ಜೂ. 8ರಂದು INDIA ಮೈತ್ರಿಕೂಟದ ಸಭೆಯನ್ನುದ್ದೇಶಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿದ ಸ್ವಾಗತ ಭಾಷಣ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅವರ ಭಾಷಣದ ಪೂರ್ಣಪಾಠ ‘ವಾರ್ತಾಭಾರತಿ’ಯ ಓದುಗರಿಗಾಗಿ...

ರಾಹುಲ್ ಗಾಂಧಿ | Photo Credit : PTI
“ನಾನಿಂದು ನಿಮ್ಮೆಲ್ಲರನ್ನು ಇಲ್ಲಿಗೆ ಸ್ವಾಗತಿಸಲು ಬಯಸುತ್ತೇನೆ. ಇಲ್ಲಿಗೆ ಆಗಮಿಸಿದ್ದಕ್ಕಾಗಿ ಧನ್ಯವಾದಗಳು.
ನಾನು ಕೆಲವು ವರ್ಷಗಳ ಹಿಂದೆ ನನ್ನ ತುಂಬಾ ಒಳ್ಳೆಯ ಸ್ನೇಹಿತನೊಂದಿಗೆ ವಾದಕ್ಕೆ ಇಳಿದಿದ್ದೆ. ನೀನು ಮಾಡುತ್ತಿರುವುದು ನ್ಯಾಯವಲ್ಲ ಎಂದು ನಾನು ಆತನಿಗೆ ತಿಳಿಸಿದೆ. ಅದಕ್ಕೆ ಆತ, ‘ಜಗತ್ತೇ ಅನ್ಯಾಯಯುತವಾಗಿದೆ. ಅದಕ್ಕೆ ಹೊಂದಿಕೊಳ್ಳುವುದನ್ನು ಕಲಿ’ ಎಂದು ಉತ್ತರಿಸಿದ್ದ.
ಇಂದು ಕಾಂಗ್ರೆಸ್ ಕುರಿತು ಹೇಳಿರುವ ಯಾವುದೇ ವಿಷಯಗಳಿಗೆ ಉತ್ತರಿಸುವ ಸ್ಥಾನದಲ್ಲಿ ನಾನಿಲ್ಲ. ಶೈವ ಸಂಪ್ರದಾಯದಂತೆ ಎಲ್ಲವನ್ನೂ ನುಂಗುವ ಸ್ಥಾನದಲ್ಲಿ ನಾನಿದ್ದೇನೆ. ಇದು ಎಲ್ಲ ವಿಷವನ್ನೂ ಸೇವಿಸುವ ನೀಲಕಂಠ ಶಿವನ ಪರಿಕಲ್ಪನೆಯಾಗಿದೆ. ನಿಮಗೆ ಇನ್ನೇನು ಹೇಳಬೇಕಿದ್ದರೂ, ನನ್ನ ಬಗ್ಗೆ ಅಥವಾ ಕಾಂಗ್ರೆಸ್ ಬಗ್ಗೆ ಏನೇ ಟೀಕೆಗಳಿದ್ದರೂ, ನಾವು ಅದನ್ನು ಒಪ್ಪಿಕೊಳ್ಳುತ್ತೇವೆ ಹಾಗೂ ನಾವು ಅದನ್ನು ನಮ್ಮ ನಗುಮೊಗದೊಂದಿಗೆ ಸಂತೋಷವಾಗಿ ಸ್ವೀಕರಿಸುತ್ತೇವೆ.
ನಾವು ನಿಮ್ಮನ್ನು ಸಂತೋಷವಾಗಿಡಲು ಪ್ರಯತ್ನಿಸುತ್ತೇವೆ. ಯಾಕೆಂದರೆ, ನಮ್ಮ ಪಾತ್ರ ಮೂಲಭೂತವಾಗಿ ನಿಮಗಿಂತ ಭಿನ್ನವಾಗಿದೆ. ನಾನಿದನ್ನು ಅಹಂಕಾರದಿಂದ ಹೇಳುತ್ತಿಲ್ಲ. ನಿಮ್ಮಲ್ಲಿ ಬಹುತೇಕರು ಹೇಳಿದಂತೆ ನಿಮ್ಮೆಲ್ಲರನ್ನೂ ಪ್ರೀತಿ ಮತ್ತು ವಾತ್ಸಲ್ಯದೊಂದಿಗೆ ಒಗ್ಗೂಡಿಸುವುದು ನಮ್ಮ ಪಾತ್ರವಾಗಿದೆ.
ನಾನು 2004ರಿಂದ ಕಾಂಗ್ರೆಸ್ ಸಂಸದನಾಗಿದ್ದೇನೆ. ನಮ್ಮ ಪಕ್ಷ ಮೂಲಭೂತವಾಗಿ ದೇಶದ ಇತರ ಎಲ್ಲಾ ಪಕ್ಷಗಳಿಗಿಂತ ವಿಭಿನ್ನವಾಗಿ ಸಂಘಟಿತಗೊಂಡಿದೆ ಹಾಗೂ ನಾನಿದನ್ನು ವಿನಮ್ರವಾಗಿ ಹೇಳುತ್ತಿದ್ದೇನೆ.
ಯಾಕೆ? ಆಧುನಿಕ ಭಾರತ ರೂಪುಗೊಳ್ಳುವ ಮೊದಲೇ ನಮ್ಮ ಪಕ್ಷ ಅಸ್ತಿತ್ವಕ್ಕೆ ಬಂದಿತ್ತು. ಬೇರೆಲ್ಲ ಪಕ್ಷಗಳಂತೆ ಈ ಪಕ್ಷವನ್ನು ಮೂಲಸೌಕರ್ಯ ಮತ್ತು ಭಾರತೀಯ ರಾಜ್ಯಾಧಿಕಾರದ ರಕ್ಷಣೆಯೊಂದಿಗೆ ನಿರ್ಮಿಸಿಲ್ಲ. ಎಲ್ಲ ಭಾರತೀಯರು ಸಮಾನರು ಎಂಬ ಪರಿಕಲ್ಪನೆಯನ್ನು ರಕ್ಷಿಸುವ ಪ್ರತಿರೋಧದ ಚಳವಳಿಯಾಗಿ ಕಾಂಗ್ರೆಸ್ ಪಕ್ಷ ಬೆಳೆಯಿತು.
ನಾವು ಮೂಲಭೂತವಾಗಿ RSSನ ದೃಷ್ಟಿಕೋನವನ್ನು ವಿರೋಧಿಸುತ್ತೇವೆ. ಬಿಜೆಪಿ ಅಥವಾ RSSನೊಂದಿಗೆ ರಾಜಿ ಮಾಡಿಕೊಳ್ಳುವ ಬದಲು ಕಾಂಗ್ರೆಸ್ ಪಕ್ಷದಲ್ಲೇ ಸಾಯುತ್ತೇವೆ. ಹಾಗಾಗಲು ನೀವು ನಮ್ಮ ತಲೆಯನ್ನು ಕತ್ತರಿಸಬೇಕಾಗುತ್ತದೆ. ನಮ್ಮ ತಲೆ ಕತ್ತರಿಸಿದರೂ RSS ಮುಂದೆ ತಲೆಬಾಗುವುದಿಲ್ಲ ಎಂದು ಹೇಳುವ ಲಕ್ಷಾಂತರ ಕಾಂಗ್ರೆಸ್ ಕಾರ್ಯಕರ್ತರು ಈ ದೇಶದಲ್ಲಿದ್ದಾರೆ ಎಂಬುದು ನನಗೆ ಗೊತ್ತಿದೆ.
ಈ ಗುಂಪಿನಲ್ಲಿ ಒಂದು ಗೊಂದಲವಿದೆ ಎಂದು ಹೇಳಲು ನನಗೆ ವಿಷಾದವಾಗುತ್ತಿದೆ. SP, TMC, RJD ಇತ್ಯಾದಿ ಪಕ್ಷಗಳು ಇಲ್ಲಿಯವರೆಗೆ ಬಳಸಿದ ರಾಜಕೀಯ ಸಾಧನಗಳು ಇನ್ನೂ ಕೆಲಸ ಮಾಡುತ್ತವೆ ಎಂಬ ನಂಬಿಕೆಯಲ್ಲಿ ಇವೆ. ಇದೇ ಗೊಂದಲವಾಗಿದೆ. ಭಾರತೀಯ ರಾಜ್ಯಾಧಿಕಾರವು ಅವರಿಗೆ ಕಾರ್ಯಾಚರಿಸಲು ನ್ಯಾಯಯುತ ಅವಕಾಶ ಒದಗಿಸುತ್ತಿದ್ದಾಗ ಮಾತ್ರ ಆ ರಾಜಕೀಯ ಸಾಧನಗಳು ಕೆಲಸ ಮಾಡುತ್ತಿದ್ದವು. ಆದರೆ, ಆ ಅವಕಾಶ ಇನ್ನು ಉಳಿದಿಲ್ಲ. ಬಿಜೆಪಿಯು ದೇಶದ ಸಂಸ್ಥೆಗಳನ್ನು, ಕಾನೂನು ವ್ಯವಸ್ಥೆಯನ್ನು, ಅಧಿಕಾರಶಾಹಿಯನ್ನು ಹಾಗೂ ಗುಪ್ತಚರ ಸಂಸ್ಥೆಗಳನ್ನು ನಿಯಂತ್ರಿಸುತ್ತಿದೆ. ಚುನಾವಣಾ ಆಯೋಗವನ್ನೂ ನಿಯಂತ್ರಿಸುತ್ತಿದೆ.
ನನಗೆ ಟಿಎಂಸಿಯಲ್ಲಿ ಹಲವಾರು ಸ್ನೇಹಿತರಿದ್ದಾರೆ. ನಾವು ಚುನಾವಣೆಯಲ್ಲಿ ಜಯ ಸಾಧಿಸುತ್ತೇವೆ ಎಂಬ ನಂಬಿಕೆ ಅವರಲ್ಲಿತ್ತು. ಆದರೆ, ನಾನು ಅವರಿಗೆ ಪದೇ ಪದೇ, ‘ನೀವು ಭ್ರಮಾ ಲೋಕದಲ್ಲಿದ್ದೀರಿ. ಮುಂದೆ ಏನಾಗಲಿದೆ ಎಂಬುದು ನನಗೆ ಸ್ಪಷ್ಟವಾಗಿ ಕಾಣುತ್ತಿದೆ’ ಎಂದು ಹೇಳುತ್ತಿದ್ದೆ. ಗುಜರಾತ್ ನಲ್ಲಿ ಅದನ್ನು ನೋಡಿದ್ದೇನೆ, ಮಧ್ಯಪ್ರದೇಶದಲ್ಲಿ ನೋಡಿದ್ದೇನೆ, ಛತ್ತೀಸ್ ಗಢದಲ್ಲಿಯೂ ನೋಡಿದ್ದೇನೆ, ಹರಿಯಾಣ ಮತ್ತು ಮಹಾರಾಷ್ಟ್ರದಲ್ಲಿಯೂ ನೋಡಿದ್ದೇನೆ. ಆದರೂ, ನೀವದನ್ನು ಇನ್ನೂ ನಂಬುತ್ತಿಲ್ಲ.
ಕಾಂಗ್ರೆಸ್ ಪಕ್ಷವು ಪ್ರತಿರೋಧದ ಪಕ್ಷವಾಗಿದೆ. ತನ್ನ ಹೋರಾಟವನ್ನು ಮುಂದುವರಿಸಲು ಭಾರತೀಯ ರಾಜ್ಯ ವ್ಯವಸ್ಥೆ ತಟಸ್ಥವಾಗಿರಬೇಕೆಂಬ ಅಗತ್ಯ ಕಾಂಗ್ರೆಸ್ ಗೆ ಇಲ್ಲ. ವಾಸ್ತವವಾಗಿ, ದೇಶದ ಸಂಸ್ಥೆಗಳ ಮೇಲೆ ಎಷ್ಟೇ ಒತ್ತಡ ಹೇರಲಾಗಲಿ, ಸಂವಿಧಾನವನ್ನು ರಕ್ಷಿಸುವ ತನ್ನ ಹೋರಾಟವನ್ನು ಕಾಂಗ್ರೆಸ್ ಅಷ್ಟೇ ತೀವ್ರಗೊಳಿಸಲಿದೆ. ಕಾಂಗ್ರೆಸ್ ಪಕ್ಷದ ಆದರ್ಶಗಳನ್ನು ನಾವೆಲ್ಲ ಹಂಚಿಕೊಂಡಿದ್ದೇವೆ.
ಆ ಆದರ್ಶಗಳು ಯಾವುವು? ಸತ್ಯ, ಅಹಿಂಸೆ ಮತ್ತು ಸಹಾನುಭೂತಿ.
ಇಲ್ಲಿನ ಮುಖ್ಯ ವಿಷಯ ಯಾವುದು? ನನಗೆ ನಿಮ್ಮೊಂದಿಗೆ ಕಿತ್ತಾಡುವುದರಲ್ಲಿ ಯಾವುದೇ ಆಸಕ್ತಿ ಇಲ್ಲ. ನೀವು ನಮ್ಮ ಮಿತ್ರ ಪಕ್ಷಗಳು, ನಮ್ಮ ಸ್ನೇಹಿತರು ಹಾಗೂ ನಮ್ಮ ಆತ್ಮೀಯರು. ಇಂತಹ ಸಂದರ್ಭದಲ್ಲಿ ನಾನು ನಿಮ್ಮ ವಿರುದ್ಧ ಹೋರಾಡುತ್ತೇನೆ ಎಂದು ಹೇಳಿದರೆ, ಅದು ಮೂರ್ಖತನವಾಗುತ್ತದೆ. ದಯವಿಟ್ಟು ಅರ್ಥ ಮಾಡಿಕೊಳ್ಳಿ: 2024ರ ಚುನಾವಣೆಯಲ್ಲಿ ನಾವು ಸೋತಿರಲಿಲ್ಲ. ವಾಸ್ತವವಾಗಿ, ನಾವು ಗೆಲುವು ಸಾಧಿಸಿದ್ದೆವು. ನಿತೀಶ್ ಕುಮಾರ್ ನಮ್ಮನ್ನು ಯಾಕೆ ತೊರೆದರು ಎಂದು ನೀವು ಕೇಳಬಹುದು. ಆದರೆ ಅದಕ್ಕೆ ನಾನಾಗಲಿ, ಕಾಂಗ್ರೆಸ್ ಪಕ್ಷವಾಗಲಿ ಕಾರಣವಲ್ಲ.
ಬಿಜೆಪಿ ಮತ್ತು RSS ಭಾರತ ದೇಶದ ಮೇಲೆ ತನ್ನ ಹಿಡಿತವನ್ನು ಬಿಗಿಗೊಳಿಸುತ್ತಿರುವುದರಿಂದ, ರಾಜಕೀಯ ಹೋರಾಟದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದ ಸಾಧನಗಳೂ ಈಗ ನಿಷ್ಕ್ರಿಯವಾಗುತ್ತಿವೆ. ಇದೇ ರೀತಿಯ ಪರಿಸ್ಥಿತಿಯನ್ನು ಕಾಂಗ್ರೆಸ್ ಪಕ್ಷ ನೂರು ವರ್ಷಗಳ ಹಿಂದೆಯೇ ಎದುರಿಸಿತ್ತು. 1927ರ ಆರಂಭದಲ್ಲಿ ನಾವು ರಾಜಕೀಯ ಸಂಘಟನೆಯಾಗಿದ್ದೆವು. ಆದರೆ, ಗಾಂಧೀಜಿಯವರು ಸ್ವಾತಂತ್ರ್ಯದ ಹೋರಾಟಕ್ಕೆ ಕರೆ ನೀಡಿದಾಗ, ನಾವು ಪ್ರತಿರೋಧದ ಚಳವಳಿಯಾಗಿ ರೂಪಾಂತರಗೊಂಡೆವು.
ಒಂದು ವೇಳೆ ರಾಜಕೀಯ ಪಕ್ಷಗಳ ಸಾಂಪ್ರದಾಯಿಕ ಕಾರ್ಯವಿಧಾನಗಳು ಪರಿಣಾಮಕಾರಿಯಾಗದಿದ್ದರೆ, ಯಾವುದು ಕೆಲಸ ಮಾಡಲಿದೆ? ಪ್ರತಿರೋಧ ಕೆಲಸ ಮಾಡಲಿದೆ. ಅನ್ಯಾಯದ ವಿರುದ್ಧ ಜನರು ಎಲ್ಲೆಲ್ಲಿ ಪ್ರತಿರೋಧ ವ್ಯಕ್ತಪಡಿಸುತ್ತಾರೋ ಅಲ್ಲೆಲ್ಲ ಅದು ಪರಿಣಾಮ ಬೀರುತ್ತದೆ. ನಾನು ಅದನ್ನು ಸ್ವತಃ ಕಂಡಿದ್ದೇನೆ. ದೇಶದಾದ್ಯಂತ 4,000 ಕಿಮೀ ಸಂಚರಿಸಿದ ವೇಳೆ ಅನೇಕ ಕಡೆಗಳಲ್ಲಿ ಪ್ರತಿರೋಧದ ಶಕ್ತಿಯನ್ನು ನಾನು ಕಂಡಿದ್ದೇನೆ. ಇದಕ್ಕಾಗಿ ರಾಜಕೀಯ ಚೌಕಟ್ಟು, ಅಧಿಕಾರಶಾಹಿ ಅಥವಾ ಗುಪ್ತಚರ ಸಂಸ್ಥೆಗಳ ಬೆಂಬಲ ಅಗತ್ಯವಿಲ್ಲ. ‘ನಾನು ಪ್ರತಿರೋಧಿಸುತ್ತೇನೆ, ಅನ್ಯಾಯವನ್ನು ಒಪ್ಪುವುದಿಲ್ಲ’ ಎಂಬ ಮನೋಭಾವ ಸಾಕು. ಇದೇ ಸ್ಫೂರ್ತಿ. ಇದು ಕೇವಲ ಒಂದು ಸಂಘಟನೆಯ ವಿಷಯವಲ್ಲ; ಇದು ಒಂದು ಚಿಂತನಾ ಮಾರ್ಗವಾಗಿದೆ. ನಾವು ಇಷ್ಟಪಡಲಿ, ಪಡದಿರಲಿ, ಇದೇ ದಾರಿಯಲ್ಲಿ ಸಾಗಬೇಕಾಗಿದೆ. ನಮ್ಮ ಮನಸ್ಥಿತಿ ಬದಲಾಗಬೇಕಿದೆ. ನಾವು ಪರಸ್ಪರ ಕಿತ್ತಾಡುವುದನ್ನು ಬಿಟ್ಟು ಒಗ್ಗಟ್ಟಿನಿಂದ ಇರಬೇಕು. ನಮ್ಮ ವಿರುದ್ಧ ನಡೆಯುವ ದಾಳಿಗಳಿಗೆ ಅವಕಾಶ ನೀಡದ ರೀತಿಯಲ್ಲಿ ವರ್ತಿಸಬೇಕು. ನಾವು ಪ್ರತಿರೋಧದ ಹಾದಿಯನ್ನು ಹಿಡಿಯಬೇಕಾಗಿದೆ.
ಮುಂದಿನ ಚುನಾವಣೆಯಲ್ಲಿ ಗೆಲ್ಲುವುದು ಸವಾಲು ಎಂದು ನೀವು ಭಾವಿಸುತ್ತಿದ್ದೀರಿ. ಆದರೆ, ಜನರ ಮನೋಭಾವವನ್ನು ನೋಡಿದರೆ ಮುಂದಿನ ಚುನಾವಣೆಯ ಫಲಿತಾಂಶ ಈಗಾಗಲೇ ನಮ್ಮ ಪರವಾಗಿ ನಿರ್ಧಾರವಾದಂತಿದೆ. ಭಾರತದ ಜನತೆಯಲ್ಲಿ ಅಷ್ಟೊಂದು ಆಕ್ರೋಶವಿದೆ. ಸಮಸ್ಯೆ ಅದಲ್ಲ. ಸಮಸ್ಯೆಯೆಂದರೆ, ಭಾರತೀಯ ರಾಜ್ಯ ವ್ಯವಸ್ಥೆಯ ಅನೇಕ ಸಾಧನಗಳು RSSನ ನಿಯಂತ್ರಣಕ್ಕೆ ಒಳಗಾಗಿವೆ ಎಂಬುದು. ಮತ್ತೊಂದು ಸಮಸ್ಯೆಯೆಂದರೆ, ಮುಕ್ತ ಮತ್ತು ನ್ಯಾಯಯುತ ಚುನಾವಣೆಗೆ ಅಗತ್ಯವಾದ ವಾತಾವರಣ ಇಲ್ಲದಿರುವುದು.
ಹೀಗಾಗಿ, ನಾವು ಪ್ರತಿರೋಧದ ಮಾರ್ಗಕ್ಕೆ ತೆರಳಬೇಕಿದೆ. ಪ್ರತಿರೋಧವೆಂದರೆ CBSE. ಪ್ರತಿರೋಧವೆಂದರೆ NEET. ಗ್ರೇಟ್ ನಿಕೋಬಾರ್ ಪ್ರತಿರೋಧವಾಗಲಿದೆ. 'ಭಾರತ್ ಜೋಡೊ ಯಾತ್ರೆ' ಪ್ರತಿರೋಧವಾಗಲಿದೆ. ಬೆಳಗೆದ್ದು ನಾನು ಪ್ರತಿರೋಧಿಸುವುದು ಹೇಗೆ ಎಂದು ಕೇಳಿಕೊಳ್ಳಿ. ನೀವು ಪ್ರತಿರೋಧಿಸಲಿದ್ದೀರಿ. ನಾವು ಪ್ರತಿರೋಧಿಸಿದರೆ ಅದು ಫಲ ನೀಡಲಿದೆ. ಅದು ಖಂಡಿತವಾಗಿ ಫಲ ನೀಡುತ್ತದೆ ಎಂಬ ವಿಶ್ವಾಸ ನನಗಿದೆ. ಯಾವುದೇ ಕಡೆಯಿಂದ ಬರುವ ಟೀಕೆಯನ್ನು ಸ್ವೀಕರಿಸಲು ನಾನು ಸಿದ್ಧನಿದ್ದೇನೆ. ಯಾಕೆಂದರೆ, ಇದು ನನ್ನ ಪಾಲಿಗೆ ಕೇವಲ ರಾಜಕೀಯ ವಿಚಾರವಲ್ಲ; ಇದು ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕರ್ತವ್ಯವೂ ಹೌದು. ಈ ಗುಂಪನ್ನು ಒಗ್ಗೂಡಿಸಲು ಮತ್ತು ಅದರ ಯಶಸ್ಸಿಗಾಗಿ ಯಾವುದೇ ಅವಮಾನವನ್ನಾದರೂ ಸಹಿಸಲು ನಾನು ಸಿದ್ಧನಿದ್ದೇನೆ.
ನಾವು ಹೇಗೆ ಮುಂದುವರಿಯಬೇಕು ಎಂಬುದು ಸ್ಪಷ್ಟವಾಗಿದೆ. ಮೊದಲಿಗೆ, ಕೆಲವು ತಪ್ಪು ಕಲ್ಪನೆಗಳಿಂದ ಹೊರಬರಬೇಕಿದೆ. ತಮ್ಮ ವಿರುದ್ಧ ಚುನಾವಣಾ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿರಬಹುದು ಎಂಬ ಅನುಮಾನ ಮಮತಾ ಬ್ಯಾನರ್ಜಿ ಅವರಿಗೆ ಬಹುತೇಕ ಖಚಿತವಾಗಿದೆ. ಉದ್ಧವ್ ಠಾಕ್ರೆ ಹಾಗೂ ತೇಜಸ್ವಿ ಯಾದವ್ ಅವರಲ್ಲಿಯೂ ಇದೇ ರೀತಿಯ ಅನುಮಾನವಿದೆ. ಆದರೆ, ನನ್ನ ಮಾತು ಕೇಳಿ; ಚುನಾವಣಾ ಪ್ರಕ್ರಿಯೆಯಲ್ಲಿ ವ್ಯಾಪಕ ಅಕ್ರಮ ನಡೆದಿದೆ ಎಂಬುದರಲ್ಲಿ ನನಗೆ ಯಾವುದೇ ಅನುಮಾನವಿಲ್ಲ. ನಿಮ್ಮ ಮನಸ್ಸಿನಲ್ಲಿರುವ ಸಂದೇಹಗಳನ್ನು ಬಿಟ್ಟುಬಿಡಿ. ಸಾಮಾಜಿಕ ಮಾಧ್ಯಮದಲ್ಲಿ ಗಟ್ಟಿಯಾದ ನೆಲೆ ನಿರ್ಮಿಸಿಕೊಳ್ಳಲು ಹಲವು ವರ್ಷಗಳು ಬೇಕಾಗುತ್ತವೆ. ಅದು ಒಂದು ವಾರದಲ್ಲಿ ಸಾಧ್ಯವಾಗುವುದಿಲ್ಲ. ನನಗೆ ಒಂದು ಕೋಟಿ ಯೂಟ್ಯೂಬ್ ಫಾಲೋವರ್ ಗಳು ಇದ್ದಾರೆ. ಆದರೂ, ನನ್ನ ಖಾತೆಯ ವ್ಯಾಪ್ತಿಯನ್ನು ತೀವ್ರವಾಗಿ ನಿರ್ಬಂಧಿಸಲಾಗಿದೆ. ಆದ್ದರಿಂದ ಸಾಮಾಜಿಕ ಮಾಧ್ಯಮ ನ್ಯಾಯಯುತವಾಗಿ ಕಾರ್ಯನಿರ್ವಹಿಸುತ್ತಿದೆ ಅಥವಾ ವಿರೋಧ ಪಕ್ಷಗಳಿಗೆ ಸಮಾನ ಅವಕಾಶ ನೀಡುತ್ತಿದೆ ಎಂದು ನೀವು ಭಾವಿಸುತ್ತಿದ್ದರೆ, ಅದು ವಾಸ್ತವಕ್ಕೆ ದೂರವಾಗಿದೆ. ಈ ಸರಕಾರವನ್ನು ಅಧಿಕಾರದಲ್ಲಿ ಉಳಿಸಿಕೊಳ್ಳಲು ಮಾಧ್ಯಮ, ಸಾಮಾಜಿಕ ಮಾಧ್ಯಮ, ಕಾನೂನು ವ್ಯವಸ್ಥೆ, ಅಧಿಕಾರಶಾಹಿ ಹಾಗೂ ಗುಪ್ತಚರ ಸಂಸ್ಥೆಗಳು ಒಟ್ಟಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ನಾನು ನಂಬುತ್ತೇನೆ.
ಆದರೆ, ಪ್ರಜಾಪ್ರಭುತ್ವವನ್ನು ನಾಶಗೊಳಿಸಿರುವುದರಿಂದ ಈ ಸರಕಾರ ಉಳಿಯುವುದಿಲ್ಲ. ಈ ಸರಕಾರ ಭಾರತೀಯ ಜನತೆಯ ಭವಿಷ್ಯವನ್ನು ಹಾಳು ಮಾಡಿದೆ. ಇರಾನ್ ನಲ್ಲಿ ನಡೆದಿರುವ ಘಟನೆಗಳ ಪರಿಣಾಮವಾಗಿ ಮುಂದೆ ಏನಾಗಬಹುದು ಎಂಬುದನ್ನು ನಿಯಂತ್ರಿಸುವುದು ಯಾರ ಕೈಯಲ್ಲೂ ಇರುವುದಿಲ್ಲ. ಆ ಬೆಳವಣಿಗೆಗಳು ಅನಿಯಂತ್ರಿತವಾಗಿದ್ದು, ಜನರನ್ನು ಒಗ್ಗೂಡಿಸಲು ನಮಗೆ ಅವಕಾಶ ನೀಡಲಿವೆ.
ಅದೇ ರೀತಿ, ನಾವು ಒಗ್ಗಟ್ಟಿನಿಂದ ಅಥವಾ ಸಮನ್ವಯದಿಂದ ಕೆಲಸ ಮಾಡುತ್ತಿಲ್ಲ ಎಂಬ ಭಾವನೆಯನ್ನು ಬಿಟ್ಟುಬಿಡಿ. ಅಂತಹ ಅಭಿಪ್ರಾಯವನ್ನು ಬಿಜೆಪಿ ಉದ್ದೇಶಪೂರ್ವಕವಾಗಿ ಹರಡುತ್ತಿದೆ. ಅದು ಸತ್ಯವಲ್ಲ ಎಂಬುದರಲ್ಲಿ ನನಗೆ ಶೇ. 100ರಷ್ಟು ವಿಶ್ವಾಸವಿದೆ. DMK ಬಗ್ಗೆ ಕೇಳಿದರೆ ನಾನು ಅದರ ಪರವಾಗಿ ನಿಲ್ಲಬಲ್ಲೆ. ಭಾರತದ ಪರಿಕಲ್ಪನೆಯನ್ನು ರಕ್ಷಿಸುವ ವಿಚಾರ ಬಂದಾಗ, ಈ ಸಭಾಂಗಣದಲ್ಲಿ ಇರುವ ಪ್ರತಿಯೊಬ್ಬರೂ ಒಂದಾಗಿ ನಿಲ್ಲಲಿದ್ದಾರೆ. ನಮ್ಮ ನಡುವೆ ಭಿನ್ನಾಭಿಪ್ರಾಯಗಳು ಮತ್ತು ರಾಜಕೀಯ ಸಂಘರ್ಷಗಳಿವೆ. ಆದರೆ, ಕೇರಳದ ಮಾಜಿ ಮುಖ್ಯಮಂತ್ರಿಯನ್ನು ಅಪ್ಪಿಕೊಳ್ಳಿ ಎಂದು ನೀವು ಹೇಳಿದರೆ, ಅದನ್ನು ನಾನು ಮಾಡಲು ಸಾಧ್ಯವಿಲ್ಲ. ಏಕೆಂದರೆ, ಅವರ ವಿರುದ್ಧ ನಾನು ರಾಜಕೀಯ ಹೋರಾಟ ನಡೆಸುತ್ತಿದ್ದೇನೆ. ಆದ್ದರಿಂದ ನಾವು ವಾಸ್ತವ ಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು. ವಿರೋಧ ಪಕ್ಷಗಳು ದುರ್ಬಲವಾಗಿವೆ ಎಂಬ ಚಿತ್ರಣವನ್ನು ಮೂಡಿಸಲು ನಮ್ಮ ವಿರುದ್ಧ ಪೂರ್ಣಪ್ರಮಾಣದ ದಾಳಿ ನಡೆಯುತ್ತಿದೆ ಎಂಬುದನ್ನು ಮನಗಾಣಬೇಕು.
ಕೊನೆಯದಾಗಿ, ನಮ್ಮ ಚರ್ಚೆಗಳಲ್ಲಿ ಪದೇ ಪದೇ ನಿರಾಶೆಯ ಭಾವನೆ ವ್ಯಕ್ತವಾಗುತ್ತಿರುವುದನ್ನು ನಾನು ಗಮನಿಸಿದ್ದೇನೆ. ‘ನಾವು ಬಿಜೆಪಿಯನ್ನು ಹೇಗೆ ಸೋಲಿಸುವುದು?’ ಎಂಬ ಚಿಂತೆ ಅನೇಕರಲ್ಲಿದೆ. ಆದರೆ, ನಾವು ಒಗ್ಗಟ್ಟಾಗಿ ನಿಂತು ಪ್ರತಿರೋಧ ವ್ಯಕ್ತಪಡಿಸಿದರೆ, ಅವರನ್ನು ಸುಲಭವಾಗಿ ಮಣಿಸಬಹುದು.
ಕಳೆದ ಚುನಾವಣೆಯ ಸಂದರ್ಭದಲ್ಲಿ, ಇಲ್ಲಿ ಉಪಸ್ಥಿತರಿದ್ದವರಲ್ಲಿ ನನ್ನೊಬ್ಬನನ್ನು ಹೊರತುಪಡಿಸಿ ಬಿಜೆಪಿಯನ್ನು ಸೋಲಿಸಬಹುದು ಎಂಬ ವಿಶ್ವಾಸ ಬೇರಾರಿಗೂ ಇರಲಿಲ್ಲ. ಆದರೆ ಈಗ ಇಲ್ಲಿ ಇರುವ ಪ್ರತಿಯೊಬ್ಬರೂ ನಾವು ಬಿಜೆಪಿಯನ್ನು ಮಣಿಸಬಹುದು ಎಂಬ ನಂಬಿಕೆಯನ್ನು ಹೊಂದಬೇಕು. ನೀವು ಆ ನಂಬಿಕೆಯನ್ನು ಬೆಳೆಸಿಕೊಂಡ ದಿನದಿಂದ, ಅವರು ಅಕ್ರಮಕ್ಕೆ ಮೊರೆಹೋಗಲಿ ಅಥವಾ ಹೋಗದಿರಲಿ, ಒಂದರ ನಂತರ ಮತ್ತೊಂದು ರಾಜ್ಯದಲ್ಲಿ ಹಾಗೂ ಒಂದರ ನಂತರ ಮತ್ತೊಂದು ಚುನಾವಣೆಯಲ್ಲಿ ಅವರು ಸೋಲು ಕಾಣಲಿದ್ದಾರೆ.
ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು.”
– ರಾಹುಲ್ ಗಾಂಧಿ






