ಬಿ ಎಸ್ ವೈ ಪುತ್ರನ ನೇಮಕಕ್ಕೆ ಪಕ್ಷದೊಳಗೇ ಅಸಮಾಧಾನ
► ಹೇಗೆ ಬದಲಾಗಲಿದೆ ಕಾಂಗ್ರೆಸ್ ರಣತಂತ್ರ ? ► ಜೆಡಿಎಸ್ ಲೆಕ್ಕಾಚಾರಗಳೇನೇನು ?

ವಿಜಯೇಂದ್ರ
ರಾಜ್ಯ ಬಿಜೆಪಿಯಲ್ಲಿ ಈವರೆಗೂ ಒಂದು ತಳಮಳವಿತ್ತು. ಈಗ ರಾಜ್ಯಾಧ್ಯಕ್ಷ ಹುದ್ದೆಗೆ ಬಿವೈ ವಿಜಯೇಂದ್ರ ನೇಮಕದ ಬಳಿಕ ಮತ್ತೊಂದು ಬಗೆಯ ತಳಮಳ ಶುರುವಾಗಿದೆ. ಬಿಜೆಪಿಯಲ್ಲಿನ ಹಲವಾರು ಹಿರಿಯರಿಗೆ ಇದು ನಿರಾಸೆ ತಂದಿರುವುದು ಒಂದೆಡೆಯಾದರೆ, ಮುನಿಸಿಗೂ ಕಾರಣವಾಗಿದೆ. ಅಸಮಾಧಾನವೂ ಬಹಿರಂಗಗೊಳ್ಳುತ್ತಿದೆ.
ಬಿಎಸ್ವೈ ಬೆಂಬಲ ಮತ್ತು ಲಿಂಗಾಯತ ಸಮುದಾಯ ಪಕ್ಷದ ಜೊತೆಗಿರುವಂತೆ ಮಾಡಲು ಬಿಜೆಪಿ ಹೈಕಮಾಂಡ್ ಇಂಥದೊಂದು ನಿರ್ಧಾರಕ್ಕೆ ಬಂದಿರುವಾಗ, ಈ ತೀರ್ಮಾನವೇ ಬಿಜೆಪಿಯೊಳಗೆ ಅಸ್ಥಿರತೆಗೆ ಕಾರಣವಾಗಬಹುದಾ ಅನ್ನೋ ಸಂಶಯ ಶುರುವಾಗಿದೆ. ವಿಜಯೇಂದ್ರ ನೇಮಕದ ಬೆನ್ನಿಗೇ ಬಿಜೆಪಿಯೊಳಗಿನ ಬೆಳವಣಿಗೆಗಳು ಲೋಕಸಭೆ ಚುನಾವಣೆ ವೇಳೆಯಲ್ಲಿ ಪಕ್ಷಕ್ಕೆ ಹೊಡೆತ ಕೊಡಬಹುದೆ?
ಮೊದಲ ಗುರಿಯೇ ಲೋಕಸಭೆ ಚುನಾವಣೆಯಲ್ಲಿ ಯಶಸ್ಸು ಸಾಧಿಸುವುದಾಗಿರುವುದರಿಂದ ವಿಜಯೇಂದ್ರ ಎದುರು ಪಕ್ಷದಲ್ಲೇ ಇರುವ ಸವಾಲುಗಳು ಎಂಥವು?.
ವಿಜಯೇಂದ್ರ ನೇಮಕದ ಮೂಲಕವಾಗಿ ಈಗ ಬಿಜೆಪಿಗೆ ಬಿಎಸ್ವೈ ಬಲವಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅನುಸರಿಸಬಹುದಾದ ತಂತ್ರಗಾರಿಕೆ ಏನಿರಬಹುದು?. ಇದೆಲ್ಲದರ ನಡುವೆ, ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ತನ್ನ ಬೇಳೆ ಬೇಯಿಸಿಕೊಳ್ಳಲು ಹಾಕುತ್ತಿರುವ ಲೆಕ್ಕಾಚಾರಗಳೇನು?.
ಮೊದಲನೆಯದಾಗಿ, ಬಿಜೆಪಿಯೊಳಗಿನ ತಳಮಳದ ಬಗ್ಗೆ ನೋಡುವುದಾದರೆ, ವಿಜಯೇಂದ್ರ ನೇಮಕದ ಹಿನ್ನೆಲೆಯಲ್ಲಿ, ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟದ ಆಕಾಂಕ್ಷಿಗಳಾಗಿದ್ದವರ ನಡೆ ಏನಿರಬಹುದು ಎಂಬ ಕುತೂಹಲ ಎದ್ದಿದೆ. ಪ್ರಮುಖವಾಗಿ ಸಿ.ಟಿ. ರವಿ, ಬಸನಗೌಡ ಪಾಟೀಲ್ ಯತ್ನಾಳ್, ವಿ. ಸೋಮಣ್ಣ, ಆರ್. ಅಶೋಕ್, ಅಶ್ವತ್ಥ್ ನಾರಾಯಣ ಸೇರಿದಂತೆ ಹಲವರೂ ಈ ಹುದ್ದೆಗೆಆಕಾಂಕ್ಷಿಗಳಾಗಿದ್ದರು.
ಅದಕ್ಕಿಂತ ಹೆಚ್ಚಾಗಿ, ಈಗಾಗಲೇ ಯಡಿಯೂರಪ್ಪ ಪಕ್ಷದಲ್ಲಿ ಬದಿಗೆ ತಳ್ಳಲ್ಪಟ್ಟಿರುವುದರಿಂದ ಅವರ ಪುತ್ರನಿಗೆ ರಾಜ್ಯಾಧ್ಯಕ್ಷ ಹುದ್ದೆ ಸಿಗಲಾರದು ಎಂದೇ ಬಹುತೇಕ ನಾಯಕರ ಲೆಕ್ಕಾಚಾರವಾಗಿತ್ತು. ಆದರೆ ಹೈಕಮಾಂಡ್ ಯಡಿಯೂರಪ್ಪನವರನ್ನು ಬಿಟ್ಟು ಲೋಕಸಭೆ ಚುನಾವಣೆಗೆ ಹೋಗುವುದರ ಅಪಾಯಗಳನ್ನು ಅರಿತು, ಕಡೆಗೂ ಅವರ ಎದುರು ಮಣಿದಿರುವುದರಿಂದ ವಿಜಯೇಂದ್ರಗೆ ಪಟ್ಟ ಒಲಿದುಬಂದಿದೆ.
ಯಡಿಯೂರಪ್ಪ ವಿರೋಧಿ ಬಣದ ಬಿಎಲ್ ಸಂತೋಷ್ ಅಂಥವರನ್ನು ಉದ್ದೇಶಪೂರ್ವಕವಾಗಿಯೇ ಬಿಜೆಪಿ ಹೈಕಮಾಂಡ್ ಈಗ ಬದಿಗಿಟ್ಟು, ಲೋಕಸಭೆ ಚುನಾವಣೆಯನ್ನು ಗುರಿಯಾಗಿಸಿಕೊಂಡು ನಿರ್ಧಾರ ತೆಗೆದುಕೊಂಡಿದೆ. ಆದರೆ, ಲೋಕಸಭೆ ಚುನಾವಣೆ ಎದುರು ಇರುವಾಗಲೇ ಇದೇ ಕಾರಣದಿಂದ ಪಕ್ಷದೊಳಗೆ ಬಿರುಕು, ಅಸಮಾಧಾನ ತೀವ್ರಗೊಳ್ಳಲಿದೆಯೆ? ಇದು ಬಿಜೆಪಿ v/s ಬಿಜೆಪಿ ಆಗಲಿದೆಯೆ?
ಈಗಿನ ಬೆಳವಣಿಗೆ ನೋಡಿದರೆ ಅಸಮಾಧಾನಗಳು ಜೋರಾಗಿಯೇ ಇವೆ. ಸಿ.ಟಿ ರವಿಯಂಥವರು ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ.
ಈಗ ಏನೇ ಮಾತನಾಡಿದರೂ ನಮ್ಮ ಮಾತೇ ನಮಗೆ ತಿರುಗುಬಾಣವಾಗಲಿದೆ ಎಂಬ ಸಿ.ಟಿ ರವಿ ಮಾತಿನಲ್ಲಿ ಅವರಿಗಿರುವ ಅಸಮಾಧಾನ ಸ್ಪಷ್ಟವಾಗಿ ವ್ಯಕ್ತವಾಗಿದೆ. ಇದರ ಜೊತೆಗೇ, ಕುಟುಂಬ ರಾಜಕಾರಣದ ವಿಚಾರವಾಗಿ ವಿರೋಧಿಸಲು ಬಿಜೆಪಿಗೆ ಈಗ ನೈತಿಕತೆ ಇಲ್ಲವಾಗಿದೆ ಎಂದು ಹೇಳುವ ಮೂಲಕವೂ ವಿಜಯೇಂದ್ರ ನೇಮಕದ ಬಗ್ಗೆ ಸಿ.ಟಿ ರವಿ ತಮ್ಮ ನಿಲುವೇನು ಎಂಬುದನ್ನು ಸೂಚಿಸಿದ್ದಾರೆ.
ರಾಜ್ಯಾಧ್ಯಕ್ಷ ಸ್ಥಾನವೆನ್ನುವುದು ಅಧಿಕಾರವಲ್ಲ, ಜವಾಬ್ದಾರಿ ಎಂದು ಹೇಳುವ ಮೂಲಕವೂ ಅವರು ವಿಜಯೇಂದ್ರ ಅವರನ್ನು ಚುಚ್ಚಿರುವ ಹಾಗಿದೆ. ಮಾಡಬೇಕಾದ ಕೆಲಸ ಬಹಳ ಇದೆ ಎಂಬುದನ್ನು ಅವರು ಈ ಮೂಲಕ ಪರೋಕ್ಷವಾಗಿ ಹೇಳಿದ್ದಾರೆ. ಈಗಾಗಲೇ ಪಕ್ಷದ ಮಾತು ಕೇಳಿಕೊಂಡು ಕ್ಷೇತ್ರವನ್ನೂ ಅಧಿಕಾರವನ್ನೂ ಕಳೆದುಕೊಂಡು ಕಂಗೆಟ್ಟಿರುವ ವಿ ಸೋಮಣ್ಣ ಅಧ್ಯಕ್ಷ ಹುದ್ದೆ ಕೊಡುವಂತೆ ನೇರವಾಗಿಯೇ ಕೇಳಿಕೊಂಡಿದ್ದರು.
ಆದರೆ ಲೆಕ್ಕ ಹಾಕಿಯೇ ಅವರನ್ನು ಬದಿಗೆ ತಳ್ಳಿರುವ ಬಿಜೆಪಿ, ಈಗಲೂ ಅವರ ಮಾತಿಗೆ ಸೊಪ್ಪು ಹಾಕಿಲ್ಲ. ಇದು ಅವರ ತೀವ್ರ ನಿರಾಸೆಗೆ ಕಾರಣವಾಗಿದೆ ಎಂಬುದಂತೂ ನಿಜ. ಇನ್ನು ಯತ್ನಾಳ್ ಅಂತೂ ಯಾವ ವಿಜಯೇಂದ್ರರನ್ನು ಜರೆಯುತ್ತ ಬಂದಿದ್ದರೋ ಅವರನ್ನೇ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಒಪ್ಪಿಕೊಳ್ಳಬೇಕಾಗಿ ಬಂದಿದೆ.
ವಿಜಯೇಂದ್ರ ನೇಮಕದ ಬಗ್ಗೆ ಏನನ್ನೂ ಹೇಳದೆ ಮುಗುಮ್ಮಾಗಿರುವ ಅವರ ಸ್ಥಿತಿ ಸೋಮಣ್ಣನವರ ಸ್ಥಿತಿಗಿಂತ ಕೆಟ್ಟದೆನ್ನಿಸುವಂತಿದೆ. ಯಾಕೆಂದರೆ ಅವರ ಮಾತನ್ನು ಪಕ್ಷದಲ್ಲಿಯೇ ಯಾರೂ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಈಶ್ವರಪ್ಪ ಕೂಡ ಅಸಮಾಧಾನ ಎನ್ನುವುದಕ್ಕಿಂತ ಬೇರೆ ಧಾಟಿಯಲ್ಲಿ ಮಾತನಾಡಿದ್ದಾರೆ.
ನಮ್ಮ ಪಕ್ಷ ಸಾಮೂಹಿಕ ನಾಯಕತ್ವವನ್ನು ಬಯಸುತ್ತದೆ. ಒಬ್ಬ ವ್ಯಕ್ತಿಯನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುವುದಿಲ್ಲ ಎಂಬ ಈಶ್ವರಪ್ಪ ಮಾತು, ವಿಜಯೇಂದ್ರ ಅವರನ್ನು ಕಡೆಗಣಿಸುವ ರೀತಿಯಲ್ಲಿರುವುದು ಸ್ಪಷ್ಟ. ಇನ್ನು ಶೋಭಾ ಕರಂದ್ಲಾಜೆಯವರ ಹೆಸರನ್ನು ರಾಜ್ಯಾಧ್ಯಕ್ಷ ಹುದ್ದೆಗೆ ತೇಲಿಬಿಟ್ಟು ಕಡೆಗೆ ಕೈಕೊಡುವ ಮೂಲಕ ಅವರಿಗೂ ಆಸೆ ಹುಟ್ಟಿಸಿ ನಿರಾಸೆ ಮೂಡಿಸಲಾಯಿತು.
ವಿಜಯೇಂದ್ರ ನೇಮಕ ಪಕ್ಷದೊಳಗೇ ಹಲವು ಹಿರಿಯರ ಅಸಮಾಧಾನಕ್ಕೆ ಕಾರಣವಾಗಿರುವುದು ಅವರು ಪಕ್ಷದೊಳಗೇ ಎದುರಿಸಬೇಕಾಗಿ ಬರುವ ಸವಾಲುಗಳ ಬಗ್ಗೆಯೂ ಸುಳಿವನ್ನು ಕೊಡುತ್ತಿದೆ.
1.ರಾಜ್ಯಾಧ್ಯಕ್ಷ ಹುದ್ದೆ ಬಯಸಿ ನಿರಾಸೆಗೆ ಒಳಗಾದ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುವುದು ವಿಜಯೇಂದ್ರ ಪಾಲಿಗೆ ಸುಲಭದ್ದಂತೂ ಆಗಲಾರದು.
2.ಬಿಎಸ್ವೈ ಮಾರ್ಗದರ್ಶನ ಇದ್ದರೂ, ಲಿಂಗಾಯತರ ಬಲ ಪಕ್ಷಕ್ಕೆ ಒದಗಿದರೂ, ಪಕ್ಷದೊಳಗೇ ಇರುವ ಬೇಗುದಿ ತರಬಹುದುದಾದ ಇಕ್ಕಟ್ಟು ಮತ್ತು ಬಿಕ್ಕಟ್ಟನ್ನು ವಿಜಯೇಂದ್ರ ಹೇಗೆ ಪರಿಹರಿಸಿಕೊಳ್ಳಬಲ್ಲರು?
3.ಬಿಎಸ್ವೈ ವಿರೋಧಿ ಬಣವೊಂದು ಸದ್ಯ ತಣ್ಣಗಿರುವಂತೆ ಕಂಡರೂ, ಅದು ನಿಧಾನವಾಗಿ ವಿಜಯೇಂದ್ರ ವಿರೋಧಿ ಬಣವಾಗಿ ಬದಲಾಗುತ್ತ ತರಬಹುದಾದ ತೊಡಕು ಕೂಡ ಕಾಡುವ ಸಾಧ್ಯತೆ ಹೆಚ್ಚು.
4.ಯಡಿಯೂರಪ್ಪ ಅವರಿಗಿದ್ದ ಸಾಮರ್ಥ್ಯ ಮತ್ತು ಅವರದೇ ಆದ ನಾಯಕತ್ವದ ಗುಣ ವಿಜಯೇಂದ್ರ ಅವರಿಗೆ ಸಾಧ್ಯವಾಗದು. ಸಮುದಾಯದ ಬಲವೊಂದೇ ರಾಜಕೀಯವಾಗಿ ಯಶಸ್ಸು ತರಲು ಸಾಕಾಗುವುದಿಲ್ಲ.
5.ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುವುದಾಗಿ ವಿಜಯೇಂದ್ರ ಹೇಳಿದ್ದಾರಾದರೂ, ಅದೊಂದು ರಾಜಕೀಯ ಹೇಳಿಕೆ ಮಾತ್ರವಾಗುವ ಸಾಧ್ಯತೆ ಹೆಚ್ಚಿದ್ದು, ಅಧ್ಯಕ್ಷಗಿರಿಯ ಮೂಲಕ ಅವರು ತೋರಿಸಬಹುದಾದ ಗತ್ತು ಪಕ್ಷದೊಳಗಿನ ಬಿರುಕನ್ನು ಹೆಚ್ಚಿಸಿದರೂ ಅಚ್ಚರಿಪಡಬೇಕಿಲ್ಲ.
ಒಂದೆಡೆ ಪಕ್ಷದೊಳಗೇ ಹೀಗೆ ಗುಡುಗೂ ಸಿಡಿಲೂ ಉಂಟಾಗಿದ್ದರೆ, ಇನ್ನೊಂದೆಡೆ ಬಿಜೆಪಿಯೊಳಗಿನ ಬೆಳವಣಿಗೆಗಳಿಗೆ ಅನುಗುಣವಾಗಿ ತನ್ನ ಕಾರ್ಯತಂತ್ರವನ್ನು ರೂಪಿಸುವತ್ತ ಕಾಂಗ್ರೆಸ್ ತೊಡಗದೇ ಇಲ್ಲ.
ಆಪರೇಷನ್ ಹಸ್ತದ ಮಾತು ಜೋರಾಗಿಯೇ ಕೇಳಿಬರುತ್ತಿದ್ದ ಹೊತ್ತಿನಲ್ಲಿ, ವಿಜಯೇಂದ್ರಗೆ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ಸಿಕ್ಕಿರುವುದರಿಂದ ಲಿಂಗಾಯತ ಸಮುದಾಯದ ಬೆಂಬಲ ಗಳಿಸುವ ಅಥವಾ ಆ ನಾಯಕರನ್ನು ಸೆಳೆಯುವ ಕಾಂಗ್ರೆಸ್ ಯತ್ನಕ್ಕೆ ತುಸು ಹಿನ್ನಡೆಯಾಗುವಂತೆ ಕಾಣುತ್ತಿದೆ.
ಹೀಗಾಗಿ ಅದು ಈಗ, ಲಿಂಗಾಯತ ಸಮುದಾಯವನ್ನು ಹಿಡಿದಿಟ್ಟುಕೊಳ್ಳುವ ತಂತ್ರಗಾರಿಕೆಗೆ ಮಹತ್ವ ಕೊಟ್ಟಿದೆ ಎಂಬ ಮಾತುಗಳಿವೆ. ಬಿಜೆಪಿಯ ಮೇಲೆ ಮುನಿಸಿಕೊಂಡು ಕಾಂಗ್ರೆಸ್ ಸೇರಿರುವ ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ ಸವದಿ ಅವರನ್ನು ಹೆಚ್ಚು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಮೂಲಕ ಲಿಂಗಾಯತ ಸಮುದಾಯದ ವಿಶ್ವಾಸ ಗಳಿಸಲು ಕಾಂಗ್ರೆಸ್ ಮುಂದಾಗಿದೆ ಎನ್ನಲಾಗುತ್ತಿದೆ.
ಹೀಗೆ ಲಿಂಗಾಯತ ಮತಗಳನ್ನು ಹಿಡಿದಿಟ್ಟುಕೊಂಡೇ, ಒಕ್ಕಲಿಗ ಸಮುದಾಯ, ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಅಲ್ಪಸಂಖ್ಯಾತರ ಮತಗಳನ್ನು ಸೆಳೆಯುವ ನಿಟ್ಟಿನಲ್ಲಿ ಅದು ಪ್ರಯತ್ನಿಸುತ್ತಿದೆ ಎಂಬ ವರದಿಗಳಿವೆ. ಇನ್ನು ಜಾತಿ ಜನಗಣತಿ ವರದಿ ಕೂಡ ಕಾಂಗ್ರೆಸ್ ಬಳಿಯಿರುವ ಮತ್ತೊಂದು ಅಸ್ತ್ರವಾಗಲಿದ್ದು, ಆದರೆ ಅದನ್ನು ಯಾವ ಬಗೆಯಲ್ಲಿ ಪ್ರಯೋಗಿಸಬೇಕು ಎಂಬುದು ಸವಾಲಾಗಿದ್ದು, ಅದಕ್ಕಾಗಿಯೂ ತಂತ್ರಗಳನ್ನು ರೂಪಿಸುತ್ತಿದೆ ಎಂದು ಹೇಳಲಾಗುತ್ತಿದೆ.
ಆದರೆ, ಇದೆಲ್ಲದರ ನಡುವೆಯೂ ಕಾಂಗ್ರೆಸ್ ಒಳಗೆ ಕೂಡ ಎಲ್ಲವೂ ಸರಿಯಾಗಿಲ್ಲ ಎಂಬುದು ಈಗಾಗಲೇ ಬಹಿರಂಗವಾಗುತ್ತಿದೆ. ಸಿಎಂ ಹುದ್ದೆಗೆ ತಾನು ತಾನೆಂದು ಕಾಂಗ್ರೆಸ್ ನಾಯಕರ ಪಟ್ಟಿ ಬೆಳೆಯತೊಡಗಿರುವ ಹೊತ್ತಲ್ಲಿ, ಇದೆಲ್ಲವನ್ನೂ ಹತೋಟಿಯಲ್ಲಿಟ್ಟು, ಚುನಾವಣೆಯಲ್ಲಿ ಒಗ್ಗಟ್ಟಾಗಿರುವುದು ಕಾಂಗ್ರೆಸ್ಗೆ ಅಗತ್ಯವಿದೆ.
ಆದರೆ ಕಳೆದುಕೊಳ್ಳಲು ಏನೂ ಇಲ್ಲ ಎಂಬಂತ ಸ್ಥಿತಿಯಲ್ಲಿರುವ ಜೆಡಿಎಸ್ ಮಾತ್ರ ಎಲ್ಲಿ ಏನನ್ನು ಹೇಗೆ ಪಡೆಯಬಹುದು ಎಂಬ ಕುರಿತು ಸದ್ದಿಲ್ಲದೆ ಲೆಕ್ಕಾಚಾರದಲ್ಲಿ ತೊಡಗಿರುವ ಹಾಗಿದೆ.
ವಿಜಯೇಂದ್ರ ನಾಯಕತ್ವ ಬಿಜೆಪಿಗೆ ಇರುವುದರಿಂದ ಈ ಹೊತ್ತಲ್ಲಿ ನಿಖಿಲ್ ರಾಜಕೀಯ ಬೆಳವಣಿಗೆಗೆ ಅದನ್ನು ಪೂರಕವಾಗಿ ಬಳಸಿಕೊಳ್ಳುವ ಸಾಧ್ಯತೆಯ ಬಗ್ಗೆಯೂ ಕುಮಾರಸ್ವಾಮಿ ಯೋಚಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಹಳೇ ಮೈಸೂರು ಭಾಗದಲ್ಲಿನ ಲಿಂಗಾಯತ ಮತಗಳೂ ತನ್ನ ಪಾಲಾಗಲಿರುವ ಬಗ್ಗೆ ಜೆಡಿಎಸ್ಗೆ ಈಗ ನಿರೀಕ್ಷೆ ಹೆಚ್ಚಾಗಿದೆ. ಬಿಜೆಪಿ ಜೊತೆ ವಿಲೀನವಾಗದೆ, ಅದರ ಜೊತೆಗೆ ಇರುವ ಮೂಲಕವೇ ಬರಬಹುದಾದ ಲಾಭಗಳನ್ನು ತಪ್ಪದೆ ಪಡೆದುಕೊಳ್ಳುವ ಹವಣಿಕೆಯಲ್ಲಿ ಜೆಡಿಎಸ್ ಇದೆ ಎಂಬುದಂತೂ ನಿಜ.
ಮುಂದಿನ ವಾರದ ಹೊತ್ತಿಗೆ ವಿಧಾನಸಭೆ ವಿರೋಧ ಪಕ್ಷ ನಾಯಕನ ಆಯ್ಕೆ ಬಿಜೆಪಿಯಲ್ಲಿ ಚರ್ಚೆಗೆ ಬರಲಿದ್ದು, ಯಾರಿಗೆ ನಾಯಕತ್ವ ಕೊಡಲಾಗುವುದು ಎಂಬುದು ಕೂಡ ಮುಖ್ಯವಾಗಲಿದೆ. ಬಿಜೆಪಿಯೊಳಗಿನ ತಳಮಳ ತಗ್ಗುವುದೊ ಇನ್ನಷ್ಟಾಗುವುದೊ ಎಂಬುದರ ಮೇಲೆ ಇತರ ವಿದ್ಯಮಾನಗಳಲ್ಲೂ ಬದಲಾವಣೆ ತಲೆದೋರಲಿದೆ.







