ದಲಿತರಲ್ಲೂ ಆತ್ಮಾವಲೋಕನ ಅಗತ್ಯವಲ್ಲವೇ?

ಸಾಮಾಜಿಕ ಶೋಷಣೆಗಳೊಳಗಾದ ದಲಿತರ ಹಿತರಕ್ಷಣೆ ಮತ್ತು ಅವರ ಸಂವಿಧಾನಬದ್ಧ ಹಕ್ಕುಬಾಧ್ಯತೆಗಳ ಸಂರಕ್ಷಣೆಯ ರಕ್ಷಾಕವಚವಾಗಿ ಕಾನೂನಿನ ನೆರವು ಮತ್ತು ವಿಶೇಷ ಆದ್ಯತೆಗಳನ್ನು ನಮ್ಮ ಸಂವಿಧಾನ ದೊರಕಿಸಿಕೊಟ್ಟಿದೆ. ಈ ಕಾನೂನಿನ ನೆರವು ಮತ್ತು ಅಭಯದಿಂದ ದಲಿತ ಸಮುದಾಯ ಒಂದಷ್ಟು ಭರವಸೆ ಮತ್ತು ನಂಬಿಕೆಯಿಂದ ಬದುಕನ್ನು ಕಟ್ಟಿಕೊಂಡಿದೆ. ಆದರೆ, ದಿನನಿತ್ಯ ಒಂದಲ್ಲ ಒಂದು ಕಾರಣದಿಂದ ನಡೆಯುತ್ತಿರುವ ದಲಿತರ ಮೇಲಿನ ದೌರ್ಜನ್ಯ ದಬ್ಬಾಳಿಕೆಗಳಿಂದ ಈ ಸಮುದಾಯ ರೋಸಿರುವುದು ಸತ್ಯವಷ್ಟೆ. ಅಲ್ಲದೆ ಕೆಲವು ವೇಳೆ ಪ್ರತೀಕಾರದ ಮನೋಭಾವ ಮೊಳೆಯುವುದು ಸಹಜವೆ. ದೌರ್ಜನ್ಯಗಳ ವಿರುದ್ಧ ಕೆಲವೆಡೆ ದಲಿತರೂ ಕೂಡಾ ಸಿಡಿದೆದ್ದಿರುವುದನ್ನು ಮೇಲ್ವರ್ಗದ ಸಮಾಜ ಸಹಿಸದೆ ತನ್ನ ಮೇಲರಿಮೆಯನ್ನು ಕಾಪಿಟ್ಟುಕೊಳ್ಳುವುದನ್ನು ಕಾಣಬಹುದು.
ಜಮೀನ್ದಾರರ ಹೊಲ ಗದ್ದೆಗಳಲ್ಲಿ ಕೂಲಿ ಅಥವಾ ಜೀತ ಮಾಡುವ ಕುಟುಂಬದ ಮಕ್ಕಳು ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿ ಉದ್ಯೋಗ ಗಳಿಸಿ ಒಂದಷ್ಟು ಆರ್ಥಿಕವಾಗಿ ಸಬಲರಾದರೆ, ಒಂದು ಸ್ವಂತ ಮನೆ ನಿರ್ಮಿಸಿಕೊಂಡರೆ, ಒಂದು ವಾಹನ, ಜಮೀನು ಅಥವಾ ನಿವೇಶನ ಖರೀದಿಸಿದರೆ ಅದನ್ನು ಸಹಿಸಲಾರದೆ ಕೆಂಗಣ್ಣು ಬೀರುವುದಲ್ಲದೆ ಅದರ ವಿರುದ್ಧ ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಹೀಯಾಳಿಸಿ ಪ್ರತಿರೋಧ ವ್ಯಕ್ತಪಡಿಸುವುದನ್ನು ದಿನನಿತ್ಯದ ಬದುಕಲ್ಲಿ ಕಾಣುತ್ತಿದ್ದೇವೆ. ಇನ್ನೂ ಕೆಲವು ಸಂದರ್ಭಗಳಲ್ಲಿ ದಲಿತ ಹೆಣ್ಣು ಮಕ್ಕಳನ್ನು ಪುಸಲಾಯಿಸಿ ವೈವಾಹಿಕ ಆಸೆ ಹುಟ್ಟಿಸಿ ವಂಚಿಸುತ್ತಿರುವ ಸಂದರ್ಭಗಳಲ್ಲಿ ಮನೆತನದ ಗೌರವ ಮತ್ತು ಭವಿಷ್ಯದ ದೃಷ್ಟಿಯಿಂದ ಅದೆಷ್ಟೋ ಹೆಣ್ಣು ಮಕ್ಕಳು ಮೂಕವೇದನೆಯಿಂದ ನಲುಗಿರುವ ಪ್ರಕರಣಗಳು ಕೂಡಾ ನಮ್ಮ ಕಣ್ಣೆದುರು ಇರುವುದನ್ನು ಅಲ್ಲಗಳೆಯಲಾಗದು.
ಆಧುನಿಕ ಕಾಲಘಟ್ಟದಲ್ಲಿ ಅಷ್ಟೋ ಇಷ್ಟೋ ಶಿಕ್ಷಣ ಕೊಡಿಸಬೇಕೆನ್ನುವ ಸಂಕಲ್ಪದಿಂದ ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿ ಮುಂದಿನ ಅವರ ಭವಿಷ್ಯಕ್ಕೆ ಒಂದಷ್ಟು ಆಸರೆ ಒದಗಿಸಲು ಪೋಷಕರು ಹಗಲಿರುಳು ಶ್ರಮಿಸುವುದರ ಫಲವಾಗಿ ದಲಿತ ಸಮುದಾಯದ ಹೆಣ್ಣು ಮಕ್ಕಳು ಸುಶಿಕ್ಷಿತರಾಗುತ್ತಿರುವುದು ವಾಸ್ತವ. ಆದರೆ, ಇಂದಿನ ಸಾಮಾಜಿಕ ಪರಿಸರದಲ್ಲಿ ಇಂದಿಗೂ ಜೀವಂತವಾಗಿರುವ ಜಾತೀಯತೆ ಹಾಗೂ ಅಸ್ಪಶ್ಯತೆಯ ಕರಾಳ ಮುಖಗಳನ್ನು ಸುದ್ದಿ ಮಾಧ್ಯಮಗಳು, ವಿದ್ಯುನ್ಮಾನಗಳು ನಾ ಮುಂದು ತಾ ಮುಂದು ಎಂದು ಆಗಿಂದಾಗ ಬಿತ್ತರಿಸುತ್ತಾ ಸಮಾಜದಲ್ಲಿ ಅರಿವು ಮತ್ತು ಎಚ್ಚರ ಮೂಡಿಸುತ್ತಿದ್ದರೂ, ಯೌವನಾವಸ್ಥೆಯ ಮೋಹಕ್ಕೆ ಸಿಲುಕಿ ಅನೇಕ ದಲಿತ ಹೆಣ್ಣು ಮಕ್ಕಳು ಮೇಲ್ಜಾತಿ ಯುವಕರ ಬಣ್ಣದ ಮಾತಿನ ಮೋಡಿಗೋ ಅಥವಾ ಹಣ, ಅಂತಸ್ತಿನ ವ್ಯಾಮೋಹಕ್ಕೋ ಬಲಿಯಾಗಿ ತಮ್ಮ ಬದುಕನ್ನು ಕಳೆದುಕೊಳ್ಳುತ್ತಿರುವ ಸನ್ನಿವೇಶಗಳು ನಿಜಕ್ಕೂ ವಿಷಾದಕರ ಸಂಗತಿ. ಮದುವೆಯ ಬಂಧನದ ಸಂದರ್ಭ ಎದುರಾಗುವವರೆಗೂ ಗುಟ್ಟಾಗುಳಿದ ಪ್ರೇಮ ಪ್ರಸಂಗಗಳು ಜಾತಿಯ ಕಾರಣದಿಂದಾಗಿ ಭಗ್ನಗೊಳ್ಳುವುದು, ಕೆಲವೊಮ್ಮೆ ಮದುವೆಯಾದರೂ ಆನಂತರ ಜಾತಿಯ ಕಾರಣದಿಂದ ನಿಂದನೆಗೀಡಾಗಿ ಕೊನೆಗೆ ಗಂಡನಿಂದಲೂ ತಿರಸ್ಕೃತಗೊಳ್ಳುವ ಪ್ರಸಂಗಗಳಲ್ಲಿ ವಿದ್ಯಾವಂತ ಯುವತಿಯರೇ ಬಲಿಪಶುಗಳಾಗುತ್ತಿರುವ ಸನ್ನಿವೇಶಗಳನ್ನು ಕಂಡಾಗ ಸುಶಿಕ್ಷಿತ ದಲಿತ ಹೆಣ್ಣು ಮಕ್ಕಳಲ್ಲಿ ಈ ಬಗ್ಗೆ ಅರಿವು ಮತ್ತು ಮುಂದಾಲೋಚನೆಯ ಆತ್ಮವಿಮರ್ಶೆ ಬರದೇ ಇರಲು ಕಾರಣಗಳೇನು? ಎಂದು ಪ್ರಶ್ನಿಸಿಕೊಳ್ಳಬೇಕಾಗಿದೆ.
ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿರುವ ಜಾತೀಯತೆಯ ಕರಾಳ ಸತ್ಯಗಳನ್ನು ಕಣ್ಣಾರೆ ಕಂಡು, ಅನುಭವಿಸಿರುವ ಸುಶಿಕ್ಷಿತ ಸರಕಾರಿ ಉದ್ಯೋಗಸ್ಥರು ಕೂಡಾ ತಮ್ಮ ಜಾತಿಯ ಕೀಳರಿಮೆಯಿಂದ ಸುಳ್ಳು ಜಾತಿಗಳನ್ನು ಹೇಳಿಕೊಂಡು ಮದುವೆ ಮಾಡಿಕೊಳ್ಳುವುದು (ಅಂತರ್‌ಜಾತಿಯ ಒಪ್ಪಿತ ವಿವಾಹಗಳನ್ನು ಹೊರತುಪಡಿಸಿ) ಜನರನ್ನು ನಂಬಿಸಲು ಜನಿವಾರ, ಶಿವದಾರ, ವಿಭೂತಿ, ಕುಂಕುಮಗಳನ್ನು ಧರಿಸಿ ಸಂಪ್ರದಾಯಗಳ ಮೊರೆ ಹೋಗಿ ಬಾಡಿಗೆ ಮನೆಗಳನ್ನು ಪಡೆದು ಆತಂಕ ಮತ್ತು ಅಭದ್ರತೆಯಿಂದ ಜೀವನ ಸಾಗಿಸುವುದು, ಬಂಧು ಬಾಂಧವರಿಂದ ದೂರ ಉಳಿಯುವುದು, ವಂಶಪಾರಂಪರ್ಯವಾಗಿ ರೂಢಿಗತ ಮಾಡಿಕೊಂಡಿದ್ದ ನೆಂಟರಿಸ್ಟರೊಂದಿಗಿನ ಹಬ್ಬ, ಜಾತ್ರೆ, ಮದುವೆ, ಸಾಮೂಹಿಕ ಭೋಜನದಂತಹ ಸಂಭ್ರಮ ಸಂತಸಗಳಿಂದ ವಂಚಿತರಾಗಿ ಒಂಟಿತನ ಹಾಗೂ ಹತಾಶೆಯಿಂದ ಬದುಕು ಸಾಗಿಸುವಂತೆ ಮಾಡುವಲ್ಲಿ ಯಾರ ಒತ್ತಡವಿದೆ? ಎಂದು ಒಮ್ಮೆ ಆಲೋಚಿಸಿ ಆತ್ಮವಿಮರ್ಶೆ ಮಾಡಿಕೊಳ್ಳಲು ಈ ಸುಶಿಕ್ಷಿತ ದಲಿತರಿಗೆ ಇರುವ ಅಡ್ಡಿಯಾದರೂ ಏನು? ಎಂದು ಚಿಂತಿಸಬೇಕಾಗಿದೆ.
ದೇವರು ಧರ್ಮದ ಹೆಸರಿನಲ್ಲಿ ಅಸ್ಪಶ್ಯತೆ, ಜಾತೀಯತೆ ಆಚರಿಸುವ ಧಾರ್ಮಿಕ ಶೋಷಣೆಯ ವಿರುದ್ಧ ಪ್ರತಿಭಟನೆಯ ಧ್ವನಿ ಬುದ್ಧ, ಬಸವ, ಬಾಬಾಸಾಹೇಬರ ಕಾಲಘಟ್ಟದಿಂದಲೇ ಪ್ರತಿಧ್ವನಿಸಿದ್ದನ್ನು ಅರಿತವರು ಕೂಡಾ ಇಂದಿಗೂ ದೇವಸ್ಥಾನಗಳಿಗೆ ಪ್ರವೇಶ ನೀಡುತ್ತಿಲ್ಲವೆಂದು ಹಲುಬುತ್ತಾ, ಅಂತಹ ದೇವಸ್ಥಾನಗಳ ಸುತ್ತ ಗಿರಕಿ ಹೊಡೆಯುತ್ತಾ ಈ ತಾರತಮ್ಯಗಳನ್ನು ದೂರ ಮಾಡಲು ಸಂಕಲ್ಪ ಮಾಡಿ ಗ್ರಾಮೀಣ ಪ್ರದೇಶಗಳಲ್ಲಿ ಹೋರಾಟದಲ್ಲಿ ತೊಡಗಿಸಿಕೊಂಡು ಹಿಂದೂ ಸಂಪ್ರದಾಯಸ್ಥರ ಮನಃಪರಿವರ್ತನೆಯ ಕನಸು ಕಾಣುತ್ತಿರುವವರು ಒಂದೆಡೆ, ಮೇಲ್ಜಾತಿ/ಮೇಲ್ವರ್ಗದವರ ಕಪಿಮುಷ್ಟಿಯಲ್ಲಿರುವ ಜಾತೀಯತೆಯನ್ನು ಪೋಷಿಸುವ ಮಠ, ಮಂದಿರಗಳನ್ನು ತಿರಸ್ಕರಿಸಿ ಬಾಬಾಸಾಹೇಬರು ತೋರಿದ ಪ್ರೀತಿ, ಕರುಣೆ ಮತ್ತು ಮೈತ್ರಿಯನ್ನು ಸಾಕ್ಷೀಕರಿಸುವ ಬುದ್ಧ ಮಾರ್ಗದತ್ತ ಪಯಣಿಸುತ್ತಿರುವವರು ಮತ್ತೊಂದೆಡೆ. ಹೀಗೆ, ಎರಡು ದೋಣಿಯ ಪಯಣದಲ್ಲಿ ಸಾಗುತ್ತಿರುವ ದಲಿತರು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳುವುದು ಅನಿವಾರ್ಯವಲ್ಲವೇ?
ಜಾತಿ ವ್ಯವಸ್ಥೆಯ ಕೂಪದಲ್ಲಿ ನರಳುತ್ತಿರುವ ಈ ಸಮಾಜದಲ್ಲಿ ತಳಸಮುದಾಯದ ಮೇಲೆ ನೀಡುವ ಕಿರುಕುಳಗಳ ಮಾದರಿಗಳು ಈಗ ಬದಲಾಗಿವೆ. ಸಿನೆಮಾ ಮಂದಿರದಲ್ಲಿ ಕಾಲ್ತುಳಿದ, ದೇವರ ಪಟ ಮುಟ್ಟಿದ, ದೇವಸ್ಥಾನಕ್ಕೆ ನುಗ್ಗಿ ಶಾಸ್ತ್ರ ಸಂಪ್ರದಾಯಗಳಿಗೆ ಧಕ್ಕೆ ತಂದ, ಕೆಕ್ಕರಿಸಿ ನೋಡಿದ, ಅನೈತಿಕ ಸಂಬಂಧವಿರಿಸಿಕೊಂಡಿದ್ದ, ಮೇಲ್ಜಾತಿ ಹುಡುಗಿಯನ್ನು ಕೆಣಕಿದ... ಹೀಗೆ ನಾನಾ ತೆರನಾದ ಪ್ರಕರಣಗಳನ್ನು ಮುಂದು ಮಾಡಿ ಸಮಾಜವನ್ನು ನಂಬಿಸಿ ದಲಿತ ಸಮುದಾಯದ ಮೇಲೆ ದ್ವೇಷಕಾರುವಂತಹ ಸನ್ನಿವೇಶಗಳನ್ನು ಸೃಷ್ಟಿ ಮಾಡುವುದಲ್ಲದೆ, ಸಂಬಂಧವಿಲ್ಲದ ಪ್ರಕರಣಗಳಿಗೆ ತಳಕು ಹಾಕಿ ಪೊಲೀಸ್, ಕೋರ್ಟ್ ಕಚೇರಿಗಳಿಗೆ ಅಲೆಯುವಂತೆ ಮಾಡುವಲ್ಲಿ ಮೇಲ್ಜಾತಿ/ಮೇಲ್ವರ್ಗದವರ ಹಿತ ಕಾಯುವ ಈ ಸಮಾಜ ಸದಾ ಸನ್ನದ್ಧವಾಗಿರುವುದನ್ನು ಮರೆಯುವಂತಿಲ್ಲ. ಇಂತಹ ಸನ್ನಿವೇಶಗಳಲ್ಲಿ ದಲಿತರು ತಮ್ಮ ರಕ್ಷಣೆಗಾಗಿ ಇರುವ ಅಟ್ರಾಸಿಟಿ ಕೇಸುಗಳನ್ನು ದಾಖಲಿಸಿ ನ್ಯಾಯ ಸಿಗುವ ಹಂಬಲದಲ್ಲಿ ಪೊಲೀಸ್ ಠಾಣೆಗಳತ್ತ ಅಲೆಯುವುದು ಮಾತ್ರ ತಪ್ಪಿಲ್ಲ. ಆದರೆ, ಜಾತೀಯ ವ್ಯಾಮೋಹದಲ್ಲಿರುವ ಬಹಳಷ್ಟು ಅಧಿಕಾರಿಗಳು ಅಟ್ರಾಸಿಟಿ ಕೇಸುಗಳನ್ನು ಸಡಿಲಗೊಳಿಸಿ ದಲಿತರಿಗೆ ನ್ಯಾಯ ದೊರಕಿಸಿಕೊಡುವಲ್ಲಿ ನಿರಾಸಕ್ತಿ ವಹಿಸುವುದು ಹೊಸದೇನಲ್ಲ. ಕೈತುಂಬಾ ಸಂಬಳ, ಅಧಿಕಾರ ಮತ್ತು ಅವಕಾಶಗಳನ್ನು ಹೊಂದಿರುವ ಪೊಲೀಸ್ ಅಧಿಕಾರಿಗಳು ಪ್ರಾಮಾಣಿಕವಾಗಿ ಯಾವುದೇ ಪೂರ್ವಾಗ್ರಹವಿಲ್ಲದೆ ನ್ಯಾಯ ಒದಗಿಸಿ ಕೊಡುವಂತಹ ಮನೋಧರ್ಮವನ್ನು ಹೊಂದಲು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅಗತ್ಯತೆ ಎಂದಿಗಿಂತ ಇಂದು ಬಹುಮುಖ್ಯವಾಗಿದೆ. ನ್ಯಾಯ ದೊರಕಿಸಿಕೊಡುವ ಪ್ರಾಮಾಣಿಕ ಅಧಿಕಾರಿಗಳನ್ನು ನೊಂದ ದಲಿತ ಸಮಾಜ ಕೃತಜ್ಞತೆಯಿಂದ ಸ್ಮರಿಸುತ್ತದೆ ಎಂಬುದು ಸುಳ್ಳಲ್ಲ.
ಸಾಮಾಜಿಕ ಶೋಷಣೆಗೊಳಗಾದ ದಲಿತ ಸಮಾಜ ಸರಕಾರದ ನೆರವಿಗಾಗಿ ನಿರೀಕ್ಷಿಸುವ ಸಂದರ್ಭದಲ್ಲಿ ಶಿಕ್ಷಣ ಮತ್ತು ಅರಿವಿನ ಕೊರತೆಯೋ, ಉಡಾಫೆ ಧೋರಣೆಯೋ, ಸೋಮಾರಿತನವೋ ಅಥವಾ ಉದ್ಧಟತನವೋ ಅಂತೂ ತಮ್ಮದೇ ಆದ ವಿತಂಡವಾದವನ್ನು ಮೈಗೂಡಿಸಿಕೊಂಡು ಸಮಾಜ ಹಾಗೂ ಅಧಿಕಾರಶಾಹಿಯ ಕೆಂಗಣ್ಣಿಗೆ ಅಥವಾ ಉಪೇಕ್ಷೆಗೆ ಗುರಿಯಾಗಿರುವುದನ್ನು ನಿರಾಕರಿಸಲಾಗದು. ಜಾತಿಯ ಕಾರಣವೊಂದನ್ನೇ ಮುಂದು ಮಾಡಿ ಸಹಾನುಭೂತಿ ಗಿಟ್ಟಿಸುವ ಅಥವಾ ಇನ್ನಿತರರ ಮೇಲೆ ಅಟ್ರಾಸಿಟಿ ಕಾಯ್ದೆಯನ್ನು ದುರುಪಯೋಗಪಡಿಸಿಕೊಳ್ಳುವರೆಂಬ ಆಪಾದನೆಯಿಂದ ಹೊರಬಂದು ಸ್ವಂತ ವಿವೇಚನೆ ಹಾಗೂ ಆತ್ಮವಿಶ್ವಾಸದಿಂದ ಬದುಕು ಕಟ್ಟಿಕೊಳ್ಳುವಂತಹ ಸನ್ನಿವೇಶ ಎದುರಾಗಬೇಕಾಗಿದೆ. ಅಂತಹ ಆತ್ಮಾವಲೋಕನ ಸಾಧ್ಯವೇ?







