ಕೋವಿಡ್ ಲಸಿಕೆ | ಬಯೋಕಾನ್ ಅಧ್ಯಕ್ಷೆಗೆ ಡಾ. ಕಕ್ಕಿಲ್ಲಾಯ ಸವಾಲು
ಖ್ಯಾತ ವೈದ್ಯಕೀಯ ತಜ್ಞ ಡಾ. ಶ್ರೀನಿವಾಸ ಕಕ್ಕಿಲ್ಲಾಯ ಅವರು ಕೇಳಿದ ಪ್ರಶ್ನೆಗಳೇನು?

ಡಾ. ಶ್ರೀನಿವಾಸ್ ಕಕ್ಕಿಲ್ಲಾಯ - ಕಿರಣ್ ಮಜುಂದಾರ್ ಶಾ
ಕೋವಿಡ್ ಲಸಿಕೆಗಳನ್ನು ಆತುರದಿಂದ ಅನುಮೋದಿಸಲಾಗಿದೆ ಎನ್ನುವುದು ತಪ್ಪು ಎಂಬ ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ ಹೇಳಿಕೆಗೆ ಈಗ ವೈದ್ಯರು ಸವಾಲು ಹಾಕಿದ್ದಾರೆ. ತಜ್ಞ ವೈದ್ಯ ಹಾಗೂ ಕೋವಿಡ್ ಸಂದರ್ಭದಲ್ಲಿ ನೂರಾರು ರೋಗಿಗಳಿಗೆ ಚಿಕಿತ್ಸೆ ನೀಡಿರುವ ಡಾ. ಶ್ರೀನಿವಾಸ್ ಕಕ್ಕಿಲ್ಲಾಯ ಅವರು ಕಿರಣ್ ಮಜುಂದಾರ್ ಶಾ ಅವರಿಗೆ ಎರಡು ಪ್ರಶ್ನೆಗಳನ್ನು ಕೇಳಿದ್ದಾರೆ.
ಕೋವಿಡ್ ಲಸಿಕೆಗೆ ನೀಡಲಾದ ತುರ್ತು ಅನುಮೋದನೆಯಲ್ಲಿ ಏನಿತ್ತು ಮತ್ತು ಅದನ್ನು ನೀಡುವ ತುರ್ತು ಏನಿತ್ತು ಎಂದು ಡಾ.ಕಕ್ಕಿಲ್ಲಾಯ ಅವರು ಪ್ರಶ್ನಿಸಿದ್ದಾರೆ. ಹಠಾತ್ ಹೃದಯಾಘಾತದಿಂದಾಗುವ ಸಾವುಗಳಿಗು ಕೋವಿಡ್ ಲಸಿಕೆಗೂ ಸಂಬಂಧ ಇರಬಹುದು ಮತ್ತು ಲಸಿಕೆಗಳನ್ನು ಆತುರದಿಂದ ಅನುಮೋದಿಸಲಾಗಿತ್ತು ಎಂಬ ಸಿಎಂ ಸಿದ್ದರಾಮಯ್ಯ ಹೆಳಿಕೆಗೆ ಪ್ರತಿಕ್ರಿಯಿಸಿದ್ದ ಕಿರಣ್ ಮಜುಂದಾರ್ ಶಾ, ಆಕ್ಷೇಪ ಎತ್ತಿದ್ದರು.
ಹಠಾತ್ ಹೃದಯಾಘಾತದಿಂದ ಆಗುವ ಸಾವುಗಳಿಗೂ ಕೋವಿಡ್ ಲಸಿಕೆಗೂ ಇರಬಹುದಾದ ಸಂಬಂಧದ ಬಗ್ಗೆ ಕಡೆಗಣಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಈಚೆಗೆ ಹೇಳಿದ್ದರು. ಹಠಾತ್ ಸಾವುಗಳ ಕುರಿತ ಅಧಯಯನ ನಡೆಸಿ ವರದಿ ನೀಡಲು ವೈದ್ಯರ ಸಮಿತಿಯೊಂದನ್ನು ರಚಿಸಿದ್ದರು.
ಆದರೆ ಇದ್ದಕ್ಕಿದ್ದಂತೆ ಅದಕ್ಕೆ ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ ಆಕ್ಷೇಪ ವ್ಯಕ್ತಪಡಿಸಿದ್ದರು.
ಕೋವಿಡ್ ಲಸಿಕೆಗಳನ್ನು ತುರ್ತು ಬಳಕೆ ಅಧಿಕಾರ ಚೌಕಟ್ಟಿನಡಿಯಲ್ಲಿ ಅನುಮೋದಿಸಲಾಗಿದೆ. ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ ಕಠಿಣ ಶಿಷ್ಠಾಚಾರ ಪಾಲಿಸಿದ ನಂತರವೇ ಅವುಗಳ ಬಳಕೆಗೆ ಒಪ್ಪಲಾಗಿದೆ ಎಂದು ಕಿರಣ್ ಮಜುಂದಾರ್ ಶಾ ಹೇಳಿದ್ದರು. ಈ ಲಸಿಕೆಗಳನ್ನು ಆತುರದಿಂದ ಅನುಮೋದಿಸಲಾಗಿದೆ ಎಂದು ಹೇಳುವುದು ವಾಸ್ತವಿಕವಾಗಿ ತಪ್ಪು ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದರು.
ಈ ಲಸಿಕೆಗಳು ಲಕ್ಷಾಂತರ ಜೀವಗಳನ್ನು ಉಳಿಸಿವೆ ಮತ್ತು ಎಲ್ಲಾ ಲಸಿಕೆಗಳಂತೆ, ಬಹಳ ಕಡಿಮೆ ಸಂಖ್ಯೆಯ ವ್ಯಕ್ತಿಗಳಲ್ಲಿ ಅಡ್ಡಪರಿಣಾಮಗಳನ್ನು ಉಂಟುಮಾಡಬಹುದು. ಹೃದಯಾಘಾತಕ್ಕೆ ಕೋವಿಡ್ ಲಸಿಕೆ ಕಾರಣ ಎಂದು ದೂಷಿಸುವ ಬದಲು, ಅವುಗಳ ಅಭಿವೃದ್ಧಿಯ ಹಿಂದಿನ ವಿಜ್ಞಾನವನ್ನು ಒಪ್ಪಿಕೊಳ್ಳುವುದು ಮುಖ್ಯ ಎಂದು ಕಿರಣ್ ಮಜುಂದಾರ್ ಶಾ ಹೇಳಿದ್ದರು.
ಆದರೆ, ಇದಕ್ಕೆ ಖ್ಯಾತ ವೈದ್ಯಕೀಯ ತಜ್ಞ ಡಾ. ಶ್ರೀನಿವಾಸ ಕಕ್ಕಿಲ್ಲಾಯ ಅವರು ಪ್ರತಿಕ್ರಿಯಿಸಿದ್ದು, 2021 ರ ಜನವರಿ 6 ರ The New Indian Express ವರದಿಯನ್ನು ಉಲ್ಲೇಖಿಸಿದ್ದಾರೆ. ವಿಶೇಷ ತಜ್ಞರ ಸಮಿತಿ ಈ ಲಸಿಕೆಗಾಗಿ ಡಿಸೆಂಬರ್ 30, ಜನವರಿ 1 ಮತ್ತು 2 ರಂದು ಒಂದರ ಬೆನ್ನಿಗೊಂದರಂತೆ ಸಭೆಗಳನ್ನು ನಡೆಸಿದ್ದರ ಬಗ್ಗೆ ಆ ವರದಿ ಹೇಳಿತ್ತು.
ಗಮನಿಸಬೆಕಾದ ಸಂಗತಿಯೆಂದರೆ, ಮೊದಲೆರಡು ಸಭೆಗಳಲ್ಲಿ ಕಂಪೆನಿ ಮುಂದಿಟ್ಟ ಸಾಕ್ಷ್ಯಾಧಾರಗಳು ತೃಪ್ತಿಕರವಾಗಿರಲಿಲ್ಲ. ಆದರೆ, ಮೂರನೇ ಸಭೆಯಲ್ಲಿ ಕಂಪೆನಿ ಬ್ರಿಟನ್ನ ಹೊಸ ವೈರಸ್ ನೆಪದಲ್ಲಿ ತುರ್ತು ಅನುಮೋದನೆ ಕೇಳಿತೆಂದೂ, ಸರ್ಕಾರದ ಒತ್ತಡದಿಂದ ಸಮಿತಿ ಒಪ್ಪಬೇಕಾಯಿತೆಂದೂ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ನ ಆ ವರದಿಯಲ್ಲಿ ಹೇಳಲಾಗಿತ್ತು.
ಸರ್ಕಾರದ ಒತ್ತಡದಿಂದಾಗಿ ಸಮಿತಿ ರಾತ್ರೋರಾತ್ರಿ ಕೋವಾಕ್ಸಿನ್ ಬಗ್ಗೆ ತನ್ನ ಮನಸ್ಸನ್ನು ಬದಲಾಯಿಸಿರಬಹುದು ಎಂಬ ಅನುಮಾನ ವ್ಯಕ್ತವಾಗುತ್ತದೆ ಎಂದು ಆ ವರದಿ ಹೇಳಿತ್ತು. ನಾಲ್ಕು ದಿನಗಳಲ್ಲಿ ನಡೆದ ಮೂರು ಸಭೆಗಳ ನಂತರ, ತಜ್ಞರ ಸಮಿತಿ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಕೋವಿಶೀಲ್ಡ್ ಮತ್ತು ಭಾರತ್ ಬಯೋಟೆಕ್-ಐಸಿಎಂಆರ್ ನ ಕೋವಾಕ್ಸಿನ್ ನಿರ್ಬಂಧಿತ ತುರ್ತು ಬಳಕೆಗೆ ಶಿಫಾರಸು ಮಾಡಿತು ಎಂಬುದನ್ನು ವರದಿ ಪ್ರಸ್ತಾಪಿಸಿತ್ತು.
ಅಂದರೆ, ಡಾ.ಕಕ್ಕಿಲ್ಲಾಯ ಅವರು ಹೇಳುವಂತೆ, ಕೋವಿಡ್ ತುರ್ತು ಸ್ಥಿತಿ ಇಲ್ಲದೇ ಇದ್ದ ಹೊತ್ತಲ್ಲಿ ಲಸಿಕೆಗೆ ತುರ್ತು ಅನೊಮೋದನೆ ನೀಡಲಾಗಿತ್ತು. 3 ನೇ ಹಂತದ ಪ್ರಯೋಗ ಇನ್ನೂ ನಡೆಯುತ್ತಿದ್ದಾಗಲೇ ಕೋವಾಕ್ಸಿನ್ಗೆ ಅನುಮೋದನೆ ನೀಡಿದ್ದ ವಿಷಯ ವೈಜ್ಞಾನಿಕ ಸಮುದಾಯದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಏಕೆಂದರೆ ಅದರ ಪರಿಣಾಮವೇನೆಂಬುದು ಇನ್ನೂ ಸಾಬೀತಾಗಬೇಕಿತ್ತು.
ಡಿಸೆಂಬರ್ 30 ಮತ್ತು ಜನವರಿ 1 ರಂದು ನಡೆದ ಸಭೆಗಳಲ್ಲಿ, ಕೋವಾಕ್ಸಿನ್ನ ಹಂತ 1 ಮತ್ತು 2 ರ ಪ್ರಾಯೋಗಿಕ ಡೇಟಾ ತೃಪ್ತಿಕರವಾಗಿಲ್ಲ ಎಂದು ಹೇಳಿದ್ದ ಸಮಿತಿ, ಜನವರಿ 2 ರಂದು ತನ್ನ ಮನಸ್ಸು ಬದಲಿಸಿತ್ತು. ಇದು, ಸರ್ಕಾರದ ಒತ್ತಡದಿಂದ ನೀಡಲಾದ ಅನುಮೋದನೆ ಎಂಬ ಅನುಮಾನಗಳು ಆಗ ಎದ್ದಿದ್ದವು.
ಇದೇ ಪ್ರಶ್ನೆಯಿಟ್ಟುಕೊಂಡು ಆಗ, ಅಂದರೆ 2021 ರ ಜನವರಿಯಲ್ಲೇ ಪತ್ರಿಕೆಗಳಲ್ಲಿ ಬರೆದಿದ್ದ ವೈದ್ಯ ಡಾ.ಕಕ್ಕಿಲ್ಲಾಯ ಅವರು, ಆ ಎರಡೂ ಲಸಿಕೆಗಳ ಬಗ್ಗೆ ಅವುಗಳನ್ನು ತಯಾರಿಸಿದವರೇ ಪರಸ್ಪರ ದೂಷಿಸುತ್ತ, ಕಾದಾಡಿಕೊಂಡದ್ದರ ಬಗ್ಗೆ ಪ್ರಸ್ತಾಪಿಸಿದ್ದರು. ಕೋವ್ಯಾಕ್ಸಿನ್ ಲಸಿಕೆ ನೀರಿನಂತಿದೆ ಎಂದು ಕೋವಿಶೀಲ್ಡ್ನ ಆದಾರ್ ಪೂನಾವಾಲ ಹೀಗಳೆದರೆ, ಕೋವಿಶೀಲ್ಡ್ ಲಸಿಕೆಯ ಪರೀಕ್ಷೆಗಳೇ ಕಳಪೆಯಾಗಿವೆ ಶೇ. 60-70 ಜನರಲ್ಲಿ ಅಡ್ಡ ಪರಿಣಾಮಗಳಾಗಿವೆ ಎಂದು ಕೋವ್ಯಾಕ್ಸಿನ್ ಕಡೆಯಿಂದ ಪ್ರತಿ ಆರೋಪ ಬಂದಿತ್ತು.
ಅವುಗಳ ನಡುವಿನ ಈ ಕಾದಾಟದಲ್ಲಿಯೇ ಆ ಎರಡೂ ಲಸಿಕೆಗಳ ವಾಸ್ತವ ಏನೆಂಬುದು ಬಯಲಾಗಿದೆ ಎಂದು ಕಕ್ಕಿಲ್ಲಾಯ ಬರೆದಿದ್ದರು. ತಜ್ಞರ ಸಮಿತಿ ನೀಡಿದ ಅನುಮೋದನಾ ಪತ್ರದಲ್ಲಿನ ಪದಗಳೇ ಅನುಮಾನಾಸ್ಪದವಾಗಿದ್ದುದರ ಬಗ್ಗೆ ಅವರು ಗಮನ ಸೆಳೆದಿದ್ದರು. ಈ ಅನುಮೋದನೆ ಸೀರಂ ಇನ್ಸ್ಟಿಟ್ಯೂಟ್ ಮತ್ತು ಭಾರತ್ ಬಯೋಟೆಕ್ ಕಂಪೆನಿಗಳ ವಿನಂತಿಯ ಮೇರೆಗೆ ತೆಗೆದುಕೊಳ್ಳಲಾದ ತುರ್ತಿನ ಪ್ರಕ್ರಿಯೆ ಎಂದೇ ಸಮಿತಿ ಹೇಳಿದ್ದನ್ನು ಅವರು ಪ್ರಸ್ತಾಪಿಸಿದ್ದರು.
ಎರಡನೇ ಅಲೆ ಹೊತ್ತಿನ ಕೋವಿಡ್ ತುರ್ತು ಲಸಿಕೆಯ ಅಗತ್ಯ ಇರುವಷ್ಟು ಗಂಭೀರ ಕಾಯಿಲೆಯೆ ಎಂದು ಡಾ.ಕಕ್ಕಿಲ್ಲಾಯ ಪ್ರಶ್ನಿಸಿದ್ದರು. ಈಗ ಅವರು ಅದೇ ಪ್ರಶ್ನೆಯನ್ನು ಕಿರಣ್ ಮಜುಂದಾರ್ ಶಾ ಅವರಿಗೆ ಕೇಳಿದ್ದಾರೆ. ತುರ್ತು ಅನುಮೋದನೆ ನಿಡುವ ತುರ್ತು ಏನಿತ್ತು ಎಂದು ಕೇಳಿದ್ದಾರೆ.
ಸಿದ್ದರಾಮಯ್ಯ ಎತ್ತಿದ್ದ ಅನುಮಾನಗಳಿಗೆ ಅತ್ಯಾತುರದಿಂದ ಮುಂದೆ ಬಂದು ಪ್ರತಿಕ್ರಿಯಿಸಿದ್ದ ಕಿರಣ್ ಮಜುಂದಾರ್ ಶಾ ಅವರು ಈಗ ಡಾ. ಕಕ್ಕಿಲ್ಲಾಯ ಅವರು ತೆರೆದಿಟ್ಟಿರುವ ಲಸಿಕೆಗೆ ತುರ್ತು ಅನುಮೋದನೆ ಹಿಂದಿನ ಮರ್ಮ ಕುರಿತು ಉತ್ತರ ನೀಡುತ್ತಾರೆಯೆ ಎಂಬುದು ಪ್ರಶ್ನೆ.