ಲಸಿಕೆ ನೀಡಿಕೆಗೆ ಮೈಸೂರು ಅರಸರ ಕೊಡುಗೆ
ಇಂದು ವಿಶ್ವ ಲಸಿಕಾ ದಿನ

Photo: freepik
-ಡಾ. ಕರವೀರಪ್ರಭು ಕ್ಯಾಲಕೊಂಡ
ವಿಜ್ಞಾನ ನಾಗಾಲೋಟದಿಂದ ಮುನ್ನಡೆಯುತ್ತಿದೆ. ದಿನಬೆಳಗಾದರೆ ವಿಜ್ಞಾನದ ನೂತನ ಕಾಣಿಕೆಗಳು ಬೆರಗುಗೊಳಿಸುತ್ತವೆ. ಪ್ರಕೃತಿಯ ಲೀಲಾ ಜಾಲಗಳನ್ನು ಹಿಂಜಿ, ಹಿಂಜಿ ಗುಟ್ಟನ್ನು ರಟ್ಟಾಗಿಸುತ್ತ ಮಾನವ ಜ್ಞಾನ ವಿರಾಟ ರೂಪ ತಾಳಿದ್ದರೂ, ನಿಸರ್ಗವು ನಿಜಸ್ವರೂಪದಲ್ಲಿ ಬದಲಾವಣೆ ಮಾಡಿಕೊಂಡು ಮತ್ತೆ ತಾನೇ ಮೇಲೆಂದು ಮೆರೆಯುತ್ತದೆ. ನಮ್ಮ ಜನರಲ್ಲಿ ಮಡುಗಟ್ಟಿ ನಿಂತಿರುವ ಮೂಢನಂಬಿಕೆ, ಅಜ್ಞಾನಗಳನ್ನೇ ಬಂಡವಾಳವಾಗಿಸಿಕೊಂಡು, ತಾಂಡವನೃತ್ಯ ಗೈಯುತ್ತಿರುವ ಸೋಂಕು ರೋಗಗಳು, ಶಿಶುಗಳನ್ನು ಮೃತ್ಯುವಿನ ಮಡಿಲಲ್ಲಿ ಮಲಗುವಂತೆ ಮಾಡುತ್ತವೆ. ಇಲ್ಲವೆ ಅಶಕ್ತತೆಯನ್ನು ಬಳುವಳಿಯಾಗಿ ಕೊಟ್ಟು, ಇತರ ರೋಗಗಳು ಮುತ್ತಿಕೊಳ್ಳುವಂತೆ ಮಾಡುತ್ತವೆ. ಇಲ್ಲವೆ ಅಂಗವೈಕಲ್ಯಕ್ಕೆ ಒಳಪಡಿಸುತ್ತವೆ.
ದೇಹದಲ್ಲಿ ನಿತ್ಯ ಕುರುಕ್ಷೇತ್ರ ಯುದ್ಧ! ರೋಗಕಾರಕಗಳಾದ ಬ್ಯಾಕ್ಟೀರಿಯಾ, ವೈರಸ್, ಫಂಗಸ್ಗಳು ಕೋಟಿ ಕೋಟಿ ಸಂಖ್ಯೆಯಲ್ಲಿ ನಮ್ಮನ್ನು ಮುತ್ತುತ್ತವೆ. ಹೀಗೆ ಒಳಗೆ ಸೇರಿದ ರೋಗಾಣುಗಳನ್ನು ಗುರುತಿಸಿ ಅವುಗಳನ್ನು ನಾಶಗೊಳಿಸುವ ಸಾಮರ್ಥ್ಯ ನಮ್ಮ ದೇಹಕ್ಕಿದೆ. ಈ ಶಕ್ತಿಯನ್ನೇ ನಾವು ರೋಗನಿರೋಧಕ ಶಕ್ತಿಯೆನ್ನುತ್ತೇವೆ. ಲಸಿಕೆಗಳಿಂದ ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಕೃತ್ರಿಮವಾಗಿ ಹೆಚ್ಚಿಸಿಕೊಳ್ಳಬಹುದು. ಲಸಿಕೆಗಳು ರೋಗಾಣುಗಳ ವಿರುದ್ಧ ಹೋರಾಡುವ ಸೈನಿಕರನ್ನು ತರಬೇತಿಗೊಳಿಸುವ ಕಾರ್ಯವನ್ನೇ ಮಾಡುತ್ತವೆ. ಎಡ್ವರ್ಡ್ ಜನ್ನರ್ ೧೭೯೬ರಲ್ಲಿ ಲಸಿಕಾ ಲೋಕದ ಬಾಗಿಲನ್ನು ತೆರೆದು ಆ ಲೋಕದ ಪಿತಾಮಹನೆನಿಸಿಕೊಂಡ. ಮಾನವನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಅವನನ್ನು ಕಾಯಿಲೆಯಿಂದ ಕಾಪಾಡುವ ವಿಶಿಷ್ಟ ಶಕ್ತಿ ಲಸಿಕೆಗಳಿಗಿದೆ. ಆದ್ದರಿಂದ ಲಸಿಕೆಗಳನ್ನು ಜೈವಿಕ ಗುರಾಣಿ ಎನ್ನಬಹುದು.
ಸಿಡುಬು ರೋಗದ ವಿರುದ್ಧ ಜೆನ್ನರ್ ತಯಾರಿಸಿದ ಲಸಿಕೆಯನ್ನು ತಗೆದುಕೊಳ್ಳಲು ಯಾರೂ ಮುಂದೆ ಬರದಿದ್ದಾಗ ಸ್ವತಃ ತನ್ನ ಪುಟ್ಟ ಮಕ್ಕಳಿಗೆ ಸಾರ್ವಜನಿಕರ ಎದುರಿಗೆ ಲಸಿಕೆಯನ್ನು ನೀಡಿದ. ಮುಂದೆ ಜೆನ್ನರ್ನ ಲಸಿಕಾ ಕಾರ್ಯಕ್ರಮ ತುಂಬಾ ಜನಪ್ರಿಯವಾಯಿತು. ಸಿಡುಬು ವಿಶ್ವದಲ್ಲಿ ಲಸಿಕೆಯಿಂದ ನಿರ್ಮೂಲನೆಗೊಂಡ ಮೊತ್ತಮೊದಲ ಕಾಯಿಲೆ. ಆ ಸಮಯದಲ್ಲಿ ಸಿಡುಬಿಗೆ ತುತ್ತಾದವರು ಸಾಯುವುದು ಖಂಡಿತ ಎಂಬ ನಂಬಿಕೆಯಿತ್ತು. ಮುಂದೆ ಅನೇಕ ಕಾಯಿಲೆಗಳನ್ನು ತಡೆಯಲು ಲಸಿಕೆಗಳನ್ನು ಸೃಷ್ಟಿಸಿ ವಿಜ್ಞಾನಿಗಳು ಜಗತ್ತಿಗೆ ಮಹದುಪಕಾರ ಮಾಡಿದರು. ನೂರಾರು ವೈದ್ಯ ವಿಜ್ಞಾನಿಗಳ ಅವಿರತ ದುಡಿಮೆ, ತ್ಯಾಗ ಈ ಲಸಿಕೆಗಳ ಹಿಂದೆ ಅಡಗಿದೆ. ಬೇರೆ ಬೇರೆ ವಿಜ್ಞಾನಿಗಳಿಂದ ಲಸಿಕೆಗಳನ್ನು ಕಂಡು ಹಿಡಿದ ಪರಿಣಾಮವಾಗಿ ಮಾರಕ ರೋಗಗಳಿಂದ ಮಾನವ ಕುಲವನ್ನು ಉಳಿಸಿಕೊಳ್ಳಲು ಸಾಧ್ಯವಾಗಿದೆ.
೧೭೯೯ರಲ್ಲಿ ಮೈಸೂರಿನ ರಾಜಮನೆತನದಲ್ಲಿ ಉತ್ತರಾಧಿಕಾರಿಯಾಗಬೇಕಿದ್ದ ರಾಜಕುಮಾರ ಕೃಷ್ಣರಾಜನಿನ್ನೂ ಎಳೆಯ ಬಾಲಕ. ಅವನ ಪರವಾಗಿ ಅಜ್ಜಿ ರಾಣಿ ಲಕ್ಷೀ ಅಮ್ಮಣ್ಣಿಯವರು ರಾಜ್ಯಭಾರ ಮಾಡುತ್ತಿದ್ದರು. ೧೮೦೬ರಲ್ಲಿ ರಾಜಕುಮಾರನಿಗೆ ೧೧ ವರ್ಷವಾದಾಗ ಅಂದಿನ ಪದ್ಧತಿಯಂತೆ ಮದುವೆ ಮಾಡಿಸಬೇಕೆಂದು ನಿರ್ಧಾರವಾಗಿ ವಧುವಿನ ಆಯ್ಕೆಯೂ ಆಯಿತು.
ದೇಶದಲ್ಲೆಲ್ಲಾ ಮೈಲಿಬೇನೆಯ ಉಪಟಳ ಹೆಚ್ಚಾಗಿದ್ದ ಕಾಲ ಅದು. ವಿವಾಹವಾಗುವುದರೊಳಗೆ ವಧುವಿಗೇನಾದರೂ ಮೈಲಿಬೇನೆ ತಗಲಿ ಅಸುನೀಗಿದರೆ ಮದುವೆಯೇ ನಿಂತು ಹೋಗುತ್ತದೆ. ರಾಜಕುಮಾರನಿಗೆ ಮೈಲಿಬೇನೆ ಬಂದು ಸಾವನ್ನಪ್ಪಿದರೆ ರಾಜಮನೆತನದ ದೀಪವೇ ನಂದಿ ಹೋಗುವುದು ಎಂಬ ಚಿಂತೆ ರಾಣಿಯನ್ನು ಹಗಲಿರುಳು ಕಾಡತೊಡಗಿತು. ಆಸ್ಥಾನದ ವೈದ್ಯರು ಇದಕ್ಕೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿ ವಿಫಲರಾದರು. ದೇವರ ಮೊರೆ ಹೊಕ್ಕರು. ನಾಡಿನಲ್ಲಿ ಸಂಭವಿಸುತ್ತಿರುವ ಸಾವು ನೋವುಗಳನ್ನು ಕಣ್ಣಾರೆ ಕಂಡು ದಿಗ್ಭ್ರಾಂತರಾದರು. ಈ ವಿಷಯವಾಗಿ ಸಾಕಷ್ಟು ಚರ್ಚಿಸಿದರೂ, ಸಮಸ್ಯೆಗೆ ಪರಿಹಾರ ಸಿಗಲಿಲ್ಲ. ಆಗ ರಾಜ್ಯದ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದ ಬ್ರಿಟಿಷ್ ರೆಸಿಡೆಂಟರನ್ನು ಈ ಬಗ್ಗೆ ಸಲಹೆ ಕೇಳಿದರು. ಅವರು ಇಂಗ್ಲ್ಲೆಂಡಿನಲ್ಲಿ ಲಸಿಕೆ ಹಾಕಿಸಿ ಹೇಗೆ ಮೈಲಿಬೇನೆಯನ್ನು ತಡೆಗಟ್ಟುತ್ತಿದ್ದಾರೆಂಬುದನ್ನು ರಾಣಿಗೆ ವಿವರಿಸಿದರು. ಅವರ ಖಾಸಗಿ ವೈದ್ಯರಿಂದಲೇ ರಾಜಕುಮಾರನಿಗೆ ಮತ್ತು ವಧುವಿಗೆ ಲಸಿಕೆ ಹಾಕಿಸಿದರು. ಮುಂದೆ ಹಲವು ತಿಂಗಳ ನಂತರ ವಿವಾಹ ಸಾಂಗವಾಗಿ ನೆರವೇರಿತು. ಈ ಮೂಲಕ ಭಾರತಕ್ಕೆ ಮೊದಲು ಲಸಿಕೆಯನ್ನು ಪರಿಚಯಿಸಿದ ಕೀರ್ತಿ ಮೈಸೂರು ರಾಜಮನೆತನಕ್ಕಾಯಿತು.
ಮೈಸೂರು ಸಂಸ್ಥಾನದಲ್ಲಿ ರಾಜಮನೆತನದಲ್ಲಿ ಲಸಿಕೆ ಹಾಕಿಸಿದ ಉದಾಹರಣೆ ಉಲ್ಲೇಖಿಸಿ ಬ್ರಿಟಿಷ್ ಸರಕಾರ ೧೮೦೬ರ ಜುಲೈ ತಿಂಗಳಲ್ಲಿ ಒಂದು ಜಾಹೀರಾತು ಹೊರಡಿಸಿ ಭಾರತದ ಪ್ರಜೆಗಳಲ್ಲಿ ಮೈಲಿಬೇನೆಯ ವಿರುದ್ಧ ಲಸಿಕೆ ಹಾಕಿಸಿಕೊಳ್ಳಬೇಕೆಂದು ಸಾರಿತು. ಭಾರತದಲ್ಲಿ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಹೆಗ್ಗಳಿಕೆಗೆ, ಕೀರ್ತಿಗೆ ಮೈಸೂರು ಸಂಸ್ಥಾನದ ಹೆಸರು ಎಂದಿಗೂ ಅಜರಾಮರ!







