ಬಿಜೆಪಿ ವಿರುದ್ಧ ಮಾನನಷ್ಟ ಮೊಕದ್ದಮೆ: ಸರಕಾರಕ್ಕೆ ಮಾಹಿತಿ ನೀಡದ ಇಲಾಖೆಗಳು

ಸಾಂದರ್ಭಿಕ ಚಿತ್ರ PC: PTI
ಬೆಂಗಳೂರು : ರಾಜ್ಯ ಸರಕಾರದ ವಿರುದ್ಧ ತಪ್ಪು ಮಾಹಿತಿ, ತಿರುಚುವಿಕೆ ಹಾಗೂ ಸುಳ್ಳು ವಿಚಾರಗಳನ್ನು ಬಳಸಿಕೊಂಡು ದೃಶ್ಯ ಮತ್ತು ಮುದ್ರಣ ಮಾಧ್ಯಮಗಳಲ್ಲಿ ಪ್ರಚಾರ ಮಾಡಿದ ಆರೋಪಕ್ಕಾಗಿ ವಿರೋಧ ಪಕ್ಷ ಬಿಜೆಪಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವ ಸಂಬಂಧ ಹಲವು ಇಲಾಖೆಗಳು ಇನ್ನೂ ಸರಕಾರಕ್ಕೆ ಯಾವುದೇ ಮಾಹಿತಿಯನ್ನೂ ನೀಡುತ್ತಿಲ್ಲ.
ಬೆಂಗಳೂರಿನ 42ನೇ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಲು ರಾಜ್ಯ ಕಾಂಗ್ರೆಸ್ ಸರಕಾರವು 2025ರ ಮೇ ತಿಂಗಳಲ್ಲಿ ತೀರ್ಮಾನಿಸಿತ್ತು. ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ರಾಜಕೀಯ)ಯು ಎಲ್ಲಾ ಇಲಾಖೆಗಳಿಂದ ಮಾಹಿತಿ ಬಯಸಿತ್ತು. ಆದರೆ ಹಲವು ಇಲಾಖೆಗಳು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ರಾಜಕೀಯ)ಗೆ ಮಾಹಿತಿಯನ್ನೇ ನೀಡಿಲ್ಲ. ಹೀಗಾಗಿ ನೆನಪೋಲೆಗಳನ್ನು ಕಳಿಸುತ್ತಿವೆ.
ಈ ಸಂಬಂಧ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯು 2026ರ ಮಾರ್ಚ್ 27ರಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಆಯುಕ್ತರು, ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು, ಸಮಗ್ರ ಶಿಕ್ಷಣ ಯೋಜನೆಯ ರಾಜ್ಯ ಯೋಜನಾ ನಿರ್ದೇಶಕರಿಗೆ ಪತ್ರವನ್ನು (ಇಪಿ 181 ವೈಎಸ್ಕೆ 2026) ಬರೆದಿದೆ. ಈ ಪತ್ರದ ಪ್ರತಿಯು "the-file.in"ಗೆ ಲಭ್ಯವಾಗಿದೆ.
ಪತ್ರದಲ್ಲೇನಿದೆ?: ರಾಜ್ಯ ಸರಕಾರದ ವಿರುದ್ಧ ಕರ್ನಾ ಟಕ ಭಾರತೀಯ ಜನತಾಪಕ್ಷವು ಸುಳ್ಳು ಪ್ರಚಾರ ಮಾಡುತ್ತಿರುವ ಬಗ್ಗೆ 42ನೇ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಮಾನನಷ್ಟ ಪ್ರಕರಣದ ಕುರಿತು ದೂರು ದಾಖಲಿಸುವ ಕುರಿತು 2025ರ ಜುಲೈ 30ರಂದೇ ಪತ್ರ ಬರೆದಿತ್ತು.
ಈ ವಿಷಯಕ್ಕೆ ಸಂಬಂಧಿಸಿ ಸರಕಾರದ ಪತ್ರದ ಕೋರಲಾದ ಮಾಹಿತಿಯು ಸ್ವೀಕೃತವಾಗಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು 2025ರ ಡಿಸೆಂಬರ 19ರಂದು ಅನಧಿಕೃತ ಟಿಪ್ಪಣಿ ( ಸಂಖ್ಯೆ; ಸಿಆಸುಇ 141 2025) ಹೊರಡಿಸಿದೆ.
ಆದ್ದರಿಂದ 2025ರ ಜುಲೈ 30ರ ಪತ್ರದಲ್ಲಿ ಕೋರಲಾದ ಮಾಹಿತಿಯನ್ನು ಮರು ಟಪಾಲಿನಲ್ಲಿ ಕೂಡಲೇ ಒದಗಿಸಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಸರಕಾರದ ವಿಶೇಷಾಧಿಕಾರಿ ಶುಭಮಂಗಳ ಆರ್.
ವಿ. ಅವರು ಇಲಾಖೆಯ ಆಯುಕ್ತರು, ಪಿಯು ಮಂಡಳಿಯ ನಿರ್ದೇ ಶಕರು, ಸಮಗ್ರ ಶಿಕ್ಷಣ ಘಟಕದ ರಾಜ್ಯ ಯೋಜನಾ ನಿರ್ದೇಶಕರಿಗೆ ನಿರ್ದೇಶಿಸಿರುವುದು ಪತ್ರದಿಂದ ತಿಳಿದು ಬಂದಿದೆ.
ಸರಕಾರದ ಅಧಿಸೂಚನೆಯಲ್ಲಿ ಏನಿದೆ?: ರಾಜ್ಯ ಸರಕಾರದ 2 ವರ್ಷಗಳ ವೈಫಲ್ಯದ ಬಗ್ಗೆ, ಆರೋಪ ಪಟ್ಟಿ ಎಂಬ ಶೀರ್ಷಿಕೆಯಡಿಯಲ್ಲಿ ದೃಶ್ಯ ಮಾಧ್ಯಮ ಮತ್ತು ಮುದ್ರಣ ಮಾಧ್ಯಮಗಳಲ್ಲಿ ತಪ್ಪು ಮಾಹಿತಿ ತಿರುಚುವಿಕೆ ಹಾಗೂ ಸುಳ್ಳು ಸಂಗತಿಗಳನ್ನು ಅಳವಡಿಸಿಕೊಂಡು ಕರ್ನಾಟಕ ಭಾರತೀಯ ಜನತಾ ಪಕ್ಷವು ಸುಳ್ಳು ಪ್ರಚಾರ ಮಾಡಿರುವ ಬಗ್ಗೆ, ಬೆಂಗಳೂರಿನ ಮಾನ 42ನೇ ಸಿಎಂಎಂ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಬೇಕು ಎಂದು ಅಧಿಸೂಚನೆಯನ್ನು ಹೊರಡಿಸಿತ್ತು.
ಈ ಸಂಬಂಧ ಸರಕಾರವು ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಲು ಮತ್ತು ಸರ್ಕಾರಿ ಅಭಿಯೋಜಕರಿಗೆ ಅಗತ್ಯವಿರುವ ಮಾಹಿತಿ ಒದಗಿಸಲು ಉಪ ಕಾರ್ಯದರ್ಶಿ (ಗೃಹ- ಕಾನೂನು ಮತ್ತು ಸುವ್ಯವಸ್ಥೆ) ಕುಮಟಾ ಪ್ರಕಾಶ್ ಅವರನ್ನು ನೇಮಿಸಿತ್ತು.
ಅಲ್ಲದೆ, ಈ ಪ್ರಕರಣವನ್ನು ನಿರ್ವಹಿಸಲು 67ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ಸರ್ಕಾರಿ ವಕೀಲ ಬಿ.ಎಸ್.ಪಾಟೀಲ್ ಮತ್ತು ಬೆಂಗಳೂರಿನ 61ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ಸರ್ಕಾರಿ ವಕೀಲರಾದ ಶೈಲಜಾ ನಾಯಕ್ ಅವರನ್ನು ನಿಯೋಜಿಸಿತ್ತು. ಕುಮಟಾ ಪ್ರಕಾಶ್ ಹೊರಡಿಸಿದ ಅಧಿಸೂಚನೆಯ ಪ್ರಕಾರ, ಸರಕಾರವು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್) ಕಾರ್ಯದರ್ಶಿಗೆ ದೂರು ಸಲ್ಲಿಸಲು ಅಧಿಕಾರ ನೀಡಿತ್ತು.
ಸರಕಾರದ ನಡೆಯನ್ನು ಖಂಡಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ‘ಬಿಜೆಪಿ ಇದಕ್ಕೆ ಭಯಪಡುವುದಿಲ್ಲ. ನೀವು (ಸರಕಾರ) ಬಿಜೆಪಿಯನ್ನು ನಿಯಂತ್ರಿಸಬಹುದು ಎಂದು ಭಾವಿಸುತ್ತಿದ್ದರೆ, ಅದು ಸಾಧ್ಯವಾಗುವುದಿಲ್ಲ. ಕರ್ನಾಟಕದಲ್ಲಿ, ತುರ್ತು ಪರಿಸ್ಥಿತಿಯ ಎರಡನೇ ಅಧ್ಯಾಯ ಪ್ರಾರಂಭವಾದಂತೆ ಕಾಣುತ್ತಿದೆ. ಪ್ರಜಾಪ್ರಭುತ್ವಕ್ಕೆ ಅದನ್ನು ಮುರಿಯುವ ಶಕ್ತಿ ಇದೆ. ಜನರಿಗೆ ಆ ಅಧಿಕಾರವಿದೆ, ಆದ್ದರಿಂದ ವಿರೋಧ ಪಕ್ಷ ಮತ್ತು ಮಾಧ್ಯಮಕ್ಕೂ ಅಧಿಕಾರವಿದೆ’ ಎಂದು ಅವರು ಹೇಳಿದ್ದರು.
‘ಸರಣಿ ಭ್ರಷ್ಟಾಚಾರಗಳು, ಅಭಿವೃದ್ಧಿ ಶೂನ್ಯ ಆಡಳಿತವನ್ನು ಪ್ರಶ್ನಿಸಿ ಹೋರಾಡುತ್ತಿರುವ ವಿರೋಧ ಪಕ್ಷಗಳನ್ನು ಈವರೆವಿಗೂ ಪೊಲೀಸ್ ವ್ಯವಸ್ಥೆ ದುರ್ಬಳಕೆ ಮಾಡಿಕೊಂಡು ಬೆದರಿಸುತ್ತಿದ್ದ ಕಾಂಗ್ರೆಸ್, ವಿಧಾನ ಸಭೆಯ ಅಧ್ಯಕ್ಷರನ್ನು ಬಳಸಿಕೊಂಡು ವಿರೋಧ ಪಕ್ಷದ 18 ಸದಸ್ಯರನ್ನು ಸುದೀರ್ಘ ಅವಧಿಗೆ ಅಮಾನತು ಮಾಡಿ ಸಭಾಧ್ಯಕ್ಷ ಪೀಠವನ್ನು ತನ್ನ ಸರ್ವಾಧಿಕಾರ ಪ್ರದರ್ಶಿಸಲು ಬಳಸಿಕೊಂಡಿತ್ತು’ ಎಂದು ವಿಜಯೇಂದ್ರ ಅವರು ಆರೋಪಿಸಿದ್ದರು.
ಏನಿದು ಪ್ರಕರಣ?
2025ರ ಮೇ 20ರಂದು ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ಎರಡು ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಕಾಂಗ್ರೆಸ್ ಸರಕಾರ ಎಲ್ಲ ರಂಗಗಳಲ್ಲಿ ವಿಫಲವಾಗಿದೆ ಎಂದು ಆರೋಪಿಸಿದ್ದ ಬಿಜೆಪಿ, ‘ರಾಜ್ಯ ಸರಕಾರದ 2 ವರ್ಷಗಳ ವೈಫಲ್ಯ ಬಗ್ಗೆ ಆರೋಪ ಪಟ್ಟಿ’ ಎಂಬ ಶೀರ್ಷಿಕೆಯ ಅಡಿ ಮಾಧ್ಯಮಗಳಲ್ಲಿ ಪ್ರಚಾರ ಮಾಡಿತ್ತು.







