ಪೌರತ್ವ ಮತ್ತು ಕಾನೂನು: ಯಾರು ಭಾರತದ ಪ್ರಜೆ ಎಂಬುದನ್ನು ನಿರ್ಧರಿಸುವುದು ಯಾವುದು?

ಸಾಂದರ್ಭಿಕ ಚಿತ್ರ Photo : AI
ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಭಾರತೀಯ ಪಾಸ್ಪೋರ್ಟ್ ಕೇವಲ ಒಂದು ಪ್ರಯಾಣದ ದಾಖಲೆಯಷ್ಟೇ, ಅದು ಪೌರತ್ವಕ್ಕೆ ನಿರ್ಣಾಯಕ ಪುರಾವೆಯಲ್ಲ ಎಂದು ತಿಳಿಸಿದೆ. ಹೀಗಿರುವಾಗ, ಕಾನೂನಿನ ಅಡಿಯಲ್ಲಿ ಪೌರತ್ವವನ್ನು ಹೇಗೆ ವ್ಯಾಖ್ಯಾನಿಸಲಾಗಿದೆ ಎಂಬುದರ ವಿವರಣೆ ಇಲ್ಲಿದೆ.
1. ಪಾಸ್ಪೋರ್ಟ್ ಭಾರತೀಯ ಪೌರತ್ವಕ್ಕೆ ಪುರಾವೆಯಲ್ಲವೇ?
ಕಾನೂನಾತ್ಮಕವಾಗಿ ಹೇಳುವುದಾದರೆ, ಪಾಸ್ಪೋರ್ಟ್ ಅನ್ನು 1967ರ ಪಾಸ್ಪೋರ್ಟ್ ಕಾಯ್ದೆಯಡಿ ನೀಡಲಾಗುತ್ತದೆ. ಇದು ಕೇವಲ ಪ್ರಯಾಣ ಮತ್ತು ಗುರುತಿನ ದಾಖಲೆಯಾಗಿದೆಯೇ ಹೊರತು ಪೌರತ್ವವನ್ನು ಖಚಿತಪಡಿಸುವುದಿಲ್ಲ. ಒಂದು ವೇಳೆ ನ್ಯಾಯಾಲಯದ ಮುಂದೆ ಪೌರತ್ವದ ಪ್ರಶ್ನೆ ಎದುರಾದರೆ, 1955ರ ಪೌರತ್ವ ಕಾಯ್ದೆಯ ಅಡಿಯಲ್ಲೇ ಅದನ್ನು ಸಾಬೀತುಪಡಿಸಬೇಕಾಗುತ್ತದೆ.
2. ಪೌರತ್ವವನ್ನು ಹೇಗೆ ನಿರ್ಧರಿಸಲಾಗುತ್ತದೆ?
ಪೌರತ್ವ ಎಂಬುದು ಸರ್ಕಾರವು ವ್ಯಕ್ತಿಯೊಬ್ಬನಿಗೆ ನೀಡುವ ಕಾನೂನಾತ್ಮಕ ಅರ್ಹತೆಯಾಗಿದ್ದು, ಇದು ಮತದಾನದ ಹಕ್ಕಿನಂತಹ ನಿರ್ದಿಷ್ಟ ಹಕ್ಕುಗಳನ್ನು ಒದಗಿಸುತ್ತದೆ. ಭಾರತದಲ್ಲಿ ಎಲ್ಲರಿಗೂ ಅನ್ವಯಿಸುವ ಒಂದೇ ಸಾರ್ವತ್ರಿಕ ಪೌರತ್ವ ದಾಖಲೆ ಇಲ್ಲ. ಪೌರತ್ವ ನೀಡುವುದನ್ನು ಸಂವಿಧಾನದ 5ರಿಂದ 11ರವರೆಗಿನ ವಿಧಿಗಳು ನಿಯಂತ್ರಿಸುತ್ತವೆ. ಸಂವಿಧಾನದ 11ನೇ ವಿಧಿಯು ಪೌರತ್ವ ಕಾನೂನನ್ನು ರೂಪಿಸುವ ಅಧಿಕಾರವನ್ನು ಸಂಸತ್ತಿಗೆ ನೀಡಿದೆ. ಈ ಅಧಿಕಾರವನ್ನು ಬಳಸಿ ಸಂಸತ್ತು 1955ರ ಪೌರತ್ವ ಕಾಯ್ದೆಯನ್ನು ಅಂಗೀಕರಿಸಿತು. ಒಬ್ಬ ವ್ಯಕ್ತಿ ಭಾರತೀಯ ಪೌರತ್ವವನ್ನು ಹೇಗೆ ಪಡೆಯಬಹುದು ಎಂಬುದನ್ನು ಈ ಕಾಯ್ದೆಯೇ ವ್ಯಾಖ್ಯಾನಿಸುತ್ತದೆ.
3. ಭಾರತೀಯ ಪೌರತ್ವವನ್ನು ಸಾಬೀತುಪಡಿಸುವ ದಾಖಲೆಗಳು ಯಾವುವು?
ಪೌರತ್ವ ಕಾಯ್ದೆಯಾಗಲಿ ಅಥವಾ ಸಂವಿಧಾನವಾಗಲಿ, ಪೌರತ್ವವನ್ನು ಖಚಿತಪಡಿಸುವ ಯಾವುದೇ ನಿರ್ದಿಷ್ಟ ದಾಖಲೆಗಳನ್ನು ವ್ಯಾಖ್ಯಾನಿಸಿಲ್ಲ. ಹುಟ್ಟಿದ ದಿನಾಂಕ ಮತ್ತು ಸ್ಥಳ, ವಾಸಸ್ಥಳ ಹಾಗೂ ಪೋಷಕರ ವಿವರಗಳನ್ನು ಸಾಬೀತುಪಡಿಸುವ ದಾಖಲೆಗಳ ಮೂಲಕ ಪೌರತ್ವದ ಹಕ್ಕನ್ನು ಸಮರ್ಥಿಸಿಕೊಳ್ಳಬಹುದು. ಆದರೆ, ನೋಂದಣಿ ಅಥವಾ ಪ್ರಜೆಯಾಗುವ ಪ್ರಕ್ರಿಯೆಯ ಮೂಲಕ ಪೌರತ್ವ ಪಡೆಯುವ ವ್ಯಕ್ತಿಗಳಿಗೆ ಭಾರತ ಸರ್ಕಾರವು 'ಪೌರತ್ವ ಪ್ರಮಾಣಪತ್ರ'ಗಳನ್ನು ನೀಡುತ್ತದೆ.
4. ಹುಟ್ಟಿನಿಂದಲೇ ಪೌರತ್ವ ಎಂದರೇನು?
1950ರ ಜನವರಿ 26ರಂದು ಸಂವಿಧಾನ ಜಾರಿಗೆ ಬಂದ ಸಮಯದಲ್ಲಿ ಯಾರು ಭಾರತದ ಪ್ರಜೆಯಾಗುತ್ತಾರೆ ಎಂಬುದನ್ನು ಸಂವಿಧಾನದ 5ನೇ ವಿಧಿಯು ವ್ಯಾಖ್ಯಾನಿಸುತ್ತದೆ. ಅಂತಹ ವ್ಯಕ್ತಿಯು ಆ ದಿನಾಂಕದಂದು ಭಾರತದ ನಿವಾಸಿಯಾಗಿರಬೇಕು. ಅವರು ಭಾರತದ ಭೂಪ್ರದೇಶದಲ್ಲಿ ಜನಿಸಿರಬೇಕು, ಅಥವಾ ಅವರ ಪೋಷಕರಲ್ಲಿ ಕನಿಷ್ಠ ಒಬ್ಬರಾದರೂ ಭಾರತದಲ್ಲಿ ಜನಿಸಿರಬೇಕು, ಅಥವಾ ಸಂವಿಧಾನ ಜಾರಿಗೆ ಬರುವ ಮುನ್ನ ಕನಿಷ್ಠ ಐದು ವರ್ಷಗಳ ಕಾಲ ಭಾರತದಲ್ಲಿ ಸಾಮಾನ್ಯ ನಿವಾಸಿಯಾಗಿ ವಾಸಿಸಿರಬೇಕು.
5. 1987ರಲ್ಲಿ ಪೌರತ್ವ ಕಾನೂನಿಗೆ ತಂದ ತಿದ್ದುಪಡಿಗಳು ಯಾವುವು?
ಜುಲೈ 1987ರಲ್ಲಿ ಅಧಿಸೂಚನೆ ಹೊರಡಿಸಲಾದ 'ಪೌರತ್ವ (ತಿದ್ದುಪಡಿ) ಕಾಯ್ದೆ, 1986'ರ ಪ್ರಕಾರ, ಆ ದಿನಾಂಕದಂದು ಅಥವಾ ಆನಂತರ ಭಾರತದಲ್ಲಿ ಜನಿಸಿದ ವ್ಯಕ್ತಿಯ ಜನನದ ಸಮಯದಲ್ಲಿ ಅವರ ಪೋಷಕರಲ್ಲಿ ಕನಿಷ್ಠ ಒಬ್ಬರು ಭಾರತದ ಪ್ರಜೆಯಾಗಿದ್ದರೆ ಮಾತ್ರ ಅವರು ಹುಟ್ಟಿನಿಂದಲೇ ದೇಶದ ಪ್ರಜೆಯಾಗುತ್ತಾರೆ. ಅದೇ ಜುಲೈ 1, 1987ಕ್ಕಿಂತ ಮುಂಚೆ ಭಾರತದಲ್ಲಿ ಜನಿಸಿದ ವ್ಯಕ್ತಿಯು ತನ್ನ ಪೋಷಕರ ರಾಷ್ಟ್ರೀಯತೆಯನ್ನು ಲೆಕ್ಕಿಸದೆ ಭಾರತೀಯ ಪೌರತ್ವ ಪಡೆಯಲು ಅರ್ಹನಾಗಿದ್ದನು.
6. 2003ರ ಪೌರತ್ವ ಕಾಯ್ದೆಯ ತಿದ್ದುಪಡಿ ಏನಾಗಿತ್ತು?
ಡಿಸೆಂಬರ್ 3, 2004ರ ನಂತರ ಜನಿಸಿದ ಯಾವುದೇ ವ್ಯಕ್ತಿಯ ಜನನದ ಸಮಯದಲ್ಲಿ, ಅವರ ಪೋಷಕರಲ್ಲಿ ಒಬ್ಬರು ಭಾರತದ ಪ್ರಜೆಯಾಗಿದ್ದು, ಮತ್ತೊಬ್ಬರು ಅಕ್ರಮ ವಲಸಿಗರಾಗಿರದಿದ್ದರೆ ಮಾತ್ರ ಆ ವ್ಯಕ್ತಿ ಭಾರತದ ಪ್ರಜೆಯಾಗುತ್ತಾರೆ ಎಂದು ಈ ತಿದ್ದುಪಡಿಯಲ್ಲಿ ಸ್ಪಷ್ಟಪಡಿಸಲಾಯಿತು.
7. ವಂಶಾವಳಿಯ ಮೂಲಕ ಪೌರತ್ವ ಎಂದರೇನು?
ಪೌರತ್ವ ಕಾಯ್ದೆಯ ಪ್ರಕಾರ, 1950ರ ಜನವರಿ 26ರಂದು ಅಥವಾ ಆನಂತರ, ಆದರೆ ಡಿಸೆಂಬರ್ 10, 1992ಕ್ಕಿಂತ ಮುಂಚೆ ಭಾರತದ ಹೊರಗೆ ಜನಿಸಿದ ವ್ಯಕ್ತಿಯ ಜನನದ ಸಮಯದಲ್ಲಿ ಅವರ ತಂದೆ ಭಾರತದ ಪ್ರಜೆಯಾಗಿದ್ದರೆ, ಅವರು ವಂಶಾವಳಿಯ ಮೂಲಕ ಭಾರತದ ಪ್ರಜೆಯಾಗುತ್ತಾರೆ. ಇನ್ನು ಡಿಸೆಂಬರ್ 10, 1992ರಂದು ಅಥವಾ ಆನಂತರ, ಆದರೆ ಡಿಸೆಂಬರ್ 3, 2004ಕ್ಕಿಂತ ಮುಂಚೆ ಭಾರತದ ಹೊರಗೆ ಜನಿಸಿದ ವ್ಯಕ್ತಿಯ ಜನನದ ಸಮಯದಲ್ಲಿ ಅವರ ಪೋಷಕರಲ್ಲಿ ಯಾರಾದರೂ ಒಬ್ಬರು ಭಾರತದ ಪ್ರಜೆಯಾಗಿದ್ದರೆ ಅವರು ಪೌರತ್ವ ಪಡೆಯುತ್ತಾರೆ. ಡಿಸೆಂಬರ್ 3, 2004ರ ನಂತರ ಭಾರತದ ಹೊರಗೆ ಜನಿಸಿದ ವ್ಯಕ್ತಿಯ ಪೋಷಕರಲ್ಲಿ ಒಬ್ಬರು ಭಾರತದ ಪ್ರಜೆಯಾಗಿದ್ದು, ಆ ಮಗುವಿನ ಜನನವನ್ನು ಭಾರತೀಯ ರಾಯಭಾರ ಕಚೇರಿಯಲ್ಲಿ ನೋಂದಾಯಿಸಿದ್ದರೆ ಮಾತ್ರ ಅವರು ಭಾರತದ ಪ್ರಜೆಯಾಗುತ್ತಾರೆ.
8. ಭಾರತೀಯ ಪೌರತ್ವವನ್ನು ಪಡೆಯಲು ಇರುವ ಇತರ ಮಾರ್ಗಗಳು ಯಾವುವು?
ಅರ್ಜಿದಾರರು ಭಾರತೀಯ ಮೂಲದವರಾಗಿದ್ದರೆ, ಕಾನೂನಿನಲ್ಲಿ ನಿಗದಿಪಡಿಸಿದ ಪ್ರಕ್ರಿಯೆಯ ಮೂಲಕ 'ನೋಂದಣಿ'ಯಾಗಿ ಪೌರತ್ವ ಪಡೆಯಬಹುದು. ಇದಲ್ಲದೆ, ಯಾರಾದರೂ ಪೌರತ್ವ ಪ್ರಮಾಣಪತ್ರಕ್ಕೆ ಅರ್ಹರಾಗಿದ್ದು 12 ವರ್ಷಗಳ ಕಾಲ ಭಾರತದಲ್ಲಿ ವಾಸಿಸುವ ನಿಯಮವನ್ನು ಪೂರೈಸಿದ್ದರೆ, ಭಾರತ ಸರ್ಕಾರವು ಅವರಿಗೆ 'ನ್ಯಾಚುರಲೈಸೇಶನ್' (ಪ್ರಜೆಯಾಗುವ ಪ್ರಕ್ರಿಯೆ) ಪ್ರಮಾಣಪತ್ರವನ್ನು ನೀಡಬಹುದು. ವಿಜ್ಞಾನ, ಕಲೆ, ಸಾಹಿತ್ಯ, ತತ್ವಶಾಸ್ತ್ರ, ವಿಶ್ವ ಶಾಂತಿ ಮತ್ತು ಮಾನವ ಪ್ರಗತಿಯ ಕ್ಷೇತ್ರದಲ್ಲಿ ಅಸಾಧಾರಣ ಸೇವೆ ಸಲ್ಲಿಸಿದವರಿಗೆ ಈ ವಿಭಾಗದ ಅಡಿಯಲ್ಲಿ ಪೌರತ್ವ ನೀಡಲು ಕೆಲವು ನಿಯಮಗಳನ್ನು ಸಡಿಲಗೊಳಿಸಬಹುದು. ಯಾವುದಾದರೂ ಹೊಸ ಪ್ರದೇಶವು ಭಾರತದೊಂದಿಗೆ ಸೇರಿದರೆ, ಸರ್ಕಾರವು ಅಧಿಸೂಚನೆಯ ಮೂಲಕ ಅಲ್ಲಿನ ಯಾವ ಜನರಿಗೆ ಪೌರತ್ವ ನೀಡಲಾಗುವುದು ಎಂಬುದನ್ನು ನಿರ್ದಿಷ್ಟಪಡಿಸಬಹುದು. ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ 2014ರ ಡಿಸೆಂಬರ್ 31ರಂದು ಅಥವಾ ಅದಕ್ಕಿಂತ ಮುಂಚಿತವಾಗಿ ಭಾರತಕ್ಕೆ ಬಂದಿರುವ ಹಿಂದೂ, ಸಿಖ್, ಬೌದ್ಧ, ಜೈನ್, ಪಾರ್ಸಿ ಮತ್ತು ಕ್ರಿಶ್ಚಿಯನ್ ಸಮುದಾಯದವರಿಗೆ ಪೌರತ್ವ ನೀಡಲು ಕೊನೆಯದಾಗಿ 2019ರಲ್ಲಿ ಪೌರತ್ವ ಕಾಯ್ದೆಗೆ ತಿದ್ದುಪಡಿ ತರಲಾಯಿತು.
9. ಭಾರತವು ತನ್ನ ನಾಗರಿಕರಿಗೆ ಯಾವುದೇ ಗುರುತಿನ ಪುರಾವೆಯನ್ನು ನೀಡುತ್ತದೆಯೇ?
ಕಳೆದ ವರ್ಷ ಸಂಸತ್ತಿನಲ್ಲಿ ನೀಡಿದ ಉತ್ತರದ ಪ್ರಕಾರ, 2004ರಲ್ಲಿ ತಿದ್ದುಪಡಿ ಮಾಡಲಾದ 1955ರ ಪೌರತ್ವ ಕಾಯ್ದೆಯು ಭಾರತದ ಪ್ರತಿಯೊಬ್ಬ ನಾಗರಿಕನನ್ನು ಕಡ್ಡಾಯವಾಗಿ ನೋಂದಾಯಿಸಲು ಮತ್ತು 'ರಾಷ್ಟ್ರೀಯ ಗುರುತಿನ ಚೀಟಿ' ನೀಡಲು ಕೇಂದ್ರ ಸರ್ಕಾರಕ್ಕೆ ಅಧಿಕಾರ ನೀಡುತ್ತದೆ. ಇದರ ಕಾರ್ಯವಿಧಾನವನ್ನು 2003ರ ಪೌರತ್ವ ನಿಯಮಗಳಲ್ಲಿ (ನಾಗರಿಕರ ನೋಂದಣಿ ಮತ್ತು ರಾಷ್ಟ್ರೀಯ ಗುರುತಿನ ಚೀಟಿ ವಿತರಣೆ) ವಿವರಿಸಲಾಗಿದೆ. ಆದಾಗ್ಯೂ, ಇದುವರೆಗೆ ಅಂತಹ ಯಾವುದೇ ಗುರುತಿನ ಚೀಟಿಯನ್ನು ವಿತರಿಸಲಾಗಿಲ್ಲ.






