ಜಂತರ್ ಮಂತರ್ ಪ್ರತಿಭಟನೆ ಪ್ರಕರಣ: ನಾಲ್ಕು ಗಂಟೆಗಳ ಕಾಲ CJP ನಾಯಕರ ವಿಚಾರಣೆ

Photo Credit : PTI
ಹೊಸದಿಲ್ಲಿ: ಜಂತರ್ ಮಂತರ್ ನಲ್ಲಿ ಅಕ್ಟೋಬರ್ 13ರಂದು ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ದಾಖಲಾಗಿರುವ ಎರಡು FIRಗಳ ಕುರಿತು ಕಾಕ್ರೋಚ್ ಜನತಾ ಪಾರ್ಟಿ (CJP) ನಾಯಕರಾದ ಸೌರವ್ ದಾಸ್, ಅಶುತೋಷ್ ರಂಕಾ ಮತ್ತು ಅಜಿಂಕ್ಯಾ ಶಿಂದೆ ಅವರನ್ನು ದಿಲ್ಲಿ ಅಪರಾಧ ವಿಭಾಗದ ಪೊಲೀಸರು ಗುರುವಾರ ಸುಮಾರು ನಾಲ್ಕು ಗಂಟೆಗಳ ಕಾಲ ವಿಚಾರಣೆ ನಡೆಸಿದರು.
ಮೂವರು ನಾಯಕರು ಬೆಳಿಗ್ಗೆ ಸುಮಾರು 11 ಗಂಟೆಗೆ ರಜೌರಿ ಗಾರ್ಡನ್ ನಲ್ಲಿರುವ ಅಪರಾಧ ವಿಭಾಗದ ಕಚೇರಿಗೆ ಹಾಜರಾದರು. ಮಧ್ಯಾಹ್ನ 3 ಗಂಟೆ ಸುಮಾರಿಗೆ ವಿಚಾರಣೆ ಮುಕ್ತಾಯಗೊಂಡಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಚಾರಣೆ ವೇಳೆ ನಾಯಕರಿಗೆ ಒಟ್ಟು 70 ಪ್ರಶ್ನೆಗಳನ್ನು ಕೇಳಲಾಗಿದೆ. ಈ ಪೈಕಿ ಕೆಲವು ಪ್ರಶ್ನೆಗಳಿಗೆ ಅವರು ಉತ್ತರ ನೀಡಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಡಿನೋಟಿಫೈ ಮಾಡಲಾಗಿದ್ದ ಪ್ರತಿಭಟನಾ ಸ್ಥಳವಾದ ಜಂತರ್ ಮಂತರ್ಗೆ ಅಕ್ಟೋಬರ್ 13ರಂದು ಪ್ರವೇಶಿಸಿದ ಆರೋಪಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಎರಡು FIRಗಳ ವಿಚಾರಣೆಗೆ CJP ನಾಯಕರು ಹಾಜರಾಗಿದ್ದರು.
ಆರಂಭದಲ್ಲಿ ಕನ್ನಾಟ್ ಪ್ಲೇಸ್ ಮತ್ತು ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗಳಲ್ಲಿ ಈ ಪ್ರಕರಣಗಳು ದಾಖಲಾಗಿದ್ದವು. ಬಳಿಕ ಅವುಗಳನ್ನು ದಿಲ್ಲಿ ಅಪರಾಧ ವಿಭಾಗಕ್ಕೆ ವರ್ಗಾಯಿಸಲಾಗಿತ್ತು.






