AI ಗೆ ಬದಲಾವಣೆಯ ನಂತರ 1,100 ಉದ್ಯೋಗಿಗಳನ್ನು ವಜಾ ಮಾಡಿದ ಕ್ಲೌಡ್ ಫ್ಲೇರ್!

ಕ್ಲೌಡ್ ಫ್ಲೇರ್ | Photo Credit : Cloudflare
AI ಚಾಲಿತ ಕಾರ್ಯಾಚರಣೆಗಳ ಕಡೆಗೆ ದೊಡ್ಡ ಬದಲಾವಣೆ ತರುತ್ತಿರುವ ಕಾರಣದಿಂದ ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆಯೇ ವಿನಾ ವೆಚ್ಚ ಕಡಿತದ ಉದ್ದೇಶದಿಂದಲ್ಲ ಎಂದು ಕಂಪೆನಿ ಹೇಳಿಕೊಂಡಿದೆ.
ಸುಮಾರು 5,500 ಉದ್ಯೋಗಿಗಳನ್ನು ಹೊಂದಿರುವ ಕ್ಲೌಡ್ ಫ್ಲೇರ್ ಕಂಪೆನಿ ಇತ್ತೀಚೆಗೆ 1,100 ಉದ್ಯೋಗಿಗಳನ್ನು ವಜಾ ಮಾಡಿದೆ. ಕೃತಕ ಬುದ್ಧಿಮತ್ತೆಯ (AI) ಪ್ರಗತಿ ಸುಮಾರು 1,100 ಉದ್ಯೋಗಗಳ ಅಗತ್ಯವಿಲ್ಲದಂತೆ ಮಾಡಿರುವ ಕಾರಣ ಕಂಪೆನಿಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ಉದ್ಯೋಗಿಗಳನ್ನು ವಜಾ ಮಾಡಲಾಗಿದೆ ಎಂದು ಕ್ಲೌಡ್ ಫ್ಲೇರ್ ಹೇಳಿದೆ.
ಅಂತರ್ಜಾಲ ಮೂಲಸೌಕರ್ಯ ಮತ್ತು ಸೈಬರ್ ಸೆಕ್ಯುರಿಟಿ ಕಂಪೆನಿಯಾಗಿರುವ ಕ್ಲೌಡ್ ಫ್ಲೇರ್ ತನ್ನ ಉದ್ಯೋಗಿಗಳ ಪ್ರಮಾಣದಲ್ಲಿ ಶೇ 20ರಷ್ಟನ್ನು ಕಡಿತಗೊಳಿಸುತ್ತಿದೆ. ಹೀಗಾಗಿ ಅನೇಕ ತಂಡಗಳು ಮತ್ತು ಪ್ರದೇಶಗಳಲ್ಲಿ ಉದ್ಯೋಗಿಗಳ ಮೇಲೆ ಪರಿಣಾಮ ಬೀರಲಿದೆ. ಕ್ಲೌಡ್ ಫ್ಲೇರ್ 2026ರ ಮೊದಲ ತ್ರೈಮಾಸಿಕದಲ್ಲಿ ದಾಖಲೆ ಪ್ರಮಾಣದ 639.8 ದಶಲಕ್ಷ ಡಾಲರ್ ನಷ್ಟು ಲಾಭ ಗಳಿಸಿದ ಹೊರತಾಗಿಯೂ ಉದ್ಯೋಗಿಗಳನ್ನು ವಜಾಗೊಳಿಸಲಾಗುತ್ತಿದೆ. ಕ್ಲೌಡ್ ಫ್ಲೇರ್ ಕಂಪೆನಿಯ ಆದಾಯ ವರ್ಷದಿಂದ ವರ್ಷಕ್ಕೆ ಶೇ 34ರಷ್ಟು ಏರಿಕೆಯಾಗಿದೆ.
AI ಚಾಲಿತ ಕಾರ್ಯಾಚರಣೆಗಳ ಕಡೆಗೆ ದೊಡ್ಡ ಬದಲಾವಣೆ ತರುತ್ತಿರುವ ಕಾರಣದಿಂದ ಈ ಪ್ರಮಾಣದಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆಯೇ ವಿನಾ ವೆಚ್ಚ ಕಡಿತದ ಉದ್ದೇಶದಿಂದಲ್ಲ ಎಂದು ಕಂಪೆನಿ ಹೇಳಿಕೊಂಡಿದೆ. ಕಂಪೆನಿಯ ಸಿಇಒ ಮತ್ತು ಸಹ ಸಂಸ್ಥಾಪಕ ಮ್ಯಾಥ್ಯೂ ಪ್ರಿನ್ಸ್ ಅವರ ಪ್ರಕಾರ, ಕಳೆದ ತಿಂಗಳು ಆಂತರಿಕವಾಗಿ AI ಟೂಲ್ ಗಗಳನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಂಡ ನಂತರ ಉತ್ಪಾದಕತೆಯಲ್ಲಿ ಸಾಕಷ್ಟು ಸುಧಾರಣೆ ಕಂಡುಬಂದಿದೆ.
ಮ್ಯಾಥ್ಯೂ ಪ್ರಿನ್ಸ್ ಅವರ ಪ್ರಕಾರ, ಕ್ಲೌಡ್ ಫ್ಲೇರ್ ಉದ್ಯೋಗಿಗಳು ಎಂಜಿನಿಯರಿಂಗ್, ಮಾನವ ಸಂಪನ್ಮೂಲ, ಹಣಕಾಸು, ಮಾರ್ಕೆಟಿಂಗ್ ಮತ್ತು ಇತರ ಇಲಾಖೆಗಳಲ್ಲಿ AI ತಂತ್ರಜ್ಞಾನವನ್ನು ಬಳಸುತ್ತಿದ್ದಾರೆ. ಕಳೆದ ಮೂರು ತಿಂಗಳಲ್ಲಿ AI ಬಳಕೆಯು ಶೇ 600ಕ್ಕಿಂತಲೂ ಹೆಚ್ಚಾಗಿದೆ. ಉದ್ಯೋಗಿಗಳು AI ಬದಲಾವಣೆಯ ನಂತರ ನೂರು ಪಟ್ಟು ಹೆಚ್ಚು ಉತ್ಪಾದಕತೆ ತೋರಿಸುತ್ತಿದ್ದಾರೆ. “ಈ ಬದಲಾವಣೆಯು ಸ್ಕ್ರೂಡ್ರೈವರ್ ನಿಂದ ವಿದ್ಯುತ್ ಸ್ಕ್ರೂಡ್ರೈವರ್ ಗೆ ಬದಲಾಗಿರುವಂತಹದ್ದಾಗಿದೆ” ಎಂದು ಅವರು ಹೇಳಿದ್ದಾರೆ.
ಕಂಪೆನಿಯ ಪ್ರಮುಖ ಗಮನ ಸಾಫ್ಟ್ವೇರ್ ಅಭಿವೃದ್ಧಿಯ ಕಡೆಗೆ ಹೊರಳಿದೆ. ಕ್ಲೌಡ್ ಫ್ಲೇರ್ ತನ್ನ ಬಹುತೇಕ ಸಂಪೂರ್ಣ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗವನ್ನು ಈಗ AI ಟೂಲ್ ಗಗಳ ನೆರವಿನ ಕೋಡಿಂಗ್ ಗೆ ಬದಲಾಯಿಸಿದೆ. ಆದರೆ ಎಲ್ಲಾ AI ನಿರ್ಮಿತ ಕೋಡ್ಗಳನ್ನು ತನ್ನ ಉತ್ಪನ್ನಗಳಲ್ಲಿ ನಿಯೋಜಿಸಲಾಗಿದ್ದು, ಸ್ವಾಯತ್ತ AI ಏಜೆಂಟ್ಗಳ ಪರಿಶೀಲನೆಯ ನಂತರ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿಕೊಂಡಿದೆ. ಪರಿಣಾಮವಾಗಿ ಅತ್ಯಂತ ಹೆಚ್ಚು ಉತ್ಪಾದಕ AI ಚಾಲಿತ ತಂಡಗಳಲ್ಲಿ ಕಡಿಮೆ ಉದ್ಯೋಗಿಗಳ ಅಗತ್ಯವಿದೆ. ಈಗಿನ ವಜಾಗಳು ಕ್ಲೌಡ್ ಫ್ಲೇರ್ ಕಂಪೆನಿಯ 16 ವರ್ಷಗಳ ಇತಿಹಾಸದಲ್ಲಿ ಅತಿದೊಡ್ಡ ಉದ್ಯೋಗ ಕಡಿತವಾಗಿದೆ.
ಆದಾಯ ಉತ್ಪಾದನೆಗೆ ನೇರವಾಗಿ ಸಂಬಂಧಿಸಿದ ಮಾರಾಟ ತಂಡಗಳನ್ನು ಹೊರತುಪಡಿಸಿ, ಬಹುತೇಕ ಎಲ್ಲಾ ವಿಭಾಗಗಳ ಮೇಲೆ ವಜಾದ ಪರಿಣಾಮವಾಗಲಿದೆ ಎಂದು ಕಂಪೆನಿಯ ಹಣಕಾಸು ಅಧಿಕಾರಿಗಳು ತಿಳಿಸಿದ್ದಾರೆ.
ಈಗಿನ ಉದ್ಯೋಗ ಕಡಿತದ ಹೊರತಾಗಿಯೂ ಭವಿಷ್ಯದಲ್ಲಿ ಹೆಚ್ಚಿನ ಉದ್ಯೋಗಿಗಳನ್ನು ನೇಮಕಾತಿ ಮಾಡಲು ಕ್ಲೌಡ್ ಫ್ಲೇರ್ ಯೋಜಿಸಿದೆ. AI ಟೂಲ್ ಗಗಳನ್ನು ಪರಿಣಾಮಕಾರಿಯಾಗಿ ಬಳಸುವ ಉದ್ಯೋಗಿಗಳು ಗಮನಾರ್ಹವಾಗಿ ಹೆಚ್ಚು ಮೌಲ್ಯಯುತ ಮತ್ತು ಉತ್ಪಾದಕರಾಗುತ್ತಿದ್ದಾರೆ. ಹೀಗಾಗಿ 2027ರ ವೇಳೆಗೆ ಕಂಪೆನಿ ಒಟ್ಟು ಕಾರ್ಯಪಡೆಯನ್ನು ಹೆಚ್ಚಿಸಬಹುದು ಎಂದು ಮ್ಯಾಥ್ಯೂ ಪ್ರಿನ್ಸ್ ಹೇಳಿದ್ದಾರೆ.






