ಶಾಲಾ ಕೊಠಡಿಗಳ ನಿರ್ಮಾಣ 175.77 ಕೋಟಿ ರೂ. ಬಿಡುಗಡೆಗೆ ಬಾಕಿ

ಸಾಂದರ್ಭಿಕ ಚಿತ್ರ PC: freepik
ಬೆಂಗಳೂರು, ಜೂ.1: ರಾಜ್ಯದ 35 ಶೈಕ್ಷಣಿಕ ಜಿಲ್ಲೆಗಳಲ್ಲಿನ ಸರಕಾರಿ ಶಾಲೆಗಳಿಗೆ ವಿವೇಕ ಮತ್ತು ರಾಜ್ಯ ಯೋಜನೆಯಡಿ ಶಾಲಾ ಕೊಠಡಿಗಳ ನಿರ್ಮಾಣಕ್ಕೆ 2024-25ನೇ ಸಾಲಿನಲ್ಲಿ ಮಂಜೂರಾಗಿದ್ದ ಒಟ್ಟು ಅನುದಾನದ ಪೈಕಿ ಇನ್ನೂ 175.77 ಕೋಟಿ ರೂ. ಬಿಡುಗಡೆಗೆ ಬಾಕಿ ಇದೆ.
ಗ್ರಾಮೀಣಾಭಿವೃದ್ಧಿ, ಪಂಚಾಯತ್ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಪೌರಾಡಳಿತ ಸಚಿವ ರಹೀಂ ಖಾನ್, ಶರಣ ಪ್ರಕಾಶ್ ಪಾಟೀಲ್ ಅವರು ಉಸ್ತುವಾರಿ ಹೊತ್ತಿರುವ ಜಿಲ್ಲೆಗಳಿಗೆ ಒಟ್ಟಾರೆ 109.79 ಕೋಟಿ ರೂ.ಮಂಜೂರಾಗಿತ್ತು. ಈ ಪೈಕಿ ಕೇವಲ 18.6 ಕೋಟಿ ರೂ. ಮಾತ್ರ ಬಿಡುಗಡೆಯಾಗಿದೆ. ಬಿಡುಗಡೆಗೆ ಇನ್ನೂ 91.19 ಕೋಟಿ ರೂ. ಬಾಕಿ ಇದೆ.
ಬೀದರ್ನಲ್ಲಿ 26.46 ಕೋಟಿ ರೂ.ನಲ್ಲಿ ಕೇವಲ 2.44 ಕೋಟಿ ರೂ. ಮಾತ್ರ ಬಿಡುಗಡೆಯಾಗಿದೆ. ವಿಶೇಷವೆಂದರೆ ನಿಗದಿಪಡಿಸಿದ್ದ 167 ಕಾಮಗಾರಿಗಳ ಪೈಕಿ 149 ಕಾಮಗಾರಿಗಳು ಪೂರ್ಣಗೊಂಡಿವೆ. ಬಿಡುಗಡೆಗೆ ಇನ್ನು 24.02 ಕೋಟಿ ರೂ. ಬಾಕಿ ಇದೆ.
ಕಲಬುರಗಿಯಲ್ಲಿ 48.43 ಕೋಟಿ ರೂ. ಪೈಕಿ ಕೇವಲ 7.78 ಕೋಟಿ ರೂ. ಬಿಡುಗಡೆಯಾಗಿದೆ. 59 ಕಾಮಗಾರಿಗಳು ನಿಗದಿಯಾಗಿದ್ದರೂ ಕೇವಲ 7 ಕಾಮಗಾರಿಗಳು ಮಾತ್ರ ಪೂರ್ಣಗೊಂಡಿವೆ. ಇನ್ನೂ 52 ಕಾಮಗಾರಿಗಳು ಪ್ರಗತಿಯಲ್ಲಿವೆ. ಬಿಡುಗಡೆಗೆ ಇನ್ನೂ 40.65 ಕೋಟಿ ರೂ. ಬಾಕಿ ಇದೆ.
ಯಾದಗಿರಿಯಲ್ಲಿ 34.93 ಕೋಟಿ ರೂ. ಪೈಕಿ ಕೇವಲ 8.38 ಕೋಟಿ ರೂ. ಬಿಡುಗಡೆಯಾಗಿದೆ. ನಿಗದಿಯಾಗಿದ್ದ 64 ಕಾಮಗಾರಿಗಳ ಪೈಕಿ 4 ಕಾಮಗಾರಿಗಳು ಮಾತ್ರ ಪೂರ್ಣಗೊಂಡಿವೆ. 60 ಕಾಮಗಾರಿಗಳು ಪ್ರಗತಿಯಲ್ಲಿವೆ. ಬಿಡುಗಡೆಗೆ ಇನ್ನೂ 26.55 ಕೋಟಿ ರೂ. ಬಾಕಿ ಇದೆ.
ರಾಯಚೂರು ಜಿಲ್ಲೆಯಲ್ಲಿ 47.49 ಕೋಟಿ ರೂ.ನಲ್ಲಿ 11.85 ಕೋಟಿ ರೂ. ಬಿಡುಗಡೆಯಾಗಿದೆ. ನಿಗದಿಪಡಿಸಿದ್ದ 84 ಕಾಮಗಾರಿಗಳ ಪೈಕಿ ಕೇವಲ 7 ಮಾತ್ರ ಪೂರ್ಣಗೊಂಡಿವೆ.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಿಡಗುಂದಿ ಗ್ರಾಮದ ಡಾ.ಅಂಬೇಡ್ಕರ್ ನಗರ ಸರಕಾರಿ ಶಾಲೆಗೆ ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ ಮೌನ ಪ್ರತಿಭಟನೆ ಮೂಲಕ ಮನವಿ ಮಾಡಿದ್ದ ಮುಖ್ಯ ಶಿಕ್ಷಕ ವೀರಣ್ಣ ಮಡಿವಾಳರ ಅವರನ್ನು ಅಮಾನತುಗೊಳಿಸಿರುವುದಕ್ಕೆ ರಾಜ್ಯಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿರುವ ಬೆನ್ನಲ್ಲೇ ವಿವೇಕ ಯೋಜನೆ ಮತ್ತು ರಾಜ್ಯ ಯೋಜನೆಯಡಿ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅಂಕಿ ಅಂಶಗಳ ವಿವರಗಳು ಮುನ್ನೆಲೆಗೆ ಬಂದಿವೆ.
ಎರಡು ದಿನಗಳ ಹಿಂದೆಯಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದ ರಾಜ್ಯದ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯತ್ಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಸಮ್ಮೇಳನದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯು ಶಾಲಾ ಕೊಠಡಿಗಳ ನಿರ್ಮಾಣದ ಕಾಮಗಾರಿಗಳ ಪ್ರಗತಿ, ಮಂಜೂರಾದ ಅನುದಾನ ಸೇರಿದಂತೆ ಇನ್ನಿತರ ವಿವರಗಳ ಕುರಿತು ಚರ್ಚೆಯಾಗಿತ್ತು. ಈ ಎಲ್ಲ ಅಂಕಿ ಅಂಶಗಳ ಮಾಹಿತಿಯು "the-file.in"ಗೆ ಲಭ್ಯವಾಗಿವೆ.
ಬೆಳಗಾವಿ ಚಿಕ್ಕೋಡಿ ಮತ್ತು ಬೆಳಗಾವಿಗೆ ವಿವೇಕ ಯೋಜನೆ ಮತ್ತು ರಾಜ್ಯ ಯೋಜನೆಯಡಿ 2024-25ನೇ ಸಾಲಿಗೆ 91.04 ಕೋಟಿ ರೂ. ಅನುದಾನ ಮಂಜೂರಾಗಿತ್ತು. ಈ ಪೈಕಿ 88.91 ಕೋಟಿ ರೂ. ಬಿಡುಗಡೆಯಾಗಿದೆ. ಬಿಡುಗಡೆಗೆ ಇನ್ನೂ 2.13 ಕೋಟಿ ರೂ. ಬಾಕಿ ಇದೆ.
ವಿವೇಕ ಯೋಜನೆಯಡಿ ಮತ್ತು ರಾಜ್ಯ ಯೋಜನೆಯಡಿ ಶಾಲಾ ಕೊಠಡಿಗಳ ನಿರ್ಮಾಣಕ್ಕೆ 2024-25ನೇ ಸಾಲಿನಲ್ಲಿ ಒಟ್ಟಾರೆ 1,082.41 ಕೋಟಿ ರೂ. ಮಂಜೂರಾಗಿತ್ತು. ಈ ಪೈಕಿ 906.64 ಕೋಟಿ ರೂ. ಬಿಡುಗಡೆಯಾಗಿದೆ. 2024-25ನೇ ಸಾಲಿನಲ್ಲಿ 6,715 ಕಾಮಗಾರಿಗಳು ನಿಗದಿಯಾಗಿದ್ದವು. ಇದರಲ್ಲಿ 5,514 ಕಾಮಗಾರಿಗಳು ಪೂರ್ಣಗೊಂಡಿವೆ. ಇನ್ನೂ 959 ಕಾಮಗಾರಿಗಳು ಪ್ರಗತಿಯಲ್ಲಿವೆ. 242 ಕಾಮಗಾರಿಗಳು ಇನ್ನೂ ಪ್ರಗತಿ ಹಂತದಲ್ಲಿವೆ. ಒಟ್ಟಾರೆ ಶೇ. 96.40ರಷ್ಟು ಪ್ರಗತಿ ಸಾಧಿಸಿದೆ ಎಂಬುದು ಅಂಕಿ ಅಂಶಗಳಿಂದ ತಿಳಿದು ಬಂದಿದೆ.
ಜಿಲ್ಲಾವಾರು ಪಟ್ಟಿ
ಮಂಡ್ಯ ಜಿಲ್ಲೆಗೆ ಮಂಜೂರಾಗಿದ್ದ 26.56 ಕೋಟಿ ರೂ. ಸಂಪೂರ್ಣವಾಗಿ ಬಿಡುಗಡೆಯಾಗಿದೆ. ನಿಗದಿಪಡಿಸಿದ್ದ 186 ಕಾಮಗಾರಿಗಳ ಪೈಕಿ 150 ಕಾಮಗಾರಿಗಳು ಪೂರ್ಣಗೊಂಡಿವೆ. ಇನ್ನೂ 16 ಕಾಮಗಾರಿಗಳು ಪ್ರಗತಿಯಲ್ಲಿವೆ. 20 ಕಾಮಗಾರಿಗಳು ಇನ್ನೂ ಆರಂಭಿಕ ಹಂತದಲ್ಲಿವೆ. ಹಾವೇರಿಯಲ್ಲಿ 31.82 ಕೋಟಿ ರೂ. ಪೈಕಿ 30.98 ಕೋಟಿ ರೂ.ಬಿಡುಗಡೆಯಾಗಿದೆ. 220 ಕಾಮಗಾರಿಗಳ ಪೈಕಿ 195 ಪೂರ್ಣಗೊಂಡಿವೆ. ಗದಗದಲ್ಲಿ 21.81 ಕೋಟಿ ರೂ.ಪೈಕಿ 21.15 ಕೋಟಿ ರೂ. ಬಿಡುಗಡೆಯಾಗಿದೆ. 150 ಕಾಮಗಾರಿಗಳ ಪೈಕಿ 122 ಕಾಮಗಾರಿಗಳು ಪೂರ್ಣಗೊಂಡಿರುವುದು ತಿಳಿದು ಬಂದಿದೆ.
ರಾಮನಗರದಲ್ಲಿ 15.04 ಕೋಟಿ ರೂ. ಪೈಕಿ 14.76 ಕೋಟಿ ರೂ. ಬಿಡುಗಡೆಯಾಗಿದೆ. 105 ಕಾಮಗಾರಿಗಳಲ್ಲಿ 89 ಕಾಮಗಾರಿಗಳು ಪೂರ್ಣಗೊಂಡಿವೆ. ಚಿಕ್ಕಮಗಳೂರಿನಲ್ಲಿ 26.5 ಕೋಟಿ ರೂ. ಪೈಕಿ 24.88 ಕೋಟಿ ರೂ. ಬಿಡುಗಡೆಯಾಗಿದ್ದರೆ, ದಾವಣಗೆರೆ ಜಿಲ್ಲೆಯಲ್ಲಿ 34.34 ಕೋಟಿ ರೂ.ನಲ್ಲಿ 33.5 ಕೋಟಿ ರೂ. ಬಿಡುಗಡೆಯಾಗಿದೆ.
ಚಿತ್ರದುರ್ಗದಲ್ಲಿ 32.46 ಕೋಟಿ ರೂ.ನಲ್ಲಿ 29.21 ಕೋಟಿ ರೂ. ಬಿಡುಗಡೆಯಾಗಿದೆ. ಉತ್ತರ ಕನ್ನಡ ಶಿರಸಿಯಲ್ಲಿ 18.07 ಕೋಟಿ ರೂ. ಪೈಕಿ 17.17 ಕೋಟಿ ರೂ. ಬಿಡುಗಡೆಯಾಗಿದೆ. ಹಾಸನದಲ್ಲಿ 31.49 ಕೋಟಿ ರೂ.ನಲ್ಲಿ 31.22 ಕೋಟಿ ರು ಬಿಡುಗಡೆಯಾಗಿದೆ. ಬೆಂಗಳೂರು ದಕ್ಷಿಣದಲ್ಲಿ 25.64 ಕೋಟಿ ರೂ. ಪೈಕಿ 23.59 ಕೋಟಿ ರೂ.ಬಿಡುಗಡೆಯಾಗಿದೆ. ಬೆಂಗಳೂರು ಗ್ರಾಮಾಂತರದಲ್ಲಿ 15.54 ಕೋಟಿ ರೂ. ಪೈಕಿ 12.06 ಕೋಟಿ ರೂ. ಬಿಡುಗಡೆಯಾಗಿದೆ.
ಧಾರವಾಡದಲ್ಲಿ 42.91 ಕೋಟಿ ರೂ.ಪೈಕಿ 40.67 ಕೋಟಿ ರೂ., ಕೋಲಾರದಲ್ಲಿ 26.5 ಕೋಟಿ ರೂ.ನಲ್ಲಿ 25.65 ಕೋಟಿ ರೂ., ಮೈಸೂರಿನಲ್ಲಿ 44.88 ಕೋಟಿ ರೂ.ನಲ್ಲಿ 44.58 ಕೋಟಿ ರೂ., ಬೆಂಗಳೂರು ಉತ್ತರದಲ್ಲಿ 39.11 ಕೋಟಿ ರೂ.ನಲ್ಲಿ 36.19 ಕೋಟಿ ರೂ., ದಕ್ಷಿಣ ಕನ್ನಡದಲ್ಲಿ 42.12 ಕೋಟಿ ರೂ.ನಲ್ಲಿ 42.04 ಕೋಟಿ ರೂ., ಚಿಕ್ಕಬಳ್ಳಾಪುರದಲ್ಲಿ 20.15 ಕೋಟಿ ರೂ.ನಲ್ಲಿ 19.75 ಕೋಟಿ ರೂ., ತುಮಕೂರು ಜಿಲ್ಲೆಯಲ್ಲಿ 35.49 ಕೋಟಿ ರೂ.ನಲ್ಲಿ 30.69 ಕೋಟಿ ರೂ., ತುಮಕೂರು ಮಧುಗಿರಿಯಲ್ಲಿ 19.85 ಕೋಟಿ ರೂ.ನಲ್ಲಿ 19.13 ಕೋಟಿ ರೂ.ಬಿಡುಗಡೆಯಾಗಿದೆ.
ಶಿವಮೊಗ್ಗದಲ್ಲಿ 48.1 ಕೋಟಿ ರೂ. ಪೈಕಿ 46.59 ಕೋಟಿ ರೂ., ಉತ್ತರ ಕನ್ನಡದಲ್ಲಿ 18.2 ಕೋಟಿ ರೂ.ನಲ್ಲಿ 17.66 ಕೋಟಿ ರೂ., ಬಾಗಲಕೋಟೆಯಲ್ಲಿ 35.04 ಕೋಟಿ ರೂ.ನಲ್ಲಿ 34.58 ಕೋಟಿ ರೂ., ವಿಜಯಪುರದಲ್ಲಿ 42.74 ಕೋಟಿ ರೂ. ಪೈಕಿ 41.59 ಕೋಟಿ ರೂ., ಕೊಪ್ಪಳದಲ್ಲಿ 33.58 ಕೋಟಿ ರೂ.ನಲ್ಲಿ 30.82 ಕೋಟಿ ರೂ. ಬಿಡುಗಡೆಯಾಗಿದೆ.
ಬಳ್ಳಾರಿಯಲ್ಲಿ 25.96 ಕೋಟಿ ರೂ. ಪೈಕಿ 17.98 ಕೋಟಿ ರೂ. ಬಿಡುಗಡೆಯಾಗಿದ್ದರೆ, ವಿಜಯನಗರ ಜಿಲ್ಲೆಯಲ್ಲಿ 23.6 ಕೋಟಿ ರೂ. ಪೈಕಿ 20.17 ಕೋಟಿ ರೂ.ಬಿಡುಗಡೆಯಾಗಿದೆ. ಉಡುಪಿಯಲ್ಲಿ 29.35 ಕೋಟಿ ರೂ. ಪೈಕಿ 29.34 ಕೋಟಿ ರೂ. ಬಿಡುಗಡೆಯಾಗಿದೆ. ಕೊಡಗು ಜಿಲ್ಲೆಯಲ್ಲಿ 9.78 ಕೋಟಿ ರೂ. ಪೈಕಿ 8.94 ಕೋಟಿ ರೂ.ಬಿಡುಗಡೆಯಾಗಿದೆ. ಚಾಮರಾಜನಗರ ಜಿಲ್ಲೆಯಲ್ಲಿ 17.43 ಕೋಟಿ ರೂ.ಪೈಕಿ 16.73 ಕೋಟಿ ರೂ. ಬಿಡುಗಡೆಯಾಗಿರುವುದು ತಿಳಿದು ಬಂದಿದೆ.







