ವ್ಯಾಪಾರಿಗಳು UPI ಶುಲ್ಕವನ್ನು ಗ್ರಾಹಕರಿಗೆ ವರ್ಗಾವಣೆ ಮಾಡುತ್ತಿದ್ದಾರೆಯೇ ಎಂಬುದನ್ನು ಪ್ರತಿದಿನ ಮೇಲ್ವಿಚಾರಣೆ ಮಾಡಲು ಕೇಂದ್ರದ ಯೋಜನೆ
► ಸಿದ್ಧಾರ್ಥ್ ಉಪಾಸನಿ – indianexpress. com ವರದಿ

Photo Credit: indianexpress
ಅಕ್ಟೋಬರ್ 15ರಿಂದ ಜಾರಿಗೆ ಬರುವ 2,000 ರೂ.ಗಿಂತ ಹೆಚ್ಚಿನ UPI ಪಾವತಿಗಳ ಮೇಲಿನ ವ್ಯಾಪಾರಿ ರಿಯಾಯಿತಿ ದರ (MDR) ಹೊರೆಯನ್ನು ಅಂಗಡಿ ಮಾಲೀಕರು ಮತ್ತು ಇತರ ಮಾರಾಟಗಾರರು ಗ್ರಾಹಕರ ಮೇಲೆ ಹಾಕಿ ಹೆಚ್ಚಿನ ಬೆಲೆ ವಿಧಿಸಬಹುದು ಎಂಬ ಆತಂಕದ ನಡುವೆ, ಈ ಬೆಳವಣಿಗೆಯನ್ನು ಪ್ರತಿದಿನ ಗಮನಿಸುವುದಾಗಿ ಸರ್ಕಾರಿ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
UPI ಪಾವತಿ ವ್ಯವಸ್ಥೆಗೆ ಸರ್ಕಾರ ಸಂಪೂರ್ಣವಾಗಿ ಸಬ್ಸಿಡಿ ನೀಡುತ್ತಾ ಹೋದರೆ, ಈ ಕ್ಷೇತ್ರದಲ್ಲಿ ಹೊಸತನ ಮತ್ತು ಸ್ಪರ್ಧೆ ಬೆಳೆಯಲು ಸಾಧ್ಯವಾಗುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಲ್ಲದೆ, ಅಮೆರಿಕದ ಒತ್ತಡದಿಂದಾಗಿ UPI ವಹಿವಾಟುಗಳಿಗೆ ಶೇಕಡಾ 0.4ರಷ್ಟು ವ್ಯಾಪಾರಿ ರಿಯಾಯಿತಿ ದರ (MDR) ವಿಧಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ಆರೋಪವನ್ನೂ ಅವರು ತಳ್ಳಿಹಾಕಿದ್ದಾರೆ. ಅಮೆರಿಕ ಬಯಸಿದ್ದ ಕ್ರಮಕ್ಕೆ ವಿರುದ್ಧವಾಗಿಯೇ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಹೊಸ MDR ಶುಲ್ಕಗಳು ಹೇಗೆ ಕಾರ್ಯನಿರ್ವಹಿಸುತ್ತವೆ, ಎಲ್ಲಿ ಅನ್ವಯಿಸುತ್ತವೆ ಮತ್ತು ಎಲ್ಲಿ ಅನ್ವಯಿಸುವುದಿಲ್ಲ ಎಂಬುದನ್ನು ಅಂಗಡಿ ಮಾಲೀಕರು ಹಾಗೂ ವ್ಯಾಪಾರಿಗಳಿಗೆ ಮನವರಿಕೆ ಮಾಡಲು ಪಾವತಿ ಅಗ್ರಿಗೇಟರ್ ಗಳೊಂದಿಗೆ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಮೂಲಗಳು ತಿಳಿಸಿವೆ. ಇದರೊಂದಿಗೆ, 2,000 ರೂ.ಗಿಂತ ಕಡಿಮೆ ಮೊತ್ತದ UPI ವಹಿವಾಟುಗಳಿಗೆ ಶೇಕಡಾ 0.15ರವರೆಗೆ ಸಬ್ಸಿಡಿ ನೀಡುವ ಪ್ರಸ್ತುತ ಪ್ರೋತ್ಸಾಹಕ ಯೋಜನೆಯನ್ನು ಅಕ್ಟೋಬರ್ 15ರ ನಂತರ ರದ್ದುಗೊಳಿಸಲಾಗುತ್ತದೆ.
"ಅಕ್ಟೋಬರ್ 15ರಿಂದ, ವ್ಯಾಪಾರಿಗಳು MDR ಶುಲ್ಕವನ್ನು ಗ್ರಾಹಕರಿಗೆ ವರ್ಗಾಯಿಸುತ್ತಿದ್ದಾರೆಯೇ ಎಂಬುದನ್ನು ನಾವು ಪ್ರತಿದಿನ ಮೇಲ್ವಿಚಾರಣೆ ಮಾಡುತ್ತೇವೆ. ಕಳೆದ ವರ್ಷದೊಂದಿಗೆ ಹೋಲಿಕೆ ಮಾಡಲಾಗುತ್ತದೆ" ಎಂದು ಹೆಸರು ಹೇಳಲಿಚ್ಛಿಸದ ಸರ್ಕಾರಿ ಅಧಿಕಾರಿಯೊಬ್ಬರು ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಉಲ್ಲೇಖಿಸಿದೆ.
ಹೊಸ ವ್ಯವಸ್ಥೆ ಜಾರಿಗೆ ಬಂದ ಬಳಿಕವೇ MDR ನ ನಿಜವಾದ ಪರಿಣಾಮ ತಿಳಿಯಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಒಪ್ಪಿಕೊಂಡಿದ್ದಾರೆ. ಅಕ್ಟೋಬರ್ 15ರ ನಂತರ UPI ವಹಿವಾಟುಗಳಲ್ಲಿ ಯಾವುದೇ ಕುಸಿತ ಉಂಟಾಗುವುದಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿರುವ ಅವರು, ನಗದು ಬಳಕೆಯಲ್ಲಿ "ದೊಡ್ಡ ಮಟ್ಟದ ಹೆಚ್ಚಳವನ್ನು" ಸರ್ಕಾರ ನಿರೀಕ್ಷಿಸುತ್ತಿಲ್ಲ ಎಂದಿದ್ದಾರೆ.
"ಸಾರ್ವಭೌಮ ರಾಷ್ಟ್ರವಾಗಿ ನಾವು ನಮ್ಮದೇ ಆದ ಸಂಸ್ಥೆಗಳನ್ನು ಹೊಂದಲು ಬಯಸುವುದಾದರೆ, ಕೆಲವು ವಹಿವಾಟುಗಳು ವೆಚ್ಚವನ್ನು ಭರಿಸಲೇಬೇಕಾಗುತ್ತದೆ" ಎಂದು ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಅಧಿಕಾರಿ, MDR ಶುಲ್ಕವನ್ನು ತಪ್ಪಿಸಲು 1,999 ರೂ.ಗಳ ಅನೇಕ ಪಾವತಿಗಳನ್ನು ಮಾಡಲಾಗುತ್ತದೆಯೇ ಎಂಬುದು "ಕಾಲವೇ ಉತ್ತರಿಸಲಿದೆ" ಎಂದು ಹೇಳಿದ್ದಾರೆ.
ಪರಿಷ್ಕೃತ MDR ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲು ಸರ್ಕಾರ ಮುಕ್ತವಾಗಿದೆಯೇ ಎಂಬ ಪ್ರಶ್ನೆಗೆ, ಮೊದಲು ಈ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ವ್ಯಾಪಾರಿ ರಿಯಾಯಿತಿ ದರ ಎಂದರೆ ಡಿಜಿಟಲ್ ವಹಿವಾಟು ನಡೆಸಲು ನೆರವಾಗುವ ಬ್ಯಾಂಕ್ಗಳು, ಪಾವತಿ ಸೇವಾ ಪೂರೈಕೆದಾರರು ಮತ್ತು ಬೇರೆ ಕಂಪೆನಿಯ ಆ್ಯಪ್ಗಳಿಗೆ ವ್ಯಾಪಾರಿಗಳು ಪಾವತಿಸುವ ಶುಲ್ಕವಾಗಿದೆ.
► ಯಾವುದೇ ಬಾಹ್ಯ ಒತ್ತಡವಿಲ್ಲ
ಸರ್ಕಾರವು ಬಾಹ್ಯ ಒತ್ತಡಕ್ಕೆ ಮಣಿದು MDR ಶುಲ್ಕವನ್ನು ವಿಧಿಸಿದೆ ಎಂಬ ಟೀಕೆಗಳನ್ನು ಅಧಿಕಾರಿಗಳು ತಳ್ಳಿಹಾಕಿದ್ದಾರೆ.
"ಅಮೆರಿಕದ ಕಂಪೆನಿಗಳು ನಿರ್ವಹಿಸುವ ಕ್ರೆಡಿಟ್ ಕಾರ್ಡ್ಗ ಳನ್ನು UPIಗೆ ಜೋಡಿಸಲು ಅವಕಾಶ ನೀಡಬೇಕು ಎಂದು USTR ವರದಿ ತಿಳಿಸಿತ್ತು. ಒಂದು ವೇಳೆ ಸರ್ಕಾರವು ಯಾವುದೇ ಬಾಹ್ಯ ಪ್ರಭಾವಕ್ಕೊಳಗಾಗಿದ್ದರೆ, ನಾವು ಮೊದಲು ಅನುಮತಿ ನೀಡುವುದು ಅದಕ್ಕೇ ಆಗಿರುತ್ತಿತ್ತು. ಆದರೆ ನಾವು ಅದಕ್ಕೆ ಒಪ್ಪಿಗೆ ನೀಡಿಲ್ಲ" ಎಂದು ಮೂಲವೊಂದು ತಿಳಿಸಿದೆ.
ಮೊತ್ತವು 2,000 ರೂ.ಗಿಂತ ಕಡಿಮೆಯಿರಲಿ ಅಥವಾ ಅಧಿಕವಾಗಿರಲಿ, RuPay ಡೆಬಿಟ್ ಕಾರ್ಡ್ಗಳನ್ನು ಬಳಸುವ ಎಲ್ಲ ವಹಿವಾಟುಗಳನ್ನು MDR ಪರಿಧಿಯಿಂದ ಹೊರಗಿಡುವ ಮೂಲಕ ಸರ್ಕಾರವು "ರೂಪೇ ಡೆಬಿಟ್ ಕಾರ್ಡ್ಗಳನ್ನು ಪ್ರಜ್ಞಾಪೂರ್ವಕವಾಗಿ ಉತ್ತೇಜಿಸುತ್ತಿದೆ" ಎಂದು ಅಧಿಕಾರಿ ಹೇಳಿದರು.
"ಭಾರತದಲ್ಲಿ ಕಾರ್ಯನಿರ್ವಹಿಸುವ ಯಾವುದೇ ವಿದೇಶಿ ಕಂಪೆನಿಯು ತನ್ನ ಉತ್ಪನ್ನವು ಸ್ಥಳೀಯ ಉತ್ಪನ್ನಗಳಷ್ಟೇ ಸ್ಪರ್ಧಾತ್ಮಕವಾಗಿರಬೇಕು ಎಂದು ಬಯಸುತ್ತದೆ. ಆದರೆ ಸರ್ಕಾರವು ರೂಪೇ ಡೆಬಿಟ್ ಕಾರ್ಡ್ ಗಳನ್ನು (MDRನಿಂದ) ಮುಕ್ತವಾಗಿರಿಸಿರುವಾಗ, ನಾವು ವಿದೇಶಿ ಒತ್ತಡಕ್ಕೆ ಮಣಿದು ವರ್ತಿಸುತ್ತಿದ್ದೇವೆ ಎಂದು ಯಾರಾದರೂ ಹೇಗೆ ಭಾವಿಸಲು ಸಾಧ್ಯ?"
ವಿದೇಶಿ ವ್ಯಾಪಾರ ತಡೆಗಳ ಕುರಿತಾದ 2026ರ ಮಾರ್ಚ್ನ ರಾಷ್ಟ್ರೀಯ ವ್ಯಾಪಾರ ಅಂದಾಜು ವರದಿಯಲ್ಲಿ, ಎಲೆಕ್ಟ್ರಾನಿಕ್ ಪಾವತಿ ಸೇವಾ ವಲಯದಲ್ಲಿ ಭಾರತವು ದೇಶೀಯ ಕಂಪೆನಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದೆ ಎಂದು ಯುನೈಟೆಡ್ ಸ್ಟೇಟ್ಸ್ ಟ್ರೇಡ್ ರೆಪ್ರೆಸೆಂಟೇಟಿವ್ (USTR) ಕಳವಳ ವ್ಯಕ್ತಪಡಿಸಿತ್ತು. ಸ್ವದೇಶಿ ರೂಪೇ ಬೆಂಬಲಿತ ಕ್ರೆಡಿಟ್ ಕಾರ್ಡ್ ಗಳಿಗೆ ಮಾತ್ರ UPI ಜೊತೆ ಜೋಡಿಸಲು ಅನುಮತಿ ನೀಡಲಾಗಿದೆ ಎಂದು ಅದರಲ್ಲಿ ತಿಳಿಸಲಾಗಿತ್ತು. ಬೇರೆ ಕಂಪೆನಿಯ ಆ್ಯಪ್ ಗಳು ನಿರ್ವಹಿಸಬಹುದಾದ UPI ವಹಿವಾಟುಗಳ ಮಿತಿಯನ್ನು ವ್ಯವಸ್ಥೆಯ ಒಟ್ಟು ಮೊತ್ತದ ಶೇಕಡಾ 30ಕ್ಕೆ ಸೀಮಿತಗೊಳಿಸುವ ನಿರ್ಧಾರವು "ಸಮಾನ ಅವಕಾಶವಿಲ್ಲದ ಮೈದಾನವನ್ನು" ಸೃಷ್ಟಿಸಿದೆ ಎಂದೂ ಉಲ್ಲೇಖಿಸಲಾಗಿತ್ತು.
ವಾಲ್ ಮಾರ್ಟ್ ಬೆಂಬಲಿತ ಫೋನ್ ಪೇ (PhonePe) ಮತ್ತು ಗೂಗಲ್ ಪೇ (Google Pay) ಒಟ್ಟು UPI ವಹಿವಾಟುಗಳ ಸುಮಾರು ಶೇಕಡಾ 80ರಷ್ಟನ್ನು ಹೊಂದಿವೆ. ಆರಂಭದಲ್ಲಿ 2023ರ ಜನವರಿಯಲ್ಲಿ ಜಾರಿಗೆ ಬರಬೇಕಿದ್ದ ಶೇಕಡಾ 30ರ ಮಿತಿಯನ್ನು ಹಲವು ಬಾರಿ ಮುಂದೂಡಲಾಗಿದ್ದು, ಪ್ರಸ್ತುತ ಗಡುವು 2026ರ ಡಿಸೆಂಬರ್ ಆಗಿದೆ.
"ಚಿಕ್ಕ ಭಾರತೀಯ ಸಂಸ್ಥೆಗಳು ನಮ್ಮ ಬಳಿಗೆ ಬಂದು, ನಮಗೆ ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ, ಆದಾಯದ ಮೂಲವಿಲ್ಲ ಮತ್ತು ಈ ದೈತ್ಯ ಕಂಪೆನಿಗಳಂತೆ ನಮ್ಮ ಬಳಿ ದೊಡ್ಡ ಹಣವಿಲ್ಲ ಎಂದು ಹೇಳಿವೆ. MDR ಪರಿಚಯಿಸುವುದರಿಂದ ಹೊಸ ಸಂಸ್ಥೆಗಳು ಮಾರುಕಟ್ಟೆ ಪ್ರವೇಶಿಸಲು ಮತ್ತು ಈಗಾಗಲೇ ಇರುವ ಸಣ್ಣ ಸಂಸ್ಥೆಗಳು ಸ್ಪರ್ಧಿಸಲು ಅನುವು ಮಾಡಿಕೊಡುತ್ತದೆ" ಎಂದು ಅಧಿಕಾರಿ ತಿಳಿಸಿದ್ದಾರೆ.
"ಶೇಕಡಾ 30ರ ಮಿತಿಯನ್ನು ನಮಗೆ ಜಾರಿಗೆ ತರಲು ಸಾಧ್ಯವಾಗಿಲ್ಲ ಎಂಬುದು ಸಮಸ್ಯೆಯಾಗಿದೆ. ಆದರೆ ಅದನ್ನು ಜಾರಿಗೆ ತರಲು, ಸಣ್ಣ ಸಂಸ್ಥೆಗಳು ಮೇಲೆ ಬಂದು ಸ್ಪರ್ಧಿಸಲು ಸಾಧ್ಯವಾಗಬೇಕು."
► ಸಬ್ಸಿಡಿಯಿಂದ ಹೊಸತನ ಸಾಧ್ಯವಿಲ್ಲ
UPI ವಹಿವಾಟುಗಳ ಮೇಲಿನ ವ್ಯಾಪಾರಿ ರಿಯಾಯಿತಿ ದರದ ಶುಲ್ಕ ಸಂಗ್ರಹಕ್ಕಾಗಿ ರಾಷ್ಟ್ರೀಯ ಪಾವತಿ ನಿಗಮವು (NPCI) ಈ ವಾರದ ಆರಂಭದಲ್ಲಿ ಪರಿಷ್ಕೃತ ಚೌಕಟ್ಟನ್ನು ಪ್ರಕಟಿಸಿದೆ. 2,000 ರೂ.ಗಿಂತ ಹೆಚ್ಚಿನ UPI ವಹಿವಾಟುಗಳಿಗೆ ಇದು ಅನ್ವಯಿಸುತ್ತದೆ.
ವಹಿವಾಟು ಮೊತ್ತದ ಶೇಕಡಾ 0.4ರಷ್ಟು ಶುಲ್ಕವಿರಲಿದ್ದು, ಗರಿಷ್ಠ ಮಿತಿ 300 ರೂ. ಇರಲಿದೆ. ಆದರೆ, UPI ಮೂಲಕ ಕೆಲವು ಪ್ರಮುಖ ಸರಕು ಮತ್ತು ಸೇವೆಗಳಿಗೆ ಪಾವತಿ ಮಾಡಿದಾಗ ಮೊತ್ತ ಎಷ್ಟೇ ಇದ್ದರೂ ಕೇವಲ 5 ರೂ. ಸ್ಥಿರ ಶುಲ್ಕ ವಿಧಿಸಲಾಗುತ್ತದೆ. ವಿಮೆ ಮತ್ತು ಯುಟಿಲಿಟಿ ಪಾವತಿಗಳು, ರೈಲು ಟಿಕೆಟ್ ಬುಕಿಂಗ್ ಹಾಗೂ ತೆರಿಗೆ ಪಾವತಿಗಳು ಇದರಲ್ಲಿ ಸೇರಿವೆ. ಕೆಲವು ಬಂಡವಾಳ ಮಾರುಕಟ್ಟೆ ವಹಿವಾಟುಗಳ ಮೇಲೆ ಶೇಕಡಾ 0.02ರಷ್ಟು ಕಡಿಮೆ ಶುಲ್ಕ ಅನ್ವಯಿಸುತ್ತದೆ. ಆದರೆ ಒಟಿಟಿ (OTT) ಚಂದಾದಾರಿಕೆಗಳು ಮತ್ತು ಎಸ್ಐಪಿ (SIP) ಹೂಡಿಕೆಗಳಂತಹ UPI ಮೂಲಕ ಮಾಡುವ ಮರುಕಳಿಸುವ ಪಾವತಿಗಳಿಗೆ ಯಾವುದೇ ಶುಲ್ಕವಿರುವುದಿಲ್ಲ.
ಪಾವತಿ ಉದ್ಯಮದ ಸಂಸ್ಥೆಗಳ ಹಲವು ವರ್ಷಗಳ ಮನವಿಯ ಮೇರೆಗೆ ಸರ್ಕಾರವು ಕಳೆದ ತಿಂಗಳು ಕಾನೂನನ್ನು ತಿದ್ದುಪಡಿ ಮಾಡಿದ ನಂತರ ಈ ಪರಿಷ್ಕೃತ ಚೌಕಟ್ಟು ಜಾರಿಗೆ ಬಂದಿದೆ. 2020ರಲ್ಲಿ ಮಾತ್ರ UPI ಅನ್ನು MDR ಮುಕ್ತಗೊಳಿಸಲಾಗಿತ್ತು.
UPI ನಿರ್ವಹಣೆಗೆ ಪ್ರತಿವರ್ಷ ಸುಮಾರು 20,000 ಕೋಟಿ ರೂ. ವೆಚ್ಚವಾಗುತ್ತದೆ ಎಂದು ಅಂದಾಜಿಸಲಾಗಿದೆ. ಪರಿಷ್ಕೃತ MDR ಚೌಕಟ್ಟಿನಿಂದ ವಾರ್ಷಿಕವಾಗಿ ಸುಮಾರು 15,000 ಕೋಟಿ ರೂ. ಸಂಗ್ರಹವಾಗುವ ನಿರೀಕ್ಷೆಯಿದೆ. ಈ ಮೊತ್ತವನ್ನು ಬ್ಯಾಂಕ್ ಗಳು, ಪಾವತಿ ಸೇವಾ ಪೂರೈಕೆದಾರರು ಮತ್ತು ಮೂರನೇ ವ್ಯಕ್ತಿಯ ಆ್ಯಪ್ ಗಳ ನಡುವೆ ಹಂಚಿಕೊಳ್ಳಲಾಗುತ್ತದೆ ಎಂದು ಉದ್ಯಮದ ಅಧಿಕಾರಿಗಳು ತಿಳಿಸಿದ್ದಾರೆ.
ಗ್ರಾಹಕರಲ್ಲ, ಬದಲಿಗೆ ಮಾರಾಟಗಾರರು ಪಾವತಿಸಬೇಕಾದ ಈ MDR ಶುಲ್ಕವು ಕೇವಲ ವ್ಯಕ್ತಿಯಿಂದ ವ್ಯಾಪಾರಿಗೆ (P2M) ನಡೆಯುವ ವಹಿವಾಟುಗಳಿಗೆ ಮಾತ್ರ ಅನ್ವಯಿಸುತ್ತದೆ. ಇಬ್ಬರು ವ್ಯಕ್ತಿಗಳ ನಡುವಿನ ಹಣ ವರ್ಗಾವಣೆಗೆ ಯಾವುದೇ ಶುಲ್ಕವಿರುವುದಿಲ್ಲ.
2025-26ರಲ್ಲಿ ನಡೆದ 24,000 ಕೋಟಿಗಿಂತ ಅಧಿಕ UPI ವಹಿವಾಟುಗಳಲ್ಲಿ ಕೇವಲ ಶೇಕಡಾ 30ರಷ್ಟು ಮಾತ್ರ ವ್ಯಕ್ತಿಯಿಂದ ವ್ಯಾಪಾರಿಗೆ ನಡೆದಿದ್ದಾಗಿವೆ. ಅಲ್ಲದೆ, ಈ ವಿಭಾಗದಲ್ಲಿ ಕೇವಲ ಶೇಕಡಾ 4ರಷ್ಟು ಪಾವತಿಗಳು ಮಾತ್ರ 2,000 ರೂ.ಗಿಂತ ಅಧಿಕ ಮೊತ್ತದ್ದಾಗಿವೆ. ಇವುಗಳಿಗೆ ಮಾತ್ರ MDR ಶುಲ್ಕ ಬೀಳಲಿದೆ.
2020ರ ಜನವರಿಯಿಂದ ರೂಪೇ ಡೆಬಿಟ್ ಕಾರ್ಡ್ ಗಳು ಮತ್ತು UPI ವಹಿವಾಟುಗಳ ಮೇಲೆ ಯಾವುದೇ MDR ಇರಲಿಲ್ಲ. ದೇಶಾದ್ಯಂತ ಡಿಜಿಟಲ್ ಪಾವತಿಗಳ ಬಳಕೆಯನ್ನು ಉತ್ತೇಜಿಸಲು ಈ ಕ್ರಮ ಕೈಗೊಳ್ಳಲಾಗಿತ್ತು. ಉದ್ಯಮದ ಕೆಲವು ವೆಚ್ಚಗಳನ್ನು ಭರಿಸಲು ಸಹಾಯ ಮಾಡಲು, 'ರೂಪೇ ಡೆಬಿಟ್ ಕಾರ್ಡ್ ಗಳು ಮತ್ತು ಕಡಿಮೆ ಮೌಲ್ಯದ ಭೀಮ್-UPI ವಹಿವಾಟುಗಳ (P2M) ಪ್ರಚಾರಕ್ಕಾಗಿ ಪ್ರೋತ್ಸಾಹಕ ಯೋಜನೆ'ಯ ಮೂಲಕ ಸಣ್ಣ ವ್ಯಾಪಾರಿಗಳಿಗೆ ಮಾಡಲಾಗುವ 2,000 ರೂ.ವರೆಗಿನ ಪಾವತಿಗಳಿಗೆ ಸರ್ಕಾರವು ಸಬ್ಸಿಡಿ ನೀಡುತ್ತ ಬಂದಿದೆ. ನೀಡಲಾಗುವ ಪ್ರೋತ್ಸಾಹವು ವಹಿವಾಟು ಮೌಲ್ಯದ ಶೇಕಡಾ 0.15ಕ್ಕೆ ಸೀಮಿತವಾಗಿದೆ. ದೊಡ್ಡ ವ್ಯಾಪಾರಿಗಳು ಈ ಯೋಜನೆಯ ವ್ಯಾಪ್ತಿಗೆ ಬರುವುದಿಲ್ಲ.
ಮೂಲಗಳ ಪ್ರಕಾರ, ಈ ಪ್ರೋತ್ಸಾಹಕ ಯೋಜನೆಯನ್ನು ಅಕ್ಟೋಬರ್ 15ರ ನಂತರ ರದ್ದುಗೊಳಿಸಲಾಗುತ್ತದೆ.
"ಸಬ್ಸಿಡಿಗಳ ಮೂಲಕ ನೀವು ಒಂದು ವ್ಯವಸ್ಥೆಯನ್ನು ಮುಂದುವರಿಸಿಕೊಂಡು ಹೋಗಬಹುದು, ಆದರೆ ಅದು ನಾವೀನ್ಯತೆಯನ್ನು ಖಚಿತಪಡಿಸಲು ಸಾಧ್ಯವಿಲ್ಲ. ಸಬ್ಸಿಡಿಗಳನ್ನು ಆಧರಿಸಿದ ಪ್ರತಿಯೊಂದು ಆರ್ಥಿಕ ಚಟುವಟಿಕೆಯಲ್ಲಿಯೂ ನಾವೀನ್ಯತೆ ಮತ್ತು ಅದರ ವ್ಯಾಪ್ತಿಗೆ ಒಂದು ಮಿತಿಯಿರುತ್ತದೆ" ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದ್ದಾರೆ.
2,000 ರೂ.ಗಿಂತ ಹೆಚ್ಚಿನ ಪಾವತಿಗಳನ್ನು ಸ್ವೀಕರಿಸಲು ವ್ಯಾಪಾರಿಗಳಿಂದ ಶುಲ್ಕ ವಿಧಿಸುವ ನಿರ್ಧಾರವು ದೇಶದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಹೆಚ್ಚುವರಿ ವೆಚ್ಚವನ್ನು ಗ್ರಾಹಕರ ಮೇಲೆ ಹಾಕುತ್ತೇವೆ ಅಥವಾ ನಗದು ಸ್ವೀಕರಿಸಲು ಪ್ರಾರಂಭಿಸುತ್ತೇವೆ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ. ಇದು ಬೆಲೆಗಳು ಏರಿಕೆಯಾಗಲು ಮತ್ತು ಭಾರತದ ಡಿಜಿಟಲ್ ಪಾವತಿ ಕ್ರಾಂತಿಯು ಮಂದಗೊಳ್ಳಲು ಕಾರಣವಾಗಬಹುದು ಎಂಬ ಆತಂಕವನ್ನು ಹುಟ್ಟುಹಾಕಿದೆ.
ಸೌಜನ್ಯ: indianexpress.com






