ನಿಮ್ಮ ಕಣ್ಣುಗಳನ್ನು ಪದೇಪದೇ ಉಜ್ಜುತ್ತೀರಾ? ಕಾರ್ನಿಯಾಗೆ ಹಾನಿಯಾಗಬಹುದು ಎಚ್ಚರ!

ಸಾಂದರ್ಭಿಕ ಚಿತ್ರ | Photo Credit : magnific.com
ಬೆಂಗಳೂರಿನ ರಾಜಾಜಿನಗರದ ನಾರಾಯಣ ನೇತ್ರಾಲಯದಲ್ಲಿ ಕನ್ಸಲ್ಟೆಂಟ್ ಕಾರ್ನಿಯಾ ಮತ್ತು ರಿಫ್ರ್ಯಾಕ್ಟಿವ್ ಸರ್ಜರಿ ತಜ್ಞರಾಗಿರುವ ಡಾ. ಪ್ರಾರ್ಥನಾ ಭಂಡಾರಿ ಅವರು ಕಣ್ಣುಗಳನ್ನು ಪದೇಪದೆ ಉಜ್ಜುವುದರಿಂದ ಉಂಟಾಗುವ ಅಪಾಯಗಳ ಬಗ್ಗೆ ವಿವರಿಸಿದ್ದಾರೆ.
ಕಣ್ಣುಗಳನ್ನು ಉಜ್ಜುವುದು ಹಾನಿಕರವಲ್ಲ ಎಂದು ನಮಗೆ ಅನಿಸುತ್ತಿರುತ್ತದೆ. ದಣಿವು, ತುರಿಕೆ ಅಥವಾ ಧೂಳಿನ ಸಂಪರ್ಕವಾದಾಗ ನಮ್ಮಲ್ಲಿ ಹೆಚ್ಚಿನವರು ಸಹಜವಾಗಿಯೇ ಕಣ್ಣುಜ್ಜುತ್ತಾರೆ. ಆದರೆ ಮೃದುವಾಗಿ ಕೆಲವೊಮ್ಮೆ ಉಜ್ಜಿಕೊಂಡಲ್ಲಿ ಸಮಸ್ಯೆಯಾಗದು. ಆದರೆ ಪದೇಪದೆ ಕಣ್ಣುಜ್ಜುವುದು ಅಥವಾ ಕಣ್ಣಿಗೆ ಕಿರಿಕಿರಿಯಾಗುವುದನ್ನು ಅಲಕ್ಷಿಸಬಹುದೆ? ಬೆಂಗಳೂರಿನ ರಾಜಾಜಿನಗರದ ನಾರಾಯಣ ನೇತ್ರಾಲಯದಲ್ಲಿ ಕನ್ಸಲ್ಟೆಂಟ್ ಕಾರ್ನಿಯಾ ಮತ್ತು ರಿಫ್ರ್ಯಾಕ್ಟಿವ್ ಸರ್ಜರಿ ತಜ್ಞರಾಗಿರುವ ಡಾ. ಪ್ರಾರ್ಥನಾ ಭಂಡಾರಿ ಅವರು ಕಣ್ಣುಗಳನ್ನು ಪದೇಪದೆ ಉಜ್ಜುವುದರಿಂದ ಉಂಟಾಗುವ ಅಪಾಯಗಳ ಬಗ್ಗೆ ವಿವರಿಸಿದ್ದಾರೆ.
ಹಲವರಿಗೆ ನಿರಂತರವಾಗಿ ಕಣ್ಣುಜ್ಜುವ ಅಭ್ಯಾಸವಿರುತ್ತದೆ. ಏಕೆ?
ಪದೇಪದೆ ಕಣ್ಣುಜ್ಜುವ ಅಭ್ಯಾಸಕ್ಕೆ ಅತಿ ಮುಖ್ಯ ಕಾರಣವೆಂದರೆ ಅಲರ್ಜಿ. ಯಾರಿಗೆ ತುಂಬಾ ಅಲರ್ಜಿ ಇರುತ್ತದೆಯೇ ಅವರಿಗೆ ಹೆಚ್ಚಾಗಿ ಕಣ್ಣುಜ್ಜುವ ಅಭ್ಯಾಸವಿರುತ್ತದೆ. ಕಣ್ಣು ಅಲರ್ಜಿ ಸಾಮಾನ್ಯವಾಗಿ ಗಾಳಿಯಿಂದ ಬರುತ್ತದೆ. ಧೂಳು, ಹೂಗಳ ಪರಾಗಗಳು ಮೊದಲಾದವು ಅಲರ್ಜಿ ತರುತ್ತವೆ. ಇನ್ನು ಕೆಲವರಿಗೆ ಸಿಸ್ಟಮಿಕ್ ಅಲರ್ಜಿಯೂ ಇರುತ್ತದೆ. ತುಂಬಾ ನೆಗಡಿ ಇದ್ದರೆ ಕಣ್ಣು ಅಲರ್ಜಿಯೂ ಜೊತೆಗೆ ಬರಬಹುದು. ಕೆಲವರಿಗೆ ಪ್ರತ್ಯೇಕವಾಗಿ ಕಣ್ಣಿನ ಅಲರ್ಜಿಯೂ ಇರಬಹುದು. ಒಣ್ಣು ಒಣಗಿದ್ದರೂ ಉಜ್ಜಬೇಕು ಎನ್ನುವ ಭಾವನೆ ಬರುತ್ತದೆ.
ತುಂಬಾ ಒತ್ತಡ ಇದ್ದರೂ ಸಹ ನೋವಾಗುತ್ತಾ ಇದ್ದರೆ, ಅತಿಯಾಗಿ ಮೊಬೈಲ್ ಬಳಕೆ ಮಾಡಿದರೆ ಉಜ್ಜಬೇಕು ಎಂದು ಅನಿಸುತ್ತದೆ. ಚಿಕ್ಕ ಮಕ್ಕಳಲ್ಲಿ ಕೆಲವೊಮ್ಮೆ ಚೆನ್ನಾಗಿ ಕಾಣುತ್ತಿಲ್ಲ ಎಂದಾದಾಗಲೂ ಉಜ್ಜುವ ಅಭ್ಯಾಸ ಬೆಳೆದುಬಿಡುತ್ತದೆ. ತಾತ್ಕಾಲಿಕವಾಗಿ ವಿಷನ್ (ದೃಶ್ಯ) ಸ್ಪಷ್ಟವಾಗಿರಬಹುದು. ಆದರೆ ದೃಷ್ಟಿ ದೋಷವಿದ್ದರೆ ಅಥವಾ ತಪ್ಪು ಕನ್ನಡಕವನ್ನು ಬಳಸುತ್ತಿದ್ದರೆ ಸ್ಪಷ್ಟತೆಗಾಗಿ ಉಜ್ಜಬಹುದು. ಕೆಲವೊಮ್ಮೆ ಕಣ್ಣಿನ ರೆಪ್ಪೆಯಲ್ಲಿ ಸೋಂಕು ಇದ್ದರೂ ಸಹ ಕಣ್ಣು ಉಜ್ಜುವ ಅಭ್ಯಾಸವಿರುತ್ತದೆ.
ಹೀಗೆ ಪದೇಪದೆ ಕಣ್ಣುಜ್ಜುವುದು ಅಪಾಯಕಾರಿಯೆ?
ಹೌದು, ಅಪಾಯಕಾರಿ. ಏಕೆಂದರೆ ಇದರಿಂದ ಬಹಳಷ್ಟು ಸಮಸ್ಯೆ ಎದುರಾಗಬಹುದು. ಮೊದಲನೆಯದಾಗಿ ಹೆಚ್ಚು ಕಣ್ಣು ಉಜ್ಜುತ್ತಾ ಇದ್ದರೆ ಅತಿಯಾಗಿ ದೃಷ್ಟಿ ದೋಷಗಳಲ್ಲಿ ಹೆಚ್ಚಿನ ಬದಲಾವಣೆ ಬರಬಹುದು. ಮತ್ತೊಂದು ಸಮಸ್ಯೆ ಎಂದರೆ keratoconus (ಕೆರಟಕೊನಸ್) ಆಗಿರಬಹುದು. ಅದು ಕಾರ್ನಿಯಾ ಮೇಲೆ ಪರಿಣಾಮ ಬೀರುತ್ತದೆ. ಕೆರಟಕೊನಸ್ ಎಂದರೆ ತುಂಬಾ ಕಣ್ಣು ಉಜ್ಜುವವರಲ್ಲಿ ಎದುರಾಗುವ ಸಮಸ್ಯೆ. ಕಣ್ಣಿನ ಕಪ್ಪುಗುಡ್ಡೆಯ ಆಕಾರ ಬದಲಾಗುತ್ತಾ ಹೋಗುತ್ತದೆ. ತೆಳುವಾಗುತ್ತಾ ಹೋಗಬಹುದು. ಇದರಿಂದ ದೃಷ್ಟಿ ದೋಷದ ಸಂಖ್ಯೆಯಲ್ಲಿ ಬದಲಾವಣೆ ಕಂಡುಬರಬಹುದು. ವಯಸ್ಸು ಹೆಚ್ಚಾಗುತ್ತ ಹೋದಂತೆ ಉಜ್ಜುವಿಕೆ ಹೆಚ್ಚಾದಲ್ಲಿ keratoconus ಸಮಸ್ಯೆ ಹೆಚ್ಚಿರಬಹುದು.
ಕೆಲವೊಮ್ಮೆ ಕಣ್ಣಿನ ಸೋಂಕೂ ಇರಬಹುದು. ಆಕಸ್ಮಾತ್ ಕೈ ಸ್ವಚ್ಛವಿಲ್ಲದೆ ಕಣ್ಣನ್ನು ಸ್ಪರ್ಶಿಸುತ್ತಿದ್ದರೆ ಸೋಂಕು ಬರುವ ಅಪಾಯವಾಗಿದೆ.
ಕಣ್ಣುಜ್ಜದೆ ಇರದಂತೆ ಹೇಗೆ ಗಮನಹರಿಸುವುದು ಹೇಗೆ?
ಮೊದಲಿಗೆ ಸ್ವತಃ ಕಣ್ಣು ಉಜ್ಜುವ ಅಭ್ಯಾಸವನ್ನು ತೊರೆಯಬೇಕಾಗುತ್ತದೆ. ಏಕೆಂದರೆ ಸ್ವತಃ ಹಾಗೆ ಮಾಡಬಾರದು ಎಂದು ನೆನಪಿಸಿಕೊಳ್ಳುತ್ತಾ ಇರಬೇಕಾಗುತ್ತದೆ. ತುರಿಕೆ ಹೆಚ್ಚು ಇದ್ದಲ್ಲಿ ಆರಂಭಿಕ ಹಂತದಲ್ಲಿ ಕೋಲ್ಡ್ ಕಂಪ್ರೆಶನ್ ಕೊಡಬಹುದು. ಐಸ್ ಪ್ಯಾಕ್ ಇಡಬಹುದು, ಸ್ವಚ್ಛ ಹ್ಯಾಂಡ್ ಕರ್ಚೀಫ್ ಅನ್ನು ಐಸ್ ನೀರಿನಲ್ಲಿ ಹಾಕಿ ಕಣ್ಣಿಗೆ ಇಟ್ಟರೆ ತುರಿಕೆಯ ಸಂವೇದನೆ ಕಡಿಮೆಯಾಗಬಹುದು. ಆರಂಭದಲ್ಲಿ ಕೃತಕ ಕಣ್ಣೀರಿನ ಡ್ರಾಪ್ಸ್ ಇರುತ್ತದೆ, ಅದನ್ನು ಹಾಕಬಹುದು. ಅದನ್ನೂ ಫ್ರಿಜ್ನಲ್ಲಿ ಇಟ್ಟು ಬಳಸಬಹುದು. ಇವು ತುರಿಕೆಯ ಸಂವೇದನೆಯಿಂದ ಸ್ವಲ್ಪ ಪರಿಹಾರ ಕೊಡುತ್ತದೆ. ಈ ಎಲ್ಲಾ ಮೂಲ ಪರಿಹಾರಗಳನ್ನು ಅನುಸರಿಸಿದ ಮೇಲೂ ಕಡಿಮೆಯಾಗದೆ ಇದ್ದರೆ ವೈದ್ಯರನ್ನು ಕಾಣಬೇಕಾಗುತ್ತದೆ. ಸಮಸ್ಯೆ ಏನಿರುತ್ತದೆ ಎಂದು ಪರಿಶೀಲಿಸಿ ಚಿಕಿತ್ಸೆ ಪಡೆಯಬೇಕಾಗುತ್ತದೆ.
ಕಣ್ಣಿನ ರೆಪ್ಪೆ ಹಾರುವುದು ಅಥವಾ ತುರಿಕೆಗೂ ಕಣ್ಣು ಉಜ್ಜುವುದಕ್ಕೂ ಸಂಬಂಧವಿದೆಯೆ?
ಸಂಬಂಧ ಇರಬಹುದು. ಕೆಲವರಿಗೆ ತುಂಬಾ ಅಲರ್ಜಿ ಇದ್ದಾಗ ರೆಪ್ಪೆ ಹಾರುವ ಸಮಸ್ಯೆ ಇರಬಹುದು. ಅಲರ್ಜಿ ಮತ್ತು ತುರಿಕೆ ಇರಲೇಬೇಕು ಎಂದೇನಿಲ್ಲ. ಕೆಲವೊಮ್ಮೆ ನಿದ್ರೆ ಚೆನ್ನಾಗಿ ಬಾರದೆ ಇರುವುದು ಅಥವಾ ಉತ್ತಮ ನಿದ್ರೆ ಸಿಗದೆ ಇರುವುದು, ಜೀವನದಲ್ಲಿ ಬಹಳ ಒತ್ತಡ ಇದೆ ಮತ್ತು ಕಣ್ಣಿನ ಮೇಲೆ ಒತ್ತಡ ಬಿದ್ದಾಗಲೂ ರೆಪ್ಪೆ ಹಾರಲು ಪ್ರಾರಂಭವಾಗುತ್ತದೆ. ಒಮ್ಮೆ ನೀವು ನಿದ್ರೆ ಸರಿಯಾಗಿ ಮಾಡಿದರೆ ಮತ್ತು ಕಣ್ಣಿನ ಮೇಲಿನ ಒತ್ತಡ ಕಡಿಮೆಯಾಗಲು ಸ್ಕ್ರೀನ್ ಟೈಮ್ ಕಡಿಮೆಯಾದರೆ ಸ್ವಯಂಚಾಲಿತವಾಗಿ ಕಡಿಮೆಯಾಗುತ್ತದೆ.
ಹಾರುವುದು ಅಥವಾ ತುರಿಕೆಯಾದರೆ ವೈದ್ಯರನ್ನು ಕಾಣಬೇಕೆ?
ಇಲ್ಲ. ಇಂತಹ ಸಮಸ್ಯೆಗೆ ನಿರ್ದಿಷ್ಟ ಚಿಕಿತ್ಸೆಯ ಅಗತ್ಯವಿರುವುದಿಲ್ಲ. ನಿದ್ರೆ ಚೆನ್ನಾಗಿ ಮಾಡಿಕೊಂಡು ಒತ್ತಡ ಕಡಿಮೆ ಮಾಡಿಕೊಂಡರೆ ಸಾಕಾಗುತ್ತದೆ. ಆದರೆ ದೀರ್ಘ ಕಾಲದವರೆಗೆ ರೆಪ್ಪೆ ಹಾರುವುದು ಅಥವಾ ತುರಿಕೆ ಮುಂದುವರಿಯದೆ ಇದ್ದಲ್ಲಿ ವೈದ್ಯರನ್ನು ಸಂಪರ್ಕಿಸುವ ಅಗತ್ಯವಿರುವುದಿಲ್ಲ. ಕೆಲವೊಮ್ಮೆ ಅತಿಯಾಗಿ ಗಂಭೀರವಾದಲ್ಲಿ ಅಂದರೆ ಸ್ಪ್ಯಾಸ್ಮೋಡಿಕ್ ಆದಾಗ (ಸೆಳೆತದಂತೆ ಎಳೆದೆಳೆದು ಬಂದಾಗ) ವೈದ್ಯರನ್ನು ಕಾಣಬೇಕಾಗುತ್ತದೆ.
ಈಗ ಹೆಚ್ಚು ಹರಡುತ್ತಿರುವ ಕಣ್ಣಿನ ಸೋಂಕಿಗೆ ಇಂತಹ ಚಿಹ್ನೆಗಳು ಇವೆಯೆ?
ಇದೆ. ಸಾಮಾನ್ಯವಾಗಿ ಮೊದಲು ಕಂಡುಬರುವ ಚಿಹ್ನೆ ಎಂದರೆ ಕಣ್ಣು ಕೆಂಪಾಗುವುದು. ಮುಖ್ಯವಾಗಿ ಬೆಳಿಗ್ಗೆ ಎದ್ದಾಗ ಬಿಳಿ ಪೊರೆ ಬಂದು ಕಣ್ಣು ಬಿಡುವುದು ಕಷ್ಟ ಎಂದು ಹೇಳುತ್ತಿರುತ್ತಾರೆ. ಕೆಲವೊಮ್ಮೆ ನೀರು ಬರಬಹುದು ಅಥವಾ ತುರಿಕೆ ಬರಬಹುದು. ಇವು ಸಾಮಾನ್ಯ ಚಿಹ್ನೆಗಳು.
ಕಣ್ಣಿನ ಸೋಂಕು ಹರಡದಂತೆ ಯಾವ ಮುಂಜಾಗರೂಕತೆ ವಹಿಸಬಹುದು?
ತಪ್ಪಿಸಬೇಕು ಎಂದರೆ ಕೈಗಳು ಸ್ವಚ್ಛವಾಗಿಡಬೇಕು. ಎಷ್ಟು ಸಾಧ್ಯವಾದಷ್ಟು ಕಣ್ಣು ಸ್ಪರ್ಶಿಸಬಾರದು. ಮುಖ್ಯವಾಗಿ ಡ್ರಾಪ್ಗಳನ್ನು ಹಾಕಿದ ನಂತರ ಕೈಗಳನ್ನು ತೊಳೆಯಬೇಕು. ಡ್ರಾಪ್ ಹಾಕಿದ ನಂತರ ಇತರ ಏನೇ ಸ್ಪರ್ಶಿಸುವ ಮೊದಲು ಕೈ ತೊಳೆಯಬೇಕು. ಫೋನ್, ರಿಮೋಟ್ ಎಲ್ಲಾ ಸ್ಪರ್ಶಿಸಿದರೆ ಇತರರಿಗೂ ಹರಡಬಹುದು. ಟವೆಲ್, ತಲೆದಿಂಬು ಮೊದಲಾದವನ್ನು ಹಂಚಿಕೊಳ್ಳಬಾರದು. ಕಣ್ಣಿನ ಸೌಂದರ್ಯವರ್ಧಕಗಳನ್ನು ಹಂಚಿಕೊಳ್ಳಬಾರದು. ಸಾರ್ವಜನಿಕ ಸ್ಥಳವಾದ ಈಜುಕೊಳದಂತಹ ಕಡೆಗಳಿಗೆ ಹೋಗಬಾರದು. ಜನರೊಂದಿಗೆ ಕಡಿಮೆ ಸಂಪರ್ಕವಿಟ್ಟುಕೊಳ್ಳಬೇಕಾಗುತ್ತದೆ. ಮುಖ್ಯವಾಗಿ ಕಣ್ಣಿನ ಸೋಂಕು ಇದ್ದಾಗ ಮಕ್ಕಳನ್ನು ಶಾಲೆಗೆ ಕಳುಹಿಸಬಾರದು.






