ʼಹವಾಮಾನ ಬದಲಾವಣೆಗೆ ಪುರುಷ ಪ್ರಧಾನ ವ್ಯವಸ್ಥೆ ಕಾರಣʼ: ವಿವಾದಕ್ಕೆ ಕಾರಣವಾದ ದಿಯಾ ಮಿರ್ಜಾ ಹೇಳಿಕೆ

Photo Credit :diamirzaofficial \ instagram.com
ಆರೈಕೆಗಿಂತ ಹೆಚ್ಚಾಗಿ ಬಳಕೆ, ಸಮತೋಲನಕ್ಕಿಂತ ಪ್ರಾಬಲ್ಯ ಮತ್ತು ದೀರ್ಘಾವಧಿಯ ಯೋಗಕ್ಷೇಮಕ್ಕಿಂತ ಅಲ್ಪಾವಧಿಯ ಲಾಭವನ್ನು ಗೌರವಿಸುವ ವ್ಯವಸ್ಥೆಗಳಿಂದ ಹವಾಮಾನ ಸಮಸ್ಯೆ ಉಂಟಾಗಿದೆ ಎಂದು ದಿಯಾ ಮಿರ್ಜಾ ಸಂಬಂಧವನ್ನು ವಿವರಿಸಿದ್ದಾರೆ.
ಹವಾಮಾನ ಬದಲಾವಣೆಗೆ ಪುರುಷ ಪ್ರಧಾನ ಸಮಾಜ ಕಾರಣ ಎನ್ನುವ ನಟಿ ದಿಯಾ ಮಿರ್ಜಾ ಅವರ ಹೇಳಿಕೆಯು ಇದೀಗ ವಿವಾದಕ್ಕೆ ಕಾರಣವಾಗಿದೆ. ಹೇಳಿಕೆಯು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಆದರೆ ದಿಯಾ ಮಿರ್ಜಾ ತಮ್ಮ ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ವಿವರಣೆ ನೀಡಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಹವಾಮಾನ ಬದಲಾವಣೆ ಮತ್ತು ಪುರುಷ ಪ್ರಧಾನ ಸಮಾಜದ ನಡುವೆ ಆಳವಾದ ಸಂಬಂಧವಿದೆ ಎನ್ನುವ ವೀಡಿಯೋವನ್ನು ಮೊದಲು ದಿಯಾ ಮಿರ್ಜಾ ಹಂಚಿಕೊಂಡಿದ್ದರು. ಇದೀಗ ತಮ್ಮ ಹೇಳಿಕೆ ಟ್ರೋಲ್ಗೆ ಒಳಗಾದ ನಂತರ ಅವರು ಸ್ಪಷ್ಟನೆ ನೀಡಿದ್ದಾರೆ. ಸ್ಪಷ್ಟನೆಯಲ್ಲಿ ತಮ್ಮ ಅವರು ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಆರೈಕೆಗಿಂತ ಹೆಚ್ಚಾಗಿ ಬಳಕೆ, ಸಮತೋಲನಕ್ಕಿಂತ ಪ್ರಾಬಲ್ಯ ಮತ್ತು ದೀರ್ಘಾವಧಿಯ ಯೋಗಕ್ಷೇಮಕ್ಕಿಂತ ಅಲ್ಪಾವಧಿಯ ಲಾಭವನ್ನು ಗೌರವಿಸುವ ವ್ಯವಸ್ಥೆಗಳಿಂದ ಹವಾಮಾನ ವೈಪರೀತ್ಯದ ಎರಡೂ ಸಮಸ್ಯೆಗಳು ಹೇಗೆ ಹೊರಹೊಮ್ಮುತ್ತವೆ ಎಂದು ಸಂಬಂಧವನ್ನು ವಿವರಿಸಿದ್ದಾರೆ.
ದಿಯಾ ಮಿರ್ಜಾ ಹೇಳಿರುವುದೇನು?
ತಮ್ಮ ವೀಡಿಯೋ ಸಂದೇಶವನ್ನು ಟೀಕಿಸಿದವರಿಗೆ ಮಾರುತ್ತರಿಸಿದ ದಿಯಾ, “ನಿಮ್ಮಲ್ಲಿ ಹಲವರು ನನ್ನ ಸಂದೇಶವನ್ನು ಚರ್ಚಿಸುತ್ತಿರುವ ಕಾರಣದಿಂದ ಸಾಧ್ಯವಾದಷ್ಟು ಸರಳವಾಗಿ ವಿವರಿಸುವುದು ಸಮಯೋಚಿತ. ಪುರುಷಪ್ರಧಾನ ಸಮಾಜ ಹವಾಮಾನ ಬಿಕ್ಕಟ್ಟುಗಳಿಗೆ ಕಾರಣವಾಗಿದೆ ಎನ್ನುವ ನನ್ನ ಹೇಳಿಕೆಗೆ ಬದ್ಧಳಾಗಿದ್ದೇನೆ. ಹವಾಮಾನ ಬದಲಾವಣೆಯನ್ನು ಹೆಚ್ಚಾಗಿ ಪರಿಸರ ಬಿಕ್ಕಟ್ಟು ಎಂದು ಚರ್ಚಿಸಲಾಗುತ್ತದೆ. ಆದರೆ ಇದು ಅಸಮಾನತೆಯ ಬಿಕ್ಕಟ್ಟು ಕೂಡ ಆಗಿದೆ.ಶತಮಾನಗಳಿಂದ ಪಿತೃಪ್ರಧಾನ ವ್ಯವಸ್ಥೆಗಳು ಅಧಿಕಾರವನ್ನು ಕೇಂದ್ರೀಕರಿಸಿವೆ. ಆರೈಕೆಗಿಂತ ಬಳಸಿಕೊಳ್ಳುವುದಕ್ಕೆ ಆದ್ಯತೆ ನೀಡಿವೆ” ಎಂದು ಅವರು ಹೇಳಿದ್ದಾರೆ.
ಅವರು ಮುಂದುವರಿದು, “ಪ್ರಕೃತಿ ಮತ್ತು ದುರ್ಬಲ ಸಮುದಾಯಗಳನ್ನು ರಕ್ಷಿಸುವ ಬದಲು ಬಳಸಿಕೊಳ್ಳುವ ಸಂಪನ್ಮೂಲವೆಂದು ಪರಿಗಣಿಸಲಾಗಿದೆ. ಪಿತೃಪ್ರಧಾನ ಸಮಾಜಗಳಲ್ಲಿ ಮಹಿಳೆಯರು ಮತ್ತು ಹೆಣ್ಣುಮಕ್ಕಳನ್ನು ಹೇಗೆ ನಡೆಸಿಕೊಳ್ಳಲಾಗುತ್ತದೆಯೋ ಅದೇ ರೀತಿ ಕಾಡುಗಳು, ನದಿಗಳು, ಸಾಗರಗಳು ಮತ್ತು ಪರಿಸರ ವ್ಯವಸ್ಥೆಗಳನ್ನು ಸರಕುಗಳಾಗಿ ನೋಡಲಾಗಿದೆ. ಈ ಚಿಂತನೆಯ ಪರಿಣಾಮಗಳನ್ನು ಈಗ ನಿರ್ಲಕ್ಷಿಸುವುದು ಅಸಾಧ್ಯ” ಎಂದು ಅವರು ಪೋಸ್ಟ್ ಮಾಡಿದ್ದಾರೆ.






