ʼಮೀಡಿಯಾ ವನ್ʼ ಸಂಪಾದಕರ ಕೈ ಕತ್ತರಿಸುವ ಬೆದರಿಕೆ ಹಾಕಿದ ಸಿಪಿಎಂ ಕಾರ್ಯಕರ್ತರು
►ನಿಲಂಬೂರ್ ಸೋಲಿನ ಹತಾಶೆ; ಸಂಪಾದಕನ ಮೇಲೆ ಮುಗಿಬಿದ್ದ ಸಿಪಿಎಂ ಪಡೆ!►ದಿಲ್ಲಿಯಲ್ಲಿ ಬಿಜೆಪಿಯನ್ನು ಖಂಡಿಸುವ ಸಿಪಿಎಂ ಕೇರಳದಲ್ಲಿ ಮಾಡಿದ್ದೇನು?

ಕೇರಳದಲ್ಲಿ ಉಪಚುನಾವಣಾ ಫಲಿತಾಂಶವೊಂದು ಆಡಳಿತ ಪಕ್ಷ ಹಾಗು ವಿಪಕ್ಷಗಳ ನಡುವೆ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗುವ ಬದಲು ಬೇರೆಯೇ ರೂಪ ಪಡೆದುಕೊಂಡಿರುವುದು ದೊಡ್ಡ ಚರ್ಚೆಗೆ ಕಾರಣವಾಗಿದೆ. ಈ ವಿಚಿತ್ರ ಚರ್ಚೆ ಈಗ ದಾಳಿ ಮಾಡುವ, ಕಡಿಯುವ ಬೆದರಿಕೆಯವರೆಗೂ ಬಂದು ತಲುಪಿರುವುದು ವಿಪರ್ಯಾಸ.
ಕೇರಳದಲ್ಲಿ ಆಡಳಿತಾರೂಢ ಸಿಪಿಎಂ ಪಕ್ಷವು ಒಂದು ಕಡೆ ಮಾಧ್ಯಮ ಸ್ವಾತಂತ್ರ್ಯವನ್ನು ರಕ್ಷಿಸುವ ಮಾತನಾಡುತ್ತಲೇ ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕುವ ತನ್ನ ಪ್ರಯತ್ನಗಳನ್ನು ಅತ್ಯಂತ ಆಕ್ರಮಣಕಾರಿ ಶೈಲಿಯಲ್ಲಿ ಮುಂದುವರೆಸಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ವಿಷಯದಲ್ಲಿ ಬಿಜೆಪಿಯನ್ನು ಟೀಕಿಸುತ್ತಲೇ ಬಂದಿರುವ ಸಿಪಿಎಂ ಹಾಗು ಎಡರಂಗ ತಾನು ಆಡಳಿತ ನಡೆಸುವ ರಾಜ್ಯದಲ್ಲಿ ಮಾಡುತ್ತಿರುವುದೇನು ಎಂಬ ಗಂಭೀರ ಪ್ರಶ್ನೆಗೂ ಇದು ಕಾರಣವಾಗಿದೆ.
ಇತ್ತೀಚೆಗೆ, ʼಮೀಡಿಯಾ ವನ್ʼ ಮಲಯಾಳಂ ನ್ಯೂಸ್ ಚಾನೆಲ್ ನ ಕಾರ್ಯನಿರ್ವಾಹಕ ಸಂಪಾದಕ ಸಿ. ದಾವೂದ್ ಅವರ ಕೈ ಕತ್ತರಿಸುವ ಬೆದರಿಕೆ ಹಾಕುವ ಮೂಲಕ ಸಿಪಿಎಂ ಕಾರ್ಯಕರ್ತರು ಆ ರಾಜ್ಯದಲ್ಲಿ ಆತಂಕ ಮೂಡಿಸಿದ್ದಾರೆ. ವಂಡೂರುನಲ್ಲಿ ಸಿಪಿಎಂ ಕಾರ್ಯಕರ್ತರು ಆಯೋಜಿಸಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ, "ಪಕ್ಷದ ವಿರುದ್ಧ ಸುಳ್ಳು ಸುದ್ದಿಗಳನ್ನು ಹರಡಿದರೆ, ಅವನ ಕೈಗಳನ್ನು ಕತ್ತರಿಸಲಾಗುವುದು" ಎಂದು ಘೋಷಣೆಗಳನ್ನು ಕೂಗಿದ್ದಾರೆ. ಈ ಘಟನೆಯನ್ನು ಕೇರಳ ಕಾರ್ಯನಿರತ ಪತ್ರಕರ್ತರ ಒಕ್ಕೂಟ (KUWJ) ತೀವ್ರವಾಗಿ ಖಂಡಿಸಿದೆ.
ಮಾಧ್ಯಮ ಸ್ವಾತಂತ್ರ್ಯ ಮತ್ತು ನಾಗರಿಕ ಹಕ್ಕುಗಳ ಬಗ್ಗೆ ಸಾರ್ವಜನಿಕವಾಗಿ ಮಾತನಾಡುತ್ತಲೇ ಇನ್ನೊಂದೆಡೆ ಬೆದರಿಕೆ ಹಾಕುವುದು ಖಂಡನೀಯ ಎಂದು ಪತ್ರಕರ್ತರ ಒಕ್ಕೂಟವು ಹೇಳಿದೆ. ಮಾಧ್ಯಮದ ನಿಲುವುಗಳಿಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಲು ಮತ್ತು ಸತ್ಯವನ್ನು ಬಯಲಿಗೆಳೆಯಲು ಅನೇಕ ಮಾರ್ಗಗಳಿದ್ದರೂ, ಸಿಪಿಎಂನಂತಹ ಪಕ್ಷವೊಂದು ಪತ್ರಕರ್ತರನ್ನು ದೈಹಿಕವಾಗಿ ಬೆದರಿಸುವುದು ಸರಿಯಲ್ಲ ಎಂದು ಒಕ್ಕೂಟ ಹೇಳಿದೆ.
ʼಮೀಡಿಯಾ ವನ್ʼ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಗಳಿಗೆ ಕರೆ ನೀಡುವುದು ʼಮೀಡಿಯಾ ವನ್ʼ ಉದ್ಯೋಗಿಗಳಿಗೂ ಕಳವಳಕಾರಿಯಾಗಿದೆ ಎಂದೂ ಪತ್ರಕರ್ತರ ಒಕ್ಕೂಟ ಹೇಳಿದೆ.
KUWJ ರಾಜ್ಯಾಧ್ಯಕ್ಷ ಕೆ.ಪಿ. ರೆಜಿ ಮತ್ತು ಪ್ರಧಾನ ಕಾರ್ಯದರ್ ಸುರೇಶ್ ಎಡಪ್ಪಾಲ್ ಅವರು ಸಿಪಿಎಂ ನಾಯಕತ್ವ ತನ್ನ ಕಾರ್ಯಕರ್ತರನ್ನು ನಿಯಂತ್ರಿಸಲು ಮತ್ತು ಸರಿಪಡಿಸಲು ಒತ್ತಾಯಿಸಿದ್ದು, ಬೆದರಿಕೆ ಹಾಕಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ. ಪತ್ರಕರ್ತರ ಒಕ್ಕೂಟದ ʼಮೀಡಿಯಾ ವನ್ʼ ಘಟಕವೂ ದಾವೂದ್ ಅವರಿಗೆ ನೀಡಿದ ಬೆದರಿಕೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಇದು ಮಾಧ್ಯಮ ಸ್ವಾತಂತ್ರ್ಯದ ವಿರುದ್ಧದ ನಡೆಯಾಗಿದೆ ಎಂದು ಹೇಳಿದೆ.
ತನ್ನ ಕಾರ್ಯನಿರ್ವಾಹಕ ಸಂಪಾದಕರಿಗೆ ಬೆದರಿಕೆ ಹಾಕಿರುವ ಕುರಿತು ʼಮೀಡಿಯಾ ವನ್ʼ ಚಾನೆಲ್ ರಾಜ್ಯ ಡಿಜಿಪಿ ಹಾಗೂ ಮಲಪ್ಪುರಂ ಎಸ್ಪಿಯವರಿಗೆ ದೂರು ದಾಖಲಿಸಿದೆ.
ವಿಪಕ್ಷ ನಾಯಕ ವಿ ಡಿ ಸತೀಶನ್ ಸಹಿತ ಕಾಂಗ್ರೆಸ್ ಹಾಗು ಮುಸ್ಲಿಂ ಲೀಗ್ ನ ಹಲವಾರು ನಾಯಕರೂ ಸಿ ದಾವೂದ್ ವಿರುದ್ಧದ ಸಿಪಿಎಂ ಕಾರ್ಯಕರ್ತರಿಂದ ದಾಳಿ ಬೆದರಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಆಡಳಿತಾರೂಢ ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ ವಿ ಗೋವಿಂದನ್ ತಮ್ಮ ಪಕ್ಷದ ಕಾರ್ಯಕರ್ತರು ಕೈಕಡಿಯುವ ಬೆದರಿಕೆ ಹಾಕಿದ್ದನ್ನು ನಿರಾಕರಿಸಿದ್ದಾರೆ. ನಮ್ಮ ಪಕ್ಷದವರು ಆ ರೀತಿಯ ಬೆದರಿಕೆ ಹಾಕುವುದಿಲ್ಲ, ಹಾಗೆ ಬೆದರಿಕೆಯ ಘೋಷಣೆ ಕೂಗುವುದೂ ಸರಿಯಲ್ಲ . ಸಿಪಿಎಂ ಮಾಜಿ ಶಾಸಕರ ಮೇಲೆ ಸುಳ್ಳಾರೋಪ ಮಾಡಿರುವ ದಾವೂದ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದೂ ಹೇಳಿದ್ದಾರೆ.
ಜುಲೈ 8 ರಂದು ತಮ್ಮ ಹಾಗು ಚಾನಲ್ ವಿರುದ್ಧದ ಆರೋಪಗಳ ಬಗ್ಗೆ ಸಿ. ದಾವೂದ್, ಮಾತಾಡಿದ ಕಾರ್ಯಕ್ರಮದಲ್ಲಿ ಸಿಪಿಎಂ ಮಾಜಿ ಶಾಸಕ ಎನ್. ಕಣ್ಣನ್ ಅವರ ವಿಧಾನಸಭೆಯ ಭಾಷಣವನ್ನು ಉಲ್ಲೇಖಿಸಿ ಟೀಕಿಸಿದ್ದರು. ಅದರಿಂದ ಸಿಪಿಎಂ ನಾಯಕರು ಹಾಗು ಕಾರ್ಯಕರ್ತರು ಕೆರಳಿದ್ದಾರೆ. 1996 ರಿಂದ 2000 ರವರೆಗೆ ವಂಡೂರಿನ ಶಾಸಕರಾಗಿದ್ದ ಎನ್. ಕಣ್ಣನ್, 1999 ರ ಮಾರ್ಚ್ 23 ರಂದು ವಿಧಾನಸಭೆಯಲ್ಲಿ ಮಲಪ್ಪುರಂ ಜಿಲ್ಲೆಯ "ತಾಲಿಬಾನೀಕರಣ" ಬಗ್ಗೆ ಮಾಡಿದ ಹೇಳಿಕೆಯನ್ನು ದಾವೂದ್ ತಮ್ಮ ವಿಶ್ಲೇಷಣೆಯಲ್ಲಿ ಉಲ್ಲೇಖಿಸಿದ್ದರು. ಸಿಪಿಎಂ ಸ್ಥಳೀಯ ನಾಯಕರೊಬ್ಬರು ʼಮೀಡಿಯಾ ವನ್ʼ ಚಾನೆಲ್ ಕೋಮುವಾದಿ ಎಂದು ಮಾಡಿದ್ದ ಆರೋಪಗಳಿಗೆ ಪ್ರತ್ಯುತ್ತರವಾಗಿ ದಾವೂದ್ ಈ ವಿಷಯವನ್ನು ಪ್ರಸ್ತಾಪಿಸಿದ್ದರು.
ಆದರೆ, ಈ ಭಾಷಣವು ಆಮೇಲೆ ಪಿಎಫೈ ಆದ ಈ ಹಿಂದಿನ ಎನ್ ಡಿ ಎಫ್ ಅಂದ್ರೆ ನ್ಯಾಷನಲ್ ಡೆವಲಪ್ ಮೆಂಟ್ ಫ್ರಂಟ್ ವಿರುದ್ಧವಾಗಿತ್ತು, ಮುಸ್ಲಿಮರ ವಿರುದ್ಧವಲ್ಲ ಎಂದು ಸಿಪಿಎಂ ಸಮರ್ಥಿಸಿಕೊಂಡಿದೆ.
ದಾವೂದ್, ತಮ್ಮ ಸಂಪಾದಕೀಯ ವಿಡಿಯೋದಲ್ಲಿ, ಸಿಪಿಎಂ ನ ಇಸ್ಲಾಮೋಫೋಬಿಯಾವನ್ನು ಟೀಕಿಸಿದ್ದರು. ಕೇರಳದ ಆಡಳಿತ ಪಕ್ಷವು ಅದರ ಬಗ್ಗೆ ವಿಮರ್ಶಾತ್ಮಕ ನಿಲುವು ತೋರಿಸುವ ʼಮೀಡಿಯಾ ವನ್ʼ ಟಿವಿ ಸೇರಿದಂತೆ ಮುಸ್ಲಿಂ ಸಂಘಟನೆಗಳು ಮತ್ತು ಅವರ ಸಂಸ್ಥೆಗಳ ವಿರುದ್ಧ ದ್ವೇಷ ಹರಡುತ್ತಿದೆ ಎಂದು ಆರೋಪಿಸಿದ್ದರು.
ಈ ಘಟನೆ ಮೂಲಕ , ಜಮಾತೇ ಇಸ್ಲಾಮಿ ಮತ್ತು ʼಮೀಡಿಯಾ ವನ್ʼ ವಿರುದ್ಧ ಇತ್ತೀಚಿಗೆ ಸಿಪಿಎಂ ಪಕ್ಷದ ನಿರಂತರ ದಾಳಿ ತಾರಕಕ್ಕೆರಿದೆ. ವಿಚಿತ್ರ ಅಂದ್ರೆ ಇದೇ ಜಮಾತೇ ಇಸ್ಲಾಮಿ ಹಿಂದ್ ಜೊತೆ ಸಿಪಿಎಂ ಉತ್ತಮ ಬಾಂಧವ್ಯ ಹೊಂದಿತ್ತು. ಜಮಾತ್ ಚುನಾವಣೆಗಳಲ್ಲಿ ಸಿಪಿಎಂ ಅನ್ನು ಬೆಂಬಲಿಸುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಸಿಪಿಎಂ ಹಾಗು ಜಮಾತ್ ನಡುವಿನ ಸಂಬಂಧ ಬಿಗಡಾಯಿಸಿದೆ. ಜಮಾಅತೇ ಇಸ್ಲಾಮಿ ಹಿಂದ್ ಈಗ ಕಾಂಗ್ರೆಸ್ ಹಾಗು ಮುಸ್ಲಿಂ ಲೀಗ್ ಗಳ ಯುಡಿಎಫ್ ಅನ್ನು ಬೆಂಬಲಿಸುತ್ತಿದೆ.
ಹಾಗಾಗಿ ಈಗ ಸಿಪಿಎಂ ಗೆ ಜಮಾತೆ ಇಸ್ಲಾಮಿ ಹಿಂದ್ ದಿಢೀರನೇ ಉಗ್ರ ಇಸ್ಲಾಮಿಕ್ ಸಂಘಟನೆಯಾಗಿ ಕಾಣಲು ಪ್ರಾರಂಭಿಸಿದೆ. ಇತ್ತೀಚಿಗೆ ನಡೆದ ನಿಲಂಬೂರ್ ಉಪಚುನಾವಣೆಯಲ್ಲೂ ಜಮಾಅತೆ ಇಸ್ಲಾಮಿ ಹಿಂದ್ ಮತ್ತೆ ಯುಡಿಎಫ್ ಅನ್ನೇ ಬೆಂಬಲಿಸಿತ್ತು. ಅಲ್ಲಿ ಸಿಪಿಎಂ ಗೆ ಸೋಲಾಯಿತು. ಆ ಉಪಚುನಾವಣೆಯ ಪ್ರಚಾರದ ಸಂದರ್ಭದಲ್ಲೇ ಸಿಪಿಎಂ ಜಮಾತ್ ವಿರುದ್ಧ ದಾಳಿ ಶುರು ಮಾಡಿತ್ತು. ಅಲ್ಲಿ ಸೋಲಾದ ಬಳಿಕ ಈ ದಾಳಿ ತೀವ್ರ ಸ್ವರೂಪ ಪಡೆದುಕೊಂಡಿದೆ. ಜಮಾಅತ್ ಜೊತೆಗೆ ಅದರ ಸಂಸ್ಥೆಯೇ ನಡೆಸುವ ʼಮೀಡಿಯಾ ವನ್ʼ ಚಾನಲ್ ಕೂಡ ಸಿಪಿಎಂ ಕೆಂಗಣ್ಣಿಗೆ ಗುರಿಯಾಗಿದೆ.
ಅಷ್ಟಕ್ಕೂ ಕೇರಳದ ಸುನ್ನಿ ಸಂಘಟನೆಗಳಂತೆ ನಿಲಂಬೂರ್ ಕ್ಷೇತ್ರದಲ್ಲಾಗಲಿ, ಇಡೀ ಕೇರಳದಲ್ಲಾಗಲಿ ಚುನಾವಣಾ ಫಲಿತಾಂಶವನ್ನು ನಿರ್ಧರಿಸುವಷ್ಟು ದೊಡ್ಡ ಸಂಖ್ಯೆಯ ಸದಸ್ಯರು ಜಮಾತೆ ಇಸ್ಲಾಮಿ ಹಿಂದ್ ನಲ್ಲಿಲ್ಲ. ಆದರೆ ಜನಮನ್ನಣೆ ಪಡೆದಿರುವ ʼಮೀಡಿಯಾ ವನ್ʼ ಚಾನಲ್ ಹಾಗು ಸುಮಾರು ನಾಲ್ಕು ದಶಕಗಳಿಂದ ನಡೆಯುತ್ತಿರುವ ಮಾಧ್ಯಮಂ ದಿನಪತ್ರಿಕೆ ಆ ಸಂಘಟನೆ ಕೈಯಲ್ಲಿರುವುದರಿಂದ ಅದಕ್ಕೆ ರಾಜಕೀಯ ಪ್ರಭಾವ ಇದೆ.
ವಿಶೇಷವಾಗಿ ʼಮೀಡಿಯಾ ವನ್ʼ ಚಾನಲ್ ನಲ್ಲಿ ಪ್ರತಿ ರಾತ್ರಿ ನಡೆಯುವ ಔಟ್ ಆಫ್ ಫೋಕಸ್ ಎಂಬ ಸಂಪಾದಕೀಯ ನಿಲುವು ಚರ್ಚಿಸುವ ಕಾರ್ಯಕ್ರಮ ಸಿಪಿಎಂ ನ ಸಿಟ್ಟಿಗೆ ಮೂಲವಾಗಿದೆ. ಈ ಕಾರ್ಯಕ್ರಮದ ಮೂಲಕ ʼಮೀಡಿಯಾ ವನ್ʼ ಕೇರಳದಲ್ಲಿ ಇಸ್ಲಾಮಿಸ್ಟ್ ಚಿಂತನೆಗಳನ್ನು ಹರಡುತ್ತಿದೆ, ಅದರಲ್ಲಿ ಸಿ ದಾವೂದ್ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಸಿಪಿಎಂ ನ ಕಾರ್ಯಕರ್ತರು, ಸ್ಥಳೀಯ ನಾಯಕರು ತೀವ್ರ ಟೀಕಾ ಪ್ರಹಾರ ನಡೆಸುತ್ತಿದ್ದಾರೆ.
ಸಿ. ದಾವೂದ್ ಅವರು ಬರಹಗಾರರಾಗಿದ್ದು, 'ಔಟ್ ಆಫ್ ಫೋಕಸ್' ಟಿವಿ ಕಾರ್ಯಕ್ರಮ ಮತ್ತು ಸಾಮಾಜಿಕ, ರಾಜಕೀಯ ಹಾಗೂ ಧಾರ್ಮಿಕ ವಿಷಯಗಳ ಕುರಿತು ಅವರ ತೀಕ್ಷ್ಣವಾದ ವಿಶ್ಲೇಷಣೆಗಳಿಗೆ ಹೆಸರುವಾಸಿಯಾಗಿದ್ದಾರೆ. ಈಗ ಅವರ ವಿರುದ್ಧದ ಸಿಪಿಎಂ ಕಾರ್ಯಕರ್ತರ ದ್ವೇಷ ಅವರ ಕೈ ಕತ್ತರಿಸುವ ಬೆದರಿಕೆವರೆಗೂ ಹೋಗಿ ತಲುಪಿದೆ
ʼಮೀಡಿಯಾ ವನ್ʼ ಚಾನಲ್ ಈ ಹಿಂದೆ ಬಿಜೆಪಿ ಕೆಂಗಣ್ಣಿಗೆ ಗುರಿಯಾಗಿ ಅದರ ಪರವಾನಗಿ ನವೀಕರಿಸಲು ಮೋದಿ ಸರಕಾರ ನಿರಾಕರಿಸಿತ್ತು. ಆದರೆ ಚಾನಲ್ ವಿರುದ್ಧ ಮಾಡಿದ ಆರೋಪಗಳು ನ್ಯಾಯಾಲಯದಲ್ಲಿ ನಿಲ್ಲಲಿಲ್ಲ. ಚಾನಲ್ ಗೆ ಪರವಾನಗಿ ಕೊಡಿ ಎಂದು ಸುಪ್ರೀಂ ಕೋರ್ಟ್ ಆದೇಶಿಸಿ ಚಾನಲ್ ಮರುಪ್ರಸಾರ ಶುರುವಾಯಿತು. ಈಗ ಅದೇ ಚಾನಲ್ ಕೇರಳದ ಆಡಳಿತಾರೂಢ ಸಿಪಿಎಂ ನ ದಾಳಿಗೆ ಗುರಿಯಾಗಿದೆ. ʼಮೀಡಿಯಾ ವನ್ʼ ಅಂದ್ರೆ ಇಸ್ಲಾಮಿಸ್ಟ್ ಚಾನಲ್ ಎಂದು ಸಿಪಿಎಂ ನವರು ದೊಡ್ಡ ಅಪಪ್ರಚಾರ ಅಭಿಯಾನವನ್ನೇ ನಡೆಸುತ್ತಿದ್ದಾರೆ. ಅದಕ್ಕೆ ವಿರುದ್ಧವಾಗಿ ಜಮಾತೆ ಇಸ್ಲಾಮಿ ಹಿಂದ್ ರಾಜ್ಯಾದ್ಯಂತ ಸಿಪಿಎಂ ವಿರುದ್ಧ ಸಾರ್ವಜನಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.







