ಫೇಕ್ ಗಳಿಂದ ಆಗಿರುವ ಅನಾಹುತ, ಅವಾಂತರ ; ಸೆಲೆಬ್ರಿಟಿಗಳ ದ್ವಂದ್ವ
ಸುಳ್ಳು ಸುದ್ದಿಗಳಿಂದ ಜೀವಗಳೇ ಹೋದಾಗ, ಅಶಾಂತಿ ಹರಡಿದಾಗ ಎಲ್ಲಿದ್ದರು ಇವರೆಲ್ಲ ? ► ರಾಜಕೀಯಕ್ಕಾಗಿ ಪತ್ರಿಕೆಗಳು, ಚಾನಲ್ ಗಳು ಸುಳ್ಳು ಸುದ್ದಿ ಹರಡುವಾಗ ಏಕೆ ವ್ಯಕ್ತವಾಗಲಿಲ್ಲ ಈ ಆಕ್ರೋಶ ?
ಡೀಪ್ ಫೇಕ್ ತಂತ್ರಜ್ಞಾನ ತಂದಿಡಬಹುದಾದ ಅಪಾಯಗಳ ಬಗ್ಗೆ ಕಳವಳ ಶುರುವಾಗಿ ಬಹಳ ಸಮಯವೇ ಆಗಿದೆ. ಫೇಕ್ ನ್ಯೂಸ್ ಗಳು, ಫೇಕ್ ವೀಡಿಯೋಗಳು , ಫೇಕ್ ಪೋಸ್ಟರ್ ಗಳು, ಫೇಕ್ ಆಡಿಯೊಗಳು ಮಾಡೋ ರಾದ್ಧಾಂತ ಎಲ್ಲ ಮಾಡಿದ ಬೆನ್ನಿಗೇ ಈ ಡೀಪ್ ಫೇಕ್ ಕೂಡ ಬಂದು ದೊಡ್ಡ ಅಪಾಯ ತಂದಿಟ್ಟು ಕಾಲವೇ ಆಗಿದೆ. ಈಗ ಇದು ದೊಡ್ಡ ಮಟ್ಟದಲ್ಲಿ ಚರ್ಚೆಯಾಗತೊಡಗಿರುವುದು, ಸೆಲೆಬ್ರಿಟಿಗಳೆಲ್ಲ ಇದರ ವಿರುದ್ಧ ಕ್ರಮಕ್ಕೆ ಒತ್ತಾಯಿಸುತ್ತಿರುವುದು ಬಾಲಿವುಡ್ ನಟಿಯೊಬ್ಬರ ಡೀಪ್ ಫೇಕ್ ವೀಡಿಯೊ ವೈರಲ್ ಆಗಿರುವುದರಿಂದ.
ಯಾರ ಬಗ್ಗೆಯೇ ಫೇಕ್ ಅಥವಾ ಡೀಪ್ ಫೇಕ್ ಮಾಡಿದರೂ ಅದು ಆತಂಕಕಾರಿ, ಆಘಾತಕಾರಿ ಮತ್ತು ಖಂಡನೀಯ. ಅದರಲ್ಲಿ ಎರಡು ಮಾತಿಲ್ಲ. ಅಂತಹ ದುಷ್ಟತನದ ವಿರುದ್ಧ ಅತ್ಯಂತ ಕಠಿಣ ಕಾನೂನು ಕ್ರಮ ಕೈಗೊಳ್ಳಲೇಬೇಕು. ಆದರೆ, ಈ ಹಿಂದೆಯೂ ಫೇಕ್ ನ್ಯೂಸ್, ಫೇಕ್ ವೀಡಿಯೊಗಳ ಕಾರಣದಿಂದಾಗಿ ದೇಶದಲ್ಲಿ ಅನಾಹುತಗಳು ನಡೆದಾಗ, ಅಮಾಯಕರ ಸಾವಿಗೂ ಅವು ಕಾರಣವಾಗಿದ್ದಾಗ ಇವರಾರೂ ಏಕೆ ಅದರ ವಿರುದ್ಧ ಒಂದು ಸೊಲ್ಲೂ ಎತ್ತಿರಲಿಲ್ಲ?
ನಟಿಯೊಬ್ಬರ ವಿರುದ್ಧ ಡೀಪ್ ಪೇಕ್ ಮಾಡಲಾಗುತ್ತಿದೆ ಎಂಬುದು, ಮತ್ತದನ್ನು ಏನು ಎತ್ತ ಎಂದು ಯೋಚಿಸದೆ ಫಾರ್ವರ್ಡ್ ಮಾಡುತ್ತ ಇನ್ನಷ್ಟು ಅನಾಹುತ ಸೃಷ್ಟಿಸುವುದು ಚಿಂತಿಸಲೇಬೇಕಿರುವ ವಿಚಾರ. ಇಂಥದೇ ಚಿಂತೆ, ಕಳವಳ, ಆಘಾತ ಹಿಂದೆ ಇಂಥದೇ ವಿದ್ಯಮಾನ ಬೇರೆಯವರ ಬದುಕಿನೊಂದಿಗೆ ಆಟವಾಡಿದ್ದಾಗಲೂ ವ್ಯಕ್ತವಾಗಬೇಕಿತ್ತು, ಆದರೆ ಆಗಲೇ ಇಲ್ಲ.
ಇಂದು ಪರಿಸ್ಥಿತಿ ಇಲ್ಲಿವರೆಗೆ ತಲುಪುವ ಮೊದಲು ಈ ದೇಶದಲ್ಲಿ ಸುಳ್ಳು ಸುದ್ದಿಗೆ, ಫೇಕ್ ವೀಡಿಯೊ, ಆಡಿಯೋ, ಪೋಸ್ಟರ್ ಗಳಿಗೆ ಅದೆಷ್ಟು ಜೀವಗಳು ಬಲಿಯಾಗಿವೆ, ಅದೆಷ್ಟು ನಾಶ, ನಷ್ಟವಾಗಿದೆ ಎಂಬುದು ಇಂದು ಹುಯಿಲೆಬ್ಬಿಸುತ್ತಿರುವ ಮಂದಿಗೆ ಗೊತ್ತಿಲ್ಲವೇ ?. ಫೇಕ್ ನ್ಯೂಸ್ ಅನ್ನೇ ರಾಜಕೀಯ ಅಸ್ತ್ರವಾಗಿ ಅದೆಷ್ಟು ಅಪಾಯಕಾರಿಯಾಗಿ ಬಳಸಲಾಗಿದೆ, ಬಳಸಲಾಗುತ್ತಿದೆ ಎಂಬುದರ ಬಗ್ಗೆ ಅವರಿಗೆ ತಿಳಿದಿಲ್ಲವೇ ? ಅದಕ್ಕಾಗಿ ಕಿಂಚಿತ್ತಾದರೂ ಅವರು ಸಂಕಟಪಟ್ಟಿದ್ದಾರೆಯೆ?
ಇತ್ತೀಚಿನ ವರ್ಷಗಳಲ್ಲಿ ನಮ್ಮ ದೇಶದಲ್ಲಿ ಫೇಕ್ ನ್ಯೂಸ್ ಹರಡಿಯೇ ಅದೆಷ್ಟು ಗಲಭೆಗಳನ್ನು ಸೃಷ್ಟಿಸಲಾಗಿಲ್ಲವೆ ? ಅದೆಷ್ಟು ಗುಂಪು ಹತ್ಯೆಗಳು, ಗುಂಪು ಹಲ್ಲೆಗಳು ನಡೆದು ಹೋಗಿಲ್ಲವೆ?. ಅದೆಷ್ಟು ಚುನಾವಣೆ ಗೆಲ್ಲಲು ಸುಳ್ಳು ಸುದ್ದಿಗಳನ್ನು ವೀಡಿಯೊ ಇತ್ಯಾದಿಗಳ ರೂಪದಲ್ಲಿ ಹರಡಿ ಕೋಲಾಹಲ ಎಬ್ಬಿಸಲಾಗಿಲ್ಲವೆ?
ಸೋಷಿಯಲ್ ಮೀಡಿಯಾಗಳನ್ನು ಬಿಡಿ, ಈ ದೇಶದ ಲಕ್ಷ ಲಕ್ಷ ಜನ ಓದುವ, ನೋಡುವ ದಿನಪತ್ರಿಕೆಗಳು, ನ್ಯೂಸ್ ಚಾನಲ್ ಗಳೇ ಫೇಕ್ ನ್ಯೂಸ್ ಗಳನ್ನು ಬೇಕಾಬಿಟ್ಟಿ ಪ್ರಸಾರ ಮಾಡಿಲ್ಲವೇ ? . ಸಮಯ, ಸಂದರ್ಭ ನೋಡಿಕೊಂಡು ಇಲ್ಲಿನ ದೊಡ್ಡ ಪತ್ರಿಕೆಗಳು, ನ್ಯೂಸ್ ಚಾನಲ್ ಗಳು ಅತ್ಯಂತ ಆಘಾತಕಾರಿ ಫೇಕ್ ನ್ಯೂಸ್ ಹರಡಿ ಜನರ ಮನಸ್ಸಲ್ಲಿ ದ್ವೇಷದ ವಿಷ ತುಂಬಿಲ್ಲವೇ ?
ಒಂದು ರಾಜಕೀಯ ಪಕ್ಷಕ್ಕೆ ಲಾಭ ಮಾಡಿ ಕೊಡಲಿಕ್ಕಾಗಿಯೇ ಫೇಕ್ ನ್ಯೂಸ್ ಗಳನ್ನು ಇಲ್ಲಿನ ಪತ್ರಿಕೆಗಳು, ಚಾನಲ್ ಗಳು ನಿರಂತರ ಪ್ರಸಾರ ಮಾಡಿಲ್ಲವೇ ?. ಆಗ ಯಾಕೆ ಇಷ್ಟೊಂದು ಚರ್ಚೆ ಆಗಲೇ ಇಲ್ಲ? ಆಗ ಯಾಕೆ ಯಾರಿಗೂ ಇಂಥದೊಂದು ತಂತ್ರಜ್ಞಾನ ಕಳವಳಕಾರಿ ಎನ್ನಿಸಲಿಲ್ಲ?. ಎಲ್ಲೋ ಯಾರಿಗೋ ಆದರೆ ತಮಗೆ ಸಂಬಂಧವೇ ಇಲ್ಲ, ತಮ್ಮ ಹತ್ತಿರಕ್ಕೇ ಬಂತು ಎನ್ನುವಾಗ ಇದರ ಬಗ್ಗೆ ಶಾಕ್ ಆಗುತ್ತಿದೆ ಎನ್ನುವ ಇಂಥವರ ಈ ದ್ವಂದ್ವವೇ ಇವತ್ತಿನ ಈ ಪರಿಸ್ಥಿತಿ ಬರುವುದಕ್ಕೆ ಕಾರಣ ಅಲ್ಲವೇ?
ರಶ್ಮಿಕಾ ಮಂದಣ್ಣ ವಿಚಾರದಲ್ಲಿ ಇಂದು ಏನಾಗಿದೆಯೊ, ಆ ನೆಪದಲ್ಲಿ ಏನೆಲ್ಲ ಚರ್ಚೆ, ಹಾಹಾಕಾರ ಎದ್ದಿದೆಯೊ ಅದು ಮೊದಲೇ ಆಗಬೇಕಿತ್ತು. ಇಂದು ಕಳವಳ ವ್ಯಕ್ತಪಡಿಸುತ್ತಿರುವವರು ಆಗಲೂ ದನಿಯೆತ್ತಬೇಕಿತ್ತು. ಸಂಕಟದ ವಿಚಾರವೆಂದರೆ, ಈ ದೇಶದಲ್ಲಿ, ಈ ಸಮಾಜದಲ್ಲಿ ಕೆಲವರಿಗೆ ಅನ್ಯಾಯವಾದರೆ ಮಾತ್ರವೇ ಅದು ಅನ್ಯಾಯ.
ಅಮಾಯಕರು, ಜನಸಾಮಾನ್ಯರು, ದುರ್ಬಲರು ಬಲಿಯಾಗುತ್ತಲೇ ಇದ್ದರೂ, ಅದು ಯಾರಿಗೂ ಲೆಕ್ಕಕ್ಕೇ ಇರುವುದಿಲ್ಲ. ರಶ್ಮಿಕಾ ಮಂದಣ್ಣ ಡೀಪ್ ಫೇಕ್ ವಿಚಾರವನ್ನು ಸ್ವಲ್ಪ ಗಮನಿಸುವುದಾದರೆ, ರಶ್ಮಿಕಾ ಅವರ ಡೀಪ್ ಫೇಕ್ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಯುವತಿಯೊಬ್ಬಳು ಲಿಫ್ಟ್ ಒಳಗೆ ಬರುವ ವೀಡಿಯೊ ಇಟ್ಟುಕೊಂಡು, ಅದನ್ನು ರಶ್ಮಿಕಾ ಅವರನ್ನು ಹೋಲುವಂತೆ ಎಐ ತಾಂತ್ರಿಕತೆ ಬಳಸಿ ಎಡಿಟ್ ಮಾಡಲಾಗಿದೆ.
ಈ ವೀಡಿಯೋವನ್ನು ಹಲವರು ಹಂಚಿಕೊಂಡಿದ್ದೂ ಆಯಿತು. ಇನ್ನೂ ಕೆಲವರು ರಶ್ಮಿಕಾ ಬಗ್ಗೆ ಕೀಳಾಗಿ ಟೀಕಿಸಿದ್ದೂ ಆಯಿತು. ಇದರ ಬಗ್ಗೆ ನೊಂದುಕೊಂಡ ರಶ್ಮಿಕಾ ಮಂದಣ್ಣ, ಪ್ರಾಮಾಣಿಕವಾಗಿ ಹೇಳುವುದಾದರೆ, ಇದು ನನಗೆ ಮಾತ್ರವಲ್ಲ, ಪ್ರತಿಯೊಬ್ಬರಿಗೂ ತುಂಬಾ ಭಯಾನಕ ವಿಚಾರವಾಗಿದೆ. ತಂತ್ರಜ್ಞಾನವನ್ನು ಹೀಗೆ ದುರುಪಯೋಗಪಡಿಸಿಕೊಳ್ಳುತ್ತಿರುವುದರಿಂದ ಇಂದು ನಾವು ತುಂಬಾ ಹಾನಿಗೆ ಗುರಿಯಾಗುತ್ತಿದ್ದೇವೆ ಎಂದಿದ್ದಾರೆ.
ನಾನು ಶಾಲೆ ಅಥವಾ ಕಾಲೇಜಿನಲ್ಲಿದ್ದಾಗ ಈ ರೀತಿ ಆಗಿದ್ದರೆ, ನಾನು ಇದನ್ನು ಹೇಗೆ ನಿಭಾಯಿಸುತ್ತಿದ್ದೆ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ನಮ್ಮಲ್ಲಿ ಹೆಚ್ಚಿನವರು ಇಂತಹದ್ದಕ್ಕೆ ಬಲಿಯಾಗುವ ಮುನ್ನ ನಾವು ಇದನ್ನು ಒಟ್ಟಾಗಿ ಮತ್ತು ತುರ್ತಾಗಿ ಪರಿಹರಿಸಬೇಕಾಗಿದೆ ಎಂದಿದ್ದಾರೆ ರಶ್ಮಿಕಾ. ಅಂದಹಾಗೆ, ಈ ಡೀಪ್ ಫೇಕ್ ಮಾಡಲು ಬಳಸಲಾದ ವೀಡಿಯೊ ಝಾರಾ ಪಟೇಲ್ ಎಂಬ ಯುವತಿಯದ್ದು ಎನ್ನಲಾಗಿದೆ. ಆಕೆ ಬ್ರಿಟಿಷ್-ಇಂಡಿಯನ್ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಆಗಿದ್ದಾರೆ.
ಆಕೆ ಕೂಡ ಆಘಾತ ವ್ಯಕ್ತಪಡಿಸಿದ್ದು, ಈ ವೀಡಿಯೊ ಮಹಿಳೆಯರು ಮತ್ತು ಯುವತಿಯರ ಭವಿಷ್ಯದ ಬಗ್ಗೆ ಚಿಂತೆ ಹುಟ್ಟುಹಾಕಿದೆ. ಭಯವಾಗುತ್ತಿದೆ. ಇಂಟರ್ನೆಟ್ನಲ್ಲಿ ಇರುವುದೆಲ್ಲ ನಿಜವಲ್ಲ, ಫ್ಯಾಕ್ಟ್ ಚೆಕ್ ಗೆ ಒಳಪಡಿಸುವುದು ಅಗತ್ಯ ಎಂದಿದ್ದಾರೆ. ಇನ್ನು ರಶ್ಮಿಕಾ ಅವರ ಡೀಪ್ ಫೇಕ್ ವೀಡಿಯೊ ಬಗ್ಗೆ ಅನೇಕ ಸೆಲೆಬ್ರಿಟಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಸಾಂತ್ವನದ ಮಾತುಗಳನ್ನಾಡಿದ್ದಾರೆ. ನಿಮ್ಮೊಂದಿಗೆ ನಿಲ್ಲುತ್ತೇವೆ ಎಂದಿದ್ದಾರೆ. ಜಾಗೃತಿ ಮೂಡಿಸೋಣ ಮತ್ತು ತಂತ್ರಜ್ಞಾನದ ಇಂತಹ ದುರ್ಬಳಕೆ ಎದುರಿಸಲು ಒಟ್ಟಾಗಿ ಕೆಲಸ ಮಾಡೋಣ ಎಂದಿದ್ಧಾರೆ.
ನಟ ಅಮಿತಾಬ್ ಬಚ್ಚನ್ ಅವರು ಅದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಇದು ಕಾನೂನು ಕ್ರಮ ತೆಗೆದುಕೊಳ್ಳಬೇಕಿರುವ ಗಂಭೀರವಾದ ಪ್ರಕರಣವಾಗಿದೆ ಎಂದು ಹೇಳಿದ್ದಾರೆ. ಚಿತ್ರನಟರಾದ ನಾಗಚೈತನ್ಯ ಸೇರಿದಂತೆ ಇನ್ನೂ ಹಲವು ಸೆಲೆಬ್ರಿಟಿಗಳು ಕೂಡ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.
ಇದೆಲ್ಲದರ ಬೆನ್ನಲ್ಲೇ, ಕೇಂದ್ರ ಸರ್ಕಾರ ಸಾಮಾಜಿಕ ಜಾಲತಾಣಗಳಾದ ಎಕ್ಸ್, ಇನ್ಸ್ಟಾಗ್ರಾಂ, ಫೇಸ್ಬುಕ್ಗಳಿಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿರುವ ಸುದ್ದಿ ಬಂದಿದೆ. ಯಾವುದೇ ತಿರುಚಿದ ಚಿತ್ರಗಳನ್ನು ಐಟಿ ನಿಯಮಗಳ ಅಡಿಯಲ್ಲಿ ದೂರು ಸ್ವೀಕರಿಸಿದ 24 ಗಂಟೆಗಳ ಒಳಗಾಗಿ ತೆಗೆದುಹಾಕುವಂತೆ ಅದು ಸೂಚಿಸಿದೆ. ನಾವಿಂದು ಎಂಥ ಅಪಾಯಕಾರಿ ಸ್ಥಿತಿಯಲ್ಲಿದ್ದೇವೆ ಎಂದರೆ, ನಮ್ಮ ಕೈಯಲ್ಲಿರುವ ತಂತ್ರಜ್ಞಾನ ನಮ್ಮನ್ನೇ ತಿಂದುಹಾಕುವ ಮಟ್ಟದಲ್ಲಿದೆ. ಒಳ್ಳೆಯ ಉದ್ದೇಶಕ್ಕೆಂದು ಕಂಡುಕೊಂಡಿರುವ ಎಲ್ಲದಕ್ಕೂ, ಅದು ದುರ್ಬಳಕೆಗೆ ಒಳಗಾದ ನಂತರದಲ್ಲಿ ಅಪಾಯದ ಮತ್ತೊಂದು ಮುಖವೂ ಇರುತ್ತದೆ.
ಸೆಲೆಬ್ರಿಟಿಯೊಬ್ಬರ ವಿಚಾರದಲ್ಲಿ ಹೀಗೆ ಎಲ್ಲರೂ ಬೆಂಬಲಕ್ಕೆ ನಿಂತು, ವೀಡಿಯೊದ ಅಸಲೀಯತ್ತು ಏನೆಂಬುದನ್ನು ಅರ್ಥ ಮಾಡಿಕೊಂಡರು, ಆಗುವ ಹಾನಿ ತಪ್ಪಿಸಿದರು. ಅದರ ವಿರುದ್ಧ ಧ್ವನಿ ಎತ್ತಿದರು. ಸರಕಾರ ಅದಕ್ಕೆ ಪ್ರತಿಕ್ರಿಯಿಸುವಂತೆ ಮಾಡಿದರು. ಆದರೆ ಇದೇ ಅದೃಷ್ಟ, ಇಂಥದೇ ಫೇಕ್ಗಳ ಆಕ್ರಮಣಕ್ಕೆ ತುತ್ತಾಗುವ ಅಮಾಯಕರ, ದುರ್ಬಲರ ಪಾಲಿಗೂ ಇರುತ್ತದೆಯೆ? ಖಂಡಿತ ಇಲ್ಲ.
ಎಷ್ಟೋ ಸಲ ರಾಜಕೀಯ ಉದ್ದೇಶಗಳಿಗಾಗಿಯೇ ಅತ್ಯಂತ ವ್ಯವಸ್ಥಿತವಾಗಿ ಹರಡಲಾಗುವ ಇಂಥದೇ ಫೇಕ್ ವೀಡಿಯೊಗಳು, ಫೇಕ್ ನ್ಯೂಸ್ಗಳು ಎಂಥೆಂಥ ಅನಾಹುತ ಸೃಷ್ಟಿಸಿವೆ ಎಂಬುದನ್ನು ನೋಡಿದರೇ ಎದೆ ನಡುಗುತ್ತದೆ. ಅಂಥ ಹೊತ್ತಲ್ಲಿ ಅಮಾಯಕರ ಪರವಾಗಿಯಂತೂ ಯಾರೂ ಇರುವುದಿಲ್ಲ ಎಂಬುದು ಇನ್ನೂ ಭಯಾನಕ ಸಂಗತಿ. ಮೊದಲು ಡೀಪ್ ಫೇಕ್ ಈಗಾಗಲೇ ಉಂಟುಮಾಡಿರುವ ಹಲವು ಅನಾಹುತಗಳ ಉದಾಹರಣೆಗಳನ್ನು ನೋಡುವುದಾದರೆ,
ಇಂಗ್ಲೆಂಡಿನ ಇಂಜಿನಿಯರೊಬ್ಬರು ಕನ್ಸರ್ವೇಟಿವ್ ಪಕ್ಷದ ಬೋರಿಸ್ ಜಾನ್ಸನ್ ಲಿಬರಲ್ ಪಕ್ಷದ ಸಭೆಯೊಳಗೆ ಭಾಷಣ ಮಾಡಿದ ಹಾಗೆ, ಲಿಬರಲ್ ಪಕ್ಷದ ಜೆರೆಮಿ ಕಾರ್ಬಿನ್ ಅವರು ವಿರೋಧ ಪಕ್ಷದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿದ ಹಾಗೆ ವಿಡಿಯೋ ಮಾಡಿ ಅವಾಂತರವೆಬ್ಬಿಸಿದ್ದರ ಬಗ್ಗೆ ವರದಿಗಳಿದ್ದವು. ಗ್ಯಾಬೋನ್ ದೇಶದ ಅಧ್ಯಕ್ಷ ಅಲಿ ಬೊಂಗೋ ಮಾಡಿದ್ದಾರೆ ಎನ್ನಲಾದ ಭಾಷಣದ ವಿಡಿಯೋ ತುಣುಕಿನಿಂದ ಅಲ್ಲಿ ಒಂದು ಕ್ಷಿಪ್ರಕ್ರಾಂತಿಯೇ ಆದದ್ದು, ಹಿಂಸಾಚಾರವಾದದ್ದು ಸುದ್ದಿಯಾಗಿತ್ತು. ಆದರೆ ಅವರು ಅಂಥ ಭಾಷಣ ಮಾಡಿಯೇ ಇರಲಿಲ್ಲ.
ಒಬಾಮಾ, ಫೇಸ್ಬುಕ್ನ ಜೂಕರ್ಬರ್ಗ್ ಎಲ್ಲರೂ ಈ ಡೀಪ್ ಫೇಕ್ನ ಅವಾಂತರ ಅನುಭವಿಸಿದವರೇ ಆಗಿದ್ದಾರೆ. ಆದರೀಗ ಅದು ಅಮೆರಿಕಾ, ಇಂಗ್ಲೆಂಡ್ಗಳಿಗೆ ಮಾತ್ರ ಸೀಮಿತವಾಗದೆ, ಭಾರತದೊಳಕ್ಕೂ ಬಂದಿದೆ. ಮಾತ್ರವಲ್ಲ ನಮ್ಮಲ್ಲಿ ಇನ್ನೂ ಅಪಾಯಕಾರಿ ಮಟ್ಟದಲ್ಲಿ ಅದರ ದುರ್ಬಳಕೆಯಾಗುವ ಸನ್ನಿವೇಶಗಳಿವೆ.
ಇನ್ನು, ಎಷ್ಟೋ ಸಲ ಅಮಾಯಕರ ಬಲಿ ತೆಗೆದುಕೊಳ್ಳುವ, ರಾಜಕೀಯ ದುರುದ್ದೇಶಗಳೊಂದಿಗೆ ಹರಡಲಾಗುವ ಫೇಕ್ ನ್ಯೂಸ್ಗಳು ಇನ್ನೂ ಭಯಾನಕ. ಈ ಫೇಕ್ ನ್ಯೂಸ್ ಗಳು ಎಲ್ಲಕ್ಕಿಂತ ವೇಗವಾಗಿ ಹರಡುವುದು, ನಿಜವೊ ಸುಳ್ಳೊ ಎಂಬುದನ್ನೂ ವಿವೇಚಿಸದೆ ಫಾರ್ವರ್ಡ್ ಮಾಡುವುದು ಇನ್ನಷ್ಟು ಅಪಾಯಕ್ಕೆ ಎಡೆ ಮಾಡಿಕೊಡುತ್ತಿದೆ. ಪ್ರಚೋದನಾತ್ಮಕ ಫೇಕ್ ನ್ಯೂಸ್ಗಳು ಜನಸಾಮಾನ್ಯರಲ್ಲಿ ಉನ್ಮಾದಕ್ಕೆ ಕಾರಣವಾಗುತ್ತವೆ. ಅವು ಕೋಮುವಾದಿ ಅಥವಾ ಧಾರ್ಮಿಕ ಹಿಂಸಾಚಾರವನ್ನೂ ಪ್ರಚೋದಿಸಬಹುದು, ತೀರಾ ವಿನಾಶಕಾರಿ ಸ್ವರೂಪದವೂ ಆಗಿರಬಹುದು.
ಮಕ್ಕಳ ಅಪಹರಣಕ್ಕೆ ಸಂಬಂಧಿಸಿದ ಸುಳ್ಳು ಸುದ್ದಿಗಳು ಹಲವರ ಸಾವಿಗೆ ಕಾರಣವಾದದ್ದಿದೆ. ನಮ್ಮ ರಾಜ್ಯದಲ್ಲೇ ಇಂತಹ ಘಟನೆಗಳು ನಡೆದಿವೆ. ಹಲವರು ನಕಲಿ ಸುದ್ದಿಗಳಿಂದ ಪ್ರಚೋದಿತರಾದ ಜನರು ನಡೆಸುವ ಗುಂಪು ಹಲ್ಲೆಗೆ ಬಲಿಯಾಗಿದ್ದಾರೆ. ಮತ್ತು ಇಂಥ ಘಟನೆಗಳು ದೇಶಾದ್ಯಂತ ನಡೆದಿವೆ.
ಕರ್ನಾಟಕದ ಬೀದರ್‌ನಲ್ಲಿ 200ಕ್ಕೂ ಹೆಚ್ಚು ಜನರ ಗುಂಪೊಂದು ಐಟಿ ಉದ್ಯೋಗಿ ಮಹಮ್ಮದ್ ಆಝಮ್ ಮತ್ತವರ ಸ್ನೇಹಿತರನ್ನು ಮಕ್ಕಳ ಅಪಹರಣಕಾರರು ಎಂದು ತಪ್ಪಾಗಿ ಭಾವಿಸಿ ಹಲ್ಲೆ ನಡೆಸಿದಾಗ ಆಝಮ್ ಸಾವಿಗೀಡಾದರು. ಅದೇ ರೀತಿಯ ಸುಳ್ಳು ಸುದ್ದಿ ಪ್ರೇರಿತ ದಾಳಿಗಳು ದೇಶದ ವಿವಿಧೆಡೆ ನಡೆದಿವೆ, ಹಲವು ಅಮಾಯಕರು ಅದಕ್ಕೆ ಬಲಿಯಾಗಿದ್ದಾರೆ.
ರಾಜಕೀಯವಾಗಿ ಅದೆಷ್ಟು ಫೇಕ್ ನ್ಯೂಸ್ ಗಳನ್ನು ಇಲ್ಲಿ ಹರಡಿ ಅದರಿಂದ ಲಾಭ ಮಾಡಿಕೊಳ್ಳಲಾಗಿದೆ. ಅದಕ್ಕೆ ಬೇಕಾದಷ್ಟು ಉದಾಹರಣೆಗಳು ನಮ್ಮ ಸುತ್ತಮುತ್ತಲಲ್ಲೇ ಇವೆ. 2018 ರ ವಿಧಾನ ಸಭೆ ಚುನಾವಣೆ ಸಮೀಪಿಸುತ್ತಿರುವಾಗ ಕಾರವಾರದ ಪರೇಶ್ ಮೇಸ್ತ ಸಾವಿನ ಪ್ರಕರಣಕ್ಕೆ ಹೇಗೆ ಬಿಜೆಪಿ ಮುಖಂಡರು, ಸಂಘ ಪರಿವಾರ ಹಾಗು ನ್ಯೂಸ್ ಚಾನಲ್ ಗಳು ಹಸಿ ಹಸಿ ಸುಳ್ಳು ಬೆರೆಸಿ ಅಪಪ್ರಚಾರದ ದೊಡ್ಡ ಅಭಿಯಾನವನ್ನೇ ನಡೆಸಿದವು. ಅದರ ಮೂಲಕವೇ ಕರಾವಳಿ ಸಹಿತ ಹಲವು ಜಿಲ್ಲೆಗಳಲ್ಲಿ ಹೇಗೆ ಕೋಮು ಧ್ರುವೀಕರಣ ಮಾಡಿಕೊಂಡರು ಎಂಬುದನ್ನು ಇಡೀ ಕರ್ನಾಟಕ ನೋಡಿದೆ.
ಸಿದ್ದರಾಮಯ್ಯ ಅವರ ಈ ಹಿಂದಿನ ಸರಕಾರದ ಅವಧಿಯಲ್ಲಿ ರಾಜ್ಯದಲ್ಲಿ ಡಝನ್ ಗಟ್ಟಲೆ ಹಿಂದುತ್ವ ಕಾರ್ಯಕರ್ತರ ಕೊಲೆಯಾಗುತ್ತಿದೆ ಎಂದು ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಸಹಿತ ಬಿಜೆಪಿ ಮುಖಂಡರು ಪ್ರಚಾರ ಮಾಡಿದ್ದರು. ಕೊನೆಗೆ ನೋಡಿದರೆ ಆ ಪಟ್ಟಿಯಲ್ಲಿ ಜೀವಂತ ಇದ್ದವರ ಹೆಸರು, ಆತ್ಮಹತ್ಯೆ ಮಾಡಿಕೊಂಡವರ ಹೆಸರು, ಅಪಘಾತದಲ್ಲಿ ಮೃತಪಟ್ಟವರ ಹೆಸರುಗಳೂ ಇದ್ದವು.
ಕೊರೊನ ಸಂದರ್ಭದಲ್ಲಿ ಮುಸ್ಲಿಮರ ಮೇಲೆ ಗೂಬೆ ಕೂರಿಸಲು ಏನೇನೆಲ್ಲ ಫೇಕ್ ನ್ಯೂಸ್ ಗಳನ್ನು ಪ್ರಮುಖ ಪತ್ರಿಕೆಗಳು ಹಾಗು ನ್ಯೂಸ್ ಚಾನಲ್ ಗಳೇ ಮುಂದೆ ನಿಂತು ಪ್ರಸಾರ ಮಾಡಿದವು ಎಂಬುದನ್ನು ಇಡೀ ದೇಶವೇ ನೋಡಿದೆ. ಆ ಫೇಕ್ ನ್ಯೂಸ್ ಗಳ ಪರಿಣಾಮವೂ ಅದೆಷ್ಟು ಭೀಕರವಾಗಿತ್ತು ? ಅದಕ್ಕಾಗಿ ಆ ಪತ್ರಿಕೆಗಳು ಹಾಗು ಚಾನಲ್ ಗಳು ಆಮೇಲೆ ಛೀಮಾರಿಯನ್ನೂ ಹಾಕಿಸಿಕೊಂಡಿವೆ.
ಹೀಗೆ ಫೇಕ್ ನ್ಯೂಸ್ಗಳು ಗಂಭೀರ ಸಮಸ್ಯೆಗಳನ್ನು ಹುಟ್ಟುಹಾಕುತ್ತಿವೆ. ವದಂತಿಗಳು, ಮಾರ್ಫ್ ಮಾಡಿದ ಚಿತ್ರಗಳು, ವೀಡಿಯೊಗಳು, ಕ್ಲಿಕ್-ಬೈಟ್‌ಗಳು, ಪ್ರಚೋದನಾಕಾರಿ ಸ್ಟೋರಿಗಳು, ಪರಿಶೀಲಿಸದ ಮಾಹಿತಿಗಳು ಸಾಮಾಜಿಕ ನೆಮ್ಮದಿಯನ್ನು ಕದಡುತ್ತಿವೆ, ಅಮಾಯಕರ ಹತ್ಯೆಗೆ ಕಾರಣವಾಗುತ್ತಿವೆ, ಸರಕಾರಗಳನ್ನೇ ಉರುಳಿಸುತ್ತಿವೆ. ಡೀಪ್ ಫೇಕ್ನಂಥ ತಂತ್ರಜ್ಞಾನ ದುರ್ಬಳಕೆಯಾಗತೊಡಗಿದರೆ, ವ್ಯಕ್ತಿಗತ ಚಾರಿತ್ರ್ಯವಧೆಗೆ ಕಾರಣವಾಗುವಷ್ಟೇ ರಾಜಕೀಯ ದುರುದ್ದೇಶದ ಅಪಾಯಕಾರಿ ಸಾಧನವೂ ಆಗಿಬಿಡುತ್ತದೆ.
ಮೊದಲೇ ಈ ದೇಶದಲ್ಲಿ ಸಾಮಾಜಿಕವಾಗಿ ಧಾರ್ಮಿಕವಾಗಿ ಎಲ್ಲರನ್ನೂ ಒಡೆಯುವ ಕೆಲಸ ಅವ್ಯಾಹತವಾಗಿ ನಡೆಯುತ್ತಿರುವಾಗ, ಕೋಮು ಸೌಹಾರ್ದವನ್ನು ಕದಡಲಾಗುತ್ತಿರುವಾಗ, ಒಬ್ಬರ ಮೇಲೊಬ್ಬರು ದ್ವೇಷ ಕಾರುವಂತೆ ಸುಳ್ಳುಗಳನ್ನು ಸೃಷ್ಟಿಸಿ ಹರಡುವುದು ವ್ಯಾಪಕವಾಗಿರುವಾಗ ಅಂಥವರ ಕೈಯಲ್ಲಿ ಈ ತಂತ್ರಜ್ಞಾನ ಸಿಕ್ಕಿಬಿಟ್ಟರೆ ಆಗುವ ಅನಾಹುತ ಎಂಥದು ಎಂಬುದನ್ನು ಊಹಿಸಿದರೇ ಭಯವಾಗುತ್ತದೆ. ಸೆಲೆಬ್ರಿಟಿಗಳಾದವರು, ಜವಾಬ್ದಾರಿಯುಳ್ಳ ಕಲಾವಿದರು ಇದು ತಮಗೆ ಸಂಬಂಧಿಸಿದ್ದೇ ಅಲ್ಲ ಎಂದುಕೊಳ್ಳದೆ, ತಮಗೆ ಅನ್ಯಾಯವಾದರೆ ಮಾತ್ರ ಹಾ ಹೋ ಎನ್ನದೆ, ಇತರರ ವಿಚಾರದಲ್ಲಿ ಹೀಗೆ ಆದಾಗಲೂ ಬೆಂಬಲಕ್ಕೆ ನಿಲ್ಲಬೇಕಿದೆ, ಫೇಕ್ ನ್ಯೂಸ್ ಗೆ , ಡೀಪ್ ಫೇಕ್ ಗೆ ಯಾರೇ ಬಲಿಪಶುಗಳಾಗುವುದನ್ನು ಒಟ್ಟಾಗಿ ನಿಂತು ತಪ್ಪಿಸಬೇಕಿದೆ.







