ಮತದಾನದಲ್ಲಿ ಮುಸ್ಲಿಮರ ಒಗ್ಗಟ್ಟು ಬಿಜೆಪಿ, ಆರೆಸ್ಸೆಸ್ ನ ಚಿಂತೆಗೆ ಕಾರಣವಾಯಿತೇ ?

ಪ್ರಧಾನಿ ನರೇಂದ್ರ ಮೋದಿಯವರಿಗೆ ಮತ್ತೆ ಮುಸ್ಲಿಮರು ನೆನಪಾಗಿದ್ದಾರೆ. ಅಮೇರಿಕಾದಿಂದ ಬಂದ ಮೇಲಾದರೂ ಎರಡು ತಿಂಗಳುಗಳಿಂದ ಹಿಂಸೆಯಿಂದ ನಲುಗಿರುವ ಮಣಿಪುರಕ್ಕೆ ಹೋಗ್ತಾರೇನೊ ಅನ್ನೋ ನಿರೀಕ್ಷೆ ಹುಸಿ ಮಾಡಿ ಅವರು ಮರುದಿನವೇ ಭೇಟಿ ನೀಡಿದ್ದು ಚುನಾವಣೆ ನಡೆಯಲಿರೋ ಮಧ್ಯ ಪ್ರದೇಶಕ್ಕೆ.
ಅಲ್ಲಿ ಭೋಪಾಲ್ ನಲ್ಲಿ ಪಕ್ಷದ ಕಾರ್ಯಕರ್ತರ ಸಮಾವೇಶ ಉದ್ದೇಶಿಸಿ ಮಾತಾಡಿರುವ ಅವರು ದೇಶದ ಮುಸ್ಲಿಮರ ಬಗ್ಗೆ ಇನ್ನಿಲ್ಲದ ಕಾಳಜಿ, ಕಳಕಳಿ ವ್ಯಕ್ತಪಡಿಸಿದ್ದಾರೆ.
ದೇಶದದಲ್ಲಿ ಸಮಾನ ನಾಗರೀಕ ಸಂಹಿತೆ ತರುವ ಅಗತ್ಯದ ಬಗ್ಗೆ ಮಾತಾಡುತ್ತಲೇ " ಮುಸ್ಲಿಮರನ್ನು ಇತರ ಪಕ್ಷಗಳು ಕೇವಲ ಓಟ್ ಬ್ಯಾಂಕ್ ಆಗಿ ಬಳಸಿವೆ. ಅವರಿಗೆ ಮುಸ್ಲಿಮರ ಬಗ್ಗೆ ನಿಜವಾದ ಕಾಳಜಿ ಇದ್ದಿದ್ದರೆ ನಮ್ಮ ಮುಸ್ಲಿಂ ಸಹೋದರ, ಸಹೋದರಿಯರು ಶಿಕ್ಷಣ, ಉದ್ಯೋಗಗಳಲ್ಲಿ ಇಷ್ಟೊಂದು ಹಿಂದೆ ಬೀಳುತ್ತಿರಲಿಲ್ಲ. ಇಷ್ಟೊಂದು ಕಷ್ಟದ ಜೀವನ ನಡೆಸುವ ಪರಿಸ್ಥಿತಿ ಬರುತ್ತಿರಲಿಲ್ಲ." ಎಂದಿದ್ದಾರೆ ಮೋದಿಜಿ.
ತ್ರಿವಳಿ ತಲಾಕ್ ಅನ್ನು ನಿಷೇಧಿಸಿರುವ ತಮ್ಮ ಸರಕಾರದ ಕ್ರಮವನ್ನು ಸಮರ್ಥಿಸಿಕೊಂಡಿರುವ ಮೋದಿಜಿ " ಇಂದು ಇದನ್ನು ಅರ್ಥಮಾಡಿಕೊಂಡಿರುವ ಮುಸ್ಲಿಂ ಸಹೋದರ, ಸಹೋದರಿಯರು ಬಿಜೆಪಿ ಹಾಗು ಮೋದಿ ಜೊತೆ ನಿಂತಿದ್ದಾರೆ. ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವ ರಾಜಕೀಯ ಪಕ್ಷಗಳ ಬಗ್ಗೆ ಮುಸ್ಲಿಮರು ಅರ್ಥಮಾಡಿಕೊಳ್ಳಬೇಕು " ಎಂದು ಹೇಳಿದ್ದಾರೆ.
ಮಧ್ಯಪ್ರದೇಶದಲ್ಲಿ ಮೋದಿಜಿ ಈ ಭಾಷಣ ಮಾಡುತ್ತಿರುವಾಗ ಅತ್ತ ಉತ್ತರಾಖಂಡ್ ನ ಉತ್ತರಕಾಶಿ ಜಿಲ್ಲೆಯ ಪುರೋಲದಲ್ಲಿ 40ಕ್ಕೂ ಹೆಚ್ಚು ಬಿಜೆಪಿ ಬೆಂಬಲಿಗ ಮುಸ್ಲಿಂ ಕುಟುಂಬಗಳು ಊರು ತೊರೆದಿವೆ. ದಶಕಗಳಿಂದ ಅಲ್ಲಿ ವ್ಯಾಪಾರ ಮಾಡಿಕೊಂಡಿದ್ದ ಮೋದಿಜಿ ಬೆಂಬಲಿಗ ಮುಸ್ಲಿಂ ವರ್ತಕರು ತಮ್ಮ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿ ಜೀವ ಉಳಿದರೆ ಸಾಕು, ಎಲ್ಲಾದರೂ ಹೋಗಿ ಬದುಕಿಕೊಳ್ಳುತ್ತೇವೆ ಎಂದು ಊರು ಬಿಟ್ಟಿದ್ದಾರೆ. ಇವರಲ್ಲಿ ಬಹುತೇಕ ಎಲ್ಲರೂ ಬಿಜೆಪಿ ಬೆಂಬಲಿಗರು. ಅಷ್ಟೇ ಅಲ್ಲ, ಕೆಲವರು ಬಿಜೆಪಿ ಸದಸ್ಯರು, ಜಿಲ್ಲಾ ಮಟ್ಟದ ಪದಾಧಿಕಾರಿಗಳು. ಆದರೆ ಅವರ ಸಹಾಯಕ್ಕೆ ಅಲ್ಲಿನ ಯಾವುದೇ ಬಿಜೆಪಿ ನಾಯಕರು ಬರಲಿಲ್ಲ, ಜಿಲ್ಲಾಡಳಿತ ಬರಲಿಲ್ಲ, ಬಿಜೆಪಿ ಸರಕಾರವೂ ಅವರ ರಕ್ಷಣೆಗೆ ನಿಲ್ಲಲಿಲ್ಲ, ಅವರ ವ್ಯಾಪಾರ ಬಿಟ್ಟು ಹೋಗೋದು ಬೇಡ ಎಂದು ಹೇಳಲಿಲ್ಲ.
ಯಾಕಾದ್ರೂ ಹೇಳ್ತಾರೆ ? ಆ ಊರಲ್ಲಿ ಇಲ್ಲದ ಲವ್ ಜಿಹಾದ್ ಅನ್ನು ಸುಳ್ಳು ಸುಳ್ಳೇ ಸೃಷ್ಟಿಸಿದ್ದೇ ಅಲ್ಲಿನ ಬಿಜೆಪಿ ಹಾಗು ಸಂಘ ಪರಿವಾರದವರು. ಅದಕ್ಕೆ ರಾಜ್ಯ ಬಿಜೆಪಿ ಮುಖಂಡರೂ ಪೂರ್ಣ ಬೆಂಬಲ ನೀಡಿದ್ದಾರೆ. ಪ್ರಕರಣದ ದೂರುದಾರನೇ ಲವ್ ಜಿಹಾದ್ ಎಂಬುದೊಂದು ನಡೆದೇ ಇಲ್ಲ ಎನ್ನುತ್ತಿರುವಾಗಲೇ ಆ ರಾಜ್ಯದ ಬಿಜೆಪಿ ಮುಖ್ಯಮಂತ್ರಿಯೇ " ಲವ್ ಜಿಹಾದ್ ನಡೆಯುತ್ತಿದೆಯೇ ? ಲ್ಯಾಂಡ್ ಜಿಹಾದ್ ನಡೆಯುತ್ತಿದೆಯೇ ? ಎಂದು ತನಿಖೆ ಮಾಡಬೇಕಾಗಿದೆ." ಎನ್ನುತ್ತಾರೆ. ಸುಳ್ಳು ಸುದ್ದಿಯ ಆಧಾರದಲ್ಲಿ ಸೃಷ್ಟಿಸಲಾಗಿರುವ ಲವ್ ಜಿಹಾದ್ ದ್ವೇಷ ಅಭಿಯಾನದ ಬಳಿಕ ಈಗ ಮತಾಂತರ ಪ್ರಕರಣಗಳ ಮರುಪರಿಶೀಲನೆಗೆ ಉತ್ತರಾಖಂಡ ಬಿಜೆಪಿ ಸರ್ಕಾರ ನಿರ್ಧರಿಸಿದೆ.
ಅಂದ್ರೆ ಮೋದಿಜಿ ಭಾಷಣಗಳಲ್ಲಿ ಹೇಳೋದಕ್ಕೂ ತಳಮಟ್ಟದಲ್ಲಿ ನಡೆಯೋದಕ್ಕೂ ಯಾವುದೇ ಸಂಬಂಧವಿರೋದಿಲ್ಲ. ಅವರು ಅಮೇರಿಕಾಕ್ಕೆ ಹೋಗಿ " ಭಾರತದಲ್ಲಿ ಯಾವುದೇ ಧಾರ್ಮಿಕ ತಾರತಮ್ಯ ಮಾಡೋ ಪ್ರಶ್ನೆನೆ ಇಲ್ಲ " ಅಂತಾರೆ. ಆವಾಗಲೇ ಭಾರತದಲ್ಲಿ ಬಿಜೆಪಿ ಮುಖ್ಯಮಂತ್ರಿ ಬರಾಕ್ ಒಬಾಮ ಅವರ ಹೆಸರಲ್ಲಿರೋ ಹುಸೇನ್ ಎಂಬ ಪದ ಬಳಸಿ ಮುಸ್ಲಿಮರ ವಿರುದ್ಧ ಸೇಡಿನ ಕ್ರಮದ ಮಾತಾಡ್ತಾರೆ. ಆವಾಗಲೇ ಮಹಾರಾಷ್ಟ್ರದಲ್ಲಿ ಗೋಮಾಂಸ ಸಾಗಾಟ ಮಾಡಿದ ಎಂಬ ಆರೋಪದಲ್ಲಿ ಅಬ್ದುಲ್ ಮಜೀದ್ ಅನ್ಸಾರಿ ಎಂಬಾತನನ್ನು ಹೊಡೆದು ಕೊಲ್ಲಲಾಗುತ್ತದೆ.
ಮಧ್ಯಪ್ರದೇಶದಲ್ಲಿ ಮೋದಿಜಿ ಮುಸ್ಲಿಮರ ಬಗ್ಗೆ ಅಪಾರ ಕಾಳಜಿ ವ್ಯಕ್ತಪಡಿಸಿ ಭಾಷಣ ಮಾಡಿದ ಬೆನ್ನಿಗೇ ಮುಂಬೈಯ ಮೀರಾ ರೋಡ್ ನಲ್ಲಿ ಬಕ್ರೀದ್ ಗೆಂದು ಮುಸ್ಲಿಂ ವ್ಯಕ್ತಿಯೊಬ್ಬ ತಂದಿದ್ದ ಆಡುಗಳನ್ನು ಹೌಸಿಂಗ್ ಸೊಸೈಟಿಯವರು ತಡೆದು ಜೈ ಶ್ರೀ ರಾಮ್ ಘೋಷಣೆ ಕೂಗಿರುವ ಘಟನೆ ನಡೆದಿದೆ.
ಹೀಗೆ ಪಟ್ಟಿ ಮಾಡುತ್ತಾ ಹೋದರೆ ಮುಗಿಯದಷ್ಟು ಉದಾಹರಣೆಗಳನ್ನು ಕೊಡುತ್ತಾ ಹೋಗಬಹುದು. ಮೋದಿಜಿ ವೇದಿಕೆಗಳಲ್ಲಿ ಮಾಡೋ ಭಾಷಣಕ್ಕೂ ಬಿಜೆಪಿಯ ಸ್ಥಳೀಯ ನಾಯಕರು ಹಾಗು ಕಾರ್ಯಕರ್ತರ ವಾಟ್ಸ್ ಆಪ್ ಗಳಲ್ಲಿ ಫಾರ್ವರ್ಡ್ ಆಗೋ ಮೆಸೇಜ್ ಗಳಿಗೂ ಅಜಗಜಾಂತರವಿದೆ.
ಅಲ್ಲಿ ಮೋದಿಜಿ ಮುಸ್ಲಿಮರ ಏಳಿಗೆಯ ಮಾತಾಡುತ್ತಿರುವಾಗಲೇ ಇಲ್ಲಿ " ಎಲ್ಲಿ ಮುಸ್ಲಿಮರ ನಮಾಜ್ಹ್ ನಿಲ್ಲಿಸಬೇಕು ? ಎಲ್ಲಿ ಮುಸ್ಲಿಮರ ವ್ಯಾಪಾರ ಬಹಿಷ್ಕಾರ ಮಾಡಬೇಕು ? ಎಲ್ಲಿ ಮುಸ್ಲಿಮರ ಮೇಲೆ ಗುಂಪು ಹಲ್ಲೆಗೆ ಪ್ರಚೋದನೆ ನೀಡಬೇಕು ? " ಅಂತ ಚರ್ಚೆ ಆಗುತ್ತಿರುತ್ತದೆ.
ಅದಿರಲಿ, ಈಗ ಸಡನ್ನಾಗಿ ಮೋದಿಜೀಗೆ ಮುಸ್ಲಿಮರ ಬಗ್ಗೆ ಇಷ್ಟು ಕಾಳಜಿ ಬರಲು ಕಾರಣವೇನು ? ಅದು ಈಗ ಬಹುಮುಖ್ಯ ಪ್ರಶ್ನೆ.
ವಿಷಯ ಬಹಳ ಸ್ಪಷ್ಟವಿದೆ. ಕರ್ನಾಟಕದಲ್ಲಿ ಬಿಜೆಪಿ ಹೀನಾಯವಾಗಿ ಸೋತು ದಕ್ಷಿಣ ಭಾರತವಿಡೀ ಬಿಜೆಪಿ ಮುಕ್ತವಾಗಿದೆ. ಈ ಸೋಲಿಗೆ ಕಾರಣವಾಗಿರೋ ಪ್ರಮುಖ ಅಂಶಗಳಲ್ಲಿ ಒಂದು " ಈ ಬಾರಿ ರಾಜ್ಯದಲ್ಲಿ ಮುಸ್ಲಿಮರು ಒಗ್ಗಟ್ಟಾಗಿ ಓಟು ಮಾಡಿರೋದು" . ಮುಸ್ಲಿಮರ ಓಟು ಕಾಂಗ್ರೆಸ್, ಜೆಡಿಎಸ್ ಅಥವಾ ಇನ್ನಾವುದೇ ಪಕ್ಷಗಳ ನಡುವೆ ವಿಭಜನೆಯಾಗಿಲ್ಲ. ಎಲ್ಲೆಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲೋ ಸಾಧ್ಯತೆ ಇದೆ ಅಲ್ಲೆಲ್ಲ ಮುಸ್ಲಿಮರು ಒಗ್ಗಟ್ಟಾಗಿ ಕಾಂಗ್ರೆಸ್ ಪರ ಓಟು ಹಾಕಿದ್ದಾರೆ. ಹಾಗಾಗಿ ಓಟು ವಿಭಜನೆಯಾಗದೆ ಕಾಂಗ್ರೆಸ್ ಗೆದ್ದಿದೆ, ಬಿಜೆಪಿ ಸೋತಿದೆ.
ಮುಸ್ಲಿಮರು ಒಗ್ಗಟ್ಟಾಗಿ ಓಟು ಹಾಕಿದಾಗಲೆಲ್ಲ ಬಿಜೆಪಿ ಅದಕ್ಕೆ ಬೆಲೆ ತೆತ್ತಿದೆ. ಮುಸ್ಲಿಮರ ಓಟು ವಿಭಜನೆ ಆದಾಗಲೆಲ್ಲ ಬಿಜೆಪಿ ಅದರ ಲಾಭ ಪಡೆದಿದೆ. ಈಗ ಕರ್ನಾಟಕದಲ್ಲಿ ಆಗಿರೋದೇ ಮಧ್ಯಪ್ರದೇಶ, ರಾಜಸ್ತಾನ, ಛತ್ತೀಸ್ ಗಡ ಹಾಗು ತೆಲಂಗಾಣಗಳಲ್ಲಿ ಆಗೋ ಭಯ ಬಿಜೆಪಿಗಿದೆ. ಅದಕ್ಕಿಂತಲೂ ದೊಡ್ಡ ಭಯ ಮುಂಬರುವ ಲೋಕಸಭಾ ಚುನಾವಣೆಯಲ್ಲೂ ಹಾಗೇ ಆಗಿಬಿಟ್ಟರೆ ಎಂಬ ಆತಂಕ ಬಿಜೆಪಿಯನ್ನು ಕಾಡುತ್ತಿದೆ. ದೇಶದ ವಿವಿಧೆಡೆಗಳಿಂದ ಬಿಜೆಪಿಗೆ ಆರೆಸ್ಸೆಸ್ ಮೂಲಕ ಬರುತ್ತಿರೋ ಸಂದೇಶ ಕೂಡ ಕೇಳಲು ಅಷ್ಟು ಹಿತವಾಗಿಲ್ಲ.
ವಿಶೇಷವಾಗಿ ದೊಡ್ಡ ಸಂಖ್ಯೆಯ ಸೀಟುಗಳಿರುವ ಉತ್ತರ ಪ್ರದೇಶ ಸಹಿತ ಹಿಂದಿ ಹಾರ್ಟ್ ಲ್ಯಾಂಡ್ ಗಳಲ್ಲಿ ಮುಸ್ಲಿಮರು ಸಾಕಷ್ಟು ಪ್ರಮಾಣದಲ್ಲಿರುವ ಕ್ಷೇತ್ರಗಳಲ್ಲಿ ಒಗ್ಗಟ್ಟಾಗಿ ಬಿಜೆಪಿ ವಿರೋಧಿ ಒಬ್ಬ ಅಭ್ಯರ್ಥಿಯ ಪರ ಓಟು ಚಲಾಯಿಸಿದರೆ ಬಿಜೆಪಿಗೆ ದೊಡ್ಡ ನಷ್ಟವಾಗಲಿದೆ. ಈಗಾಗಲೇ 18 ವಿಪಕ್ಷಗಳು ಒಗ್ಗಟ್ಟಾಗಿ ಬಿಜೆಪಿ ವಿರುದ್ಧ ಎಲ್ಲ ಕ್ಷೇತ್ರಗಳಲ್ಲಿ ಒಂದೇ ಒಮ್ಮತದ ಅಭ್ಯರ್ಥಿ ಹಾಕಲು ಮುಂದಾಗಿವೆ. ಎಲ್ಲಾದರೂ ಮುಸ್ಲಿಮ್ ಓಟುಗಳು ವಿಭಜನೆ ಆಗದೆ ಇಂತಹ ಒಬ್ಬ ಬಿಜೆಪಿ ವಿರುದ್ಧದ ಅಭ್ಯರ್ಥಿಯ ಪರ ಚಲಾವಣೆಯಾದರೆ ಬಿಜೆಪಿ ಗಣನೀಯ ಸಂಖ್ಯೆಯ ಸೀಟುಗಳನ್ನು ಕಳೆದುಕೊಳ್ಳುವ ಅಪಾಯವಿದೆ.
ಇದೇ ಭಯ ಈಗ ಮೋದಿಜಿಯಿಂದ ಮುಸ್ಲಿಮರ ಕಾಳಜಿ ಬಗ್ಗೆ ಮಾತಾಡಿಸಿದೆ ಎನ್ನುತ್ತಿದ್ದಾರೆ ಹಿರಿಯ ಪತ್ರಕರ್ತರು, ವಿಶ್ಲೇಷಕರು. ದಲಿತರು, ಅಹಿಂದ ವರ್ಗಗಳ ಬಗ್ಗೆಯೂ ಬಿಜೆಪಿಗೆ ಇದೇ ಭಯವಿದೆ. ಹಾಗಾಗಿ ಈಗ ಮುಸ್ಲಿಮರ ಜೊತೆ ನಾವಿದ್ದೇವೆ ಎಂದು ಹೇಳಿ ಆ ಸಮುದಾಯದಲ್ಲಿರುವ ಹಿಂದುಳಿದ ಬಡ ವರ್ಗಗಳ ಉದ್ದಾರದ ಮಾತಾಡುತ್ತಿದ್ದಾರೆ ಮೋದಿಜಿ. ಮುಸ್ಲಿಮರ ತೀರಾ ಹಿಂದುಳಿದ ವರ್ಗಗಳಲ್ಲಿ " ನಾವು ನಿಮ್ಮ ಪರ ಇದ್ದೇವೆ " ಎಂಬ ಆಶಾಭಾವನೆ ಮೂಡಿಸಿ ಅವರ ಮತಗಳನ್ನು ಒಂದಿಷ್ಟು ವಿಭಜನೆ ಮಾಡಿಸಿದರೆ 2019 ರ ಸೀಟುಗಳ ಸಂಖ್ಯೆಗಳನ್ನು ಉಳಿಸಿಕೊಳ್ಳಬಹುದೇ ಎಂಬ ಲೆಕ್ಕಾಚಾರ ಮೋದಿಜಿ ಹಾಗು ಬಿಜೆಪಿಯದ್ದು.
ಆದರೆ ಬಿಜೆಪಿ ಪದಾಧಿಕಾರಿಯಾಗಿರುವ ಮುಸ್ಲಿಮರನ್ನೇ ಸಂಘ ಪರಿವಾರದ ಪಡೆ ಊರು ಬಿಟ್ಟು ಓಡಿಸಿರುವ ಘಟನೆ ನಿನ್ನೆ ಮೊನ್ನೆ ನಡೆದಿರುವಾಗ " ಮುಸ್ಲಿಮರ ಜೊತೆ ನಾವಿದ್ದೇವೆ " ಅಂತ ಮೋದೀಜಿ ಭಾಷಣದಲ್ಲಿ ಹೇಳಿದ್ರೆ ಅದನ್ನು ನಂಬೋದು ಹೇಗೆ ?
ಭಾಷಣದಲ್ಲಿ ಹೇಳಿದ್ದನ್ನು ಎಲ್ಲಾದರೂ ಜಾರಿ ಕೂಡ ಮಾಡಿರುವ ಉದಾಹರಣೆ ಇದೆಯಾ ? ಎಮ್ಮೆಲ್ಲೆ, ಎಂಪಿ ಎಲೆಕ್ಷನ್ ಗೆ ಬಿಜೆಪಿ ಮುಸ್ಲಿಮರಿಗೆ ಟಿಕೆಟ್ ಕೊಡುತ್ತಾ ? ತೀರಾ ಬೇರೆ ರಾಜಕೀಯ ಅಧಿಕಾರ ವನ್ನು ಎಲ್ಲಾದರೂ ಕೊಟ್ಟಿರುವ ಉದಾಹರಣೆ ಇದೆಯಾ ?
1947 ರಲ್ಲೇ ಮುಸ್ಲಿಮರನ್ನು ಪಾಕಿಸ್ತಾನಕ್ಕೆ ಕಳಿಸಿದ್ದರೆ ಇದೆಲ್ಲ ರಗಳೆಯೇ ಇರುತ್ತಿರಲಿಲ್ಲ ಅಂತ ಮೋದಿಯವರ ಕ್ಯಾಬಿನೆಟ್ ಸಚಿವ ಗಿರಿರಾಜ್ ಸಿಂಗ್ ಹೇಳೋದು, ಇಲ್ಲಿ ಈಶ್ವರಪ್ಪನಂತಹ ರಾಜ್ಯ ನಾಯಕರು " ಮುಸ್ಲಿಮರು ಮೊದಲು ಬಿಜೆಪಿ ಕಚೇರಿಯ ಕಸ ಗುಡಿಸಲಿ " ಎಂದು ಹೇಳೋದು, ಅಲ್ಲಿ ಮೋದಿಜಿ " ನಾವು ಮುಸ್ಲಿಮರ ಜೊತೆ ಇದ್ದೇವೆ " ಅಂತ ಹೇಳೋದು.
ಇವುಗಳನ್ನು ಜನ ಗಮನಿಸೋದಿಲ್ವಾ ಸ್ವಾಮಿ ?







