ವಿಕಸಿತ ಭಾರತ ಶಿಕ್ಷಣ ಅಧಿಷ್ಠಾನ ಮಸೂದೆ 2025: ಒಂದು ಮಹಾ ದುರಂತ

ಈ ಹೊಸದಾದ 2025ರ ಉನ್ನತ ಶಿಕ್ಷಣ ಅಧಿಷ್ಠಾನ ಆಯೋಗದಲ್ಲಿ ರಾಜ್ಯಗಳ ಶಿಕ್ಷಣ ಇಲಾಖೆ, ವಿವಿಗಳಿಗೆ ನೀತಿ ನಿರೂಪಣೆಯಲ್ಲಿ ಸ್ವಾತಂತ್ರವಿರುವುದಿಲ್ಲ. ಕೇಂದ್ರ ಮತ್ತು ರಾಜ್ಯ ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳಿಗೆ ಆಡಳಿತ ಮತ್ತು ಶೈಕ್ಷಣಿಕ ನೀತಿ ರೂಪಿಸುವ ಪ್ರಕ್ರಿಯೆಯಲ್ಲಿ ಯಾವುದೇ ಜವಾಬ್ದಾರಿಯಿರುವುದಿಲ್ಲ. ಇಲ್ಲಿ ಶಿಕ್ಷಣಕ್ಕಾಗಿ ಕೇಂದ್ರ ಸಲಹಾ ಸಮಿತಿ ಇರುತ್ತದೆ. ಈ ಸಮಿತಿಯು ತನ್ನ ಅಧ್ಯಕ್ಷ ಮತ್ತು ಸದಸ್ಯರಿಂದ ಸಲಹೆ, ಅಭಿಪ್ರಾಯಗಳನ್ನು ಪಡೆದುಕೊಳ್ಳುತ್ತದೆ. ಆದರೆ ಅದಕ್ಕೆ ನಿರ್ಣಯ ತೆಗೆದುಕೊಳ್ಳುವ ಅಧಿಕಾರವಿರುವುದಿಲ್ಲ, ಕಡೆಗೂ ಶಿಕ್ಷಣ ಇಲಾಖೆಗೆ ಅಂತಿಮವಾದ ನಿರ್ಣಾಯಕ ತೀರ್ಮಾನ ಕೈಗೊಳ್ಳುವ ಅಧಿಕಾರವಿರುತ್ತದೆ.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು 15 ಡಿಸೆಂಬರ್ 2025ರಂದು ಲೋಕಸಭೆಯಲ್ಲಿ ವಿಬಿಎಸ್‌ಎ(ವಿಕಸಿತ ಭಾರತ ಶಿಕ್ಷಣ ಅಧಿಷ್ಠಾನ ಮಸೂದೆ-2025) ಮಸೂದೆಯನ್ನು ಮಂಡಿಸಿದರು. ಮೋದಿ ನೇತೃತ್ವದ ಕೇಂದ್ರ ಸರಕಾರವು ಎನ್‌ಇಪಿ 2020ರ ಶಿಫಾರಸುಗಳನ್ನು ಜಾರಿಗೊಳಿಸುವ ಮುಂದುವರಿದ ಭಾಗವಾಗಿ ದೇಶದ ಉನ್ನತ ಶಿಕ್ಷಣದ ವ್ಯವಸ್ಥೆಯನ್ನು ಸಂಪೂರ್ಣ ಕೇಂದ್ರೀಕರಣಗೊಳಿಸಲು ಮುಂದಾಗಿದೆ. ಸಮಗ್ರ ಬದಲಾವಣೆಯ ಹೆಸರಿನಲ್ಲಿ ಇಡೀ ವ್ಯವಸ್ಥೆಯನ್ನು ಒಂದೇ ಸಂಸ್ಥೆಯ ವ್ಯಾಪ್ತಿಯಲ್ಲಿ ತರುತ್ತಿದ್ದಾರೆ. ಶಿಕ್ಷಣ ಇಲಾಖೆಯು ದೇಶದ ಉನ್ನತ ಶಿಕ್ಷಣದ ಮೇಲುಸ್ತುವಾರಿ ಮತ್ತು ನಿಯಂತ್ರಣಕ್ಕಾಗಿ ‘ವಿಕಸಿತ ಭಾರತ ಶಿಕ್ಷಣ ಅಧಿಷ್ಠಾನ’ ಎಂಬ ಹೆಸರಿನ ಒಂದೇ ಆಯೋಗವನ್ನು ಸ್ಥಾಪಿಸುವ ಪ್ರಸ್ತಾವವನ್ನು ಮಾಡಿದೆ. ಇದು ಕಾಯ್ದೆಯಾಗಿ ಜಾರಿಗೆ ಬಂದರೆ ಈಗಿರುವ ಯುಜಿಸಿ (ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ), ಎಐಸಿಟಿಇ (ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ), ಎನ್ಸಿಟಿಇ (ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿ) ಹೊಸ ಆಯೋಗದೊಂದಿಗೆ ವಿಲೀನಗೊಳ್ಳಲಿವೆ.
ಭಾರತೀಯ ಉನ್ನತ ಶಿಕ್ಷಣದ ಸಮಗ್ರ ನಿಯಂತ್ರಣಕ್ಕಾಗಿ ‘ವಿಕಸಿತ ಭಾರತ ಶಿಕ್ಷಣ ಅಧಿಷ್ಠಾನ ಆಯೋಗ’ ಸ್ಥಾಪನೆಯಾಗಲಿದೆ. ಇದು ದೇಶದ ಉನ್ನತ ಶಿಕ್ಷಣದ ಅತ್ಯುನ್ನತ ಸಂಸ್ಥೆಯಾಗಲಿದೆ. ಈ ಆಯೋಗವು ಒಬ್ಬ ಅಧ್ಯಕ್ಷ ಹಾಗೂ ಗರಿಷ್ಠ 12 ಸದಸ್ಯರನ್ನು ಹೊಂದಲಿದೆ. ಕೇಂದ್ರ ಸರಕಾರದ ಶಿಫಾರಸಿನ ಮೇರೆಗೆ ರಾಷ್ಟ್ರಪತಿಯವರು ಅಧ್ಯಕ್ಷರನ್ನು ನೇಮಿಸಲಿದ್ದಾರೆ. ಅಧ್ಯಕ್ಷರ ಆರಂಭಿಕ ಅಧಿಕಾರಾವಧಿ ಮೂರುವರ್ಷ ಅದನ್ನು ಐದು ವರ್ಷಗಳವರೆಗೆ ವಿಸ್ತರಿಸಬಹುದು. ಒಮ್ಮೆ ನೇಮಕಗೊಂಡ ಅಧ್ಯಕ್ಷರನ್ನು ಮತ್ತೊಂದು ಅವಧಿಗೆ ನೇಮಕ ಮಾಡುವುದಕ್ಕೂ ಮಸೂದೆ ಅವಕಾಶ ಕಲ್ಪಿಸುತ್ತದೆ.
ಮಸೂದೆಯ ಪರಿಶೀಲನೆಗಾಗಿ ಅದನ್ನು ಜೆಪಿಸಿಗೆ(ಜಂಟಿ ಸಂಸದೀಯ ಸಮಿತಿ) ಒಪ್ಪಿಸಲಾಗಿದೆ. ಈ ಮಸೂದೆಯಲ್ಲಿ ‘ಈಗಿನ ಉನ್ನತ ಶಿಕ್ಷಣ ವ್ಯವಸ್ಥೆ ಬಹಳ ವಿಸ್ತಾರವಾಗಿ ಬೆಳೆದಿದ್ದು, ಹಲವು ಸಾಂವಿಧಾನಿಕ ನಿಯಂತ್ರಣ ಪ್ರಾಧಿಕಾರಗಳಿವೆ. ಹೀಗಾಗಿ ಶಿಕ್ಷಣ ಸಂಸ್ಥೆಗಳು ವಿವಿಧ ಸಂಸ್ಥೆಗಳಿಂದ ಹಲವು ಅನುಮತಿ ಪಡೆಯಬೇಕಾಗುತ್ತ್ತದೆ. ಈ ಪ್ರಾಧಿಕಾರಗಳು ನಡೆಸುವ ಪರಿಶೀಲನೆಗಳಿಗೂ ಒಡ್ಡಿಕೊಳ್ಳಬೇಕಿದೆ. ದೇಶದ ಎಲ್ಲ ಶಿಕ್ಷಣ ವ್ಯವಸ್ಥೆಗಳ ಆಡಳಿತ ಮತ್ತು ನಿಯಂತ್ರಣ ಸೇರಿದಂತೆ ಇಡೀ ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆ ತರುವುದಕ್ಕಾಗಿ, ಸುಸ್ಥಿರ ಅಭಿವೃದ್ಧಿಯ ನಾಲ್ಕನೇ ಗುರಿಯೂ ಸೇರಿದಂತೆ 21ನೇ ಶತಮಾನದ ಶಿಕ್ಷಣದ ಮಹತ್ವಾಕಾಂಕ್ಷೆಯ ಗುರಿಗಳಿಗೆ ಅನುಗುಣವಾಗಿ ನಮ್ಮ ದೇಶದ ಸಂಪ್ರದಾಯ ಮತ್ತು ವೌಲ್ಯ ವ್ಯವಸ್ಥೆಗಳಿಗೆ ಪೂರಕವಾಗಿ ಹೊಸ ವ್ಯವಸ್ಥೆ ರೂಪಿಸುವುದಕ್ಕಾಗಿ 2020ರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಈಗಾಗಲೇ ಜಾರಿಗೊಳಿಸಲಾಗಿದೆ. ಈ ನೀತಿಗಳಿಗೆ ಪೂರಕವಾಗಿ ಈ ಮಸೂದೆಯನ್ನು ಸಿದ್ಧಪಡಿಸಲಾಗಿದೆ. ದೇಶದಲ್ಲಿ ಜಾಗತಿಕ ಗುಣಮಟ್ಟದ ಉನ್ನತ ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ಮತ್ತು ಉನ್ನತ ಶಿಕ್ಷಣದಲ್ಲಿ ಒಟ್ಟು ದಾಖಲಾತಿ ಅನುಪಾತ (ಜಿಇಆರ್) ಹೆಚ್ಚಾಗಲು ಈ ಮಸೂದೆ ಕೊಡುಗೆ ನೀಡಲಿದೆ’ ಎಂದು ವಿವರಿಸಿದೆ.
ಈ ಮಸೂದೆಯಲ್ಲಿ ಮೂರು ಪರಿಷತ್‌ಗಳಿವೆ: ವಿಕಸಿತ ಭಾರತ ಶಿಕ್ಷಣ ವಿನಿಯಮನ್ ಪರಿಷತ್ (ಭಾರತೀಯ ಉನ್ನತ ಶಿಕ್ಷಣ ನಿಯಂತ್ರಣ ಪರಿಷತ್)
ಅಧ್ಯಕ್ಷರು ಮತ್ತು 14 ಸದಸ್ಯರನ್ನು ಹೊಂದಲಿದೆ. ಜವಾಬ್ದಾರಿ: ಆಯೋಗದ ಅಡಿಯಲ್ಲಿ ಶಿಕ್ಷಣ ಸಂಸ್ಥೆಗಳ ನಿಯಂತ್ರಣ, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣದ ಗುಣಮಟ್ಟ ಕಾಯ್ದುಕೊಳ್ಳಲು ಮತ್ತು ಉತ್ತಮ ಸಂಬಂಧ ಸಾಧಿಸಲು ಕ್ರಮಗಳನ್ನು ಕೈಗೊಳ್ಳುವುದು, ಉನ್ನತ ಶಿಕ್ಷಣದ ಅಂತರ್‌ರಾಷ್ಟ್ರೀಕರಣಕ್ಕೆ ಪ್ರೋತ್ಸಾಹ ನೀಡುವುದು ಹಾಗೂ ಶಿಕ್ಷಣ ಸಂಸ್ಥೆಗಳು ನಿಯಂತ್ರಣ ನಿಯಮಗಳ ಪಾಲನೆ ಮಾಡುವಂತೆ ನೋಡಿಕೊಳ್ಳುವುದು.
ವಿಕಸಿತ ಭಾರತ ಶಿಕ್ಷಣ ಗುಣವತಾ ಪರಿಷತ್ (ಭಾರತೀಯ ಉನ್ನತಶಿಕ್ಷಣ ಮಾನ್ಯತಾ ಪರಿಷತ್) ಅಧ್ಯಕ್ಷರು ಮತ್ತು 14 ಸದಸ್ಯರು ಈ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳಿಗೆ ಮಾನ್ಯತೆ ನೀಡುವುದು ಮತ್ತು ಮಾನ್ಯತೆ ನೀಡುವ ಸ್ವತಂತ್ರ ವ್ಯವಸ್ಥೆಯ ಮೇಲುಸ್ತುವಾರಿ.
ವಿಕಸಿತ ಭಾರತ ಶಿಕ್ಷಣ ಮಾನಕ ಪರಿಷತ್ (ಭಾರತೀಯ ಉನ್ನತ ಶಿಕ್ಷಣ ಮಾನದಂಡ ನಿಗದಿ ಪರಿಷತ್)
ಅಧ್ಯಕ್ಷರು ಮತ್ತು 14 ಸದಸ್ಯರು ಇದರಲ್ಲಿ ಇರುತ್ತಾರೆ. ಜವಾಬ್ದಾರಿ: ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿರಬೇಕಾದ ಶೈಕ್ಷಣಿಕ ಗುಣಮಟ್ಟವನ್ನು ನಿಗದಿ ಮಾಡುವುದು ಮತ್ತು ಸಮನ್ವಯ ಸಾಧಿಸುವುದು.
ಶಿಕ್ಷಣ ತಜ್ಞರು, ಶಿಕ್ಷಣ ಕ್ಷೇತ್ರದಲ್ಲಿ ತೊಡಗಿರುವವರು, ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳು, ರಾಜ್ಯ ಉನ್ನತ ಸಂಸ್ಥೆಗಳು ಮತ್ತು ರಾಷ್ಟ್ರೀಯ ಪ್ರಾಮುಖ್ಯದ ಸಂಸ್ಥೆಗಳ ಪ್ರತಿನಿಧಿಗಳು ಅಧಿಷ್ಠಾನದ ಪರಿಷತ್ತುಗಳ ಸದಸ್ಯರಾಗಲಿದ್ದಾರೆ.
ದೇಶದಲ್ಲಿರುವ ಎಲ್ಲ ವಿಶ್ವವಿದ್ಯಾನಿಲಯಗಳು (ಕೇಂದ್ರೀಯ, ರಾಜ್ಯ, ಖಾಸಗಿ, ಡೀಮ್), ಅವುಗಳ ವ್ಯಾಪ್ತಿಗೆ ಬರುವ ಕಾಲೇಜುಗಳು, ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಶಿಕ್ಷಣ ಸಂಸ್ಥೆಗಳು, ಐಐಟಿ, ಎನ್‌ಐಟಿ, ಐಐಎಸ್‌ಇಆರ್, ಐಐಎಂ, ಐಐಐಟಿಗಳು ಸೇರಿದಂತೆ ಕೇಂದ್ರ ಸರಕಾರವು ರಾಷ್ಟ್ರೀಯ ಪ್ರಾಮುಖ್ಯದ ಶಿಕ್ಷಣ ಸಂಸ್ಥೆಗಳು ಎಂದು ಘೋಷಿಸಿರುವ ಸಂಸ್ಥೆಗಳು ಈ ಮಸೂದೆಯ ವ್ಯಾಪ್ತಿಗೆ ಬರುತ್ತವೆ (ಸದ್ಯ ಐಐಟಿ ಮತ್ತು ಐಐಎಂಗಳು ಯುಜಿಸಿ ನಿಯಂತ್ರಣಕ್ಕೆ ಬರುವುದಿಲ್ಲ)
ಸಾಧಕ ಬಾಧಕಗಳು
ಈ ಆಯೋಗದ ಹೆಸರು, ಪರಿಷತ್‌ನ ಹೆಸರುಗಳು ಸಂಪೂರ್ಣ ಹಿಂದಿಮಯವಾಗಿವೆ. ಇದು ಹಿಂದಿ ಹೇರಿಕೆ ಎನ್ನುವುದರಲ್ಲಿ ಅನುಮಾನವಿಲ್ಲ. ಪ್ರಸ್ತಾಪ:
ಪುಟ 3,334:, ಶರತ್ತು 45 ಮತ್ತು 46ರ ಅನುಸಾರ: ನೀತಿ ನಿರೂಪಣೆಯ ವಿಚಾರಕ್ಕೆ ಸಂಬಂಧಿಸಿದಂತೆ ಆಯೋಗಕ್ಕೆ ನಿರ್ದೇಶನ ನೀಡಲು ಕೇಂದ್ರ ಸರಕಾರಕ್ಕೆ ಸಂಪೂರ್ಣ ಅಧಿಕಾರ ಕೊಡಲಾಗಿದೆ. ಒಂದು ವೇಳೆ ಆಯೋಗ ಮತ್ತು ಪರಿಷತ್‌ಗಳು ಸೂಕ್ತ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಅನಿಸಿದರೆ, ಅವುಗಳ ನಡುವೆ ಭಿನ್ನಾಭಿಪ್ರಾಯ ತಲೆದೋರಿದರೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಅಗತ್ಯ ಉಂಟಾದರೆ ಅವುಗಳನ್ನು ರದ್ದುಗೊಳಿಸಲು ಕೇಂದ್ರ ಸರಕಾರಕ್ಕೆ ಸಂಪೂರ್ಣ ಅಧಿಕಾರ ಕೊಡಲಾಗಿದೆ.
ಬಾಧಕ:
ಎಲ್ಲಾ ಸಂದರ್ಭಗಳಲ್ಲಿಯೂ ಕೇಂದ್ರ ಸರಕಾರದ ನಿಯಮವೇ ಅಂತಿಮವಾಗಿರುತ್ತದೆ. ಇದು ಆಯೋಗದ ಸ್ವಾಯತ್ತೆಗೆ ಧಕ್ಕೆ ಉಂಟು ಮಾಡುತ್ತದೆ. ಉನ್ನತ ಶಿಕ್ಷಣದ ಆಡಳಿತ, ನಿಯಂತ್ರಣವನ್ನು ಸಂಪೂರ್ಣವಾಗಿ ಕೇಂದ್ರೀಕರಣಗೊಳಿಸಲಾಗಿದೆ. ಆನಂದ ತೇಲ್ತುಂಬ್ಡೆ ಅವರು ‘ಈ ಬದಲಾವಣೆಗಳು ಶಿಕ್ಷಣದ ಸುದಾರಣೆಗಳಲ್ಲ, ನಿರಂಕುಶ ಪ್ರಭುತ್ವದ ಹೇರಿಕೆ’ ಎಂದು ಹೇಳಿದ್ದಾರೆ. ಯುಜಿಸಿ ಮುಂತಾದ ಸ್ವಾಯತ್ತ ಸಂಸ್ಥೆಗಳನ್ನು ವಿಸರ್ಜಿಸಿ ಒಂದು ಆಯೋಗದಲ್ಲಿ ವಿಲೀನಗೊಳಿಸುವುದು ಬಲವರ್ಧನೆ ಎಂದು ಕರೆಯಲಾಗಿದೆ. ಆದರೆ ಕಳೆದ ಹನ್ನೊಂದು ವರ್ಷಗಳ ಮೋದಿ ನೇತೃತ್ವ ಸರಕಾರದ ಆಡಳಿತದ ಅನುಭವದಲ್ಲಿ ಹೇಳುವುದಾದರೆ ಇದು ಸಂಪೂರ್ಣವಾಗಿ ಅಧಿಕಾರ ಕೇಂದ್ರೀಕರಣವಾಗಿದೆ. ಆರೆಸ್ಸೆಸ್‌ನ ಬ್ರಾಹ್ಮಣವಾದಿ-ಹಿಂದುತ್ವ ಸಿದ್ಧಾಂತದ ಅನುಷ್ಠಾನಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಈ ಎಲ್ಲಾ ಗೊಂದಲ ಮತ್ತು ಮೋದಿ ನೇತೃತ್ವದ ಸರಕಾರದ ಏಕಪಕ್ಷೀಯ ನಿರ್ಧಾರಗಳಿಗೆ ಮೂಲವು 2005ರಲ್ಲಿ ಆಗಿನ ಯುಪಿಎ ಸರಕಾರ ಸ್ಯಾಮ್ ಪಿತ್ರೋಡಾ ಅಧ್ಯಕ್ಷತೆಯಲ್ಲಿ ರಚಿಸಿದ ರಾಷ್ಟ್ರೀಯ ಜ್ಞಾನ ಆಯೋಗದ ಶಿಫಾರಸುಗಳಲ್ಲಿದೆ. ಈ ಜ್ಞಾನ ಆಯೋಗವು ಉನ್ನತ ಶಿಕ್ಷಣದಲ್ಲಿ ಸ್ವತಂತ್ರವಾದ ನಿಯಂತ್ರಣ ಪ್ರಾಧಿಕಾರದ ರಚನೆಗೆ ಒಲವು ವ್ಯಕ್ತಪಡಿಸುತ್ತದೆ. ನಂತರ 2009ರ ಯಶಪಾಲ್ ಸಮಿತಿಯು ಏಕ ಗವಾಕ್ಷಿ ನಿಯಂತ್ರಣ ಪ್ರಾಧಿಕಾರ ಪರವಾಗಿ ಮಾತನಾಡುತ್ತದೆ. ಅಂದರೆ ಈಗಿರುವ ಸ್ವರೂಪದಲ್ಲಿ ಕೇಂದ್ರದಲ್ಲಿ ಯುಜಿಸಿ ಮತ್ತು ಅದರ ಅಡಿಯಲ್ಲಿ ಬರುವ ಕೇಂದ್ರ, ರಾಜ್ಯ ವಿಶ್ವ ವಿದ್ಯಾನಿಲಯಗಳು, ವೈದ್ಯಕೀಯ, ನರ್ಸಿಂಗ್, ತಂತ್ರಜ್ಞಾನ, ಕೃಷಿ, ಲೆಕ್ಕ ಪರಿಶೋಧಕ, ವಾಸ್ತುಶಿಲ್ಪ ಇತರ ವಲಯಗಳಿಗೆ ಮೇಲ್ವಿಚಾರಣೆ ಮತ್ತು ನಿಯಂತ್ರಣ ಘಟಕಗಳಿರುತ್ತವೆ. ಇವೆಲ್ಲವನ್ನೂ ವಿಸರ್ಜಿಸಿ ಎಲ್ಲವನ್ನು ಒಂದೇ ಆಯೋಗದಡಿ ತರಬೇಕೆಂದು ಯಶಪಾಲ್ ಸಮಿತಿ ಶಿಫಾರಸು ಮಾಡಿತ್ತು. ಬಿಡಿ ಬಿಡಿಯಾದ ಆಡಳಿತ ವ್ಯವಸ್ಥೆಯು ಎಂದಿಗೂ ಅನುಕೂಲಕರವಲ್ಲ, ಉನ್ನತ ಶಿಕ್ಷಣದಲ್ಲಿ ಏಕ ಗವಾಕ್ಷಿಯ ಕೇಂದ್ರೀಕೃತ ಆಡಳಿತ ವ್ಯವಸ್ಥೆ ಇರಬೇಕಾಗುತ್ತದೆ, ಆಗಲೇ ನಿಯಂತ್ರಣ ಸುಲಭವಾಗುತ್ತದೆ ಎಂದು ಎರಡೂ ಆಯೋಗಗಳು ವರದಿ ನೀಡಿದ್ದವು. ಆಗಿನ ಯುಪಿಎ ಸರಕಾರದ ಶಿಕ್ಷಣ ಸಚಿವರಾಗಿದ್ದ ಕಪಿಲ್ ಸಿಬಲ್ ಅವರು ಉನ್ನತ ಶಿಕ್ಷಣವನ್ನು ಕೇಂದ್ರೀಕರಣಗೊಳಿಸಿ ಏಕಗವಾಕ್ಷಿ ಅಡಿಯಲ್ಲಿ ನಿಯಂತ್ರಣ ಸಾಧಿಸಲು ಉನ್ನತ ಶಿಕ್ಷಣ ಮತ್ತು ಸಂಶೋಧನೆಗಾಗಿ ರಾಷ್ಟ್ರೀಯ ಮಂಡಳಿ ತರಲು ಉದ್ದೇಶಿಸಿದ್ದರು.
ಈ ಹೊಸದಾದ 2025ರ ಉನ್ನತ ಶಿಕ್ಷಣ ಅಧಿಷ್ಠಾನ ಆಯೋಗದಲ್ಲಿ ರಾಜ್ಯಗಳ ಶಿಕ್ಷಣ ಇಲಾಖೆ, ವಿವಿಗಳಿಗೆ ನೀತಿ ನಿರೂಪಣೆಯಲ್ಲಿ ಸ್ವಾತಂತ್ರವಿರುವುದಿಲ್ಲ. ಕೇಂದ್ರ ಮತ್ತು ರಾಜ್ಯ ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳಿಗೆ ಆಡಳಿತ ಮತ್ತು ಶೈಕ್ಷಣಿಕ ನೀತಿ ರೂಪಿಸುವ ಪ್ರಕ್ರಿಯೆಯಲ್ಲಿ ಯಾವುದೇ ಜವಾಬ್ದಾರಿಯಿರುವುದಿಲ್ಲ. ಇಲ್ಲಿ ಶಿಕ್ಷಣಕ್ಕಾಗಿ ಕೇಂದ್ರ ಸಲಹಾ ಸಮಿತಿ ಇರುತ್ತದೆ. ಈ ಸಮಿತಿಯು ತನ್ನ ಅಧ್ಯಕ್ಷ ಮತ್ತು ಸದಸ್ಯರಿಂದ ಸಲಹೆ, ಅಭಿಪ್ರಾಯಗಳನ್ನು ಪಡೆದುಕೊಳ್ಳುತ್ತದೆ. ಆದರೆ ಅದಕ್ಕೆ ನಿರ್ಣಯ ತೆಗೆದುಕೊಳ್ಳುವ ಅಧಿಕಾರವಿರುವುದಿಲ್ಲ, ಕಡೆಗೂ ಶಿಕ್ಷಣ ಇಲಾಖೆಗೆ ಅಂತಿಮವಾದ ನಿರ್ಣಾಯಕ ತೀರ್ಮಾನ ಕೈಗೊಳ್ಳುವ ಅಧಿಕಾರವಿರುತ್ತದೆ. ಉನ್ನತ ಶಿಕ್ಷಣದಲ್ಲಿ ರಾಜ್ಯಗಳನ್ನು ಒಳಗೊಳ್ಳಬೇಕಾಗುತ್ತದೆ, ಅವರಿಗೂ ನೀತಿ ನಿರೂಪಣೆಯಲ್ಲಿ ಉತ್ತರದಾಯಿತ್ವವಿರುತ್ತದೆ ಮತ್ತು ಬಾಧ್ಯತೆಯಿರುತ್ತದೆ. ಆದರೆ ಈ ಹೊಸ ಕರಡಿನಲ್ಲಿ ರಾಜ್ಯಗಳಿಗೆ ಬಾಧ್ಯತೆಯ, ಉತ್ತರದಾಯಿತ್ವದ ಅವಕಾಶವನ್ನು ನೀಡಿಲ್ಲ. ಈ ಹಿಂದೆ ಯುಜಿಸಿಯು ಎರಡು ಶ್ರೇಣಿಯ ವ್ಯವಸ್ಥೆಯನ್ನು ಶಿಫಾರಸು ಮಾಡಿತ್ತು. ಅದರಲ್ಲಿ ಆಯೋಗ ಮತ್ತು ಆಡಳಿತ ಮಂಡಳಿ ಇರುತ್ತದೆ. ಈ ಆಡಳಿತ ಮಂಡಳಿಯು ರಾಜ್ಯಗಳ ಪ್ರತಿನಿಧಿಗಳನ್ನು ಒಳಗೊಂಡಿರುತ್ತದೆ ಮತ್ತು ವೈದ್ಯಕೀಯ, ತಂತ್ರಜ್ಞಾನ, ಇಂಜಿನಿಯರಿಂಗ್, ಕೃಷಿ, ಪಶು ವೈದ್ಯಕೀಯ, ನರ್ಸಿಂಗ್ ವಲಯಗಳಿಂದಲೂ ಪ್ರತಿನಿಧಿಗಳನ್ನು ಒಳಗೊಂಡಿರುತ್ತದೆ. ಈ ಪ್ರತಿನಿಧಿಗಳಿಗೆ ನೀತಿ-ನಿರೂಪಣೆಯಲ್ಲಿ, ನಿರ್ಣಯ ರೂಪಿಸುವಲ್ಲಿ ಗುರುತರವಾದ ಜವಾಬ್ದಾರಿಯಿರುತ್ತದೆ ಮತ್ತು ಉತ್ತರದಾಯಿತ್ವವಿರುತ್ತದೆ. ಪ್ರತೀ ಹಂತದಲ್ಲಿಯೂ ಅವರ ಸಲಹೆ ಪಡೆದುಕೊಂಡು ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ಇದು ಅತ್ಯಂತ ಸೌಹಾರ್ದಯುತವಾದ ವ್ಯವಸ್ಥೆಯಾಗುತ್ತದೆ. ಆದರೆ ಈ ಹೊಸದಾದ ಉನ್ನತ ಶಿಕ್ಷಣ ಆಯೋಗವು ಈ ಎಲ್ಲಾ ಆಶಯಗಳನ್ನು ಕೈಬಿಟ್ಟಿದೆ.
ಪ್ರಸ್ತಾಪ: ವಿಕಸಿತ ಅಧಿಷ್ಠಾನ ಆಯೋಗದ ಸಮಿತಿಯ 12 ಸದಸ್ಯರಲ್ಲಿ ಮತ್ತು ಇತರ ಮೂರು ಪರಿಷತ್‌ಗಳ ತಲಾ 14 ಸದಸ್ಯರ ಪೈಕಿ ರಾಜ್ಯ ಉನ್ನತ ಶಿಕ್ಷಣ ಸಂಸ್ಥೆಗಳಿಂದ ಪ್ರಾಧ್ಯಾಪಕ ಶ್ರೇಣಿಯ ಇಬ್ಬರು ಸದಸ್ಯರು ನೇಮಕಗೊಳ್ಳುತ್ತಾರೆ. ಮೂರು ಪರಿಷತ್‌ಗಳ ಈ ಮಂಡಳಿಗಳಿಗೆ ತನ್ನ ಅಭಿಪ್ರಾಯಗಳನ್ನು, ಸಲಹೆಗಳನ್ನು ಕೇವಲ ಶಿಫಾರಸು ಮಾಡುವ ಅಧಿಕಾರವಿರುತ್ತದೆ. ನಿರ್ಣಯ ತೆಗೆದುಕೊಳ್ಳುವ ಅಧಿಕಾರವಿರುವುದಿಲ್ಲ. ಆದರೆ ಸಲಹಾ ಸಮಿತಿಯ ಈ ಶಿಫಾರಸುಗಳನ್ನು ಒಪ್ಪುವ ಅಥವಾ ತಿರಸ್ಕರಿಸುವ ಅಧಿಕಾರ ಮೇಲಿನ ಆಯೋಗ ಮತ್ತು ಇಲಾಖೆಗೆ ನೀಡಲಾಗಿದೆ.
ಬಾಧಕ: ಈ ನಿಯಮಗಳು ಶೈಕ್ಷಣಿಕ, ಆಡಳಿತಾತ್ಮಕ ಚರ್ಚೆ ಮತ್ತು ನಿರ್ಣಯಗಳ ಸಂದರ್ಭದಲ್ಲಿ ಪ್ರತೀ ಪರಿಷತ್‌ನಲ್ಲಿ ರಾಜ್ಯದಿಂದ ಕೇವಲ ಇಬ್ಬರು ಸದಸ್ಯರು ಇರುವುದರಿಂದ ಇದು ರಾಜ್ಯಗಳ ಪಾಲ್ಗೊಳ್ಳುವಿಕೆಯನ್ನೇ ಮಿತಿಗೊಳಿಸುತ್ತದೆ. ರಾಜ್ಯಗಳು ತಮ್ಮ ಸಲಹೆಗಳನ್ನು ಮಂಡಿಸಬಹುದೇ ಹೊರತು ನಿರ್ಣಯಗಳನ್ನು ತೆಗೆದುಕೊಳ್ಳುವ ಅಧಿಕಾರವಿರುವುದಿಲ್ಲ. ಆ ಮೂಲಕ ಪ್ರಜಾಪ್ರಭುತ್ವದ ಒಕ್ಕೂಟದ ಆಶಯಗಳನ್ನೇ ದುರ್ಬಲಗೊಳಿಸುತ್ತದೆ ಮತ್ತು ಉನ್ನತ ಶಿಕ್ಷಣ ವ್ಯವಸ್ಥೆಯನ್ನೇ ಕೇಂದ್ರೀಕರಣಗೊಳಿಸುತ್ತದೆ. ಈ ಆಯೋಗ ಮತ್ತು ಪರಿಷತ್‌ಗಳ ಸದಸ್ಯರ ಪೈಕಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಅಧಿಕಾರಶಾಹಿಯ ಪ್ರತಿನಿಧಿಗಳಿದ್ದಾರೆ. ಶೈಕ್ಷಣಿಕ ವಲಯದಿಂದ ಪ್ರತೀ ಮಂಡಳಿಗೆ ಕೇವಲ ಇಬ್ಬರು ಪ್ರತಿನಿಧಿಗಳಿರುತ್ತಾರೆ. ಇದು ಇಡೀ ಆಯೋಗದ ಕಾರ್ಯನಿರ್ವಹಣೆಯನ್ನು ‘ಅಧಿಕಾರಶಾಹೀಕರಣ’ಗೊಳಿಸುತ್ತದೆ. ಶೈಕ್ಷಣಿಕ ವಿಚಾರಗಳಿಗೆ, ವ್ಯಾಸಂಗಕ್ರಮ(ಪೆಡಗಾಜಿ) ಸಂಬಂಧಿಸಿದಂತೆ ಈ ಅಧಿಕಾರಶಾಹಿ ನೀತಿ ರೂಪಿಸುತ್ತದೆ. ಇದು ಸ್ವಾಗತಾರ್ಹವಲ್ಲ. ಇದು ಶಿಕ್ಷಣ ಆಯೋಗವಲ್ಲ, ಬದಲಿಗೆ ಕಾರ್ಯಾಂಗ ಹಿಡಿತದ ಆಯೋಗ ಎನ್ನಬಹುದು
ಸರಕಾರವು ಈ ಹೊಸ ಆಯೋಗದ ಮೂಲಕ ಶೈಕ್ಷಣಿಕ ಸುಧಾರಣೆಯ ಬದಲಾಗಿ ಆಡಳಿತ ಸುಧಾರಣೆಯನ್ನು ಆದ್ಯತೆಯಾಗಿ ಪರಿಗಣಿಸಿದಂತಿದೆ. ಮಂಡಳಿಗಳಿಗೆ ನೇಮಕಾತಿಯಲ್ಲಿ ಸಾಮಾಜಿಕ ನ್ಯಾಯದ ಸ್ವರೂಪವನ್ನು, ನೀತಿ ನಿಯಮಾವಳಿಗಳನ್ನು ಎಲ್ಲಿಯೂ ಸ್ಪಷ್ಟವಾಗಿ ಉಲ್ಲೇಖಿಸಿಲ್ಲ. ಅಧ್ಯಕ್ಷರ, ಸದಸ್ಯರ ಆಯ್ಕೆ ನೇಮಕಾತಿ ದಲಿತ, ತಳ ಸಮುದಾಯ, ಅಲ್ಪಸಂಖ್ಯಾತರನ್ನು ಒಳಗೊಂಡಂತೆ ನೇಮಕವಾಗುತ್ತದೆಯೇ ಎನ್ನುವುದರ ಕುರಿತು ಈ ಕರಡು ಮಸೂದೆ ವೌನವಾಗಿದೆ. ಐಎಎಸ್ ಹುದ್ದೆಗಳಿಗೆ ಈಗಾಗಲೇ ಹಿಂಬಾಗಿಲ ಪ್ರವೇಶದ ಮೂಲಕ ಸಾಮಾಜಿಕ ನ್ಯಾಯವನ್ನು ಉಲ್ಲಂಸಿದ ಉದಾಹರಣೆ ನಮ್ಮ ಕಣ್ಣ ಮುಂದಿದೆ. ಇಲ್ಲಿಯೂ ಇದೇ ನೀತಿ ಅನುಸರಿಸುವರೇ? ಈ ಕುರಿತು ಎಲ್ಲಿಯೂ ಪಾರದರ್ಶಕತೆ ಕಂಡುಬರುತ್ತಿಲ್ಲ. ಈ ಉನ್ನತ ಶಿಕ್ಷಣ ಆಯೋಗದ ರಚನೆಯ ಮೂಲಕ ವಿಶ್ವವಿದ್ಯಾನಿಲಯಗಳಿಗೆ ದರ್ಜೆಗಳನ್ನು ನಿಗದಿಪಡಿಸಲು ಶಿಕ್ಷಣದಲ್ಲಿ ಶ್ರೇಣೀಕೃತ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತದೆ. ಈ ಶ್ರೇಣಿಕೃತ ವ್ಯವಸ್ಥೆಯಲ್ಲಿ ಸಂಪೂರ್ಣ ಸ್ವಾಯತ್ತೆ, ದುಬಾರಿ ಶುಲ್ಕವನ್ನು ವಿಧಿಸುವ ವಿ.ವಿ.ಗಳನ್ನು ವಿಶ್ವ ದರ್ಜೆಯ ಸಂಸ್ಥೆಗಳೆಂದು ಕರೆಯಲಾಗುತ್ತದೆ ಸಾಮಾನ್ಯ ವಿದ್ಯಾರ್ಥಿಗಳಿರುವ ವಿ.ವಿ.ಗಳನ್ನು ಕೆಳದರ್ಜೆ ಎಂದು ಕಪ್ಪುಪಟ್ಟಿಗೆ ಸೇರಿಸುವ ಸಾಧ್ಯತೆಗಳಿವೆ
ಪ್ರಸ್ತಾಪ: ಈ ವಿಕಸಿತ ಭಾರತ ಶಿಕ್ಷಣ ಅಧಿಷ್ಠಾನ ಆಯೋಗಕ್ಕೆ(ವಿಬಿಎಸ್‌ಎ) ಹಣಕಾಸಿನ ಜವಾಬ್ದಾರಿ ನೀಡಿಲ್ಲ. ಇದರ ಆಡಳಿತ ಮತ್ತು ಶೈಕ್ಷಣಿಕ ಗುಣಮಟ್ಟದ ಮೇಲೆ ಮಾತ್ರ ಹೆಚ್ಚಿನ ಸುಧಾರಣೆಗಳನ್ನು ತರಬೇಕು, ಅದಕ್ಕೆ ಹಣಕಾಸಿನ ನಿರ್ವಹಣೆ ಹೆಚ್ಚುವರಿ ಹೊರೆಯಾಗುತ್ತದೆ ಎಂದು ಪ್ರತಿಪಾದಿಸಿರುವ ಕೇಂದ್ರ ಶಿಕ್ಷಣ ಇಲಾಖೆ ಆಡಳಿತ/ಶೈಕ್ಷಣಿಕ ಹಾಗೂ ಹಣಕಾಸಿನ ನಿರ್ವಹಣೆ ಎರಡನ್ನು ಪ್ರತ್ಯೇಕಿಸಿದೆ. ವಿಬಿಎಸ್‌ಎ ಕೇವಲ ಶೈಕ್ಷಣಿಕ ಮತ್ತು ಆಡಳಿತದ ಜವಾಬ್ದಾರಿ ಹೊಂದಿರುತ್ತದೆ. ಹಣಕಾಸಿನ ನಿರ್ವಹಣೆಯ ಎಲ್ಲಾ ಜವಾಬ್ದಾರಿಯನ್ನು ಶಿಕ್ಷಣ ಇಲಾಖೆಗೆ ವಹಿಸಲಾಗಿದೆ.(ಪುಟ 37, ಕ್ರ.ಸಂ.3)
ಬಾಧಕ: ಈ ಹೊಸ ನೀತಿಯಿಂದಾಗಿ ಅಧಿಷ್ಠಾನ ಆಯೋಗವು ತನ್ನ ಆಡಳಿತಾತ್ಮಕ ನಿರ್ಣಯಗಳಿಗೆ ಅವಶ್ಯಕವಾದ ಹಣಕಾಸಿನ ನೆರವನ್ನು ಶಿಕ್ಷಣ ಇಲಾಖೆಯ ಮೇಲೆ ಅವಲಂಬಿತವಾಗಬೇಕಾಗುತ್ತದೆ. ಉನ್ನತ ಶಿಕ್ಷಣದ ಹಣಕಾಸಿನ ಜವಾಬ್ದಾರಿಯು ನೇರವಾಗಿ ಒಂದು ರಾಜಕೀಯ ಪಕ್ಷ ಆಡಳಿತವಿರುವ ಇಲಾಖೆಯ ಸುಪರ್ದಿಗೆ ಸೇರಿದಾಗ ಇಡೀ ಧನ ಸಹಾಯದ, ವಿನಿಯೋಗದ ಪ್ರಕ್ರಿಯೆಯು ರಾಜಕೀಯಗೊಳ್ಳುತ್ತದೆ. ಆಗ ಎಲ್ಲಾ ಕೇಂದ್ರ, ರಾಜ್ಯ ವಿವಿಗಳು ಈ ಇಲಾಖೆಯ ಮರ್ಜಿಯಲ್ಲಿರಬೇಕಾಗುತ್ತದೆ. ರಾಜ್ಯಗಳು ತನ್ನ ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸಿದರೆ ಇಲಾಖೆಯಿಂದ ಸೂಕ್ತ ಹಣಕಾಸಿನ ನೆರವು ಕಡಿತಗೊಳ್ಳುವ ಭಯದ ಕತ್ತಿ ಸದಾ ತೂಗಾಡುತ್ತಿರುತ್ತದೆ. ಈ ಪರಾವಲಂಬಿತನವು ಶಿಕ್ಷಣ ಆಯೋಗದ ಹಲ್ಲು, ಉಗುರುಗಳನ್ನು ಕಿತ್ತಂತಾಗುತ್ತದೆ. ಜೊತೆಗೆ ಶಿಕ್ಷಣ ಇಲಾಖೆಯು ವಿಶ್ವವಿದ್ಯಾನಿಲಯಗಳ ಆಡಳಿತದಲ್ಲಿ ನೇರವಾಗಿ ಹಸ್ತಕ್ಷೇಪ ಮಾಡುವ ಅವಕಾಶ ಕಲ್ಪಿಸಿಕೊಡುತ್ತದೆ. ಅಲ್ಲಿಗೆ ಅದರ ಸ್ವಾಯತ್ತೆಗೆ ಧಕ್ಕೆ ಉಂಟಾಗುತ್ತದೆ. ಶಿಕ್ಷಣದಲ್ಲಿ ಸಾರ್ವಜನಿಕ ಹೂಡಿಕೆಯನ್ನು ಉತ್ತೇಜಿಸಬೇಕಾದ ಸಂದರ್ಭದಲ್ಲಿ ಈ ಉನ್ನತ ಶಿಕ್ಷಣ ಆಯೋಗದ ಸ್ವರೂಪವು ಸರಕಾರವೇ ಆರ್ಥಿಕ ಅನುದಾನವನ್ನು ಕಡಿತಗೊಳಿಸಲು ಸಹಕಾರಿಯಾಗುವಂತೆ ರಚನೆಯಾಗಲಿದೆ. ಯುಜಿಸಿ ಅಧ್ಯಕ್ಷರಾಗಿದ್ದ ಥೋರಟ್ ಅವರು ‘‘ಇಂಗ್ಲೆಂಡ್ ಒಳಗೊಂಡಂತೆ ಅನೇಕ ರಾಷ್ಟ್ರಗಳಲ್ಲಿ ಉನ್ನತ ಶಿಕ್ಷಣದಲ್ಲಿನ ಹಣಕಾಸಿನ ಹಂಚಿಕೆ ಮತ್ತು ಅನುದಾನದ ಜವಾಬ್ದಾರಿಯು ಆಯೋಗಕ್ಕೆ ವಹಿಸಲಾಗುತ್ತದೆ, ಇಲಾಖೆಗಳ ವ್ಯಾಪ್ತಿಗೆ ಬರುವುದಿಲ್ಲ. ಧನ ಸಹಾಯದ ಎಲ್ಲಾ ಚಟುವಟಿಕೆಗಳು ರಾಜಕಾರಣದಿಂದ ಮುಕ್ತವಾಗಿರಬೇಕು’’ ಎಂದು ಹೇಳುತ್ತಾರೆ. ಯೋಜನಾ ಆಯೋಗದಲ್ಲಿ ಶಿಕ್ಷಣಕ್ಕೆ ಕುರಿತಂತೆ ಪ್ರಧಾನ ಸಲಹೆಗಾರರಾಗಿದ್ದ ಅಮಿತಾಭ್ ಭಟ್ಟಾಚಾರ್ಯ ಅವರು ‘‘ಶೇ.50 ಪ್ರಮಾಣಕ್ಕಿಂತಲೂ ಹೆಚ್ಚಿನ ಪ್ರಮಾಣದ ವಿದ್ಯಾರ್ಥಿ/ವಿದ್ಯಾರ್ಥಿನಿಯರು ರಾಜ್ಯ ವಿಶ್ವವಿದ್ಯಾನಿಲಯಗಳಲ್ಲಿ ವ್ಯಾಸಂಗ ಮಾಡುತ್ತಾರೆ. ಈ ರಾಜ್ಯ ವಿ.ವಿ.ಗಳಿಗೆ ಧನ ಸಹಾಯ ಮಾಡುವಾಗ ಎಲ್ಲಿಯೂ ಆರ್ಥಿಕ ಕೊರತೆ ಉಂಟಾಗದಂತೆ ಎಚ್ಚರ ವಹಿಸಬೇಕಾಗುತ್ತದೆ. ಪಾರದರ್ಶಕ ವ್ಯವಸ್ಥೆಯಿರಬೇಕಾಗುತ್ತದೆ. ಆದರೆ ಉನ್ನತ ಶಿಕ್ಷಣ ಆಯೋಗವು ಹಣಕಾಸಿನ ನಿರ್ವಹಣೆ ಮೇಲೆ ಅಧಿಕಾರವಿಲ್ಲದೆ ಎಷ್ಟರ ಮಟ್ಟಿಗೆ ಆಡಳಿತದಲ್ಲಿ ಸುಧಾರಣೆ ತರಬಲ್ಲದು ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ದೊರಕಿಲ್ಲ’’ ಎಂದು ಹೇಳುತ್ತಾರೆ ನವ ಉದಾರೀಕರಣದ ಡಬ್ಲುಟಿಒ-ಗ್ಯಾಟ್ ಆದೇಶದಲ್ಲಿ ಬಂಡವಾಳಶಾಹಿ ಹಣಕಾಸಿನ ಕುರಿತು ಹೇಳುವಾಗ ಶಿಕ್ಷಣವು ಒಂದು ಹಕ್ಕಲ್ಲ ಬದಲಾಗಿ ಲಾಭದಾಯಕವಾದ ಉದ್ಯಮ ಎಂದು ಪರಿಗಣಿಸಬೇಕು. ಹೀಗಾಗಿ ಅದನ್ನು ವ್ಯಾಪಾರೀಕರಣಗೊಳಿಸಬೇಕು ಎಂದು ಉಲ್ಲೇಖಿಸಿದೆ. ಪಿ.ವಿ.ನರಸಿಂಹರಾವ್‌ರಿಂದ ಮೊದಲುಗೊಂಡು ವಾಜಪೇಯಿ, ಮನಮೋಹನ್ ಸಿಂಗ್ ಸರಕಾರಗಳೂ ಸಹ ಡಬ್ಲುಟಿಒ-ಗ್ಯಾಟ್‌ನ ಈ ಆದೇಶವನ್ನು ಚಾಚೂ ತಪ್ಪದೆ ಬದ್ಧತೆಯಿಂದ ಪಾಲಿಸುತ್ತಲೇ ಬಂದಿವೆ. ಈಗಿನ ಮೋದಿ ನೇತೃತ್ವದ ಸರಕಾರ ಇದನ್ನು ಮತ್ತಷ್ಟು ತೀವ್ರವಾಗಿ ಮುಂದುವರಿಸುತ್ತಿದೆ. ಯುಜಿಸಿಯ ಕಾರ್ಯವೈಖರಿಯಲ್ಲಿನ ತಪ್ಪುಗಳನ್ನು, ಅದರ ರಚನೆಯಲ್ಲಿನ ದೋಷಗಳನ್ನು ಸರಿಪಡಿಸಲು ಕಾರ್ಯಯೋಜನೆಗಳನ್ನು ಹಮ್ಮಿಕೊಳ್ಳಬೇಕಾಗಿದ್ದ ಕೇಂದ್ರ ಶಿಕ್ಷಣ ಇಲಾಖೆ ಸ್ವತಃ ಮೂಗನ್ನೇ ಕುಯ್ದಂತೆ ಯುಜಿಸಿಯನ್ನೇ ವಿಸರ್ಜಿಸಿದೆ. ಬದಲಿಗೆ ಉನ್ನತ ಶಿಕ್ಷಣದ ವ್ಯಾಪಾರೀಕರಣಕ್ಕೆ ಅವಶ್ಯಕವಾದ ನೀತಿನಿಯಮಗಳನ್ನು ರೂಪಿಸಲು ‘ವಿಕಸಿತ ಭಾರತ ಅಧಿಷ್ಠಾನ ಆಯೋಗ’ವನ್ನು ಸ್ಥಾಪಿಸಿದೆ. ಇಂದು ಉನ್ನತ ಶಿಕ್ಷಣ ವ್ಯವಸ್ಥೆಯು ತನ್ನ ಈಗಿನ ಸ್ವರೂಪದಲ್ಲಿ ಅನುತ್ಪಾದಕವಾದ ಉದ್ಯಮ ಎಂದೇ ಮೋದಿ ಸರಕಾರ ಬಲವಾಗಿ ನಂಬಿದೆ. ಇದನ್ನು ಲಾಭದಾಯಕ ಉದ್ಯಮವನ್ನಾಗಿಸಲು ಈ ಮಾದರಿಯ ವ್ಯಾಪಾರೀಕರಣದ ಅವಶ್ಯಕತೆ ಇದೆ ಎಂದು ಜನರನ್ನು ನಂಬಿಸುತ್ತಿದೆ. ಉನ್ನತ ಶಿಕ್ಷಣ ಕೈಗಾರಿಕೀಕರಣವಾಗದೆ ಉಳಿಗಾವಿಲ್ಲ ಎಂದು ಪ್ರತಿಪಾದಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಶಿಕ್ಷಣ ಆಯೋಗಕ್ಕೆ ಮಾನ್ಯತೆ ದೊರೆತು ತನ್ನ ಕಾರ್ಯನೀತಿಗಳನ್ನು ಜಾರಿಗೊಳಿಸಲು ಮುಂದಾದರೆ ಅಗ ಅವಶ್ಯಕವಾದ ಶೈಕ್ಷಣಿಕ ಸುಧಾರಣೆಗಳು ಹಿನ್ನೆಲೆಗೆ ಸರಿಯಲಿವೆ. ಮಾನವಿಕ ವಿಷಯಗಳ (ಭಾಷೆ, ಸಮಾಜ ವಿಜ್ಞಾನ, ಇತಿಹಾಸ, ಮಾನವಶಾಸ್ತ್ರ, ರಾಜಕೀಯ ವಿಜ್ಞಾನ, ಮಾಧ್ಯಮ, ಇತ್ಯಾದಿ) ಅಧ್ಯಯನಕ್ಕೆ ಬೆಂಬಲ ದೊರಕುವುದಿಲ್ಲ ಮತ್ತು ಉದ್ಯೋಗ ಆಧಾರಿತ ಶಿಕ್ಷಣಕ್ಕೆ, ಮಾರುಕಟ್ಟೆ ಸ್ನೇಹಿ ವಿಷಯಗಳಿಗೆ ವ್ಯಾಪಕ ಪ್ರಚಾರ ಕೊಡಲಾಗುತ್ತದೆ. ವಿಶ್ವವಿದ್ಯಾನಿಲಯಗಳು ವೈಜ್ಞಾನಿಕ ಅನ್ವೇಷಣೆಗೆ, ಸಂಶೋಧನೆಗಳಿಗೆ ತಾಣವಾಗಬೇಕು ಎನ್ನುವ ಆಶಯವೇ ಮೂಲೆಗುಂಪಾಗಲಿದೆ
ಈಗಾಗಲೇ ಮೋದಿ ಸರಕಾರ ಶಿಕ್ಷಣದಲ್ಲಿ ಆರ್ಥಿಕ ಅನುದಾನವನ್ನು ಕಡಿತಗೊಳಿಸುತ್ತ ಬಂದಿರುವುದರಿಂದ ಆ ಜಾಗದಲ್ಲಿ ಬಂಡವಾಳ ಆಧರಿಸಿದ ಹಣಕಾಸು ವ್ಯವಸ್ಥೆ ಪ್ರವೇಶ ಪಡೆಯಲಿದೆ. ಸಾರ್ವಜನಿಕ-ಖಾಸಗಿ-ಸಹಭಾಗಿತ್ವ (ಪಿಪಿಪಿ) ವಿಶ್ವ ವಿದ್ಯಾನಿಲಯಗಳ ನೀತಿ ನಿಯಮಾವಳಿಯಾಗಲಿದೆ. ಮತ್ತೊಂದೆಡೆ ಕೇಂದ್ರ, ರಾಜ್ಯ ವಿಶ್ವವಿದ್ಯಾನಿಲಯಗಳು ಆರ್ಥಿಕ ಅನುದಾನಕ್ಕಾಗಿ ಸದಾ ಸರಕಾರವನ್ನು ಸಂಪ್ರೀತಿಗೊಳಿಸುತ್ತಲೇ ಇರಬೇಕಾಗುತ್ತದೆ. ಗುಣಮಟ್ಟದ ಹೆಸರಿನಲ್ಲಿ, ಕಲಿಕೆಯ ಹೆಸರಿನಲ್ಲಿ, ಮೂಲಭೂತ ಸೌಕರ್ಯದ ನೆಪದಲ್ಲಿ ಉನ್ನತ ಶಿಕ್ಷಣವು ಅತ್ಯಂತ ದುಬಾರಿಯಾದ ಶಿಕ್ಷಣವಾಗಲಿದೆ. ದುಬಾರಿಯಾದ ಶುಲ್ಕವನ್ನು ಭರಿಸಲು ಈ ಬಂಡವಾಳ ಹಣಕಾಸು ವ್ಯವಸ್ಥೆಯು ಸಾಲದ ರೂಪದಲ್ಲಿ ಆರ್ಥಿಕ ನೆರವನ್ನು ಒದಗಿಸುತ್ತದೆ. ಒಮ್ಮೆ ಅನುದಾನ ಹಂಚಿಕೆ ರದ್ದುಗೊಂಡರೆ ವಿದ್ಯಾರ್ಥಿಗಳು ಸಾಲದ ಮಾಫಿಯಾದಲ್ಲಿ ಸಿಲುಕುತ್ತಾರೆ. ಸಬ್ಸಿಡಿ ರೂಪದಲ್ಲಿ ವಿದ್ಯಾರ್ಥಿ ಸಾಲವನ್ನು ಪಡೆಯಲೇಬೇಕಾದ ಅನಿವಾರ್ಯತೆಗೆ ಸಿಲುಕುತ್ತಾರೆ ಮತ್ತು ಸಾಲದ ಸುಳಿಯಲ್ಲಿ ಸಿಲುಕಿಕೊಳ್ಳುತ್ತಾರೆ. ಈ ಕಾರಣಕ್ಕೆ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಸಾಲ ಮರುಪಾವತಿಸಲಾಗದೆ, ತಲೆಗಂದಾಯದ ಚಕ್ರವ್ಯೆಹಕ್ಕೆ ಸಿಲುಕಿ ತಮ್ಮ ಕಲಿಕೆಯನ್ನೇ ಮೊಟಕುಗೊಳಿಸುವ ಅಪಾಯಕ್ಕೆ ಗುರಿಯಾಗಲಿದ್ದಾರೆ.
ಮೋದಿ ಸರಕಾರವು ಈ ಮೇಲಿನಂತೆ ತೀವ್ರವಾದ ಬದಲಾವಣೆಗಳ ಮೂಲಕ ಅಂತಿಮವಾಗಿ ಉನ್ನತ ಶಿಕ್ಷಣವನ್ನು ಹಂತ ಹಂತವಾಗಿ ಕೇಂದ್ರೀಕರಣ, ಖಾಸಗೀಕರಣಗೊಳಿಸುವ ತಮ್ಮ ಅಜೆಂಡಾಗಳನ್ನು ಜಾರಿಗೊಳಿಸಲು ಪ್ರಯತ್ನಿಸುತ್ತಿದೆ.







