ಫೆ. 1 ರಿಂದ ಸಿಗರೇಟ್, ಪಾನ್ ಮಸಾಲಾ ದುಬಾರಿ ಏಕೆ?

ಸಾಂದರ್ಭಿಕ ಚಿತ್ರ | Photo Credit : freepik
2026 ಫೆಬ್ರವರಿ 1 ರಿಂದ ತಂಬಾಕು ಉತ್ಪನ್ನಗಳ ಮೇಲೆ ಹೆಚ್ಚುವರಿ ಅಬಕಾರಿ ಸುಂಕ, ಪಾನ್ ಮಸಾಲಾ ಮೇಲೆ ಹೊಸ ಸೆಸ್ ವಿಧಿಸಲಾಗುವುದು ಎಂದು ಕೇಂದ್ರ ಸರ್ಕಾರ ಬುಧವಾರ ಅಧಿಸೂಚನೆ ಹೊರಡಿಸಿದೆ. ಪಾನ್ ಮಸಾಲಾ, ಸಿಗರೇಟ್, ತಂಬಾಕು ಮತ್ತು ಇದೇ ರೀತಿಯ ಉತ್ಪನ್ನಗಳ ಮೇಲೆ ಶೇ. 40 ರಷ್ಟು ಜಿಎಸ್ಟಿ ದರ, ಬೀಡಿ ಮೇಲೆ ಶೇ. 18 ರಷ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವಿಧಿಸಲಾಗುತ್ತದೆ ಎಂದು ಸರ್ಕಾರಿ ಅಧಿಸೂಚನೆ ತಿಳಿಸಿದೆ. ಇದರ ಜೊತೆಗೆ, ಪಾನ್ ಮಸಾಲಾ ಮೇಲೆ ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸ್ ವಿಧಿಸಲಾಗುವುದು. ಇತರ ತಂಬಾಕು ಉತ್ಪನ್ನಗಳಿಗೆ ಅಂದರೆ ಹುಕ್ಕಾ ಮೇಲೆ ಶೇಕಡಾ 33 ಅಬಕಾರಿ ಸುಂಕ, ಏಕರೂಪದ ತಂಬಾಕು, ಜಗಿಯುವ ತಂಬಾಕು ಮತ್ತು ನಶ್ಯಕ್ಕೆ ಶೇಕಡಾ 60.5 ರಷ್ಟು ಸುಂಕ ಅನ್ವಯಿಸಲಾಗಿದೆ. ಜಗಿಯುವ ತಂಬಾಕು ಮತ್ತು ಜರ್ದಾ ಸುಗಂಧಭರಿತ ತಂಬಾಕಿಗೆ ಸುಂಕ ದರವು ಶೇಕಡಾ 82 ರಷ್ಟು ಹೆಚ್ಚಾಗಲಿದೆ. ಪೈಪ್ ಮತ್ತು ಸಿಗರೇಟ್ಗಳಿಗೆ ಬಳಸುವ ಮಿಶ್ರಣಗಳಿಗೆ ಶೇಕಡಾ 279 ರಷ್ಟು ಸುಂಕ ಅನ್ವಯವಾಗಲಿದೆ.
ಹೊಸ ನಿಯಮಗಳು ಹೊಗೆರಹಿತ ತಂಬಾಕಿಗೆ ಸಾಮರ್ಥ್ಯ ಆಧಾರಿತ ಸುಂಕವನ್ನು ಸಹ ನಿರ್ದಿಷ್ಟಪಡಿಸುತ್ತವೆ. ಜಗಿಯುವ ತಂಬಾಕು ಮತ್ತು ಗುಟ್ಕಾ ತಯಾರಕರಿಗೆ, ಸುಂಕವು ಈಗ ಕಾರ್ಖಾನೆಯಲ್ಲಿನ ಪ್ಯಾಕಿಂಗ್ ಯಂತ್ರಗಳ ವೇಗ ಮತ್ತು ಉತ್ಪನ್ನಗಳ ಸಂಖ್ಯೆಗೆ ನೇರವಾಗಿ ಸಂಬಂಧಿಸಿದೆ. ತೆರಿಗೆಯು ಪ್ರತಿ ಯಂತ್ರಕ್ಕೆ ಗರಿಷ್ಠ ಉತ್ಪಾದನಾ ಸಾಮರ್ಥ್ಯವನ್ನು ಆಧರಿಸಿದೆ. ಉದಾಹರಣೆಗೆ, 8 ರೂ. ಚಿಲ್ಲರೆ ಬೆಲೆಯೊಂದಿಗೆ ನಿಮಿಷಕ್ಕೆ 500 ಪೌಚ್ಗಳ ವೇಗದಲ್ಲಿ ಗುಟ್ಕಾ ಉತ್ಪಾದಿಸುವ ಯಂತ್ರವು ಮಾಸಿಕ 3.28 ಕೋಟಿ ರೂ.ಗಳ ಸುಂಕವನ್ನು ಹೊಂದಿರುತ್ತದೆ.
ನಿಮಿಷಕ್ಕೆ 1,500 ಪೌಚ್ಗಳಿಗಿಂತ ಹೆಚ್ಚು ಕಾರ್ಯನಿರ್ವಹಿಸುವ ಯಂತ್ರಗಳಿಗೆ, ಗುಟ್ಕಾಗೆ (0.92 × S) / 450 ನಂತಹ ನಿರ್ದಿಷ್ಟ ಸೂತ್ರಗಳನ್ನು ಬಳಸಿಕೊಂಡು ಸುಂಕಗಳನ್ನು ಲೆಕ್ಕಹಾಕಲಾಗುತ್ತದೆ. ಇಲ್ಲಿ ‘S’ ಎಂಬುದು ಯಂತ್ರದ ವೇಗವಾಗಿದೆ.
ಬೇಕಿದೆ ಕಟ್ಟುನಿಟ್ಟಾದ ಕಣ್ಗಾವಲು
ತೆರಿಗೆ ವಂಚನೆಯನ್ನು ತಡೆಯಲು ತಯಾರಕರು ಎಲ್ಲಾ ಪ್ಯಾಕಿಂಗ್ ಪ್ರದೇಶಗಳನ್ನು ಒಳಗೊಳ್ಳುವಂತೆ ಸಿಸಿಟಿವಿ ವ್ಯವಸ್ಥೆಗಳನ್ನು ಸ್ಥಾಪಿಸಬೇಕು ಮತ್ತು 48 ತಿಂಗಳುಗಳವರೆಗೆ ದೃಶ್ಯಾವಳಿಗಳನ್ನು ಸಂರಕ್ಷಿಸಬೇಕು ಎಂದು ಸಚಿವಾಲಯ ಹೇಳಿದೆ. ಎಲ್ಲಾ ತಯಾರಕರು 2026 ಫೆಬ್ರವರಿ 7ರೊಳಗೆ ತಮ್ಮ ಉತ್ಪಾದನಾ ಅಂಶಗಳು ಮತ್ತು ಯಂತ್ರದ ತಾಂತ್ರಿಕ ವಿಶೇಷಣಗಳನ್ನು ವಿವರಿಸುವ ವಿವರವಾದ ಘೋಷಣೆಯನ್ನು (ಫಾರ್ಮ್ CE DEC-01) ಸಲ್ಲಿಸಬೇಕು.
ಯಂತ್ರದ ವೇಗ ಮತ್ತು ಗೇರ್ಬಾಕ್ಸ್ ಅನುಪಾತಗಳನ್ನು ಫಾರ್ಮ್ CE CCE-01 ಬಳಸಿ ಚಾರ್ಟರ್ಡ್ ಎಂಜಿನಿಯರ್ ಪ್ರಮಾಣೀಕರಿಸಬೇಕು. ಸುಂಕವನ್ನು ಮುಂಚಿತವಾಗಿ ಪಾವತಿಸದೆ ಯಾವುದೇ ಅಧಿಸೂಚಿತ ತಂಬಾಕು ಸರಕುಗಳನ್ನು ರಫ್ತು ಮಾಡಲಾಗುವುದಿಲ್ಲ.
ಪಾನ್ ಮಸಾಲಾ ತಯಾರಿಕೆ ಮತ್ತು ತಂಬಾಕಿನ ಮೇಲಿನ ಅಬಕಾರಿ ಸುಂಕದ ಮೇಲೆ ಹೊಸ ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸ್ ವಿಧಿಸಲು ಅನುಮತಿಸುವ ಎರಡು ಮಸೂದೆಗಳನ್ನು ಸಂಸತ್ತು 2025 ಡಿಸೆಂಬರ್ನಲ್ಲಿ ಅನುಮೋದಿಸಿತ್ತು. ತಂಬಾಕು ಉತ್ಪನ್ನಗಳು ಮತ್ತು ಅವುಗಳ ಉತ್ಪಾದನೆಯ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಮಸೂದೆಯನ್ನು ಸಂಸತ್ತು ಅಂಗೀಕರಿಸಿದ ನಂತರ ಈ ಸುಂಕ ಹೆಚ್ಚಳ ಮಾಡಲಾಗಿದೆ. ವಿಶೇಷವಾಗಿ ಉದ್ದದ ಸಿಗರೇಟ್ಗಳು ಮತ್ತು ಫಿಲ್ಟರ್ ಸಿಗರೇಟ್ಗಳು ದುಬಾರಿ ಆಗಲಿವೆ. ಯಾಕೆಂದರೆ ತಯಾರಕರು ಹೆಚ್ಚುವರಿ ತೆರಿಗೆ ವೆಚ್ಚವನ್ನು ಗ್ರಾಹಕರಿಗೆ ವರ್ಗಾಯಿಸಲಿದ್ದಾರೆ.
ಜಿಎಸ್ಟಿ ಪರಿಹಾರ ಸೆಸ್ ಅವಧಿ ಮುಗಿದ ನಂತರ ತಂಬಾಕು ಮತ್ತು ಸಂಬಂಧಿತ ಉತ್ಪನ್ನಗಳ ಮೇಲಿನ ಅಬಕಾರಿ ಸುಂಕಗಳನ್ನು ಪರಿಷ್ಕರಿಸುವ ಗುರಿಯನ್ನು ಹೊಂದಿರುವ ಕೇಂದ್ರ ಅಬಕಾರಿ (ತಿದ್ದುಪಡಿ) ಮಸೂದೆ, 2025 ಅನ್ನು ಸಂಸತ್ತು ಅಂಗೀಕರಿಸಿತ್ತು. 2017ರಲ್ಲಿ ಜಿಎಸ್ಟಿ ಜಾರಿಗೆ ಬಂದ ನಂತರ ಇದೇ ಮೊದಲ ಬಾರಿಗೆ ಸರ್ಕಾರ ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಮೇಲಿನ ಅಬಕಾರಿ ಸುಂಕದ ಪ್ರಮುಖ ಪರಿಷ್ಕರಣೆಯನ್ನು ಪ್ರಕಟಿಸಿದೆ. ಇದು ಜಿಎಸ್ಟಿಯ ಜೊತೆಗೆ ಪ್ರತ್ಯೇಕ ಅಬಕಾರಿ ತೆರಿಗೆಯನ್ನು ಮರಳಿ ತರುತ್ತದೆ.
ಏನೇನು ಬದಲಾಗಲಿದೆ?
ಇಲ್ಲಿಯವರೆಗೆ, ಸಿಗರೇಟ್ಗೆ ಜಿಎಸ್ಟಿ ಮತ್ತು ಮೌಲ್ಯಾಧಾರಿತ ತೆರಿಗೆ ಮೂಲಕ ತೆರಿಗೆ ವಿಧಿಸಲಾಗುತ್ತಿತ್ತು. ಫೆಬ್ರವರಿ 1ರಿಂದ, ಕೇಂದ್ರ ಸರ್ಕಾರ ಸಿಗರೇಟು ಯಾವ ರೀತಿಯದ್ದು ಎಂಬುದರ ಮೇಲೆ ನಿರ್ದಿಷ್ಟ ಅಬಕಾರಿ ಸುಂಕವನ್ನು ವಿಧಿಸಲಿದೆ. ಸಿಗರೇಟ್ ಫಿಲ್ಟರ್ಡ್ ಅಥವಾ ನಾನ್-ಫಿಲ್ಟರ್ಡ್ ಆಗಿದೆಯೇ?, ಸಿಗರೇಟಿನ ಉದ್ದ (ಮಿಲ್ಲಿಮೀಟರ್ಗಳಲ್ಲಿ) ಆಧರಿಸಿ ಈ ಸುಂಕ ವಿಧಿಸಲಾಗುತ್ತದೆ. ಸಿಗರೇಟು ಯಾವ ಕೆಟಗರಿಗೆ ಸೇರಿದ್ದು ಎಂಬುದರ ಮೇಲೆ 1,000 ಸಿಗರೇಟುಗಳಿಗೆ ಅಬಕಾರಿ ಸುಂಕ 2,050 ರೂ.ವಿನಿಂದ 8,500 ರೂ. ಆಗಲಿದೆ. ಸರಳವಾಗಿ ಹೇಳುವುದಾದರೆ, ಸಿಗರೇಟ್ ಉದ್ದವಾದಷ್ಟೂ ತೆರಿಗೆ ಹೆಚ್ಚಾಗುತ್ತದೆ.
ಇದರ ಲೆಕ್ಕಾಚಾರ ಹೀಗಿದೆ
ಸಣ್ಣದು, ಫಿಲ್ಟರ್ ಇಲ್ಲದ ಸಿಗರೇಟ್ಗಳು (65 ಮಿಮೀ ವರೆಗೆ): ಪ್ರತಿ ಸಿಗರೇಟಿಗೆ ಸುಮಾರು 2.05 ರೂ.
ಸಣ್ಣದು, ಫಿಲ್ಟರ್ ಸಿಗರೇಟ್ಗಳು (65 ಮಿಮೀ ವರೆಗೆ): ಪ್ರತಿ ಸಿಗರೇಟಿಗೆ ಸುಮಾರು 2.10 ರೂ.
ಮಧ್ಯಮ-ಉದ್ದದ ಸಿಗರೇಟ್ಗಳು (65–70 ಮಿಮೀ): ಪ್ರತಿ ಸಿಗರೇಟಿಗೆ ಸುಮಾರು 3.6 ರೂ.ದಿಂದ 4 ರೂ.
ಉದ್ದ, ಪ್ರೀಮಿಯಂ ಸಿಗರೇಟ್ಗಳು (70–75 ಮಿಮೀ): ಪ್ರತಿ ಸಿಗರೇಟಿಗೆ ಸುಮಾರು 5.4 ರೂ.
1,000 ಸಿಗರೇಟಿಗೆ 8,500 ರೂ. ಹೆಚ್ಚಿನ ಸುಂಕವನ್ನು ಹೊಂದಿರುವ “ಇತರ” ಕೆಟಗರಿಯೂ ಇದೆ. ಆದರೆ ಇದು ಅಸಾಮಾನ್ಯ ಅಥವಾ ಪ್ರಮಾಣಿತವಲ್ಲದ ವಿನ್ಯಾಸಗಳಿಗೆ ಮಾತ್ರ ಅನ್ವಯಿಸುತ್ತದೆ. ಹೆಚ್ಚಿನ ಜನಪ್ರಿಯ ಬ್ರ್ಯಾಂಡ್ಗಳು ಈ ಸ್ಲ್ಯಾಬ್ಗೆ ಬರುವುದಿಲ್ಲ.
ಬೆಲೆ ಏರಿಕೆ ಹೇಗೆ?
ಸಿಗರೇಟ್ ಕಂಪನಿಗಳು ಬೆಲೆ ಏರಿಕೆಗೆ ಕೆಲವು ಆಯ್ಕೆಗಳನ್ನು ಹೊಂದಿವೆ. ಆದರೆ ಪ್ರತಿಕ್ರಿಯೆ ಏಕರೂಪವಾಗಿರುವುದಿಲ್ಲ. ಸಮೂಹ-ಮಾರುಕಟ್ಟೆ ಬ್ರ್ಯಾಂಡ್ಗಳಲ್ಲಿ ಮಾರಾಟದ ಪ್ರಮಾಣವನ್ನು ರಕ್ಷಿಸಲು ಕಂಪನಿಗಳು ಹೆಚ್ಚಳದ ಒಂದು ಭಾಗವನ್ನು ಬಳಸಿಕೊಳ್ಳಬಹುದು. ಕೆಲವು ಕಂಪನಿಗಳು ಹಂತ ಹಂತವಾಗಿ ಏರಿಕೆಗಳನ್ನು ಮಾಡಬಹುದು.
ಯಾವ ಸಿಗರೇಟ್ಗಳು ದುಬಾರಿ?
ಉದ್ದವಾದ, ಪ್ರೀಮಿಯಂ ಸಿಗರೇಟ್ಗಳಿಗೆ ಅತ್ಯಧಿಕ ತೆರಿಗೆ ವಿಧಿಸಲಾಗುತ್ತದೆ. ಇದು ಭಾರತದಲ್ಲಿ ಮಾರಾಟವಾಗುವ ಗೋಲ್ಡ್ ಫ್ಲೇಕ್ ಪ್ರೀಮಿಯಂ, ರೆಡ್ & ವೈಟ್ ಕಿಂಗ್ ಸೈಜ್, ಕ್ಲಾಸಿಕ್ & ಮಾರ್ಲ್ಬೊರೊ ಸಿಗರೇಟುಗಳು, ನೇವಿ ಕಟ್ ಮತ್ತು ಇದೇ ರೀತಿಯ ಉದ್ದವಾದ ಸಿಗರೇಟುಗಳು, ಐಸ್ ಬರ್ಸ್ಟ್ನಂತಹ ಸುವಾಸನೆಯ ಸಿಗರೇಟುಗಳು ಸಹ 70–75 ಎಂಎಂ ಫಿಲ್ಟರ್ ವರ್ಗದ ಅಡಿಯಲ್ಲಿ ಬರುತ್ತವೆ. ಚಿಕ್ಕ ಸಿಗರೇಟ್ಗಳು, ಮಿನಿ ಮತ್ತು ಸ್ಟಬ್ಬಿ ನಾನ್-ಫಿಲ್ಟರ್ ಸಿಗರೇಟಿನ ದರವೂ ತುಸು ಹೆಚ್ಚಾಗಲಿದೆ.
ಸಿಗರೇಟ್ಗಳ ಮೇಲಿನ ಜಿಎಸ್ಟಿ ಮತ್ತು ತೆರಿಗೆ
ಹೊಸ ಅಬಕಾರಿ ಸುಂಕವು ಜಿಎಸ್ಟಿಯ ಮೇಲೆ ಅನ್ವಯಿಸುತ್ತದೆ. ಉತ್ಪನ್ನವನ್ನು ಅವಲಂಬಿಸಿ ಇದು 18% ಅಥವಾ 40% ಇರಲಿದೆ. ಅದೇ ಸಮಯದಲ್ಲಿ, ಸರ್ಕಾರವು ತಂಬಾಕಿನ ಮೇಲಿನ ಜಿಎಸ್ಟಿ ಪರಿಹಾರ ಸೆಸ್ ಅನ್ನು ಹಿಂತೆಗೆದುಕೊಂಡಿದೆ. ಈ ಬದಲಾವಣೆಯ ನಂತರವೂ, ಭಾರತದಲ್ಲಿ ಸಿಗರೇಟ್ಗಳ ಮೇಲಿನ ಒಟ್ಟು ತೆರಿಗೆಗಳು ಚಿಲ್ಲರೆ ಬೆಲೆಯ ಸರಿಸುಮಾರು 53% ರಷ್ಟಿದೆ. ಇದು ಧೂಮಪಾನವನ್ನು ನಿರುತ್ಸಾಹಗೊಳಿಸುವ ಗುರಿಯನ್ನು ಹೊಂದಿರುವ ವಿಶ್ವ ಆರೋಗ್ಯ ಸಂಸ್ಥೆಯ 75% ಮಾನದಂಡಕ್ಕಿಂತ ಇನ್ನೂ ಕಡಿಮೆಯಾಗಿದೆ.
ತೆರಿಗೆ ಅನ್ವಯವಾದಾಗ ಸಿಗರೇಟಿನ ಬೆಲೆ ಎಷ್ಟಾಗುತ್ತದೆ?
ಸರಳವಾಗಿ ಹೇಳುವುದಾದರೆ, ಹೊಸ ತೆರಿಗೆ ನಿಯಮಗಳು ಜಾರಿಗೆ ಬಂದ ನಂತರ, ಹೆಚ್ಚಿನ ತೆರಿಗೆಗಳಿಂದಾಗಿ ಸಿಗರೇಟ್ ದುಬಾರಿಯಾಗುತ್ತದೆ. ಜಿಎಸ್ಟಿಯನ್ನು ಶೇಕಡಾ 40ಕ್ಕೆ ನಿಗದಿಪಡಿಸಿದಾಗ, ಮೊದಲು 18 ರೂ. ಇದ್ದ ಸಿಗರೇಟಿನ ಬೆಲೆ 19.70 ರೂ.ಗೆ ಏರುತ್ತದೆ. ಇದರ ಜೊತೆಗೆ, ಸರ್ಕಾರವು ಹೆಚ್ಚುವರಿ ಅಬಕಾರಿ ಸುಂಕವನ್ನು ವಿಧಿಸುತ್ತದೆ. ಈ ಅಬಕಾರಿ ಸುಂಕವನ್ನು ಸಾಧಾರಣವಾಗಿ ಇರಿಸಿದರೂ, ಪ್ರತಿ ಸಿಗರೇಟಿಗೆ ಸುಮಾರು 1 ರೂ.ದಿಂದ 2 ರೂ. ಇದ್ದರೂ, ಅಂತಿಮ ಬೆಲೆ ಮತ್ತಷ್ಟು ಹೆಚ್ಚಾಗುತ್ತದೆ. ಪರಿಣಾಮವಾಗಿ, ಫೆಬ್ರವರಿ 1ರ ನಂತರ ಒಂದು ಸಿಗರೇಟಿನ ಬೆಲೆ ಸರಿಸುಮಾರು 21 ರೂ.ದಿಂದ 22 ರೂ.ವರೆಗೆ ಇರಲಿದೆ.
ಸರ್ಕಾರದಿಂದ ಈ ಕ್ರಮ ಯಾಕೆ?
ತಂಬಾಕು ವಲಯದಲ್ಲಿ ತೆರಿಗೆ ವಂಚನೆಯನ್ನು ತಡೆಯುವುದು, ಸರ್ಕಾರದ ಆದಾಯವನ್ನು ಹೆಚ್ಚಿಸುವುದು, ತಂಬಾಕು ಸಂಬಂಧಿತ ಕಾಯಿಲೆಗಳಿಗೆ, ವಿಶೇಷವಾಗಿ ಕ್ಯಾನ್ಸರ್ಗೆ ಸಂಬಂಧಿಸಿದ ಹೆಚ್ಚುತ್ತಿರುವ ಆರೋಗ್ಯ ವೆಚ್ಚಗಳನ್ನು ನಿಭಾಯಿಸಲು ಸುಂಕಗಳನ್ನು ಏರಿಕೆ ಮಾಡಲಾಗಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.
ಸಿಗರೇಟ್ ಕಂಪನಿಗಳ ಪ್ರತಿಕ್ರಿಯೆ ಏನು?
ಫೆಬ್ರವರಿ 1ರಿಂದ ಸಿಗರೇಟ್ಗಳ ಮೇಲಿನ ಪ್ರಸ್ತಾವಿತ ಅಬಕಾರಿ ಸುಂಕ ಹೆಚ್ಚಳದ ಒಟ್ಟಾರೆ ಪರಿಣಾಮವು revenue neutral ಆಗಿರುತ್ತದೆ. ಏಕೆಂದರೆ ಇದು ಅಕ್ರಮ ವ್ಯಾಪಾರವನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ಭಾರತದ ತಂಬಾಕು ಕಂಪನಿಗಳು ಹೇಳಿವೆ.
ಈ ನಡುವೆ, ಐಟಿಸಿ, ಗಾಡ್ಫ್ರೇ ಫಿಲಿಪ್ಸ್ ಇಂಡಿಯಾ ಮತ್ತು ವಿಎಸ್ಟಿ ಇಂಡಸ್ಟ್ರೀಸ್ನಂತಹ ಪ್ರಮುಖ ಸಿಗರೇಟ್ ತಯಾರಕರ ಪ್ರತಿನಿಧಿ ಸಂಸ್ಥೆಯಾದ ಟಿಐಐ, ತೆರಿಗೆ ಹೆಚ್ಚಳವನ್ನು ಮರುಪರಿಶೀಲಿಸುವಂತೆ ಸರ್ಕಾರವನ್ನು ವಿನಂತಿಸಿದೆ. ಈ ರೀತಿಯ ಹೆಚ್ಚಳವು ಲಕ್ಷಾಂತರ ರೈತರು, ಎಂಎಸ್ಎಂಇಗಳು, ಚಿಲ್ಲರೆ ವ್ಯಾಪಾರಿಗಳು ಮತ್ತು ಉದ್ಯಮಗಳಿಗೆ ಅಪಾರ ಕಷ್ಟ ಮತ್ತು ನಷ್ಟವನ್ನು ಉಂಟುಮಾಡುತ್ತದೆ. ಇದು ಅಕ್ರಮ ಉದ್ಯಮಕ್ಕೆ ರಹದಾರಿಯಾಗಿದ್ದು ರಾಷ್ಟ್ರೀಯ ಉದ್ಯಮಗಳಿಗೆ ಹಾನಿಯನ್ನುಂಟುಮಾಡುತ್ತದೆ ಎಂದು ಟಿಐಐ ಹೇಳಿಕೆಯಲ್ಲಿ ತಿಳಿಸಿದೆ.
ದೇಶದಲ್ಲಿ ಪ್ರತಿ ಮೂರು ಕಾನೂನುಬದ್ಧ ಸಿಗರೇಟ್ಗಳಿಗೆ ಒಂದು ಕಳ್ಳಸಾಗಣೆ/ಅಕ್ರಮ ಸಿಗರೇಟ್ ಮಾರಾಟವಾಗುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಈ ತೆರಿಗೆ ಹೆಚ್ಚಳವು “ಕಾನೂನುಬಾಹಿರ ಮತ್ತು ಅಕ್ರಮ ಚಟುವಟಿಕೆ”ಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಇದು ಸಮಾಜವಿರೋಧಿ ಚಟುವಟಿಕೆಯನ್ನು ಉತ್ತೇಜಿಸುವುದರ ಜೊತೆಗೆ ಸರ್ಕಾರದ ಖಜಾನೆಯನ್ನು ಕಸಿದುಕೊಳ್ಳುತ್ತದೆ ಎಂದು ಉದ್ಯಮ ಸಂಸ್ಥೆ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.







