ವೇತನ ಕೇಳುವುದು ಅಪರಾಧವಲ್ಲ: ಮಾನೇಸರ್ ‘ಸಂಚ’ನ್ನು ಗುರುಗ್ರಾಮ ನ್ಯಾಯಾಲಯ ಬಯಲಿಗೆಳೆದದ್ದು ಹೇಗೆ?

Photo : thewire.in
ಒಂದಕ್ಕೊಂದು ಪೂರಕವಾಗಿರುವ ಸರಣಿ ಆದೇಶಗಳ ಮೂಲಕ ಗುರುಗ್ರಾಮದ ಸೆಷನ್ಸ್ ನ್ಯಾಯಾಲಯವು ಮಾನೇಸರ್ ಕಾರ್ಮಿಕರ ಪ್ರತಿಭಟನೆಗೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್ ನ ವಾದವನ್ನು ತಳ್ಳಿಹಾಕಿದೆ. “ಹೆಚ್ಚಿನ ವೇತನವನ್ನು ಒತ್ತಾಯಿಸುವುದು ಯಾವುದೇ ಅಪರಾಧವಲ್ಲ” ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶೆ ಡಾ. ಗಗನ್ ಗೀತ್ ಕೌರ್ ಅವರು ಮೇ 18ರಂದು ಕಾರ್ಮಿಕ ಸಂಘದ ಮುಖಂಡ ಅಜಿತ್ ಸಿಂಗ್ ಅವರನ್ನು ಬಿಡುಗಡೆ ಮಾಡಿದ್ದರು. ಅದರ ಬೆನ್ನಲ್ಲೇ ಮೇ 30ರಂದು ಇದೇ ಪ್ರಕರಣದ ಇತರ ಮೂವರು ಆರೋಪಿಗಳಾದ ವಿವೇಕ್ ಕುಮಾರ್, ರಾಜ್ ಕುಮಾರ್ ಮತ್ತು ಶ್ಯಾಂಬಿರ್ ಅವರಿಗೆ ಜಾಮೀನು ಮಂಜೂರು ಮಾಡಿದರು.
ಈ ಜಾಮೀನು ಆದೇಶಗಳನ್ನು ಪ್ರತ್ಯೇಕವಾಗಿ ನೋಡಿದಾಗ ಸಾಮಾನ್ಯವೆನಿಸಿದರೂ, ಒಟ್ಟಾರೆಯಾಗಿ ಅವು ಪ್ರತಿಭಟನಾಕಾರರ ವಿರುದ್ಧ ದಾಖಲಿಸಲಾದ ಪ್ರಕರಣವು ಮೂಲತಃ ‘ಪ್ರತಿಭಟನೆಯ ಹಕ್ಕಿನ’ ವಿರುದ್ಧವೇ ಹೂಡಲಾದ ಪ್ರಕರಣವಾಗಿತ್ತು ಎಂಬುದನ್ನು ತೋರಿಸುತ್ತವೆ.
ಈ ವಿವಾದವು ಮಾನೇಸರ್ನ ಇಂಡಸ್ಟ್ರಿಯಲ್ ಮಾಡೆಲ್ ಟೌನ್ ಶಿಪ್ ನಲ್ಲಿರುವ ‘ರಿಚಾ ಗ್ಲೋಬಲ್ ಎಕ್ಸ್ಪೋರ್ಟ್ಸ್’ ಜವಳಿ ಕಾರ್ಖಾನೆಯಲ್ಲಿ ಎಪ್ರಿಲ್ 9ರಂದು ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದೆ. ಕಂಪನಿಯ ಮಾನವ ಸಂಪನ್ಮೂಲ ಮುಖ್ಯಸ್ಥರ ದೂರಿನ ಮೇರೆಗೆ ಪೊಲೀಸರು ಅಪರಿಚಿತ ಪ್ರತಿಭಟನಾಕಾರರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಹಾಗೂ ಸಾರ್ವಜನಿಕ ಆಸ್ತಿ ಹಾನಿ ತಡೆ ಕಾಯ್ದೆ, 1984ರ ಅಡಿಯಲ್ಲಿ ಕೊಲೆ ಯತ್ನ, ಗಲಭೆ, ಅಗ್ನಿಸ್ಪರ್ಶ, ಕ್ರಿಮಿನಲ್ ಸಂಚು ಮತ್ತು ಸಾರ್ವಜನಿಕ ಆಸ್ತಿಗೆ ಹಾನಿ ಉಂಟುಮಾಡಿದ ಆರೋಪಗಳ ಮೇಲೆ ಪ್ರಕರಣ ದಾಖಲಿಸಿದ್ದರು.
200ರಿಂದ 250 ಕಾರ್ಮಿಕರ ಗುಂಪೊಂದು ಆಡಳಿತ ಸಿಬ್ಬಂದಿ ಮತ್ತು ಅಧಿಕಾರಿಗಳ ಮೇಲೆ ಕಲ್ಲು ತೂರಾಟ ನಡೆಸಿದೆ, ಕಂಪನಿ ಮತ್ತು ಸರ್ಕಾರದ ವಾಹನಗಳಿಗೆ ಬೆಂಕಿ ಹಚ್ಚಿದೆ ಹಾಗೂ ಇಬ್ಬರು ಮಹಿಳಾ ಉದ್ಯೋಗಿಗಳ ಮೇಲೆ ಹಲ್ಲೆ ನಡೆಸಿದೆ ಎಂದು ಪೊಲೀಸರು ಆರೋಪಿಸಿದ್ದರು.
ಆದರೆ, ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, “ನ್ಯಾಯಾಲಯದ ಮುಂದೆ ಹಾಜರುಪಡಿಸಲಾದ ನಿರ್ದಿಷ್ಟ ಆರೋಪಿಗಳೇ ಈ ಕೃತ್ಯಗಳನ್ನು ಎಸಗಿದ್ದಾರೆ ಎಂಬುದಕ್ಕೆ ಸರ್ಕಾರವು ಮೇಲ್ನೋಟಕ್ಕಾದರೂ ಸಾಕ್ಷ್ಯ ಒದಗಿಸಿದ್ದೇ?” ಎಂದು ಪ್ರಶ್ನಿಸಿತು. ಈ ಪ್ರಶ್ನೆಯೇ ಪೊಲೀಸರ ವಾದದ ದುರ್ಬಲತೆಯನ್ನು ಬಯಲಿಗೆಳೆದಿತು.
ಹಿಂಸಾಚಾರ ನಡೆದ ದಿನ ಅಜಿತ್ ಸಿಂಗ್ ಘಟನಾ ಸ್ಥಳದಲ್ಲಿರಲಿಲ್ಲ ಎಂಬುದನ್ನು ಸರ್ಕಾರಿ ಅಭಿಯೋಜಕರೇ ಒಪ್ಪಿಕೊಂಡರು. ನಂತರ ಪೊಲೀಸರು ತಮ್ಮ ವಾದವನ್ನು ಬದಲಿಸಿ, ಅವರು ವಾಟ್ಸಾಪ್ ಗುಂಪು ಹಾಗೂ ಸಾರ್ವಜನಿಕ ಭಾಷಣಗಳ ಮೂಲಕ ಕಾರ್ಮಿಕರನ್ನು ಮೊದಲೇ ಪ್ರಚೋದಿಸಿದ್ದರು ಎಂಬ ವಾದ ಮಂಡಿಸಿದರು.
ಆದರೆ ಅಜಿತ್ ಸಿಂಗ್ ಅವರು ರಿಚಾ ಗ್ಲೋಬಲ್ನಲ್ಲಿ ಕೆಲಸ ಮಾಡುತ್ತಿರಲಿಲ್ಲ. ಅಲ್ಲದೆ, ಆ ಕಾರ್ಖಾನೆಯ ಕಾರ್ಮಿಕರ ವಾಟ್ಸಾಪ್ ಗುಂಪಿನ ಸದಸ್ಯರೂ ಆಗಿರಲಿಲ್ಲ. ಅವರು ‘ಬೆಲ್ಸೋನಿಕಾ’ ಎಂಬ ವಾಹನ ಬಿಡಿಭಾಗಗಳ ಕಾರ್ಖಾನೆಯ ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಹೀಗಾಗಿ, ಪೊಲೀಸರು ಆರೋಪಿಸಿದ ಸಂಚಿನೊಂದಿಗೆ ಅವರ ಸಂಬಂಧವನ್ನು ನ್ಯಾಯಾಲಯ ಪ್ರಶ್ನಿಸಿತು.
ಮೇ 16ರಂದು ತನಿಖಾಧಿಕಾರಿ ಅಜಿತ್ ಸಿಂಗ್ ಅವರ ಭಾಷಣದ ವೀಡಿಯೊವನ್ನು ನ್ಯಾಯಾಲಯದಲ್ಲಿ ಪ್ರದರ್ಶಿಸಿದರು. ದಿನನಿತ್ಯದ ಅಗತ್ಯಗಳಿಗೆ ಅನುಗುಣವಾಗಿ ವೇತನ ಹೆಚ್ಚಿಸಬೇಕೆಂಬ ಬೇಡಿಕೆಯ ಹೊರತಾಗಿ ಅದರಲ್ಲಿ ಬೇರೆ ಯಾವುದೇ ಅಪರಾಧದ ಅಂಶ ಕಂಡುಬರಲಿಲ್ಲ. ಬಳಿಕ ಎಪ್ರಿಲ್ 4ರ ಭಾಷಣದ ಲಿಖಿತ ಪ್ರತಿಯನ್ನೂ ಸಲ್ಲಿಸಲಾಯಿತು. ಅದಲ್ಲಿಯೂ ಅಪರಾಧದ ಯಾವುದೇ ಮುನ್ಸೂಚನೆ ಇಲ್ಲ ಎಂದು ಅಭಿಯೋಜಕರೇ ಒಪ್ಪಿಕೊಳ್ಳಬೇಕಾಯಿತು.
ಇದಾದ ಬಳಿಕ ನ್ಯಾಯಾಧೀಶೆ, ಕಡಿಮೆ ವೇತನದ ಪ್ರಶ್ನೆಯನ್ನು ಪ್ರಜಾಸತ್ತಾತ್ಮಕವಾಗಿ ಎತ್ತುವ ಕಾರ್ಮಿಕ ಸಂಘದ ಸದಸ್ಯನು ಯಾವುದೇ ಅಪರಾಧ ಮಾಡಿಲ್ಲ ಹಾಗೂ ಯಾವುದೇ ಸಾಕ್ಷ್ಯವಿಲ್ಲದೆ ಎಪ್ರಿಲ್ 13ರಿಂದ ಅವರನ್ನು ಕಸ್ಟಡಿಯಲ್ಲಿ ಇರಿಸಿರುವುದು ಕಾನೂನುಬಾಹಿರ ಎಂದು ಅಭಿಪ್ರಾಯಪಟ್ಟರು.
“ತಮ್ಮ ವೇತನವನ್ನು ಹೆಚ್ಚಿಸುವಂತೆ ಒತ್ತಾಯಿಸುವುದು ಅಪರಾಧವಲ್ಲ” ಎಂದು ಆದೇಶದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ನೆರೆಯ ‘ಮೊಡೆಲಾಮಾ ಎಕ್ಸ್ಪೋರ್ಟ್ಸ್’ ಕಂಪನಿಯ 24 ವರ್ಷದ ಕಾರ್ಮಿಕರಾದ ವಿವೇಕ್ ಕುಮಾರ್ ಮತ್ತು ರಾಜ್ ಕುಮಾರ್ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಆರೋಪಿಸಲಾಗಿತ್ತು. ಅವರ ಮೊಬೈಲ್ ಫೋನ್ ಟವರ್ ಲೊಕೇಶನ್ ಮಾಹಿತಿ ಅವರು ಘಟನಾ ಸ್ಥಳದಲ್ಲಿದ್ದುದನ್ನು ದೃಢಪಡಿಸಿತ್ತು. ಅವರ ಪರ ವಕೀಲ ಶಾಹರುಖ್ ಆಲಂ, ಆರೋಪಿಗಳು ಅಲ್ಲಿದ್ದುದನ್ನು ನಿರಾಕರಿಸಲಿಲ್ಲ. ಆದರೆ, ಕಾನೂನುಬದ್ಧ ವೇತನ ಪ್ರತಿಭಟನೆಯಲ್ಲಿ ಭಾಗವಹಿಸುವುದೇ ಅಪರಾಧವಲ್ಲ. ಇಬ್ಬರಿಂದಲೂ ಯಾವುದೇ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿಲ್ಲ. ಕೇವಲ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ 200ಕ್ಕೂ ಹೆಚ್ಚು ಜನರ ಗುಂಪಿನಲ್ಲಿರುವ ವ್ಯಕ್ತಿಯೊಬ್ಬನಿಗೆ ಅಪರಾಧದ ಹೊಣೆ ಹೊರಿಸಲು ಸಾಧ್ಯವಿಲ್ಲ ಎಂದು ವಾದಿಸಿದರು.
ನ್ಯಾಯಾಲಯ ಈ ವಾದಗಳನ್ನು ಅಂಗೀಕರಿಸಿತು. ಅಷ್ಟು ದೊಡ್ಡ ಗುಂಪಿನಲ್ಲಿ ಕೇವಲ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ನಿರ್ದಿಷ್ಟ ವ್ಯಕ್ತಿಯೇ ಅಪರಾಧ ಎಸಗಿದ್ದಾನೆ ಎಂದು ಹೇಳಲು ಸಾಧ್ಯವಿಲ್ಲ. ಗಾಯಗೊಂಡ ಪೊಲೀಸರ ವೈದ್ಯಕೀಯ ವರದಿಗಳೂ ಕೊಲೆ ಮಾಡುವ ಉದ್ದೇಶವನ್ನು ತೋರಿಸುವುದಿಲ್ಲ ಎಂದು ನ್ಯಾಯಾಧೀಶೆ ಅಭಿಪ್ರಾಯಪಟ್ಟರು.
ಬೆಲೆ ಏರಿಕೆಯ ವಿರುದ್ಧ ವೇತನ ಹೆಚ್ಚಳಕ್ಕೆ ಒತ್ತಾಯಿಸುವುದು “ತಾನಾಗಿಯೇ ಅಪರಾಧವಾಗುವುದಿಲ್ಲ” ಎಂದೂ ಅವರು ಹೇಳಿದರು. ಹಿಂಸಾಚಾರವು ಸಂಚಿನ ಪರಿಣಾಮವೇ ಅಥವಾ ಬೇರೆ ಕಾರಣಗಳಿಂದ ಸಂಭವಿಸಿದದ್ದೇ ಎಂಬುದು ವಿಚಾರಣೆಯ ವೇಳೆ ನಿರ್ಧಾರವಾಗಬೇಕಾದ ವಿಷಯ ಎಂದು ಅಭಿಪ್ರಾಯಪಟ್ಟರು.
ಅಲ್ಲಿಯವರೆಗೆ ಆರೋಪಿಗಳನ್ನು ಜೈಲಿನಲ್ಲಿಡುವುದರಿಂದ ಪ್ರಯೋಜನವಿಲ್ಲ ಎಂದು ಹೇಳಿದ ನ್ಯಾಯಾಧೀಶೆ, ಸಂಜಯ್ ಚಂದ್ರ ವಿರುದ್ಧ ಸಿಬಿಐ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ “ಜಾಮೀನು ನಿಯಮ, ಜೈಲು ಅಪವಾದ” ಎಂಬ ತತ್ವವನ್ನು ಹಾಗೂ ಅರ್ನೇಶ್ ಕುಮಾರ್ ವಿರುದ್ಧ ಬಿಹಾರ ಸರ್ಕಾರ ಪ್ರಕರಣದ ತೀರ್ಪನ್ನು ಉಲ್ಲೇಖಿಸಿದರು.
ಗುಂಪು ಸಂಬಂಧಿತ ಅಪರಾಧಗಳಲ್ಲಿ ಸಾಮೂಹಿಕ ನಿಂದನೆ ಸಾಮಾನ್ಯ. ಸಂಚಿನ ಆರೋಪವನ್ನು ಇಡೀ ಗುಂಪಿಗೆ ವಿಸ್ತರಿಸಲು ಪ್ರಯತ್ನಿಸಲಾಗುತ್ತದೆ. ಆದರೆ, ಕ್ಯಾಮೆರಾ ದೃಶ್ಯಾವಳಿಗಳ ಆಧಾರದ ಮೇಲೆ ಪ್ರತ್ಯೇಕ ವ್ಯಕ್ತಿಯ ಪಾತ್ರವನ್ನು ಗುರುತಿಸಲೇಬೇಕು ಎಂದು ನ್ಯಾಯಾಲಯ ಒತ್ತಾಯಿಸಿತು.
ನ್ಯಾಯಾಲಯದ ಧೀಮಂತ ನಡೆ
ಈ ಆದೇಶಗಳನ್ನು ಸಾಮಾನ್ಯ ಜಾಮೀನು ಮಂಜೂರಾತಿಯಿಂದ ಭಿನ್ನವಾಗಿಸುವುದು, ನ್ಯಾಯಾಲಯವು ಪ್ರಾಸಿಕ್ಯೂಷನ್ ನ ವಾದಕ್ಕೆ ಕುರುಡಾಗಿ ಶರಣಾಗಲು ನಿರಾಕರಿಸಿದ್ದಾಗಿದೆ.
ಸಾಮಾನ್ಯವಾಗಿ ಕೆಳಹಂತದ ನ್ಯಾಯಾಲಯಗಳಲ್ಲಿ ಆರೋಪದ ಗಂಭೀರತೆಯನ್ನು ಮುಂದಿಟ್ಟು ವ್ಯಕ್ತಿಯ ಸ್ವಾತಂತ್ರ್ಯವನ್ನು ನಿರಾಕರಿಸಲಾಗುತ್ತದೆ. ಆದರೆ, ಇಲ್ಲಿ ನ್ಯಾಯಾಧೀಶೆ ಹೊಸ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಜಾಮೀನು ನಿಯಮಗಳನ್ನು ಅನ್ವಯಿಸಿ, ಕೇವಲ ಸುದೀರ್ಘ ಚಾರ್ಜ್ಶೀಟ್ನ್ನೇ ಸಾಕ್ಷ್ಯ ಎಂದು ಪರಿಗಣಿಸಲು ನಿರಾಕರಿಸಿದರು.
ಅತ್ಯಂತ ಗಂಭೀರವಾದ ಒಂದು ಆರೋಪವನ್ನು ಹೊರತುಪಡಿಸಿ ಉಳಿದ ಎಲ್ಲ ಆರೋಪಗಳಿಗೆ ಗರಿಷ್ಠ ಏಳು ವರ್ಷಗಳ ಶಿಕ್ಷೆಯ ಮಿತಿ ಇತ್ತು. ಇದು ಕೂಡ ಕಸ್ಟಡಿಯನ್ನು ಮುಂದುವರಿಸದಿರಲು ಕಾರಣವಾಯಿತು ಎಂದು ಪ್ರತಿವಾದಿ ವಕೀಲರು ತಿಳಿಸಿದರು.
ಶ್ಯಾಂಬಿರ್ಗೆ ಸಂಬಂಧಿಸಿದ ಮೂರನೇ ಆದೇಶವು ಸಾಕ್ಷ್ಯಗಳಿಗಿಂತ ಬಂಧನದ ಪ್ರಕ್ರಿಯೆಯ ಕಡೆಗೆ ಹೆಚ್ಚಿನ ಗಮನ ಹರಿಸಿತು. ಸಿಂಗ್ ಅವರಂತೆಯೇ, ಶ್ಯಾಂಬಿರ್ ಹೆಸರೂ ಎಫ್ಐಆರ್ ನಲ್ಲಿ ಇರಲಿಲ್ಲ. ಅವರು ರಿಚಾ ಗ್ಲೋಬಲ್ ನಲ್ಲಿ ಕೆಲಸ ಮಾಡುತ್ತಿರಲಿಲ್ಲ ಹಾಗೂ ಅದರ ವಾಟ್ಸಾಪ್ ಗುಂಪಿನ ಸದಸ್ಯರೂ ಆಗಿರಲಿಲ್ಲ.
ಸಹ ಆರೋಪಿಯೊಬ್ಬ ನೀಡಿದ ಹೇಳಿಕೆ ಹಾಗೂ ಸಭೆಯೊಂದರ ಛಾಯಾಚಿತ್ರವನ್ನು ಸರ್ಕಾರ ಅವಲಂಬಿಸಿತ್ತು. ಸಂವಿಧಾನದ ವಿಧಿ 22(1)ರ ಉಲ್ಲಂಘನೆಯಾಗಿ ಬಂಧನದ ಕಾರಣಗಳನ್ನು ಅವರಿಗೆ ತಿಳಿಸಲಾಗಿಲ್ಲ ಎಂದು ವಕೀಲ ವೃಂದಾ ಗ್ರೋವರ್ ವಾದಿಸಿದರು.
ಮೇಲ್ನೋಟಕ್ಕೆ ಯಾವುದೇ ದೃಢ ಸಾಕ್ಷ್ಯ ಕಾಣಿಸದ ಕಾರಣ, ಈಗಾಗಲೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಸಹ ಆರೋಪಿಗಳಂತೆ ಶ್ಯಾಂಬಿರ್ಗೂ ಜಾಮೀನು ನೀಡಲಾಯಿತು.
ಎಪ್ರಿಲ್ 13ರಂದು ಕರ್ತವ್ಯದಲ್ಲಿದ್ದ ಮ್ಯಾಜಿಸ್ಟ್ರೇಟ್, ಬಂಧನದ ಕಾರಣಗಳನ್ನು ತಿಳಿಸದ ಕ್ರಮವನ್ನು ಗಂಭೀರವಾಗಿ ಪರಿಗಣಿಸಿ ತನಿಖಾಧಿಕಾರಿಯ ವಿರುದ್ಧ ತನಿಖೆಗೆ ಆದೇಶಿಸಿದ್ದರು. ದಾಖಲೆಗಳ ಪ್ರಕಾರ, “ಬಂಧನದ ಮಾಹಿತಿ” ನೀಡಲಾಗಿದೆ ಎಂದು ಹೇಳಲಾದ ದೂರವಾಣಿ ಕರೆ ಆರೋಪಿಯ ವಕೀಲರ ಸಂಖ್ಯೆಗೆ ಹೋಗಿತ್ತು. ಆದರೆ, ಅಂತಹ ಯಾವುದೇ ಕರೆ ಬಂದಿಲ್ಲ ಎಂದು ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಈ ಆದೇಶಗಳನ್ನು ಒಟ್ಟಾಗಿ ಓದಿದಾಗ, ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿಬಿಟ್ಟಿರುವ ಒಂದು ಮಾದರಿಯನ್ನು ಅವು ಪ್ರಶ್ನಿಸುತ್ತವೆ. ವೇತನಕ್ಕಾಗಿ ನಡೆಯುವ ಪ್ರತಿಭಟನೆ ಗಲಾಟೆಯಾಗಿ ಬದಲಾಗುತ್ತದೆ. ನಂತರ ಹೆಸರಿರುವ ಮತ್ತು ಹೆಸರಿಲ್ಲದ ಕಾರ್ಮಿಕರ ದೊಡ್ಡ ಪಟ್ಟಿಯನ್ನು ಸಿದ್ಧಪಡಿಸಿ, ಅವರ ವಿರುದ್ಧ ಜಾಮೀನು ರಹಿತ ಗಂಭೀರ ಆರೋಪಗಳನ್ನು ಹೊರಿಸಲಾಗುತ್ತದೆ. ಕಾರ್ಮಿಕ ಸಂಘದ ಪ್ರಮುಖ ಮುಖಂಡರನ್ನು ವಾಟ್ಸಾಪ್ ಮೂಲಕ ಸಂಚು ರೂಪಿಸಿದ ‘ಮಾಸ್ಟರ್ಮೈಂಡ್’ಗಳಂತೆ ಚಿತ್ರಿಸಲಾಗುತ್ತದೆ. ಬಳಿಕ ಬಂಧನಗಳು ನಡೆಯುತ್ತವೆ.
ಕೆಲವೊಮ್ಮೆ ಕಾನೂನುಬದ್ಧವಾಗಿ ಅಗತ್ಯವಿರುವ ಕನಿಷ್ಠ ಕಾರಣಗಳನ್ನೂ ನೀಡದೆ ಬಂಧಿಸಲಾಗುತ್ತದೆ. ಕೊನೆಗೆ, ನ್ಯಾಯಾಲಯದಲ್ಲಿ ಅಪರಾಧ ಸಾಬೀತಾಗುವ ಮುನ್ನವೇ ಆರೋಪಿಗಳನ್ನು ಜೈಲಿನಲ್ಲಿಡುವ ಮೂಲಕ, ಕಾನೂನು ಅನುಮತಿಸದ ಶಿಕ್ಷೆಯನ್ನೇ ಬಂಧನದ ಮೂಲಕ ಜಾರಿಗೊಳಿಸಲಾಗುತ್ತದೆ.
ಈ ಮಾದರಿ ಮಾನೇಸರ್ ಗೆ ಹೊಸದೇನಲ್ಲ. 2012ರಲ್ಲಿ ಮಾರುತಿ ಸುಝುಕಿ ಕಾರ್ಖಾನೆಯಲ್ಲಿ ನಡೆದ ಹಿಂಸಾಚಾರವನ್ನು ನಗರ ಇನ್ನೂ ಮರೆತಿಲ್ಲ. ಆಗ ವ್ಯವಸ್ಥಾಪಕರೊಬ್ಬರು ಮೃತಪಟ್ಟಿದ್ದರು ಮತ್ತು ನೂರಾರು ಕಾರ್ಮಿಕರು ಜೈಲು ಪಾಲಾಗಿದ್ದರು. ಆ ಘಟನೆ ಇಂದಿಗೂ ಇಲ್ಲಿನ ಕಾರ್ಮಿಕ ಪ್ರಕರಣಗಳ ಮೇಲೆ ನೆರಳಿನಂತೆ ಆವರಿಸಿದೆ.
ಮಾನೇಸರ್ ಘಟನೆಯ ಕೆಲವೇ ದಿನಗಳಲ್ಲಿ ನೋಯ್ಡಾದಲ್ಲೂ ಇದೇ ಮಾದರಿ ಮರುಕಳಿಸಿತು. ಅಲ್ಲಿ ಕೂಡ ವೇತನ ಪ್ರತಿಭಟನೆಗಳ ಬಳಿಕ ಸರಣಿ ಬಂಧನಗಳು ನಡೆದವು.
ಇದರಲ್ಲಿನ ವ್ಯಂಗ್ಯವೆಂದರೆ, ಎರಡೂ ರಾಜ್ಯ ಸರ್ಕಾರಗಳು ಒಂದೆಡೆ ಕಾರ್ಮಿಕರ ಅಸಮಾಧಾನವನ್ನು ತಣಿಸಲು ವೇತನ ಹೆಚ್ಚಳ ಘೋಷಿಸುತ್ತಿದ್ದರೆ, ಮತ್ತೊಂದೆಡೆ ಪ್ರತಿಭಟನಾಕಾರರ ವಿರುದ್ಧ ಪ್ರಕರಣಗಳನ್ನು ದಾಖಲಿಸುತ್ತಿದ್ದವು.
ಹರಿಯಾಣ ಸರ್ಕಾರವು 2015ರಿಂದ ಬಾಕಿಯಾಗಿದ್ದ ಕನಿಷ್ಠ ವೇತನ ಪರಿಷ್ಕರಣೆಯನ್ನು ಎಪ್ರಿಲ್ 1ರಿಂದ ಜಾರಿಗೆ ತಂದಿತು. ಆದಾಗ್ಯೂ, ಪರಿಷ್ಕೃತ ಕನಿಷ್ಠ ವೇತನ ತಿಂಗಳಿಗೆ ಸುಮಾರು 15,000 ರೂ.ಆಗಿದ್ದು, ಕಾರ್ಮಿಕ ಸಂಘಟನೆಗಳು ಒತ್ತಾಯಿಸುತ್ತಿದ್ದ ಸುಮಾರು 23,000 ರೂ.ಕ್ಕಿಂತ ಇನ್ನೂ ಕಡಿಮೆಯೇ ಇದೆ.
ಉತ್ತರ ಪ್ರದೇಶ ಸರ್ಕಾರವೂ ನೋಯ್ಡಾ ಬಂಧನಗಳ ಬಳಿಕ ಹೆಚ್ಚಿನ ವೇತನವನ್ನು ಘೋಷಿಸಿತು. ಹೀಗಾಗಿ, ಕಾರ್ಮಿಕರ ಬೇಡಿಕೆ ನ್ಯಾಯಯುತವಾಗಿತ್ತು ಎಂಬುದನ್ನು ಸರ್ಕಾರಗಳು ಪರೋಕ್ಷವಾಗಿ ಒಪ್ಪಿಕೊಂಡಂತಾಯಿತು. ಆದರೆ, ಅದೇ ಬೇಡಿಕೆಯನ್ನು ಪೊಲೀಸ್ ಪ್ರಾಸಿಕ್ಯೂಷನ್ ಮಾತ್ರ ‘ಅಪರಾಧ’ ಎಂದು ಬಣ್ಣಿಸಿತು.
ಇದರ ಅರ್ಥ ಹಿಂಸಾಚಾರವೇ ನಡೆದಿಲ್ಲ ಅಥವಾ ಜಾಮೀನು ಸಿಕ್ಕ ತಕ್ಷಣ ಆರೋಪಿಗಳು ನಿರ್ದೋಷಿಗಳಾಗುತ್ತಾರೆ ಎಂಬುದಲ್ಲ. ನ್ಯಾಯಾಧೀಶೆಯೂ ತಮ್ಮ ಆದೇಶಗಳಲ್ಲಿ ಇದನ್ನು ಸ್ಪಷ್ಟಪಡಿಸಿದ್ದು, ಪ್ರಕರಣದ ಸತ್ಯಾಸತ್ಯತೆ ವಿಚಾರಣೆಯಲ್ಲೇ ನಿರ್ಧಾರವಾಗಬೇಕಿದೆ ಎಂದು ಹೇಳಿದ್ದಾರೆ.
ಎಪ್ರಿಲ್ 9ರಂದು ವಾಹನಗಳು ಸುಟ್ಟುಹೋಗಿದ್ದು ಮತ್ತು ಪೊಲೀಸರು ಗಾಯಗೊಂಡಿದ್ದು ನಿಜ. ಆದರೆ, ಆ ಹಿಂಸಾಚಾರಕ್ಕೆ ಯಾರು ಕಾರಣ ಎಂಬ ಪ್ರಶ್ನೆ ಇನ್ನೂ ಉತ್ತರಿಸಬೇಕಿದೆ.
ಈ ಆದೇಶಗಳು ಸ್ಪಷ್ಟಪಡಿಸಿರುವುದು ಒಂದೇ ವಿಷಯ: ಗೌರವಯುತ ಜೀವನಕ್ಕೆ ಬೇಕಾದ ವೇತನವನ್ನು ಕೇಳುವುದನ್ನೇ ಸರ್ಕಾರವು ಸಂಚಿನ ಪುರಾವೆಯಾಗಿ ಪರಿವರ್ತಿಸಲು ಸಾಧ್ಯವಿಲ್ಲ. ಹಾಗೆಯೇ, ಆರಂಭಿಕ ಹಂತದಲ್ಲಿಯೇ ಸಾಬೀತುಪಡಿಸಲಾಗದ ಆರೋಪಗಳ ಆಧಾರದ ಮೇಲೆ ಪ್ರತಿಭಟನಾಕಾರರನ್ನು ಜೈಲಿಗೆ ತಳ್ಳಲು ಸಾಧ್ಯವಿಲ್ಲ.
ಈ ವರದಿಯ ಕೊನೆಯ ವಿವರ ಇಡೀ ಪ್ರಕರಣಕ್ಕೆ ಒಂದು ರೂಪಕದಂತಿದೆ. ಈ ಆದೇಶಗಳನ್ನು ಹೊರಡಿಸಿದ ನ್ಯಾಯಾಲಯಕ್ಕೆ ಸ್ವಂತ ನ್ಯಾಯಾಲಯ ಕೊಠಡಿಯೇ ಇರಲಿಲ್ಲ. ಇತ್ತೀಚೆಗೆ ಸಂಭವಿಸಿದ ಅಗ್ನಿ ಅವಘಡದಲ್ಲಿ ನ್ಯಾಯಾಲಯದ ಕಟ್ಟಡ ಸುಟ್ಟುಹೋಗಿದ್ದರಿಂದ, ನ್ಯಾಯಾಧೀಶೆ ಸಮೀಪದ ಸರ್ಕಾರಿ ಅತಿಥಿ ಗೃಹದಲ್ಲೇ ಕುಳಿತು ವಾದಗಳನ್ನು ಆಲಿಸಿದ್ದರು.
ನ್ಯಾಯಾಲಯದ ವ್ಯವಸ್ಥೆ ತಾತ್ಕಾಲಿಕವಾಗಿದ್ದರೂ, ನ್ಯಾಯಾಧೀಶೆಯ ತಾರ್ಕಿಕ ಚಿಂತನೆ ಮಾತ್ರ ಅತ್ಯಂತ ನಿಖರವಾಗಿತ್ತು. ಅಜಿತ್ ಸಿಂಗ್ ಪರ ಹೋರಾಡಿದ ಕಾರ್ಮಿಕ ಸಂಘಟನೆಯ ಪ್ರಕಾರ, ವಿಚಾರಣೆ ವೇಳೆ ನ್ಯಾಯಾಧೀಶೆ ಪೀಠದಿಂದಲೇ ಹೀಗೆ ಹೇಳಿದ್ದರು:
“ಕೇವಲ ‘ಇಂಕ್ವಿಲಾಬ್ ಜಿಂದಾಬಾದ್’ ಎಂದು ಘೋಷಣೆ ಕೂಗುವುದೇ ಅಪರಾಧವಾಗಿದ್ದರೆ, ಇಡೀ ವ್ಯವಸ್ಥೆಯೇ ತಲೆತಗ್ಗಿಸಬೇಕು.”
ಈ ಮಾತುಗಳು ಲಿಖಿತ ಆದೇಶದಲ್ಲಿ ದಾಖಲಾಗಿಲ್ಲ. ಆದರೆ, ಇಡೀ ಪ್ರಕರಣದ ಸಾರವನ್ನು ಅವು ಪರಿಣಾಮಕಾರಿಯಾಗಿ ಪ್ರತಿಬಿಂಬಿಸುತ್ತವೆ.
ಸೌಜನ್ಯ: thewire.in






