ದಿಲ್ಲಿಯ ಸಿಎಂ ಬಂಗಲೆಗೆ ಕಾಯಕಲ್ಪ; ಇದನ್ನು ‘ಶಾಪಗ್ರಸ್ತ’ ಕಟ್ಟಡ ಎಂದು ಹೇಳುತ್ತಿರುವುದೇಕೆ?

Photo Credit : hindustantimes.com
ದಿಲ್ಲಿ ರಾಜಕೀಯ ವಲಯದಲ್ಲಿ ‘33 ಶ್ಯಾಮ್ ನಾಥ್ ಮಾರ್ಗ್ ಎಂಬ ವಿಳಾಸವು ದಶಕಗಳಿಂದಲೂ ಒಂದು ಅಪಶಕುನದ ಸಂಕೇತ ಎಂದೇ ಬಿಂಬಿತವಾಗಿದೆ. ದುರಾದೃಷ್ಟ ಮತ್ತು ಸಂಕಷ್ಟಗಳ ಕಥೆಗಳನ್ನೇ ಹೊದ್ದುಕೊಂಡಿರುವ ಈ ಸರ್ಕಾರಿ ಬಂಗಲೆಯಿಂದ ಸಚಿವರು ಮತ್ತು ಹಿರಿಯ ಅಧಿಕಾರಿಗಳು ಬಹುಕಾಲದಿಂದಲೂ ದೂರವೇ ಉಳಿದಿದ್ದರು. ಆದರೆ, ಈಗ ದಿಲ್ಲಿ ಸರ್ಕಾರವು ಈ ವಾಸ್ತುದೋಷಗಳ ಕಥೆಗಳಿಗೆ ಶಾಶ್ವತ ಮುಕ್ತಿ ನೀಡಲು ಮುಂದಾಗಿದೆ. ವಸಾಹತುಶಾಹಿ ಕಾಲದ ಈ ಹಳೆಯ ಬಂಗಲೆಯನ್ನು ಧ್ವಂಸಗೊಳಿಸಿ, ಅದರ ಜಾಗದಲ್ಲಿ ರಾಜಧಾನಿಯ ಮೊದಲ ಪ್ರತ್ಯೇಕ ‘ವಿಪತ್ತು ನಿರ್ವಹಣಾ ಪ್ರಧಾನ ಕಚೇರಿ’ಯನ್ನು ನಿರ್ಮಿಸಲು ಸಿದ್ಧತೆ ನಡೆಸಿದೆ.
ಪ್ರಸ್ತುತ ನಿವೇಶನವನ್ನು ದಿಲ್ಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮೊದಲ ಸ್ವತಂತ್ರ ಪ್ರಧಾನ ಕಚೇರಿಯನ್ನಾಗಿ ಮಾಡಲಾಗುತ್ತಿದ್ದು, ಇಲ್ಲಿ ಅತ್ಯಾಧುನಿಕ ‘ತುರ್ತು ಕಾರ್ಯಾಚರಣೆ ಕೇಂದ್ರ’ ತಲೆಯೆತ್ತಲಿದೆ. ವರ್ಷಗಳಿಂದಲೂ ಬಳಕೆಯಾಗದೆ ಉಳಿದಿದ್ದ ಈ ಅತ್ಯಂತ ಪ್ರಮುಖ ಮತ್ತು ದುಬಾರಿ ಭೂಮಿಗೆ ಹೊಸದೊಂದು ರೂಪ ನೀಡಲು ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಆದರೆ, ಈ ಐತಿಹಾಸಿಕ ಬಂಗಲೆಯು ನೆಲಸಮಗೊಂಡು ಹೊಸ ಕಟ್ಟಡಕ್ಕೆ ಜಾಗ ಮಾಡಿಕೊಡುವ ಮುನ್ನ, ಅದರ ವಿಲಕ್ಷಣ ಇತಿಹಾಸವು ಮತ್ತೊಮ್ಮೆ ಎಲ್ಲರ ಗಮನ ಸೆಳೆಯುತ್ತಿದೆ. 33 ಶ್ಯಾಮ್ ನಾಥ್ ಮಾರ್ಗ್ ಬಂಗಲೆಯು ದೆಹಲಿಯ ಅತ್ಯಂತ ‘ಅಪಶಕುನದ’ ವಿಳಾಸ ಎಂಬ ಹಣೆಪಟ್ಟಿ ಪಡೆದುಕೊಂಡಿದ್ದು ಹೇಗೆ ? ಇಲ್ಲಿದೆ ವಿವರ
►ಸಂಕಷ್ಟಗಳ ಇತಿಹಾಸ
ಹಸಿರಿನಿಂದ ಕಂಗೊಳಿಸುವ ‘ಸಿವಿಲ್ ಲೈನ್ಸ್’ ಪ್ರದೇಶದಲ್ಲಿರುವ ಈ ಎರಡಂತಸ್ತಿನ ಬಂಗಲೆಯು ಬರೋಬ್ಬರಿ 5,500 ಚದರ ಮೀಟರ್ಗಿಂತಲೂ ಅಧಿಕ ವಿಸ್ತೀರ್ಣದ ಭೂಮಿಯನ್ನು ಹೊಂದಿದೆ. ಬ್ರಿಟಿಷರ ಆಡಳಿತಾವಧಿಯಲ್ಲಿ, ಅಂದರೆ 1920 ರ ದಶಕದಲ್ಲಿ ನಿರ್ಮಾಣಗೊಂಡ ಈ ಕಟ್ಟಡವು ವಿಶಾಲವಾದ ಹುಲ್ಲುಹಾಸುಗಳು, ಹಲವು ಸಭಾಂಗಣಗಳು, ಸಿಬ್ಬಂದಿ ವಸತಿಗೃಹಗಳು ಮತ್ತು ಸುಂದರವಾದ ತೋಟಗಳನ್ನು ಒಳಗೊಂಡಿದೆ.
ಸ್ವಾತಂತ್ರ್ಯ ಬಂದ ತಕ್ಷಣ, ಈ ಆಸ್ತಿಯು ದೆಹಲಿ ವಿಧಾನಸಭೆಗೆ ಅತ್ಯಂತ ಹತ್ತಿರದಲ್ಲಿದ್ದ ಕಾರಣ ದೆಹಲಿ ಮುಖ್ಯಮಂತ್ರಿಗಳ ಅಧಿಕೃತ ನಿವಾಸಕ್ಕೆ ಮೊದಲ ಆದ್ಯತೆಯಾಗಿತ್ತು. ಆದರೆ, ಈ ಬಂಗಲೆಯಲ್ಲಿ ವಾಸವಿದ್ದವರು ಒಂದಾದ ಮೇಲೊಂದರಂತೆ ಅನುಭವಿಸಿದ ಹಿನ್ನಡೆಗಳು ಮತ್ತು ಆಘಾತಗಳು ಕಾಲಕ್ರಮೇಣ ಇದೊಂದು ಶಾಪಗ್ರಸ್ತ ಜಾಗ ಎಂಬ ನಂಬಿಕೆಯನ್ನು ಹುಟ್ಟುಹಾಕಿದವು.
ಈ ಬಂಗಲೆಯ ಮೊದಲ ನಿವಾಸಿ ದಿಲ್ಲಿಯ ಮೊದಲ ಮುಖ್ಯಮಂತ್ರಿ ಚೌಧರಿ ಬ್ರಹ್ಮ ಪ್ರಕಾಶ್. ಅವರು 1952 ರಲ್ಲಿ ಈ ಬಂಗಲೆಗೆ ಸ್ಥಳಾಂತರಗೊಂಡಿದ್ದರು. ಆದರೆ, ‘ಬೆಲ್ಲದ ಹಗರಣ’ ವಿವಾದಕ್ಕೆ ಸಿಲುಕಿದ ಕಾರಣ ಅವರ ಅಧಿಕಾರದ ಅವಧಿಯು 1955 ರಲ್ಲಿ, ಅಂದರೆ ನಿಗದಿತ ಸಮಯಕ್ಕಿಂತ ಮುನ್ನವೇ ಕೊನೆಗೊಂಡಿತು.
ಇದಾದ ಸುಮಾರು ನಾಲ್ಕು ದಶಕಗಳ ನಂತರ, ನೂತನ ರಾಷ್ಟ್ರೀಯ ರಾಜಧಾನಿ ಪ್ರದೇಶ ವ್ಯವಸ್ಥೆಯಡಿ 1993 ರಲ್ಲಿ ಮದನ್ ಲಾಲ್ ಖುರಾನಾ ಅವರು ಮುಖ್ಯಮಂತ್ರಿಯಾದಾಗ ಈ ಬಂಗಲೆಯನ್ನು ಅವರಿಗೆ ನೀಡಲಾಯಿತು. ಆದರೆ ಅವರ ರಾಜಕೀಯ ಜೀವನಕ್ಕೂ ಇಲ್ಲಿ ಗ್ರಹಣ ಹಿಡಿಯಿತು. ಹವಾಲಾ ಹಗರಣದ ಗಂಭೀರ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಖುರಾನಾ ಅವರು ತಮ್ಮ ಅವಧಿ ಪೂರ್ಣಗೊಳ್ಳುವ ಮುನ್ನವೇ 1996 ರಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು.
ಒಂದರ ನಂತರ ಒಂದರಂತೆ ನಡೆದ ಈ ಎರಡು ರಾಜಕೀಯ ದುರಂತಗಳ ನಂತರವೇ ಈ ಬಂಗಲೆಗೆ "ಶಾಪ" ತಟ್ಟಿದೆ ಎಂಬ ಪಿಸುಮಾತುಗಳು ದಿಲ್ಲಿಯ ರಾಜಕೀಯ ವಲಯದಲ್ಲಿ ದಟ್ಟವಾಗಿ ಹರಡಲಾರಂಭಿಸಿದವು.
►ದುರಾದೃಷ್ಟದ ಜಾಗ
ಮುಂದಿನ ದಿನಗಳಲ್ಲಿ ಇಲ್ಲಿಗೆ ಬಂದವರ ಪರಿಸ್ಥಿತಿಯೂ ಬದಲಾಗದಿದ್ದಾಗ ಈ ನಂಬಿಕೆ ಮತ್ತಷ್ಟು ಗಟ್ಟಿಯಾಯಿತು.
ಖುರಾನಾ ಅವರ ನಂತರ ಮುಖ್ಯಮಂತ್ರಿಯಾದ ಸಾಹಿಬ್ ಸಿಂಗ್ ವರ್ಮಾ ಅವರು ಈ ಬಂಗಲೆಯನ್ನು ತಮ್ಮ ಕ್ಯಾಂಪ್ ಆಫೀಸ್ ಆಗಿ ಬಳಸಿಕೊಂಡಿದ್ದರು. ಆದರೆ, ಅವರು ಸಹ ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಅವರ ಸ್ಥಾನಕ್ಕೆ ದಿಲ್ಲಿಯ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ಸುಷ್ಮಾ ಸ್ವರಾಜ್ ಅಧಿಕಾರ ವಹಿಸಿಕೊಂಡರು.
ಇನ್ನು 2003 ರಲ್ಲಿ ಈ ಮೂಢನಂಬಿಕೆ ಇಡೀ ದಿಲ್ಲಿಯನ್ನು ಬೆಚ್ಚಿಬೀಳಿಸುವಂತೆ ಮಾಡಿತು. ಅಂದಿನ ದಿಲ್ಲಿ ಸರ್ಕಾರದ ಸಚಿವರಾಗಿದ್ದ ದೀಪ್ ಚಂದ್ ಬಂಧು ಅವರು ತಮ್ಮ ಆಪ್ತರು ಮತ್ತು ಹಿತೈಷಿಗಳ ತೀವ್ರ ವಿರೋಧದ ನಡುವೆಯೂ ಇದೇ ಬಂಗಲೆಗೆ ವಾಸ್ತವ್ಯ ಬದಲಾಯಿಸಿದರು. ಅಲ್ಲಿಗೆ ಹೋದ ಕೆಲವೇ ದಿನಗಳಲ್ಲಿ ಅವರು ಮಿದುಳು ಜ್ವರ ಕಾಯಿಲೆಗೆ ತುತ್ತಾಗಿ ಆಸ್ಪತ್ರೆಯಲ್ಲಿ ನಿಧನರಾದರು. ಈ ಘಟನೆಯು ಬಂಗಲೆಯ ಮೇಲಿದ್ದ ಶಾಪದ ಕಥೆಯನ್ನು ಮತ್ತಷ್ಟು ದೃಢಗೊಳಿಸಿತು.
ಈ ಘಟನೆಯ ನಂತರ ಬಂಗಲೆಯನ್ನು ವಸತಿ ನಿವಾಸವಾಗಿ ಬಳಸುವುದನ್ನು ಸಂಪೂರ್ಣವಾಗಿ ನಿಲ್ಲಿಸಲಾಯಿತಾದರೂ, ಅದರ ಸುತ್ತಲಿನ ಭೀತಿ ಮಾತ್ರ ದೂರವಾಗಲಿಲ್ಲ. ಸಾಲು ಸಾಲು ದುರಂತಗಳ ಬಳಿಕ ಶೀಲಾ ದೀಕ್ಷಿತ್ ಸೇರಿದಂತೆ ತದನಂತರ ಬಂದ ಯಾವುದೇ ಮುಖ್ಯಮಂತ್ರಿಗಳು ಈ ಬಂಗಲೆಗೆ ಕಾಲಿಟ್ಟಿಲ್ಲ.
ಕೊನೆಯದಾಗಿ ಈ ಆವರಣದಿಂದ ಕಾರ್ಯನಿರ್ವಹಿಸಿದ ಪ್ರಮುಖ ಸರ್ಕಾರಿ ವ್ಯಕ್ತಿ ಎಂದರೆ ದಿಲ್ಲಿ ಡೈಲಾಗ್ ಕಮಿಷನ್ನ ಉಪಾಧ್ಯಕ್ಷರಾಗಿದ್ದ ಜಾಸ್ಮಿನ್ ಶಾ. ನವೆಂಬರ್ 2022 ರಲ್ಲಿ, ಜಾಸ್ಮಿನ್ ಶಾ ಅವರು ತಮ್ಮ ಅಧಿಕಾರವನ್ನು ರಾಜಕೀಯ ಉದ್ದೇಶಗಳಿಗಾಗಿ ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪದ ಮೇಲೆ ಅವರನ್ನು ಹುದ್ದೆಯಿಂದ ವಜಾಗೊಳಿಸುವಂತೆ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರು ಅಂದಿನ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ಆದೇಶಿಸಿದ್ದರು. ಇದು ಈ ಬಂಗಲೆಯ ಹಠಾತ್ ನಿರ್ಗಮನಗಳ ಸುದೀರ್ಘ ಇತಿಹಾಸಕ್ಕೆ ಮತ್ತೊಂದು ಕಹಿ ಅಧ್ಯಾಯವನ್ನು ಸೇರಿಸಿತು.
►ಈ ಬದಲಾವಣೆಗೆ ಕಾರಣವೇನು?
ರಾಜಕೀಯ ವಲಯದಲ್ಲಿ ಈ ಬಂಗಲೆಯ ಸುತ್ತ ಏನೇ ಕಥೆಗಳಿದ್ದರೂ, ಪ್ರಸ್ತುತ ಮರು ಅಭಿವೃದ್ಧಿ ನಿರ್ಧಾರವನ್ನು ಕೇವಲ ಪ್ರಾಯೋಗಿಕ ಮತ್ತು ಆಡಳಿತಾತ್ಮಕ ಅಗತ್ಯಗಳಿಗಾಗಿ ತೆಗೆದುಕೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಸದ್ಯಕ್ಕೆ ದಿಲ್ಲಿಯಲ್ಲಿ ಡಿಡಿಎಂಎ ಸಂಸ್ಥೆಗೆ ಸ್ವತಂತ್ರವಾದ ಯಾವುದೇ ದೊಡ್ಡ ಕಟ್ಟಡವಿಲ್ಲ. ವಿಪತ್ತು ನಿರ್ವಹಣೆಗೆ ಸಂಬಂಧಿಸಿದ ವಿವಿಧ ವಿಭಾಗಗಳು ಸದ್ಯ ಬೇರೆ ಬೇರೆ ಕಚೇರಿಗಳಲ್ಲಿ ಹಂಚಿಹೋಗಿವೆ. ಹೀಗಾಗಿ ಒಂದು ಸುಸಜ್ಜಿತ ಪ್ರಧಾನ ಕಚೇರಿಯನ್ನು ಹೊಂದುವುದರಿಂದ ತುರ್ತು ಸಂದರ್ಭಗಳಲ್ಲಿ ವಿವಿಧ ಇಲಾಖೆಗಳ ನಡುವೆ ಉತ್ತಮ ಸಮನ್ವಯ ಸಾಧಿಸಲು ಮತ್ತು ನಗರದ ರಕ್ಷಣಾ ಸಾಮರ್ಥ್ಯವನ್ನು ಬಲಪಡಿಸಲು ಸಾಧ್ಯವಾಗುತ್ತದೆ ಎಂದು ಅಧಿಕಾರಿಗಳು ನಂಬಿದ್ದಾರೆ.
ಪ್ರಸ್ತಾವಿತ ಈ ನೂತನ ಕೇಂದ್ರವು ಹೊಸದಿಲ್ಲಿ ಮುನ್ಸಿಪಲ್ ಕೌನ್ಸಿಲ್ , ದಿಲ್ಲಿ ಅಭಿವೃದ್ಧಿ ಪ್ರಾಧಿಕಾರ ಮತ್ತು ದಿಲ್ಲಿ ಪೊಲೀಸ್ ಸೇರಿದಂತೆ ಹಲವು ಸರ್ಕಾರಿ ಇಲಾಖೆಗಳು ಹಾಗೂ ಏಜೆನ್ಸಿಗಳ ಪ್ರತಿನಿಧಿಗಳನ್ನು ಒಂದೇ ಸೂರಿನಡಿ ತರಲಿದೆ.
ಪ್ರಸ್ತುತ ಸಿವಿಲ್ ಲೈನ್ಸ್ನಲ್ಲಿರುವ ಸಣ್ಣ ಡಿಡಿಎಂಎ ಕಚೇರಿಯಿಂದಲೇ ತುರ್ತು ಕಾರ್ಯಾಚರಣೆ ಕೇಂದ್ರ ಕಾರ್ಯನಿರ್ವಹಿಸುತ್ತಿದ್ದು, ಅಲ್ಲಿ ಜಾಗದ ತೀವ್ರ ಅಭಾವವಿದೆ.
"ಸದ್ಯದ ವ್ಯವಸ್ಥೆಯಲ್ಲಿ ಜಾಗದ ಕೊರತೆಯಿದೆ. ಹೊಸ ಕೇಂದ್ರ ಬಂದಾಗ, ವಿಪತ್ತಿಗೆ ಸಂಬಂಧಿಸಿದ ಕರೆ ಬಂದ ತಕ್ಷಣವೇ ಅಗ್ನಿಶಾಮಕ ದಳ, ಪೊಲೀಸ್ ಮತ್ತು ಸಿಎಟಿಎಸ್ ತಂಡಗಳನ್ನು ಏಕಕಾಲದಲ್ಲಿ ಅಲರ್ಟ್ ಮಾಡಬಹುದು. ಜಿಲ್ಲಾಧಿಕಾರಿ ಮತ್ತು ರಕ್ಷಣಾ ಪಡೆಗಳಿಗೂ ತಕ್ಷಣ ಮಾಹಿತಿ ರವಾನೆಯಾಗಲಿದ್ದು, ಇಒಸಿ ಇಡೀ ಕಾರ್ಯಾಚರಣೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಮೇಲ್ವಿಚಾರಣೆ ಮಾಡಲಿದೆ" ಎಂದು ಅಧಿಕಾರಿಯೊಬ್ಬರು ವಿವರಿಸಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಈ ಮರುಅಭಿವೃದ್ಧಿ ಯೋಜನೆಯು ಕಳೆದ ಎರಡು ದಶಕಗಳಿಂದಲೂ ಹೆಚ್ಚೂಕಡಿಮೆ ಪಾಳುಬಿದ್ದಂತಿದ್ದ ಬೃಹತ್ ಆಸ್ತಿಗೆ ಹೊಸ ಚೈತನ್ಯ ನೀಡಲಿದ್ದು, ಸಾರ್ವಜನಿಕ ಆಡಳಿತಕ್ಕಿಂತ ಹೆಚ್ಚಾಗಿ ದುರಾದೃಷ್ಟದ ಕಥೆಗಳಿಗೇ ಹೆಚ್ಚು ಪ್ರಸಿದ್ಧಿಯಾಗಿದ್ದ ಒಂದು ವಿಳಾಸಕ್ಕೆ ಕೊನೆಗೂ ಅರ್ಥಪೂರ್ಣ ಕಾಯಕಲ್ಪ ಸಿಗಲಿದೆ.
ಕೃಪೆ: hindustantimes.com






