ವಿದೇಶಿ ಪದವಿಗೆ ಟೀಕೆ: ಇನ್ಸ್ಟಾಗ್ರಾಂ ಖಾತೆ ನಿಷ್ಕ್ರಿಯಗೊಳಿಸಿದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಪುತ್ರಿ!

ಧರ್ಮೇಂದ್ರ ಪ್ರಧಾನ್ , ನೈಮಿಷಾ ಪ್ರಧಾನ್ |Photo Credit : indiatoday.in
ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ಎದುರಾದ ನಂತರ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ದಾರೆ ಎಂದು ವರದಿಯಾಗಿದೆ.
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮಗಳು ನಡೆದಿವೆ ಮತ್ತು ಸಚಿವರ ರಾಜೀನಾಮೆಗೆ ಬೇಡಿಕೆಗಳ ಕುರಿತು ನಡೆಯುತ್ತಿರುವ ಪ್ರತಿಭಟನೆಗಳ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ಎದುರಾದ ನಂತರ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ದಾರೆ. ರಾಜಕೀಯ ಚರ್ಚೆಯಿಂದ ಸಚಿವರ ಕುಟುಂಬದ ಸದಸ್ಯರ ವಿದೇಶಿ ಪದವಿಗಳ ಬಗ್ಗೆ ಟೀಕೆಗಳು ಹೆಚ್ಚಾಗಿ ಹರಡುತ್ತಿದ್ದಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.
ಮಾಧ್ಯಮ ವರದಿಗಳ ಪ್ರಕಾರ, ನೈಮಿಷಾ ಅವರ ತಂದೆ ಶಿಕ್ಷಣ ಸಚಿವರಾಗಿದ್ದೂ ಅವರ ಮಗಳು ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯಲು ನಿರ್ಧರಿಸಿರುವ ಬಗ್ಗೆ ಟೀಕೆ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣಗಳ ಅವರ ಫೋಸ್ಟ್ಗಳ ಕಾಮೆಂಟ್ ವಿಭಾಗಗಳಲ್ಲಿ ಜನರು ಟೀಕೆಗಳ ಸುರಿಮಳೆಗೈದಿದ್ದಾರೆ. ಹೀಗಾಗಿ ಅವರು ಸಾಮಾಜಿಕ ಜಾಲತಾಣಗಳ ತಮ್ಮ ಎಲ್ಲಾ ಖಾತೆಗಳನ್ನೂ ತೆಗೆದು ಹಾಕಿದ್ದಾರೆ ಎನ್ನಲಾಗಿದೆ.
ಕೆಲವು ಬಳಕೆದಾರರು ಟಫ್ಟ್ಸ್ ಯುನಿವರ್ಸಿಟಿಯ ಸಾಮಾಜಿಕ ಜಾಲತಾಣಗಳಲ್ಲೂ ಪೋಸ್ಟ್ ಮಾಡಿ ಆಕೆಯ ವಿದೇಶಿ ಶಿಕ್ಷಣದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ಆಕೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿನಂತಿಸಿದ್ದಾರೆ. ʼಸಂಸತ್ ಚಲೋʼನಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳ ವಿರುದ್ಧ ಪೊಲೀಸ್ ಕ್ರಮದ ನಂತರ ಟೀಕೆ ತೀವ್ರಗೊಂಡಿದೆ. ಪ್ರತಿಭಟನಾಕಾರರು ಪರೀಕ್ಷಾ ಪತ್ರಿಕೆ ಸೋರಿಕೆ ಮತ್ತು ಶಿಕ್ಷಣ ವ್ಯವಸ್ಥೆಯಲ್ಲಿನ ಸುಧಾರಣೆಗಳ ಬಗ್ಗೆ ಹೊಣೆಗಾರಿಕೆಗೆ ಒತ್ತಾಯಿಸುತ್ತಿದ್ದಾರೆ.
ನೈಮಿಷಾ ಪ್ರಧಾನ್ 2023ರಲ್ಲಿ ಅಮೆರಿಕದ ಮಸ್ಸಾಚುಸೆಟ್ಸ್ ಮೆಡ್ಫೋರ್ಡ್ನಲ್ಲಿರುವ ಟಫ್ಟ್ಸ್ ವಿಶ್ವವಿದ್ಯಾಲಯದ ಫ್ಲೆಚರ್ ಕಾಲೇಜಿನಿಂದ ಕಾನೂನು ಸ್ನಾತಕೋತ್ತರ ಪದವಿ ಗಳಿಸಿದ್ದರು. ಪದವಿ ನಂತರ ಅಮೆರಿಕ-ಭಾರತ ಸ್ಟ್ರಾಟೆಜೆಕ್ ಪಾರ್ಟರ್ನರ್ಶಿಪ್ ಫೋರಂನಲ್ಲಿ ಸೀನಿಯರ್ ಅಸೋಸಿಯೇಟ್ ಆಗಿದ್ದಾರೆ ಎಂದು ವರದಿಯಾಗಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕ ಪೋಸ್ಟ್ ಗಳು ಶಿಕ್ಷಣ ಸಚಿವರ ಪುತ್ರಿ ವಿದೇಶದಲ್ಲಿ ಉನ್ನತ ಶಿಕ್ಷಣ ಏಕೆ ಪಡೆದಿದ್ದಾರೆ ಎಂದು ಪ್ರಶ್ನಿಸಿವೆ. ಕೆಲವರು ಭಾರತದ ಉನ್ನತ ಶಿಕ್ಷಣದ ವ್ಯವಸ್ಥೆಯಲ್ಲಿನ ವಿಶ್ವಾಸದ ಕೊರತೆಯನ್ನು ಇದು ಪ್ರತಿಬಿಂಬಿಸುತ್ತದೆ ಎಂದು ವಾದಿಸಿದ್ದಾರೆ. ಅದೇ ಸಂದರ್ಭದಲ್ಲಿ ಸಂಸದರ ಕುಟುಂಬದವರನ್ನು ಗುರಿಯಾಗಿಸುತ್ತಿರುವುದನ್ನು ಟೀಕಿಸಿದ್ದಾರೆ. ರಾಜಕೀಯ ಟೀಕೆಗಳು ಸಂಬಂಧಿಕರಿಗಿಂತ ಹೆಚ್ಚು ಚುನಾಯಿತ ಪ್ರತಿನಿಧಿಗಳು ಮತ್ತು ನೀತಿ ನಿರೂಪಕರ ಮೇಲಿರಬೇಕು ಎಂದು ಕೆಲವರು ವಾದಿಸಿದ್ದಾರೆ.






