ಅಂತರ್ಜಾತಿ ವಿವಾಹ ಪ್ರೋತ್ಸಾಹಧನ ಯೋಜನೆಯಲ್ಲಿ ತಾರತಮ್ಯ ನೀತಿ: ಆರೋಪ
ಸರಕಾರದ ಅವೈಜ್ಞಾನಿಕ ನೀತಿಗಳಿಂದ ಅರ್ಹರಿಗೆ ಸಿಗದ ಪ್ರೋತ್ಸಾಹಧನ

ಸಾಂದರ್ಭಿಕ ಚಿತ್ರ PC: freepik
ಬೆಂಗಳೂರು: ರಾಜ್ಯ ಸರಕಾರದ ಅಂತರ್ಜಾತಿ ವಿವಾಹ ಪ್ರೋತ್ಸಾಹಧನ ಯೋಜನೆಯಡಿಯಲ್ಲಿ ತಾರತಮ್ಯ ನೀತಿಯನ್ನು ಅನುಸರಿಸಲಾಗುತ್ತಿದ್ದು, ಇದರಿಂದ ಬಹುತೇಕ ಅಂತರ್ಜಾತಿ ವಿವಾಹಿತರಿಗೆ ಯಾವುದೇ ಬಿಡುಗಾಸಿನ ಪ್ರೋತ್ಸಾಹಧನ ಸಿಗದೇ ಸರಕಾರವನ್ನು ದೂಷಿಸುವಂತಹ ವಾತಾವರಣ ನಿರ್ಮಾಣಗೊಂಡಿದೆ.
ಪರಿಶಿಷ್ಟ ಜಾತಿಗೆ ಸೇರಿದ ವರ, ಪರಿಶಿಷ್ಟ ಪಂಗಡಕ್ಕೆ ಸೇರಿದ ವಧು ವಿವಾಹವಾದರೆ ಈ ಯೋಜನೆ ಅಡಿಯಲ್ಲಿ ನೀಡಬೇಕಾಗಿದ್ದ ಪ್ರೋತ್ಸಾಹಧನವು ಸರಕಾರದ ಅವೈಜ್ಞಾನಿಕ ನೀತಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಯಾವುದೇ ಪ್ರೋತ್ಸಾಹಧನ ಸಿಗದೇ ಇರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಸಮಾಜದಲ್ಲಿರುವ ಜಾತೀಯತೆಯನ್ನು ಕಡಿಮೆ ಮಾಡಲು ಮತ್ತು ಸ್ವೀಕಾರಾರ್ಹ ಸಮಾಜವನ್ನು ಉತ್ತೇಜಿಸುವ ಸಲುವಾಗಿ ಅಂತರ್ಜಾತಿ ವಿವಾಹ, ಮರು ವಿವಾಹ, ಪರಿಶಿಷ್ಟ ಜಾತಿ ಸಮುದಾಯದೊಳಗೆ ಅಂತರ್ಜಾತಿ ವಿವಾಹ, ಪರಿಶಿಷ್ಟ ಜಾತಿ ಸರಳ ವಿವಾಹ, ದೇವದಾಸಿಯರ ಮಕ್ಕಳ ವಿವಾಹ ಹಾಗೂ ಸಾಮೂಹಿಕ ವಿವಾಹಗಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಪ್ರೋತ್ಸಾಹಧನ ಯೋಜನೆಗಳನ್ನು ಜಾರಿಗೆ ತರಲಾಗಿದೆ.
ರಾಜ್ಯದಲ್ಲಿ ವಾಸಿಸುತ್ತಿರುವವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಅಂತರ್ಜಾತಿ ವಿವಾಹಕ್ಕೆ ಮಾತ್ರ ಪ್ರೋತ್ಸಾಹಧನ ನೀಡಲಾಗುತ್ತಿತ್ತು. ಕಾಲಾಂತರದಲ್ಲಿ ಜಾತಿಯ ಬೇರುಗಳ ಮೂಲಗಳನ್ನು ಅರಿತುಕೊಂಡ ರಾಜ್ಯ ಸರಕಾರ ಪರಿಶಿಷ್ಟ ಜಾತಿಯ/ ಪರಿಶಿಷ್ಟ ಪಂಗಡದ ಉಪಜಾತಿಗಳಲ್ಲಿ ಮದುವೆಯಾದವರಿಗೂ ಈ ಯೋಜನೆಯನ್ನು ವಿಸ್ತರಿಸಿತು. ಆದರೆ, ಈ ವೇಳೆ ಪರಿಶಿಷ್ಟ ಜಾತಿಗೆ ಸೇರಿದ ವರ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ವಧು ವಿವಾಹವಾದಲ್ಲಿ ಪ್ರೋತ್ಸಾಹಧನ ನೀಡದೇ ಅವೈಜ್ಞಾನಿಕ ನಿಯಮಗಳನ್ನು ಅನುಸರಿಸುತ್ತಿರುವುದು ಅರ್ಹ ಫಲಾನುಭವಿಗಳಿಗೆ ಅಸಮಾಧಾನ ಉಂಟುಮಾಡಿದೆ.
ಪರಿಶಿಷ್ಟ ಪಂಗಡದವರು, ಪರಿಶಿಷ್ಟ ಜಾತಿಯ ಜನರನ್ನು ತಮ್ಮ ಮನೆಗಳೊಳಗೆ ಸೇರಿಸಿಕೊಳ್ಳುವುದಕ್ಕೂ ಹಿಂದೆಮುಂದೆ ನೋಡುವ ಮತ್ತು ಅವರನ್ನು ಮುಟ್ಟಿಸಿಕೊಳ್ಳುವುದಕ್ಕೂ ಅಸಹ್ಯ ಪಡುತ್ತಿರುವ ಹಲವು ಉದಾಹರಣೆಗಳು ನಮ್ಮ ಮುಂದಿವೆ. ಇಂತಹ ಸಂದರ್ಭದಲ್ಲಿ ಎಸ್ಸಿ, ಎಸ್ಟಿ ಜಾತಿಗೆ ಸೇರಿದ ಯುವಕ ಯುವತಿಯರು ಅಂತರ್ಜಾತಿ ವಿವಾಹವಾದಾಗ ಅವರಿಗೆ ಬೆಂಬಲವಾಗಿ ನಿಂತು, ಬದುಕು ಕಟ್ಟಿಕೊಳ್ಳಲು ಎಲ್ಲ ರೀತಿಯಲ್ಲೂ ಪ್ರೋತ್ಸಾಹ ನೀಡಬೇಕಾದದ್ದು ಸರಕಾರದ, ಸಮಾಜ ಕಲ್ಯಾಣ ಇಲಾಖೆಯ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಆದ್ಯ ಕರ್ತವ್ಯವಾಗಬೇಕಿತ್ತು ಎಂದು ದಸಂಸ ನಾಯಕ ವಿ.ನಾಗರಾಜ್ ಹೇಳುತ್ತಾರೆ.
ಸಮಾಜ ಕಲ್ಯಾಣ ಇಲಾಖೆಯಲ್ಲಿ ಉನ್ನತ ಮಟ್ಟದ ಅಧಿಕಾರಿಗಳಿದ್ದರೂ, ಇಂತಹ ಸೂಕ್ಷ್ಮತೆಗಳನ್ನು ಸರಕಾರದ ಗಮನಕ್ಕೆ ತರದೇ ಇರುವುದು ಮತ್ತು ಸೂಕ್ಷ್ಮತೆಗಳನ್ನು ಗಮನಿಸದೇ ಅವೈಜ್ಞಾನಿಕ ನೀತಿಗಳನ್ನು ಸರಕಾರ ಜಾರಿ ಮಾಡಿರುವುದು ದುರಂತ. ಈ ಅಂತರ್ಜಾತಿ ವಿವಾಹ ಪ್ರೋತ್ಸಾಹಧನ ಯೋಜನೆಗಳಿಂದ ಜಾತಿ ನಿರ್ಮೂಲನೇ ಮಾಡುವುದು ಸರಕಾರದ ಗುರಿಯಾಗಿದ್ದರೆ, ಕೂಡಲೇ ಪ್ರೋತ್ಸಾಹಧನ ನೀಡುವ ಯೋಜನೆಯಲ್ಲಿರುವ ಅವೈಜ್ಞಾನಿಕ ನೀತಿಗಳನ್ನು ಬದಲಾಯಿಸಬೇಕು. ಅರ್ಹ ಫಲಾನುಭವಿಗಳೂ ಸುಲಭವಾಗಿ ಅರ್ಜಿ ಸಲ್ಲಿಸುವಂತೆ ತಂತ್ರಾಂಶ ರೂಪಿಸಬೇಕು. 2018ರ ನಂತರದಲ್ಲಿ ಯಾರೆಲ್ಲ ಎಸ್ಸಿ-ಎಸ್ಟಿ ಅಂತರ್ಜಾತಿ ವಿವಾಹವಾಗಿರುತ್ತಾರೋ ಅವರೆಲ್ಲರಿಗೂ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಬೇಕು ಮತ್ತು ಕಾಲಮಿತಿಯಲ್ಲಿ ಪ್ರೋತ್ಸಾಹಧನವನ್ನು ಬಿಡುಗಡೆ ಮಾಡಬೇಕು ಎಂಬುದು ಅರ್ಹ ಫಲಾನುಭವಿಗಳ ಒತ್ತಾಯವಾಗಿದೆ.
ಅಂತರ್ಜಾತಿ ವಿವಾಹವಾದ ಪರಿಶಿಷ್ಟ ಜಾತಿಗೆ ಸೇರಿದ ಯುವಕ/ಯುವತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಯುವತಿ/ಯುವಕರಿಗೆ ಸರಕಾರ ರೂಪಿಸಿರುವ ನಿಯಮಗಳ ಪ್ರಕಾರ ಪ್ರೋತ್ಸಾಹಧನ ಸಿಗುವುದಿಲ್ಲ. ಇಲ್ಲಿಯವರೆಗೂ ಈ ನಿರ್ದಿಷ್ಟ ಸಮಸ್ಯೆಯ ಕುರಿತು ನಮಗೆ ಯಾವುದೇ ಲಿಖಿತ ರೂಪದಲ್ಲಿ ಪತ್ರ ಬರದೇ ಇರುವುದರಿಂದ ಸರಕಾರದ ಗಮನಕ್ಕೆ ತಂದಿರುವುದಿಲ್ಲ. ಮುಂದಿನ ದಿನಗಳಲ್ಲಿ ಈ ಸಮಸ್ಯೆಯನ್ನು ಮೇಲಧಿಕಾರಿಗಳ ಮತ್ತು ಸರಕಾರದ ಗಮನಕ್ಕೂ ತಂದು ಫಲಾನುಭವಿಗಳಿಗೆ ಪ್ರೋತ್ಸಾಹಧನ ಸಿಗುವಂತೆ ಕ್ರಮವಹಿಸುತ್ತೇವೆ.
-ಭಾರತಿ, ಉಪನಿರ್ದೇಶಕರು ಮೀಸಲಾತಿ ಜಾರಿಕೋ, ಸಮಾಜ ಕಲ್ಯಾಣ ಇಲಾಖೆ
ಪರಿಶಿಷ್ಟ ಪಂಗಡಕ್ಕೆ ಸೇರಿದ ನಾನು ಪರಿಶಿಷ್ಟ ಜಾತಿಗೆ ಸೇರಿದ ಯುವಕನನ್ನು 2024ರ ಅಕ್ಟೋಬರ್ನಲ್ಲಿ ಅಂತರ್ಜಾತಿ ಮದುವೆಯಾಗಿರುತ್ತೇನೆ. ಸಮಾಜ ಕಲ್ಯಾಣ ಇಲಾಖೆಯಿಂದ ಸಿಗುವ ಅಂತರ್ಜಾತಿ ವಿವಾಹ ಪ್ರೋತ್ಸಾಹಧನಕ್ಕೆ ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸಲು ಪ್ರಯತ್ನಿಸಿದಾಗ ಸಾಧ್ಯವಾಗಲಿಲ್ಲ. ಇಲಾಖೆಯ ಸಹಾಯವಾಣಿಗೆ ದೂರು ನೀಡಿ, ವಿಚಾರಿಸಿದಾಗ ಪರಿಶಿಷ್ಟ ಜಾತಿ ಮತ್ತು ಪಂಗಡದಲ್ಲಿ ಮದುವೆಯಾದರೆ ಪ್ರೋತ್ಸಾಹಧನ ಸಿಗುವುದಿಲ್ಲ ಎಂದು ಮಾಹಿತಿ ನೀಡಿದ್ದರು. ಹಾಗಿದ್ದರೆ ಸರಕಾರದ ಈ ಯೋಜನೆ ಯಾರಿಗಾಗಿ? ಮತ್ತು ಯಾವ ಉದ್ದೇಶಕ್ಕಾಗಿ?
-ಮೌಲ್ಯ ಕೆ.ಎಂ. ಹೊಸಕೋಟೆ, ಅಂತರ್ಜಾತಿ ವಿವಾಹಿತೆ
ಪರಿಶಿಷ್ಟ ಜಾತಿಗೆ ಸೇರಿದ ನಾನು ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದೇನೆ. ಸಮಾಜದಲ್ಲಿ ಜಾತೀಯತೆ ತೊಲಗಬೇಕೆನ್ನುವ ಕಾರಣದಿಂದ ಪರಿಶಿಷ್ಟ ಪಂಗಡದ ಆದಿವಾಸಿ ಸಮುದಾಯಕ್ಕೆ ಸೇರಿದ ಹುಡುಗಿಯನ್ನು ವಿವಾಹವಾಗಿದ್ದೇನೆ. ಸರಕಾರದ ಯೋಜನೆಯನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಇಲಾಖೆಯ ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸಲು ಹೋದಾಗ, ಮೊದಲ ಹಂತದಲ್ಲಿಯೇ ಅರ್ಜಿ ತಿರಸ್ಕಾರವಾಗಿದೆ. ಹೀಗಿದ್ದಾಗ ಅವೈಜ್ಞಾನಿಕ ನೀತಿಗಳಿಂದ ಸಮಾಜದಲ್ಲಿರುವ ಜಾತೀಯತೆಯನ್ನು ಅಂತ್ಯಗೊಳಿಸಲು ಸಾಧ್ಯವೇ? ಸರಕಾರದ ಉದ್ದೇಶ ಸಫಲವಾಯಿತೇ?
-ರಾಕೇಶ್ ಚಾಮರಾಜನಗರ, ಅಂತರ್ಜಾತಿ ವಿವಾಹಿತ







