‘ಇನ್ಶಾ ಅಲ್ಲಾ’ ಅಪರಾಧೀಕರಣ: ಹೆಚ್ಚುತ್ತಿದೆ ಮುಸ್ಲಿಮರ ಅಸ್ಮಿತೆಯ ಮೇಲಿನ ವ್ಯವಸ್ಥಿತ ದಾಳಿ
►ಬೆಟ್ವಾ ಶರ್ಮಾ - article-14. com ವರದಿ

IPS ಅಧಿಕಾರಿ ಬುಶ್ರಾ ಬಾನೊ Photo: x.com/BanoBushara
ಭಾರತದಲ್ಲಿ ಈಗ ವಾಸಿಸುತ್ತಿರುವ ಮುಸ್ಲಿಮರಿಗೆ, ಈ ತಿಂಗಳು ಇದುವರೆಗೆ ತಮ್ಮ ಗೌರವ ಮತ್ತು ಸುರಕ್ಷತೆಗೆ ನಿರಂತರ ಧಕ್ಕೆಯುಂಟಾಗುತ್ತಿರುವ ಅನುಭವವನ್ನು ನೀಡುತ್ತಿರಬೇಕು.
ಪೊಲೀಸ್ ಅಧಿಕಾರಿಯೊಬ್ಬರು ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಅವರನ್ನು ವರ್ಗಾವಣೆ ಮಾಡಲಾಗಿದೆ. ದಕ್ಷಿಣ ದಿಲ್ಲಿಯ ಪೊಲೀಸ್ ಠಾಣೆಯೊಂದರಲ್ಲಿ ಇಬ್ಬರು ಪತ್ರಕರ್ತರ ಮೇಲೆ ಹಲ್ಲೆ ನಡೆಸಲಾಗಿದೆ ಎನ್ನಲಾಗಿದ್ದು, ಅವರು ಮುಸ್ಲಿಮರು ಎಂದು ಪೊಲೀಸರಿಗೆ ತಿಳಿದ ಬಳಿಕ ಈ ದಾಳಿ ಮತ್ತಷ್ಟು ತೀವ್ರಗೊಂಡಿದೆ. ನ್ಯಾಯಾಲಯದ ತೀರ್ಪು ಬಂದ ಕೆಲವೇ ದಿನಗಳಲ್ಲಿ ಉತ್ತರ ಪ್ರದೇಶದಲ್ಲಿ ಶತಮಾನದಷ್ಟು ಹಳೆಯ ಮಸೀದಿಯನ್ನು ಧ್ವಂಸಗೊಳಿಸಲಾಗಿದೆ. ಮಸೀದಿ ಕೆಡವಿದ್ದನ್ನು ವಿರೋಧಿಸಿ ಮುಖ್ಯಮಂತ್ರಿಯನ್ನು ಟೀಕಿಸಿದ ಯೂಟ್ಯೂಬರ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ. ಅಸ್ಸಾಂನಲ್ಲಿ ಮುಸ್ಲಿಮರ ಮನೆಗಳನ್ನು ನೆಲಸಮಗೊಳಿಸಲಾಗಿದೆ. ಅಧಿಕೃತ ಕಾರ್ಯಕ್ರಮಗಳಿಂದ ಮುಸ್ಲಿಂ ಅಧಿಕಾರಿಗಳನ್ನು ಹೊರಗಿಡಲಾಗಿದೆ ಎನ್ನಲಾಗಿದೆ. ಭಾರತೀಯರೆಂಬ ಸಾಕ್ಷ್ಯಗಳಿದ್ದರೂ ಬಂಗಾಳಿ ಮಾತನಾಡುವ ಮುಸ್ಲಿಮರನ್ನು ನಿರಂತರವಾಗಿ ವಶಕ್ಕೆ ಪಡೆದು ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗುತ್ತಿದೆ.
2014ರಿಂದೀಚೆಗೆ ಇಸ್ಲಾಮೋಫೋಬಿಯಾ (ಮುಸ್ಲಿಂ ವಿರೋಧಿ ಭಾವನೆ) ಎಷ್ಟೊಂದು ಆಳವಾಗಿ ಬೇರೂರಿದೆ ಎಂದರೆ, ಈ ಯಾವುದೂ ಈಗ ಅಚ್ಚರಿಯೆನಿಸುವುದಿಲ್ಲ. ಹಿಂದೂ ಗುಂಪುಗಳು ಮುಸ್ಲಿಮರನ್ನು ಎಷ್ಟು ಸುಲಭವಾಗಿ ಥಳಿಸಿ ಕೊಲ್ಲುತ್ತಿದ್ದವು ಎಂದರೆ, ಪತ್ರಿಕೆಗಳಿಗೂ ಇದನ್ನು ವರದಿ ಮಾಡಲು ಬೇಸರವಾಗಿ, ಕೊನೆಗೆ ವರದಿ ಮಾಡುವುದನ್ನೇ ನಿಲ್ಲಿಸಿದ್ದ ಕಾಲವಿತ್ತು. ಹಿಂಸಾಚಾರ, ನಿಂದನೆ, ಸಾಮಾಜಿಕ ಬಹಿಷ್ಕಾರ, ಆರ್ಥಿಕ ದಿಗ್ಬಂಧನ ಮತ್ತು ಸಮುದಾಯವನ್ನು ಭಯಭೀತಗೊಳಿಸಲು ಕಾನೂನಿನ ದುರ್ಬಳಕೆ ಇವೆಲ್ಲವೂ ಈಗ ಸಹಜವೆನಿಸಿಬಿಟ್ಟಿವೆ.
ಆದರೂ, 2015ರಲ್ಲಿ ಮೊಹಮ್ಮದ್ ಅಖ್ಲಾಕ್ ಹತ್ಯೆಯಿಂದ ಆರಂಭವಾದ ಇಂಥ ಘಟನೆಗಳ ಕಹಿ ಸತ್ಯ ತಿಳಿದಿದ್ದರೂ, ಕೇವಲ ಹದಿನೈದು ದಿನಗಳಲ್ಲಿ ಇವೆಲ್ಲವೂ ಒಂದೇ ಬಾರಿಗೆ ಸಂಭವಿಸುವುದನ್ನು ನೋಡುವುದು ತುಂಬಾ ನೋವು ತರಿಸುತ್ತದೆ.
ಪೊಲೀಸ್ ಠಾಣೆಯಿಂದ ಹಿಡಿದು ಗಡಿಭಾಗದ ಪ್ರದೇಶಗಳವರೆಗೆ, ಭಾರತದ ಅತಿ ದೊಡ್ಡ ಅಲ್ಪಸಂಖ್ಯಾತ ಸಮುದಾಯಕ್ಕೆ ರವಾನಿಸುತ್ತಿರುವ ಸಂದೇಶವು ಸ್ಪಷ್ಟವಾಗಿದೆ. ನಾಗರಿಕತೆ, ಗೌರವ ಮತ್ತು ವೃತ್ತಿಪರ ಸ್ಥಾನಮಾನಗಳು ಅತ್ಯಂತ ಅನಿಶ್ಚಿತವಾಗಿ ಉಳಿದಿವೆ.
ಪಶ್ಚಿಮ ಬಂಗಾಳದ IPS ಅಧಿಕಾರಿಯಾದ ಬುಶ್ರಾ ಬಾನೊ ಅವರ ಉದಾಹರಣೆಯನ್ನೇ ತೆಗೆದುಕೊಳ್ಳಿ. ಖರಗ್ ಪುರದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಹುದ್ದೆಯಲ್ಲಿದ್ದ ಅವರನ್ನು, ಬಲಪಂಥೀಯ ಗುಂಪಿನ ದೂರಿನ ಹಿನ್ನೆಲೆಯಲ್ಲಿ ರಾಜ್ಯ ಸಶಸ್ತ್ರ ಪೊಲೀಸ್ ನ 4ನೇ ಬೆಟಾಲಿಯನ್ನ ಉಪ ಕಮಾಂಡೆಂಟ್ ಆಗಿ ವರ್ಗಾಯಿಸಲಾಗಿದೆ.
ಅಧಿಕಾರಿ ಬುಶ್ರಾ ಮಾಡಿದ ಅಪರಾಧವೇನು? ಹಿಂದುಳಿದ ಹಿನ್ನೆಲೆಯ ವಿದ್ಯಾರ್ಥಿಗಳನ್ನು ಸಿವಿಲ್ ಸೇವೆಗಳಿಗೆ ಪ್ರಯತ್ನಿಸಲು ಪ್ರೇರೇಪಿಸುವ ಪ್ರೇರಕ ವಿಡಿಯೊದಲ್ಲಿ ಅವರು “ಇನ್ಶಾ ಅಲ್ಲಾ”, “ಅಸ್ಸಲಾಂ ಅಲೈಕುಮ್” ಮತ್ತು “ಜಝಕಲ್ಲಾಹ್” ನಂತಹ ಸಾಮಾನ್ಯ ಅರೇಬಿಕ್ ಪದಗಳನ್ನು ಬಳಸಿದ್ದರು.
“ದೇವರು ಇಚ್ಛಿಸಿದರೆ” ಎಂಬರ್ಥದ “ಇನ್ಶಾ ಅಲ್ಲಾ” ಪದವನ್ನು ಭವಿಷ್ಯದಲ್ಲಿ ಏನಾದರೂ ಮಾಡುವುದಾಗಿ ಹೇಳಲು ಬಳಸಲಾಗುತ್ತದೆ. ನಿಮ್ಮ ಮೇಲೆ ಶಾಂತಿಯಿರಲಿ ಎಂಬರ್ಥದ “ಅಸ್ಸಲಾಂ ಅಲೈಕುಮ್” ಒಂದು ಸಾಮಾನ್ಯ ಶುಭಾಶಯವಾಗಿದ್ದರೆ, “ದೇವರು ನಿಮಗೆ ಪ್ರತಿಫಲ ನೀಡಲಿ” ಎಂಬರ್ಥದ “ಜಝಕಲ್ಲಾಹ್” ಪದವನ್ನು ಧನ್ಯವಾದ ಹೇಳಲು ಬಳಸಲಾಗುತ್ತದೆ.
ಅಷ್ಟೇ. ಇದುವೇ ಸಂಪೂರ್ಣ ಅಪರಾಧವಾಗಿತ್ತು.
ಈ ವಿಡಿಯೊ ವೈಯಕ್ತಿಕವಾಗಿದ್ದು, ಅಧಿಕೃತ ಕರ್ತವ್ಯಗಳಿಗೆ ಯಾವುದೇ ಸಂಬಂಧ ಹೊಂದಿರಲಿಲ್ಲ.
ಈ ವಿರೋಧದ ಹಿಂದಿರುವ ಅತ್ಯಂತ ಕ್ಷುಲ್ಲಕ ಸೇಡು, ದುರ್ಬುದ್ಧಿ ಮತ್ತು ಅಲ್ಪಸಂಖ್ಯಾತ ಸಮುದಾಯವನ್ನು ಭಯಭೀತಗೊಳಿಸುವ ನಿರ್ಧಾರವು ಬೆಚ್ಚಿಬೀಳಿಸುವಂತಿದೆ.
ಇದು ಪ್ರತಿಯೊಬ್ಬ ಮುಸ್ಲಿಂ ವೃತ್ತಿಪರರಿಗೆ ಮತ್ತು ಸಮವಸ್ತ್ರದಲ್ಲಿರುವ ಪ್ರತಿಯೊಬ್ಬ ಮುಸ್ಲಿಮನಿಗೂ, ನಿಮ್ಮ ಗುರುತು ಒಂದು ಹೊರೆಯಾಗಿದ್ದು, ಅದು ರಾತ್ರೋರಾತ್ರಿ ನಿಮ್ಮ ವೃತ್ತಿಜೀವನವನ್ನೇ ಹಳಿ ತಪ್ಪಿಸಬಹುದು ಎಂಬ ಸಂದೇಶವನ್ನು ನೀಡುತ್ತದೆ.
ಮತ್ತೊಂದೆಡೆ, ಅಂದಿನ ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ಗಣೇಶ ಹಬ್ಬದ ಪೂಜೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ತಮ್ಮ ಮನೆಗೆ ಆಹ್ವಾನಿಸುವುದು, ಅಯೋಧ್ಯೆಯಲ್ಲಿ ಪ್ರಧಾನ ಮಂತ್ರಿಯವರು ರಾಮಮಂದಿರವನ್ನು ಉದ್ಘಾಟಿಸುವುದು ಮತ್ತು ರಾಷ್ಟ್ರೀಯ ಪ್ರಸಾರ ಮಾಧ್ಯಮವು ಈ ಧಾರ್ಮಿಕ ಸಮಾರಂಭಗಳನ್ನು ನೇರಪ್ರಸಾರ ಮಾಡುವುದು ಸಂಪೂರ್ಣವಾಗಿ ಸರಿ ಎನಿಸಿಕೊಳ್ಳುತ್ತದೆ. ಇದು ನ್ಯಾಯಾಂಗ ಮತ್ತು ಕಾರ್ಯಾಂಗದ ನಡುವಿನ ಹಾಗೂ ಮಂದಿರ ಮತ್ತು ಸರ್ಕಾರದ ನಡುವಿನ ಗೆರೆಯನ್ನು ಸಂಪೂರ್ಣವಾಗಿ ಅಳಿಸಿಹಾಕುತ್ತದೆ.
►ಸೆಪ್ಟೆಂಬರ್ ತಿಂಗಳಲ್ಲಿ ನಡೆದದ್ದು
ಕೇವಲ ಕಳೆದ ಎರಡು ವಾರಗಳಲ್ಲಿ ದೇಶಾದ್ಯಂತ ಏನೆಲ್ಲಾ ನಡೆದಿದೆ ಎಂಬುದನ್ನು ಒಮ್ಮೆ ಗಮನಿಸಿ.
ದಿಲ್ಲಿಯಲ್ಲಿ, ಇಬ್ಬರು ಮುಸ್ಲಿಂ ಪತ್ರಕರ್ತೆಯರೇ ಸುದ್ದಿಯಾಗಿದ್ದಾರೆ.
ಪೊಲೀಸರೊಂದಿಗೆ ಮಾತಿನ ಚಕಮಕಿಯ ಬಳಿಕ, ತಮ್ಮನ್ನು ಬಲವಂತವಾಗಿ ಪೊಲೀಸ್ ಠಾಣೆಗೆ ಕರೆದೊಯ್ದು ಕಪಾಳಮೋಕ್ಷ ಮಾಡಿ ಹಲ್ಲೆ ನಡೆಸಲಾಗಿದೆ ಎಂದು ಶಾಹೀನ್ ಮತ್ತು ನಫೀಸಾ ಖಾನ್ ಆರೋಪಿಸಿದ್ದಾರೆ. ತಾವು ಮುಸ್ಲಿಮರು ಎಂಬುದು ಗೊತ್ತಾದ ಬಳಿಕ ಈ ದಾಳಿ ಮತ್ತಷ್ಟು ತೀವ್ರಗೊಂಡಿತು ಎಂದಿದ್ದಾರೆ ಅವರು.
ಪೊಲೀಸರು ಈ ಆರೋಪವನ್ನು ತಳ್ಳಿಹಾಕಿದ್ದರೂ, ಈ ಇಬ್ಬರು ಮಹಿಳೆಯರು ತಮ್ಮ ಸ್ವಾತಂತ್ರ್ಯ ಮತ್ತು ಪ್ರತಿಷ್ಠೆಯನ್ನು ಪಣಕ್ಕಿಟ್ಟು ಪೊಲೀಸ್ ಠಾಣೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸುತ್ತಿದ್ದಾರೆ.
ಉತ್ತರ ಪ್ರದೇಶದಲ್ಲಿ, ಸೆಪ್ಟೆಂಬರ್ 5ರಂದು ನಸುಕಿನ ಕತ್ತಲೆಯಲ್ಲಿ ಶತಮಾನದಷ್ಟು ಹಳೆಯದಾದ ಮಸೀದಿಯನ್ನು ಧ್ವಂಸಗೊಳಿಸಲಾಗಿದೆ.
ಸರ್ಕಾರಿ ಜಾಗದಲ್ಲಿ ಅನಧಿಕೃತ ಒತ್ತುವರಿ ಮಾಡಲಾಗಿದೆ ಎಂಬ ನೆಪದಲ್ಲಿ, ಜಿಲ್ಲಾ ನ್ಯಾಯಾಲಯದ ಅನುಕೂಲಕರ ತೀರ್ಪು ಬಂದ ಕೇವಲ ಮೂರೇ ದಿನಗಳಲ್ಲಿ ಹಾಗೂ ಮಸೀದಿ ಆಡಳಿತ ಮಂಡಳಿಯು ಉನ್ನತ ನ್ಯಾಯಾಲಯದ ಮೊರೆ ಹೋಗಲು ಸೂಕ್ತ ಅವಕಾಶ ಸಿಗುವ ಮುನ್ನವೇ, ಸಹರಾನ್ಪುರ ಜಿಲ್ಲಾಧಿಕಾರಿ ಕಚೇರಿ ವ್ಯಾಪ್ತಿಯಲ್ಲಿ ಈ ಮಸೀದಿಯನ್ನು ಅತ್ಯಂತ ಆತುರಾತುರವಾಗಿ ಕೆಡವಿಹಾಕಲಾಗಿದೆ. ಇದು ಅಲ್ಪಸಂಖ್ಯಾತರ ಪರಂಪರೆಯನ್ನು ನಾಶಪಡಿಸುವಲ್ಲಿನ ದುಡುಕಿನ ಆಕ್ರಮಣಕಾರಿ ಧೋರಣೆಯನ್ನು ಎತ್ತಿ ತೋರಿಸುತ್ತದೆ.
ಇದು ಆಧುನಿಕ ಒತ್ತುವರಿ ಎಂಬ ಅಧಿಕೃತ ವಾದವನ್ನು, ಅಲ್ಲಿ ಪತ್ತೆಯಾದ 1909 ಎಂಬ ವರ್ಷವನ್ನು ಕೆತ್ತಿದ ಇಟ್ಟಿಗೆಗಳು ಹಾಗೂ ಸುಮಾರು 200 ವರ್ಷ ಹಳೆಯದು ಎಂದು ಪುರಾತತ್ವಶಾಸ್ತ್ರಜ್ಞರು ಅಂದಾಜಿಸಿರುವ ತೆಳುವಾದ ‘ಲಖೌರಿ’ ಇಟ್ಟಿಗೆಗಳ ಹಳೆಯ ಬಾವಿಯು ಸುಳ್ಳಾಗಿಸಿದೆ.
ಆದರೆ, ಬಹುಸಂಖ್ಯಾತ ಆಡಳಿತವನ್ನು ನೀವು ಪ್ರಶ್ನಿಸಿದರೆ ನೇರವಾಗಿ ಜೈಲು ಸೇರಬೇಕಾಗುತ್ತದೆ.
ಸಹರಾನ್ಪುರ ಮಸೀದಿ ಧ್ವಂಸವನ್ನು ‘ಅಪರಾಧ ಕೃತ್ಯ’ ಎಂದು ಟೀಕಿಸುವುದರ ಜೊತೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಬಹಿರಂಗವಾಗಿ ವಿರೋಧಿಸಿದ ಯೂಟ್ಯೂಬರ್ ಹುದಾ ಜರಿವಾಲಾ ವಿರುದ್ಧ ಸ್ಥಳೀಯ ವಕೀಲರೊಬ್ಬರು ಕೂಡಲೇ ಪೊಲೀಸ್ ದೂರು ದಾಖಲಿಸಿದರು.
ಅವರನ್ನು ಅಷ್ಟೇ ವೇಗವಾಗಿ ಬಂಧಿಸಿ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಡಿ ಪ್ರಕರಣ ದಾಖಲಿಸಲಾಯಿತು ಮತ್ತು ಅವರು ಎರಡು ದಿನಗಳ ಕಾಲ ಜೈಲಿನಲ್ಲಿರಬೇಕಾಯಿತು.
ಉತ್ತರ ಪ್ರದೇಶದಲ್ಲಿ ಮಸೀದಿ ಧ್ವಂಸಗೊಂಡ ಎರಡು ದಿನಗಳ ಬಳಿಕ, ಸುಮಾರು 1,500 ಕಿ.ಮೀ ದೂರದಲ್ಲಿರುವ ಅಸ್ಸಾಂನ ಗೋಲ್ ಪಾರಾದಲ್ಲಿ, ಬಡ ಮುಸ್ಲಿಮರು ತಮ್ಮದೇ ಖಾಸಗಿ ಜಾಗದಲ್ಲಿ ಕಟ್ಟಿಕೊಂಡಿದ್ದ ಮನೆಗಳ ಮೇಲೆ ಕೇವಲ 24 ಗಂಟೆಗಳ ನೋಟಿಸ್ ನೀಡಿ ಬುಲ್ಡೋಝರ್ ಕಾರ್ಯಾಚರಣೆ ಮೂಲಕ ಆಡಳಿತ ಯಂತ್ರವು ಅದೇ ಸೇಡಿನ ರಾಜಕಾರಣವನ್ನು ಮುಂದುವರಿಸಿದೆ.
ಸರ್ಕಾರದ ಈ ಕ್ರಮವು ಮೇಲ್ನೋಟಕ್ಕೆ ‘ಅನಧಿಕೃತ’, ‘ಕಾನೂನುಬಾಹಿರ’ ಹಾಗೂ ತುರ್ತು ವಿಪತ್ತು ಕಾನೂನಿನ ‘ದುರುಪಯೋಗ’ ಎಂದು ಗುವಾಹಟಿ ಹೈಕೋರ್ಟ್ ತೀರ್ಪು ನೀಡಿದೆ.
ಆ ಜಾಗವು ಕೃಷಿ ಭೂಮಿಯೆಂದು ನಮೂದಿಸಲ್ಪಟ್ಟಿದ್ದು, ಮಾಲೀಕರು ಭೂ ಬಳಕೆಯನ್ನು ಬದಲಾಯಿಸದೆ ವಸತಿ ನಿರ್ಮಾಣ ಮಾಡಿದ್ದಾರೆ ಎಂಬುದು ಆಡಳಿತದ ಕಡೆಯಿಂದ ಒಡ್ಡಲಾದ ನೆಪವಾಗಿತ್ತು. ಆದರೆ, ಅಸ್ಸಾಂ ರಾಜ್ಯದ ಕಾನೂನಿನ ಪ್ರಕಾರ ಒಂದು ಬಿಘಾ (ಸುಮಾರು ಮೂರನೇ ಒಂದು ಭಾಗದಷ್ಟು ಎಕರೆ) ವರೆಗಿನ ಕೃಷಿ ಭೂಮಿಯಲ್ಲಿ ಸಣ್ಣ ಮನೆ ನಿರ್ಮಿಸಲು ಯಾವುದೇ ವಿಶೇಷ ಅನುಮತಿಯ ಅಗತ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಪಕ್ಕದ ಪಶ್ಚಿಮ ಬಂಗಾಳದಲ್ಲಿ (ಈ ಮೇ ತಿಂಗಳಲ್ಲಿ ಬಿಜೆಪಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿದೆ), ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಹಿರಿಯ ಮುಸ್ಲಿಂ IAS ಮತ್ತು IPS ಅಧಿಕಾರಿಗಳನ್ನು ಅವರ ಧರ್ಮದ ಕಾರಣದಿಂದಲೇ ಅಧಿಕೃತ ಕಾರ್ಯಕ್ರಮಗಳಿಂದ ಹೊರಗಿಡಲಾಗಿದೆ ಎಂದು TMC ಸಂಸದೆ ಮಹುವಾ ಮೊಯಿತ್ರಾ ಆರೋಪಿಸಿದ್ದಾರೆ. ಅಲ್ಲದೆ, ಈ ವಿಷಯವನ್ನು ಅಲ್ಪಸಂಖ್ಯಾತರ ಹಕ್ಕುಗಳ ವಿಶ್ವಸಂಸ್ಥೆಯ ವಿಶೇಷ ವರದಿಗಾರರ ಗಮನಕ್ಕೆ ತಂದಿದ್ದು, ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗಕ್ಕೂ ದೂರು ನೀಡಿದ್ದಾರೆ.
ಇದಲ್ಲದೆ, ಕಾನೂನು ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಗಾಳಿಗೆ ತೂರಿ, ಬಂಗಾಳಿ ಮಾತನಾಡುವ ಮುಸ್ಲಿಮರು ಅಕ್ರಮ ವಲಸಿಗರೆಂಬ ಶಂಕೆಯ ಮೇಲೆ ಅವರನ್ನು ಯಾವುದೇ ಮುನ್ಸೂಚನೆಯಿಲ್ಲದೆ ಗಡಿಯಾಚೆ ಬಾಂಗ್ಲಾದೇಶಕ್ಕೆ ನೂಕುವ ಅಮಾನವೀಯ ಹಾಗೂ ವಿಚಿತ್ರ ಧೋರಣೆಯು ಮುಂದುವರಿದಿದೆ.
ರಾತ್ರೋರಾತ್ರಿ ಕುಟುಂಬಗಳು ಚದುರಿಹೋಗುತ್ತವೆ, ಆದರೆ ಅನ್ಯಾಯ ನಡೆದ ಬಳಿಕ ನ್ಯಾಯಾಲಯಗಳು ಪರಿಹಾರಕ್ಕಾಗಿ ಪರಿತಪಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ತಪ್ಪಾಗಿ ಗಡೀಪಾರು ಮಾಡಲಾದ ನಾಗರಿಕರನ್ನು ಹುಡುಕಿ ಮರಳಿ ಕರೆತರಬೇಕೆಂದು ನ್ಯಾಯಾಲಯಗಳು ಆದೇಶಿಸಿರುವ ಹಲವಾರು ನಿದರ್ಶನಗಳು ಈಗ ನಮ್ಮ ಮುಂದಿವೆ.
ಇದಕ್ಕೊಂದು ಸ್ಪಷ್ಟ ಉದಾಹರಣೆಯೆಂದರೆ ಜಲೀಲ್ ಅಖ್ತರ್ ಅವರ ಪ್ರಕರಣ. ಇವರ ಹೆಸರು ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ನಂತರ ತಯಾರಾದ 2002 ಮತ್ತು 2016ರ ಎರಡೂ ಮತದಾರರ ಪಟ್ಟಿಗಳಲ್ಲಿ ದಾಖಲಾಗಿದೆ.
ಆದರೆ, ‘altnews.in’ ವರದಿಯಲ್ಲಿ ದಾಖಲಿಸಿರುವಂತೆ, ಜಲೀಲ್ ಅವರ ಕುಟುಂಬದ ಕಣ್ಣೀರಿನ ಮೊರೆಗೆ ಸ್ಥಳೀಯ ಪೊಲೀಸರಿಂದ ಸಿಕ್ಕ ಉತ್ತರ ಮಾತ್ರ ತುಂಬಾ ಒರಟಾಗಿತ್ತು. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ, ಮುಸ್ಲಿಮರನ್ನು ಹೇಗಾದರೂ ಮಾಡಿ ಬಂಧಿಸಿ ಗಡೀಪಾರು ಮಾಡಲೇಬೇಕೆಂಬ ತೀವ್ರ ವ್ಯವಸ್ಥಿತ ಒತ್ತಡವು ಕಾನೂನು ಜಾರಿ ಸಂಸ್ಥೆಗಳ ಮೇಲೆ ಇದೆ.
87 ದಿನಗಳ ಕಾಲ ವಶದಲ್ಲಿದ್ದ 66 ವರ್ಷ ವಯಸ್ಸಿನ ಅಖ್ತರ್ ಅವರಿಗೆ ಹೆಚ್ಚುವರಿ ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಜಾಮೀನು ಮಂಜೂರು ಮಾಡಿದರು. ಇದು “ಅತ್ಯಂತ ದುರದೃಷ್ಟಕರ ಪ್ರಕರಣ” ಎಂದಿರುವ ನ್ಯಾಯಾಲಯ, ಅಖ್ತರ್ ತಾವು ಭಾರತೀಯ ಪ್ರಜೆ ಎಂಬುದನ್ನು ಸಾಬೀತುಪಡಿಸಲು ಎಲ್ಲಾ ಅಧಿಕೃತ ಹಾಗೂ ಕಾನೂನುಬದ್ಧ ದಾಖಲೆಗಳನ್ನು ಹೊಂದಿದ್ದಾರೆ ಎಂದು ಸ್ಪಷ್ಟಪಡಿಸಿದೆ.
ಅಖ್ತರ್ ಕಳೆದುಕೊಂಡ ಆ ಮೂರು ತಿಂಗಳ ಬದುಕನ್ನು ಯಾರು ಮರಳಿ ಕೊಡುತ್ತಾರೆ? ಕನಿಷ್ಠಪಕ್ಷ ತಮ್ಮ ಕುರ್ತಾವನ್ನು ಧರಿಸಲೂ ಅವಕಾಶ ನೀಡದೆ, ಬಂದೂಕು ತೋರಿಸಿ ಪೊಲೀಸರು ಬಲವಂತವಾಗಿ ಕರೆದೊಯ್ದು ಬಾಂಗ್ಲಾದೇಶಕ್ಕೆ ಕಳುಹಿಸಲು ಯತ್ನಿಸಿದ ಆ ದೌರ್ಜನ್ಯಕ್ಕೆ ಯಾರು ಪರಿಹಾರ ನೀಡುತ್ತಾರೆ?
‘altnews.in’ ವರದಿಯನ್ನು ಓದುತ್ತಿದ್ದಾಗ ನನ್ನನ್ನು ಕಾಡಿದ ಮತ್ತೊಂದು ಸಂಗತಿಯೆಂದರೆ, ಅಖ್ತರ್ ಅವರನ್ನು ಬಂದೂಕು ತೋರಿಸಿ ಬಂಧಿಸಲಾಗಿದೆಯೇ ಎಂದು ವರದಿಗಾರರು ಇನ್ಸ್ಪೆಕ್ಟರ್ ಅವರನ್ನು ಕೇಳಿದಾಗ, ಅವರು ಹೀಯಾಳಿಸುತ್ತಾ ನೀಡಿದ ಉತ್ತರ ಹೀಗಿತ್ತು– “66 ವರ್ಷದ ವೃದ್ಧನನ್ನು ಬಂಧಿಸಲು ನಮಗೆ ಲಾಠಿಯೇ ಸಾಕು, ಬಂದೂಕಿನ ಅವಶ್ಯಕತೆಯಿಲ್ಲ. ಇನ್ನು ಕುಟುಂಬದವರ ಆರೋಪವೇ? ನಾವು ಜಲೀಲ್ ಅಖ್ತರ್ ಅವರನ್ನು ವಶಕ್ಕೆ ತೆಗೆದುಕೊಳ್ಳಲು ಬೊಫೋರ್ಸ್ ಫಿರಂಗಿಯನ್ನೇ ಬಳಸಿದ್ದೇವೆ ಎಂದು ಅವರಿಗೆ ಹೇಳಿ.”
ಭಾರತದಲ್ಲಿ ಪೊಲೀಸ್ ದೌರ್ಜನ್ಯ ಹೊಸದೇನಲ್ಲ ಬಿಡಿ. ಈಗ ಅವರನ್ನು ಯಾವುದೇ ಕಾನೂನು ಆಧಾರವಿಲ್ಲದೆ ಬಂಧಿಸಲಾಗಿದೆ ಎಂಬುದು ಬಿಡುಗಡೆಯ ಬಳಿಕ ಸಾಬೀತಾಗಿರುವಾಗ, ಆ ಅಧಿಕಾರಿಯ ಅಹಂಕಾರದ ವ್ಯಂಗ್ಯವು ಮತ್ತಷ್ಟು ಬೇಸರ ತರಿಸುತ್ತದೆ.
ಬೆಟ್ವಾ ಶರ್ಮಾ ಅವರು ‘Article 14’ನ ಮ್ಯಾನೇಜಿಂಗ್ ಎಡಿಟರ್ ಆಗಿದ್ದಾರೆ.
ಸೌಜನ್ಯ: article-14.com






