ಶಾಲೆಯಲ್ಲಿ ChatGPT ನಿಷೇಧ; ಉದ್ಯೋಗಾಕಾಂಕ್ಷಿಗಳ ನೆರವಿಗೆ ಸ್ವಂತ AI ತಂತ್ರಜ್ಞಾನ ರೂಪಿಸಿದ 17 ವರ್ಷದ ವಿದ್ಯಾರ್ಥಿನಿ!

ಸಾಂದರ್ಭಿಕ ಚಿತ್ರ (AI)
‘ರಾಹಾ’ ಎಂಬ ಅವರ ವೇದಿಕೆಯು, ನರ-ವೈವಿಧ್ಯಮಯ (neurodivergent) ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗದ ಜಾಹೀರಾತುಗಳನ್ನು ಮೌಲ್ಯಮಾಪನ ಮಾಡಲು ಸಹಾಯ ಮಾಡುತ್ತದೆ.
ಅಮೆರಿಕದ ಪ್ರತಿಷ್ಠಿತ ಪ್ರೌಢಶಾಲೆಯೊಂದರ 17 ವರ್ಷದ ವಿದ್ಯಾರ್ಥಿನಿ ನವ್ಯ ತುಟೇಜಾ ಶೈಕ್ಷಣಿಕ ವಾತಾವರಣದಲ್ಲಿ ChatGPT ಯಂತಹ ಸಾಧನಗಳನ್ನು ನಿರ್ಬಂಧಿಸಲಾಗಿದ್ದರೂ ಒಂದು AI ಸ್ಟಾರ್ಟಪ್ ಅನ್ನು ರೂಪಿಸಿದ್ದಾರೆ. ‘ರಾಹಾ’ ಎಂಬ ಅವರ ವೇದಿಕೆಯು, ನರ-ವೈವಿಧ್ಯಮಯ (neurodivergent) ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗದ ಜಾಹೀರಾತುಗಳನ್ನು ಮೌಲ್ಯಮಾಪನ ಮಾಡಲು ಸಹಾಯ ಮಾಡುತ್ತದೆ. ಇದು ಈಗಾಗಲೇ 1000ಕ್ಕೂ ಹೆಚ್ಚು ಬಳಕೆದಾರರನ್ನು ಮತ್ತು 20,000 ಉದ್ಯೋಗದ ಜಾಹೀರಾತುಗಳನ್ನು ತನ್ನತ್ತ ಸೆಳೆದಿದೆ.
AI ಬಗ್ಗೆ ತೀವ್ರ ಆಸಕ್ತಿ ಹೊಂದಿರುವ ಹದಿಹರೆಯದವರಿಗೆ ಶಾಲೆಯಲ್ಲಿ ChatGPT ಮೇಲಿನ ನಿಷೇಧವು ಒಂದು ಅಡಚಣೆಯಂತೆ ತೋರಬಹುದು. ಆದರೆ ನವ್ಯ ತುಟೇಜಾ ಅವರಿಗೆ ಇದು ವಿಭಿನ್ನ ಅನುಭವವಾಯಿತು. ವರ್ಜೀನಿಯದ ‘ಥಾಮಸ್ ಜೆಫರ್ಸನ್ ಹೈಸ್ಕೂಲ್ ಫಾರ್ ಸೈನ್ಸ್ ಆಂಡ್ ಟೆಕ್ನಾಲಜಿ’ಯ 17 ವರ್ಷದ ವಿದ್ಯಾರ್ಥಿನಿ ನವ್ಯ ಇದೀಗ ‘ರಾಹಾ’ ಎಂಬ ಉಚಿತ AI-ಚಾಲಿತ ವೇದಿಕೆ ಪ್ರಾರಂಭಿಸಿದ್ದಾರೆ. ನರ-ವೈವಿಧ್ಯಮಯ ಉದ್ಯೋಗಾಕಾಂಕ್ಷಿಗಳು ಉದ್ಯೋಗಕ್ಕೆ ಅರ್ಜಿ ಸಲ್ಲಿಸುವ ಮೊದಲು ಈ ಉದ್ಯೋಗ ತಮಗೆ ಸೂಕ್ತವೇ ಎಂದು ಮೌಲ್ಯಮಾಪನ ಮಾಡಲು ಸಹಾಯ ಮಾಡುವುದು ಇದರ ಉದ್ದೇಶವಾಗಿದೆ.
ವರದಿಗಳ ಪ್ರಕಾರ ಎರಡು ತಿಂಗಳುಗಳಲ್ಲಿ ಈ ವೇದಿಕೆಯು 1000ಕ್ಕೂ ಹೆಚ್ಚು ಬಳಕೆದಾರರನ್ನು ಮತ್ತು 20,000 ಉದ್ಯೋಗದ ಜಾಹೀರಾತುಗಳನ್ನು ತನ್ನತ್ತ ಸೆಳೆದುಕೊಂಡಿದೆ. ನವ್ಯ ಅವರು ತಮ್ಮ ತಾಯಿಯಿಂದ ಈ ಪರಿಕಲ್ಪನೆಯನ್ನು ಪಡೆದಿದ್ದರು. ಉದ್ಯೋಗದ ಜಾಹೀರಾತುಗಳ ಕುರಿತು ಅವರು ಗಮನಿಸಿದ ವಿಷಯಗಳಿಂದ ಮೂಡಿಬಂದಿದೆ. ಇಂತಹ ಜಾಹೀರಾತುಗಳು ಸಾಮಾನ್ಯವಾಗಿ ಉದ್ಯೋಗದಾತರ ನಿರೀಕ್ಷೆಗಳ ಬಗ್ಗೆ ತಿಳಿಸುತ್ತವೆಯೇ ಹೊರತು ನೈಜ ಕೆಲಸದ ಅನುಭವ ಹೇಗಿರಬಹುದು ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿ ನೀಡುವುದಿಲ್ಲ.
‘ರಾಹಾ’ ವೇದಿಕೆಯು ವಿವಿಧ ಮಾನದಂಡಗಳ ಆಧಾರದ ಮೇಲೆ ಉದ್ಯೋಗದ ಜಾಹೀರಾತುಗಳಿಗೆ ಅಂಕಗಳನ್ನು ನೀಡುವ ಮೂಲಕ ಉದ್ಯೋಗಾಕಾಂಕ್ಷಿಗಳು ಅರ್ಜಿ ಸಲ್ಲಿಸಲು ಗಂಟೆಗಟ್ಟಲೆ ಸಮಯ ವ್ಯಯಿಸುವ ಮುನ್ನವೇ ಆ ಹುದ್ದೆಯ ಬಗ್ಗೆ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುವಂತೆ ಮಾಡುತ್ತದೆ.
ನವ್ಯ ಅವರ ಶಾಲೆಯಲ್ಲಿ ChatGPT, Claude ಮತ್ತು ಸಮಾನ ಸಾಧನಗಳ ಬಳಕೆಯನ್ನು ನಿರ್ಬಂಧಿಸಲಾಗಿದೆ. “ಶಾಲೆಯಲ್ಲಿ ಅದನ್ನು ಬಳಸುವ ಪ್ರಮಾಣ ಬಹಳ ಕಡಿಮೆಯಾಗಿದೆ. ಹೀಗಾಗಿ ಕಿರಿಕಿರಿಯಾದರೂ ಒಳ್ಳೆಯದೇ ಆಯಿತು” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ನವ್ಯಾ ತಮ್ಮ ಶಾಲೆಯ AI ಕ್ಲಬ್ ನ ಅಧ್ಯಕ್ಷರಾಗಿದ್ದಾರೆ. ಆದರೆ ಪರೀಕ್ಷೆಗೆ ತಯಾರಿ ನಡೆಸುವಾಗ ಮತ್ತು ಸ್ವಂತ ಕಲಿಕಾ ಪ್ರಕ್ರಿಯೆಯಿಂದ AI ಅನ್ನು ದೂರ ಇಟ್ಟಿರುವುದಾಗಿ ಅವರು ಹೇಳಿದ್ದಾರೆ.
‘ರಾಹಾ’ದ ಮೂಲ ಅಲ್ಗಾರಿದಂ ಅನ್ನು ಸ್ವತಃ ಬರೆದರು ಮತ್ತು ವೆಬ್ಸೈಟ್ ವಿನ್ಯಾಸವನ್ನು ಸುಧಾರಿಸುವಂತಹ ಯಾಂತ್ರಿಕ ಕೆಲಸಗಳಿಗೆ ಮಾತ್ರ AI ಬಳಸಿದ್ದಾರೆ. “AI ಅನ್ನು ನಿಷೇಧಿಸುವುದು ಪರಿಹಾರವಲ್ಲ. ಅದನ್ನು ಸರಿಯಾದ ರೀತಿಯಲ್ಲಿ ನಿಯಂತ್ರಿಸಬೇಕು” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ರಾಹಾ ಅವರ ಉದ್ಯೋಗ ಟೂಲ್ ಅನ್ನು raaha.ai ವೆಬ್ಸೈಟ್ ನಲ್ಲಿ ಉಚಿತವಾಗಿ ಬಳಸಬಹುದು. ಇದು ನವ್ಯ ಅವರ ಏಕೈಕ ಯೋಜನೆಯಲ್ಲ. ಇದಕ್ಕೆ ಮೊದಲು ಅವರು ‘ಲೆಜಿಬಿಲ್’ ಎಂಬ ಸಾಧನವನ್ನೂ ಸಿದ್ಧಪಡಿಸಿದ್ದಾರೆ. ವಿಶೇಷ ಚೇತನ ಮಕ್ಕಳಿಗಾಗಿ IEP ಮತ್ತು 504 ಪ್ಲಾನ್ ಎಂಬ ಕಾನೂನಾತ್ಮಕ ಮತ್ತು ತಾಂತ್ರಿಕ ದಾಖಲೆಗಳನ್ನು ಸಿದ್ಧಪಡಿಸಲಾಗುತ್ತದೆ. ಇವುಗಳಲ್ಲಿ ಬಳಸುವ ಭಾಷೆ ತುಂಬಾ ಕಠಿಣವಾಗಿರುತ್ತದೆ ಮತ್ತು ಪೋಷಕರಿಗೆ ಸುಲಭವಾಗಿ ಅರ್ಥವಾಗುವುದಿಲ್ಲ. ಅವರು ರಚಿಸಿದ Legible ಎಂಬ ಸಾಧನವು ಈ ಕಠಿಣ ಭಾಷೆಯನ್ನು ಪೋಷಕರಿಗೆ ತಿಳಿಯುವಂತಹ ಸಾಮಾನ್ಯ ಭಾಷೆಗೆ ಪರಿವರ್ತಿಸುತ್ತದೆ. ಸಾಮಾನ್ಯವಾಗಿ ChatGPTಯಂತಹ AI ತಂತ್ರಜ್ಞಾನಗಳು ದೊಡ್ಡ ದಾಖಲೆಗಳನ್ನು ಸುಲಭವಾಗಿ ಸಂಕ್ಷಿಪ್ತಗೊಳಿಸುತ್ತವೆ. ಇದರಿಂದ ಪೋಷಕರಿಗೆ ಆ ಮಾಹಿತಿ ಎಷ್ಟು ನಿಜ ಎಂದು ಪರಿಶೀಲಿಸಲು ಕಷ್ಟವಾಗುತ್ತದೆ. ಈ ಹೊಸ ಸಾಧನವು ಕೇವಲ ಭಾಷೆ ಸರಳಗೊಳಿಸುವುದು ಮಾತ್ರವಲ್ಲದೆ, ಪೋಷಕರು ನಂಬಿಕೆಯಿಂದ ಮಾಹಿತಿ ಮರುಪರಿಶೀಲಿಸಲು ಬೇಕಾದ ಮೂಲ ಆಧಾರಗಳನ್ನು ಹಾಗೆ ಉಳಿಸಿಕೊಳ್ಳುತ್ತದೆ.
ನವ್ಯಾ ಅವರನ್ನು ‘ಟ್ರೇಸೇಬಲ್ ಅಕ್ಸೆಸಿಬಿಲಿಟಿ’ ಎಂಬ ಪ್ರಸ್ತಾವಿತ ಪಾರದರ್ಶಕತೆಯ ಮಾನದಂಡ ರೂಪಿಸಲು ಕಾರಣವಾಯಿತು. ಈ ಬಗ್ಗೆ ಅವರು ರಾಜ್ಯದ ಶಾಸಕರು ಮತ್ತು ಅಮೆರಿಕ ಶಿಕ್ಷಣ ಇಲಾಖೆ ಜೊತೆಗೆ ಚರ್ಚಿಸಿದ್ದಾರೆ. ಇನ್ನೂ ಹೈಸ್ಕೂಲ್ನಲ್ಲಿರುವ ಒಬ್ಬ ವಿದ್ಯಾರ್ಥಿನಿಗೆ ಹೋಲಿಸಿದರೆ ಅವರ ಈ ವಿಧಾನವು ಆಶ್ಚರ್ಯಕರವಾದಷ್ಟು ಪ್ರಾಯೋಗಿಕವಾಗಿದೆ: ಒಂದು ಸಮಸ್ಯೆಯನ್ನು ಕಂಡುಹಿಡಿಯುವುದು, ಅದಕ್ಕೊಂದು ಪರಿಹಾರ ರೂಪಿಸುವುದು, ನಂತರ ಅದನ್ನು ನಿಜವಾಗಿ ಬಳಸುವ ಅಥವಾ ನಿಯಂತ್ರಿಸುವ ಜನರನ್ನು ಸಂಪರ್ಕಿಸುವುದು.
ನವ್ಯಾ ಅವರು ‘ರಾಹಾ’ವನ್ನು ಸ್ವಂತ ಸಂಪನ್ಮೂಲಗಳೊಂದಿಗೆ ಪ್ರಾರಂಭಿಸಿದರು ಮತ್ತು ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸುವ ಹಂತದಲ್ಲಿ ಅದನ್ನು ಉಚಿತವಾಗಿಯೇ ಮುಂದುವರಿಸಿದ್ದಾರೆ. ಭವಿಷ್ಯದಲ್ಲಿ ಉದ್ಯೋಗದಾತರು ಮತ್ತು ಉದ್ಯೋಗಿಗಳಿಗೆ ಸಂಬಂಧಿಸಿದ ಸಂಸ್ಥೆಗಳು ಈ ವೇದಿಕೆಯನ್ನು ಬಳಸಲು ಅಥವಾ ತಮ್ಮ ಉದ್ಯೋಗದ ಜಾಹೀರಾತುಗಳನ್ನು ಉತ್ತಮಪಡಿಸಲು ಹಣ ಪಾವತಿಸುವಂತಹ ವ್ಯವಹಾರ ಮಾದರಿಯನ್ನು ಅವರು ಅಳವಡಿಸಿಕೊಳ್ಳಬಹುದು.
ಕಾಲೇಜು ಶಿಕ್ಷಣವೂ ಅವರ ಯೋಜನೆಯ ಭಾಗವಾಗಿದೆ. ಆದರೆ ‘ರಾಹಾ’ದ ಬೆಳವಣಿಗೆ ಮುಂದುವರಿದರೆ ಕಂಪನಿಯನ್ನು ಪೂರ್ಣಕಾಲಿಕವಾಗಿ ನಡೆಸುವ ಬಗ್ಗೆಯೂ ಯೋಚಿಸುವುದಾಗಿ ಅವರು ಹೇಳಿದ್ದಾರೆ.






