ದಲಿತ ಉದ್ಯಮಶೀಲತೆ

ಜಾತಿಯೊಂದರ ಉದ್ಧಾರ ಅಂದರೆ ಆ ಜಾತಿಯ ಜನರ ಉದ್ಧಾರ ಎಂದು ಅರ್ಥ. ಆ ಜಾತಿಯ ಪ್ರತಿಯೊಬ್ಬ ಸದಸ್ಯರ ಆರ್ಥಿಕ ಮತ್ತು ಶೈಕ್ಷಣಿಕ ಉದ್ಧಾರ ಎಂದು ಅರ್ಥ. ಹಾಗಿದ್ದರೆ ಸಾಮಾಜಿಕ ಉದ್ಧಾರ? ಅವರೆಲ್ಲ ಒಟ್ಟಿಗೆ ಒಂದು ಸಮಾಜ ಆಗುವುದರಿಂದ ಸದಸ್ಯರೆಲ್ಲ ಒಮ್ಮೆಲೇ ಅಥವಾ ನಿಧಾನವಾಗಿ ಅಥವಾ ಹಂತ ಹಂತವಾಗಿ ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಉದ್ಧಾರ ಆಗುವುದೇ ಸಾಮಾಜಿಕ ಉದ್ಧಾರವಾಗಿದೆ.
ದಲಿತರು ಕೋಟ್ಯಂತರ ಜನ ಇದ್ದರೂ ತಾವೂ ವ್ಯಾಪಾರ-ವ್ಯವಹಾರ ಮಾಡಬಹುದು ಎಂಬ ಮನಸ್ಥಿತಿ ಇನ್ನೂ ಬೆಳೆಸಿಕೊಳ್ಳಲಿಲ್ಲ. ಅದಕ್ಕೆ ಅಸ್ಪಶ್ಯತೆಯ ಕಾರಣ ಕೊಡುತ್ತಾರೆ, ಜಾತಿ ತಾರತಮ್ಯದ ಉದಾಹರಣೆ ಮುಂದಿಡುತ್ತಾರೆ. ಪರಿಣಾಮ ತಮಗೆ ತಾವೇ ಆರ್ಥಿಕ ಅಥವಾ ಹಣಕಾಸು ವ್ಯವಹಾರದ ಬಹುದೊಡ್ಡ ಮೂಲದಿಂದ ಮೈಲುಗಟ್ಟಲೆ ದೂರ ಇದ್ದು, ನಾವು ಅಭಿವೃದ್ಧಿಯಾಗುತ್ತಿಲ್ಲ, ನಮ್ಮ ಜಾತಿ ಅಭಿವೃದ್ಧಿಯಾಗುತ್ತಿಲ್ಲ ಇದು ಹೀಗೆಯೇ, ಇದು ನಮ್ಮ ಕರ್ಮ ಎಂದು ಹಲಬುತ್ತಿರುತ್ತಾರೆ. ಪರಿಣಾಮ ದಲಿತ ಜಾತಿಗಳು ಅಭಿವೃದ್ಧಿಯಿಂದ ವಂಚಿತ ಆಗುತ್ತಾ ಇರುತ್ತವೆ.
ಇದು ಎಲ್ಲಿಯವರೆಗೆ? ಎಷ್ಟು ಶತಮಾನಗಳವರೆಗೆ?
ದಲಿತರ ಅಭಿವೃದ್ಧಿಯಾಗಬೇಕಾದರೆ ಮುಖ್ಯವಾಗಿ ಆರ್ಥಿಕ ಅಭಿವೃದ್ಧಿಯಾಗಬೇಕಾದರೆ ದಲಿತ ಜಾತಿಗಳು ವ್ಯಾಪಾರ-ವ್ಯವಹಾರ, ಮಾರುಕಟ್ಟೆ, ಉದ್ಯಮಗಳಿಗೆ ಇಳಿಯಬೇಕು. ಅಂತಹವರನ್ನು ದಲಿತ ಜಾತಿಗಳೇ ಪ್ರೋತ್ಸಾಹಿಸಬೇಕು.
ಸಮಸ್ಯೆಗಳು ದಲಿತರು ಶಿಕ್ಷಣ ಪಡೆಯುವಾಗಲೂ, ಸರಕಾರಿ ನೌಕರಿ ಪಡೆದು ಒಳ್ಳೆಯ ಬದುಕು ಕಟ್ಟಿಕೊಳ್ಳುವಾಗಲೂ ಬಂದಿರುತ್ತದೆ. ಆದರೆ ಅವರು ಅದೆಲ್ಲವನ್ನು ಮೀರಿ ಶಿಕ್ಷಣ ಪಡೆದು ನೌಕರಿಗಿಟ್ಟಿಸಿಲ್ಲವೇ. ಈ ನಿಟ್ಟಿನಲ್ಲಿ ವ್ಯಾಪಾರ-ವ್ಯವಹಾರದಲ್ಲಿ ತುಸು ಬೇರೆಯದೇ ತಂತ್ರ ಬಳಸಬಹುದು. ಆರಂಭದಲ್ಲಿ ತಮ್ಮದೇ ಸಮುದಾಯ ಕೇಂದ್ರಿತ ಗ್ರಾಹಕರನ್ನು ಹುಡುಕಿ ವ್ಯವಹಾರ ಆರಂಭಿಸಬೇಕು. ಹಂತ ಹಂತವಾಗಿ ಎಲ್ಲ ಜಾತಿಗಳನ್ನು ತಲುಪಬೇಕು. ಖಂಡಿತ, ಇದು ದಿಢೀರ್ ಸಾಧ್ಯವಾಗುವುದಿಲ್ಲ. ಹಾಗೆಂದು ಸುಮ್ಮನೆ ಕುಳಿತರೆ ಆರಂಭವೇ ಆಗುವುದಿಲ್ಲ. ಹಂತಹಂತವಾಗಿ ಬೆಳೆಯುತ್ತಾ ಹೋಗಬೇಕು. ದಲಿತ ಸಮುದಾಯದ ವಿದ್ಯಾವಂತ ನಿರುದ್ಯೋಗಿ ಯುವತಿಯರು, ಯುವಕರು ಅಸ್ಪಶ್ಯತೆಯನ್ನು ಮೈಕೊಡವಿ ಬಿಸಿನೆಸ್‌ಗೆ ಇಳಿಯಬೇಕು. ಮೇಲ್ಜಾತಿ ಎಂದುಕೊಳ್ಳುವವರ ಬಳಿ ಹೋಗಿ ದಿನಸಿ ಸಾಮಾನು ಇತ್ಯಾದಿ ತಂದು ಅವರಿಗೆ ಲಾಭ ಮಾಡಿಕೊಡುವುದಕ್ಕಿಂತ ತನ್ನವರಿಗೆ ಒಂದು ರೂ. ಲಾಭ ಮಾಡಿಕೊಡಲಿ. ಆ ಮೂಲಕ ಸಮುದಾಯದ ವ್ಯಕ್ತಿಯೊಬ್ಬ ಅಭಿವೃದ್ಧಿಯಾಗಲಿ. ಅಂದಹಾಗೆ ಆ ವ್ಯಕ್ತಿ ಉದ್ಧಾರವಾದರೆ, ಅಂತಹದ್ದೇ ನೂರಾರು ವ್ಯಕ್ತಿಗಳು ಹುಟ್ಟುತ್ತಾ ಹೋದರೆ ದಲಿತ ಸಮುದಾಯ ಉದ್ಧಾರ ಆದ ಹಾಗೆ ಅಲ್ಲವೇ?







