OBC ತೀರ್ಪು ಜಾರಿಗೆ ಸಿದ್ಧವಿದ್ದ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದೇಕೆ?
►ಶ್ಯಾಮ್ ಲಾಲ್ ಯಾದವ್ - indianexpress. com

ಸುಪ್ರೀಂ ಕೋರ್ಟ್ | Photo Credit : PTI
ಕೆನೆಪದರ (creamy layer) ಮಾನದಂಡದ ಆಧಾರದ ಮೇಲೆ 2016ರಿಂದ ಸಿವಿಲ್ ಸೇವೆಗಳ ಪರೀಕ್ಷೆಯಲ್ಲಿ (CSE) ಆಯ್ಕೆಯಾಗಿದ್ದರೂ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯಿಂದ (DoPT) ತಿರಸ್ಕೃತಗೊಂಡಿದ್ದ ಸುಮಾರು 100 OBC (OBC) ಅಭ್ಯರ್ಥಿಗಳ ಅರ್ಹತೆಯನ್ನು ಮರುಪರಿಶೀಲಿಸುವಂತೆ ಮಾರ್ಚ್ 11ರಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಪ್ರಸ್ತುತ ಈ ತೀರ್ಪಿನ ಅನ್ವಯಿಸುವಿಕೆಯ ಕುರಿತು ಸುಪ್ರೀಂ ಕೋರ್ಟ್ನಿಂದ ‘ಸ್ಪಷ್ಟನೆಗಳು ಮತ್ತು ಸೂಕ್ತ ನಿರ್ದೇಶನಗಳನ್ನು’ ಕೇಂದ್ರ ಸರ್ಕಾರ ಸೋಮವಾರ ಕೋರಿದೆ.
ಅಭ್ಯರ್ಥಿಗಳ ದಾಖಲೆಗಳ ಪರಿಶೀಲನೆ ಈಗಾಗಲೇ ಪೂರ್ಣಗೊಂಡಿದ್ದು, ಸರ್ಕಾರವು ತೀರ್ಪನ್ನು ಜಾರಿಗೆ ತರಲು ಸಿದ್ಧತೆ ನಡೆಸುತ್ತಿದೆ ಎಂದು ಮೂಲಗಳು ‘indianexpress. com’ಗೆ ತಿಳಿಸಿದ ಬೆನ್ನಲ್ಲೇ DOPT ಈ ಅರ್ಜಿ ಸಲ್ಲಿಸಿದೆ.
ಈ ವಾರ ಮಸ್ಸೂರಿಯಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಆಡಳಿತ ಅಕಾಡೆಮಿಯಲ್ಲಿ CBSE-2025ರ ಬ್ಯಾಚ್ನ ಮೂಲಭೂತ ತರಬೇತಿ ಕೋರ್ಸ್ ಪ್ರಾರಂಭವಾಗುವ ಕೆಲವೇ ದಿನಗಳ ಮುಂಚಿತವಾಗಿ ಕೇಂದ್ರ ಸರ್ಕಾರವು ಈ ಸ್ಪಷ್ಟನೆ ಕೋರಿ ಅರ್ಜಿ ಸಲ್ಲಿಸಿದೆ.
ತನ್ನ ಅರ್ಜಿಯಲ್ಲಿ ಸರ್ಕಾರವು, ‘(ಕೆನೆಪದರ ಕುರಿತು) ಚಾಲ್ತಿಯಲ್ಲಿದ್ದ ನಿಯಮವನ್ನು ಬದಲಾಯಿಸಿದ ಮಾರ್ಚ್ 11ರ ತೀರ್ಪು, CBSE-2025ರ ಅಂತಿಮ ಫಲಿತಾಂಶ ಪ್ರಕಟವಾದ ಐದು ದಿನಗಳ ನಂತರ ಹೊರಬಿದ್ದಿದೆ’ ಎಂದು ತಿಳಿಸಿದೆ. ವರ್ಗವಾರು ಮೆರಿಟ್ ಮತ್ತು ಹಂಚಿಕೆ ಪಟ್ಟಿಯನ್ನು ಅಂತಿಮಗೊಳಿಸುವಲ್ಲಿ ಉಂಟಾಗುವ ಯಾವುದೇ ವಿಳಂಬವು ತರಬೇತಿ ವೇಳಾಪಟ್ಟಿ, ಬ್ಯಾಚ್ ಸಾಮರ್ಥ್ಯ, ಸಾರಿಗೆ ಮತ್ತು ಪೂರಕ ವ್ಯವಸ್ಥೆಗಳು, ಆಯಾ ಅಕಾಡೆಮಿಗಳು ನಿಗದಿಪಡಿಸಿದ ತರಬೇತಿ ಕ್ಯಾಲೆಂಡರ್, IAS ಮತ್ತು IPS ಅಧಿಕಾರಿಗಳ ಕ್ಯಾಡರ್ ಹಂಚಿಕೆ ಹಾಗೂ ಮುಂದಿನ ನೇಮಕಾತಿ ಪ್ರಕ್ರಿಯೆಗಳಿಗೆ ಹೋಲಿಸಿದರೆ ನೂತನ ಬ್ಯಾಚ್ ನ ಹಿರಿತನ ಮತ್ತು ವೇತನ ನಿಗದಿಯ ಮೇಲೆ ಸರಣಿ ಪರಿಣಾಮ ಬೀರುತ್ತದೆ ಎಂದು ಸರ್ಕಾರ ಎಚ್ಚರಿಸಿದೆ.
‘ಪೂರ್ಣಗೊಂಡಿರುವ CBSE-2025ರ ಆಯ್ಕೆ ಪ್ರಕ್ರಿಯೆಗೆ ಈ ತೀರ್ಪಿನ ನಿಯಮವನ್ನು ಹಿಂದಿನ ದಿನಾಂಕದಿಂದ ಯಾಂತ್ರಿಕವಾಗಿ ಅಥವಾ ನಿರ್ದಾಕ್ಷಿಣ್ಯವಾಗಿ ಅನ್ವಯಿಸಿದರೆ, ಅದರಿಂದ ಒಂದೇ ಪರೀಕ್ಷಾ ಚಕ್ರದ ಅಭ್ಯರ್ಥಿಗಳ ನಡುವೆಯೇ ತಾರತಮ್ಯ ಉಂಟಾಗಿ ತೀವ್ರ ಗೊಂದಲಕ್ಕೆ ಕಾರಣವಾಗಲಿದೆ’ ಎಂದು ಸರ್ಕಾರ ಹೇಳಿದೆ.
ಅರ್ಜಿ ಸಲ್ಲಿಸುವ ವೇಳೆಗೆ ಆಯ್ಕೆ ಪ್ರಕ್ರಿಯೆಯು ಬಹುತೇಕ ಪೂರ್ಣಗೊಂಡು ಪ್ರಸ್ತುತ ಸೇವಾ ಹಂಚಿಕೆಯ ಅಂತಿಮ ಹಂತದಲ್ಲಿದ್ದ CBSE-2025ರ ಪರೀಕ್ಷೆಗೆ ಮಾತ್ರ ತಮ್ಮ ಈ ಸ್ಪಷ್ಟನೆ ಮತ್ತು ಸೂಕ್ತ ನಿರ್ದೇಶನ ಕೋರುವ ಅರ್ಜಿ ಸೀಮಿತವಾಗಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. DOPT ಸಲ್ಲಿಸಿರುವ ಈ ಅರ್ಜಿಯಲ್ಲಿ, ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಮುಂದಿನ ಬ್ಯಾಚ್ಗಳಿಗೆ ಅನ್ವಯಿಸುವ ಬಗ್ಗೆ ಯಾವುದೇ ಉಲ್ಲೇಖವಿಲ್ಲ.
►ಸರಣಿ ಪರಿಣಾಮಗಳಾಗಲಿವೆ ಎಂದ ಸರ್ಕಾರ
CBSE-2025ರ ಅಂತಿಮ ಫಲಿತಾಂಶ ಪ್ರಕಟವಾದ ಐದು ದಿನಗಳ ನಂತರ ಸುಪ್ರೀಂ ಕೋರ್ಟ್ನ ಮಾರ್ಚ್ 11ರ ತೀರ್ಪು ಬಂದಿದೆ ಎಂದು ಕೇಂದ್ರ ಸರ್ಕಾರ ವಾದಿಸಿದೆ. ವರ್ಗವಾರು ಮೆರಿಟ್ ಮತ್ತು ಹಂಚಿಕೆ ಪಟ್ಟಿಯನ್ನು ಅಂತಿಮಗೊಳಿಸಲು ವಿಳಂಬವಾದರೆ ತರಬೇತಿಯಿಂದ ಹಿಡಿದು ಹೊಸ ಬ್ಯಾಚ್ ನ ಹಿರಿತನ ಮತ್ತು ವೇತನ ನಿಗದಿಯವರೆಗೆ ಪ್ರತಿಯೊಂದರ ಮೇಲೆಯೂ ಸರಣಿ ಪರಿಣಾಮ ಬೀರುತ್ತದೆ ಎಂದು ಸರ್ಕಾರ ಎಚ್ಚರಿಸಿದೆ.
ಹಲವೆಡೆ ಮೀಸಲಾತಿ ವಿರೋಧಿ ಪ್ರತಿಭಟನೆಗಳು ನಡೆಯುತ್ತಿರುವ ಬೆನ್ನಲ್ಲೇ ಹಾಗೂ ಪ್ರಮುಖ ವಿಧಾನಸಭಾ ಚುನಾವಣೆಗಳಿಗೆ ಮುನ್ನವೇ ಸರ್ಕಾರದ ಈ ನಡೆ ಬಂದಿದೆ.
OBC ವರ್ಗದ ಕೆನೆಪದರ ಮಾನದಂಡಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 1993ರ ಅಧಿಕೃತ ಜ್ಞಾಪಕ ಪತ್ರಕ್ಕೆ ಸ್ಪಷ್ಟನೆ ನೀಡಲು DOPT 2004ರ ಅಕ್ಟೋಬರ್ 14ರಂದು ಪತ್ರ ಬರೆದಿತ್ತು. 1993ರ ಆದೇಶದಲ್ಲಿ ಕೆನೆಪದರ ಸ್ಥಿತಿಯನ್ನು ನಿರ್ಧರಿಸಲು ಸಂಬಳ ಮತ್ತು ಕೃಷಿ ಮೂಲದ ಆದಾಯವನ್ನು ಆದಾಯ/ಆಸ್ತಿ ಪರೀಕ್ಷೆಯಿಂದ ಹೊರಗಿಡಲಾಗಿತ್ತು. 2004ರ ಸ್ಪಷ್ಟನೆ ಪ್ರಕಾರ, ಸಾರ್ವಜನಿಕ ವಲಯದ ಉದ್ಯಮಗಳು ಮತ್ತು ಖಾಸಗಿ ವಲಯದ ಉದ್ಯೋಗಿಗಳ ಸಂಬಳದ ಆದಾಯವನ್ನೂ ಕೆನೆಪದರ ಲೆಕ್ಕಾಚಾರದ ಮಾನದಂಡವನ್ನಾಗಿ ಮಾಡಲಾಯಿತು.
ಅರ್ಜಿದಾರರ ಪ್ರಕಾರ, ಇದು ಸರ್ಕಾರಿ ನೌಕರರ ಮಕ್ಕಳು ಮತ್ತು ಪಬ್ಲಿಕ್ ಸೆಕ್ಟರ್ ಅಥವಾ ಖಾಸಗಿ ವಲಯದ ನೌಕರರ ಮಕ್ಕಳ ನಡುವೆ ತೋರಿದ ‘ಸ್ಪಷ್ಟ ತಾರತಮ್ಯ’ ಆಗಿತ್ತು.
ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ OBC ಬೆಂಬಲ ಕ್ರೋಡೀಕರಿಸಲು ಪ್ರಯತ್ನಿಸುತ್ತಿದ್ದ 2014ರವರೆಗೆ ಈ 2004ರ ಸ್ಪಷ್ಟನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದಿರಲಿಲ್ಲ. CBSE-2015ರಿಂದ (2016ರ ಬ್ಯಾಚ್ ಗೆ ಸಂಬಂಧಿಸಿದಂತೆ) ಇದನ್ನು ಕಟ್ಟುನಿಟ್ಟಾಗಿ ಅನ್ವಯಿಸಲು ಪ್ರಾರಂಭಿಸಲಾಯಿತು.
ಅಂದಿನಿಂದ, ಸಕ್ಷಮ ಪ್ರಾಧಿಕಾರಗಳು ನೀಡಿದ ಜಾತಿ ಪ್ರಮಾಣಪತ್ರಗಳನ್ನು ಹೊಂದಿದ್ದು CBSE ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದ ಸುಮಾರು 100 ಅಭ್ಯರ್ಥಿಗಳ OBC ಹಕ್ಕನ್ನು ಕೆನೆಪದರ ಕಾರಣ ನೀಡಿ DOPT ತಿರಸ್ಕರಿಸಿತ್ತು. ಅವರಲ್ಲಿ ಹೆಚ್ಚಿನವರು ಸುಪ್ರೀಂ ಕೋರ್ಟ್ ಮತ್ತು ವಿವಿಧ ಹೈಕೋರ್ಟ್ಗಳಲ್ಲಿ ಸಲ್ಲಿಸಲಾಗಿರುವ ಅರ್ಜಿಗಳಲ್ಲಿ ಕಕ್ಷಿದಾರರಾಗಿದ್ದಾರೆ.
ವಿಶೇಷವೆಂದರೆ, ಈ ಪೈಕಿ ಕೆಲವು ಅಭ್ಯರ್ಥಿಗಳು ಕೇಂದ್ರ ಸಾರ್ವಜನಿಕ ಸೇವಾ ಆಯೋಗ (UPSC) ಅಥವಾ ರಾಜ್ಯ ಸಂಸ್ಥೆಗಳು ನಡೆಸಿದ ಇತರ ಪರೀಕ್ಷೆಗಳಲ್ಲಿ OBC ಮೀಸಲಾತಿ ಸೌಲಭ್ಯವನ್ನು ಯಶಸ್ವಿಯಾಗಿ ಪಡೆದುಕೊಂಡಿದ್ದರು. ಆದರೆ CBSE ಪ್ರಕ್ರಿಯೆಯಲ್ಲಿ ಅವರ ಅರ್ಜಿಯನ್ನು ತಿರಸ್ಕರಿಸಲಾಗಿತ್ತು.
2026ರ ಮಾರ್ಚ್ 11ರಂದು ರೋಹಿತ್ ನಾಥನ್ ಎಂಬ ಅಭ್ಯರ್ಥಿಯ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಆರ್. ಮಹಾದೇವನ್ ಅವರಿದ್ದ ಪೀಠವು, OBC ಅಭ್ಯರ್ಥಿಗಳಲ್ಲಿ ಕೆನೆಪದರ ನಿರ್ಧರಿಸಲು ಆದಾಯವೊಂದೇ ಏಕೈಕ ಮಾನದಂಡವಾಗಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿತು. ‘ಕೆನೆಪದರವನ್ನು ಹೊರಗಿಡುವ ಉದ್ದೇಶವು ಒಂದೇ ಸಾಮಾಜಿಕ ವರ್ಗದ ಸಮಾನ ಸದಸ್ಯರ ನಡುವೆ ಕೃತಕ ತಾರತಮ್ಯವನ್ನು ಸೃಷ್ಟಿಸುವುದಲ್ಲ. ಒಂದೇ ರೀತಿಯ ಹಿನ್ನೆಲೆಯುಳ್ಳ OBC ಅಭ್ಯರ್ಥಿಗಳನ್ನು ಅಸಮಾನವಾಗಿ ನಡೆಸುವುದು ಕಾನೂನಾತ್ಮಕವಾಗಿ ತಪ್ಪಷ್ಟೇ ಅಲ್ಲ, ಸಂವಿಧಾನಾತ್ಮಕವಾಗಿಯೂ ಒಪ್ಪಲು ಸಾಧ್ಯವಿಲ್ಲ’ ಎಂದು ನ್ಯಾಯಾಲಯ ಹೇಳಿತ್ತು.
ಪಿಎಸ್ಯು (PSU) ಅಥವಾ ಖಾಸಗಿ ವಲಯದ ನೌಕರರ ಮಕ್ಕಳನ್ನು ಅವರ ಹುದ್ದೆಯ ಸ್ವರೂಪವನ್ನು (ಗ್ರೂಪ್ ಎ, ಬಿ, ಸಿ ಅಥವಾ ಡಿ) ಪರಿಗಣಿಸದೆ ಕೇವಲ ವೇತನದ ಆದಾಯದ ಆಧಾರದ ಮೇಲೆ ಮೀಸಲಾತಿಯಿಂದ ಹೊರಗಿಡುವುದು ‘ಒಂದೇ ರೀತಿಯ ಸ್ಥಿತಿಯಲ್ಲಿರುವ ಅಭ್ಯರ್ಥಿಗಳ ನಡುವೆ ಸ್ಪಷ್ಟ ತಾರತಮ್ಯಕ್ಕೆ ದಾರಿ ಮಾಡಿಕೊಡುತ್ತದೆ. ಇದು ಸಂವಿಧಾನದ ವಿಧಿ 14, 15 ಮತ್ತು 16ರ ಅಡಿಯಲ್ಲಿ ನೀಡಲಾಗಿರುವ ಸಮಾನತೆಯ ತತ್ವಕ್ಕೆ ವಿರುದ್ಧವಾಗಿದೆ’ ಎಂದು ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಹೇಳಿದೆ.
ತನ್ನ ತೀರ್ಪನ್ನು ಜಾರಿಗೆ ತರಲು ಸುಪ್ರೀಂ ಕೋರ್ಟ್ ನೀಡಿರುವ ಆರು ತಿಂಗಳ ಕಾಲಾವಕಾಶವು ಸೆಪ್ಟೆಂಬರ್ 11ಕ್ಕೆ ಮುಕ್ತಾಯಗೊಳ್ಳಲಿದೆ.
ಸುಪ್ರೀಂ ಕೋರ್ಟ್ ತೀರ್ಪನ್ನು ಜಾರಿಗೆ ತರಲು ಸರ್ಕಾರ ಸಂಪೂರ್ಣ ಸಿದ್ಧವಾಗಿತ್ತು ಮತ್ತು ಬಾಧಿತರಾದ ಎಲ್ಲಾ ಅಭ್ಯರ್ಥಿಗಳ ದಾಖಲೆಗಳ ಪರಿಶೀಲನೆಯೂ ಪೂರ್ಣಗೊಂಡಿತ್ತು ಎಂದು DOPT ಮೂಲಗಳು ‘indianexpress. com’ಗೆ ತಿಳಿಸಿವೆ.
ಒಂದು ವೇಳೆ ಮಾರ್ಚ್ 11ರ ತೀರ್ಪನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸಿದರೆ, ಇದರ ಪ್ರಯೋಜನವು ಮುಂದಿನ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಮಾತ್ರವಲ್ಲದೆ, ಹಿಂದಿನ ಪರೀಕ್ಷಾ ಚಕ್ರಗಳಲ್ಲಿ ಬಾಧಿತರಾದ ಅಭ್ಯರ್ಥಿಗಳಿಗೂ ಸಿಗಲಿದೆ. ಹೀಗಾಗಿ ಜಾರಿಯಾದರೆ ಕೆಲ ಅಭ್ಯರ್ಥಿಗಳ ರ್ಯಾಂಕ್ಗಳು ಮರುಪರಿಷ್ಕರಣೆಯಾಗಬಹುದು.
ತನ್ನ ಅರ್ಜಿಯಲ್ಲಿ ಕೇಂದ್ರ ಸರ್ಕಾರವು, ‘ಈ ತೀರ್ಪನ್ನು ಹಿಂದಿನ ದಿನಾಂಕದಿಂದ ಜಾರಿಗೆ ತರಬಾರದು. ಅದರಿಂದ ಈಗಾಗಲೇ ಪೂರ್ಣಗೊಂಡಿರುವ ಉನ್ನತ ಶಿಕ್ಷಣ ಸಂಸ್ಥೆಗಳ ಪ್ರವೇಶಾತಿ, ಪೂರ್ಣಗೊಂಡ ಶೈಕ್ಷಣಿಕ ವರ್ಷಗಳು, ಈಗಾಗಲೇ ನೀಡಲಾದ ಪದವಿಗಳು ಅಥವಾ ವಿದ್ಯಾರ್ಥಿಗಳ ಸ್ಥಿರ ಹಕ್ಕುಗಳಿಗೆ ಧಕ್ಕೆಯಾಗಬಾರದು ಎಂದು ಸ್ಪಷ್ಟಪಡಿಸಬೇಕು’ ಎಂದು ಸುಪ್ರೀಂ ಕೋರ್ಟ್ಗೆ ಮನವಿ ಮಾಡಿದೆ.






