ಸರಕಾರ ವಿತರಿಸಿದ ವಾಹನಗಳ ಮೇಲೆ ಕಾಂಗ್ರೆಸ್ ಶಾಸಕನ ಫೋಟೊ!

ಕಲಬುರಗಿ, ಎ.10: ಸರಕಾರ ಅಥವಾ ಸರಕಾರದ ವಿವಿಧ ಮೂಲಗಳ ನಿಧಿಯಿಂದ ವಿತರಿಸುವ ಯಾವುದೇ ವಸ್ತುಗಳ ಮೇಲೆ ಶಾಸಕ, ಎಂಎಲ್ಸಿ ಮತ್ತಿತ್ತರರು ತಮ್ಮ ಫೋಟೋ ಅಥವಾ ಜಾಹೀರಾತುಗಳನ್ನು ಪ್ರದರ್ಶಿಸಿ, ಪ್ರಚಾರ ಗಿಟ್ಟಿಸಿಕೊಳ್ಳಲು ಅವಕಾಶ ಇರುವುದಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ. ಆದರೆ ಕಲಬುರಗಿ ದಕ್ಷಿಣ ಮತಕ್ಷೇತ್ರದ ಕಾಂಗ್ರೆಸ್ ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ಸುಪ್ರೀಂ ಕೋರ್ಟ್ ನಿರ್ದೇಶನ ಹಾಗೂ ಹೈಕೋರ್ಟಿನ ಆದೇಶ ಉಲ್ಲಂಘಿಸಿ, ಸರಕಾರದಿಂದ ವಿತರಣೆಯಾಗುವ ವಸ್ತುಗಳ ಮೇಲೆ ತಮ್ಮದೇ ಚಿತ್ರವನ್ನು ಅಂಟಿಸುವ ಮೂಲಕ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಶುಕ್ರವಾರ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಅವರಣದಲ್ಲಿ ಜಿಲ್ಲಾಡಳಿತ, ಜಿ.ಪಂ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಹುಡ್ಕೋ ಸಂಸ್ಥೆ, ಅಲಿಮ್ಕೋ ಸಂಸ್ಥೆ ಸಂಯುಕ್ತಾಶ್ರಯದಲ್ಲಿ 2025-26ನೇ ಸಾಲಿನ ಶೇ.5 ಅನುದಾನ, ಡಿ.ಎಂ.ಎಫ್, ಸಿ.ಎಸ್.ಆರ್ ಹಾಗೂ ಇತರೆ ಅನುದಾನದಡಿ ವಿಶೇಷಚೇತನರಿಗೆ ಸುಮಾರು 2.63 ಕೋಟಿ ರೂ. ಮೊತ್ತದಲ್ಲಿ ತ್ರಿಚಕ್ರವಾಹನ ಸೇರಿದಂತೆ ಬುದ್ದಿಮಾಂದ್ಯ ಮಕ್ಕಳಿಗೆ ಟಿ.ಎಲ್.ಎಂ ಕಿಟ್, ವೀಲ್ ಚೇರ್, ಬೆನ್ನು ನೋವಿನವರಿಗೆ ಮೆಡಿಕಲ್ ಕಿಟ್, ವಿಶೇಷ ಚೇತನರಿಗೆ ಬ್ರೈಲ್ ಕಿಟ್ ಟೈಪಿಂಗ್, ಶ್ರವಣ ದೋಷ ಯಂತ್ರ ಹಾಗೂ ರೀಡಿಂಗ್ ಯಂತ್ರ, ಹೀಗೆ ಅನೇಕ ಸಾಧನ ಸಲಕರಣೆಗಳ ವಿತರಣೆ ಮಾಡಿರುವ ಕಾರ್ಯಕ್ರಮದಲ್ಲಿ ತಮ್ಮದೇ ಫೋಟೋ ಹಾಕಿ ಬಿಟ್ಟಿ ಪ್ರಚಾರ ಗಿಟ್ಟಿಸಿಕೊಂಡಿದ್ದಾರೆ.
ಸರಕಾರದಿಂದ ಅಂಗವಿಕಲರಿಗೆ ವಿತರಿಸಿದ 27 ತ್ರಿಚಕ್ರವಾಹನಗಳ ಮೇಲೆ ಶಾಸಕ ಅಲ್ಲಮಪ್ರಭು ಪಾಟೀಲ್ ಅವರ ಫೋಟೋಗಳನ್ನು ಅಂಟಿಸಲಾಗಿದೆ. 2024-25ನೇ ಸಾಲಿನ ಜಿಲ್ಲಾ ಖನಿಜಾಂಶ ಫೌಂಡೇಶನ್ (ಡಿಎಂಎಫ್) ವತಿಯಿಂದ ತ್ರಿಚಕ್ರ ವಾಹನ ವಿತರಿಸಲಾಗಿದೆ ಎಂದು ಬರೆದುಕೊಂಡು ತಮ್ಮದೇ ಚಿತ್ರವನ್ನು ಅಂಟಿಸಿರುವುದಲ್ಲದೆ ದಕ್ಷಿಣ ಮತಕ್ಷೇತ್ರದ ವಿಧಾನಸಭೆ ಸದಸ್ಯರು ಎಂದೂ ಬರೆಯಲಾಗಿದೆ.
ಸಾರ್ವಜನಿಕರ ಸ್ವತ್ತನ್ನು ವೈಯಕ್ತಿಕ ರಾಜಕೀಯ ಬ್ರಾಂಡಿಂಗ್‌ಗಾಗಿ ಬಳಸಬಾರದು. ಸರಕಾರಗಳ ನಿಧಿಗಳಿಂದ ವಿತರಿಸುವ ವಾಹನಗಳ ಮೇಲೆ ಶಾಸಕರ ವೈಯಕ್ತಿಕ ಫೋಟೋಗಳನ್ನು ಬಳಸಿಕೊಂಡು ತಪ್ಪು ಸಂದೇಶ ಸೃಷ್ಟಿಸುತ್ತದೆ. ಶಾಸಕರ ಫೋಟೋ ಬಳಸುವುದರಿಂದ ಸರಕಾರದ ನಿಧಿಯಿಂದ ವಿತರಿಸಿದ ಉಡುಗೊರೆಯನ್ನು ಶಾಸಕರಿಂದಲೇ ಬಂದಿದೆ ಎನ್ನುವ ತಪ್ಪು ಮಾಹಿತಿ ಸೃಷ್ಟಿಯಾಗುತ್ತದೆ. ಬೇಕಿದ್ದರೆ ಸರಕಾರದ ಅಥವಾ ಇಲಾಖೆಯ ಲೋಗೋವನ್ನು ಬಳಸಬಹುದಾಗಿದೆ. ಆದರೆ, ಶಾಸಕರು ತಮ್ಮ ಸ್ವಂತ ಖರ್ಚಿನಿಂದ ವಾಹನ ವಿತರಿಸಿದರೆ ಮಾತ್ರ ಭಾವಚಿತ್ರ ಅಂಟಿಸಬಹುದಾಗಿದೆ ಎನ್ನುತ್ತಾರೆ ಕಾನೂನು ಸಲಹೆಗಾರರು.
ಡಿಎಂಎಫ್‌ಗೆ ಉಸ್ತುವಾರಿ ಸಚಿವರೇ ಅಧ್ಯಕ್ಷರಾಗಿರುತ್ತಾರೆ, ಜಿಲ್ಲಾಧಿಕಾರಿಗಳು ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ. ಸರಕಾರದಿಂದ ವಿತರಿಸುವ ಈ ಕಾರ್ಯಕ್ರಮದಲ್ಲಿ ಸ್ವತಃ ಸಚಿವ, ಜಿಲ್ಲಾಧಿಕಾರಿ ಸಹ ಭಾಗಿಯಾಗಿದ್ದಾರೆ. ಆದರೆ ಪ್ರಚಾರ ಗಿಟ್ಟಿಸಿಕೊಳ್ಳುವ ಶಾಸಕರ ಗೀಳಿಗೆ ಇವರು ಮೌನವಾಗಿರುವುದು ಸಾರ್ವಜನಿಕರಲ್ಲಿ ಅನುಮಾನದ ಪ್ರಶ್ನೆ ಮೂಡಿದೆ. ಈ ಕುರಿತು ಸ್ಪಷ್ಟೀಕರಣಕ್ಕಾಗಿ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿದರೆ ಅವರು ಪ್ರತಿಕ್ರಿಯಿಸಲಿಲ್ಲ.






