CJP ಮೇಲಿನ ಪ್ರಕರಣಗಳು ರದ್ದು: ಸಂವಿಧಾನದ 142ನೇ ವಿಧಿಯು ಸುಪ್ರೀಂ ಕೋರ್ಟ್ಗೆ ನೀಡುವ ಅಧಿಕಾರಗಳೇನು? ಇದು ವಿವಾದಕ್ಕೆ ಕಾರಣವೇಕೆ?
ಅಪೂರ್ವ ವಿಶ್ವನಾಥ್ - indianexpress. com ವರದಿ

ಸುಪ್ರೀಂ ಕೋರ್ಟ್ |Photo Credit : PTI
ರಾಷ್ಟ್ರವ್ಯಾಪಿ ಪರೀಕ್ಷಾ ಅಕ್ರಮ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ (CJP) ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದವರ ವಿರುದ್ಧ ದಾಖಲಾಗಿದ್ದ ಎಫ್ಐಆರ್ಗಳನ್ನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ಸಂವಿಧಾನದ 142ನೇ ವಿಧಿಯಡಿಯ ವಿಶೇಷ ಅಧಿಕಾರವನ್ನು ಬಳಸಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜಾಯ್ಮಾಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ಪೀಠವು ಈ ಪ್ರಕರಣಗಳನ್ನು ಮುಕ್ತಾಯಗೊಳಿಸಿದೆ. ಈ ಪ್ರಕರಣಗಳನ್ನು ಮುಂದುವರಿಸದಿರಲು ಕೇಂದ್ರ ಸರ್ಕಾರ "ತೀರ್ಮಾನ" ಕೈಗೊಂಡಿದೆ ಎಂದು ತಿಳಿಸಿದ ನಂತರ ಕೋರ್ಟ್ ಈ ಆದೇಶ ನೀಡಿದೆ. ಜೊತೆಗೆ, NEET-UG 2026 ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಿಂದಾಗಿ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಗಳ ಕುಟುಂಬಗಳಿಗೆ ಮೂರು ತಿಂಗಳೊಳಗೆ ಪರಿಹಾರ ನೀಡುವಂತೆ ಆದೇಶಿಸಿದೆ.
"ಗಂಭೀರ ಅಪರಾಧ ಹಿನ್ನೆಲೆ" ಹೊಂದಿದ್ದಾರೆ ಎನ್ನಲಾದ ಸುಮಾರು 2,873 ವ್ಯಕ್ತಿಗಳ ಮೇಲಿನ ಪ್ರಕರಣಗಳನ್ನು ಹೊರತುಪಡಿಸಿ, ಜುಲೈ ಪ್ರತಿಭಟನೆಗೆ ಸಂಬಂಧಿಸಿದ ಉಳಿದೆಲ್ಲಾ ಎಫ್ಐಆರ್ಗಳನ್ನು ವಜಾಗೊಳಿಸಲಾಗಿದೆ. ವಿಚಾರಣೆ ವೇಳೆ, ಸೆಪ್ಟೆಂಬರ್ 5ರಂದು ನಡೆಸಲು ಉದ್ದೇಶಿಸಿದ್ದ ಪ್ರತಿಭಟನಾ ಮೆರವಣಿಗೆಯನ್ನು ಹಿಂಪಡೆಯುವುದಾಗಿ ಬಹಿರಂಗ ನ್ಯಾಯಾಲಯದಲ್ಲಿ ಹೇಳಿಕೆ ನೀಡುವಂತೆಯೂ CJP ಗೆ ಸೂಚಿಸಲಾಯಿತು. ಜುಲೈನಲ್ಲಿ ಸಿಜೆಪಿ ಇಟ್ಟಿದ್ದ ಪ್ರಮುಖ ಬೇಡಿಕೆಯನ್ನು ಈಡೇರಿಸಲು ಸರ್ಕಾರಕ್ಕೆ ನ್ಯಾಯಾಲಯವು ಮಧ್ಯಸ್ಥಿಕೆಯ ತಾಣವಾಗಿ ನೆರವಾಗಿದೆ.
ಸರ್ಕಾರದ ಭರವಸೆಗೆ ಕಾನೂನು ಬಲ ತಂದುಕೊಟ್ಟಿರುವ ಈ ಆದೇಶವು, ಸಂವಿಧಾನ ಜಾರಿಗೆ ಬಂದಂದಿನಿಂದಲೂ ಕಾನೂನು ತಜ್ಞರ ನಡುವೆ ಚರ್ಚೆಗೆ ಗ್ರಾಸವಾಗಿರುವ 142ನೇ ವಿಧಿಯತ್ತ ಮತ್ತೆ ಗಮನ ಸೆಳೆಯುವಂತೆ ಮಾಡಿದೆ.
*ಸಂವಿಧಾನದ 142ನೇ ವಿಧಿ ಯಾವುದು?
ತನ್ನ ಎದುರು ಬಾಕಿ ಇರುವ ಯಾವುದೇ ವಿಚಾರ ಅಥವಾ ಪ್ರಕರಣದಲ್ಲಿ "ಪೂರ್ಣ ನ್ಯಾಯ ಒದಗಿಸಲು ಅಗತ್ಯವಿರುವ ತೀರ್ಪು ಅಥವಾ ಆದೇಶವನ್ನು" ಹೊರಡಿಸಲು 142ನೇ ವಿಧಿಯು ಸುಪ್ರೀಂ ಕೋರ್ಟ್ ಗೆ ಅಧಿಕಾರ ನೀಡುತ್ತದೆ. ಸಂವಿಧಾನದ ಹೆಚ್ಚಿನ ನಿಬಂಧನೆಗಳಂತೆ, ಇದು "ಪೂರ್ಣ ನ್ಯಾಯ" ಎಂದರೇನು ಎಂಬುದನ್ನು ವ್ಯಾಖ್ಯಾನಿಸುವುದಿಲ್ಲ ಅಥವಾ ಇದನ್ನು ಯಾವಾಗ ಬಳಸಬಹುದು ಎಂಬುದನ್ನು ನಿರ್ದಿಷ್ಟಪಡಿಸುವುದಿಲ್ಲ.
ಈ ವಿಧಿಯ ಮೂಲವನ್ನು 1935ರ ಭಾರತ ಸರ್ಕಾರದ ಕಾಯ್ದೆಯ 210ನೇ ವಿಭಾಗದಲ್ಲಿ ಕಾಣಬಹುದು. ಲಿಖಿತ ಕಾನೂನಿನಲ್ಲಿ ಸ್ಪಷ್ಟ ಉಲ್ಲೇಖವಿಲ್ಲದಿದ್ದಾಗ 'ನ್ಯಾಯ, ಸಮಾನತೆ ಮತ್ತು ಸದ್ಭಾವನೆ'ಯ ಆಧಾರದ ಮೇಲೆ ವಿವಾದಗಳನ್ನು ಬಗೆಹರಿಸುತ್ತಿದ್ದ ವಸಾಹತುಶಾಹಿ ಕಾಲದ ಪದ್ಧತಿಯೇ ಇದಕ್ಕೆ ಪ್ರೇರಣೆ. ಕರಡು ಸಂವಿಧಾನದಲ್ಲಿ ಇದು 118ನೇ ವಿಧಿಯಾಗಿ ಸೇರ್ಪಡೆಯಾಗಿತ್ತು. 1949ರ ಮೇ 27ರಂದು ಯಾವುದೇ ಚರ್ಚೆಯಿಲ್ಲದೆ ಸಂವಿಧಾನ ರಚನಾ ಸಭೆಯು ಇದನ್ನು ಅಂಗೀಕರಿಸಿತು. ಇದಕ್ಕೆ ತರಲಾದ ಎರಡು ತಿದ್ದುಪಡಿಗಳನ್ನು ನಂತರ ಹಿಂಪಡೆಯಲಾಯಿತು.
ಈ ವಿಧಿಯ ಆಶಯದ ಕುರಿತು ಸಂವಿಧಾನ ರಚನಾ ಸಭೆಯಲ್ಲಿ ನಡೆದ ಅತ್ಯಂತ ಸಮೀಪದ ಚರ್ಚೆ ತೀರಾ ಸಾಂದರ್ಭಿಕವಾಗಿತ್ತು. ಮೇಲ್ಮನವಿಗಳನ್ನು ಆಲಿಸಲು ನ್ಯಾಯಾಲಯಕ್ಕೆ ವಿಶೇಷ ಅನುಮತಿ ನೀಡುವ ಸಂಬಂಧಿತ ವಿಧಿಯ ಮೇಲಿನ ಚರ್ಚೆಯ ಸಂದರ್ಭದಲ್ಲಿ, ಸದಸ್ಯ ಕೃಷ್ಣ ಚಂದ್ರ ಶರ್ಮಾ ಅವರು ನ್ಯಾಯಾಲಯಕ್ಕೆ ಪ್ರಸ್ತಾಪಿಸಲಾದ ಅಧಿಕಾರವನ್ನು ಹಳೆಯ ಪ್ರಿವಿ ಕೌನ್ಸಿಲ್ ನ ಅಧಿಕಾರಕ್ಕೆ ಹೋಲಿಸಿದ್ದರು. ಮೇಲ್ಮನವಿ ಇರಲಿ ಇಲ್ಲದಿರಲಿ, ನ್ಯಾಯಕ್ಕಾಗಿ ಮಧ್ಯಪ್ರವೇಶಿಸುವ ಅಧಿಕಾರ ಪ್ರಿವಿ ಕೌನ್ಸಿಲ್ ಗೆ ಇತ್ತು. ಅದನ್ನು ಹೊರತುಪಡಿಸಿ, ನ್ಯಾಯಾಲಯದ ಅತ್ಯಂತ ವಿಸ್ತಾರವಾದ ಈ ಬೃಹತ್ ಅಧಿಕಾರ ವ್ಯಾಪ್ತಿಯನ್ನು ಕಾಲಕಾಲಕ್ಕೆ ತಕ್ಕಂತೆ ವ್ಯಾಖ್ಯಾನಿಸಿಕೊಳ್ಳುವ ಜವಾಬ್ದಾರಿಯನ್ನು ಮುಂದಿನ ಏಳು ದಶಕಗಳಲ್ಲಿ ಸ್ವತಃ ಸುಪ್ರೀಂ ಕೋರ್ಟ್ ಗೇ ಬಿಡಲಾಯಿತು.
*ಈ ಅಧಿಕಾರವನ್ನು ಸುಪ್ರೀಂ ಕೋರ್ಟ್ ಹಿಂದೆ ಹೇಗೆ ಬಳಸಿದೆ?
142ನೇ ವಿಧಿಯ ಮುಕ್ತ ಸ್ವರೂಪವು ಇದನ್ನು ನ್ಯಾಯಾಲಯದ ಅತ್ಯಂತ ಬಳಕೆದಾರ ಸ್ನೇಹಿ ಅಸ್ತ್ರವನ್ನಾಗಿ ಮಾಡಿದೆ. ಈ ಅಸಾಧಾರಣ ಅಧಿಕಾರವನ್ನು ನೀಡಿರುವ ವಿಧಿಯನ್ನು ಹಲವು ಪ್ರಮುಖ ಪ್ರಕರಣಗಳಲ್ಲಿ ಬಳಸಲಾಗಿದೆ.
1989ರ ಭೋಪಾಲ್ ಅನಿಲ ದುರಂತ: ಯೂನಿಯನ್ ಕಾರ್ಬೈಡ್ ಕಂಪೆನಿಯಿಂದ 470 ಮಿಲಿಯನ್ ಡಾಲರ್ ಪರಿಹಾರವನ್ನು ಖಚಿತಪಡಿಸಿಕೊಳ್ಳಲು ಮತ್ತು ಕಂಪೆನಿಯ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ವಜಾಗೊಳಿಸಲು ಇದನ್ನು ಬಳಸಲಾಯಿತು.
ಅಯೋಧ್ಯೆ ಜಮೀನು ವಿವಾದ: "ಸಾಕ್ಷ್ಯಾಧಾರಗಳ ಶೇಕಡಾವಾರು ಆಧಾರದ ಮೇರೆಗೆ" ವಿವಾದ ಇತ್ಯರ್ಥಪಡಿಸಿ, ಮುಸ್ಲಿಂ ಕಕ್ಷಿದಾರರಿಗೆ ಐದು ಎಕರೆ ಪರ್ಯಾಯ ಜಾಗ ನೀಡಲು ಈ ಅಧಿಕಾರ ಬಳಸಲಾಯಿತು.
ರಾಜೀವ್ ಗಾಂಧಿ ಹತ್ಯೆ ಪ್ರಕರಣ: 2022ರಲ್ಲಿ ಅಪರಾಧಿ ಎ. ಜಿ. ಪೇರರಿವಾಳನ್ ಬಿಡುಗಡೆಗೆ ಆದೇಶಿಸಲು ಈ ವಿಧಿಯನ್ನು ಬಳಸಲಾಯಿತು.
ಇವುಗಳ ಹೊರತಾಗಿ, ದಾಂಪತ್ಯವನ್ನು ಮತ್ತೆ ಸರಿಪಡಿಸಲು ಸಾಧ್ಯವೇ ಇಲ್ಲ ಎಂಬ ಹಂತ ತಲುಪಿದಾಗ ವಿಚ್ಛೇದನ ನೀಡಲು ಹಾಗೂ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯಲ್ಲೂ ನ್ಯಾಯಾಲಯ ಈ ಅಧಿಕಾರವನ್ನು ಬಳಸುತ್ತದೆ.
ಐಐಎಂ ಅಹಮದಾಬಾದ್ ನ ಸಂಶೋಧಕರು ನಡೆಸಿದ ಅಧ್ಯಯನವೊಂದರಲ್ಲಿ, 1950ರಿಂದ 2023ರ ನಡುವೆ "142ನೇ ವಿಧಿ" ಅಥವಾ "ಪೂರ್ಣ ನ್ಯಾಯ" ಎಂಬ ಉಲ್ಲೇಖವಿರುವ ಪ್ರತಿಯೊಂದು ಪ್ರಕರಣವನ್ನು ಪರಿಶೀಲಿಸಲಾಗಿದೆ. ಈ ಅಧ್ಯಯನದಲ್ಲಿ 1,579 ಉಲ್ಲೇಖಗಳು ಮತ್ತು 791 ನೇರ ಅನ್ವಯಗಳು ಕಂಡುಬಂದಿದ್ದು, ಇವುಗಳಲ್ಲಿ ಹೆಚ್ಚಿನವು ಸಿವಿಲ್ ಪ್ರಕರಣಗಳಾಗಿವೆ.
*ಕೋರ್ಟ್ ತನ್ನ ಅಧಿಕಾರ ವ್ಯಾಪ್ತಿಯನ್ನು ಮಿತಿಗೊಳಿಸಲು ಯತ್ನಿಸಿದೆಯೇ?
ವಿಶ್ವದಲ್ಲೇ ಅತ್ಯಂತ ಶಕ್ತಿಶಾಲಿ ಸಂವಿಧಾನಾತ್ಮಕ ನ್ಯಾಯಾಲಯಗಳಲ್ಲಿ ಸುಪ್ರೀಂ ಕೋರ್ಟ್ ಕೂಡ ಒಂದು ಎಂಬ ಹೆಗ್ಗಳಿಕೆಯಿದೆ. ಈ ಶಕ್ತಿಗೆ 142ನೇ ವಿಧಿಯಡಿ ಇರುವ ಅಧಿಕಾರವೇ ಮುಖ್ಯ ಕಾರಣ. 38 ನ್ಯಾಯಮೂರ್ತಿಗಳು ಹೆಚ್ಚಾಗಿ ಇಬ್ಬರ ಪೀಠಗಳಲ್ಲಿ ಕುಳಿತು ತೀರ್ಪು ನೀಡುವ ನ್ಯಾಯಾಲಯದಲ್ಲಿ, ಈ ವಿವೇಚನಾಧಿಕಾರದ ಪ್ರಭಾವ ಇನ್ನಷ್ಟು ಹೆಚ್ಚಿರುತ್ತದೆ.
ಆದರೆ, ನ್ಯಾಯಮೂರ್ತಿಗಳು ಅತಿಯಾದ ವಿವೇಚನಾಧಿಕಾರ ಬಳಕೆಯನ್ನು ತಡೆಯಲು ಸ್ವತಃ ಸುಪ್ರೀಂ ಕೋರ್ಟ್ ಈ ನಿಯಮಕ್ಕೆ ಕೆಲ ಗೆರೆಗಳನ್ನು ಎಳೆಯಲು ಯತ್ನಿಸಿದೆ.
1962ರ ಪ್ರೇಮ್ ಚಂದ್ ಗಾರ್ಗ್ Vs ಉತ್ತರ ಪ್ರದೇಶ ಸರ್ಕಾರದ ನಡುವಿನ ಪ್ರಕರಣದಲ್ಲಿ, 142ನೇ ವಿಧಿಯಡಿಯ ಆದೇಶಗಳು ಮೂಲಭೂತ ಹಕ್ಕುಗಳು ಮತ್ತು ಕಾನೂನಿಗೆ ಬದ್ಧವಾಗಿರಬೇಕು ಎಂದು ಕೋರ್ಟ್ ಹೇಳಿತ್ತು. 1998ರ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ Vs ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ, 142ನೇ ವಿಧಿಯು ಕಾನೂನಿನಲ್ಲಿರುವ ಖಾಲಿ ಜಾಗವನ್ನು ಭರ್ತಿ ಮಾಡಬಹುದೇ ಹೊರತು, ಚಾಲ್ತಿಯಲ್ಲಿರುವ ಕಾನೂನು ನಿಯಮಗಳನ್ನು ಮೀರಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಲಾಗಿತ್ತು. ಆದರೆ, ಸುಪ್ರೀಂ ಕೋರ್ಟ್ ಅನೇಕ ಬಾರಿ ತನ್ನದೇ ಈ ಎಚ್ಚರಿಕೆಯನ್ನು ಬದಿಗೊತ್ತಿದೆ.
*ಸಿಜೆಪಿ ಪ್ರಕರಣದ ತೀರ್ಪು ಈ ಗೆರೆಯನ್ನು ಹೇಗೆ ದಾಟುತ್ತದೆ?
ಸಾಧಾರಣವಾಗಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 528ರ ಅಡಿಯಲ್ಲಿ ಎಫ್ಐಆರ್ ರದ್ದುಗೊಳಿಸುವ ಮುನ್ನ ಪ್ರತಿಯೊಂದು ಪ್ರಕರಣದ ಸತ್ಯಾಸತ್ಯತೆಯನ್ನು ಪ್ರತ್ಯೇಕವಾಗಿ ಪರಿಶೀಲಿಸಲಾಗುತ್ತದೆ. ಅಲ್ಲಿ ಅಪರಾಧ ನಡೆದಿದೆಯೇ ಅಥವಾ ಆ ಪ್ರಕರಣಗಳು ದ್ವೇಷಪೂರಿತವೇ ಎಂದು ಕೋರ್ಟ್ ಪ್ರಶ್ನಿಸಬೇಕಾಗುತ್ತದೆ.
ಆದರೆ, ಸಿಜೆಪಿ ಪ್ರಕರಣದ ಆದೇಶದಲ್ಲಿ, ಕೇಂದ್ರ ಸರ್ಕಾರ ಮತ್ತು ಪ್ರತಿಭಟನಾ ಗುಂಪಿನ ನಡುವಿನ ಸಂಧಾನದ ಭಾಗವಾಗಿ ಹಲವು ರಾಜ್ಯಗಳ ಸಾವಿರಾರು ಎಫ್ಐಆರ್ ಗಳನ್ನು ಯಾವುದೇ ಕೂಲಂಕಷ ಪರಿಶೀಲನೆಯಿಲ್ಲದೆ ಒಟ್ಟಾಗಿ ರದ್ದುಗೊಳಿಸಲಾಗಿದೆ. ಈ ಆದೇಶವು ಪ್ರಕ್ರಿಯೆಯ ಸುಲಭಕ್ಕಾಗಿ, ಎಫ್ಐಆರ್ ರದ್ದುಗೊಳಿಸುವ ಕಾನೂನುಬದ್ಧ ನಿಯಮಗಳನ್ನು ಬದಿಗೊತ್ತಿ, ಕಾನೂನು ಹೇಗೆ ಕಾರ್ಯಾಚರಿಸಬೇಕು ಎಂಬುದರ ಕುರಿತು 142ನೇ ವಿಧಿಯಡಿಯ ತನ್ನದೇ ವಿವೇಚನೆಯನ್ನು ಹೇರಿದೆ. ಯಾರಿಗೆ ಈ ರಕ್ಷಣೆಯಿಂದ ವಿನಾಯಿತಿ ನೀಡಬೇಕು ಎಂಬುದನ್ನು ನಿರ್ಧರಿಸಲು ಸಹ ಕೋರ್ಟ್ ಇದೇ ವಿವೇಚನಾಧಿಕಾರವನ್ನು ಬಳಸಿದೆ.
ಸರ್ವವ್ಯಾಪಿ ನ್ಯಾಯಾಂಗ ಆದೇಶದ ಮೂಲಕ ಕ್ರಿಮಿನಲ್ ಕಾನೂನು ನಿಯಮಗಳನ್ನು ಬದಿಗೊತ್ತಲು ಸಾಧ್ಯವಿಲ್ಲ ಎಂದು ಕಾನೂನು ತಜ್ಞ ಗೌತಮ್ ಭಾಟಿಯಾ ವಾದಿಸುತ್ತಾರೆ.
*142ನೇ ವಿಧಿ ಟೀಕೆಗೆ ಗುರಿಯಾಗಿರುವುದು ಇದೇ ಮೊದಲೇ?
ಕಳೆದ ವರ್ಷ ತಮಿಳುನಾಡಿನಲ್ಲಿ ಸುದೀರ್ಘ ಕಾಲದಿಂದ ನೆನೆಗುದಿಗೆ ಬಿದ್ದಿದ್ದ ವಿಧೇಯಕಗಳನ್ನು ಅಂಗೀಕೃತವೆಂದು ಘೋಷಿಸಲು ನ್ಯಾಯಾಲಯ ಇದೇ ವಿಧಿಯನ್ನು ಬಳಸಿದ್ದಾಗ, ಉಪರಾಷ್ಟ್ರಪತಿಯಾಗಿದ್ದ ಜಗದೀಪ್ ಧನಕರ್ ಇದನ್ನು ಪ್ರಜಾಪ್ರಭುತ್ವ ವ್ಯವಸ್ಥೆಯ ವಿರುದ್ಧದ "ನ್ಯೂಕ್ಲಿಯರ್ ಕ್ಷಿಪಣಿ" ಎಂದು ಕರೆದಿದ್ದರು.
ಭಾರತದ ಮಾಜಿ ಅಟಾರ್ನಿ ಜನರಲ್ ಕೆ. ಕೆ. ವೇಣುಗೋಪಾಲ್ ಕೂಡ ಈ ಹಿಂದೆ ಇದೇ ರೀತಿಯ ಟೀಕೆ ಮಾಡಿದ್ದರು. 2017ರಲ್ಲಿ ಬರೆದಿದ್ದ ಅವರು, ಈ ನಿಯಮವು ಸಮಾಜದ ವಂಚಿತ ವರ್ಗಗಳಿಗೆ "ಬಹಳಷ್ಟು ಒಳಿತು" ಮಾಡಿದೆಯಾದರೂ, ಈಗ ಇದರ ಬಳಕೆಗೆ ಸೂಕ್ತ ಮಿತಿ ಮತ್ತು ನಿಯಂತ್ರಣಗಳನ್ನು ತರುವ ಸಮಯ ಬಂದಿದೆ ಎಂದಿದ್ದರು.
ಆ ನಂತರದ ವರ್ಷ, ಶಬರಿಮಲೆ ತೀರ್ಪಿನ ಬಳಿಕ ಅವರು ಇನ್ನಷ್ಟು ಖಾರವಾಗಿ ಪ್ರತಿಕ್ರಿಯಿಸಿ, 142ನೇ ವಿಧಿಯನ್ನು "ಅಪರಿಮಿತ ಅಧಿಕಾರಗಳನ್ನು ಹರಿಸುವ ಕಾಮಧೇನು" ಎಂದು ಹೇಳಿದ್ದರು. ಈ ವಿಧಿಯ ಬಳಕೆಯು ಕೇವಲ ಇಬ್ಬರು ಅಥವಾ ಮೂವರು ನ್ಯಾಯಮೂರ್ತಿಗಳ ಸಣ್ಣ ಪೀಠದ ನಿರ್ಧಾರಕ್ಕೆ ಸೀಮಿತವಾಗಬಾರದು. ಕನಿಷ್ಠ ಐವರು ನ್ಯಾಯಮೂರ್ತಿಗಳಿರುವ ಸಂವಿಧಾನ ಪೀಠಗಳಿಗೆ ಮಾತ್ರ ಇದನ್ನು ಬಳಸುವ ಅಧಿಕಾರವಿರಬೇಕು ಎಂದು ಅವರು ಸಲಹೆ ನೀಡಿದ್ದರು.
ಸೌಜನ್ಯ: indianexpress.com






