ಕಡಿಮೆ ನಿದ್ರೆ ಕ್ಯಾನ್ಸರ್ ಗೆ ಕಾರಣವಾಗುವುದೇ?; ವೈದ್ಯರು ನೀಡುವ ಸಲಹೆಗಳೇನು?

ಸಾಂದರ್ಭಿಕ ಚಿತ್ರ | Photo Credit : magnific
ಕಳಪೆ ನಿದ್ರೆಯು ಕ್ಯಾನ್ಸರ್ ಬೆಳವಣಿಗೆಗೆ ಪೂರಕ ಸ್ಥಿತಿ ಸೃಷ್ಟಿಸಬಹುದು. ನೇರ ಕಾರಣ-ಪರಿಣಾಮ ಸಂಬಂಧವಿಲ್ಲದಿದ್ದರೂ ದೀರ್ಘಕಾಲದ ನಿದ್ರೆಯ ಅಭಾವವು ಕ್ಯಾನ್ಸರ್ ಅಪಾಯಕ್ಕೆ ಸಂಬಂಧಿಸಿದ ಜೈವಿಕ ಪ್ರಕ್ರಿಯೆಗಳ ಮೇಲೆ ಪರಿಣಾಮ ಬೀರಬಹುದು.
ಕೆಲಸ ಮತ್ತು ವೆಬ್ಸೀರೀಸ್ಗಳನ್ನು ನೋಡಲೆಂದು ನಿದ್ರೆಯ ಅವಧಿಯನ್ನು ಕಸಿದುಕೊಳ್ಳುವುದು ಇತ್ತೀಚೆಗಿನ ಜೀವನದಲ್ಲಿ ಸಾಮಾನ್ಯವೆನಿಸಿದೆ. ವಿವಿಧ ಕಾರಣಗಳಿಗಾಗಿ ಕ್ರಮೇಣ ತಡರಾತ್ರಿ ಮಲಗುವ ಅಭ್ಯಾಸವಾದಂತೆ ನಿದ್ರೆಯ ಜೊತೆಗೆ ರಾಜಿ ಮಾಡಿಕೊಳ್ಳಲಾಗುತ್ತದೆ.
ಫರೀದಾಬಾದ್ನ ಸೆಕ್ಟರ್-8ರ ಸರ್ವೋದಯ ಆಸ್ಪತ್ರೆಯ ವೈದ್ಯಕೀಯ ಆಂಕೋಲಜಿ, ಹೆಮಟಾಲಜಿ ಮತ್ತು ಬಿಎಂಟಿಯ ಸಹಾಯಕ ನಿರ್ದೇಶಕ ಮತ್ತು ಮುಖ್ಯಸ್ಥರಾಗಿರುವ ಟಾ ಆಶಿಷ್ ಬಿ ಅಗರ್ವಾಲ್ ಅವರು ದೀರ್ಘಕಾಲದ ನಿದ್ರೆಯ ಅಡಚಣೆಯಾದಲ್ಲಿ ದೇಹಕ್ಕೆ ಸಮಸ್ಯೆಯಾಗಬಹುದು. ಆದರೆ ಕಳಪೆ ನಿದ್ರೆ ಮತ್ತು ಕ್ಯಾನ್ಸರ್ ನಡುವೆ ನೇರ ಕಾರಣ-ಪರಿಣಾಮ ಸಂಬಂಧದ ಪುರಾವೆಗಳಿಲ್ಲ ಎಂದು ಹೇಳಿದ್ದಾರೆ.
“ಪ್ರಸ್ತುತ ಮಾನವ ಪುರಾವೆಗಳು ಸರಳವಾದ ಕಾರಣ-ಪರಿಣಾಮದ ಸಂಬಂಧ ಸ್ಥಾಪಿಸಲು ಸಾಕಷ್ಟು ಬಲವಾಗಿಲ್ಲ. ನಿರಂತರ ನಿದ್ರೆ ಮತ್ತು ಸಿರ್ಕಾಡಿಯನ್ ಅಡಚಣೆಯು ಕ್ಯಾನ್ಸರ್ ಬೆಳವಣಿಗೆಯಲ್ಲಿ ಒಳಗೊಂಡಿರುವ ಜೈವಿಕ ವ್ಯವಸ್ಥೆಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಸಂಶೋಧನೆ ತೋರಿಸುತ್ತದೆ” ಎಂದು ಅವರು ಹೇಳಿದರು.
ಇದರರ್ಥ ಕಳಪೆ ನಿದ್ರೆಯು ಕ್ಯಾನ್ಸರ್ ಬೆಳವಣಿಗೆಗೆ ಪೂರಕ ಸ್ಥಿತಿ ಸೃಷ್ಟಿಸಬಹುದು. ನೇರ ಕಾರಣ-ಪರಿಣಾಮ ಸಂಬಂಧವಿಲ್ಲದಿದ್ದರೂ ದೀರ್ಘಕಾಲದ ನಿದ್ರೆಯ ಅಭಾವವು ಕ್ಯಾನ್ಸರ್ ಅಪಾಯಕ್ಕೆ ಸಂಬಂಧಿಸಿದ ಜೈವಿಕ ಪ್ರಕ್ರಿಯೆಗಳ ಮೇಲೆ ಪರಿಣಾಮ ಬೀರಬಹುದು.
ನಿದ್ರೆಗೆ ಜೀವನದಲ್ಲಿ ಆದ್ಯತೆ ನೀಡಬೇಕೇ ವಿನಾ ವ್ಯರ್ಥ ಸಮಯವೆಂದು ಪರಿಗಣಿಸಬಾರದು. ಆದರೆ ಗಡುವನ್ನು ಪೂರೈಸಲು ನೀವು ಯಾವಾಗಲೂ ಇಡೀ ರಾತ್ರಿ ನಿದ್ರೆ ಮಾಡುವ ಬಗ್ಗೆ ಚಿಂತಿಸಬೇಕಾಗಿಲ್ಲ. ಒಂದು ಅಥವಾ ಎರಡು ರಾತ್ರಿಗಳ ಕಳಪೆ ನಿದ್ರೆಯು ಕ್ಯಾನ್ಸರ್ ಬರುವ ಸಾಧ್ಯತೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ವೈದ್ಯರು ಭರವಸೆ ನೀಡಿದ್ದಾರೆ.
ಹಾಗಿದ್ದರೆ ಕಳಪೆ ನಿದ್ರೆ ಸಮಸ್ಯೆಯಾಗುವುದು ಯಾವಾಗ? ನಿರಂತರವಾಗಿ ಕಳಪೆ ನಿದ್ರೆ ಸಮಸ್ಯೆಯಾಗುತ್ತದೆ. ಅನಿಯಮಿತ ನಿದ್ರೆಯ ವೇಳಾಪಟ್ಟಿ ಮತ್ತು ರಾತ್ರಿಯಲ್ಲಿ ಕೆಲಸ ಮಾಡಿ ಹಗಲು ನಿದ್ರೆ ಮಾಡುವುದರಿಂದ ದೇಹದ ನೈಸರ್ಗಿಕ ಆಂತರಿಕ ಗಡಿಯಾರಕ್ಕೆ ಸಮಸ್ಯೆ ತರಬಹುದು.
ಸಿರ್ಕಾಡಿಯನ್ ರಿದಮ್ ಇತರ ಶಾರೀರಿಕ ವ್ಯವಸ್ಥೆಗಳ ಜೊತೆಗೆ ನಿಕಟವಾಗಿ ಸಂಪರ್ಕ ಹೊಂದಿದೆ ಎಂಬುದನ್ನು ಡಾ ಅಗರ್ವಾಲ್ ಅಭಿಪ್ರಾಯಪಡುತ್ತಾರೆ. “ನಿಜವಾದ ಸಮಸ್ಯೆಯೆಂದರೆ ದೀರ್ಘಕಾಲದ ನಿದ್ರಾಹೀನತೆ ಮತ್ತು ಅಸ್ಥಿರವಾದ ನಿದ್ರೆ ಮತ್ತು ರಾತ್ರಿ ಸಮಯದ ಕೆಲಸದ ಮಾಡೆಲ್ಗಳು! ನಮ್ಮ ದೇಹವನ್ನು ಸಿರ್ಕಾಡಿಯನ್ ರಿದಮ್ಗೆ ಅನುಗುಣವಾಗಿ ಪ್ರೋಗ್ರಾಂ ಮಾಡಲಾಗಿದೆ. ಇದು ಜೈವಿಕ ಗಡಿಯಾರ. ವಿವಿಧ ರೀತಿಯ ನಿದ್ರಾಜನಕ ಪ್ರಕ್ರಿಯೆಗಳನ್ನು ನಿಯಂತ್ರಿಸುತ್ತದೆ. ದೇಹ ಮತ್ತು ಚೇತರಿಕೆಯ ಕಾರ್ಯವಿಧಾನಗಳು. ಹೀಗಾಗಿ ದೀರ್ಘಕಾಲ ಉತ್ತಮ ಗುಣಮಟ್ಟದ ನಿದ್ರೆ ಇಲ್ಲದೆ ಹೋದಾಗ ಹಾರ್ಮೋನ್ ಸಮತೋಲನ ತಪ್ಪುತ್ತದೆ. ಚಯಾಪಚಯ, ಪ್ರತಿರಕ್ಷಣಾ ಗುಣಗಳು ಮತ್ತು ಚೇತರಿಸಿಕೊಳ್ಳುವ ದೇಹದ ಸಾಮರ್ಥ್ಯಕ್ಕೆ ಅಡ್ಡಿಯಾಗುತ್ತದೆ. ಹೀಗಾಗಿ ರೋಗದ ಬೆಳವಣಿಗೆಗೆ ಅನುಕೂಲಕರ ಸ್ಥಿತಿ ನಿರ್ಮಾಣವಾಗಬಹುದು” ಎಂದು ಅವರು ಹೇಳಿದ್ದಾರೆ.
ಹೆಚ್ಚುವರಿಯಾಗಿ ಆಕ್ಸಿಡೇಟಿವ್ ಒತ್ತಡ, ಡಿಎನ್ಎ ಹಾನಿ ಮತ್ತು ಜೀವಕೋಶದ ಪ್ರಸರಣದಲ್ಲಿ ಒಳಗೊಂಡಿರುವ ಮಾರ್ಗಗಳೊಂದಿಗೆ ಮೆಲಟೊನಿನ್ ಸಂವಹನ ನಡೆಸುತ್ತದೆ ರಾತ್ರಿ ಬೆಳಕಿಗೆ ಪದೇಪದೆ ಒಡ್ಡಿಕೊಳ್ಳುವುದರಿಂದ ಸಾಮಾನ್ಯ ಮೆಲಟೊನಿನ್ ಸಿಗ್ನಲಿಂಗ್ ಅನ್ನು ನಿಗ್ರಹಿಸಬಹುದು. ಮಾತ್ರವಲ್ಲದೆ, ದೀರ್ಘಕಾಲದ ನಿದ್ರೆಯ ನಷ್ಟವು ವ್ಯವಸ್ಥಿತ ಉರಿಯೂತ ಉಂಟು ಮಾಡಬಹುದು” ಎಂದು ಅಗರ್ವಾಲ್ ಎಚ್ಚರಿಸಿದ್ದಾರೆ.
ವೈದ್ಯರ ಪ್ರಕಾರ ಉತ್ತಮ ನಿದ್ರೆಯಿಂದ ಕ್ಯಾನ್ಸರ್ ರೋಗ ತಡೆಗಟ್ಟುವ ಆರೋಗ್ಯ ಕ್ರಮಗಳಿಗೆ ಖಚಿತವಾಗಿ ಪೂರಕವಾಗಿದೆ. ಹಾಗೆಂದು ಕ್ಯಾನ್ಸರ್ ತಡೆಗಟ್ಟುವ ಖಚಿತವಾದ ಮಾರ್ಗವೆಂದು ಪರಿಗಣಿಸಬಾರದು. ಉತ್ತಮ ನಿದ್ರೆ ಆರೋಗ್ಯಕರ ಜೀವನಶೈಲಿಯ ಒಂದು ಭಾಗವಾಗಿರುತ್ತದೆ.
ನಿದ್ರೆಯನ್ನು ರೋಗ ತಡೆಗಟ್ಟುವ ಆರೋಗ್ಯ ಕ್ರಮಗಳೆಂದು ಪರಿಗಣಿಸಿದರೂ, ಕ್ಯಾನ್ಸರ್ ಚಿಕಿತ್ಸೆಯ ವಿಧಾನವೆಂದು ತಿಳಿಯಬಾರದು. ವಯಸ್ಕರು ನಿತ್ಯ ಕನಿಷ್ಠ ಏಳು ಗಂಟೆಗಳ ಉತ್ತಮ ಗುಣಮಟ್ಟದ ನಿದ್ರೆ ಪಡೆಯಲು ಶಿಫಾರಸು ಮಾಡಲಾಗುತ್ತದೆ.
ವೈದ್ಯರ ಪ್ರಕಾರ, ಕ್ಯಾನ್ಸರ್ ತಡೆಗಟ್ಟುವಿಕೆ ನಮಗೆ ಈಗಾಗಲೇ ಚೆನ್ನಾಗಿ ತಿಳಿದಿರುವ ತತ್ವಗಳನ್ನು ಅವಲಂಬಿಸಿದೆ. ಇವುಗಳಲ್ಲಿ ಧೂಮಪಾನದಿಂದ ದೂರವಿರುವುದು, ಆರೋಗ್ಯಕರ ತೂಕ ಕಾಪಾಡುವುದು, ಮದ್ಯಪಾನ ಕಡಿಮೆ ಮಾಡುವುದು, ವ್ಯಾಯಾಮ ಮಾಡುವುದು, ನಿಗದಿತ ವೇಳಾಪಟ್ಟಿಯಂತೆ ತಪಾಸಣೆ ಮಾಡಿಸಿಕೊಳ್ಳುವುದು ಮತ್ತು ಸೋಂಕುಗಳ ವಿರುದ್ಧ ಲಸಿಕೆ ಪಡೆಯುವುದು ಸೇರಿವೆ.
ಸೂಚನೆ: ಈ ಲೇಖನವನ್ನು ಮಾಧ್ಯಮಗಳ ಮೂಲಗಳಿಂದ ಮಾಹಿತಿ ನೀಡುವ ಉದ್ದೇಶಕ್ಕಾಗಿ ಬರೆಯಲಾಗಿದೆ. ವೈದ್ಯರ ಸಲಹೆಗೆ ಪರ್ಯಾಯವಲ್ಲ. ಯಾವುದೇ ಆರೋಗ್ಯ ಸಲಹೆಗಳಿಗೆ ವಿಶ್ವಾಸಾರ್ಹ ವೈದ್ಯರನ್ನು ಸಂಪರ್ಕಿಸಿ.
ಕೃಪೆ: hindustantimes.com






