ಬದಲಾಗುತ್ತಿರುವ ಜೀವನಶೈಲಿಯ ನಡುವೆ ಹೆಚ್ಚಾಗುತ್ತಿರುವ ಕಾಯಿಲೆಗಳಿಗೆ ಪ್ರಕೃತಿ ಚಿಕಿತ್ಸೆಯಲ್ಲಿ ಪರಿಹಾರವಿದೆಯೆ?

ಸಾಂದರ್ಭಿಕ ಚಿತ್ರ | Photo Credit : magnific
ಜೀವನಶೈಲಿಯಲ್ಲಿ ಆರೋಗ್ಯಕರ ಬದಲಾವಣೆ ಹೇಗೆ ತರಬಹುದು ಎನ್ನುವ ಬಗ್ಗೆ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜು ಮತ್ತು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳು ಮತ್ತು ಪ್ರಾಂಶುಪಾಲರಾದ ಡಾ ಶಿವಪ್ರಸಾದ್ ಶೆಟ್ಟಿ ‘ವಾರ್ತಾಭಾರತಿ’ ಜೊತೆಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಯಿಂದ ಮಾನವನ ಜೀವನ ಹಿಂದಿಗಿಂತಲೂ ಹೆಚ್ಚು ಸುಲಭ ಮತ್ತು ವೇಗಗೊಂಡಿದೆ. ಆಹಾರ, ಸಾರಿಗೆ, ಸಂವಹನ, ವಿದ್ಯೆ, ಮನೋರಂಜನೆಯ ಸೌಲಭ್ಯಗಳು ಬೆರಳ ತುದಿಯಲ್ಲಿ ಲಭ್ಯವಿದೆ. ಪ್ರಪಂಚವನ್ನೇ ತನ್ನ ಅಂಗೈಯಗಲಕ್ಕೆ ಇಳಿಸಿರುವ ಮಾನವ ತನ್ನ ಆರೋಗ್ಯದಿಂದ ಮಾತ್ರ ಬಹು ದೂರ ಸಾಗಿದ್ದಾನೆ. ಜೀವನದ ವೇಗ ಹೆಚ್ಚುತ್ತಿದ್ದಂತೆ ಆರೋಗ್ಯಕರ ಜೀವನ ಶೈಲಿಯ ಪಾಲನೆ ಕಷ್ಟವಾಗಿ ಆರೋಗ್ಯದ ಗುಣಮಟ್ಟ ಕುಸಿಯುತ್ತಿದೆ. ಹಿಂದೆ ವಯಸ್ಕರಲ್ಲಿ ಕಂಡು ಬರುತ್ತಿದ್ದ ಬೊಜ್ಜು ಮಧುಮೇಹ ಅಧಿಕ ರಕ್ತದೊತ್ತಡ ಹಾಗೂ ಹೃದಯ ಸಂಬಂಧಿ ಕಾಯಿಲೆಗಳು ಇಂದು ಯುವಕರನ್ನು ಬಾಧಿಸುತ್ತಿರುವುದು ಆತಂಕಕಾರಿ ಬೆಳವಣಿಗೆ. ಈ ನಿಟ್ಟಿನಲ್ಲಿ ಜೀವನಶೈಲಿಯಲ್ಲಿ ಆರೋಗ್ಯಕರ ಬದಲಾವಣೆ ಹೇಗೆ ತರಬಹುದು ಎನ್ನುವ ಬಗ್ಗೆ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜು ಮತ್ತು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳು ಮತ್ತು ಪ್ರಾಂಶುಪಾಲರಾದ ಡಾ ಶಿವಪ್ರಸಾದ್ ಶೆಟ್ಟಿ ವಾರ್ತಾಭಾರತಿ ಜೊತೆಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಜೀವನಶೈಲಿ ಆಧಾರಿತ ರೋಗಗಳಿಗೆ ಕಾರಣವೇನು?
ತಂತ್ರಜ್ಞಾನದ ಅತಿಯಾದ ಬಳಕೆ, ದೈಹಿಕ ಪರಿಶ್ರಮವಿಲ್ಲದೆ ದೀರ್ಘಕಾಲ ಕುಳಿತುಕೊಂಡು ಮಾಡುವ ಕೆಲಸ ತ್ವರಿತ ಆಹಾರಗಳ ಸೇವನೆ, ಸಮಯಕ್ಕೆ ಸರಿಯಾಗಿ ಆಹಾರ ಸೇವಿಸದಿರುವುದು, ದೈಹಿಕ ಪರಿಶ್ರಮದ ಕೊರತೆ, ಹೆಚ್ಚುತ್ತಿರುವ ಮಾನಸಿಕ ಒತ್ತಡ, ನಿದ್ರಾಹೀನತೆ, ಧೂಮಪಾನ, ಮದ್ಯಪಾನ ಹಾಗೂ ಕುಟುಂಬ ಮತ್ತು ಸಮಾಜದೊಂದಿಗೆ ಕಡಿಮೆಯಾಗುತ್ತಿರುವ ಭಾವನಾತ್ಮಕ ಸಂಪರ್ಕ ಇಂತಹ ಜೀವನ ಶೈಲಿಯು ದೇಹದ ಚಯಾಪಚಯ ಕ್ರಿಯೆಯಲ್ಲಿ ವ್ಯತ್ಯಾಸ ಉಂಟು ಮಾಡುತ್ತದೆ. ಅದರಿಂದ ತೂಕ ಹೆಚ್ಚಳ, ಇನ್ಸುಲಿನ್ ಸೆನ್ಸಿಟಿವಿಟಿ, ಮುಟ್ಟಿನ ಸಮಸ್ಯೆಗಳು, ಅಧಿಕ ರಕ್ತದೊತ್ತಡ, ಮಾನಸಿಕ ಅಸ್ವಸ್ಥತೆ, ಹೃದಯ ಸಂಬಂಧಿ ಕಾಯಿಲೆಗಳು ಮುಂತಾದ ಹಲವಾರು ಜೀವನ ಶೈಲಿ ಆಧಾರಿತ ರೋಗಗಳನ್ನು ಆಹ್ವಾನಿಸುತ್ತಿದೆ. ಇವೆಲ್ಲದಕ್ಕೂ ಸೂಕ್ತವಾದ ಪರಿಹಾರ ಪ್ರಕೃತಿ ಚಿಕಿತ್ಸೆಯನ್ನು ಜೀವನಶೈಲಿಯ ಭಾಗವಾಗಿಸುವುದು.
ಪ್ರಕೃತಿ ಜೊತೆಗೆ ಆರೋಗ್ಯದ ಮರುಸಂಪರ್ಕ ಹೇಗೆ ಸಾಧ್ಯವಿದೆ?
ಪ್ರಕೃತಿ ಚಿಕಿತ್ಸೆಯು ದೇಹದ ರೋಗನಿರೋಧಕ ಶಕ್ತಿಯನ್ನು ಉತ್ತೇಜಿಸುವುದರ ಜೊತೆಗೆ ಆರೋಗ್ಯಕರ ಜೀವನಶೈಲಿಯನ್ನು ರೂಪಿಸಿಕೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ರೋಗ ಬಂದ ನಂತರ ಚಿಕಿತ್ಸೆ ಪಡೆಯುವುದಕ್ಕಿಂತ, ರೋಗ ಬಾರದಂತೆ ಮುನ್ನೆಚ್ಚರಿಕೆ ವಹಿಸುವುದು ಉತ್ತಮ. ಆರೋಗ್ಯವೆಂದರೆ ಕೇವಲ ರೋಗಗಳಿಲ್ಲದ ಸ್ಥಿತಿಯಲ್ಲ; ಅದು ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಯೋಗಕ್ಷೇಮದ ಸಮತೋಲನವಾಗಿದೆ. ಹಾಗಾಗಿ, ಪ್ರಕೃತಿ ಚಿಕಿತ್ಸೆಯ ಮೂಲಕ ಆರೋಗ್ಯಕರ ಆಹಾರ ಪದ್ಧತಿ, ನಿಯಮಿತ ವ್ಯಾಯಾಮ, ಸಮರ್ಪಕ ನಿದ್ರೆ, ಮಾನಸಿಕ ನೆಮ್ಮದಿ ಹಾಗೂ ದುಶ್ಚಟಗಳಿಂದ ದೂರವಿರುವುದನ್ನು ಪ್ರತಿಯೊಬ್ಬರೂ ತಮ್ಮ ಜೀವನದ ಅವಿಭಾಜ್ಯ ಅಂಗವನ್ನಾಗಿಸಿಕೊಳ್ಳಬೇಕು.
ಪ್ರಕೃತಿ ಚಿಕಿತ್ಸೆ ಎಂದರೇನು? ವೈಜ್ಞಾನಿಕವಾಗಿ ಅದೆಷ್ಟು ಸೂಕ್ತ?
ಪ್ರಕೃತಿ ಚಿಕಿತ್ಸೆಯಲ್ಲಿನ ನೈಸರ್ಗಿಕ ಆಹಾರ ಚಿಕಿತ್ಸೆ, ಉಪವಾಸ ಚಿಕಿತ್ಸೆ, ಜಲ ಚಿಕಿತ್ಸೆ, ಮಣ್ಣಿನ ಚಿಕಿತ್ಸೆ, ಸೂಜಿ ಚಿಕಿತ್ಸೆ, ವರ್ಣ ಚಿಕಿತ್ಸೆ, ಯೋಗಾಸನ, ಪ್ರಾಣಾಯಾಮ ಮತ್ತು ಧ್ಯಾನ ಮುಂತಾದ ಚಿಕಿತ್ಸಾ ವಿಧಾನಗಳು ಆರೋಗ್ಯಕರ ಜೀವನ ಶೈಲಿಯನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಅಧಿಕ ರಕ್ತದೊತ್ತಡ, ಮಧುಮೇಹ, ಸ್ಥೂಲಕಾಯ, ಹೃದಯ ಸಂಬಂಧಿತ ಕಾಯಿಲೆಗಳು, ರಕ್ತದಲ್ಲಿನ ಕೊಲೆಸ್ಟ್ರಾಲ್ ಹೆಚ್ಚಳ, ಫ್ಯಾಟ್ಟಿ ಲಿವರ್, ಮೆಟಬಾಲಿಕ್ಸ್ ಸಿಂಡ್ರೋಮ್, ಪಿ. ಸಿ. ಓ. ಎಸ್, ಥೈರಾಯಿಡ್, ಮಾನಸಿಕ ಖಿನ್ನತೆ, ಆತಂಕ, ಅಸ್ತಮಾ ಮುಂತಾದ ಉಸಿರಾಟದ ಸಮಸ್ಯೆಗಳು ಮಲಬದ್ಧತೆ, ಸಂಧಿವಾತ, ಬೆನ್ನು ನೋವು ಮುಂತಾದ ಹಲವಾರು ಜೀವನಶೈಲಿ ಆಧಾರಿತ ಕಾಯಿಲೆಗಳ ತಡೆಗಟ್ಟುವಿಕೆ ಮತ್ತು ನಿರ್ವಹಣೆಯಲ್ಲಿ ಪ್ರಕೃತಿ ಚಿಕಿತ್ಸೆಯು ಪರಿಣಾಮಕಾರಿಯಾಗಿದೆ ಎಂಬುದು ಅನೇಕ ವೈಜ್ಞಾನಿಕ ಸಂಶೋಧನೆಗಳಿಂದ ದೃಢಪಟ್ಟಿದೆ.
ಪ್ರಕೃತಿ ಚಿಕಿತ್ಸೆಯ ಮಹತ್ವದ ಬಗ್ಗೆ ಏನು ಹೇಳಬಯಸುತ್ತೀರಿ?
ಭಾರತೀಯ ಪ್ರಕೃತಿ ಚಿಕಿತ್ಸೆಯ ಪಿತಾಮಹ ಎಂದೇ ಗೌರವಿಸಲ್ಪಡುವ ಗಾಂಧೀಜಿಯವರು ಪ್ರಕೃತಿ ಚಿಕಿತ್ಸೆಯ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಇತರರಿಗೂ ಅವುಗಳನ್ನು ಅನುಸರಿಸುವಂತೆ ಪ್ರೇರೇಪಿಸಿದರು. ಪ್ರತಿ ವರ್ಷ ನವೆಂಬರ್ 18ರಂದು ಆಚರಿಸಲಾಗುವ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನದಂದು ಗಾಂಧೀಜಿಯವರ ಆಶಯಗಳನ್ನು ಸ್ಮರಿಸುವುದರ ಜೊತೆಗೆ ಆರೋಗ್ಯಕರ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಬೇಕು. ಪ್ರಕೃತಿಯೊಂದಿಗೆ ಬೆರೆತು ಆರೋಗ್ಯಕರವಾಗಿ ಬದುಕುವ ಪ್ರತಿಜ್ಞೆ ಮಾಡಬೇಕು. ಪ್ರಕೃತಿಯೇ ನಮ್ಮ ಆರೋಗ್ಯದ ಆಧಾರ. ಆರೋಗ್ಯಕರ ಜೀವನವೇ ನಮ್ಮ ನಿಜವಾದ ಸಂಪತ್ತು ಎಂಬ ಅರಿವಿನೊಂದಿಗೆ ಸ್ವಾಸ್ತ್ಯ ಸಂರಕ್ಷಣೆಯತ್ತ ಹೆಜ್ಜೆ ಹಾಕಿ ಸದೃಢ ಸಮಾಜದ ನಿರ್ಮಾಣಕ್ಕೆ ನಾಂದಿ ಹಾಡೋಣ.
ಪ್ರಕೃತಿ ಚಿಕಿತ್ಸೆ ಇಂದಿನ ದಿನಗಳಲ್ಲಿ ಎಷ್ಟು ಪ್ರಸ್ತುತ?
ಇಂದಿನ ದಿನಗಳಲ್ಲಿ ಆರೋಗ್ಯ ಸೇವೆಯ ಪರಿಕಲ್ಪನೆಯೂ ಕೇವಲ ರೋಗಗಳ ಪತ್ತೆ ಮತ್ತು ಚಿಕಿತ್ಸೆಗೆ ಸೀಮಿತವಾಗದೆ ವ್ಯಕ್ತಿಯ ಸಮಗ್ರ ಆರೋಗ್ಯ ಮತ್ತು ಜೀವನದ ಗುಣಮಟ್ಟವನ್ನು ಹೆಚ್ಚಿಸುವತ್ತ ಸಾಗುತ್ತಿದೆ. ಈ ನಿಟ್ಟಿನಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯು ಮಹತ್ವದ ಸ್ಥಾನವನ್ನು ಹೊಂದಿದೆ. ಪ್ರತಿಯೊಬ್ಬ ವ್ಯಕ್ತಿಯ ದೈಹಿಕ ಸಾಮರ್ಥ್ಯ, ಆಹಾರ ಪದ್ಧತಿ, ಮಾನಸಿಕ ಸ್ಥಿತಿ ಮತ್ತು ಜೀವನ ಶೈಲಿಯನ್ನು ಪರಿಗಣಿಸಿ ವೈಯಕ್ತಿಕ ಆರೋಗ್ಯ ನಿರ್ವಹಣೆಗೆ ಸೂಕ್ತವಾದ ಮಾರ್ಗದರ್ಶನವನ್ನು ನೀಡುವುದೇ ಪ್ರಕೃತಿ ಚಿಕಿತ್ಸೆಯ ವಿಶೇಷತೆ ಆಗಿದೆ. ವಿಶೇಷವಾಗಿ ಮಕ್ಕಳು, ಯುವಕರು, ಮಹಿಳೆಯರು, ವೃದ್ಧರು ಹಾಗೂ ಒತ್ತಡ ಪೂರ್ಣ ಜೀವನ ಶೈಲಿಯನ್ನು ನಡೆಸುವ ಪ್ರತಿಯೊಬ್ಬರಲ್ಲಿಯೂ ಆರೋಗ್ಯದ ಬಗ್ಗೆ ಅರಿವು ಮೂಡಿಸುವಲ್ಲಿ ಪ್ರಕೃತಿ ಚಿಕಿತ್ಸೆಯ ಪಾತ್ರ ಮಹತ್ತರದ್ದು. ಶಾಲಾ-ಕಾಲೇಜುಗಳಲ್ಲಿ, ಉದ್ಯೋಗ ಸ್ಥಳಗಳಲ್ಲಿ ಮತ್ತು ಸಮುದಾಯ ಮಟ್ಟದಲ್ಲಿ ಯೋಗ, ಆರೋಗ್ಯಕರ ಆಹಾರ ಪದ್ಧತಿ, ಧ್ಯಾನ ಹಾಗೂ ಪ್ರಕೃತಿ ಚಿಕಿತ್ಸೆಯ ಮೂಲ ತತ್ವಗಳನ್ನು ಪರಿಚಯಿಸುವುದು ಇಂದಿನ ಸಮಾಜಕ್ಕೆ ಅತ್ಯಗತ್ಯವಾಗಿದೆ.
ಮಾನವ ಆರೋಗ್ಯಕ್ಕೆ ಸಂಬಂಧಿಸಿ ಪರಿಸರ ಸಂರಕ್ಷಣೆಯ ಮಹತ್ವವೇನು?
ಮಾನವನ ಆರೋಗ್ಯ ಮತ್ತು ಪರಿಸರ ಒಂದಕ್ಕೊಂದು ಅವಿನಾಭವ ಸಂಬಂಧವನ್ನು ಹೊಂದಿದೆ. ವಾಯು ಮಾಲಿನ್ಯ, ಜಲ ಮಾಲಿನ್ಯ ರಾಸಾಯನಿಕಗಳ ಅತಿಯಾದ ಬಳಕೆ ಆಹಾರದಲ್ಲಿನ ಕಲಬೆರಕೆಯು ಸಮಾಜದ ಆರೋಗ್ಯಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕುವುದು, ಗಿಡ ಮರಗಳನ್ನು ಬೆಳೆಸುವುದು, ನೀರನ್ನು ಮಿತವಾಗಿ ಬಳಸುವುದು, ಸ್ಥಳೀಯ ಮತ್ತು ಋತುಮಾನಕ್ಕೆ ಅನುಗುಣವಾದ ಆಹಾರಕ್ಕೆ ಆದ್ಯತೆ ನೀಡುವುದು ಹಾಗೂ ಪರಿಸರ ಸ್ನೇಹಿ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಆರೋಗ್ಯಕರ ಸಮಾಜದ ನಿರ್ಮಾಣಕ್ಕೆ ಸಹಕಾರಿಯಾಗಿದೆ ಎಂದು ಹೇಳಿದರು.






