ದಿಲ್ಲಿಯ EV ನೀತಿಯಿಂದ ಶೇ.65ರಷ್ಟು ಖರೀದಿದಾರರಿಗೆ ಅಪಾಯ, ಚೀನಾದ ಮೇಲೆ ಅವಲಂಬನೆ

ಸಾಂದರ್ಭಿಕ ಚಿತ್ರ | Photo Credit : magnific.com
ಪ್ರಸ್ತಾಪಿತ ಎಲೆಕ್ಟ್ರಿಕಲ್ ವೆಹಿಕಲ್ ನೀತಿ 2.0 ಪ್ರಕಾರ 2028 ಎಪ್ರಿಲ್ ನಿಂದ ದಿಲ್ಲಿಯಲ್ಲಿ ಹೊಸ ನೋಂದಣಿಗಳಿಗೆ ವಿದ್ಯುತ್ ದ್ವಿಚಕ್ರ ವಾಹನಗಳನ್ನು ಮಾತ್ರ ಅನುಮತಿಸಲಾಗುತ್ತದೆ.
ದಿಲ್ಲಿ ಸರ್ಕಾರ ಎಪ್ರಿಲ್ 2028ರಿಂದ ಹೊಸ ICE (ಇಂಟರ್ನಲ್ ಕಂಬಷ್ಚನ್ ಎಂಜಿನ್) ದ್ವಿಚಕ್ರ ವಾಹನಗಳ ನೋಂದಣಿ ನಿಷೇಧಿಸಲು ಪ್ರಸ್ತಾಪಿಸಿದೆ. ತಯಾರಕರು ಮತ್ತು ಸಂಬಂಧಿತರಿಂದ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ತಯಾರಕರ ಪ್ರಕಾರ, ಸುಮಾರು ಶೇ. 65ರಷ್ಟು ದ್ವಿಚಕ್ರ ವಾಹನ ಖರೀದಿದಾರರನ್ನು ಹೊಂದಿರುವ ಮಾರುಕಟ್ಟೆ ದುಪ್ಪಟ್ಟಾಗಿಬಿಡುತ್ತದೆ. ಭಾರತ ಇನ್ನೂ ಆಮದು-ಅವಲಂಬಿತ ಬ್ಯಾಟರಿ ಮತ್ತು ರೇರ್ ಅರ್ತ್ ಲೋಹಗಳ ಪೂರೈಕೆಗೆ ಚೀನಾವನ್ನು ಅವಲಂಬಿಸಿದೆ. ಈ ಪ್ರಮಾಣದಲ್ಲಿ ಪರಿವರ್ತನೆಯನ್ನು ಬೆಂಬಲಿಸಲು ದೇಶ ಇನ್ನೂ ಸಜ್ಜಾಗಿಲ್ಲ ಎಂದು ಅವರು ವಾದಿಸಿದ್ದಾರೆ.
ಪ್ರಸ್ತಾಪಿತ ಎಲೆಕ್ಟ್ರಿಕಲ್ ವೆಹಿಕಲ್ ನೀತಿ 2.0 ಪ್ರಕಾರ, 2028 ಎಪ್ರಿಲ್ ನಿಂದ ದಿಲ್ಲಿಯಲ್ಲಿ ಹೊಸ ನೋಂದಣಿಗಳಿಗೆ ವಿದ್ಯುತ್ ದ್ವಿಚಕ್ರ ವಾಹನಗಳನ್ನು ಮಾತ್ರ ಅನುಮತಿಸಲಾಗುತ್ತದೆ. ಅದೇ ರೀತಿ 2027 ಜನವರಿಯಿಂದ ಸಿಎನ್ಜಿ ಆಟೋಗಳನ್ನು ನಿಷೇಧಿಸಲಾಗುವುದು. ಸರ್ಕಾರವು ಎಪ್ರಿಲ್ 11ರಂದು ಸಾರ್ವಜನಿಕರಿಂದ ಸಲಹೆಗಳು ಮತ್ತು ಪ್ರತಿಕ್ರಿಯೆಗಾಗಿ ಕರಡು ನೀತಿಯನ್ನು ಬಿಡುಗಡೆ ಮಾಡಿತ್ತು. ಈ ಅವಧಿ ಇನ್ನೂ ಮೂರು ದಿನಗಳಲ್ಲಿ ಮುಕ್ತಾಯಗೊಳ್ಳಲಿದೆ. ಒಮ್ಮೆ ಜಾರಿಗೆ ಬಂದ ನಂತರ ನೀತಿ 2030ರವರೆಗೆ ಮಾನ್ಯವಾಗಿರುತ್ತದೆ. ಪ್ರಸ್ತುತ ಅಸ್ತಿತ್ವದಲ್ಲಿರುವ ನೀತಿಯನ್ನು ಜೂನ್ 30ರವರೆಗೆ ವಿಸ್ತರಿಸಲಾಗಿದೆ.
ವರದಿಗಳ ಪ್ರಕಾರ, ಸಾರಿಗೆ ಇಲಾಖೆಯು ಸಂಬಂಧಿತರು ಮತ್ತು ಒರಿಜಿನಲ್ ಎಕ್ವಿಪ್ಮೆಂಟ್ ಮ್ಯಾನುಫ್ಯಾಕ್ಚರರ್ ಗಳ (OEMs) ಜೊತೆ ಅಭಿಪ್ರಾಯ ಮತ್ತು ಸಲಹೆಗಳನ್ನು ಚರ್ಚಿಸುತ್ತಿದೆ. ICE ದ್ವಿಚಕ್ರ ವಾಹನಗಳನ್ನು ಹಂತ ಹಂತವಾಗಿ ರದ್ದುಗೊಳಿಸಲು ಸರ್ಕಾರ ಪ್ರಸ್ತಾಪಿಸಿರುವ ಆದೇಶಗಳ ಬಗ್ಗೆ ಭಾರತದ ಅಟೋಮೊಬೈಲ್ ತಯಾರಕರ ಸಂಘ ಸೇರಿದಂತೆ ಉನ್ನತ ಉದ್ಯಮ ಸಂಸ್ಥೆಗಳು ಕಳವಳ ವ್ಯಕ್ತಪಡಿಸಿವೆ.
ICE ವಾಹನಗಳನ್ನು ನಿಷೇಧಿಸುವ ಆದೇಶವು ಪ್ರತಿಕೂಲ ಪರಿಣಾಮ ಬೀರುತ್ತದೆ. ಗ್ರಾಹಕರ ಕಲ್ಯಾಣ ಮತ್ತು ಆರ್ಥಿಕ ಸ್ಥಿರತೆಗೆ ತೊಂದರೆಯಾಗಲಿದೆ. ಶೇ 65ರಷ್ಟು ಗ್ರಾಹಕರು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ದ್ವಿಚಕ್ರ ವಾಹನ ಉದ್ಯಮ ಹೇಳಿದೆ. “ಮೋಟಾರ್ ಸೈಕಲ್ ಖರೀದಿಸುವ ಶೇ 65ರಷ್ಟು ಗ್ರಾಹಕರಿಗೆ ವೈಯಕ್ತಿಕ ಪ್ರಯಾಣಕ್ಕೆ ಸೂಕ್ತ ಆಯ್ಕೆ ಲಭ್ಯವಿರುವುದಿಲ್ಲ. ಅವರಲ್ಲಿ ಹೆಚ್ಚಿನವರು ಸಾಮಾನ್ಯ ನಾಗರಿಕರು ಮತ್ತು ಜೀವನೋಪಾಯಕ್ಕಾಗಿ ದ್ವಿಚಕ್ರ ವಾಹನದ ಅಗತ್ಯವಿರುತ್ತದೆ” ಎಂದು ಸರ್ಕಾರಕ್ಕೆ ಸಲ್ಲಿಸಲಾದ ಸಂವಹನದಲ್ಲಿ ಹೇಳಲಾಗಿದೆ.
ಬಹಳಷ್ಟು ಮಂದಿಗೆ ದ್ವಿಚಕ್ರ ವಾಹನ ಕೇವಲ ವಾಹನಕ್ಕಿಂತ ಹೆಚ್ಚಾಗಿ ಆರ್ಥಿಕ ಜೀವನಾಡಿಯಾಗಿದೆ. ದಿಲ್ಲಿ-ಎನ್ಸಿಆರ್ನಲ್ಲಿ 300 ಸ್ವತಂತ್ರ ವರ್ಕ್ಶಾಪ್ಗಳಿವೆ. ಸುಮಾರು 10,000 ಮೆಕಾನಿಕ್ ಗಳಿದ್ದಾರೆ. ಈ ಎಲ್ಲಾ ಉದ್ಯಮಗಳು ತಕ್ಷಣವೇ ಅಪ್ ಗ್ರೇಡ್ ಆಗಲು ಸಾಧ್ಯವಿಲ್ಲ. ಎಲೆಕ್ಟ್ರಿಕ್ ವಾಹನಗಳಿಗೆ ಅಗತ್ಯವಿರುವ ವಿಶೇಷ ಡಯಗ್ನಸ್ಟಿಕ್ ಸಾಫ್ಟ್ವೇರ್ ಮತ್ತು ಹೈ ವೋಲ್ಟೇಜ್ ಸುರಕ್ಷತಾ ಸಾಧನಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ” ಎಂದು ತಜ್ಞರು ಸರ್ಕಾರಕ್ಕೆ ಅಭಿಪ್ರಾಯ ತಿಳಿಸಿದ್ದಾರೆ.
ಅನೌಪಚಾರಿಕ ವಲಯದಲ್ಲಿ ಇದು ವ್ಯಾಪಕ ಉದ್ಯಮ ವೈಫಲ್ಯಕ್ಕೆ ಕಾರಣವಾಗಬಹುದು. ತಕ್ಷಣದ ಪರಿವರ್ತನೆ ಎಂದರೆ ಅನೇಕ ಮೈಕ್ರೋ ಉದ್ಯಮಿಗಳು, ವರ್ಕ್ಶಾಪ್ಗಳು ಮತ್ತು ಮೆಕಾನಿಕ್ಗಳು ಹೊಸ ಸಾಧನಗಳು ಹಾಗೂ ಮೂಲಸೌಕರ್ಯಗಳಿಗೆ ಹೊಂದಿಕೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿ ಗ್ರಾಹಕರ ಅನುಭವವೂ ಉತ್ತಮವಾಗಿರಲು ಸಾಧ್ಯವಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
“ಹೆಚ್ಚಿನ ಬೇಡಿಕೆಯ ಬಳಕೆದಾರರಿಗೆ ಪ್ರಸ್ತುತ EV ತಂತ್ರಜ್ಞಾನವು ಅಗ್ಗದ ಬೆಲೆಗೆ ಸಿಗುವುದಿಲ್ಲ. ದಿಲ್ಲಿ ಮತ್ತು ಭಾರತದಲ್ಲಿ BS6 ಕಾಂಪ್ಲಿಯಂಟ್ ICE ದ್ವಿಚಕ್ರ ವಾಹನಗಳನ್ನು ನಿಷೇಧಿಸುವುದರಿಂದ ಗ್ರಾಹಕರಿಗೆ ತೊಂದರೆಯಾಗಲಿದೆ. ದೇಶೀಯ ಬ್ಯಾಟರಿ ದೈತ್ಯ ಕಂಪನಿಗಳು 75,000 ಕೋಟಿ ರೂ.ಗೂ ಹೆಚ್ಚು ಹೂಡಿಕೆ ಮಾಡಿದ್ದರೂ, ಪ್ರಸ್ತುತ ತಂತ್ರಜ್ಞಾನವು ಚೀನಾದ ಬ್ಯಾಟರಿ ತಯಾರಕರಿಗೆ ಹೋಲಿಸಿದರೆ ಕಾರ್ಯಕ್ಷಮತೆ ಮತ್ತು ಸುರಕ್ಷತಾ ಮಾನದಂಡಗಳ ವಿಷಯದಲ್ಲಿ ಹಿಂದುಳಿದಿದೆ” ಎಂದು ಕೈಗಾರಿಕಾ ಸಂಸ್ಥೆಗಳು ಹೇಳಿವೆ.
SIAM (ಭಾರತೀಯ ಅಟೋಮೊಬೈಲ್ ತಯಾರಕರ ಸಮಾಜ) ಪ್ರಕಾರ, ಪ್ರಸ್ತುತ ಚೀನಾ ಅನೋಡ್ನ ಶೇ 90ರಷ್ಟು ಮತ್ತು ಕ್ಯಾಥೋಡ್ ಉತ್ಪಾದನೆಯ ಶೇ 85ರಷ್ಟನ್ನು ನಿಯಂತ್ರಿಸುತ್ತದೆ. ಹೀಗಾಗಿ ಸ್ಥಳೀಯ ಬ್ಯಾಟರಿಗಳ ವೆಚ್ಚವು ಚೀನಾದ ಆಮದು ನಿಯಂತ್ರಣ ಮತ್ತು ಬೆಲೆ ಬದಲಾವಣೆಗಳ ಮೇಲೆ ಅವಲಂಬಿತವಾಗಲಿದೆ. ಇ-ಬೈಕ್ಗಳಲ್ಲಿ ಮೋಟಾರ್ಗೆ ಬಹುತೇಕ ಹೆವಿ ರೇರ್ ಅರ್ತ್ ಮ್ಯಾಗ್ನೆಟ್ಗಳ (HRE) ಅಗತ್ಯವಿರುತ್ತದೆ. ICE ವಾಹನಗಳಿಗೆ HRE ಮತ್ತು ಲೈಟ್ ರೇರ್ ಅರ್ತ್ (LRE) ಮ್ಯಾಗ್ನೆಟ್ಗಳನ್ನು ಪ್ರಮುಖವಾಗಿ ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಚೀನಾ ಈ ವಿಭಾಗದಲ್ಲಿ ಶೇ 95ರಷ್ಟು ಉತ್ಪಾದನೆಯನ್ನು ನಿಯಂತ್ರಿಸುತ್ತಿದೆ.
ಉದ್ಯಮ ಪ್ರತಿನಿಧಿಗಳ ಪ್ರಕಾರ, EVಗಳಿಗೆ ಸ್ಥಳೀಯ ಪೂರೈಕೆ ಪರಿಸರ ವ್ಯವಸ್ಥೆ ನಿರ್ಮಿಸಲು ಸಾಕಷ್ಟು ಸಮಯ ನೀಡಬೇಕಿದೆ. ಬಲವಂತದ ಬದಲಾವಣೆ ಸ್ವಾವಲಂಬನೆಯನ್ನು ಕಡಿಮೆ ಮಾಡುತ್ತದೆ. ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳೇ ಭಾರತದಲ್ಲಿ ಶೇ 71ರಷ್ಟು ವಿದ್ಯುತ್ ಉತ್ಪಾದಿಸುತ್ತವೆ. ಸೌರ ಮತ್ತು ಪವನ ಶಕ್ತಿ ಶೇ 13ರಷ್ಟೇ ಇವೆ. ಹೀಗಾಗಿ ದಿಲ್ಲಿಯಲ್ಲಿ EV ಬಳಕೆಗೆ ದೇಶದ ಮತ್ತೊಂದು ಭಾಗದಲ್ಲಿ ಇಂಗಾಲ ಹೊರಸೂಸುವಿಕೆ ಮಾಡಬೇಕಾಗುತ್ತದೆ.
ಸಾರಿಗೆ ಇಲಾಖೆಯ ಮಾಜಿ ಉಪ ನಿರ್ದೇಶಕ ಅನಿಲ್ ಚಿಕ್ಕರ ಅವರ ಪ್ರಕಾರ, ಸಂಪೂರ್ಣ ನಿರ್ಬಂಧವನ್ನು ಮರುಪರಿಶೀಲಿಸಬೇಕಾಗಬಹುದು. ದಿಲ್ಲಿಯಲ್ಲಿ ಈಗಾಗಲೇ ವಿದ್ಯುತ್ ವಾಹನಗಳ ಅಳವಡಿಕೆ ಹೆಚ್ಚುತ್ತಿದೆ. ಪ್ರೋತ್ಸಾಹಕಗಳೂ ಸಿಗುತ್ತಿವೆ. ಕಟ್ಟುನಿಟ್ಟಾದ ಸಮಯ ನಿಗದಿಪಡಿಸುವ ಬದಲು ಚಾರ್ಜಿಂಗ್ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ಅಗತ್ಯವಿದೆ.






