿಕ್ಟಾಕ್, ಸ್ನಾಪ್ಚಾಟ್, ಯೂಟ್ಯೂಬ್ ಮತ್ತು ಇತರ ಪ್ಲಾಟ್ಫಾರ್ಮ್ಗಳು ಸಹ ಇಂತಹುದೇ ನಿಯಮಗಳನ್ನು ಒಪ್ಪಿಕೊಳ್ಳುತ್ತವೆಯೇ ಎಂಬುದನ್ನು ಕಾದುನೋಡಬೇಕಿದೆ. ಸ್ವತಂತ್ರ ವಿಜ್ಞಾನಿಗಳು ಈ ನಿಯಮಗಳು ಯುವಜನರ ಮಾನಸಿಕ ಆರೋಗ್ಯವನ್ನು ಸುಧಾರಿಸಲು ನಿಜಕ್ಕೂ ನೆರವಾಗುತ್ತಿವೆಯೇ ಎಂಬುದನ್ನು ಮೌಲ್ಯಮಾಪನ ಮಾಡಬೇಕಿದೆ" ಎಂದು ಹೇಳಿದ್ದಾರೆ.
ಬಳಕೆದಾರರು ನಿರಂತರವಾಗಿ ಸ್ಕ್ರಾಲ್ ಮಾಡುವಂತೆ ಪ್ರೇರೇಪಿಸುವ ‘ಶಿಫಾರಸು ಆಲ್ಗರಿದಮ್ಗಳನ್ನು’ ಈ ಬದಲಾವಣೆಗಳು ಸಂಪೂರ್ಣವಾಗಿ ತಡೆಯುವುದಿಲ್ಲ. ಹೀಗಾಗಿ, ಈ ಕ್ರಮಗಳು ಸಾಲದು ಎಂದು ಕೆಲವು ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ.
ಸೌಜನ್ಯ: indianexpress.com






