ದಿಲ್ಲಿಯಲ್ಲಿ ಕಟ್ಟಡ ಕುಸಿತ: ಹೇಗೆ ನಡೆಯುತ್ತದೆ NDRF ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ?

Photo: PTI
ದಕ್ಷಿಣ-ಪಶ್ಚಿಮ ದಿಲ್ಲಿಯ ಸತ್ಯ ನಿಕೇತನದಲ್ಲಿ ರವಿವಾರ (ಸೆಪ್ಟೆಂಬರ್ 6) ಐದು ಅಂತಸ್ತಿನ ಕಟ್ಟಡ ಕುಸಿದು ಬಿದ್ದ ನಂತರ, ಸ್ಥಳದಲ್ಲಿದ್ದ ಶೋಧ ಮತ್ತು ರಕ್ಷಣಾ (SAR) ಕಾರ್ಯಾಚರಣೆಯು ಸುಮಾರು 27 ಗಂಟೆಗಳ ಕಾಲ ನಡೆದು ಮರುದಿನ ಮುಕ್ತಾಯಗೊಂಡಿತು. ಈ ಘಟನೆಯಲ್ಲಿ ಕನಿಷ್ಠ ಏಳು ಜನರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.
1990 ರ ದಶಕದಲ್ಲಿ ನಿರ್ಮಿಸಲಾದ ಈ ಕಟ್ಟಡವು ದಿಲ್ಲಿ ವಿಶ್ವವಿದ್ಯಾಲಯದ ದಕ್ಷಿಣ ಕ್ಯಾಂಪಸ್ ಬಳಿ ಇತ್ತು. ಇಲ್ಲಿ ಹಲವು ವಿದ್ಯಾರ್ಥಿಗಳಿಗೆ ವಸತಿ ಕಲ್ಪಿಸಿದ್ದ ಖಾಸಗಿ ಹಾಸ್ಟೆಲ್ ಕಾರ್ಯಾಚರಿಸುತ್ತಿತ್ತು. ದುರಂತದ ಸ್ಥಳದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಹಾಗೂ ಇತರ ಸಂಸ್ಥೆಗಳು ಸೇರಿ ರಕ್ಷಣಾ ಕಾರ್ಯಾಚರಣೆ ನಡೆಸಿದವು.
1990 ಮತ್ತು 2000 ರ ದಶಕದ ಆರಂಭದಲ್ಲಿ ಭಾರತದಲ್ಲಿ ಸಂಭವಿಸಿದ ಸರಣಿ ನೈಸರ್ಗಿಕ ವಿಕೋಪಗಳ ನಂತರ, ನೈಸರ್ಗಿಕ ಮತ್ತು ಮಾನವ ನಿರ್ಮಿತ ವಿಕೋಪಗಳನ್ನು ಎದುರಿಸಲು 2006 ರಲ್ಲಿ ಎನ್ಡಿಆರ್ಎಫ್ ಸಂಸ್ಥೆಯನ್ನು ವಿಶೇಷ ಕಾರ್ಯಪಡೆಯಾಗಿ ಸ್ಥಾಪಿಸಲಾಯಿತು. ಇದು ಕೇಂದ್ರ ಗೃಹ ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣಕ್ಕೆ ಒಳಪಟ್ಟಿದ್ದು, ಮಹಾನಿರ್ದೇಶಕರ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತದೆ. ಪ್ರಸ್ತುತ ಇದು 16 ಬೆಟಾಲಿಯನ್ ಪಡೆಗಳನ್ನು ಹೊಂದಿದ್ದು, ತುರ್ತು ಸಂದರ್ಭಗಳಲ್ಲಿ ವೇಗವಾಗಿ ಸ್ಪಂದಿಸಲು ಆಯಕಟ್ಟಿನ ವಲಯಗಳಲ್ಲಿ ಪ್ರಾದೇಶಿಕ ಪ್ರತಿಕ್ರಿಯಾ ಕೇಂದ್ರಗಳನ್ನು (RRCs) ತೆರೆದಿದೆ.
ಕಟ್ಟಡ ಕುಸಿತದ ಸಂದರ್ಭಗಳಲ್ಲಿ ಎನ್ಡಿಆರ್ಎಫ್ ಕಾರ್ಯಾಚರಣೆ ನಡೆಸುವ ವಿಧಾನ, ಬಳಸುವ ತಂತ್ರಜ್ಞಾನ ಮತ್ತು ರಾಜ್ಯ ಮಟ್ಟದ ವಿಪತ್ತು ನಿರ್ವಹಣಾ ಪಡೆಗಳ ಅಗತ್ಯದ ಬಗ್ಗೆ ವಿವರ ಇಲ್ಲಿದೆ:
ಕಟ್ಟಡ ಕುಸಿತದ ವೇಳೆ ರಕ್ಷಣಾ ಕಾರ್ಯಾಚರಣೆ:
ಸತ್ಯ ನಿಕೇತನದಲ್ಲಿ ನಡೆದಂತಹ ಕಟ್ಟಡ ಕುಸಿತದ ಘಟನೆಗಳಲ್ಲಿ ಎನ್ಡಿಆರ್ಎಫ್ ನಡೆಸುವ ಕಾರ್ಯಾಚರಣೆಯನ್ನು "ಕುಸಿದ ಕಟ್ಟಡದ ಶೋಧ ಮತ್ತು ರಕ್ಷಣೆ" (CSSR) ಎಂದು ಕರೆಯಲಾಗುತ್ತದೆ. ಬೃಹತ್, ಸಂಕೀರ್ಣವಾದ ಅಥವಾ ಅನೇಕ ಕಟ್ಟಡಗಳು ಕುಸಿದಾಗ ರಕ್ಷಣೆ ಮತ್ತು ಶೋಧ ಕಾರ್ಯಾಚರಣೆಗೆ ಈ ಪದವನ್ನು ಬಳಸಲಾಗುತ್ತದೆ. ಕಟ್ಟಡ ಅಥವಾ ಅದರ ಭಾಗಗಳು ತಮ್ಮ ಸಮತೋಲನವನ್ನು ಕಳೆದುಕೊಂಡು ಬೀಳುವುದನ್ನು ಕುಸಿತ ಎನ್ನಲಾಗುತ್ತದೆ.
ಸಿಎಸ್ಎಸ್ಆರ್ ಕಾರ್ಯಾಚರಣೆಯು ಆಧುನಿಕ ತಂತ್ರಜ್ಞಾನಗಳನ್ನು ಬಳಸಿ, ಅತ್ಯಂತ ಕಡಿಮೆ ಅವಧಿಯಲ್ಲಿ ಕುಸಿದ ಕಟ್ಟಡದ ಇಕ್ಕಟ್ಟಾದ ಜಾಗದಲ್ಲಿ ಸಿಲುಕಿರುವ ಸಂತ್ರಸ್ತರನ್ನು ಪತ್ತೆಹಚ್ಚಿ, ಹೊರತೆಗೆದು ಸುರಕ್ಷಿತ ಸ್ಥಳಕ್ಕೆ ತಲುಪಿಸುವ ಗುರಿ ಹೊಂದಿರುತ್ತದೆ.
ಸಹಾಯದ ಮನವಿ ಮತ್ತು ನಿಯೋಜನೆ: ಎನ್ಡಿಆರ್ಎಫ್ ಪ್ರಮಾಣಿತ ಕಾರ್ಯವಿಧಾನದ ಪ್ರಕಾರ, ಪ್ರಧಾನ ಕಚೇರಿಯ ಆದೇಶ, ಸಂತ್ರಸ್ತ ರಾಜ್ಯ/ಕೇಂದ್ರಾಡಳಿತ ಪ್ರದೇಶ, ಸ್ಥಳೀಯ ಆಡಳಿತದ ಮನವಿ ಅಥವಾ ಬೆಟಾಲಿಯನ್ ಕಮಾಂಡೆಂಟ್ ಅವರ ಆದೇಶದ ಮೇರೆಗೆ ಶೋಧ ಮತ್ತು ರಕ್ಷಣಾ ತಂಡವನ್ನು ನಿಯೋಜಿಸಲಾಗುತ್ತದೆ.
ಎನ್ಡಿಆರ್ಎಫ್ನ ಮಾಜಿ ಡಿಜಿ ಅತುಲ್ ಕರ್ವಾಲ್ ಅವರು ಮಾತನಾಡಿ, "ಪ್ರತಿಯೊಂದು ಬೆಟಾಲಿಯನ್ ತನ್ನ ವ್ಯಾಪ್ತಿಯ ಪ್ರದೇಶದ ಬೆಳವಣಿಗೆಗಳ ಮೇಲೆ ನಿರಂತರ ನಿಗಾ ವಹಿಸಿರುತ್ತದೆ. ಕಟ್ಟಡ ಕುಸಿತದಂತಹ ದುರಂತ ಸಂಭವಿಸಿದರೆ, ನಾವು ಅಧಿಕೃತ ಮನವಿಗಾಗಿ ಕಾಯುವುದಿಲ್ಲ. ಎಷ್ಟು ಬೇಗ ತಲುಪುತ್ತೇವೋ ಅಷ್ಟು ಹೆಚ್ಚು ಜೀವಗಳನ್ನು ಉಳಿಸಬಹುದು ಎಂಬ ಕಾರಣಕ್ಕೆ ತಕ್ಷಣವೇ ಕಾರ್ಯಾಚರಣೆಗೆ ಹೊರಡುತ್ತೇವೆ ಅಥವಾ ಅಧಿಕಾರಿಗಳನ್ನು ಸಂಪರ್ಕಿಸುತ್ತೇವೆ" ಎಂದು ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಉಲ್ಲೇಖಿಸಿದೆ.
ಯಾವುದೇ ಘಟನೆಯ ಕಾರ್ಯಾಚರಣೆಯ ಸಂಕೀರ್ಣತೆ ಅಥವಾ ಅಪಾಯದಲ್ಲಿರುವ ಜೀವಗಳ ಸಂಖ್ಯೆಯನ್ನು ನೋಡಿ ಎನ್ಡಿಆರ್ಎಫ್ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಮನವಿ ಬಂದ ತಕ್ಷಣ, ಬೆಟಾಲಿಯನ್ ಪ್ರಧಾನ ಕಚೇರಿಯ ಎರಡು ರಕ್ಷಣಾ ತಂಡಗಳು ಮತ್ತು ಪ್ರಾದೇಶಿಕ ಕೇಂದ್ರದ (RRC) ಒಂದು ತಂಡವು ಅಗತ್ಯ ಉಪಕರಣಗಳೊಂದಿಗೆ ತಕ್ಷಣವೇ ಹೊರಡಲು ಸಿದ್ಧವಾಗಿರುತ್ತವೆ. ಈ ಪಡೆಗಳು 30 ನಿಮಿಷಗಳ ಒಳಗೆ ದುರಂತದ ಸ್ಥಳಕ್ಕೆ ಪ್ರಯಾಣ ಬೆಳೆಸುತ್ತವೆ.
ಪರಿಶೀಲನೆ: ದುರಂತದ ಸ್ಥಳಕ್ಕೆ ತಲುಪಿದ ತಕ್ಷಣ, ಪರಿಸ್ಥಿತಿಗೆ ಅನುಗುಣವಾಗಿ ರಕ್ಷಣಾ ತಂಡವು ಕಾರ್ಯಾಚರಣೆಯ ಕೇಂದ್ರವನ್ನು ಸ್ಥಾಪಿಸುತ್ತದೆ. ತಂಡದ ಕಮಾಂಡರ್ ಸ್ಥಳದಲ್ಲಿರುವ ಅಪಾಯಗಳನ್ನು ತಕ್ಷಣವೇ ಪರಿಶೀಲಿಸುತ್ತಾರೆ. ಸಾರ್ವಜನಿಕರು ಅಥವಾ ತರಬೇತಿ ಇಲ್ಲದವರು ಕಾರ್ಯಾಚರಣೆಗೆ ಅಡ್ಡಿಪಡಿಸದಂತೆ ಸ್ಥಳದ ಸುತ್ತಲೂ ತಡೆಗೋಡೆಗಳನ್ನು ನಿರ್ಮಿಸಿ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲಾಗುತ್ತದೆ.
ಸತ್ಯ ನಿಕೇತನದ ದುರಂತ ಸ್ಥಳದಲ್ಲಿ ಎನ್ಡಿಆರ್ಎಫ್ ಪಡೆಗಳು ದಿಲ್ಲಿ ಪೊಲೀಸ್, ದಿಲ್ಲಿ ಅಗ್ನಿಶಾಮಕ ಸೇವೆ ಮತ್ತು ದಿಲ್ಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದಂತಹ ಸಂಸ್ಥೆಗಳೊಂದಿಗೆ ಸೇರಿ ರಕ್ಷಣಾ ಕಾರ್ಯಾಚರಣೆ ನಡೆಸಿದವು. ಸಮನ್ವಯದ ಕುರಿತು ಮಾತನಾಡಿದ ಅತುಲ್ ಕರ್ವಾಲ್, ಸ್ಥಳದಲ್ಲಿ ಈಗಾಗಲೇ ಕಾರ್ಯಾಚರಣೆಯನ್ನು ನಿರ್ವಹಿಸುತ್ತಿರುವ ಸ್ಥಳೀಯ ಅಧಿಕಾರಿಗೆ ಎನ್ಡಿಆರ್ಎಫ್ ತನ್ನ ವರದಿಯನ್ನು ನೀಡುತ್ತದೆ ಎಂದು ಹೇಳಿದ್ದಾರೆ.
"ಎನ್ಡಿಆರ್ಎಫ್ ಬಳಿ ಇರುವ ವಿಶೇಷ ತಂತ್ರಜ್ಞಾನ ಮತ್ತು ನೈಪುಣ್ಯತೆಗೆ ಗೌರವವಿದೆ. ಕಾರ್ಯಾಚರಣೆಯ ಸ್ಥಳಕ್ಕೆ ತೆರಳಿ ತಕ್ಷಣವೇ ಎಲ್ಲಾ ಆಡಳಿತವನ್ನು ಎನ್ಡಿಆರ್ಎಫ್ ತನ್ನ ಕೈಗೆ ತೆಗೆದುಕೊಳ್ಳುವುದಿಲ್ಲ. ಸಂದರ್ಭಕ್ಕೆ ಅನುಗುಣವಾಗಿ, ಇತರ ಸಂಸ್ಥೆಗಳ ಸಾಮರ್ಥ್ಯವನ್ನು ಬಳಸಿಕೊಂಡು ಸಮನ್ವಯದೊಂದಿಗೆ ಕೆಲಸ ಮಾಡಲಾಗುತ್ತದೆ" ಎಂದು ಅವರು ಹೇಳಿದರು.
ಕಟ್ಟಡದ ಭದ್ರತೆ ಮತ್ತು ಪರಿಶೀಲನೆ: ಕಟ್ಟಡಗಳ ವಿನ್ಯಾಸವನ್ನು ಪರಿಶೀಲಿಸುವ ವಿಶೇಷ ತರಬೇತಿ ಪಡೆದ ಇಂಜಿನಿಯರ್ಗಳು ಉಳಿದಿರುವ ಕಟ್ಟಡದ ಭಾಗಗಳ ಸ್ಥಿರತೆ, ಗ್ಯಾಸ್ ಸೋರಿಕೆ ಅಥವಾ ವಿದ್ಯುತ್ ವೈರ್ಗಳಂತಹ ಅಪಾಯಗಳನ್ನು ಪರಿಶೀಲಿಸುತ್ತಾರೆ. ಕಟ್ಟಡವು ತೀರಾ ಅಪಾಯಕಾರಿ ಸ್ಥಿತಿಯಲ್ಲಿದೆ ಎಂದು ತಿಳಿದುಬಂದಲ್ಲಿ, ತಾತ್ಕಾಲಿಕ ಆಸರೆ ನೀಡಿ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವವರೆಗೆ ರಕ್ಷಣಾ ಪಡೆಗಳು ಒಳಗೆ ಪ್ರವೇಶಿಸುವುದಿಲ್ಲ. ಬಿರುಕು ಬಿಟ್ಟ ಗೋಡೆಗಳು ಅಥವಾ ಕುಸಿಯುವ ಹಂತದಲ್ಲಿರುವ ಕಾಂಕ್ರೀಟ್ ಭಾಗಗಳಿಗೆ ತಕ್ಷಣವೇ ಆಸರೆ ನೀಡಲಾಗುತ್ತದೆ.
ಪ್ರವೇಶ ಮತ್ತು ಸಂತ್ರಸ್ತರ ರಕ್ಷಣೆ: ಬಹುಮಹಡಿ ಕಟ್ಟಡಗಳು ಕುಸಿದಾಗ ಹಲವು ಮಾರ್ಗಗಳ ಮೂಲಕ ಒಳಪ್ರವೇಶಿಸುವುದು ಹೆಚ್ಚು ಸೂಕ್ತ. ಒಂದು ತಂಡ ಮಾಡುವ ಕೆಲಸದಿಂದ ಇನ್ನೊಂದು ತಂಡಕ್ಕೆ ಅಪಾಯವಾಗದಂತೆ ಕಮಾಂಡರ್ ಮತ್ತು ಸುರಕ್ಷತಾ ಅಧಿಕಾರಿ ನಿಗಾ ವಹಿಸುತ್ತಾರೆ. ಕಾರ್ಯಾಚರಣೆಯ ಸಮಯದಲ್ಲಿ ಹಿಟಾಚಿ, ಜೆಸಿಬಿ, ಬುಲ್ಡೋಜರ್ ಮತ್ತು ಕ್ರೇನ್ಗಳಂತಹ ಬೃಹತ್ ಯಂತ್ರಗಳ ನೆರವನ್ನು ಸ್ಥಳೀಯ ಆಡಳಿತದಿಂದ ಪಡೆಯಲಾಗುತ್ತದೆ.
ಸಂತ್ರಸ್ತರನ್ನು ತಲುಪಲು ರಕ್ಷಣಾ ತಂಡವು ಗೋಡೆ, ಶೀಟ್ ಅಥವಾ ಛಾವಣಿಯನ್ನು ಒಡೆಯಬೇಕಾಗಿ ಬಂದರೆ, ಕಟ್ಟಡಕ್ಕೆ ಆಸರೆಯಾಗಿರುವ ಮುಖ್ಯ ಗೋಡೆಗಳಿಗೆ ಹಾನಿಯಾಗದಂತೆ ನೋಡಿಕೊಳ್ಳಬೇಕು. ಸಂತ್ರಸ್ತರಿಗೆ ಹೆಚ್ಚಿನ ಗಾಯಗಳಾಗದಂತೆ ತಡೆಯಲು ಅವರ ಸ್ಥಿತಿಯನ್ನು ಪರಿಶೀಲಿಸಿ ಸೂಕ್ತ ರಕ್ಷಣಾ ವಿಧಾನವನ್ನು ಆಯ್ಕೆ ಮಾಡಲಾಗುತ್ತದೆ.
ಸಿಲುಕಿರುವ ಜನರನ್ನು ತುರ್ತು ವೈದ್ಯಕೀಯ ಸೇವೆಗೆ ಒಪ್ಪಿಸುವ ಮೊದಲು ರಕ್ಷಣಾ ಸಿಬ್ಬಂದಿ ಅವರಿಗೆ ಪ್ರಥಮ ಚಿಕಿತ್ಸೆ ನೀಡುತ್ತಾರೆ. ಯಾರಾದರೂ ಜೀವಂತವಾಗಿರುವುದು ಕಂಡುಬಂದರೆ, ರಕ್ಷಣಾ ತಂಡದೊಂದಿಗೆ ವೈದ್ಯಕೀಯ ಸಿಬ್ಬಂದಿ ಸಹ ಸ್ಥಳಕ್ಕೆ ತೆರಳುತ್ತಾರೆ. ಸಂತ್ರಸ್ತರನ್ನು ಹೊರತೆಗೆದ ತಕ್ಷಣ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ರವಾನಿಸಲಾಗುತ್ತದೆ.
ಸಂತ್ರಸ್ತರನ್ನು ಹೊರತೆಗೆಯುವವರೆಗೆ ಅಥವಾ ಎಲ್ಲರ ಮಾಹಿತಿ ಸಿಗುವವರೆಗೆ ಮಾತ್ರ ಶೋಧ ಕಾರ್ಯಾಚರಣೆಯ ಭಾಗವಾಗಿ ಕಟ್ಟಡದ ಅವಶೇಷಗಳನ್ನು ತೆರವುಗೊಳಿಸಲಾಗುತ್ತದೆ. ಅವಶೇಷಗಳನ್ನು ತೆರವುಗೊಳಿಸುವಾಗ ಮತ್ತೆ ಕಟ್ಟಡ ಕುಸಿಯದಂತೆ ಅಥವಾ ಸಂತ್ರಸ್ತರಿಗೆ ತೊಂದರೆಯಾಗದಂತೆ ಎಚ್ಚರ ವಹಿಸಲಾಗುತ್ತದೆ. ಜನರು ಸಿಲುಕಿರುವ ಸಾಧ್ಯತೆ ಹೆಚ್ಚಿರುವ ಸ್ಥಳಗಳಲ್ಲಿ ಮೊದಲ ಆದ್ಯತೆಯಾಗಿ ಅವಶೇಷಗಳನ್ನು ತೆರವು ಮಾಡಲಾಗುತ್ತದೆ.
ಎಲ್ಲಾ ಸಂತ್ರಸ್ತರನ್ನು ರಕ್ಷಿಸಿದ ನಂತರ ಮತ್ತು ಇನ್ಯಾರೂ ಸಿಲುಕಿಲ್ಲ ಎಂದು ಖಚಿತಪಟ್ಟ ಮೇಲೆ, ಸಂಬಂಧಪಟ್ಟ ರಾಜ್ಯ ಅಥವಾ ಜಿಲ್ಲಾಡಳಿತದೊಂದಿಗೆ ಸಮಾಲೋಚಿಸಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಮುಕ್ತಾಯಗೊಳಿಸಲಾಗುತ್ತದೆ.
ಬಳಸುವ ತಂತ್ರಜ್ಞಾನಗಳು
ಎನ್ಡಿಆರ್ಎಫ್ ಇನ್ಸ್ಪೆಕ್ಟರ್ ಜನರಲ್ ನರೇಂದ್ರ ಸಿಂಗ್ ಬುಂದೇಲಾ ಅವರು ಮಾತನಾಡಿ, ಸತ್ಯ ನಿಕೇತನದಲ್ಲಿ ರಕ್ಷಣಾ ತಂಡಗಳು ಕಾಂಕ್ರೀಟ್ ಚಪ್ಪಡಿಗಳನ್ನು ತೆರವುಗೊಳಿಸಲು ಮತ್ತು ಕುಸಿದ ಭಾಗಗಳಿಗೆ ಆಸರೆ ನೀಡಲು ಕಟಿಂಗ್ ಸಿಸ್ಟಮ್ಗಳು, ಲಿಫ್ಟಿಂಗ್ ಉಪಕರಣಗಳು, ಇನ್ಫ್ಲೇಟಬಲ್ ಬ್ಯಾಗ್ಗಳು ಮತ್ತು ಹೈಡ್ರಾಲಿಕ್ ಉಪಕರಣಗಳಂತಹ ವಿಶೇಷ ತಂತ್ರಜ್ಞಾನಗಳನ್ನು ಬಳಸಲಾಗಿದೆ ಎಂದು ತಿಳಿಸಿದರು.
ಅವಶೇಷಗಳ ಅಡಿಯಲ್ಲಿ ಸಿಲುಕಿರುವವರನ್ನು ಪತ್ತೆಹಚ್ಚಲು ಶ್ವಾನ ಪಡೆ ಮತ್ತು 'ಲೈಫ್ ಡಿಟೆಕ್ಟರ್' ಸಾಧನಗಳನ್ನು ಬಳಸಲಾಗಿದೆ ಎಂದು ಬುಂದೇಲಾ ಹೇಳಿದರು. ಈ ಕುರಿತು ವಿವರಿಸಿದ ಅತುಲ್ ಕರ್ವಾಲ್, ಲೈಫ್ ಡಿಟೆಕ್ಟರ್ಗಳು ಧ್ವನಿ ತರಂಗಗಳನ್ನು ಗ್ರಹಿಸುವ ಸಾಧನಗಳಾಗಿದ್ದು, ಇವುಗಳನ್ನು ಹಲವು ಸ್ಥಳಗಳಲ್ಲಿ ಇರಿಸಲಾಗುತ್ತದೆ. "ಇವು ಹಾರ್ಟ್ಬೀಟ್ ಅಥವಾ ಅವಶೇಷಗಳ ಅಡಿಯಿಂದ ಬರುವ ಸಣ್ಣ ಶಬ್ದವನ್ನು ಸಹ ಪತ್ತೆಹಚ್ಚುತ್ತವೆ. ಈ ಸಾಧನಗಳು ಸರಿಯಾಗಿ ಕೆಲಸ ಮಾಡಲು ಕಾರ್ಯಾಚರಣೆಯ ಸ್ಥಳದಲ್ಲಿದ್ದ ಇತರರು ನಿಶ್ಶಬ್ದರಾಗಿದ್ದು ಸಹಕರಿಸಬೇಕಾಗುತ್ತದೆ" ಎಂದು ಅವರು ಹೇಳಿದರು.
ದಿಲ್ಲಿಗೆ ಬೇಕಿದೆಯೇ ಎಸ್ಡಿಆರ್ಎಫ್?
ಸತ್ಯ ನಿಕೇತನದ ರಕ್ಷಣಾ ಕಾರ್ಯಾಚರಣೆಯಲ್ಲಿ ಎದುರಾದ ಪ್ರಮುಖ ಟೀಕೆಯೆಂದರೆ ತುರ್ತು ಸ್ಪಂದನೆಯಲ್ಲಿ ಉಂಟಾದ ವಿಳಂಬ. ಇತ್ತೀಚಿನ ಘಟನೆಗಳು ದಿಲ್ಲಿಗೆ ತನ್ನದೇ ಆದ ಸ್ವಂತ ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಅಗತ್ಯವಿದೆ ಎಂಬುದನ್ನು ತೋರಿಸುತ್ತವೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ನೀತಿಯ ಪ್ರಕಾರ ಎಸ್ಡಿಆರ್ಎಫ್ ಸ್ಥಾಪಿಸುವುದು ಮತ್ತು ಉಪಕರಣಗಳನ್ನು ಒದಗಿಸುವುದು ಆಯಾ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದ ಜವಾಬ್ದಾರಿಯಾಗಿದೆ ಎಂದು ಕೇಂದ್ರ ಗೃಹ ರಾಜ್ಯ ಸಚಿವ ನಿತ್ಯಾನಂದ್ ರಾಯ್ ಅವರು ಸಂಸತ್ತಿಗೆ ತಿಳಿಸಿದ್ದರು.
ನೈಸರ್ಗಿಕ ಮತ್ತು ಮಾನವ ನಿರ್ಮಿತ ವಿಕೋಪಗಳನ್ನು ಎದುರಿಸಲು ದಿಲ್ಲಿ ಸರ್ಕಾರವು ನಾಲ್ಕು ಬೆಟಾಲಿಯನ್ಗಳ ಎಸ್ಡಿಆರ್ಎಫ್ ಪಡೆಯನ್ನು ರಚಿಸಲು ಯೋಜಿಸುತ್ತಿದೆ ಎಂದು ಪಿಟಿಐ ವರದಿ ಮಾಡಿತ್ತು. ದಿಲ್ಲಿಯ ದೊಡ್ಡ ಜನಸಂಖ್ಯೆ, ಸರಣಿ ಅಪಘಾತಗಳು ಮತ್ತು ಭೂಕಂಪದ ಅಪಾಯವಿರುವ 'ಸಿಸ್ಮಿಕ್ ಝೋನ್-IV' ವ್ಯಾಪ್ತಿಯಲ್ಲಿ ನಗರವಿರುವುದನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ.
ಪೊಲೀಸ್, ಅರೆಸೈನಿಕ ಪಡೆ ಮತ್ತು ಅಗ್ನಿವೀರರು ಸೇರಿದಂತೆ ಅರ್ಹ ಅಭ್ಯರ್ಥಿಗಳನ್ನು ನೇರವಾಗಿ ನೇಮಕ ಮಾಡಿಕೊಂಡು ಪಡೆಯನ್ನು ಸಜ್ಜುಗೊಳಿಸುವ ಯೋಜನೆ ಇದೆ ಎಂದು ದಿಲ್ಲಿ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ʼದಿ ಇಂಡಿಯನ್ ಎಕ್ಸ್ಪ್ರೆಸ್ʼ ವರದಿ ಮಾಡಿದೆ.
ಕೃಪೆ: indianexpress.com






