ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮಂಜೂರು ಮಾಡಲು ಕೇಂದ್ರ ಹಿಂದೇಟು: ದಲಿತ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅಡ್ಡಿ

ಬೆಂಗಳೂರು, ಮೇ 6: ಭಾರತ ಸರಕಾರದ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ಕಾರ್ಯಕ್ರಮದ ಮ್ಯಾನೇಜ್‌ಮೆಂಟ್ ಕೋಟಾದಡಿ ಆಯ್ಕೆಯಾದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ಮಂಜೂರು ಮಾಡಲು ಕೇಂದ್ರ ಸರಕಾರವು ಹಿಂದೆ ಸರಿದಿದ್ದ ಕಾರಣ ಸುಮಾರು 4,254 ದಲಿತ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅಡ್ಡಿಯಾಗಿತ್ತು. ಈ ಸಂಖ್ಯೆಯು ಪ್ರಸಕ್ತ ಸಾಲಿನಲ್ಲಿ ದುಪ್ಪಟ್ಟುಗೊಂಡಿರುವುದು ಇದೀಗ ಬಹಿರಂಗವಾಗಿದೆ.
ಅಲ್ಲದೆ ಕೇಂದ್ರ ಸರಕಾರದ ಪಾಲನ್ನೂ ರಾಜ್ಯ ಸರಕಾರವೇ ಭರಿಸಲು ಮುಂದಾದಲ್ಲಿ ಹೆಚ್ಚುವರಿಯಾಗಿ ಆರ್ಥಿಕ ಪರಿಣಾಮಗಳು ಬೀರಲಿವೆ ಎಂದು ಹಿಂದಿನ ಬಿಜೆಪಿ ಸರಕಾರದಲ್ಲಿ ಆರ್ಥಿಕ ಇಲಾಖೆಯು ಅಭಿಪ್ರಾಯಿಸಿತ್ತು.
ಈ ಬಗ್ಗೆ ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಯಾವುದೇ ನಿರ್ಧಾರಗಳು ಹೊರಬಂದಿರಲಿಲ್ಲ. ಕೇಂದ್ರ ಮತ್ತು ರಾಜ್ಯ ಸರಕಾರದ ಈ ನಿರ್ಧಾರದಿಂದಾಗಿ ಕಳೆದ ಎರಡು ವರ್ಷಗಳಲ್ಲಿ ಅಂದಾಜು 4,254ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ಸೌಲಭ್ಯದಿಂದ ವಂಚಿತರಾಗಿದ್ದರು ಮತ್ತು ಹಾಸ್ಟೆಲ್ ಪ್ರವೇಶದಿಂದಲೂ ನಿರಾಕರಣೆಗೆ ಒಳಗಾಗಿದ್ದರು!
2021, 2022ರ ಅವಧಿಯಿಂದಲೂ ಈ ಪ್ರಸ್ತಾವವನ್ನು ಸಮಾಜ ಕಲ್ಯಾಣ ಇಲಾಖೆಯು ಆರ್ಥಿಕ ಇಲಾಖೆಗೆ ಸಲ್ಲಿಸುತ್ತಲೇ ಬಂದಿದೆ. ಆದರೆ ಕಳೆದ ಮೂರು ವರ್ಷಗಳಿಂದಲೂ ಮ್ಯಾನೇಜ್‌ಮೆಂಟ್ ಕೋಟಾದಡಿಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ಸೌಲಭ್ಯ ನೀಡುವ ವಿಷಯವು ಇತ್ಯರ್ಥಗೊಂಡಿಲ್ಲ. ಅಲ್ಲದೆ ಮ್ಯಾನೇಜ್‌ಮೆಂಟ್ ಕೋಟಾದ ವಿದ್ಯಾರ್ಥಿಗಳು ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕೆ ಅರ್ಹತೆ ಪಡೆಯದೇ ಇರುವ ಕಾರಣ ಅವರಿಗೂ ವಿದ್ಯಾರ್ಥಿ ನಿಲಯದಲ್ಲಿಯೂ ಪ್ರವೇಶ ಕಲ್ಪಿಸಿಲ್ಲ. ಈ ಕುರಿತು ‘the-file.in’, 260 ಪುಟಗಳನ್ನೊಳಗೊಂಡ ಸಮಗ್ರ ಕಡತವನ್ನು ಆರ್‌ಟಿಐ ಅಡಿಯಲ್ಲಿ ಪಡೆದುಕೊಂಡಿದೆ.
ಏನದು ಯೋಜನೆ?: ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಪಿಯುಸಿ ಹಾಗೂ ನಂತರದ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪ.ಜಾತಿ ವಿದ್ಯಾರ್ಥಿಗಳಿಗೆ ಕೇಂದ್ರ ಪುರಸ್ಕೃತ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ಕಾರ್ಯಕ್ರಮವು ಜಾರಿಯಲ್ಲಿದೆ. ಕೇಂದ್ರ ಸರಕಾರವು ಶೇ. 60 ಮತ್ತು ರಾಜ್ಯ ಸರಕಾರವು ಶೇ. 40ರ ಅನುಪಾತದಲ್ಲಿ ಈ ಯೋಜನೆಯು ಅನುಷ್ಠಾನಗೊಂಡಿದೆ.
ಈ ಸಂಬಂಧ ಕೇಂದ್ರ ಸರಕಾರವು ಮಾರ್ಗಸೂಚಿಗಳನ್ನು ಹೊರಡಿಸಿತ್ತು. 2020-21ರ ಪೂರ್ವದಲ್ಲಿ ಮ್ಯಾನೇಜ್‌ಮೆಂಟ್ ಕೋಟಾದಡಿ ದಾಖಲಾಗಿದ್ದ ವಿದ್ಯಾರ್ಥಿಗಳಿಗೆ ಇಲಾಖೆಯಿಂದ ವಿದ್ಯಾರ್ಥಿ ವೇತನ ಮಂಜೂರಾಗಿತ್ತು. ಅಲ್ಲದೆ ಅವರ ಕೋರ್ಸ್ ಮುಗಿಯುವವರೆಗೂ ಅವರು ವಿದ್ಯಾರ್ಥಿ ವೇತನಕ್ಕೆ ಅರ್ಹತೆ ಪಡೆದಿದ್ದರು. ಆದರೆ 2020-21ನೇ ಸಾಲಿನಿಂದ ಮ್ಯಾನೇಜ್‌ಮೆಂಟ್ ಕೋಟಾದಡಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿದ್ದ ವಿದ್ಯಾರ್ಥಿಗಳು ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕೆ ಅರ್ಹತೆ ಪಡೆದಿರಲಿಲ್ಲ.
2018-19, 2019-20ನೇ ಸಾಲಿನಲ್ಲಿ ಮ್ಯಾನೇಜ್‌ಮೆಂಟ್ ಕೋಟಾದಡಿ ದಾಖಲಾಗಿದ್ದ ವಿದ್ಯಾರ್ಥಿಗಳಿಗೆ ಅವರ ವ್ಯಾಸಂಗ ಮುಗಿಯುವವರೆಗೆ ವಿದ್ಯಾರ್ಥಿ ವೇತನ ಮಂಜೂರಾತಿಗೆ ಸಂಬಂಧಿಸಿದಂತೆ ಸರಕಾರದಿಂದ ಪ್ರತ್ಯೇಕ ಆದೇಶಗಳನ್ನು ಹೊರಡಿಸಲಾಗಿತ್ತು. ಈ ಆದೇಶಗಳ ಪ್ರಕಾರ ಮ್ಯಾನೇಜ್‌ಮೆಂಟ್ ಕೋಟಾದಡಿ ಪ್ರವೇಶ ಪಡೆದಿದ್ದರೂ ಸಹ ಅಂತಹ ಕೋರ್ಸ್‌ಗಳಿಗೆ ಸರಕಾರವು ಸರಕಾರಿ ಸೀಟುಗಳಿಗೆ ನಿಗದಿ ಮಾಡಿದ್ದ ಶುಲ್ಕಗಳನ್ನು ಮಾತ್ರ ಮಂಜೂರು ಮಾಡಲು ಸೂಚಿಸಿತ್ತು.
ಇದರ ಪ್ರಕಾರ 2020-21ನೇ ಸಾಲಿನವರೆಗೂ ರಾಜ್ಯದ ಬೇಡಿಕೆಯಂತೆ ತನ್ನ ಪಾಲಿನ ಶೇ. 60ರಷ್ಟು ಹಣವನ್ನು ಕೇಂದ್ರವು ರಾಜ್ಯದ ಖಜಾನೆಗೆ ವರ್ಗಾವಣೆ ಮಾಡುತ್ತಿತ್ತು. ರಾಜ್ಯ ತನ್ನ ಪಾಲಿನ ಮೊತ್ತವಾದ ಶೇ.40ನ್ನು ಸೇರಿಸಿ ವಿದ್ಯಾರ್ಥಿ ವೇತನ ಮಂಜೂರು ಮಾಡುತ್ತಿತ್ತು. ಆದರೆ 2021-22ನೇ ಸಾಲಿನಿಂದ ಭಾರತ ಸರಕಾರವೇ ನೇರವಾಗಿ ತನ್ನ ಪಾಲಿನ ಶೇ. 60ರಷ್ಟು ಅನುದಾನವನ್ನು ವಿದ್ಯಾರ್ಥಿಯ ಖಾತೆಗೆ ಜಮಾ ಮಾಡುತ್ತಿದೆ.
ಕೇಂದ್ರದಿಂದಲೇ ಅರ್ಜಿ ತಿರಸ್ಕೃತ
ಈ ಹಿನ್ನೆಲೆಯಲ್ಲಿ ಭಾರತ ಸರಕಾರವು ಪ್ರತಿಯೊಂದು ವಿದ್ಯಾರ್ಥಿಯ ಅರ್ಜಿಯನ್ನು ಎನ್‌ಎಸ್ಪಿ ತಂತ್ರಾಂಶದಲ್ಲಿ ಮರು ಪರಿಶೀಲಿಸುತ್ತಿತ್ತು. ನಂತರ ವಿದ್ಯಾರ್ಥಿ ವೇತನ ಮಂಜೂರು ಮಾಡುತ್ತಿತ್ತು. ಈ ಪದ್ಧತಿಯಲ್ಲಿ ಮ್ಯಾನೇಜ್‌ಮೆಂಟ್ ಕೋಟಾದಡಿ ಸೀಟು ಪಡೆದ ವಿದ್ಯಾರ್ಥಿಗೆ ರಾಜ್ಯ ಸರಕಾರವು ಒಂದು ವೇಳೆ ವಿದ್ಯಾರ್ಥಿ ವೇತನ ಮಂಜೂರು ಮಾಡಿದರೂ ಸಹ ಕೇಂದ್ರ ಸರಕಾರವು ಅಂತಹ ಪ್ರಕರಣಗಳನ್ನು ತಿರಸ್ಕರಿಸುತ್ತದೆ.
ಕಳೆದ 2 ವರ್ಷಗಳಿಂದ ಒಟ್ಟಾರೆಯಾಗಿ 4,254 ವಿದ್ಯಾರ್ಥಿಗಳು ಮ್ಯಾನೇಜ್‌ಮೆಂಟ್ ಕೋಟಾದಡಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿದ್ದರು. ಇದರ ಪ್ರಕಾರ ಒಟ್ಟು ಮೊತ್ತ 13,21,87,437 ರೂ.ಗಳಾಗುತ್ತವೆ. ಈ ಪ್ರಸ್ತಾವ ಪ್ರಕಾರ ವಾರ್ಷಿಕವಾಗಿ 13.00 ಕೋಟಿ ರೂ.ಗಳಿಂದ 15.00 ಕೋಟಿ ರೂ.ವರೆಗೆ ರಾಜ್ಯ ತನ್ನ ಪಾಲಿನಲ್ಲಿಯೇ ಪೂರ್ಣ ಅನುದಾನ ಭರಿಸಬೇಕಿದೆ. ಆದರೆ 2020-21 ಹಾಗೂ 2021-22ನೇ ಸಾಲಿನಲ್ಲಿ ಮ್ಯಾನೇಜ್‌ಮೆಂಟ್ ಕೋಟಾದಡಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ತಿರಸ್ಕರಿಸಿರುವುದು ಕಡತದ ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ. ಇದನ್ನು ಪ್ರಶ್ನಿಸಿರುವ ಅನೇಕ ಕಾಲೇಜುಗಳು ಮ್ಯಾನೇಜ್‌ಮೆಂಟ್ ಶುಲ್ಕವನ್ನು ಪಾವತಿಸಬೇಕು ಎಂದು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿಗಳನ್ನೂ ಸಲ್ಲಿಸಿರುವುದು ಗೊತ್ತಾಗಿದೆ.
4,254 ದಲಿತ ವಿದ್ಯಾರ್ಥಿಗಳಿಗೆ ತೊಂದರೆ
ಕೇಂದ್ರ ಸರಕಾರವು ಇತ್ತೀಚೆಗೆ ಹೊರಡಿಸಿರುವ ನಿರ್ದೇಶನದ ಪ್ರಕಾರ 2020-21ನೇ ಸಾಲಿನಿಂದ ಕಡುಬಡತನದ ಪರಿಶಿಷ್ಟ ಜಾತಿಯ ಕಾಲೇಜು ಹಂತದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮಂಜೂರಾಗಿಲ್ಲ. ಮ್ಯಾನೇಜ್‌ಮೆಂಟ್ ಕೋಟಾದಡಿಯಲ್ಲಿ ಪ್ರವೇಶ ಪಡೆದಿರುವ ಸುಮಾರು 4,254 ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಇದಕ್ಕಾಗಿ ಅಗತ್ಯವಿರುವ 13.50 ಕೋಟಿ ರೂ.ಗಳನ್ನು ಎಸ್ಸಿಎಸ್ಪಿಯ ವಿಡಿಪಿಯಲ್ಲಿ ಒದಗಿಸಿಕೊಂಡು ಅನುದಾನ ಬಿಡುಗಡೆ ಮಾಡಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿತ್ತು.
ರಾಜ್ಯದಿಂದಲೇ ಶೇ.100ರಷ್ಟು ಪಾವತಿಗೆ ಕೋರಿಕೆ
‘ಪ್ರತೀ ವರ್ಷ ಅಂದಾಜು 4,500ರಿಂದ 5,000 ವಿದ್ಯಾರ್ಥಿಗಳು ಮ್ಯಾನೇಜ್‌ಮೆಂಟ್ ಕೋಟಾದಡಿ ಪ್ರವೇಶ ಪಡೆಯುತ್ತಿದ್ದಾರೆ. ಈ ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿ, ನಿರ್ವಹಣೆ ವೆಚ್ಚವನ್ನು ಪಾವತಿಸಲು ವಾರ್ಷಿಕವಾಗಿ 15.00 ಕೋಟಿ ರೂ. ಅವಶ್ಯಕತೆ ಇದೆ. ಕೇಂದ್ರ ಸರಕಾರವು ಮ್ಯಾನೇಜ್‌ಮೆಂಟ್ ಕೋಟಾ ವಿದ್ಯಾರ್ಥಿಗಳಿಗೆ ಯಾವುದೇ ವಿದ್ಯಾರ್ಥಿ ವೇತನ ಮಂಜೂರು ಮಾಡದ ಕಾರಣ ಈ 4,254 ಅರ್ಜಿಗಳನ್ನು ಶೇ.60ರ ಪಾವತಿಗಾಗಿ ಕೇಂದ್ರ ಸರಕಾರಕ್ಕೆ ವರ್ಗಾಯಿಸಲು ಸಾಧ್ಯವಿಲ್ಲ. ಈ ಎಲ್ಲಾ ವಿದ್ಯಾರ್ಥಿಗಳಿಗೆ ರಾಜ್ಯ ಸರಕಾರವೇ ಶೇ.100ರಷ್ಟು ವಿದ್ಯಾರ್ಥಿ ವೇತನವನ್ನು ಪಾವತಿಸಬೇಕು. ಇದಕ್ಕಾಗಿ ಹೆಚ್ಚುವರಿಯಾಗಿ 15.00 ಕೋಟಿ ರೂ.ಗಳನ್ನು ಆರ್ಥಿಕ ಇಲಾಖೆಯಿಂದ ಹಂಚಿಕೆ ಮಾಡಿಸಿಕೊಳ್ಳಬೇಕಿದೆ ಎಂದು ಪ್ರಸ್ತಾವದಲ್ಲಿ ಸಮಾಜ ಕಲ್ಯಾಣ ಇಲಾಖೆಯು ಕೋರಿತ್ತು.
ಹಾಸ್ಟೆಲ್‌ಗಳಿಗೂ ಪ್ರವೇಶ ಕಲ್ಪಿಸಿಲ್ಲ
ಅಲ್ಲದೆ ಮ್ಯಾನೇಜ್‌ಮೆಂಟ್ ಕೋಟಾದ ವಿದ್ಯಾರ್ಥಿಗಳು ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕೆ ಅರ್ಹತೆ ಪಡೆಯದೇ ಇರುವ ಕಾರಣ ಅವರನ್ನು ವಿದ್ಯಾರ್ಥಿ ನಿಲಯದಲ್ಲಿಯೂ ಪ್ರವೇಶ ಕಲ್ಪಿಸಿರಲಿಲ್ಲ. ಒಂದು ವೇಳೆ ಎಲ್ಲಾ 5,000 ವಿದ್ಯಾರ್ಥಿಗಳು ಇಲಾಖೆಯ ವಿದ್ಯಾರ್ಥಿ ನಿಲಯಗಳಲ್ಲಿಯೇ ಪ್ರವೇಶ ಪಡೆದಲ್ಲಿ 15.00 ಕೋಟಿ ವಿದ್ಯಾರ್ಥಿ ವೇತನದ ಮೊತ್ತದ ಜತೆಗೆ ಇಬಿಎಲ್ ಲೆಕ್ಕ ಶೀರ್ಷಿಕೆಯಡಿ ಹೆಚ್ಚುವರಿಯಾಗಿ 8.5 ಕೋಟಿ ರು ಅವಶ್ಯವಾಗಿರುತ್ತದೆ ಎಂದು ಪ್ರಸ್ತಾವದಲ್ಲಿ ಕೋರಿತ್ತು. ಇದು ಮುಂದಿನ ಆರ್ಥಿಕ ವರ್ಷಗಳಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ ಎಂದೂ ವಿವರಿಸಿತ್ತು.







