ʼಕಾರು, ಸರ್ಕಾರಿ ಕೆಲಸ ಇದ್ದರೂ ಉಚಿತ ರೇಷನ್ʼ: ಕೇಂದ್ರ ಸರ್ಕಾರ ನಡೆಸಿದ ಅಧ್ಯಯನದಲ್ಲಿ ಬಯಲಾಗಿದ್ದು ಏನು?

ಸಾಂದರ್ಭಿಕ ಚಿತ್ರ (AI Imagined)
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (NFSA) 2013ರ ಅಡಿಯಲ್ಲಿ ಜಾರಿಯಲ್ಲಿರುವ 'ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ'ಯ (PMGKAY) ಫಲಾನುಭವಿಗಳಲ್ಲಿ ಶೇ. 13.2ರಷ್ಟು ಅನರ್ಹರು ಸೇರ್ಪಡೆಯಾಗಿದ್ದಾರೆ ಎಂಬುದು ಕೇಂದ್ರ ಸರ್ಕಾರ ನಡೆಸಿದ ಮೌಲ್ಯಮಾಪನ ಅಧ್ಯಯನದಿಂದ ತಿಳಿದುಬಂದಿದೆ ಎಂದು indianexpress.com ವರದಿ ಮಾಡಿದೆ.
2025-26ನೇ ಹಣಕಾಸು ವರ್ಷದಲ್ಲಿ ನಡೆಸಲಾದ ಈ ಅಧ್ಯಯನದ ಪ್ರಕಾರ, ರಾಜ್ಯಗಳು ನಿಗದಿಪಡಿಸಿದ ಅರ್ಹತಾ ಮಾನದಂಡಗಳನ್ನು ಪೂರೈಸದ ಅನೇಕ ಕುಟುಂಬಗಳು ಈಗಲೂ ಉಚಿತ ಆಹಾರ ಧಾನ್ಯಗಳನ್ನು ಪಡೆಯುತ್ತಿವೆ. ಮೂರು ಅಥವಾ ಅದಕ್ಕಿಂತ ಹೆಚ್ಚು ಕೋಣೆಗಳಿರುವ ಮನೆ, ಕಾರು ಮತ್ತು ಏರ್ ಕಂಡೀಷನರ್ (AC) ಹೊಂದಿರುವವರು, ಜೊತೆಗೆ ಕುಟುಂಬದ ಸದಸ್ಯರು ಸರ್ಕಾರಿ ಉದ್ಯೋಗದಲ್ಲಿರುವವರೂ ಸಹ ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ.
ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ (DFPD) ನಡೆಸಿದ ಈ ಸಮೀಕ್ಷೆಯು ದೇಶದ ಎಲ್ಲಾ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಒಟ್ಟು 51,303 ಫಲಾನುಭವಿ ಕುಟುಂಬಗಳನ್ನು ಒಳಗೊಂಡಿತ್ತು.
ಉಚಿತ ಆಹಾರ ಧಾನ್ಯ ಪಡೆಯಲು ಅನರ್ಹರಾಗಿದ್ದರೂ ಫಲಾನುಭವಿಗಳ ಪಟ್ಟಿಯಲ್ಲಿ ಸೇರಿಕೊಂಡವರ ಪ್ರಮಾಣವು ರಾಷ್ಟ್ರೀಯ ಸರಾಸರಿಗಿಂತ ಹಲವು ರಾಜ್ಯಗಳಲ್ಲಿ ತೀರಾ ಹೆಚ್ಚಾಗಿದೆ. ಈ ಪಟ್ಟಿಯಲ್ಲಿ ಪಶ್ಚಿಮ ಬಂಗಾಳ ಮೊದಲ ಸ್ಥಾನದಲ್ಲಿದ್ದು (ಶೇ. 39.5), ನಂತರದ ಸ್ಥಾನಗಳಲ್ಲಿ ತ್ರಿಪುರಾ (ಶೇ. 39.2) ಮತ್ತು ತಮಿಳುನಾಡು (ಶೇ. 38.7) ಇವೆ.
ಅನರ್ಹರು ಹೆಚ್ಚಿನ ಸಂಖ್ಯೆಯಲ್ಲಿರುವ ರಾಜ್ಯಗಳಲ್ಲಿ, ಮೂರು ಅಥವಾ ಅದಕ್ಕಿಂತ ಹೆಚ್ಚು ಕೋಣೆಗಳ ಪಕ್ಕಾ ಮನೆ, ಏರ್ ಕಂಡೀಷನರ್, ಮೋಟಾರು ವಾಹನಗಳು ಮತ್ತು ಸರ್ಕಾರಿ ಉದ್ಯೋಗ ಹೊಂದಿರುವ ಕುಟುಂಬಗಳೇ ಇದಕ್ಕೆ ಪ್ರಮುಖ ಕಾರಣವಾಗಿವೆ ಎಂದು ಅಧ್ಯಯನ ಹೇಳಿದೆ.
ಒಟ್ಟು 51,303 ಫಲಾನುಭವಿಗಳ ರಾಜ್ಯವಾರು ಮಾದರಿ ಸಂಖ್ಯೆಯನ್ನು ಅಧ್ಯಯನದಲ್ಲಿ ನೀಡಿಲ್ಲವಾದರೂ, ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಿಂದ ಕನಿಷ್ಠ 550 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಲಾಗಿದೆ. "ನಿಗದಿತ ಅರ್ಹತಾ ಮಾನದಂಡಗಳನ್ನು ಪೂರೈಸದ ಕುಟುಂಬಗಳು ಸಬ್ಸಿಡಿ ದರದ ಆಹಾರ ಧಾನ್ಯಗಳನ್ನು ಪಡೆಯುವುದನ್ನು ಮುಂದುವರಿಸಿರುವುದನ್ನೇ" ಈ ಅಧ್ಯಯನದಲ್ಲಿ 'ಅನರ್ಹರ ಸೇರ್ಪಡೆ' ಎಂದು ವ್ಯಾಖ್ಯಾನಿಸಲಾಗಿದೆ.
2025-26ನೇ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರದ ಒಟ್ಟು ಸಬ್ಸಿಡಿ ವೆಚ್ಚ 4.69 ಲಕ್ಷ ಕೋಟಿ ರೂ. ಆಗಿದ್ದು, ಅದರಲ್ಲಿ ಆಹಾರ ಸಬ್ಸಿಡಿಯೊಂದೇ ಬರೋಬ್ಬರಿ 2.28 ಲಕ್ಷ ಕೋಟಿ ರೂ. (ಸುಮಾರು ಅರ್ಧದಷ್ಟು) ಇದೆ. ಈ ಹಿನ್ನೆಲೆಯಲ್ಲಿ ಈ ಅಧ್ಯಯನದ ವರದಿಯು ಅತ್ಯಂತ ಮಹತ್ವ ಪಡೆದುಕೊಂಡಿದೆ.
ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು (DFPD) ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಆಹಾರ ಭದ್ರತಾ ಕಾಯ್ದೆಯನ್ನು ಜಾರಿಗೊಳಿಸುತ್ತದೆ. ಈ ಅಧ್ಯಯನದ ವರದಿಯ ಕುರಿತು ಇಮೇಲ್ ಮೂಲಕ ಕಳುಹಿಸಿದ ಪ್ರಶ್ನೆಗಳಿಗೆ ಇಲಾಖೆಯು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು 'ದಿ ಇಂಡಿಯನ್ ಎಕ್ಸ್ಪ್ರೆಸ್' ವರದಿ ಉಲ್ಲೇಖಿಸಿದೆ.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ (NFSA) ಅಡಿಯಲ್ಲಿ, ಸರ್ಕಾರವು ಗ್ರಾಮೀಣ ಪ್ರದೇಶದ ಶೇ. 75ರಷ್ಟು ಮತ್ತು ನಗರ ಪ್ರದೇಶದ ಶೇ. 50ರಷ್ಟು ಕುಟುಂಬಗಳಿಗೆ ಆಹಾರ ಭದ್ರತೆಯನ್ನು ಒದಗಿಸುತ್ತದೆ. ಸಂಖ್ಯೆಗಳನ್ನು ನೋಡುವುದಾದರೆ, ಈ ಕಾಯ್ದೆಯಡಿ ಗರಿಷ್ಠ 81.35 ಕೋಟಿ ಜನರನ್ನು ಒಳಗೊಳ್ಳಲು ಅವಕಾಶವಿದ್ದು, 2026 ಅಕ್ಟೋಬರ್ ವೇಳೆಗೆ 78.63 ಕೋಟಿ ಜನರು ಈ ಯೋಜನೆಯ ವ್ಯಾಪ್ತಿಯಲ್ಲಿದ್ದಾರೆ.
ಎನ್ಎಫ್ಎಸ್ಎ ಅಡಿಯಲ್ಲಿ, ನಿಗದಿತ ಅರ್ಹತಾ ಮಾನದಂಡಗಳನ್ನು ಪೂರೈಸದ ಕುಟುಂಬಗಳು ಸಬ್ಸಿಡಿ ದರದ ಆಹಾರ ಧಾನ್ಯಗಳನ್ನು ಪಡೆಯುವುದನ್ನು ಮುಂದುವರಿಸಿದಾಗ ಅದನ್ನು 'ಅನರ್ಹರ ಸೇರ್ಪಡೆ' ಎಂದು ಪರಿಗಣಿಸಲಾಗುತ್ತದೆ. ಫಲಾನುಭವಿಗಳನ್ನು ಗುರುತಿಸುವ ವ್ಯವಸ್ಥೆಯ ದಕ್ಷತೆ ಮತ್ತು ಯೋಜನೆಯ ಲಾಭವು ನಿಜವಾದ ದುರ್ಬಲ ಕುಟುಂಬಗಳಿಗೆ ಎಷ್ಟರಮಟ್ಟಿಗೆ ತಲುಪುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಈ ಲೋಪಗಳನ್ನು ಪರಿಶೀಲಿಸುವುದು ಮುಖ್ಯವಾಗಿದೆ ಎಂದು ಇತ್ತೀಚೆಗೆ ಆಹಾರ ಇಲಾಖೆಗೆ ಸಲ್ಲಿಸಲಾದ ವರದಿಯಲ್ಲಿ ತಿಳಿಸಲಾಗಿದೆ.
ಈ ಮೌಲ್ಯಮಾಪನದ ಪ್ರಕಾರ, ಎನ್ಎಫ್ಎಸ್ಎ ಅಡಿಯಲ್ಲಿ ಒಟ್ಟಾರೆ ಅನರ್ಹರ ಸೇರ್ಪಡೆ ಪ್ರಮಾಣ ಶೇ. 13.2ರಷ್ಟಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳ ನಡುವೆ ಇದರಲ್ಲಿ ವ್ಯತ್ಯಾಸವಿದ್ದು, ಗ್ರಾಮೀಣ ಭಾಗದಲ್ಲಿ ಶೇ. 12.5ರಷ್ಟು ಹಾಗೂ ನಗರ ಪ್ರದೇಶಗಳಲ್ಲಿ ಶೇ. 15.6ರಷ್ಟು ಅನರ್ಹರಿದ್ದಾರೆ. ಫಲಾನುಭವಿಗಳ ವರ್ಗಗಳನ್ನು ಗಮನಿಸಿದರೆ, ಆದ್ಯತಾ ಕುಟುಂಬಗಳಿಗೆ (PHH - ಶೇ. 13.4) ಹೋಲಿಸಿದರೆ ಅಂತ್ಯೋದಯ ಅನ್ನ ಯೋಜನೆ (AAY) ಕುಟುಂಬಗಳಲ್ಲಿ ಈ ಪ್ರಮಾಣ ಸ್ವಲ್ಪ ಕಡಿಮೆ (ಶೇ. 12.2) ಇದೆ. ಅದರಲ್ಲೂ ನಗರ ಪ್ರದೇಶದ ಆದ್ಯತಾ ಕುಟುಂಬಗಳಲ್ಲಿ ಇದು ತುಸು ಹೆಚ್ಚಾಗಿದೆ (ಶೇ. 15.7) ಎಂದು ವರದಿ ಹೇಳಿದೆ.
ಅಂತ್ಯೋದಯ ಅನ್ನ ಯೋಜನೆ (AAY) ಎಂದರೆ ಕಡುಬಡ ಕುಟುಂಬಗಳಿಗೆ ಮೀಸಲಾದ ಯೋಜನೆಯಾಗಿದ್ದು, ಇವರಿಗೆ ಪ್ರತಿ ಕುಟುಂಬಕ್ಕೆ ತಿಂಗಳಿಗೆ 35 ಕೆ.ಜಿ ಆಹಾರ ಧಾನ್ಯ ಸಿಗುತ್ತದೆ. ಇನ್ನು ಆದ್ಯತಾ ಕುಟುಂಬಗಳಿಗೆ (PHH) ಪ್ರತಿ ವ್ಯಕ್ತಿಗೆ ತಿಂಗಳಿಗೆ 5 ಕೆ.ಜಿ ಆಹಾರ ಧಾನ್ಯ ನೀಡಲಾಗುತ್ತದೆ.
ಒಟ್ಟಾರೆಯಾಗಿ, ಈ ವ್ಯತ್ಯಾಸಗಳು ಸಣ್ಣ ಮಟ್ಟದಲ್ಲಿದ್ದರೂ, ಎನ್ಎಫ್ಎಸ್ಎ ಅಡಿಯಲ್ಲಿ ಅರ್ಹರನ್ನು ಗುರುತಿಸುವ ದಕ್ಷತೆಯನ್ನು ಹೆಚ್ಚಿಸಲು ಫಲಾನುಭವಿಗಳ ಗುರುತಿಸುವಿಕೆ ವ್ಯವಸ್ಥೆಯನ್ನು ಬಲಪಡಿಸುವುದು, ಕಾಲಕಾಲಕ್ಕೆ ದತ್ತಾಂಶಗಳನ್ನು ಪರಿಶೀಲಿಸುವುದು ಮತ್ತು ನಿರಂತರವಾಗಿ ಪಟ್ಟಿಯನ್ನು ನವೀಕರಿಸುವುದು ಅಗತ್ಯವಾಗಿದೆ ಎಂಬುದನ್ನು ಈ ಅಧ್ಯಯನ ಎತ್ತಿ ತೋರಿಸುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಪೂರ್ವ ಮತ್ತು ಈಶಾನ್ಯ ರಾಜ್ಯಗಳಲ್ಲಿ ಅನರ್ಹರ ಸೇರ್ಪಡೆ ಪ್ರಮಾಣ ಅತಿ ಹೆಚ್ಚಾಗಿದೆ ಎಂಬುದನ್ನು ವರದಿ ತೋರಿಸಿದೆ. ಪಶ್ಚಿಮ ಬಂಗಾಳ (ಶೇ. 39.5), ತಮಿಳುನಾಡು (ಶೇ. 38.7), ತ್ರಿಪುರಾ (ಶೇ. 39.2) ಮತ್ತು ಮೇಘಾಲಯ (ಶೇ. 28.5) ಸೇರಿದಂತೆ ಕೆಲವು ರಾಜ್ಯಗಳಲ್ಲಿ ಅನರ್ಹರ ಪ್ರಮಾಣ ತೀರಾ ಹೆಚ್ಚಾಗಿದೆ. ಅರ್ಹತಾ ಪರಿಶೀಲನೆ, ಆಧಾರ್ ಜೋಡಣೆ ಮತ್ತು ಫಲಾನುಭವಿಗಳ ಪಟ್ಟಿಯ ನಿಯಮಿತ ಪರಿಶೀಲನೆಯನ್ನು ಇನ್ನಷ್ಟು ಬಲಪಡಿಸುವ ಅಗತ್ಯವಿದೆ ಎಂಬುದನ್ನು ಇದು ಸೂಚಿಸುತ್ತದೆ ಎಂದು ವರದಿ ಹೇಳಿದೆ.
ಬಿಹಾರ (ಶೇ. 25.5), ಒಡಿಶಾ (ಶೇ. 22.9), ಸಿಕ್ಕಿಂ (ಶೇ. 21.9), ಪಂಜಾಬ್ (ಶೇ. 20.6) ಮತ್ತು ಮಹಾರಾಷ್ಟ್ರ (ಶೇ. 20.3) ರಾಜ್ಯಗಳಲ್ಲಿ ಅನರ್ಹರ ಪ್ರಮಾಣ ಮಧ್ಯಮದಿಂದ ಹೆಚ್ಚಿನ ಮಟ್ಟದಲ್ಲಿದ್ದು, ಇದು ವ್ಯವಸ್ಥೆಯಲ್ಲಿನ ಭಾಗಶಃ ದೋಷಗಳನ್ನು ತೋರಿಸುತ್ತದೆ. ಮತ್ತೊಂದೆಡೆ, ಮಧ್ಯಪ್ರದೇಶ (ಶೇ. 0.5), ಜಮ್ಮು ಮತ್ತು ಕಾಶ್ಮೀರ (ಶೇ. 0.3), ಹರಿಯಾಣ (ಶೇ. 1.0), ದೆಹಲಿ (ಶೇ. 1.0) ಮತ್ತು ರಾಜಸ್ಥಾನ (ಶೇ. 1.8) ರಾಜ್ಯಗಳಲ್ಲಿ ಅನರ್ಹರ ಸೇರ್ಪಡೆ ತೀರಾ ಕಡಿಮೆಯಿದೆ. ಇದು ಆ ರಾಜ್ಯಗಳಲ್ಲಿನ ಉತ್ತಮ ಡಿಜಿಟಲೀಕರಣ ಮತ್ತು ಪರಿಣಾಮಕಾರಿ ಫಲಾನುಭವಿಗಳ ಪರಿಶೀಲನಾ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ ಎಂದು ವರದಿ ವಿವರಿಸಿದೆ.
ಪಶ್ಚಿಮ ಬಂಗಾಳ, ತ್ರಿಪುರಾ ಮತ್ತು ಮೇಘಾಲಯದಂತಹ ಪೂರ್ವ ಮತ್ತು ಈಶಾನ್ಯ ರಾಜ್ಯಗಳಲ್ಲಿ ಅನರ್ಹರ ಸೇರ್ಪಡೆ ಪ್ರಮಾಣ ಹೆಚ್ಚಾಗಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ. ಮತ್ತೊಂದೆಡೆ, ಹರಿಯಾಣ, ರಾಜಸ್ಥಾನ ಮತ್ತು ಗುಜರಾತ್ನಂತಹ ಉತ್ತರ ಮತ್ತು ಪಶ್ಚಿಮದ ರಾಜ್ಯಗಳು ತುಲನಾತ್ಮಕವಾಗಿ ಉತ್ತಮ ಸಾಧನೆ ಮಾಡಿವೆ. ಇದು ಆಡಳಿತಾತ್ಮಕ ಸಾಮರ್ಥ್ಯ, ದತ್ತಾಂಶ ವ್ಯವಸ್ಥೆ ಮತ್ತು ಯೋಜನೆಯ ಕಟ್ಟುನಿಟ್ಟಿನ ಜಾರಿಯಲ್ಲಿರುವ ವ್ಯತ್ಯಾಸಗಳನ್ನು ಸೂಚಿಸುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಆಹಾರ ಭದ್ರತಾ ಕಾಯ್ದೆಯ ಸೆಕ್ಷನ್ 9ರ ಪ್ರಕಾರ, ಒಟ್ಟು ಫಲಾನುಭವಿಗಳ ಸಂಖ್ಯೆಯನ್ನು ಕೇಂದ್ರ ಸರ್ಕಾರ ನಿರ್ಧರಿಸುತ್ತದೆ. ಆದರೆ, ಸೆಕ್ಷನ್ 10ರ ಅಡಿಯಲ್ಲಿ, ವಾಸ್ತವಿಕವಾಗಿ ಅರ್ಹ ಕುಟುಂಬಗಳನ್ನು ಗುರುತಿಸುವ ಮತ್ತು ಅದಕ್ಕೆ ಮಾರ್ಗಸೂಚಿಗಳನ್ನು ಸಿದ್ಧಪಡಿಸುವ ಸಂಪೂರ್ಣ ಜವಾಬ್ದಾರಿ ರಾಜ್ಯ ಸರ್ಕಾರಗಳ ಮೇಲಿದೆ.
ಫಲಾನುಭವಿಗಳನ್ನು ಗುರುತಿಸುವ ಮಾನದಂಡಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತವೆ. ಈ ಅಧ್ಯಯನದಲ್ಲಿ ಆಯಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ನಿಗದಿಪಡಿಸಿದ ಅರ್ಹತಾ ಮಾನದಂಡಗಳ ಆಧಾರದ ಮೇಲೆ ಅನರ್ಹರ ಸೇರ್ಪಡೆಯನ್ನು ಅಂದಾಜಿಸಲಾಗಿದೆ. ಎನ್ಎಫ್ಎಸ್ಎ (NFSA) ಒಟ್ಟಾರೆ ವ್ಯಾಪ್ತಿಯನ್ನು ಕೇಂದ್ರ ನಿರ್ಧರಿಸಿದರೂ, ವಿವಿಧ ನಿಯಮಗಳನ್ನು ಬಳಸಿಕೊಂಡು ಅರ್ಹ ಕುಟುಂಬಗಳನ್ನು ಗುರುತಿಸುವುದು ರಾಜ್ಯಗಳ ಹೊಣೆಯಾಗಿದೆ. ಈ ಮಾನದಂಡಗಳು ಸಾಮಾನ್ಯವಾಗಿ ಆದಾಯದ ಮಿತಿ, ಆಸ್ತಿ ಮಾಲೀಕತ್ವ, ಭೂಹಿಡುವಳಿ, ಉದ್ಯೋಗ, ತೆರಿಗೆ ಪಾವತಿ ಸ್ಥಿತಿ ಮತ್ತು ಇತರ ಹೊರಗಿಡುವ ನಿಯಮಗಳನ್ನು ಒಳಗೊಂಡಿರುತ್ತವೆ ಎಂದು ವರದಿ ವಿವರಿಸಿದೆ.
ವಿವಿಧ ರಾಜ್ಯಗಳಲ್ಲಿ ಅರ್ಹತಾ ಮಾನದಂಡಗಳ "ರೂಪುರೇಷೆ, ವ್ಯಾಪ್ತಿ ಮತ್ತು ಕಾಲಕಾಲಕ್ಕೆ ಅವುಗಳನ್ನು ನವೀಕರಿಸುವಲ್ಲಿನ ವ್ಯತ್ಯಾಸಗಳೇ" ಅನರ್ಹರು ಪಟ್ಟಿಯಲ್ಲಿ ಸೇರಿಕೊಳ್ಳಲು ಕಾರಣ ಎಂದು ವರದಿ ಹೇಳಿದೆ.
ಅದರಂತೆ, ಫಲಾನುಭವಿಗಳ ಪಟ್ಟಿಯಲ್ಲಿ ಹೆಸರಿದ್ದರೂ ಸಹ, ಆಯಾ ರಾಜ್ಯ ಸರ್ಕಾರ ನಿಗದಿಪಡಿಸಿದ ಅರ್ಹತಾ ಮಾನದಂಡಗಳನ್ನು ಪೂರೈಸದ ಕುಟುಂಬವನ್ನು 'ಅನರ್ಹರ ಸೇರ್ಪಡೆ' ಎಂದು ವರ್ಗೀಕರಿಸಲಾಗಿದೆ. ರಾಜ್ಯಗಳ ಅರ್ಹತಾ ಮಾನದಂಡಗಳ ವಿನ್ಯಾಸ ಮತ್ತು ನವೀಕರಣದಲ್ಲಿನ ವ್ಯತ್ಯಾಸಗಳು ಎನ್ಎಫ್ಎಸ್ಎ ಅಡಿಯಲ್ಲಿ ಫಲಾನುಭವಿಗಳ ಗುರುತಿಸುವಿಕೆಯ ಮೇಲೆ ಪ್ರಭಾವ ಬೀರುತ್ತವೆ. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಈ ಲೋಪಗಳು ಯೋಜನೆಯ ವ್ಯಾಪ್ತಿಯ ಕುರಿತು ಹೆಚ್ಚಿನ ಒಳನೋಟಗಳನ್ನು ನೀಡುತ್ತವೆ" ಎಂದು ಅದು ತಿಳಿಸಿದೆ.
2013ರ ಜುಲೈನಲ್ಲಿ ಅಂದಿನ ಯುಪಿಎ ಸರ್ಕಾರ ಜಾರಿಗೆ ತಂದ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯು, ಉದ್ದೇಶಿತ ಸಾರ್ವಜನಿಕ ವಿತರಣಾ ವ್ಯವಸ್ಥೆಯ (TPDS) ಅಡಿಯಲ್ಲಿ ದೇಶದ ಶೇ. 67ರಷ್ಟು ಕುಟುಂಬಗಳಿಗೆ ಸಬ್ಸಿಡಿ ದರದಲ್ಲಿ (ಕೆ.ಜಿ ಅಕ್ಕಿಗೆ 3 ರೂ., ಗೋಧಿಗೆ 2 ರೂ.) ಆಹಾರ ಧಾನ್ಯಗಳನ್ನು ಪಡೆಯುವ ಹಕ್ಕನ್ನು ನೀಡಿದೆ. ನಂತರ ಬಂದ ಎನ್ಡಿಎ (NDA) ಸರ್ಕಾರವು 'ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ' (PMGKAY) ಅಡಿಯಲ್ಲಿ ಈ ಸಬ್ಸಿಡಿ ದರವನ್ನೂ ಮನ್ನಾ ಮಾಡಿ, ಸಂಪೂರ್ಣ ಉಚಿತವಾಗಿ ಆಹಾರ ಧಾನ್ಯಗಳನ್ನು ವಿತರಿಸುತ್ತಿದೆ. ಕಳೆದ ವರ್ಷ ಕೇಂದ್ರ ಸರ್ಕಾರವು, ಉಚಿತ ರೇಷನ್ ಪಡೆಯುತ್ತಿರುವ ಆದಾಯ ತೆರಿಗೆ ಪಾವತಿದಾರರು, ಕಾರು ಮಾಲೀಕರು ಮತ್ತು ಕಂಪನಿಗಳ ನಿರ್ದೇಶಕರಾಗಿರುವ ರೇಷನ್ ಕಾರ್ಡ್ದಾರರನ್ನು ಗುರುತಿಸುವ ಅಭಿಯಾನವನ್ನು ಆರಂಭಿಸಿತ್ತು.
ಕೃಪೆ: indianexpress.com






