ಬಿಹಾರದ ಬಂಕೀಪುರದಲ್ಲಿ ಪ್ರಶಾಂತ್ ಕಿಶೋರ್ ಅವರ ಗೆಲುವಿಗೆ Gen Z ಆಂದೋಲನ ಕಾರಣವೇ?

ಪ್ರಶಾಂತ್ ಕಿಶೋರ್ | Photo Credit : PTI
ಚುನಾವಣಾ ತಂತ್ರಜ್ಞನಿಂದ ರಾಜಕಾರಣಿಯಾಗಿ ರೂಪುಗೊಂಡ ಪ್ರಶಾಂತ್ ಕಿಶೋರ್, ಬಿಹಾರದ ಬಂಕೀಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸೋಮವಾರ ಸಾಧಿಸಿದ ಗೆಲುವು ಹಲವರಿಗೆ ಅಚ್ಚರಿ ಮೂಡಿಸಿದೆ. ಏಕೆಂದರೆ, ಕಳೆದ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಈ ಕ್ಷೇತ್ರವು ಬಿಜೆಪಿ ಭದ್ರಕೋಟೆಯಾಗಿತ್ತು. ಬಿಜೆಪಿಯ ಅಭ್ಯರ್ಥಿಯನ್ನು ಕಿಶೋರ್ 19,000ಕ್ಕೂ ಹೆಚ್ಚು ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ.
ಕೇವಲ ಒಂಬತ್ತು ತಿಂಗಳ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಿಶೋರ್ ಅವರ ಜನ್ ಸುರಾಜ್ ಪಕ್ಷದ ಅಭ್ಯರ್ಥಿ ಬಂಕೀಪುರದಲ್ಲಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು. ನಿತಿನ್ ನಬೀನ್ ಇಲ್ಲಿಂದ ಸತತ ಐದನೇ ಬಾರಿಗೆ ಜಯಗಳಿಸಿದ್ದರು. ಆದರೆ, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ನಿತಿನ್ ನಬೀನ್ ಅವರು ರಾಜ್ಯಸಭೆಗೆ ತೆರಳಿದ್ದರಿಂದ ಈ ಉಪಚುನಾವಣೆ ಅನಿವಾರ್ಯವಾಯಿತು.
ಉಪಚುನಾವಣೆ ಘೋಷಣೆಯಾಗುತ್ತಿದ್ದಂತೆ, ವಿಧಾನಸಭಾ ಚುನಾವಣೆಯಲ್ಲಿ ಸ್ವತಃ ಸ್ಪರ್ಧಿಸದ ಕಾರಣಕ್ಕೆ ಬೆಂಬಲಿಗರಿಂದ ವಿಮರ್ಶೆಗೆ ಒಳಗಾಗಿದ್ದ ಕಿಶೋರ್, ತಾವೇ ಮೊದಲಿಗರಾಗಿ ಕಣಕ್ಕಿಳಿಯಲು ನಿರ್ಧರಿಸಿದರು.
ಪ್ರಚಾರದ ಸಮಯದಲ್ಲಿ ಬಿಜೆಪಿಯನ್ನೇ ಪ್ರಮುಖವಾಗಿ ಗುರಿಯಾಗಿಸಿಕೊಂಡ ಕಿಶೋರ್, ಪಕ್ಷದ ಮುಖ್ಯಮಂತ್ರಿ ಆಯ್ಕೆಯನ್ನು ಪ್ರಶ್ನಿಸಿದರು. ಬಿಹಾರದ ಮತದಾರರು ನೀಡಿದ ಜನಾದೇಶಕ್ಕೆ ಬಿಜೆಪಿ ದ್ರೋಹ ಬಗೆದಿದೆ ಎಂದು ಆರೋಪಿಸಿದರು. ಎಪ್ರಿಲ್ನಲ್ಲಿ ದೀರ್ಘಕಾಲದ ಮಿತ್ರ ಜನತಾ ದಳ (ಯುನೈಟೆಡ್) ನಾಯಕ ನಿತೀಶ್ ಕುಮಾರ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ, ತಮ್ಮದೇ ಪಕ್ಷದ ಸಾಮ್ರಾಟ್ ಚೌಧರಿ ಅವರನ್ನು ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳ್ಳಿರಿಸಿದ ಬಿಜೆಪಿಯ ನಿರ್ಧಾರದ ವಿರುದ್ಧದ 'ಜನಮತಸಂಗ್ರಹ' ಎಂದೇ ಕಿಶೋರ್ ಈ ಚುನಾವಣೆಯನ್ನು ಬಿಂಬಿಸಿದರು.
ಸೋಮವಾರ ಹೊರಬಿದ್ದ ಫಲಿತಾಂಶವು ವಿಧಾನಸಭಾ ಚುನಾವಣೆಯಲ್ಲಿ ಖಾತೆ ತೆರೆಯಲು ವಿಫಲವಾಗಿದ್ದ ಕಿಶೋರ್ ಅವರ ಪಕ್ಷಕ್ಕೆ ನವಚೈತನ್ಯ ನೀಡುವ ಸಾಧ್ಯತೆಯಿದೆ.ದಿಲ್ಲಿಯಲ್ಲಿ ಪ್ರಾರಂಭವಾಗಿ ಕ್ರಮೇಣ ಬಿಹಾರಕ್ಕೂ ಹರಡಿದ ಇತ್ತೀಚಿನ ಯುವಜನರಪ್ರತಿಭಟನೆಗಳ ಲಾಭ ಪ್ರಶಾಂತ್ ಕಿಶೋರ್ಗೆ ಲಭಿಸಿದೆ ಎಂದು ರಾಜಕೀಯ ವಿಶ್ಲೇಷಕರು 'ಸ್ಕ್ರಾಲ್ ಡಾಟ್ ಇನ್ 'ಗೆ ತಿಳಿಸಿದ್ದಾರೆ. ಬಿಹಾರದಲ್ಲಿ ರಾಷ್ಟ್ರೀಯ ಜನತಾ ದಳವನ್ನು (ಆರ್ಜೆಡಿ) ಹಿಂದಿಕ್ಕಿ, ಬಿಜೆಪಿಗೆ ಪ್ರಮುಖ ಎದುರಾಳಿಯಾಗಿ ಕಿಶೋರ್ ಅವರ ಪಕ್ಷ ಹೊರಹೊಮ್ಮಬಹುದು ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.
ಗಮನಹರಿಸಿದ ಪ್ರಚಾರ:
ನವೆಂಬರ್ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜನ್ ಸುರಾಜ್ ಪಕ್ಷವು ಶೇಕಡಾ 3.3 ರಷ್ಟು ಮತ ಪಾಲನ್ನು ಪಡೆದುಕೊಂಡಿತ್ತಾದರೂ, ಒಂದೇ ಒಂದು ಸ್ಥಾನದಲ್ಲೂ ಗೆಲುವು ಸಾಧಿಸಲು ಸಾಧ್ಯವಾಗಿರಲಿಲ್ಲ. ಚುನಾವಣೆಯ ನಂತರ, 'ನಿತೀಶ್ ಕುಮಾರ್ ಅವರ ರಾಜಕೀಯ ವೃತ್ತಿಜೀವನ ಮುಗಿಯುವ ಹಂತದಲ್ಲಿದೆ' ಎಂದು ಪದೇ ಪದೇ ಹೇಳುತ್ತಿದ್ದ ಕಿಶೋರ್ ಅವರ ಹೇಳಿಕೆ ಸುಳ್ಳಾದಂತೆ ಕಂಡುಬಂದ ಕಾರಣ ಅವರು ಟೀಕೆಗೆ ಗುರಿಯಾದರು. ಏಕೆಂದರೆ, ಜನತಾ ದಳ (ಯುನೈಟೆಡ್) ಹಿರಿಯ ನಾಯಕ ನಿತೀಶ್ ಕುಮಾರ್ ದಾಖಲೆಯ 10ನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.
ಆದರೆ, ಎಪ್ರಿಲ್ನಲ್ಲಿ ನಿತೀಶ್ ಕುಮಾರ್ ಹಠಾತ್ತಾಗಿ ರಾಜೀನಾಮೆ ನೀಡಿ ಬಿಹಾರದಲ್ಲಿ ಮೊದಲ ಬಾರಿಗೆ ಬಿಜೆಪಿಯ ಮುಖ್ಯಮಂತ್ರಿ ಅಧಿಕಾರಕ್ಕೆ ಬಂದಾಗ, ಕಿಶೋರ್ಗೆ ರಾಜಕೀಯವಾಗಿ ಹೊಸ ಅವಕಾಶ ತೆರೆದುಕೊಂಡಿತು. ಈ ಅಧಿಕಾರ ಬದಲಾವಣೆಯು ನಿತೀಶ್ ಕುಮಾರ್ ಅವರ ರಾಜಕೀಯ ಭವಿಷ್ಯದ ಬಗ್ಗೆ ತಾವು ಮೊದಲಿನಿಂದಲೂ ಹೇಳುತ್ತಿದ್ದ ಮಾತು ಸರಿಯಾಗಿತ್ತು ಎಂದು ಪ್ರತಿಪಾದಿಸಲು ಕಿಶೋರ್ಗೆ ಹಾದಿ ಮಾಡಿಕೊಟ್ಟಿತು.
ಸಾಮ್ರಾಟ್ ಚೌಧರಿ ಅವರನ್ನು ಬಿಜೆಪಿ ಮುಖ್ಯಮಂತ್ರಿಯನ್ನಾಗಿ ಮಾಡುವ ಮುನ್ನವೇ,ಅವರ ಶೈಕ್ಷಣಿಕ ಅರ್ಹತೆಯ ಗೊಂದಲಗಳು ಮತ್ತು ಅವರ ಮೇಲಿದ್ದ ಅಪರಾಧ ಹಿನ್ನೆಲೆಯ ಆರೋಪಗಳನ್ನು ಮುಂದಿಟ್ಟು ಕಿಶೋರ್ ತೀವ್ರವಾಗಿ ಟೀಕಿಸುತ್ತಿದ್ದರು. ಚೌಧರಿ ಮುಖ್ಯಮಂತ್ರಿ ಹುದ್ದೆಗೆ ಏರಿದ ನಂತರ ಕಿಶೋರ್ ಅವರ ವಾಗ್ದಾಳಿ ಮತ್ತಷ್ಟು ತೀಕ್ಷ್ಣವಾಯಿತು.
ವಿಧಾನಸಭಾ ಚುನಾವಣೆಗಿಂತ ಭಿನ್ನವಾಗಿ, ಬಂಕೀಪುರ ಉಪಚುನಾವಣೆಯ ಪ್ರಚಾರದ ಸಮಯದಲ್ಲಿ ಕಿಶೋರ್ ಸಂಪೂರ್ಣವಾಗಿ ಬಿಜೆಪಿಯನ್ನು ಮಾತ್ರವೇ ಗುರಿಯಾಗಿಸಿಕೊಂಡರು. ಬಿಹಾರದ ಪ್ರಮುಖ ಪ್ರತಿಪಕ್ಷವಾದ ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಆಗಲಿ ಅಥವಾ ಜನತಾ ದಳ (ಯುನೈಟೆಡ್) ಆಗಲಿ ಅವರ ಪ್ರಚಾರದ ಸಂದೇಶಗಳಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳಲೇ ಇಲ್ಲ.
Credit: @jansuraajonline/X
►Gen Z ಪ್ರಭಾವ
ಬಂಕೀಪುರ ಕ್ಷೇತ್ರದ ಮತದಾರರ ಸಂಯೋಜನೆಯು ಕಿಶೋರ್ಗೆ ನೆರವಾದಂತೆ ತೋರುತ್ತದೆ. ಪಾಟ್ನಾದ ಹೃದಯಭಾಗದಲ್ಲಿರುವ ಈ ಕ್ಷೇತ್ರದಲ್ಲಿ ಕಾಯಸ್ಥ ಮತ್ತು ಬನಿಯಾರಂತಹ ಮೇಲ್ವರ್ಗದ ಸಮುದಾಯಗಳು ಮತದಾರರ ದೊಡ್ಡ ಭಾಗವನ್ನು ಹೊಂದಿವೆ.
ಈ ಸಮುದಾಯಗಳು ಸಾಮಾನ್ಯವಾಗಿ ಬಿಜೆಪಿಗೆ ಬೆಂಬಲವಾಗಿ ಮತ ಚಲಾಯಿಸುತ್ತವೆಯಾದರೂ, ಕಿಶೋರ್ ಅವರ "ಹೊಸ" ಮತ್ತು "ಪ್ರತಿಭಾವಂತ/ಅರ್ಹ" ನಾಯಕ ಎಂಬ ಇಮೇಜ್ ಅವರಿಗೆ ಇಷ್ಟವಾಯಿತು ಎಂದು ಬಿಹಾರ ಮೂಲದ ರಾಜಕೀಯ ವಿಶ್ಲೇಷಕ ಹಾಗೂ 'ಕಮ್ಯೂನಿಟಿ ವಾರಿಯರ್ಸ್: ಸ್ಟೇಟ್, ಪೆಸೆಂಟ್ಸ್, ಅಂಡ್ ಕ್ಯಾಸ್ಟ್ ಆರ್ಮೀಸ್ ಇನ್ ಬಿಹಾರ' ಪುಸ್ತಕದ ಲೇಖಕ ಅಶ್ವನಿ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
"ಬಂಕೀಪುರದ ಪ್ರತಿ ಎರಡನೇ ಅಥವಾ ಮೂರನೇ ಮನೆಯಲ್ಲಿ ಯುಪಿಎಸ್ಸಿ ಆಕಾಂಕ್ಷಿಗಳನ್ನು ಕಾಣಬಹುದು, ಹಾಗೂ ನಿವೃತ್ತ ರಾಯಭಾರಿಗಳು ಮತ್ತು ನಿವೃತ್ತ ಐ ಅಧಿಕಾರಿಗಳು ಇಲ್ಲಿ ವಾಸಿಸುತ್ತಿದ್ದಾರೆ" ಎಂದು ಕುಮಾರ್ ಹೇಳಿದ್ದಾರೆ. "ಅವರು ಈ ಹಿಂದೆ ಉತ್ತಮ ಆಡಳಿತ ಮತ್ತು ನವ ಬಿಹಾರದ ಕಲ್ಪನೆಯನ್ನು ನಿತೀಶ್ ಕುಮಾರ್ ಅವರಲ್ಲಿ ಕಾಣುತ್ತಿದ್ದರು. ಆದರೆ ಈಗ ಆ ಸಾಧ್ಯತೆಯನ್ನು ಪ್ರಶಾಂತ್ ಕಿಶೋರ್ ಅವರಲ್ಲಿ ಕಾಣುತ್ತಿದ್ದಾರೆ."
ಬಿಹಾರದಲ್ಲಿ ನಡೆದ ಯುವಜನರ ಪ್ರತಿಭಟನೆಗಳೂ ಸಹ ಪ್ರಶಾಂತ್ ಕಿಶೋರ್ ಅವರ ಈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿವೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಜುಲೈ 20 ರಂದು ದೆಹಲಿ ಪೊಲೀಸರು 'ಕಾಕ್ರೋಚ್ ಜನತಾ ಪಾರ್ಟಿ' ನಡೆಸಿದ ಸಂಸತ್ ಚಲೋ ಮೆರವಣಿಗೆಯನ್ನು ತೀವ್ರವಾಗಿ ಹತೋಟಿಗೆ ತಂದ ನಂತರ, ಜನ್ ಸುರಾಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಪ್ರತಿಭಟನಾಕಾರರ ಬೆಂಬಲಕ್ಕೆ ನಿಂತಿದ್ದರು. "ದಿಲ್ಲಿಯಲ್ಲಿ ನಡೆದ ಪೋಲಿಸ್ ದೌರ್ಜನ್ಯಕ್ಕೆ ಬಂಕೀಪುರದ ಜನತೆ ತಮ್ಮ ಮತದ ಮೂಲಕ ಉತ್ತರ ನೀಡಲಿದ್ದಾರೆ ಮತ್ತು ನಾವು ಪ್ರಜಾಪ್ರಭುತ್ವದಲ್ಲಿದ್ದೇವೆ ಎಂಬುದನ್ನು ಬಿಜೆಪಿಗೆ ತಿಳಿಸಲಿದ್ದಾರೆ" ಎಂದು ಅವರು ಆಗ ಹೇಳಿದ್ದರು.
ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಸಂಸ್ಥೆಯ ಉಪಾಧ್ಯಕ್ಷ ಹಾಗೂ ಪಾಟ್ನಾ ಮೂಲದ ಸಮಾಜಶಾಸ್ತ್ರಜ್ಞ ಪುಷ್ಪೇಂದ್ರ ಕುಮಾರ್ ಕೂಡ ಈ ಯುವಜನರ ಪ್ರತಿಭಟನೆಯ ವಿಷಯವನ್ನು ಉಲ್ಲೇಖಿಸಿದ್ದಾರೆ. ಜೆನ್ ಝೀ ಚಳವಳಿ ಮತ್ತು ವಿದ್ಯಾರ್ಥಿ ಪ್ರತಿಭಟನೆಗಳ ವಿರುದ್ಧ ನಡೆದ ಪೋಲಿಸ್ ದೌರ್ಜನ್ಯವು ಸೂಕ್ತ ವಾತಾವರಣವನ್ನು ಸೃಷ್ಟಿಸಿತು" ಎಂದು ಅವರು ವಾದಿಸಿದ್ದಾರೆ. ಪಕ್ಷವು ತೀರಾ ಅಹಂಕಾರಿಯಾಗಿದೆ. ಅದಕ್ಕೆ ಕಾಲಕಾಲಕ್ಕೆ ತಕ್ಕ ಪಾಠ ಕಲಿಸುವ ಅಗತ್ಯವಿದೆ ಎಂಬ ಭಾವನೆ ಬಿಜೆಪಿಯ ಮೂಲ ಬೆಂಬಲಿಗರಲ್ಲೂ ಮೂಡಿತ್ತು ಎಂದಿದ್ದಾರೆ ಕುಮಾರ್.
ಜಾತಿ ಲೆಕ್ಕಾಚಾರ:
ಬಿಜೆಪಿಯ ಮೇಲ್ವರ್ಗದ ಬೆಂಬಲಿತ ವಲಯದಲ್ಲಿ ಅಸಮಾಧಾನ ಮೂಡಲು, ಜೂನ್ನಲ್ಲಿ ಬಿಹಾರದ ಭೋಜಪುರದಲ್ಲಿ ಮೇಲ್ವರ್ಗದ ಯುವಕ ಭರತ್ ಭೂಷಣ್ ತಿವಾರಿ ಎಂಬಾತ ಪೋಲಿಸ್ ಎನ್ಕೌಂಟರ್ನಲ್ಲಿ ಅನುಮಾನಾಸ್ಪದವಾಗಿ ಹತ್ಯೆಯಾದ ಘಟನೆಯೂ ಒಂದು ಕಾರಣ ಎಂದು ಕುಮಾರ್ ಉಲ್ಲೇಖಿಸಿದ್ದಾರೆ. ಪ್ರಶಾಂತ್ ಕಿಶೋರ್, ತಿವಾರಿ ಅವರ ಗ್ರಾಮಕ್ಕೆ ಭೇಟಿ ನೀಡಿ ಈ ಹತ್ಯೆಗೆ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳೇ ಕಾರಣ ಎಂದು ಆರೋಪಿಸಿದ್ದರು. ತಮ್ಮ ಇಡೀ ಪ್ರಚಾರದುದ್ದಕ್ಕೂ ಮೇಲ್ವರ್ಗದ ಮತದಾರರನ್ನು ನೇರವಾಗಿ ಉದ್ದೇಶಿಸಿ ಮಾತನಾಡಿದ ಕಿಶೋರ್, ಬಿಜೆಪಿಯ "ಗುಲಾಮರಂತೆ" ಮತ ಚಲಾಯಿಸಬೇಡಿ ಎಂದು ಕೋರಿದ್ದರು.
ಅಲ್ಲದೆ, ರಾಜಕೀಯ ರ್ಯಾಲಿಗಳಲ್ಲಿ ಹಿಂದೂ ದೇವರನ್ನು ಬಳಸಿಕೊಳ್ಳುವ ರೀತಿಯನ್ನು ಟೀಕಿಸಿದ ಅವರು, ಬಿಜೆಪಿ ಹಿಂದೂ ಧರ್ಮಕ್ಕೆ "ಅಪಮಾನ" ಮಾಡುತ್ತಿದೆ ಎಂದೂ ಆರೋಪಿಸಿದರು.
ಜುಲೈನಲ್ಲಿ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ, ಲಕ್ನೋದಲ್ಲಿ ಬಿಜೆಪಿ ನಡೆಸಿದ ಕಾರ್ಯಕ್ರಮವೊಂದನ್ನು ಕಿಶೋರ್ ನೆನಪಿಸಿಕೊಂಡರು. "ಅವರು ತಮ್ಮ ರೋಡ್ಶೋನಲ್ಲಿ ಹನುಮಂತ ದೇವರ ಕೈಯಲ್ಲಿ ಬಿಜೆಪಿ ಬಾವುಟ ನೀಡಿ ನರ್ತಿಸುವಂತೆ ಮಾಡಿದರು.ಹನುಮಂತ ದೇವರು ನರ್ತಿಸುತ್ತಿದ್ದರೆ, ಇವರು ರಥದ ಮೇಲೆ ಕುಳಿತುಕೊಳ್ಳುವಷ್ಟು ಅಹಂಕಾರಿಗಳಾಗಿದ್ದಾರೆ ಎಂದಿದ್ದರು ಪಿಕೆ.
ಮತ್ತೊಂದೆಡೆ, ಬಿಜೆಪಿ ಪ್ರಚಾರದ ಆರಂಭದಲ್ಲೇ ಎಡವಟ್ಟು ಮಾಡಿಕೊಂಡಿತು. ಮೊದಲು ನಾಮನಿರ್ದೇಶನ ಮಾಡಿದ ಅಭ್ಯರ್ಥಿ ಸ್ಪರ್ಧೆಯಿಂದ ಹಿಂದೆ ಸರಿದರು, ನಂತರ 32 ವರ್ಷದ ರಾಜಕೀಯವಾಗಿ ಅಷ್ಟೇನೂ ಪ್ರಭಾವಿಯಲ್ಲದ ನೀರಜ್ ಕುಮಾರ್ ಅವರನ್ನು ಆಯ್ಕೆ ಮಾಡಲಾಯಿತು. ಆದರೆ, ಇವರು ಪ್ರಶಾಂತ್ ಕಿಶೋರ್ಗೆ ಸೂಕ್ತ ಎದುರಾಳಿಯಲ್ಲ ಎಂಬ ಭಾವನೆ ವ್ಯಕ್ತವಾಗಿತ್ತು.
ಈ ಕ್ಷೇತ್ರದಲ್ಲಿ ಅಪರಿಚಿತ ವ್ಯಕ್ತಿಯನ್ನು ಕಣಕ್ಕಿಳಿಸಿದ ಬಿಜೆಪಿಯ ನಿರ್ಧಾರವು ಅದರ ಅಹಂಕಾರ ಮತ್ತು ಗೆಲುವಿನ ಅತಿಯಾದ ಆತ್ಮವಿಶ್ವಾಸಕ್ಕೆ ಸಾಕ್ಷಿ ಎಂದು ಜನ್ ಸುರಾಜ್ ಪಕ್ಷದ ಸಂಸ್ಥಾಪಕ ಹೇಳಿದ್ದರು.
ಸೋಮವಾರ ತಮ್ಮ ಗೆಲುವಿನ ಕುರಿತು ಮಾತನಾಡಿದ ಕಿಶೋರ್, ಬಿಜೆಪಿ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದಾರೆ . ಪಾಟ್ನಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು "ಸಾಮ್ರಾಟ್ ಚೌಧರಿ ಅವರ ಬದಲಿಗೆ ಒಳ್ಳೆಯ ವ್ಯಕ್ತಿಯನ್ನು ಬಿಹಾರದ ಮುಖ್ಯಮಂತ್ರಿಯನ್ನಾಗಿ ಮಾಡಿ ಎಂಬ ಸ್ಪಷ್ಟ ಸಂದೇಶವನ್ನು ಬಂಕೀಪುರದ ಜನತೆ ಬಿಜೆಪಿಯ ನಾಯಕತ್ವಕ್ಕೆ ನೀಡಿದ್ದಾರೆ" ಎಂದು ಹೇಳಿದ್ದಾರೆ.
ಬಿಹಾರದ ವಿಜಯ್?
ಉಪಚುನಾವಣೆಯ ಈ ಗೆಲುವು ರಾಜ್ಯ ರಾಜಕೀಯದಲ್ಲಿ ಕಿಶೋರ್ ಅವರನ್ನು ಪ್ರಮುಖ ಪ್ರತಿಪಕ್ಷ ನಾಯಕನನ್ನಾಗಿ ಮಾಡಲಿದೆ ಎಂದು ರಾಜಕೀಯ ವಿಶ್ಲೇಷಕ ಅಶ್ವನಿ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಅಷ್ಟೇ ಅಲ್ಲದೆ, ಅವರು ಕಿಶೋರ್ ಅವರನ್ನು ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ ಅವರಿಗೆ ಹೋಲಿಸಿದ್ದಾರೆ,
"ಅವರೂ ಕೂಡ ಜನಪ್ರಿಯ ನಾಯಕನ ಸ್ಥಾನಮಾನ ಹೊಂದಿದ್ದು, ಇಡೀ ಬಿಹಾರದಾದ್ಯಂತ ಜನರು ಅವರನ್ನು ಗುರುತಿಸುತ್ತಾರೆ," ಎಂದು ಕುಮಾರ್ ಹೇಳಿದರು. "ರಾಜ್ಯದ ಪ್ರತಿಯೊಂದು ಮನೆಯಲ್ಲೂ ಅವರ ಬಗ್ಗೆ ಚರ್ಚೆಯಾಗುತ್ತಿದೆ. ಅವರು ಹಿಂದೆ ಮೋದಿಯವರೊಂದಿಗೆ ಕೆಲಸ ಮಾಡುತ್ತಿದ್ದರೆಂಬುದು ಜನರಿಗೆ ತಿಳಿದಿದೆ."
ರಾಷ್ಟ್ರೀಯ ಜನತಾ ದಳದ ನಾಯಕ ತೇಜಸ್ವಿ ಯಾದವ್ ಅವರು ಕಿಶೋರ್ಗಿಂತ ವಯಸ್ಸಿನಲ್ಲಿ ಕಿರಿಯರಾಗಿದ್ದರೂ, ಅವರ ಪಕ್ಷದ ಮೇಲಿರುವ ದಶಕಗಳಷ್ಟು ಹಳೆಯ 'ಯಾದವ ಪ್ರಾಬಲ್ಯ'ದ ಆರೋಪಗಳಿಂದಾಗಿ ಅವರಿಗೆ ಮತದಾರರಲ್ಲಿ ಅಂತಹ ಆಕರ್ಷಣೆ ಇಲ್ಲ ಎಂಬುದನ್ನು ಅವರು ಉಲ್ಲೇಖಿಸಿದರು.
ದೀರ್ಘಾವಧಿಯಲ್ಲಿ ರಾಷ್ಟ್ರೀಯ ಜನತಾ ದಳವೇ "ಅತಿದೊಡ್ಡ ನಷ್ಟ ಅನುಭವಿಸುವ ಪಕ್ಷವಾಗಲಿದೆ" ಎಂದು ಪುಷ್ಪೇಂದ್ರ ಕುಮಾರ್ ಕೂಡ ಅಭಿಪ್ರಾಯಪಟ್ಟಿದ್ದಾರೆ. ಆದರೆ, ಈ ಉಪಚುನಾವಣೆಯ ಫಲಿತಾಂಶ ಒಂದನ್ನೇ ಇಟ್ಟುಕೊಂಡು ತೀರ್ಮಾನಕ್ಕೆ ಬರುವ ಬಗ್ಗೆ ಅವರು ಎಚ್ಚರಿಕೆ ವಹಿಸಿದ್ದಾರೆ.
ಪ್ರಶಾಂತ್ ಕಿಶೋರ್ ಮತ್ತು ಅವರ ಪಕ್ಷಕ್ಕೆ ನವಜೀವನ ಸಿಕ್ಕಂತಾಗಿದೆ.ಆದರೆ, ಮುಂದಿನ ಚುನಾವಣೆ ಇನ್ನೂ ಬಹಳ ದೂರವಿದೆ ಎಂದು ಅವರು ಹೇಳಿದ್ದಾರೆ.






