ATMಗಳಲ್ಲಿ ನಗದು ಕೊರತೆ ಸಾಧ್ಯತೆ | ಇದಕ್ಕೆ ಕಾರಣವೇನು? ಯಾರಿಗೆ ಹೆಚ್ಚು ತೊಂದರೆಯಾಗಲಿದೆ?

ಸಾಂದರ್ಭಿಕ ಚಿತ್ರ | Photo Credit : magnific
ಭಾರತೀಯ ರಿಸರ್ವ್ ಬ್ಯಾಂಕ್ (RBI) ಅಂಕಿಅಂಶಗಳ ಪ್ರಕಾರ, ಮೇ 22ರ ವೇಳೆಗೆ ದೇಶದಲ್ಲಿ ಚಲಾವಣೆಯಲ್ಲಿರುವ ಕರೆನ್ಸಿ ಪ್ರಮಾಣ ದಾಖಲೆಯ 42.54 ಲಕ್ಷ ಕೋಟಿ ರೂಪಾಯಿಗೆ ತಲುಪಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಶೇ.12ರಷ್ಟು ಹೆಚ್ಚಳವಾಗಿದೆ. ಹೀಗಿದ್ದರೂ, ಮುಂಬರುವ ದಿನಗಳಲ್ಲಿ ಕೆಲವು ಯಂತ್ರಗಳಲ್ಲಿ ನಗದು ಕೊರತೆಯಾಗಬಹುದು ಎಂದು ಎಟಿಎಂ ನಿರ್ವಾಹಕರು ಎಚ್ಚರಿಕೆ ನೀಡಿದ್ದಾರೆ.
ಎಟಿಎಂ ನಿರ್ವಾಹಕರು, ನಗದು ಪೂರೈಕೆ ಸಂಸ್ಥೆಗಳು ಹಾಗೂ ಸೇವಾ ಪೂರೈಕೆದಾರರನ್ನು ಪ್ರತಿನಿಧಿಸುವ 'ಕಾನ್ಫೆಡರೇಶನ್ ಆಫ್ ಎಟಿಎಂ ಇಂಡಸ್ಟ್ರಿ' (CATMi), ಎಟಿಎಂಗಳಿಗೆ ತುಂಬಲು ಲಭ್ಯವಿರುವ ನಗದು ಪ್ರಮಾಣದಲ್ಲಿ ತೀವ್ರ ಕುಸಿತವಾಗಿರುವುದನ್ನು ಬಹಿರಂಗಪಡಿಸಿದೆ.
ಭಾರತೀಯ ಬ್ಯಾಂಕುಗಳ ಸಂಘಕ್ಕೆ (IBA) ಕಾನ್ಫೆಡರೇಶನ್ ಆಫ್ ಎಟಿಎಂ ಇಂಡಸ್ಟ್ರಿ ಸಲ್ಲಿಸಿರುವ ವರದಿ ಪ್ರಕಾರ, ಎಟಿಎಂ ನಿರ್ವಾಹಕರಿಗೆ ಮಾರ್ಚ್ ತಿಂಗಳಲ್ಲಿ ತಮ್ಮ ಒಟ್ಟು ಬೇಡಿಕೆಯ ಶೇ.64ರಷ್ಟು ನಗದು ಪೂರೈಕೆಯಾಗಿದ್ದರೆ, ಏಪ್ರಿಲ್ನಲ್ಲಿ ಕೇವಲ ಶೇ.57ರಷ್ಟು ನಗದು ಮಾತ್ರ ಲಭ್ಯವಾಗಿದೆ. ಹಾಗಾದರೆ, ಆರ್ಥಿಕ ವ್ಯವಸ್ಥೆಯಲ್ಲಿ ಹಿಂದೆಂದಿಗಿಂತಲೂ ಅತಿ ಹೆಚ್ಚು ನಗದು ಚಲಾವಣೆಯಲ್ಲಿದ್ದರೂ, ಎಟಿಎಂಗಳು ಹಣ ವಿತರಿಸಲು ಏಕೆ ಪರದಾಡುತ್ತಿವೆ ಎನ್ನುವ ಪ್ರಶ್ನೆ ಮೂಡುವುದು ಸಹಜ.
► ಎಟಿಎಂ ನಿರ್ವಾಹಕರು ನಗದು ಕೊರತೆಯ ಎಚ್ಚರಿಕೆ ನೀಡುತ್ತಿರುವುದು ಏಕೆ?
CATMi ವರದಿ ಪ್ರಕಾರ, ಎಟಿಎಂಗಳನ್ನು ಭರ್ತಿ ಮಾಡಲು ನಿರ್ವಾಹಕರಿಗೆ ಮಾರ್ಚ್ ಮತ್ತು ಏಪ್ರಿಲ್ ಎರಡೂ ತಿಂಗಳುಗಳಲ್ಲಿ ತಲಾ 94,000 ಕೋಟಿ ರೂಪಾಯಿಯ ಅಗತ್ಯವಿತ್ತು. ಆದರೆ, ಅವರಿಗೆ ಮಾರ್ಚ್ ತಿಂಗಳಲ್ಲಿ 61,000 ಕೋಟಿ ರೂಪಾಯಿ ಹಾಗೂ ಎಪ್ರಿಲ್ನಲ್ಲಿ ಕೇವಲ 54,000 ಕೋಟಿ ರೂಪಾಯಿ ನಗದು ಮಾತ್ರ ಲಭ್ಯವಾಗಿದೆ. ಅದೇ ಸಮಯದಲ್ಲಿ, ಎಟಿಎಂ ಬಳಕೆಯು ಗಣನೀಯವಾಗಿ ಇಳಿಕೆಯಾಗುತ್ತಿದೆ.
ಆರ್ಬಿಐ ದತ್ತಾಂಶದ ಪ್ರಕಾರ, ಎಟಿಎಂ ವಹಿವಾಟುಗಳ ಸಂಖ್ಯೆ ಕಳೆದ ವರ್ಷದ ಮೇ ತಿಂಗಳಲ್ಲಿ 49.84 ಕೋಟಿಯಷ್ಟಿತ್ತು. ಈ ವರ್ಷದ ಮೇ ತಿಂಗಳಲ್ಲಿ ಈ ಸಂಖ್ಯೆ 44.65 ಕೋಟಿಗೆ ಇಳಿಕೆಯಾಗಿದೆ. ಅಂದರೆ, ಎಟಿಎಂ ಬಳಕೆಯಲ್ಲಿ ಶೇ.10ಕ್ಕೂ ಅಧಿಕ ಕುಸಿತ ಕಂಡಿದೆ. ಎಟಿಎಂ ಮೂಲಕ ಹಿಂಪಡೆಯಲಾದ ನಗದು ಮೌಲ್ಯ ಕೂಡ ಸುಮಾರು 2.64 ಲಕ್ಷ ಕೋಟಿ ರೂಪಾಯಿಯಿಂದ 2.5 ಲಕ್ಷ ಕೋಟಿ ರೂಪಾಯಿಗೆ ಕುಸಿದಿದೆ. ಇದರರ್ಥ, ಎಟಿಎಂ ನಿರ್ವಾಹಕರು ಕಡಿಮೆ ವಹಿವಾಟುಗಳನ್ನು ನಿಭಾಯಿಸುತ್ತಿದ್ದರೂ, ನಿರ್ವಹಣಾ ವೆಚ್ಚ ಮಾತ್ರ ಹೆಚ್ಚಾಗುತ್ತಲೇ ಇದೆ.
ಯುಪಿ ವ್ಯವಸ್ಥೆಯ ತ್ವರಿತ ಅಳವಡಿಕೆಯು ಈ ಬೆಳವಣಿಗೆಯನ್ನು ಇನ್ನಷ್ಟು ವೇಗಗೊಳಿಸಿದೆ. ಡಿಜಿಟಲ್ ಪಾವತಿಗಳು ಎಟಿಎಂ ಬಳಕೆಯನ್ನು ಕಡಿಮೆ ಮಾಡಿದ್ದರೂ, ನಗದನ್ನೇ ಅವಲಂಬಿಸಿರುವ ಗ್ರಾಹಕರಿಗೆ ಸೇವೆ ಒದಗಿಸಲು ನಿರ್ವಾಹಕರು ಅದೇ ಹಳೆಯ ಮೂಲಸೌಕರ್ಯಗಳನ್ನು ಕಾಯ್ದುಕೊಳ್ಳುವುದು ಅನಿವಾರ್ಯವಾಗಿದೆ.
► ಎಟಿಎಂ ನಿರ್ವಾಹಕರು ಒತ್ತಡಕ್ಕೆ ಒಳಗಾಗುತ್ತಿರುವುದು ಏಕೆ?
ನಗದು ಲಭ್ಯತೆಯ ಈ ಸಮಸ್ಯೆಯು, ಎಟಿಎಂ ಉದ್ಯಮವು ಈಗಾಗಲೇ ನಿರ್ವಹಣಾ ವೆಚ್ಚದ ಏರಿಕೆ ಮತ್ತು ವಹಿವಾಟುಗಳ ಕುಸಿತದ ಸವಾಲನ್ನು ಎದುರಿಸುತ್ತಿರುವ ಸಮಯದಲ್ಲೇ ಎದುರಾಗಿದೆ.
ಈ ಉದ್ಯಮದ ಪ್ರಮುಖ ಆತಂಕಕ್ಕೆ ಕಾರಣ ಎಟಿಎಂ ಇಂಟರ್ಚೇಂಜ್ ಶುಲ್ಕ (ATM interchange fee). ಒಂದು ಬ್ಯಾಂಕಿನ ಗ್ರಾಹಕರು ಮತ್ತೊಂದು ಬ್ಯಾಂಕಿನ ಎಟಿಎಂ ಬಳಸಿದಾಗ, ಗ್ರಾಹಕರ ಬ್ಯಾಂಕ್ ಆ ಮತ್ತೊಂದು ಬ್ಯಾಂಕಿಗೆ ಪಾವತಿಸುವ ಶುಲ್ಕವೇ ಇಂಟರ್ಚೇಂಜ್ ಶುಲ್ಕ. ಪ್ರಸ್ತುತ ಈ ಶುಲ್ಕ 19 ರೂಪಾಯಿ ಆಗಿದೆ. 'ಬಿಸಿನೆಸ್ ಸ್ಟ್ಯಾಂಡರ್ಡ್' ವರದಿ ಪ್ರಕಾರ, ನಿರಂತರವಾಗಿ ಹೆಚ್ಚುತ್ತಿರುವ ನಿರ್ವಹಣಾ ವೆಚ್ಚವನ್ನು ಸರಿದೂಗಿಸಲು ಪ್ರಸ್ತುತ ಇರುವ ಈ ಶುಲ್ಕ ತೀರಾ ಕಡಿಮೆ ಎಂದು ಎಟಿಎಂ ಉದ್ಯಮ ಭಾವಿಸಿದೆ.
ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಬಳಿಕ ಹೆಚ್ಚಾದ ಇಂಧನ ಬೆಲೆಗಳು ಮತ್ತು ದೇಶಾದ್ಯಂತ 'ವೇತನ ಸಂಹಿತೆ' ಜಾರಿಯಾದ ನಂತರ ಹಲವು ರಾಜ್ಯಗಳಲ್ಲಿ ಜಾರಿಗೆ ಬಂದ ವೇತನ ಪರಿಷ್ಕರಣೆಯು ಈ ಆರ್ಥಿಕ ಒತ್ತಡವನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ವರದಿ ತಿಳಿಸಿದೆ.
ಉದ್ಯಮದ ಮೂಲಗಳನ್ನು ಉಲ್ಲೇಖಿಸಿ ʼಬಿಸಿನೆಸ್ ಸ್ಟ್ಯಾಂಡರ್ಡ್ʼ ನೀಡಿರುವ ಮಾಹಿತಿ ಪ್ರಕಾರ, ಎಟಿಎಂ ಒಪ್ಪಂದಗಳನ್ನು ವಾರ್ಷಿಕವಾಗಿ ವಹಿವಾಟಿನಲ್ಲಿ ಶೇ.2.5 ರಿಂದ ಶೇ.3 ರಷ್ಟು ಸಾಧಾರಣ ಕುಸಿತವನ್ನು ಅಂದಾಜಿಸಿ ರೂಪಿಸಲಾಗಿತ್ತು. ಗ್ರಾಹಕ ಬೆಲೆ ಸೂಚ್ಯಂಕ ಆಧಾರಿತ ವೆಚ್ಚ ಹೆಚ್ಚಳವು ಈ ನಷ್ಟವನ್ನು ಸರಿದೂಗಿಸಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಕಳೆದ ವರ್ಷದಲ್ಲಿ ವಹಿವಾಟುಗಳ ಪ್ರಮಾಣವು ಬರೋಬ್ಬರಿ ಶೇ.10.40 ರಷ್ಟು ಕುಸಿದಿದೆ ಎಂದು ವರದಿ ಹೇಳಿದೆ.
►ಶುಲ್ಕ ಹೆಚ್ಚಳ ಮತ್ತು ಡಿಜಿಟಲ್ ಕಡೆಗೆ ಮುಖ ಮಾಡಿದ ಗ್ರಾಹಕರು
ಶುಲ್ಕಗಳಲ್ಲಿನ ಬದಲಾವಣೆಗಳು ಮತ್ತು ಡಿಜಿಟಲ್ ಪಾವತಿಗಳ ಕಡೆಗೆ ಜನರು ವಾಲುತ್ತಿರುವುದು ಎಟಿಎಂ ಬಳಕೆಯ ಮೇಲೆಯೂ ಪರಿಣಾಮ ಬೀರಿದೆ.
ಉಚಿತ ಮಿತಿಗಿಂತ ಹೆಚ್ಚಿನ ಎಟಿಎಂ ವಹಿವಾಟುಗಳಿಗಾಗಿ ಗ್ರಾಹಕರು ಪಾವತಿಸಬೇಕಾದ ಶುಲ್ಕವನ್ನು ಕಳೆದ ವರ್ಷದ ಮೇ ತಿಂಗಳಲ್ಲಿ 21 ರೂಪಾಯಿಯಿಂದ 23 ರೂಪಾಯಿಗೆ ಹೆಚ್ಚಿಸಲಾಗಿತ್ತು. ಈ ಹೆಚ್ಚಳವು ಗ್ರಾಹಕರಿಗೆ ಪ್ರತಿ ಹೆಚ್ಚುವರಿ ನಗದು ಹಿಂಪಡೆಯುವಿಕೆಯನ್ನು ದುಬಾರಿಯಾಗಿಸಿತಲ್ಲದೆ, ಹೆಚ್ಚಿನ ಬಳಕೆದಾರರು ಡಿಜಿಟಲ್ ಪಾವತಿ ವಿಧಾನಗಳನ್ನು ಬಳಸುವಂತೆ ಪ್ರೇರೇಪಿಸಿತು ಎಂದು ಬಿಸಿನೆಸ್ ಸ್ಟ್ಯಾಂಡರ್ಡ್ ವರದಿ ಮಾಡಿದೆ.
ಇದೇ ಅವಧಿಯಲ್ಲಿ ಇಂಟರ್ಚೇಂಜ್ ಶುಲ್ಕವನ್ನು ಕೂಡ 17 ರೂಪಾಯಿಯಿಂದ 19 ರೂಪಾಯಿಗೆ ಹೆಚ್ಚಿಸಲಾಗಿತ್ತು. ಈ ಹೆಚ್ಚಳದ ಉದ್ದೇಶ ಎಟಿಎಂ ನಿರ್ವಾಹಕರ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವುದಾಗಿದ್ದರೂ, ಎಟಿಎಂಗಳಿಗೆ ನಗದು ತುಂಬಿಸುವ ವೆಚ್ಚ, ಇಂಧನ ಮತ್ತು ನೌಕರರ ವೇತನ ಹೆಚ್ಚಳದ ಕಾರಣದಿಂದಾಗಿ ಈ ಆದಾಯವು ಸಾಲದಾಗಿದೆ ಎಂದು ವರದಿ ತಿಳಿಸಿದೆ.
►ಯಾರಿಗೆ ಹೆಚ್ಚು ತೊಂದರೆಯಾಗಲಿದೆ?
ತಮ್ಮ ದೈನಂದಿನ ಅಗತ್ಯಗಳಿಗಾಗಿ ನಗದನ್ನೇ ನೆಚ್ಚಿಕೊಂಡಿರುವ ಜನರ ಮೇಲೆ ಇದರ ಪರಿಣಾಮ ಹೆಚ್ಚು ಬೀರಲಿದೆ. ದೊಡ್ಡ ನಗರಗಳಲ್ಲಿ ವಾಸಿಸುವ ಬಹುಪಾಲು ಜನರಿಗೆ, ಎಟಿಎಂನಲ್ಲಿ ನಗದು ಖಾಲಿಯಾದರೆ ಅದು ಕೇವಲ ಒಂದು ಸಣ್ಣ ಅನಾನುಕೂಲತೆ ಎನಿಸಬಹುದು. ಅವರು ಹತ್ತಿರದ ಮತ್ತೊಂದು ಎಟಿಎಂ ಬಳಸಬಹುದು ಅಥವಾ ಅದರ ಬದಲಿಗೆ ಯುಪಿಐ ಹಾಗೂ ಇತರ ಡಿಜಿಟಲ್ ಪಾವತಿ ವಿಧಾನಗಳನ್ನು ಬಳಸಿಕೊಳ್ಳಬಹುದು.
ಆದರೆ, ನಗದು ಹಿಂಪಡೆಯುವುದನ್ನೇ ಹೆಚ್ಚಾಗಿ ಅವಲಂಬಿಸಿರುವ ಹಿರಿಯ ನಾಗರಿಕರು, ಪಿಂಚಣಿದಾರರು, ಕಲ್ಯಾಣ ಯೋಜನೆಗಳ ಫಲಾನುಭವಿಗಳು, ರೈತರು ಮತ್ತು ಸಣ್ಣ ವ್ಯಾಪಾರಿಗಳಿಗೆ ಈ ಪರಿಸ್ಥಿತಿ ಸಂಕಷ್ಟ ತಂದೊಡ್ಡಬಹುದು.
ಗ್ರಾಮೀಣ ಮತ್ತು ಅರೆ-ನಗರ ಪ್ರದೇಶಗಳಿಗೆ ಇದರ ಬಿಸಿ ಅತಿ ಹೆಚ್ಚು ತಟ್ಟುವ ಸಾಧ್ಯತೆಯಿದೆ. ಈ ಪ್ರದೇಶಗಳಲ್ಲಿನ ಅನೇಕ ಜನರು ತಮ್ಮ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮೆಯಾಗುವ ಪಿಂಚಣಿ, ಸರ್ಕಾರಿ ಸೌಲಭ್ಯಗಳು ಮತ್ತು ಇತರ ಹಣವನ್ನು ಹಿಂಪಡೆಯಲು ಎಟಿಎಂಗಳನ್ನು ಬಳಸುತ್ತಾರೆ. ಒಂದು ವೇಳೆ ಎಟಿಎಂನಲ್ಲಿ ನಗದು ಖಾಲಿಯಾದರೆ, ಅವರಿಗೆ ಪರ್ಯಾಯ ಎಟಿಎಂ ಹುಡುಕಿಕೊಂಡು ಹೋಗುವುದು ಬಹಳ ದೂರದ ಹಾಗೂ ಕಷ್ಟದ ಕೆಲಸವಾಗಬಹುದು.
ಡಿಜಿಟಲ್ ಪಾವತಿಗಳು ಈಗ ಸಾಮಾನ್ಯವಾಗುತ್ತಿದ್ದರೂ, ಕಳಪೆ ಇಂಟರ್ನೆಟ್ ಸಂಪರ್ಕ ಅಥವಾ ಕೆಲವು ಪ್ರದೇಶಗಳಲ್ಲಿ ಡಿಜಿಟಲ್ ವ್ಯವಹಾರಗಳಿಗೆ ಇರುವ ಮಿತಿಯಿಂದಾಗಿ, ಎಲ್ಲ ಕಡೆಗಳಲ್ಲೂ ಯುಪಿಐ ವ್ಯವಸ್ಥೆಯು ಪರ್ಯಾಯ ಆಯ್ಕೆಯಾಗಲು ಸಾಧ್ಯವಿಲ್ಲ.
►ಎಟಿಎಂಗಳಲ್ಲಿ ನಗದು ಖಾಲಿಯಾದರೆ ಬ್ಯಾಂಕುಗಳಿಗೆ ದಂಡ ಬೀಳಲಿದೆಯೇ?
ಇದಕ್ಕೆ ಉತ್ತರ ಹೌದು. ನಿರ್ದಿಷ್ಟ ಅವಧಿಗಿಂತ ಹೆಚ್ಚು ಕಾಲ ಎಟಿಎಂಗಳಲ್ಲಿ ನಗದು ಇಲ್ಲದಿದ್ದರೆ, ಆರ್ಬಿಐ ದಂಡ ವಿಧಿಸುವ ಅವಕಾಶವಿದೆ. ಬ್ಯಾಂಕುಗಳು ಸಕಾಲದಲ್ಲಿ ಎಟಿಎಂಗಳಿಗೆ ನಗದು ಭರ್ತಿ ಮಾಡಬೇಕು ಮತ್ತು ಗ್ರಾಹಕರಿಗೆ ಸುಲಭವಾಗಿ ಹಣ ಸಿಗುವಂತೆ ನೋಡಿಕೊಳ್ಳಬೇಕು ಎಂಬುದು ನಿಯಮ.
ಯಾವುದೋ ಒಂದು ಎಟಿಎಂನಲ್ಲಿ ಅಪರೂಪಕ್ಕೆ ನಗದು ಖಾಲಿಯಾದರೆ ಅದಕ್ಕೆ ದಂಡ ವಿಧಿಸುವ ಸಾಧ್ಯತೆಯಿಲ್ಲ. ಹೆಚ್ಚಿನ ಸಂಖ್ಯೆಯ ಗ್ರಾಹಕರಿಗೆ ತೊಂದರೆಯಾಗುವಂತಹ, ಪದೇಪದೇ ಅಥವಾ ದೀರ್ಘಕಾಲ ಕಾಡುವ ನಗದು ಕೊರತೆಯ ಮೇಲೆ ಮಾತ್ರ ಆರ್ಬಿಐ ಗಮನ ಹರಿಸುತ್ತದೆ. ಈ ರೀತಿಯ ನಗದು ಕೊರತೆಗಳು ಆಗಾಗ ಅಥವಾ ವ್ಯಾಪಕವಾಗಿ ಕಂಡುಬಂದರೆ, ಬ್ಯಾಂಕುಗಳು ಕಠಿಣ ಶಿಸ್ತು ಕ್ರಮಗಳನ್ನು ಎದುರಿಸಬೇಕಾಗಬಹುದು.
►ಗ್ರಾಹಕರು ಆತಂಕಪಡುವ ಅಗತ್ಯವಿಲ್ಲ
ಎಟಿಎಂ ನಿರ್ವಾಹಕರು ನೀಡಿದ ಈ ಎಚ್ಚರಿಕೆಯ ಅರ್ಥ ನಿಮ್ಮ ಬ್ಯಾಂಕ್ ಠೇವಣಿಗಳು ಅಪಾಯದಲ್ಲಿದೆ ಎಂದಲ್ಲ. ಯಾವುದೇ ನಿರ್ದಿಷ್ಟ ದಿನದಂದು ಎಟಿಎಂನಲ್ಲಿ ನಗದು ಲಭ್ಯವಿರಲಿ ಅಥವಾ ಇಲ್ಲದಿರಲಿ, ನಿಮ್ಮ ಹಣವು ನಿಮ್ಮ ಬ್ಯಾಂಕ್ ಖಾತೆಯಲ್ಲಿ ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತದೆ.
ಹಾಗೆಯೇ, ದೇಶದ ಆರ್ಥಿಕತೆಯಲ್ಲಿ ನಗದಿನ ಕೊರತೆಯಿದೆ ಎಂದು ಕೂಡ ಇದು ಸೂಚಿಸುವುದಿಲ್ಲ. ವಾಸ್ತವವಾಗಿ, ಚಲಾವಣೆಯಲ್ಲಿರುವ ನಗದು ಪ್ರಮಾಣವು ನಿರಂತರವಾಗಿ ಹೆಚ್ಚಾಗುತ್ತಿದೆ ಎಂದು ಆರ್ಬಿಐ ಅಂಕಿಅಂಶಗಳು ಸ್ಪಷ್ಟಪಡಿಸುತ್ತವೆ.
ಆದರೆ, ಗ್ರಾಹಕರು ನಗದು ಹಿಂಪಡೆಯುವಾಗ ಆಗಾಗ ಸಣ್ಣಪುಟ್ಟ ತೊಂದರೆಗಳನ್ನು ಎದುರಿಸುವ ಸಾಧ್ಯತೆಯಿದೆ. ವಿಶೇಷವಾಗಿ ಎಟಿಎಂಗಳಿಗೆ ಹಣ ಪೂರೈಕೆ ವಿಳಂಬವಾಗಬಹುದಾದ ಸಣ್ಣ ಪಟ್ಟಣಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಈ ಸಮಸ್ಯೆ ಉಂಟಾಗಬಹುದು.
ಇದನ್ನು ನಿಭಾಯಿಸಲು ಇರುವ ಸರಳ ಮಾರ್ಗವೆಂದರೆ, ಸಂಪೂರ್ಣವಾಗಿ ನಗದು ಅಥವಾ ಒಂದೇ ಎಟಿಎಂ ಅನ್ನು ಅವಲಂಬಿಸದಿರುವುದು. ಯುಪಿಐ ನಂತಹ ಡಿಜಿಟಲ್ ಪಾವತಿ ಆಯ್ಕೆಗಳನ್ನು ಸಕ್ರಿಯವಾಗಿರಿಸಿಕೊಳ್ಳುವುದು ಮತ್ತು ತುರ್ತು ಪರಿಸ್ಥಿತಿಗಳಿಗಾಗಿ ಸ್ವಲ್ಪ ಪ್ರಮಾಣದ ನಗದನ್ನು ನಮ್ಮ ಬಳಿ ಇಟ್ಟುಕೊಳ್ಳುವುದು ಒಳಿತು. ಈ ರೀತಿ ಮಾಡುವುದರಿಂದ, ನಿಮ್ಮ ಹತ್ತಿರದ ಎಟಿಎಂನಲ್ಲಿ ತಾತ್ಕಾಲಿಕವಾಗಿ ನಗದು ಖಾಲಿಯಾದರೂ, ನಿಮ್ಮ ದೈನಂದಿನ ವಹಿವಾಟುಗಳಿಗೆ ಯಾವುದೇ ಅಡ್ಡಿಯಾಗುವುದಿಲ್ಲ.
ಕೃಪೆ: livemint.com






