ಭಾರತೀಯ ಕಾಗೆಗಳು ವಿಶ್ವದ ಅತಿ ಚತುರ ಪಕ್ಷಿಗಳು ಎನ್ನುವುದು ನಿಮಗೆ ಗೊತ್ತೆ?

ಸಾಂದರ್ಭಿಕ ಚಿತ್ರ | Photo Credit : freepik.com
ದಟ್ಟಾರಣ್ಯದಿಂದ ತೊಡಗಿ ಭಾರತದ ಜನದಟ್ಟಣೆಯ ನಗರ ಪ್ರದೇಶಗಳವರೆಗೆ ಕಾಗೆಗಳು ಎಲ್ಲೆಡೆ ನಿರ್ಭಿಡೆಯಿಂದ ನೆಲಸಿವೆ. ಮಾನವರ ವಸತಿ ನೆಲೆಗಳಲ್ಲಿ ಜೊತೆಗೂಡಿ ಬದುಕುವ ರೀತಿಯಿಂದಲೇ ಅವುಗಳ ಅರಿವಿನ ಸಾಮರ್ಥ್ಯವನ್ನು ಅರ್ಥ ಮಾಡಿಕೊಳ್ಳಬಹುದು.
ಕಾ ಕಾ ಎಂದು ಕರ್ಕಶ ಸದ್ದು ಮಾಡಿ ನಗರವಿಡೀ ಹಾರಾಡುವ ಪಕ್ಷಿ ಕಾಗೆ ಅತಿ ಬುದ್ಧಿವಂತ ಪಕ್ಷಿಗಳಲ್ಲಿ ಒಂದು ಎನ್ನುವುದು ನಿಮಗೆ ಗೊತ್ತೆ? ಭಾರತೀಯ ಕಾಗೆಗಳು ಭೂಗ್ರಹದಲ್ಲಿರುವ ಅತಿ ಬುದ್ಧಿವಂತ ಪಕ್ಷಿ ಪ್ರಬೇಧಗಳೆಂದು ಮನ್ನಣೆಪಡೆದಿದೆ. ಸಮಸ್ಯೆ ಪರಿಹರಿಸುವ ಚತುರ ಬುದ್ಧಿ, ಪ್ರಬಲ ನೆನಪಿನ ಶಕ್ತಿ ಮತ್ತು ಹೊಂದಿಕೊಳ್ಳುವ ಗುಣಕ್ಕೆ ಕಾಗೆಗಳು ಹೆಸರುವಾಸಿ.
ಮಧ್ಯಪ್ರದೇಶದ ಜಬಲ್ಪುರದ ಎನ್ಡಿವಿಎಸ್ಯುನ ಪಶುಸಂಗೋಪನಾ ವೈದ್ಯ ವಿಭಾಗದ ಪ್ರೊಫೆಸರ್ ಮತ್ತು ಮುಖ್ಯಸ್ಥರಾಗಿರುವ ಡಾ. ದೇವೇಂದ್ರ ಕುಮಾರ್ ಗುಪ್ತಾ ಪ್ರಕಾರ, ಕಾಗೆಗಳು ಕೆಲವೊಂದು ಸಸ್ತನಿಗಳಿಗೆ ಸ್ಪರ್ಧಿಯಾಗುವಂತಹ ಅರಿವಿನ ಸಾಮರ್ಥ್ಯವನ್ನು ಹೊಂದಿವೆ. ನೈಸರ್ಗಿಕ ಜಗತ್ತಿನಲ್ಲಿ ಚತುರ ಬುದ್ಧಿಗೆ ಅತ್ಯಂತ ಆಕರ್ಷಕ ಉದಾಹರಣೆ ಕಾಗೆ.
ಕಾಗೆಗಳು ಅತಿ ಚತುರ ಬುದ್ಧಿ ಹೊಂದಿರಲು ಕಾರಣವೇನು?:
ಅತ್ಯಾಧುನಿಕ ರೀತಿಯಲ್ಲಿ ಸಮಸ್ಯೆ ಪರಿಹರಿಸುವ ಚತುರ ಬುದ್ಧಿ, ಪ್ರಬಲ ನೆನಪಿನ ಶಕ್ತಿ ಮತ್ತು ಹೊಂದಿಕೊಳ್ಳುವ ಗುಣಕ್ಕೆ ಕಾಗೆಗಳು ಹೆಸರುವಾಸಿ. ಅಂಟಾರ್ಟಿಕ ಹೊರತುಪಡಿಸಿ ಪ್ರತಿ ಖಂಡದಲ್ಲೂ ಸಿಗುವ ಪಕ್ಷಿ ಕಾಗೆ. ಹೀಗಾಗಿ ವಿವಿಧ ಪರಿಸರಗಳಿಗೆ ಒಗ್ಗಿ ಬದುಕುವ ಛಾತಿ ಅವುಗಳಲ್ಲಿವೆ. ದಟ್ಟಾರಣ್ಯದಿಂದ ತೊಡಗಿ ಭಾರತೀಯ ನಗರ ಪ್ರದೇಶಗಳವೆಗೆ ಎಲ್ಲೆಡೆ ನಿರ್ಭಿಡೆಯಿಂದ ನೆಲಸಿವೆ. “ಮಾನವರ ವಸತಿ ನೆಲೆಗಳಲ್ಲಿ ಜೊತೆಗೂಡಿ ಬದುಕುವ ರೀತಿಯಿಂದಲೇ ಅವುಗಳ ಅರಿವಿನ ಸಾಮರ್ಥ್ಯವನ್ನು ಅರ್ಥ ಮಾಡಿಕೊಳ್ಳಬಹುದು” ಎನ್ನುತ್ತಾರೆ ಡಾ ಗುಪ್ತಾ.
ಸಾಧನಗಳನ್ನು ಬಳಸಿಕೊಳ್ಳುವುದು ಮತ್ತು ತಯಾರಿಸುವುದೇ ಕಾಗೆಗಳ ಬುದ್ಧಿವಂತಿಕೆಯ ಅತ್ಯಂತ ಗಮನಾರ್ಹ ವಿಷಯ. ಕಾಗೆಗಳು ತಲುಪಲು ಕಷ್ಟವಾಗಿರುವ ಸ್ಥಳದಿಂದ ಆಹಾರವನ್ನು ಪಡೆಯಲು ರೆಂಬೆ, ತಂತಿಗಳು ಅಥವಾ ಎಲೆಗಳನ್ನು ಮಾರ್ಪಡಿಸಬಲ್ಲವು. “ಸಾಧನಗಳ ಬಳಕೆ ಅರಿವಿನ ಅತ್ಯಾಧುನಿಕ ಲಕ್ಷಣ ಮತ್ತು ಕಾಗೆಗಳು ಅತ್ಯದ್ಭುತವಾದ ನಿಖರತೆಯಿಂದ ಈ ಸಾಮರ್ಥ್ಯವನ್ನು ಪ್ರದರ್ಶಿಸಬಲ್ಲವು” ಎಂದು ವಿವರಿಸುತ್ತಾರೆ ಡಾ. ಗುಪ್ತಾ.
ಸಂಕೀರ್ಣ ಸಮಸ್ಯೆಯನ್ನು ಹೇಗೆ ಪರಿಹರಿಸಬಲ್ಲವು?:
ಸಹಜ ಪ್ರವೃತ್ತಿ ಅಥವಾ ಸರಳವಾದ ಪ್ರಯತ್ನ ಮತ್ತು ದೋಷವನ್ನು ಮೀರಿ ಸಮಸ್ಯೆ ಪರಿಹಾರದ ಸಾಮರ್ಥ್ಯವನ್ನು ಕಾಗೆಗಳು ಪ್ರದರ್ಶಿಸಿವೆ. ಕಾರಣ ಮತ್ತು ಪರಿಣಾಮದ ಸಂಬಂಧವನ್ನು ಕಾಗೆಗಳು ಅರ್ಥಮಾಡಿಕೊಳ್ಳಬಲ್ಲವು. ಹೀಗಾಗಿ ಯೋಜನೆ ರೂಪಿಸಲು ಸಾಧ್ಯವಾಗುತ್ತದೆ. ಕಾಗೆಗಳ ವರ್ತನೆಯಲ್ಲಿ ಅತಿ ಮುಖ್ಯವಾದ ಅಧ್ಯಯನವೊಂದರಲ್ಲಿ, ಕಾಗೆಗಳು ವಾಹನ ದಟ್ಟನೆಯ ರಸ್ತೆಯ ಮೇಲೆ ಒಡೆಯಲಾಗದ ಕಾಯಿಗಳನ್ನು ಹಾಕಿ ವಾಹನಗಳು ಅದರ ಮೇಲೆ ಹಾದು ಹೋದಾಗ ಅವು ಒಡೆದು ಹೋಗುವುದಕ್ಕೆ ಕಾದು ನಿಂತು ತಿಂದಿರುವ ಉದಾಹರಣೆಯಿದೆ.
ಇಂತಹ ವರ್ತನೆಗಳು ಯೋಜನೆ ರೂಪಿಸುವುದು ಮತ್ತು ಸ್ಮರಣೆಯ ಕೌಶಲ್ಯವನ್ನು ಸೂಚಿಸುತ್ತದೆ. ಅವು ಸಸ್ತನಿ ವರ್ಗದ ಪ್ರಾಣಿಗಳಿಗೆ ಮಾತ್ರ ಇರುವ ಅರಿವಿನ ಚಹರೆಗಳಾಗಿವೆ. ಕಾಗೆಗಳು ಬಹು ಹಂತದ ಒಗಟುಗಳನ್ನು ಪರಿಹರಿಸಬಲ್ಲವು. ಪರಿಹಾರವನ್ನು ನೆನಪಿನಲ್ಲಿಟ್ಟು ಹೊಸ ಪರಿಸ್ಥಿತಿಗಳಿಗೆ ಅವನ್ನು ಒಡ್ಡುವುದು ಕೂಡ ಅರಿವಿನ ಸಾಮರ್ಥ್ಯವಾಗಿದೆ.
ಭಾರತೀಯ ಕಾಗೆಗಳು ಹೆಚ್ಚು ಚತುರ?
ಭಾರತೀಯ ಕಾಗೆಗಳು, ಮುಖ್ಯವಾಗಿ, ಮನೆ ಸುತ್ತಮುತ್ತ ಇರುವ ಕಾಗೆಗಳು ಸಂಕೀರ್ಣವಾದ ನಗರ ಪರಿಸರಕ್ಕೆ ಒಡ್ಡಿಕೊಂಡಿರುತ್ತವೆ. ಮಾನವರ ಜೀವನವನ್ನು ಗಮನಿಸಿ ಕಲಿಯುವುದು, ಆಹಾರದ ಅವಕಾಶವನ್ನು ಗುರುತಿಸುವುದು ಮತ್ತು ಅನುಭವದಿಂದ ವರ್ತನೆಯನ್ನು ಸುಧಾರಿಸಿಕೊಳ್ಳುವುದು ಮೊದಲಾದ ಚತುರಬುದ್ಧಿಯ ಹೊಂದಾಣಿಕೆಗಳಲ್ಲಿ ಅವುಗಳ ಯಶಸ್ಸು ಅಡಗಿದೆ.
ಕಾಗೆಗಳು ಸಾಮಾನ್ಯ ಪಕ್ಷಿಗಳಲ್ಲ. ಜೈವಿಕ ಪರಿಸರದಲ್ಲಿ ಅವು ಬಹುಮುಖ್ಯ ಪಾತ್ರವನ್ನು ವಹಿಸುತ್ತವೆ. ಪ್ರಾಣಿಗಳ ಅರಿವಿನ ಸಾಮರ್ಥ್ಯಕ್ಕೆ ಅತಿ ಮುಖ್ಯ ಒಳನೋಟಗಳನ್ನು ಕೊಡುತ್ತವೆ. ಕಾಗೆಗಳ ಬುದ್ಧಿವಂತಿಕೆಯನ್ನು ಅರ್ಥಮಾಡಿಕೊಳ್ಳುವುದೇ ಪಕ್ಷಿಗಳ ಕುರಿತಂತೆ ನಮ್ಮ ಜ್ಞಾನಕ್ಕೆ ಅತಿದೊಡ್ಡ ಸವಾಲು. ಜೀವವಿಕಾಸವು ಬುದ್ಧಿಮತ್ತೆಯನ್ನು ವೈವಿಧ್ಯಮಯ ರೂಪಗಳಲ್ಲಿ ಹೇಗೆ ನಿರೂಪಿಸುತ್ತದೆ ಎನ್ನುವುದನ್ನು ಮುಖ್ಯವಾಗಿ ತೋರಿಸುತ್ತದೆ ಎನ್ನುತ್ತಾರೆ ಡಾ. ಗುಪ್ತಾ.
ಕೃಪೆ: indianexpress.com







