ಮಕ್ಕಳ ಮೊಬೈಲ್ ಪ್ರೀತಿ ಕಣ್ಣಿಗೆ ಅಪಾಯ; ವೈದ್ಯರು ನೀಡಿರುವ ಸಲಹೆಗಳೇನು?

ಸಾಂದರ್ಭಿಕ ಚಿತ್ರ | Photo Credit : magnific.com
ಮಕ್ಕಳಲ್ಲಿ ಹೆಚ್ಚಾಗುತ್ತಿರುವ ಸ್ಕ್ರೀನ್ ಟೈಮ್ನಿಂದಾಗಿ ಮಯೋಪಿಯ ಅಭಿವೃದ್ಧಿಯಾಗಿರುವ ಬಗ್ಗೆ ಎಚ್ಚರಿಸಿರುವ ರಾಜಾಜಿ ನಗರದ ನಾರಾಯಣ ನೇತ್ರಾಲದಯದ ಮಕ್ಕಳ ನೇತ್ರತಜ್ಞರಾದ ಡಾ. ವಸುಧಾ ಕೆಮ್ಮಣ್ಣು ಅವರು ಪೋಷಕರು ಮತ್ತು ಮಕ್ಕಳು ತಮ್ಮ ದೈನಂದಿನ ಜೀವನಶೈಲಿಯಲ್ಲಿ ತರಬಹುದಾದ ಬದಲಾವಣೆಗಳನ್ನು ಸೂಚಿಸಿದ್ದಾರೆ.
ಆನ್ಲೈನ್ ತರಗತಿಗಳಿಂದ ತೊಡಗಿ ಕಾರ್ಟೂನ್ ಗಳು ಮತ್ತು ಮೊಬೈಲ್ ಗೇಮ್ ಗಳವರೆಗೆ ಪರದೆಯ ಬಳಕೆ ಮಕ್ಕಳ ದೈನಂದಿನ ಜೀವನದ ಪ್ರಮುಖ ಭಾಗವಾಗಿದೆ. ತಂತ್ರಜ್ಞಾನವು ಕಲಿಕೆಯನ್ನು ಸುಲಭ ಮತ್ತು ಆಸಕ್ತಿದಾಯಕವಾಗಿಸಿದ್ದರೂ. ಆರೋಗ್ಯಕ್ಕೆ ಸಂಬಂಧಿಸಿದ ಹೊಸ ಸಮಸ್ಯೆಯನ್ನು ಮುನ್ನೆಲೆಗೆ ತಂದಿದೆ. ಅದೇ ಮಕ್ಕಳಲ್ಲಿ ಮಯೋಪಿಯ (ದೂರದ ವಸ್ತುಗಳು ಮಸುಕಾಗಿ ಕಾಣುವ ಸಮೀಪ ದೃಷ್ಟಿದೋಷ) ಪ್ರಕರಣಗಳು. ಈ ನಿಟ್ಟಿನಲ್ಲಿ ಎಚ್ಚರಿಸಿರುವ ರಾಜಾಜಿ ನಗರದ ನಾರಾಯಣ ನೇತ್ರಾಲದಯದ ಮಕ್ಕಳ ನೇತ್ರತಜ್ಞರಾದ ಡಾ ವಸುಧಾ ಕೆಮ್ಮಣ್ಣು ಅವರು ಪೋಷಕರು ಮತ್ತು ಮಕ್ಕಳು ತಮ್ಮ ದೈನಂದಿನ ಜೀವನಶೈಲಿಯಲ್ಲಿ ತರಬಹುದಾದ ಬದಲಾವಣೆಗಳನ್ನು ಸೂಚಿಸಿದ್ದಾರೆ.
ಮಕ್ಕಳಿಗೆ ಅತಿಯಾದ 'ಸ್ಕ್ರೀನ್ ಟೈಮ್' (ಪರದೆಯನ್ನು ನೋಡುವ ಸಮಯ) ಏಕೆ ಹಾನಿಕಾರಕ?
ಅಧಿಕ ಸ್ಕ್ರೀನ್ ನೋಡುವಾಗ ಕಣ್ಣಿನ ಒಳಗೆ ಇರುವ ಕೆಲವು ಸ್ನಾಯುಗಳು ಹೆಚ್ಚು ಕೆಲಸ ಮಾಡಬೇಕಾಗಿ ಬರುತ್ತದೆ. ಆಗ ಅಕಾಮಡೇಶನ್ (accommodation) ಎನ್ನುವ ನಿರ್ದಿಷ್ಟ ಕಣ್ಣಿನ ಕೆಲಸ ನಡೆಯುತ್ತದೆ. ಅತೀ ಹೆಚ್ಚು ಸಮೀಪದಿಂದ ನೋಡುವ ಕೆಲಸಗಳನ್ನು ಮಾಡುವುದರಿಂದ ಅಕಾಮಡೇಶನ್ ಆಗಿ ಅದು ಬ್ರೈನ್ ಗೆ ಸಂಕೇತ ಕೊಡುತ್ತದೆ. ಸ್ವಲ್ಪ ಮಂಜು ಮಂಜಾಗಿದೆ, ಹೀಗಾಗಿ ಕಣ್ಣಿನ ಉದ್ದವನ್ನು ಹೆಚ್ಚಿಸು ಎಂದು ಸಂದೇಶ ಹೋಗುತ್ತದೆ. ಹೀಗೆ ಕ್ರಮೇಣ ಜಾಸ್ತಿ ಹತ್ತಿರ ಕೆಲಸ ಮಾಡಿದಾಗ ಅಂತಿಮವಾಗಿ ಕಣ್ಣಿನ ಉದ್ದ ಹೆಚ್ಚಾಗುತ್ತದೆ. ಕಣ್ಣು ಮುಂದಿನಿಂದ ಹಿಂದಿನವರೆಗೆ ಎಷ್ಟು ಉದ್ದವಿದೆ ಎನ್ನುವುದನ್ನು ಕಣ್ಣಿನ ಉದ್ದ (axial length) ಎನ್ನುತ್ತೇವೆ. ಹೆಚ್ಚು ಸಮೀಪದಲ್ಲಿ ಕೆಲಸ ಮಾಡಿದವರಿಗೆ ಮತ್ತು ಹೆಚ್ಚು ಸ್ಕ್ರೀನ್ ನೋಡಿದವರಿಗೆ ಬೇಗ ಬೇಗ ಉದ್ದವಾಗುತ್ತದೆ. ಒಂದು ಮಗು ಹುಟ್ಟಿದಾಗ ಕಣ್ಣಿನ ಉದ್ದ ಸರಿಸುಮಾರು 17 ಮಿಮೀ ಇರುತ್ತದೆ. ಕ್ರಮೇಣ ಉದ್ದವಾಗುವುದು ಸಾಮಾನ್ಯ ಸ್ಥಿತಿ. ಆದರೆ ಜಾಸ್ತಿ ಸ್ಕ್ರೀನ್ ಟೈಮ್ ನೋಡುವ ಮಕ್ಕಳು ಜೊತೆಗೆ ಮನೆಯಲ್ಲಿ ಈಗಾಗಲೇ ಕನ್ನಡಕ ಧರಿಸುವ ಅನುವಂಶಿಕ ಇತಿಹಾಸ ಇರುವ ಮಕ್ಕಳಿಗೆ ಕಣ್ಣಿನ ಉದ್ದ ಬೇಗನೇ ಜಾಸ್ತಿಯಾಗಿಬಿಡುತ್ತದೆ. ಕಣ್ಣಿನ ಉದ್ದ ಜಾಸ್ತಿ ಆಗುತ್ತಿದ್ದಂತೆಯೇ ಕನ್ನಡಕದ ಮೈನಸ್ ನಂಬರ್ ಜಾಸ್ತಿಯಾಗಿಬಿಡುತ್ತದೆ. ಜಾಸ್ತಿ ಸ್ಕ್ರೀನ್ ಟೈಮ್ ಇರಬಾರದು ಎಂದು ಅದಕ್ಕಾಗಿಯೇ ಸಲಹೆ ನೀಡುತ್ತೇವೆ.
ಬಾಲ್ಯದ ಸಮೀಪದೃಷ್ಟಿ ದೋಷದಲ್ಲಿ ಎರಡೂ ಕಣ್ಣುಗಳು ಸಮಾನವಾಗಿ ಬಾಧಿತವಾಗುತ್ತವೆಯೇ ಮತ್ತು ಇದಕ್ಕೆ ಕಾರಣವೇನು?
ಎರಡೂ ಕಣ್ಣಿಗೂ ಸಮಸ್ಯೆಯಾಗಬಹುದು. ಸಾಮಾನ್ಯವಾಗಿ ಒಂದೇ ರೀತಿ (symmetrical) ಇರುವುದಿಲ್ಲ. ಒಂದು ಕಣ್ಣಲ್ಲಿ ನಂಬರ್ ಮೈನಸ್ 1 ಇರಬಹುದು ಮತ್ತು ಇನ್ನೊಂದು ಕಣ್ಣಲ್ಲಿ ಮೈನಸ್ 3 ಇರಬಹುದು. ಆ ತರಹ ವ್ಯತ್ಯಾಸ ಇರಬಹುದು. ಆದರೆ ಸಾಮಾನ್ಯವಾಗಿ ಎರಡೂ ಕಣ್ಣುಗಳಿಗೂ ಬರುವಂತಹ ಸಮಸ್ಯೆಯಾಗಿರುತ್ತದೆ.
ಸಾಮಾನ್ಯ ಕನ್ನಡಕಗಳೇ ಸಾಕೇ? ಕಣ್ಣಿನ ತಪಾಸಣೆಯನ್ನು ಎಷ್ಟು ಬಾರಿ ಮಾಡಿಸಿಕೊಳ್ಳಬೇಕು?
ಮೊದಲಿಗೆ ಮಕ್ಕಳಿಗೆ ಸಮೀಪ ದೃಷ್ಟಿದೋಷವಿದೆ ಎಂದು ಗೊತ್ತಾದ ತಕ್ಷಣ ಸಾಮಾನ್ಯ ಕನ್ನಡಕವನ್ನೇ ಕೊಡಲಾಗುತ್ತದೆ. ಯಾವ ನಂಬರ್ ಇದೆ ಎಂದು ಗಮನಿಸಿ ಕೊಡಲಾಗುತ್ತದೆ. ಆದರೆ 6 ತಿಂಗಳಲ್ಲಿ ಮೈನಸ್ 1 ಇರುವುದು ಮೈನಸ್ 2 ಆದ ಪಕ್ಷದಲ್ಲಿ ಪ್ರೊಗ್ರೆಸ್ ಆಗಿದೆ. ಹಾಗಾದಾಗ ಮಯೋಪಿಯ ಕಂಟ್ರೋಲ್ ಕನ್ನಡಕಗಳನ್ನು ಕೊಡುತ್ತೇವೆ. ಮಯೋಪಿಯ ಕಂಟ್ರೋಲ್ ಗ್ಲಾಸಸ್ ಬಳಸಿ ಎಷ್ಟೋ ಮಕ್ಕಳು ಪ್ರೊಗ್ರೆಶನ್ ಹೆಚ್ಚಾಗುವುದನ್ನು ತಪ್ಪಿಸಿಕೊಂಡಿದ್ದಾರೆ. ದೋಷ ಇರುವುದು ಗೊತ್ತಾದಲ್ಲಿ ಪ್ರತಿ ಆರು ತಿಂಗಳಿಗೆ ಒಮ್ಮೆ ಕಣ್ಣಿನ ಆಸ್ಪತ್ರೆಗೆ ಬಂದು ತೋರಿಸಬೇಕಾಗುತ್ತದೆ. ಮಕ್ಕಳಿಗೆ ಕಣ್ಣಿನ ಸಮಸ್ಯೆ ಇದೆಯೇ ಇಲ್ಲವೇ, ಮೂರು ವರ್ಷದಲ್ಲಿ ಒಮ್ಮೆ ವಿವರವಾದ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳಲೇಬೇಕು. ಮತ್ತೆ ಆರು ವರ್ಷದಲ್ಲಿ ಇನ್ನೊಮ್ಮೆ ವಿವರವಾದ ಕಣ್ಣಿನ ಪರೀಕ್ಷೆ ನಡೆಸಬೇಕು. ಅದು ಬಹಳ ಮುಖ್ಯ.
ಪೋಷಕರು ಯಾವ ಎಚ್ಚರಿಕೆಯ ಲಕ್ಷಣಗಳನ್ನು ಗಮನಿಸಬೇಕು?
ಇತ್ತೀಚೆಗೆ ಮೊಬೈಲ್ ಎಲ್ಲರ ಮನೆಗೆ ಬಂದ ಮೇಲೆ ರೋಗಿಗಳನ್ನು ನೋಡುವಾಗ ಸಾಮಾನ್ಯವಾಗಿ ನಾವು ಕೇಳುವ ಪ್ರಶ್ನೆ “ಯಾವ ವಯಸ್ಸಿನಲ್ಲಿ ನಿಮ್ಮ ಮಗುವಿಗೆ ಸ್ಮಾರ್ಟ್ಫೋನ್ ತೋರಿಸಲು ಪ್ರಾರಂಭಿಸಿದ್ದೀರಿ” ಎನ್ನುವುದಾಗಿರುತ್ತದೆ. ಕೆಲವರು ಆರು ತಿಂಗಳ ಮಗುವಿಗೆ ಸ್ಮಾರ್ಟ್ ಫೋನ್ ತೋರಿಸಿ ಊಟ ಮಾಡಿಸುತ್ತಾರೆ. ಮೊದಲನೆಯದಾಗಿ ಸ್ಮಾರ್ಟ್ಫೋನ್ ಅನ್ನು ಮಕ್ಕಳ ಸಮೀಪದಿಂದ ತೆಗೆಯಬೇಕು. ದೊಡ್ಡವರು ಆಗ್ತಿದ್ದಂತೆ ಅತಿಯಾಗಿ ಸಮೀಪದ ಕೆಲಸ ಮಾಡಿಸುವುದು ನಿಲ್ಲಿಸಬೇಕು. ನಾನು ಇತ್ತೀಚೆಗೆ ಗಮನಿಸಿದ ಉದಾಹರಣೆ ನೋಡಿ. ಮಗುವಿಗೆ 9 ವರ್ಷ ಮತ್ತು 3ನೇ ತರಗತಿಯಲ್ಲಿ ಓದುತ್ತಿದೆ. ಬೆಳಿಗ್ಗೆ 8:30ಗೆ ಶಾಲೆ, 4:30ಗೆ ಮರಳಿ ಮನೆಗೆ ಬರುವುದು, 5:30ಕ್ಕೆ ಟ್ಯೂಷನ್, 7:30ಗೆ ಮನೆಗೆ ಬಂದ ಮೇಲೆ ಮತ್ತೆ ಹೋಂ ವರ್ಕ್. ಟ್ಯೂಷನ್ನಲ್ಲಿ ಹೋಂವರ್ಕ್ ಮಾಡಿಸುವುದಿಲ್ಲ. ಮನೆಗೆ ಬಂದು ಹೋಂವರ್ಕ್ ಮುಗಿಸಿ 8:30ಯಿಂದ 9ರ ನಡುವೆ ಟಿವಿ ಮತ್ತು ಮೊಬೈಲ್ ನೋಡಿಕೊಂಡು ವಿಶ್ರಾಂತಿ ಪಡೆದು ನಂತರ ನಿದ್ರೆ ಮಾಡುತ್ತಾರೆ. ಈ ನಡುವೆ ಮಗು ಹೊರಗೆ ಎಲ್ಲಿ ಆಡಿದೆ? ದೂರ ಎಲ್ಲಿ ನೋಡಿದೆ? ಎಲ್ಲಾ ಹತ್ತಿರದ ಕೆಲಸ. ಇದರಿಂದ ಮಕ್ಕಳಿಗೆ ಮಯೋಪಿಯ ಜಾಸ್ತಿ ಆಗ್ತಾ ಇದೆ.
ಪೋಷಕರು ಪಾಲಿಸಬೇಕಾದ ವಯಸ್ಸಿಗೆ ಅನುಗುಣವಾದ 'ಸ್ಕ್ರೀನ್ ಟೈಮ್' ಮಿತಿಗಳು ಯಾವುವು?
ಯಾವುದೇ ಕಣ್ಣಿನ ಸಮಸ್ಯೆ ಇಲ್ಲದವರಿಗೆ 3 ವರ್ಷದವರೆಗೆ ಸ್ಕ್ರೀನ್ ತೋರಿಸಲೇಬಾರದು. ಮೊಬೈಲ್, ಟಿವಿ ತೋರಿಸಲೇಬಾರದು. 3-5 ವರ್ಷದವರೆಗೆ ಒಂದು ಅರ್ಧ ಗಂಟೆ ತೋರಿಸಬಹುದು. 5 ವರ್ಷದ ನಂತರ 1 ಗಂಟೆಯವರೆಗೆ ಮಕ್ಕಳಿಗೆ ಸ್ಕ್ರೀನ್ ಟೈಮ್ ಇರಬಹುದು. ಮಯೋಪಿಯ ಸಮಸ್ಯೆ ಇದ್ದಲ್ಲಿ ಅರ್ಧಗಂಟೆಗಿಂತ ಕಡಿಮೆ ಸ್ಕ್ರೀನ್ ಟೈಮ್ ಎಂದು ಸಲಹೆ ನೀಡುತ್ತೇವೆ.
ದೀರ್ಘಕಾಲೀನ ಕಣ್ಣಿನ ಆರೋಗ್ಯವನ್ನು ರಕ್ಷಿಸಲು ಕುಟುಂಬಗಳು ಈಗ ಏನು ಮಾಡಬಹುದು?
ಮಕ್ಕಳಿಗೆ ಆಟವಾಡಲು ಬಿಡಬೇಕು. ಹೊರಗೆ ಉದ್ಯಾನವನ ಮೊದಲಾದೆಡೆ ತಿರುಗಾಡಬೇಕು. ಒಂದು ದಿನದಲ್ಲಿ ಅರ್ಧಗಂಟೆಗಿಂತ ಕಡಿಮೆ ಸ್ಕ್ರೀನ್ ಟೈಮ್ ಇರಬೇಕು. ಹೊರಾಂಗಣದಲ್ಲಿ 2 ಗಂಟೆಗಳ ಕಾಲ ಅಡ್ಡಾಡಿದರೆ ಉತ್ತಮ. ಯಾವಾಗಲೂ ಬೆಳಿಗ್ಗೆಯಿಂದ ಸಂಜೆಯವರೆಗೆ ಸಮೀಪದಲ್ಲಿ ಕೆಲಸ ಮಾಡುವಾಗ ಪ್ರತಿ ಅರ್ಧಗಂಟೆಗೊಮ್ಮೆ ಆಚೀಚೆ ನೊಡಬೇಕು. ಇಲ್ಲದಿದ್ದರೆ 20-20-20 ನಿಯಮ ಎನ್ನುತ್ತೇವೆ. 20 ನಿಮಿಷ ಸಮೀಪ ಕೆಲಸ ಮಾಡಿದರೆ 20 ಸೆಕೆಂಡುಗಳ ಕಾಲ 20 ಅಡಿ ದೂರದಲ್ಲಿರುವ ವಸ್ತುವೊಂದನ್ನು ನೋಡಬೇಕು. ಯಾವುದೇ ಮಗುವಿಗೆ ಸರಿಯಾಗಿ ಕಣ್ಣಿಗೆ ಸಮಸ್ಯೆಯಾಗಬಾರದು ಮತ್ತು ಉತ್ತಮ ಬೆಳವಣಿಗೆಗೆ ಉತ್ತಮ ನಿದ್ರೆ ಅವಶ್ಯಕ. ಇತ್ತೀಚೆಗೆ ಮಕ್ಕಳು ರಾತ್ರಿ 11-12 ಗಂಟೆಗೆ ಮಲಗುತ್ತಾರೆ. ಅದು ತಪ್ಪು. ನಿದ್ರೆಯ ಕೊರತೆಯಿಂದಲೂ ಮಯೋಪಿಯ ಹೆಚ್ಚಾಗಬಹುದು. ಏಕೆಂದರೆ ಮೆಲಟೊನಿನ್ ಎನ್ನುವ ಹಾರ್ಮೋನ್ ಇದೆ. ಅದು ರಾತ್ರಿ 10ರಿಂದ 10:30 ಸಮಯದಲ್ಲಿ ಬಿಡುಗಡೆಯಾಗುತ್ತದೆ. ಆದರೆ ಬಹಳ ಬೆಳಕು ಇದ್ದರೆ ಅದು ಬಿಡುಗಡೆ ಆಗುವುದಿಲ್ಲ. ಮಗುವಿಗೆ ನಿದ್ರೆ ಸರಿಯಾಗಿರುವುದಿಲ್ಲ. ಮೆಲಟೊನಿನ್ಗೂ ಮಯೋಪಿಯಗೂ ಸಂಬಂಧವಿದೆ. ಹೀಗಾಗಿ 9.30 ಹಾಗೆ ಮಲಗಿ ಬೆಳಿಗ್ಗೆ 6 ಗಂಟೆಗೆ ಎದ್ದರೆ ಉತ್ತಮ.
ಮಗುವಿನ ದೃಷ್ಟಿಯನ್ನು ರಕ್ಷಿಸಲು ನೀವು ಕೊಡುವ ಸರಳ ದೈನಂದಿನ ಸಲಹೆಗಳೇನು?
ಮೊದಲಿಗೆ ನಾವು ದೊಡ್ಡವರೂ ಇಡೀ ದಿನ ಟಿವಿ-ಮೊಬೈಲ್ ಹಿಡಿದು ಕೂರಬಾರದು. ಎಷ್ಟೋ ಜನ ಮಕ್ಕಳು “ಅಮ್ಮ ನೀನು ನೋಡ್ತೀಯ ಅದಕ್ಕೆ ನಾನೂ ನೋಡ್ತೀನಿ” ಎಂದು ಹೇಳುತ್ತಾರೆ. ಹಾಗಾಗಬಾರದು. ಮೂಲತಃ ಅಪ್ಪ-ಅಮ್ಮ ತಾವು ಚಿಕ್ಕವರಿದ್ದಾಗ ಬೆಳೆದ ರೀತಿಯಲ್ಲಿ ಮಕ್ಕಳನ್ನು ಬೆಳೆಸಬೇಕು. ಕಡಿಮೆ ಸ್ಕ್ರೀನ್, ಹೊರಗೆ 2 ಗಂಟೆಗಳ ಕಾಲ ಆಟವಾಡುವುದು ಮತ್ತು ಉತ್ತಮ ನಿದ್ರೆ, ಜಂಕ್ ಫುಡ್ ಕೂಡ ಉತ್ತಮವಲ್ಲ. ಕಣ್ಣಿನ ಆರೋಗ್ಯಕ್ಕೆ ಬಣ್ಣ-ಬಣ್ಣದ ತರಕಾರಿಗಳು ಉತ್ತಮ. ಆದರೆ ಜಾಸ್ತಿ ಕ್ಯಾರೆಟ್-ಬೀಟ್ರೂಟ್ ತಿಂದರೆ ಕಣ್ಣಿನ ಸಮಸ್ಯೆ ತಪ್ಪುತ್ತದೆ ಎನ್ನುವುದು ಮೌಢ್ಯ. ಮೂಲತಃ ಕಣ್ಣಿನ ನಂಬರ್ ಏರಬಾರದೆಂದರೆ 2 ಗಂಟೆಗಳ ಕಾಲ ಹೊರಾಂಗಣ ಆಟ. ಅರ್ಧ ಗಂಟೆ ಮಾತ್ರ ಸ್ಕ್ರೀನ್ಟೈಮ್. ಮತ್ತು 20-20-20 ನಿಯಮವನ್ನು ಅನುಸರಿಸಬೇಕಾಗುತ್ತದೆ.
ಓದುವಾಗ ಕಣ್ಣು ಮತ್ತು ಪುಸ್ತಕದ ನಡುವಿನ ಅಂತರ ಹಾಗೂ ಕುಳಿತುಕೊಳ್ಳುವ ಭಂಗಿಯನ್ನು ಸರಿಪಡಿಸಿಕೊಳ್ಳಬೇಕೇ?
ಓದುವುದು, ಬರೆಯುವುದು ಎಲ್ಲಾ ಸರಿಯಾದ ಭಂಗಿಯಲ್ಲಿ ಕುಳಿತು ಮಾಡಬೇಕು. ಬೆಳಕು ಪುಸ್ತಕದ ಮೇಲೆ ಬೀಳುವ ರೀತಿಯಲ್ಲಿ ಕುಳಿತುಕೊಂಡು ಓದುವುದು ಮತ್ತು ಬರೆಯುವುದು ಮಾಡಬೇಕು. ಪುಸ್ತಕವನ್ನು ಮುಖದ ಹತ್ತಿರ ಇಟ್ಟು ಓದಬಾರದು. 40 ಸೆಂಟಿ ಮೀಟರ್ ಅಂತರ ಇಟ್ಟುಕೊಂಡು ಓದಿದರೆ ಉತ್ತಮ. ಓದುವ ಸಮಯದಲ್ಲೂ ಪ್ರತಿ 20 ನಿಮಿಷಕ್ಕೆ 20 ಸೆಕೆಂಡುಗಳ ಕಾಲ 20 ಅಡಿ ದೂರವಿರುವ ವಸ್ತುವನ್ನು ನೋಡಬೇಕು. ಕನ್ನಡಕ ನಂಬರ್ ಇದ್ದು ಕನ್ನಡಕ ಹಾಕಿಕೊಳ್ಳದೆ ಹೆಚ್ಚು ಜಾಸ್ತಿ ಕೆಲಸ ಮಾಡಿದರೆ ತಲೆನೋವು ಬಂದೇ ಬರುತ್ತದೆ. ಸ್ಕ್ರೀನ್ ಟೈಮ್ನಲ್ಲಿ ಬೆಳಕು ಬರುತ್ತದೆಯಲ್ಲವೆ? ಆ ಬೆಳಕು ನೇರವಾಗಿ ಕಣ್ಣಿನ ಮೇಲೆ ಬೀಳುತ್ತದೆ. ಪುಸ್ತಕ ಬೆಳಕು ಹೊರಸೂಸುವುದಿಲ್ಲ. ಆದರೆ ಸ್ಕ್ರೀನ್ ಟೈಮ್ ನಲ್ಲಿ ಸ್ಪಷ್ಟವಾಗಿ ನೋಡುವ ಗಮನದ ಪ್ರಯತ್ನ ಜಾಸ್ತಿ ಬೇಕಾಗುತ್ತದೆ. ಅಂದರೆ ಕಣ್ಣಿನ ಒಳಗಿನ ಸ್ನಾಯು ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ಅದೇ ಕಾರಣದಿಂದ ಸ್ಕ್ರೀನ್ ಟೈಮ್ ಪುಸ್ತಕ ಓದುವುದಕ್ಕಿಂತ ಮಯೋಪಿಯಗೆ ಕಾರಣವೆಂದು ಎಂದು ಹೇಳಲಾಗುತ್ತದೆ.
ಹೊರಾಂಗಣದಲ್ಲಿ ಎಷ್ಟು ಸಮಯ ಕಳೆಯಲು ಶಿಫಾರಸು ಮಾಡಲಾಗುತ್ತದೆ?
ನಾವು ಚಿಕ್ಕವರಿದ್ದಾಗ ಮನೆಯಿಂದ ಹೊರಗೇ ಹೆಚ್ಚು ಸಮಯ ಇರುತ್ತಿದ್ದೆವು. ಆದರೆ ಈಗ ಹೆತ್ತವರಿಗೆ ಮಕ್ಕಳು ಮನೆಯೊಳಗೆ ಇದ್ದರೆ ಸುರಕ್ಷಿತ ಎನ್ನುವ ಭಾವನೆ ಇರುತ್ತದೆ. ಆದರೆ ಅವರು ಸುರಕ್ಷಿತವಾಗಿ ಇದ್ದಾರೆಯೇ? ಇಲ್ಲ. ಏಕೆಂದರೆ ಅವರು ಇಂಟರ್ನೆಟ್ ಜೊತೆಗೆ ಇರುತ್ತಾರೆ. ಇಂಟರ್ನೆಟ್, ಮೊಬೈಲ್ ಫೋನ್ ಮತ್ತು ಲ್ಯಾಪ್ಟಾಪ್ ಎಲ್ಲವನ್ನೂ ನೋಡಿದರೆ ಒಂದು ಕಣ್ಣಿಗೆ ಖಂಡಿತಾ ಸಮಸ್ಯೆ ಇದೆ. ಮತ್ತೊಂದು ಇಂಟರ್ನೆಟ್ನಲ್ಲಿ ಏನು ನೋಡುತ್ತಾರೆ ಎನ್ನುವುದನ್ನೂ ನಾವು ಮೇಲ್ವಿಚಾರಣೆ ಮಾಡುತ್ತಿಲ್ಲ. ಹೀಗಾಗಿ ಮಕ್ಕಳು ಸುರಕ್ಷಿತರಲ್ಲ. ಮಕ್ಕಳಿಗೆ ಕನಿಷ್ಠ ಎರಡು ಗಂಟೆ ಬಿಸಿಲಲ್ಲಿ ಆಡಲು ಅವಕಾಶ ಕೊಡಬೇಕು. ಸ್ಕ್ರೀನ್ ಟೈಮ್ ನಿಲ್ಲಿಸಬೇಕು. ಶಾಲೆಯಲ್ಲೂ ಕೆಲವು ನಿಯಮಗಳನ್ನು ತರಬೇಕಾಗುತ್ತದೆ. ಮಕ್ಕಳಿಗೆ ಕನಿಷ್ಠ ದಿನಕ್ಕೆ 1 ಗಂಟೆ ಹೊರಗೆ ಆಡಿದರೆ, ಮನೆಗೆ ಬಂದು 1 ಗಂಟೆ ಹೊರಗೆ ಬಿಸಿಲಲ್ಲಿ ಆಡಿದರೆ ಎರಡು ಗಂಟೆ ಹೊರಗೆ ಸಮಯ ಸಿಗುತ್ತದೆ. ಆದರೆ ಶಾಲೆಗಳಲ್ಲಿ ದೈಹಿಕ ಶಿಕ್ಷಣದ ಸಮಯ ವಾರಕ್ಕೆ 2 ಗಂಟೆ ಮಾತ್ರ ಇರುತ್ತದೆ. ಆ ಸಮಯದಲ್ಲೂ ಇತರ ಅದ್ಯಾಪಕರು ಪಾಠ ಮಾಡುವುದು ಇರುತ್ತದೆ. ಅದೇ ಸಮಸ್ಯೆಯಾಗಿದೆ. ಮಕ್ಕಳು 2 ಗಂಟೆ ಹೊರಗೆ ಬಿಸಿಲಲ್ಲಿ ಆಡಲೇಬೇಕು.






