ರೈಲ್ವೆ ಸಮವಸ್ತ್ರ ‘ಬಂದ್ ಗಲಾ’ ಕೈಬಿಡಲು ಕೇಂದ್ರ ನಿರ್ಧಾರ; ಅದರ ಇತಿಹಾಸವೇನು?

Photo Credit : globalstore.thetimes.com
ಭಾರತದಲ್ಲಿ ವಸಾಹತುಶಾಹಿ ಕುರುಹುಗಳನ್ನು ತೆಗೆದುಹಾಕುವ ಪ್ರಯತ್ನದ ಭಾಗವಾಗಿ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಬ್ರಿಟಿಷರು ಪರಿಚಯಿಸಿದ ರೈಲ್ವೆ ಸಮವಸ್ತ್ರಗಳಾದ ಕಪ್ಪು ಪ್ರಿನ್ಸ್ ಕೋಟ್ ಗಳು (ಬಂದ್ ಗಲಾ ಕೋಟುಗಳು) ಇನ್ನು ಮುಂದೆ ಸಮವಸ್ತ್ರವಾಗಿರುವುದಿಲ್ಲ ಎಂದು ಘೋಷಿಸಿದ್ದಾರೆ. ಜನವರಿ 10ರಂದು ರೈಲ್ವೆ ಅಧಿಕಾರಿಗಳ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, “ನಮ್ಮ ಕೆಲಸದ ಶೈಲಿಯಲ್ಲಿರಲಿ ಅಥವಾ ಡ್ರೆಸ್ಸಿಂಗ್ ಶೈಲಿಯಲ್ಲಿರಲಿ, ಎಲ್ಲಾ ವಸಾಹತುಶಾಹಿ ಮನಸ್ಥಿತಿಯನ್ನು ತೊಡೆದುಹಾಕಬೇಕು. ನಾವು ವಸಾಹತುಶಾಹಿಯ ಪ್ರತಿಯೊಂದು ಕುರುಹನ್ನು ಕಂಡುಹಿಡಿದು ಅವುಗಳನ್ನು ಹೊರಹಾಕಬೇಕು. ಇಂದು ನಾನು ಮೊದಲ ಘೋಷಣೆ ಮಾಡುತ್ತಿದ್ದೇನೆ. ಇಂದಿನಿಂದ ಬ್ರಿಟಿಷರು ಪರಿಚಯಿಸಿದ ಕಪ್ಪು ಬಂದ್ ಗಲಾ ಕೋಟುಗಳು ಇನ್ನು ಮುಂದೆ ರೈಲ್ವೆಯಲ್ಲಿ ಫಾರ್ಮಲ್ ಡ್ರೆಸ್ ನ ಭಾಗವಾಗಿರುವುದಿಲ್ಲ” ಎಂದು ಹೇಳಿದರು.
ಭಾರತೀಯ ರೈಲ್ವೆಯ ಸಮವಸ್ತ್ರವಾಗಿದ್ದ ಬಂದ್ ಗಲಾ—ಹೈ-ಕಾಲರ್, ಬಟನ್-ಅಪ್ ಜಾಕೆಟ್—ಅನ್ನು ಇಂಡೋ–ಪಾಶ್ಚಿಮಾತ್ಯ ಉಡುಗೆ ಎಂದು ಪರಿಗಣಿಸಲಾಗುತ್ತದೆ. ಆದರೆ ಸಚಿವಾಲಯವು ಇದು ವಸಾಹತುಶಾಹಿ ಅಧಿಕಾರದ ಸಂಕೇತ ಎಂದು ಹೇಳಿದೆ. ಬಂದ್ ಗಲಾ ಸಮವಸ್ತ್ರವನ್ನು ಬದಲಾಯಿಸಿ, ಅದರ ಬದಲು ಭಾರತೀಯ ಹವಾಮಾನಕ್ಕೆ ಹೆಚ್ಚು ಸೂಕ್ತವಾದ ‘ಸ್ವದೇಶಿ’ (ಸ್ಥಳೀಯ) ಉಡುಗೆಯನ್ನು ಸಮವಸ್ತ್ರವಾಗಿ ಮಾಡುವ ಉದ್ದೇಶ ಕೇಂದ್ರ ಸರ್ಕಾರದ್ದಾಗಿದೆ. ಸಾಮಾನ್ಯವಾಗಿ ‘ಪ್ರಿನ್ಸ್ ಸೂಟ್’ ಅಥವಾ ‘ಪ್ರಿನ್ಸ್ ಕಟ್’ ಎಂದು ಕರೆಯಲ್ಪಡುವ ಬಂದ್ ಗಲಾ ರಾಜಸ್ಥಾನದ ಜೋಧ್ ಪುರ ರಾಜಪ್ರಭುತ್ವದಲ್ಲಿ ಹುಟ್ಟಿಕೊಂಡಿತು.
ಮೊಘಲ್–ರಜಪೂತರಿಂದ ಬಂದ ಬಂದ್ ಗಲಾ
ಜೋಧ್ ಪುರಿ ಜಾಕೆಟ್ ಎಂದೂ ಕರೆಯಲ್ಪಡುವ ಬಂದ್ ಗಲಾ ಜಾಕೆಟ್, ಬೇರೆ ಯಾವುದೇ ಉಡುಗೆಯ ನಕಲು ಅಥವಾ ಸ್ಫೂರ್ತಿಯಿಂದ ಆಗಿದ್ದಲ್ಲ. ಮೊಘಲ್ ಸಂಹಿತೆಗಳು, ರಜಪೂತ ಯೋಧರ ಸೌಂದರ್ಯಶಾಸ್ತ್ರ ಮತ್ತು ಮಾರ್ವಾರ್ ನ ಟೈಲರಿಂಗ್—ಇವುಗಳಿಂದ ರೂಪುಗೊಂಡ ದಿರಿಸು ಇದಾಗಿದ್ದು, ಇದಕ್ಕೆ ನಾಲ್ಕು ಶತಮಾನಗಳ ಇತಿಹಾಸವಿದೆ. ಆಧುನಿಕ ಬಂದ್ ಗಲಾದ ಮೂಲ ಮೊಘಲ್ ಯುಗದ ಜಾಮಾ ಮತ್ತು ಅಂಗ್ರಖಾ. ಇವು ಚಕ್ರವರ್ತಿಗಳು ಮತ್ತು ಉನ್ನತ ಶ್ರೇಣಿಯ ಅಧಿಕಾರಿಗಳಿಗೆ ಔಪಚಾರಿಕ ಉಡುಪುಗಳಾಗಿದ್ದವು. ನಂತರ ಅಕ್ಬರ್ ಚಕ್ರವರ್ತಿ ಈ ಉಡುಪುಗಳನ್ನು ಪರಿಷ್ಕರಿಸಿದರು.
ಮಾರ್ವಾರ್ ನ ರಾಥೋಡ್ ಆಡಳಿತಗಾರರು ಮೊಘಲರ ಅಡಿಯಲ್ಲಿ ಸಾಮ್ರಾಜ್ಯಶಾಹಿ ಸೇವೆಗೆ ಪ್ರವೇಶಿಸಿದಾಗ, ಮೊಘಲ್ ಶೈಲಿಯ ಕೋರ್ಟ್ ಉಡುಗೆಯು ರಜಪೂತ ಯೋಧ ಸಂಸ್ಕೃತಿಯನ್ನೂ ಅಳವಡಿಸಿಕೊಂಡಿತು. ರಾಜಾ ಉದಯ್ ಸಿಂಗ್ ಆಳ್ವಿಕೆಯಿಂದ ಜೋಧ್ ಪುರದ ಆಡಳಿತಗಾರರು ‘ಬಾಗೊ’ ಎಂದು ಕರೆಯಲ್ಪಡುವ ಉಡುಗೆಯನ್ನು ಪರಿಚಯಿಸಿದರು. ಕಾಲಾನಂತರದಲ್ಲಿ ಮಾರ್ವಾರ್ ಆಸ್ಥಾನವು ದಗಲಿ ಮತ್ತು ಗುಡಡಿಯಂತಹ ಉಡುಪುಗಳನ್ನು ಪರಿಚಯಿಸಿತು. ಇದರ ಜೊತೆಗೆ ಉದ್ದವಾದ ಮೊಘಲ್ ಕೋಟ್ ಚಿಕ್ಕದಾಗಿ ಜಾಕೆಟ್ನಂತೆ ರೂಪುಗೊಂಡಿತು ಎಂದು ಫ್ಯಾಷನ್ ಡಿಸೈನರ್ ರಾಘವೇಂದ್ರ ಸಿಂಗ್ ರಾಥೋಡ್ ಹೇಳುತ್ತಾರೆ.
ಬಂದ್ ಗಲಾ ಬದಲಾಗಿದ್ದು ಹೀಗೆ
ಮೊಘಲ್ ಅವಧಿಯ ಅಂತ್ಯದ ವೇಳೆಗೆ ಸೊಂಟದವರೆಗೆ ಬಿಗಿಯಾಗಿರುವ ಜಾಕೆಟ್ ಗಳು ಆಸ್ಥಾನದಲ್ಲಿ ಸಾಮಾನ್ಯವಾಗಿದ್ದವು. ಸಂಗೀತಗಾರರು, ಕಾವಲುಗಾರರು ಮತ್ತು ಆಸ್ಥಾನದಲ್ಲಿ ನಡೆಯುವ ಔಪಚಾರಿಕ ಕಾರ್ಯಕ್ರಮಗಳಲ್ಲಿ ಸೇವಕರು ಇವನ್ನು ಧರಿಸುತ್ತಿದ್ದರು. ಸಾಮಾನ್ಯವಾಗಿ ಮೊಣಕಾಲಿನವರೆಗೆ ತಲುಪುವ, ಸೊಂಟಕ್ಕಿಂತ ಕೆಳಗೆ ಸಡಿಲವಾಗಿರುವ, ಕುತ್ತಿಗೆವರೆಗೆ ಇರುವ ಕೋಟು ‘ಅಚ್ಕನ್’. ಇದು ಆಧುನಿಕ ಬಂದ್ ಗಲಾ ಜೊತೆ ಹೆಚ್ಚಿನ ಸಾಮ್ಯತೆ ಹೊಂದಿದೆ. ಆದಾಗ್ಯೂ, ಸಾಂಪ್ರದಾಯಿಕ ಅಚ್ಕನ್ ಪೋಲೋ ಆಡುವಾಗ ಧರಿಸಲು ತುಂಬಾ ಉದ್ದ ಮತ್ತು ದೊಡ್ಡದಾಗಿತ್ತು. ಇದು ರೈಡಿಂಗ್ ಬ್ರೀಚ್ ಗಳಿಗೆ (ಕುದುರೆ ಸವಾರಿಗೆ ಧರಿಸುವ ಬಿಗಿಯಾದ ಪ್ಯಾಂಟ್) ಸರಿಯಾಗಿ ಹೊಂದಿಕೆಯಾಗುತ್ತಿರಲಿಲ್ಲ.
ಇದನ್ನು ಸರಿಪಡಿಸಲು ಜೋಧ್ ಪುರದ ಮಹಾರಾಜರು ಲಂಡನ್ ಗೆ ಕೊಂಡೊಯ್ದರು. ಅಲ್ಲಿನ ದರ್ಜಿಯಲ್ಲಿ ಈ ಉದ್ದನೆಯ ಕೋಟನ್ನು ಚಿಕ್ಕ ಜಾಕೆಟ್ ಆಗಿ ಪರಿವರ್ತಿಸಲು ಕೇಳಿಕೊಂಡರು. ಈ ಹೊಸ ಉಡುಗೆ ಕುದುರೆ ಸವಾರಿಗೆ ಸೂಕ್ತವಾಗಿತ್ತು. ಜಾಕೆಟ್ ಮತ್ತು ಬ್ರೀಚ್ ಗಳ ಸಂಯೋಜಿತ ಉಡುಪನ್ನು ‘ಜೋಧ್ ಪುರ’ ಎಂದು ಕರೆಯಲಾಗುತ್ತಿತ್ತು. 1930ರ ದಶಕದಲ್ಲಿ ಲಂಡನ್ ಸೇರಿದಂತೆ ಇತರಡೆ ಪಂದ್ಯಗಳಿಗಾಗಿ ಜೋಧ್ ಪುರ ಪೋಲೋ ತಂಡಗಳು ಪ್ರಯಾಣಿಸುತ್ತಿದ್ದಂತೆ ಇದು ಪಾಶ್ಚಾತ್ಯರ ಗಮನ ಸೆಳೆಯಿತು.
19ನೇ ಶತಮಾನದಲ್ಲಿ ಭಾರತೀಯ ರಾಜಮನೆತನವು ಯುರೋಪಿಯನ್ ಮತ್ತು ಬ್ರಿಟಿಷ್ ಮಿಲಿಟರಿ ಸಂಸ್ಕೃತಿಯೊಂದಿಗೆ ತೊಡಗಿಸಿಕೊಂಡಿದ್ದರಿಂದ, ಸ್ಟುಡಿಯೋಗಳಲ್ಲಿ ತೆಗೆದ ರಾಜಮನೆತನದ ಫೋಟೋಗಳ ಮೂಲಕ ಈ ಜಾಕೆಟ್ ಹೆಚ್ಚು ಜನಪ್ರಿಯವಾಯಿತು. ಇದು ಪಶ್ಚಿಮದ ದೇಶಗಳಿಗೆ ಸ್ಫೂರ್ತಿಯಾಯಿತು. ಮಹಾರಾಜ ಪ್ರತಾಪ್ ಸಿಂಗ್ ಲಂಡನ್ ನಲ್ಲಿ ರಾಣಿ ವಿಕ್ಟೋರಿಯಾಳ ವಜ್ರ ಮಹೋತ್ಸವದಲ್ಲಿ ಭಾಗವಹಿಸುತ್ತಿದ್ದಾಗ ಉಡುಗೆಗಳ ಪೆಟ್ಟಿಗೆ ಕಳೆದುಕೊಂಡು ಸವಿಲ್ ರೋನಲ್ಲಿ ತಮಗೆ ಬೇಕಾದ ಉಡುಪನ್ನು ಹೇಗೆ ತಯಾರಿಸಿದರು ಎಂಬುದರ ಕುರಿತು ಹಲವಾರು ಕಥೆಗಳಿವೆ. ಆದರೆ ಭಾರತೀಯ ಉಡುಪಿನ ಬಗ್ಗೆ ದರ್ಜಿಗಳ ಕುತೂಹಲವನ್ನು ಹುಟ್ಟುಹಾಕಿದ್ದು ಭಾರತದ ಛಾಯಾಚಿತ್ರಗಳೇ ಎಂದು ಡಿಸೈನರ್ ರಾಥೋಡ್ ಹೇಳುತ್ತಾರೆ.
ಮಹಾರಾಜ ಉಮೈದ್ ಸಿಂಗ್ ಅವರಿಗೆ ವಿಮಾನ ಚಾಲನೆ ತಿಳಿದಿತ್ತು. 1930ರಲ್ಲಿ ಅವರು ಜೋಧ್ ಪುರ ಫ್ಲೈಯಿಂಗ್ ಕ್ಲಬ್ ಅನ್ನು ಸ್ಥಾಪಿಸಿದಾಗಿನಿಂದ ಜೋಧ್ ಪುರದಲ್ಲಿ ಅಮೆರಿಕನ್ ಸ್ಕ್ವಾಡ್ರನ್ ಅನ್ನು ಹೊಂದಿದ್ದರು. ಅವರು ಜೋಧ್ ಪುರ ಬೂಟುಗಳು, ಬ್ರೀಚ್ ಗಳು ಮತ್ತು ಬಂದ್ ಗಲಾವನ್ನು ಜನಪ್ರಿಯಗೊಳಿಸಿದರು.
ಕಪ್ಪು ಬಂದ್ ಗಲಾ ಕೋಟ್ ಅನ್ನು 19ನೇ ಶತಮಾನದ ಕೊನೆಯಲ್ಲಿ ಮತ್ತು 20ನೇ ಶತಮಾನದ ಆರಂಭದಲ್ಲಿ ಬ್ರಿಟಿಷ್ ಆಳ್ವಿಕೆಯಲ್ಲಿ ಹಿರಿಯ ರೈಲ್ವೆ ಅಧಿಕಾರಿಗಳಿಗೆ ಔಪಚಾರಿಕ ಉಡುಪಾಗಿ ಪರಿಚಯಿಸಲಾಯಿತು. ಬ್ರಿಟಿಷ್ ಆಡಳಿತಾತ್ಮಕ ಡ್ರೆಸ್ ಕೋಡ್ಗಳು ಮತ್ತು ರಾಜರ ಆಸ್ಥಾನದ ಸಮವಸ್ತ್ರಗಳಿಂದ ಪ್ರೇರಿತರಾಗಿ, ಇದು ರೈಲ್ವೆಯೊಳಗಿನ ಅಧಿಕಾರ ಮತ್ತು ಶ್ರೇಣಿಯ ಸಂಕೇತವಾಯಿತು. 1947ರಲ್ಲಿ ಸ್ವಾತಂತ್ರ್ಯದ ನಂತರವೂ ಅಧಿಕೃತ ಪ್ರೋಟೋಕಾಲ್ ಮತ್ತು ಔಪಚಾರಿಕ ಸಂದರ್ಭಗಳಲ್ಲಿ ಇದು ಹೆಚ್ಚಾಗಿ ಬದಲಾಗದೆ ಮುಂದುವರಿಯಿತು.
ಘಟಿಕೋತ್ಸವದಲ್ಲಿ ದೇಸಿ ದಿರಿಸು
ವಿಶ್ವವಿದ್ಯಾಲಯಗಳಲ್ಲಿ ಘಟಿಕೋತ್ಸವದ ವೇಳೆ ಕಪ್ಪು ಗೌನ್, ಹ್ಯಾಟ್, ಶಾಲುಗಳನ್ನು ಧರಿಸುವ ರೂಢಿಯನ್ನು ಕೈಬಿಟ್ಟು ದೇಸಿ ಉಡುಗೆಗಳನ್ನು ಧರಿಸಲು ವಿದ್ಯಾರ್ಥಿಗಳಿಗೆ ಕರೆ ನೀಡಿದ್ದು ಕೂಡ ವಸಾಹತುಶಾಹಿ ಕುರುಹುಗಳನ್ನು ತೆಗೆದುಹಾಕುವ ಪ್ರಕ್ರಿಯೆಯ ಭಾಗವಾಗಿತ್ತು. ಘಟಿಕೋತ್ಸವದಂತಹ ವಿಶೇಷ ಸಂದರ್ಭಗಳಲ್ಲಿ ಕೈಮಗ್ಗ ಬಟ್ಟೆಗಳನ್ನು ಬಳಸುವುದನ್ನು ಪರಿಗಣಿಸಲು ಯುಜಿಸಿ ವಿಶ್ವವಿದ್ಯಾಲಯಗಳಿಗೆ ಸಲಹೆ ನೀಡಿತ್ತು. ಯುಜಿಸಿ ಸಲಹೆಯ ನಂತರ 2018ರಲ್ಲಿ ಅಂದಿನ ಶಿಕ್ಷಣ ಸಚಿವ ಪ್ರಕಾಶ್ ಜಾವಡೇಕರ್ ಅವರು ಮಹಾತ್ಮಾ ಗಾಂಧಿಯವರ 150ನೇ ಜನ್ಮ ದಿನಾಚರಣೆಯಂದು ಅವರಿಗೆ ಗೌರವವಾಗಿ ‘ಬ್ರಿಟಿಷ್-ಪ್ರೇರಿತ’ ಉಡುಪನ್ನು ಬದಲಾಯಿಸುವಂತೆ ವಿಶ್ವವಿದ್ಯಾಲಯಗಳನ್ನು ಒತ್ತಾಯಿಸಿದ್ದರು.
ಬ್ರಿಟಿಷ್ ಯುಗದ ಗೌನ್ ಕುರಿತ ಚರ್ಚೆ ಹೊಸದೇನಲ್ಲ. 2010ರಲ್ಲಿ ಆಗಿನ ರಾಷ್ಟ್ರಪತಿಯಾಗಿದ್ದ ಎಪಿಜೆ ಅಬ್ದುಲ್ ಕಲಾಂ ಅವರು ವಿದೇಶಿ ಮೂಲದ ಈ ಗೌನ್ ಅನ್ನು ಕೈಬಿಡಬೇಕು ಎಂದು ಹೇಳಿದ್ದರು. ಲಕ್ನೋ NIT 12ನೇ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, “ನಾವು ಈ ಸುಂದರವಾದ ಕೋಟ್ ಧರಿಸಿದ್ದೇವೆ. ಬ್ರಿಟಿಷರು ಈ ಕೋಟ್ ಅನ್ನು ಪರಿಚಯಿಸಿದರು ಎಂದು ನಾನು ನಿಮ್ಮ ನಿರ್ದೇಶಕರಿಗೆ ಹೇಳಿದೆ. ನಮಗೆ ನಮ್ಮದೇ ಆದ ಒಂದು ಕೋಟ್, ನಮ್ಮದೇ ಆದ ಸಮವಸ್ತ್ರ ಇರಬೇಕು. ಮುಂದಿನ ಬಾರಿ ಸುಂದರವಾದ ‘ಅಂಗವಸ್ತ್ರ’ವನ್ನು ಪರಿಚಯಿಸಿ” ಎಂದು ಹೇಳಿದ್ದರು.
ಮೋದಿಯವರ ದುಬಾರಿ ಬಂದ್ ಗಲಾ ಸೂಟ್
ಪ್ರಧಾನಿ ನರೇಂದ್ರ ಮೋದಿ ಅವರು ಪ್ರಮುಖ ಕಾರ್ಯಕ್ರಮಗಳಿಗೆ ಬಂದ್ ಗಲಾ ಸೂಟ್ ಧರಿಸಿದ್ದಾರೆ. 2014ರ ಜಪಾನ್ ಭೇಟಿಯ ವೇಳೆ ಮೋದಿ ಧರಿಸಿದ್ದ ಬಂದ್ ಗಲಾ ಸೂಟ್ ಭಾರೀ ಗಮನ ಸೆಳೆದಿತ್ತು. 2015ರಲ್ಲಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಭಾರತಕ್ಕೆ ಬಂದಾಗ ಮೋದಿ ಧರಿಸಿದ್ದ ನೇವಿ ಬ್ಲೂ ಬಂದ್ ಗಲಾ ಭಾರೀ ಚರ್ಚೆಯನ್ನು ಹುಟ್ಟುಹಾಕಿತ್ತು. ಮೋದಿ ಧರಿಸಿದ್ದ ಆ ಸೂಟ್ನಲ್ಲಿ ‘ನರೇಂದ್ರ ದಾಮೋದರ್ ದಾಸ್ ಮೋದಿ’ ಎಂದು ಚಿನ್ನದ ಎಳೆಗಳಿಂದ ಹೆಣೆಯಲಾಗಿತ್ತು. 10 ಲಕ್ಷ ರೂ. ಬೆಲೆಬಾಳುವ ಈ ಸೂಟ್ ಹರಾಜಿನಲ್ಲಿ 4.31 ಕೋಟಿ ರೂ.ಗೆ ಮಾರಾಟವಾಗಿತ್ತು. ಅತ್ಯಧಿಕ ಬೆಲೆಗೆ ಹರಾಜಾದ ಈ ದುಬಾರಿ ಸೂಟ್ ಗಿನ್ನೆಲ್ ವಿಶ್ವದಾಖಲೆಯಲ್ಲಿ ಸ್ಥಾನ ಪಡೆದುಕೊಂಡಿದೆ. ಹರಾಜಿನಿಂದ ಬಂದ ಹಣವನ್ನು ‘ಸ್ವಚ್ಛ ಗಂಗಾ’ ಮಿಷನ್ ಗೆ ನೀಡಲಾಗಿತ್ತು.







