ರೈತರ ಖಾತೆಗಳಿಗೆ ಇನ್ನೂ ಜಮೆಯಾಗದ ಬೆಳೆ ವಿಮೆ

ಸಾಂದರ್ಭಿಕ ಚಿತ್ರ | Photo Credit : PTI
ಬೆಂಗಳೂರು : ರಾಜ್ಯಾದ್ಯಂತ ತೀವ್ರ ಬರಗಾಲ ಎದುರಾಗಿರುವ ನಡುವೆಯೇ 2025-26ನೇ ಮುಂಗಾರು ಹಂಗಾಮಿನ ಮಳೆ ಆಶ್ರಿತ ಮೆಕ್ಕೆ ಜೋಳ, ಕೆಂಪು ಮೆಣಿಸಿನ ಕಾಯಿ ಸೇರಿದಂತೆ ಇನ್ನಿತರ ಬೆಳೆಗಳಿಗೆ ಸಂಬಂಧಿಸಿದಂತೆ ರೈತರ ಖಾತೆಗಳಿಗೆ ಇನ್ನೂ ಬೆಳೆ ವಿಮೆ ಜಮೆ ಆಗಿಲ್ಲ.
ಈ ಕುರಿತು ರಾಜ್ಯಾದ್ಯಂತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ದೂರು ಸಲ್ಲಿಕೆಯಾಗಿವೆ. ಈ ದೂರುಗಳಿಗೆ ಸಂಬಂಧಿಸಿದಂತೆ ಕೃಷಿ ಆಯುಕ್ತಾಲಯದ ಆಯುಕ್ತರಿಗೆ ಪತ್ರ ಬರೆದು ಕೈ ತೊಳೆದುಕೊಂಡಿರುವುದು ಇದೀಗ ಬಹಿರಂಗವಾಗಿದೆ.
ಗದಗ್ ಜಿಲ್ಲೆಯ ಮುಂಡರಗಿ ತಾಲೂಕಿನ ಹಲವು ಗ್ರಾಮಗಳಲ್ಲಿನ ರೈತರ ಖಾತೆಗಳಿಗೆ ಬೆಳೆ ವಿಮೆ ಜಮೆಯಾಗಿಲ್ಲ ಎಂದು ರೈತರು 2026ರ ಸೆ.1ರಂದೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ದೂರು ಸಲ್ಲಿಸಿದ್ದರು. ಈ ದೂರನ್ನಾಧರಿಸಿ ಕ್ರಮ ಕೈಗೊಳ್ಳಬೇಕು ಎಂದು ಕೃಷಿ ಇಲಾಖೆಯ ಸರಕಾರದ ಕಾರ್ಯದರ್ಶಿಯು 22 ದಿನಗಳ ನಂತರ ಕೃಷಿ ಆಯುಕ್ತಾಲಯದ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ಈ ಪತ್ರದ ಪ್ರತಿಯು "the-file.in"ಗೆ ಲಭ್ಯವಾಗಿದೆ. ಗದಗ ಜಿಲ್ಲೆಯ ಮುಂಡರಗಿಯ ಹಳ್ಳಿಕೇರಿ ಪಂಚಾಯತ್ ವ್ಯಾಪ್ತಿಯ ಹಳ್ಳಿಕೇರಿ, ಹಳ್ಳಿಗುಡಿ, ವೆಂಕಟಾಪೂರದ ಗ್ರಾಮದ ರೈತರಿಗೆ 2025-26ನೇ ಸಾಲಿನ ಮುಂಗಾರು ಹಂಗಾಮಿನ ಮಳೆ ಆಶ್ರಿತ ಮೆಕ್ಕೆಜೋಳ (ಶೇ.59ರಷ್ಟು) ಕೆಂಪು ಮೆಣಿಸಿನ ಕಾಯಿ (ಶೇ.53) ಬೆಳೆದ ರೈತರು ಬೆಳೆ ವಿಮೆಯನ್ನು ಕ್ಲೈಮು ಮಾಡಿದ್ದರು. ಬೆಳೆಗಳ ವಿಮಾ ಕಂಪೆನಿಯಿಂದ ವಿಮೆಯ ಹಣ ಬಂದಿದೆ. ಆದರೂ ಹಳ್ಳಿಕೇರಿ ಗ್ರಾಮ ಪಂಚಾಯತ್ ರೈತರ ಖಾತೆಗಳಿಗೆ ಬೆಳೆ ವಿಮೆ ಇನ್ನೂ ಜಮೆಯಾಗಿಲ್ಲ ಎಂದು ರೈತರು 2026ರ ಸೆ.1ರಂದೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದರು.
ಬೆಳೆ ವಿಮೆ ಕಂಪೆನಿಗಳಿಂದ ಹಣ ಬಂದಿದ್ದರೂ ಸಹ ರೈತರ ಖಾತೆಗಳಿಗೆ ಹಣವೇಕೆ ಜಮೆಯಾಗಿಲ್ಲ ಎಂದು ಪ್ರಶ್ನಿಸಿರುವ ರೈತರು ಇದಕ್ಕೆ ಏನು ಕಾರಣ ಎಂಬುದು ತಿಳಿದು ಬಂದಿಲ್ಲ. ಹೀಗಾಗಿ ಈ ಬಗ್ಗೆ ಕ್ರಮ ವಹಿಸಬೇಕು ಎಂದು ಪತ್ರದಲ್ಲಿ ರೈತರು ಕೋರಿರುವುದು ತಿಳಿದು ಬಂದಿದೆ.
‘2025-26ನೇ ಸಾಲಿನ ಹಿಂಗಾರು ಹಂಗಾಮಿನ ವಿಮೆಯು ಕೂಡಾ ನಮ್ಮ ಹಳ್ಳಿಕೇರಿ ಖುಷ್ಕಿ ಬೇಸಾಯಕ್ಕೆ ಸೇರಿದೆ. ನೀರಾವರಿ ಪ್ರದೇಶದಲ್ಲಿ ಕಡಲೆ ಬೆಳೆಯು ಶೇ. 61ರಷ್ಟು ನಷ್ಟವಾಗಿದೆ. ಇದೇ ಪ್ರಮಾಣದಲ್ಲಿ ವಿಮೆ ಹಣಕ್ಕಾಗಿ ಕ್ಲೈಮ್ ಮಾಡಲಾಗಿದೆ. ಈಗಾಗಲೇ ತೀವ್ರ ಬರಗಾಲದಿಂದ ತತ್ತರಿಸಿರುವ ನಮಗೆ ವಿಮಾ ಕಂಪೆನಿಯಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ,’ ಎಂದು ರೈತರು ತಮ್ಮ ಅಳಲನ್ನು ತೋಡಿಕೊಂಡಿರುವುದು ಗೊತ್ತಾಗಿದೆ.
2026ರ ಸೆ.1ರಂದು ರೈತರು ಸಹಿ ಮಾಡಿದ್ದ ಪತ್ರವು ಮುಖ್ಯಮಂತ್ರಿ ಕಚೇರಿಯು ಸೆ. 18ರಂದು ನೋಂದಾಯಿಸಿಕೊಂಡಿದೆ. ಈ ಪತ್ರವನ್ನು ಮುಖ್ಯಮಂತ್ರಿ ಕಚೇರಿಯು ಕೃಷಿ ಇಲಾಖೆಯ ಸರಕಾರದ ಕಾರ್ಯದರ್ಶಿಗೆ ಸೂಕ್ತ ಕ್ರಮಕ್ಕಾಗಿ ವರ್ಗಾಯಿಸಿತ್ತು. ಕೃಷಿ ಇಲಾಖೆಯ ಸರಕಾರದ ಕಾರ್ಯದರ್ಶಿಯು 2026ರ ಸೆ.23ರಂದು ಕೃಷಿ ಆಯುಕ್ತಾಲಯದ ಆಯುಕ್ತರಿಗೆ ಪತ್ರ ಬರೆದು ಕ್ರಮ ಕೈಗೊಳ್ಳಲು ಸೂಚಿಸಿರುವುದು ತಿಳಿದು ಬಂದಿದೆ.
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ 2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕಲಬುರಗಿ ಜಿಲ್ಲೆಯ ಅಳಂದ ತಾಲೂಕಿನಲ್ಲಿಯೂ 77,866 ಪ್ರಕರಣಗಳು ನೋಂದಣಿಯಾಗಿದ್ದವು. ಈ ತಾಲೂಕಿನ ಕೃಷಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ 8 ಗ್ರಾಮ ಪಂಚಾಯತ್ಗಳ ವ್ಯಾಪ್ತಿಯಲ್ಲಿ ರೈತರಿಗೆ ಅತ್ಯಂತ ಕಡಿಮೆ ಬೆಳೆ ವಿಮೆ ಪರಿಹಾರ ಪಾವತಿಯಾಗಿತ್ತು ಎಂದು ಖುದ್ದು ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ ಅವರು 2026ರ ಆಗಸ್ಟ್ 21ರಂದು ವಿಧಾನಸಭೆಗೆ ಚುಕ್ಕೆ ಗುರುತಿಲ್ಲದ ಪ್ರಶ್ನೆಯಲ್ಲಿ ಗಮನ ಸೆಳೆದಿದ್ದರು.
ಇದಕ್ಕೆ ಉತ್ತರಿಸಿದ್ದ ಸಚಿವ ಪಿ.ಎಂ.ನರೇಂದ್ರಸ್ವಾಮಿ ಅವರು ಈ ತಾಲೂಕಿನಲ್ಲಿ ಮಧ್ಯಂತರ ಬೆಳೆ ವಿಮೆ ಪರಿಹಾರ ಅಡಿಯಲ್ಲಿ 60.5 ಕೋಟಿ ರೂ., ಸ್ಥಳ ನಿರ್ದಿಷ್ಟ ಪ್ರಕೃತಿ ವಿಕೋಪ ಅಡಿಯಲ್ಲಿ 0.88 ಕೋಟಿ ರೂ., ಬೆಲೆ ಕಟಾವು ಪ್ರಯೋಗದ ಅಂತಿಮ ಇಳುವರಿ ಆಧಾರದ ಮೇಲೆ 121.07 ಕೊಟಿ ರೂ.ಸೇರಿ ಒಟ್ಟು 182.60 ಕೋಟಿ ರೂ. ಬೆಳೆ ವಿಮೆ ಪರಿಹಾರ ಮಂಜೂರಾಗಿದೆ ಎಂದು ಸದನಕ್ಕೆ ವಿವರಿಸಿದ್ದರು.
ಆಧಾರ್ ಜೋಡಣೆಯಲ್ಲಿನ ಲೋಪವೂ ಸೇರಿದಂತೆ ಇನ್ನಿತರ ತಾಂತ್ರಿಕ ದೋಷಗಳಿಂದಾಗಿ ಕಳೆದ 3 ವರ್ಷಗಳಿಂದಲೂ ರಾಜ್ಯದ 10,053 ರೈತರಿಗೆ 9.68 ಕೋಟಿ ರೂ. ಮೊತ್ತದ ಬೆಳೆ ವಿಮೆ ಪರಿಹಾರದ ಮೊತ್ತವೇ ಜಮೆಯಾಗಿಲ್ಲ. ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ರೈತರಿಗೆ ಹಿಂದಿನ ಸಾಲುಗಳಲ್ಲಿ ಬಾಕಿ ಇರುವ ಬೆಳೆ ವಿಮೆ ಪರಿಹಾರ ಮೊತ್ತವನ್ನು ಇತ್ಯರ್ಥಪಡಿಸುವ ನಿಟ್ಟಿನಲ್ಲಿ ವೈಫಲ್ಯಗಳದ್ದೇ ಮೇಲುಗೈಯಾಗಿತ್ತು.






