ಟೀಕಾಕಾರರು 23 ವರ್ಷಗಳಿಂದ ನನ್ನನ್ನು ಮುಗಿಸಲು ಪ್ರಯತ್ನಿಸುತ್ತಿದ್ದಾರೆ: ಕ್ರಿಸ್ಟಿಯಾನೊ ರೊನಾಲ್ಡೊ

ಕ್ರಿಸ್ಟಿಯಾನೊ ರೊನಾಲ್ಡೊ | Photo Credit : X \ @FIFAWorldCup
41 ವರ್ಷ ಪ್ರಾಯದ ಪೋರ್ಚುಗಲ್ ಸೂಪರ್ ಸ್ಟಾರ್ ಡಲ್ಲಾಸ್ನಲ್ಲಿ ಸೋಮವಾರ ನಡೆಯಲಿರುವ ಪಂದ್ಯದಲ್ಲಿ ಸ್ಪೇನ್ ವಿರುದ್ಧ 16ನೇ ಘಟ್ಟದ ಹಣಾಹಣಿಯಲ್ಲಿ ಭಾಗವಹಿಸಲಿದ್ದಾರೆ.
ರವಿವಾರ ನಡೆದ ವಿಶ್ವಕಪ್ ನ ಎಕ್ಸ್ಕ್ಲೂಸಿವ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಕ್ರಿಸ್ಟಿಯಾನೊ ರೊನಾಲ್ಡೊ ಅವರು ತಾವು ಒಂದು ಕಾಲದಲ್ಲಿ ಇದ್ದ ಪ್ರತಿಭಾವಂತ ಆಟಗಾರನಲ್ಲ ಎಂದು ಒಪ್ಪಿಕೊಂಡರು. ಆದರೆ, “ಕಳೆದ 23 ವರ್ಷಗಳಿಂದ ವಿಮರ್ಶಕರು ನನ್ನನ್ನು ಮುಗಿಸಲು ಪ್ರಯತ್ನಿಸುತ್ತಿದ್ದಾರೆ” ಎಂದು ವಿಮರ್ಶಕರ ವಿರುದ್ಧ ಕಿಡಿ ಕಾರಿದರು.
41 ವರ್ಷ ಪ್ರಾಯದ ಪೋರ್ಚುಗಲ್ ಸೂಪರ್ ಸ್ಟಾರ್ ತಮ್ಮ ಕೊನೆ ವಿಶ್ವಕಪ್ ನಲ್ಲಿ ಡಲ್ಲಾಸ್ ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಸ್ಪೇನ್ ವಿರುದ್ಧ 16ನೇ ಘಟ್ಟದ ಹಣಾಹಣಿಯಲ್ಲಿ ಭಾಗವಹಿಸಲಿದ್ದಾರೆ. ರೊನಾಲ್ಡೊ ಇದಕ್ಕೆ ಮೊದಲು ಮ್ಯಾಂಚೆಸ್ಟರ್ ಯುನೈಟೆಡ್, ಜುವೆಂಟಸ್ ಮತ್ತು ರಿಯಲ್ ಮ್ಯಾಡ್ರಿಡ್ ಮೊದಲಾದ ಕ್ಲಬ್ಗಳಿಗೆ ಆಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಅವರು ಉತ್ಸಾಹಭರಿತರಾಗಿ, ಹರ್ಷಚಿತ್ತದಿಂದ ಮತ್ತು ಭಾವನಾತ್ಮಕವಾಗಿದ್ದರು. ಆದರೆ “ಅಂತರರಾಷ್ಟ್ರೀಯ ಫುಟ್ಬಾಲ್ ವೃತ್ತಿಜೀವನಕ್ಕೆ ಯಾವಾಗ ನಿವೃತ್ತಿ ಪ್ರಕಟಿಸುತ್ತೀರಿ” ಎನ್ನುವ ಪ್ರಶ್ನೆಗೆ ಉತ್ತರ ಹೇಳಲು ಅವರು ನಿರಾಕರಿಸಿದ್ದಾರೆ.
🗣️ "It's about passion", Cristiano Ronaldo. 🇵🇹#FIFAWorldCup pic.twitter.com/qSvCxBLMEN
— FIFA World Cup (@FIFAWorldCup) July 5, 2026
ಇತ್ತೀಚೆಗಿನ ವರ್ಷಗಳಲ್ಲಿ ತಾವು ಎದುರಿಸುತ್ತಿರುವ ಟೀಕೆಗಳಿಗೆ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಮುಂದೆ ಏನಾಗಲಿದೆ ಎನ್ನುವ ಪ್ರಶ್ನೆಗೂ ಸ್ಪಷ್ಟವಾಗಿ ಉತ್ತರಿಸಿಲ್ಲ. “ನಾನು ಮೊದಲಿನ ಆಟಗಾರನಲ್ಲ. ಹಾಗೆಂದು ಬಹಳ ಕೆಟ್ಟ ಪ್ರದರ್ಶನವನ್ನೂ ನೀಡುತ್ತಿಲ್ಲ” ಎಂದು ಪೋರ್ಚುಗಲ್ ತಂಡದ ನಾಯಕ ಅಭಿಪ್ರಾಯಪಟ್ಟರು.
ಅವರು ಉಜ್ಬೇಕಿಸ್ತಾನ್ ವಿರುದ್ಧದ ಫೋರ್ಚುಗಲ್ ನ 5-0 ಗೆಲುವಿನಲ್ಲಿ 2 ಗೋಲುಗಳು ಮತ್ತು ಕ್ರೊವೇಶಿಯ ವಿರುದ್ಧ ಪಂದ್ಯದಲ್ಲಿ 2-1ರ ಗೆಲುವಿನಲ್ಲಿ ಒಂದು ಪೆನಾಲ್ಟಿ ಗೋಲು ಗಳಿಸಿದ್ದಾರೆ.
ತನ್ನ ಭವಿಷ್ಯದ ಬಗ್ಗೆ ಮತ್ತು ತನ್ನ ಮೇಲೆ ವಿಮರ್ಶಕರ ಕಠಿಣ ಗಮನದ ಬಗ್ಗೆ ಕೇಳಲು ಉತ್ಸುಕರಾದ ಪತ್ರಕರ್ತರಿಗೆ ನಗುತ್ತಾ ಉತ್ತರಿಸಿದರು. “ನಾನು 18 ವರ್ಷ ವಯಸ್ಸಿನಿಂದಲೂ ಹೀಗೆಯೇ ಇದ್ದೇನೆ. ಅದು ಬದಲಾಗುವುದಿಲ್ಲ. ನಮ್ಮ ಗುರಿಗಳನ್ನು ಸಾಧಿಸಲು ನಾನು ಯಾವಾಗಲೂ ದೇಹ ಮತ್ತು ಆತ್ಮವನ್ನು ಪಣಕ್ಕಿಟ್ಟು ಆಡುತ್ತೇನೆ. ಆಡುವಾಗ ಅಥವಾ ಆಡದೆ ಇರುವಾಗಲೂ ನನಗೆ ಯಾವಾಗಲೂ ಪ್ರಮುಖ ಪಾತ್ರ ನಿರ್ವಹಿಸುವ ಅಗತ್ಯವಿರುತ್ತದೆ. ನೀವು ಸದಾ ಅದೇ ಪ್ರಶ್ನೆ ಕೇಳುತ್ತೀರಿ. ಆದರೆ ನಾನು ಅದರ ಬಗ್ಗೆ ಗಮನ ಸೆಳೆಯಲು ಬಯಸುವುದಿಲ್ಲ. ಏಕೆಂದರೆ ಅದು ಅಷ್ಟು ಮುಖ್ಯವಲ್ಲ” ಎಂದು ಉತ್ತರಿಸಿದರು.
🇵🇹😳 El cruce entre Cristiano Ronaldo y un periodista portugués:
— Ataque Futbolero (@AtaqueFutbolero) July 5, 2026
CR7: "Te reto a hacer una buena pregunta, ya que no te gusto."
Periodista: "¿Qué es lo más difícil en un Mundial con 41 años?".
CR7: "HABLAR CON USTEDES, que no me quieren". ⚠️ pic.twitter.com/dcxMBeSqzp
ರೊನಾಲ್ಡೊ ಅವರು ಮೈದಾನದ ಒಳಗೆ ಮತ್ತು ಹೊರಗೆ ಬಹಳ ಆನಂದಿಸಿದ ವಿಶ್ವಕಪ್ ಇದಾಗಿದೆ ಎಂದು “ಭಾವನೆಗಳ” ಕುರಿತ ಪ್ರಶ್ನೆಗೆ ಉತ್ತರಿಸಿದರು. ತಮ್ಮ ಅಂತಾರಾಷ್ಟ್ರೀಯ ಭವಿಷ್ಯದ ಬಗ್ಗೆ ಪ್ರಶ್ನೆಯನ್ನು ಕೇಳಿದಾಗ, “ನೀವು ಕಳೆದ 23 ವರ್ಷಗಳಿಂದ ನನ್ನನ್ನು ಮುಗಿಸಲು ಪ್ರಯತ್ನಿಸುತ್ತಿದ್ದೀರಿ. ಅದರಿಂದ ಸಮಯ ವ್ಯರ್ಥ. ಹಾಗಿದ್ದರೂ ನೀವು ಪದೇಪದೆ ಪ್ರಯತ್ನಿಸುತ್ತಲೇ ಇರುತ್ತೀರಿ” ಎಂದು ಹೇಳಿದರು.
“ನಾನು ಇಂತಹ ಪ್ರಶ್ನೆಗಳಿಗೆ ಒಗ್ಗಿಕೊಂಡಿದ್ದೇನೆ. ನಾವು ವಿಶ್ವಕಪ್ ಗೆದ್ದರೆ ಹೆಚ್ಚಿನ ಕ್ರಿಸ್ಟಿಯಾನೊ ರೊನಾಲ್ಡೊ ಆಗುವುದಿಲ್ಲ ಅಥವಾ ಕಡಿಮೆ ಆಗುವುದಿಲ್ಲ” ಎಂದು ಹೇಳಿದರು.
“ವಿಷಯಗಳು ಎಷ್ಟು ಸಾಪೇಕ್ಷವಾಗಿರಬಹುದು ಎಂಬುದನ್ನು ಕಾಣಲು ವಯಸ್ಸು ನಿಮಗೆ ಪ್ರಬುದ್ಧತೆ ಮತ್ತು ಅನುಭವ ನೀಡುತ್ತದೆ. ನನಗೆ 40 ವರ್ಷ ತುಂಬಿದ ನಂತರ ಆಗುತ್ತಿರುವ ಟೀಕಾಕಾರರ ದಾಳಿಗಳಿಗೆ ಧನ್ಯವಾದ ಹೇಳುತ್ತೇನೆ. ಟೀಕೆ ಎಂದರೆ ನಾನು ಬೆಳೆಯುತ್ತಿದ್ದೇನೆ ಎಂದು ಅರ್ಥ. ಆದ್ದರಿಂದ ಟೀಕಿಸುತ್ತಿರುವುದಕ್ಕೆ ಧನ್ಯವಾದಗಳು” ಎಂದು ಹೇಳಿದರು.
ವರದಿಗಾರರೊಬ್ಬರನ್ನು ತೋರಿಸುತ್ತಾ, “ಅವರು ನನ್ನನ್ನು ಇಷ್ಟಪಡುವುದಿಲ್ಲ ಎಂದು ನನಗೆ ತಿಳಿದಿದೆ” ಎಂದು ಪ್ರಶ್ನೆ ಕೇಳಲು ಸವಾಲು ಹಾಕಿದರು. “ನಿಮ್ಮಲ್ಲಿ ಕೆಲವರು ನಮ್ಮನ್ನು ಇಷ್ಟಪಡದವರು ಇದ್ದಾರೆ. ಅವರ ಮುಖಗಳು ನನಗೆ ಚೆನ್ನಾಗಿ ನೆನಪಿದೆ. ಕೇಳಿ, ನಾನು ಪ್ರಾಮಾಣಿಕವಾಗಿ ಹೇಳುತ್ತೇನೆ” ಎಂದು ಹೇಳಿದರು.
ಸ್ಪೇನ್ನಲ್ಲಿ ರಿಯಲ್ ಮ್ಯಾಡ್ರಿಡ್ಗೆ ಆಡಿದ ನಂತರ ಆ ದೇಶವನ್ನು ಅವರು ತಮ್ಮ ಎರಡನೇ ಮನೆ ಎಂದು ಕರೆದಿದ್ದರು. ಇದೀಗ ಅದೇ ತಂಡದ ವಿರುದ್ಧ ಆಡುವ ಬಗ್ಗೆ, “ಇದು ತುಂಬಾ ಕಠಿಣ ಹೋರಾಟವಾಗಲಿದೆ. ನಮ್ಮಲ್ಲಿ ನಂಬಿಕೆ ಇರಬೇಕು ಮತ್ತು ನಾವು ಓಡಬೇಕು ಮತ್ತು ಧೈರ್ಯಶಾಲಿಯಾಗಿರಬೇಕು” ಎಂದು ಹೇಳಿದರು.






