ಉದ್ದಿನ ಬೇಳೆ ತಿಂದ ಬಳಿಕ ಹೊಟ್ಟೆ ಭಾರವೇ? ಇಲ್ಲಿವೆ ಸರಳ ಪರಿಹಾರಗಳು!

ಸಾಂದರ್ಭಿಕ ಚಿತ್ರ | Photo Credit : magnific
ಹಿರಿಯ ಆಹಾರ ತಜ್ಞೆ ಡಾ. ದಿವ್ಯಾ ಪಟೇಲ್ ಅವರು ಕೆಲವರಿಗೆ ಉದ್ದಿನ ಬೇಳೆ ಸೇವಿಸಿದಾಗ ಹೊಟ್ಟೆ ಉಬ್ಬರ, ಗ್ಯಾಸ್ ಅಥವಾ ಹೊಟ್ಟೆ ತುಂಬಿದ ಅನುಭವದಿಂದ ಅಸ್ವಸ್ಥತೆ ಉಂಟಾಗುವುದೇಕೆ ಎಂಬುದನ್ನು ವಿವರಿಸಿದ್ದಾರೆ.
ಅನೇಕ ಭಾರತೀಯ ಅಡುಗೆಮನೆಗಳಲ್ಲಿ ಉದ್ದಿನ ಬೇಳೆ ಪ್ರಮುಖ ಪದಾರ್ಥವಾಗಿದೆ. ಅದರಿಂದ ದಾಲ್ ಮಖಾನಿ ತಯಾರಿಸಬಹುದು. ಇಡ್ಲಿ ಮತ್ತು ದೋಸೆ ಹಿಟ್ಟಿನಲ್ಲೂ ಬಳಸಬಹುದು. ಅನ್ನದೊಂದಿಗೆ ಬೇಯಿಸಿ ತಿನ್ನಬಹುದು. ಆದರೆ ಕೆಲವರಿಗೆ ಉದ್ದಿನ ಬೇಳೆ ಇರುವ ಆಹಾರ ಸೇವಿಸಿದಾಗ ಹೊಟ್ಟೆ ಉಬ್ಬರ, ಗ್ಯಾಸ್ ಅಥವಾ ಹೊಟ್ಟೆ ತುಂಬಿದ ಅನುಭವದಿಂದ ಅಸ್ವಸ್ಥತೆ ಉಂಟಾಗಬಹುದು. ಹೀಗೇಕೆ ಆಗುತ್ತದೆ?
ಸೂರತ್ ನ ಬ್ಯಾಲೆನ್ಸ್ ಡಯಟ್ ಆಂಡ್ ಲೈಫ್ಸ್ಟೈಲ್ ಮಾಡಿಫಿಕೇಶನ್ ಕ್ಲಿನಿಕ್ನ ಸಂಸ್ಥಾಪಕ ನಿರ್ದೇಶಕಿ ಹಾಗೂ ರಿವರ್ಸ್ ಡಿಸೀಸ್ನ ಹಿರಿಯ ಆಹಾರ ತಜ್ಞೆ ಡಾ. ದಿವ್ಯಾ ಪಟೇಲ್ ಅವರ ಪ್ರಕಾರ, ಉದ್ದಿನ ಬೇಳೆಯಲ್ಲಿ ಕೆಲವು ಬಗೆಯ ಸಕ್ಕರೆ ಅಂಶಗಳಿದ್ದು, ಅವುಗಳನ್ನು ಜೀರ್ಣಿಸಿಕೊಳ್ಳಲು ಮಾನವ ದೇಹಕ್ಕೆ ಕಷ್ಟವಾಗಬಹುದು.
►ಉದ್ದಿನ ಬೇಳೆ ಏಕೆ ಗ್ಯಾಸ್ ಮತ್ತು ಹೊಟ್ಟೆ ಉಬ್ಬರಕ್ಕೆ ಕಾರಣವಾಗುತ್ತದೆ?
ಉದ್ದಿನ ಬೇಳೆಯಲ್ಲಿ ಒಲಿಗೊಸ್ಯಾಕರೈಡ್ಸ್ (oligosaccharides) ಎಂಬ ಕಾರ್ಬೋಹೈಡ್ರೇಟ್ಗಳಿರುತ್ತವೆ. ಇವುಗಳನ್ನು ಸಣ್ಣ ಕರುಳು ಸರಿಯಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಏಕೆಂದರೆ ಇವುಗಳನ್ನು ವಿಭಜಿಸುವ ಅಗತ್ಯ ಕಿಣ್ವಗಳು ದೇಹದಲ್ಲಿ ಸಾಕಷ್ಟು ಇರುವುದಿಲ್ಲ. ಹೀಗಾಗಿ ಈ ಅಂಶಗಳು ದೊಡ್ಡ ಕರುಳನ್ನು ತಲುಪುತ್ತವೆ. ಅಲ್ಲಿ ಬ್ಯಾಕ್ಟೀರಿಯಾಗಳು ಅವುಗಳನ್ನು ಹುದುಗಿಸುವ ಪ್ರಕ್ರಿಯೆ ನಡೆಸುತ್ತವೆ. ಇದರಿಂದ ಹೈಡ್ರೋಜನ್, ಕಾರ್ಬನ್ ಡೈಆಕ್ಸೈಡ್ ಮತ್ತು ಮೀಥೇನ್ನಂತಹ ಅನಿಲಗಳು ಉತ್ಪತ್ತಿಯಾಗುತ್ತವೆ. ಇದೇ ಗ್ಯಾಸ್ ಹೆಚ್ಚಾಗಲು ಮತ್ತು ಹೊಟ್ಟೆ ಉಬ್ಬರ ಉಂಟಾಗಲು ಕಾರಣವಾಗಬಹುದು. ಇದು ವೈಜ್ಞಾನಿಕ ಕಾರಣವಾಗಿದೆ.
►ಯಾರಿಗೆ ಹೆಚ್ಚು ಅಸ್ವಸ್ಥತೆ ಉಂಟಾಗುವ ಸಾಧ್ಯತೆಯಿದೆ?
ಆಯುರ್ವೇದದ ಪ್ರಕಾರ, ಉದ್ದಿನ ಬೇಳೆ ದೇಹದಲ್ಲಿ ವಾತವನ್ನು ಹೆಚ್ಚಿಸುವ ಆಹಾರವೆಂದು ಪರಿಗಣಿಸಲಾಗಿದೆ. ಇದರಿಂದ ಗ್ಯಾಸ್ ಸಮಸ್ಯೆ ಉಂಟಾಗಬಹುದು. ಜೀರ್ಣಕ್ರಿಯೆ ನಿಧಾನವಾಗಿರುವವರಿಗೆ ಹೆಚ್ಚು ತೊಂದರೆಯಾಗುವ ಸಾಧ್ಯತೆಯಿದೆ. ಇಂತಹವರು ಉದ್ದಿನ ಬೇಳೆಯನ್ನು ಮಿತವಾಗಿ ಸೇವಿಸಬೇಕು.
►ಉದ್ದಿನ ಬೇಳೆಯನ್ನು ಸುಲಭವಾಗಿ ಜೀರ್ಣವಾಗುವಂತೆ ಮಾಡುವುದು ಹೇಗೆ?
ಉದ್ದಿನ ಬೇಳೆಯನ್ನು 7–8 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಬೇಕು. ಇದರಿಂದ ಒಲಿಗೊಸ್ಯಾಕರೈಡ್ಗಳ ಪ್ರಮಾಣ ಕಡಿಮೆಯಾಗಬಹುದು. ಬಳಿಕ ಬೇಳೆಯನ್ನು ಚೆನ್ನಾಗಿ ತೊಳೆದು ಬಳಸಬೇಕು.
ಅಡುಗೆ ಮಾಡುವಾಗ ಇಂಗು, ಜೀರಿಗೆ, ಶುಂಠಿ, ಬೆಳ್ಳುಳ್ಳಿ ಮತ್ತು ಓಂಕಾಳಿನಂತಹ ಮಸಾಲೆಗಳನ್ನು ಬಳಸಬಹುದು. ಇವು ಜೀರ್ಣಕ್ರಿಯೆಗೆ ನೆರವಾಗಬಹುದು. ಉದ್ದಿನ ಬೇಳೆಯನ್ನು ಪ್ರೆಶರ್ ಕುಕ್ಕರ್ನಲ್ಲಿ ಚೆನ್ನಾಗಿ ಬೇಯಿಸುವುದೂ ಸೂಕ್ತ. ಗ್ಯಾಸ್ ಸಮಸ್ಯೆ ನಿವಾರಿಸಲು ಉದ್ದಿನ ಬೇಳೆ ಸೇವಿಸಿದ ಬಳಿಕ ನಾಲ್ಕರಿಂದ ಐದು ಬಿಳಿ ಮೆಣಸಿನ ಕಾಳುಗಳನ್ನು ಸೇವಿಸಬಹುದು ಎಂದು ಆಹಾರ ತಜ್ಞೆ ಸಲಹೆ ನೀಡಿದ್ದಾರೆ.
ಉದ್ದಿನ ಬೇಳೆಯಂತಹ ದ್ವಿದಳ ಧಾನ್ಯಗಳಲ್ಲಿ ಪ್ರೊಟೀನ್ ಅಧಿಕವಾಗಿರುತ್ತದೆ. ಪ್ರೊಟೀನ್ಯುಕ್ತ ಆಹಾರದ ಜೊತೆಗೆ ಸಾಕಷ್ಟು ಫೈಬರ್ ಕೂಡ ದೇಹಕ್ಕೆ ದೊರೆಯಬೇಕು. ಪ್ರೊಟೀನ್ ಮತ್ತು ಫೈಬರ್ ಸಮತೋಲಿತ ಪ್ರಮಾಣದಲ್ಲಿ ದೊರೆತರೆ ಜೀರ್ಣಕ್ರಿಯೆಗೆ ನೆರವಾಗಬಹುದು. ಆದರೆ ಅನೇಕ ಬಾರಿ ಪ್ರೊಟೀನ್ ಸೇವನೆಗೆ ಹೋಲಿಸಿದರೆ ಫೈಬರ್ ಸೇವನೆ ಕಡಿಮೆಯಾಗಿರುತ್ತದೆ. ಇದೂ ಗ್ಯಾಸ್ ಸಮಸ್ಯೆಗೆ ಕಾರಣವಾಗಬಹುದು.
►ಉದ್ದಿನ ಬೇಳೆ ಸೇವಿಸಿದ ಬಳಿಕ ಹೊಟ್ಟೆ ಉಬ್ಬರಕ್ಕೆ ಯಾವ ಪರಿಹಾರ ಸೂಕ್ತ?
ವಯಸ್ಸಾದವರಲ್ಲಿ ಕೆಲವೊಮ್ಮೆ ಇಂತಹ ಅಸ್ವಸ್ಥತೆ ಹೆಚ್ಚಾಗಿ ಕಾಣಿಸಿಕೊಳ್ಳಬಹುದು. ಇಡ್ಲಿ ಮತ್ತು ದೋಸೆಯ ರೂಪದಲ್ಲಿ ಉದ್ದಿನ ಬೇಳೆ ಸೇವಿಸುವುದರಿಂದ ಸಾಮಾನ್ಯವಾಗಿ ಹೆಚ್ಚಿನವರಿಗೆ ಸಮಸ್ಯೆ ಕಡಿಮೆಯಾಗಬಹುದು. ಏಕೆಂದರೆ ಹಿಟ್ಟು ತಯಾರಿಸುವ ಮೊದಲು ಬೇಳೆಯನ್ನು ನೆನೆಸಿ ತೊಳೆಯಲಾಗುತ್ತದೆ. ಇದರಿಂದ ಒಲಿಗೊಸ್ಯಾಕರೈಡ್ಗಳ ಪ್ರಮಾಣ ಕಡಿಮೆಯಾಗಬಹುದು. ಹೀಗಾಗಿ ಇಡ್ಲಿ ಮತ್ತು ದೋಸೆ ಸೇವಿಸುವವರಿಗೆ ಹೊಟ್ಟೆ ಉಬ್ಬರದ ಸಮಸ್ಯೆ ಕಡಿಮೆ ಇರಬಹುದು.
ಇಡ್ಲಿ ಮತ್ತು ದೋಸೆಯಂತಹ ಆಹಾರಗಳನ್ನು ಆಯ್ಕೆ ಮಾಡಬಹುದು. ಆದರೆ ವಡೆಯಂತಹ ಎಣ್ಣೆಯಲ್ಲಿ ಕರಿದ ಆಹಾರಗಳನ್ನು ಮಿತವಾಗಿ ಸೇವಿಸುವುದು ಸೂಕ್ತ. ಇವುಗಳಲ್ಲಿ ಎಣ್ಣೆಯ ಅಂಶ ಹೆಚ್ಚಿರುವುದರಿಂದ ಕೆಲವರಿಗೆ ಜೀರ್ಣಕ್ರಿಯೆಯಲ್ಲಿ ತೊಂದರೆಯಾಗಬಹುದು. ಉದ್ದಿನ ಬೇಳೆ ಸೇವಿಸಿದ ದಿನ ಸ್ವಲ್ಪ ಹೊತ್ತು ನಡೆಯುವುದರಿಂದಲೂ ಜೀರ್ಣಕ್ರಿಯೆಗೆ ನೆರವಾಗಬಹುದು. ದೈಹಿಕ ಚಟುವಟಿಕೆ ಕಡಿಮೆ ಇರುವವರು ತಮ್ಮ ಸಹಿಷ್ಣುತೆಗೆ ಅನುಗುಣವಾಗಿ ಆಹಾರ ಸೇವನೆಯ ಪ್ರಮಾಣವನ್ನು ನಿಯಂತ್ರಿಸಬಹುದು.
ನಾನು ಗಮನಿಸಿದಂತೆ, ಉದ್ದಿನ ಬೇಳೆಯನ್ನು ನೇರವಾಗಿ ಸೇವಿಸಿದಾಗ ಅಥವಾ ಜೋಳದ ರೊಟ್ಟಿಯೊಂದಿಗೆ ತಿಂದಾಗ ಕೆಲವರಿಗೆ ಗ್ಯಾಸ್ ಸಮಸ್ಯೆ ಉಂಟಾಗುತ್ತದೆ ಎಂದು ಡಾ. ದಿವ್ಯಾ ಪಟೇಲ್ ಹೇಳಿದ್ದಾರೆ.
ಆದರೆ ಗುಜರಾತ್ ನ ಸಾಂಪ್ರದಾಯಿಕ ಆಹಾರಗಳಾದ ಅಡದಿಯಾ (adadiya) ಮತ್ತು ಲಚ್ಕೊ (Lachko) ತಯಾರಿಸಲು ಉದ್ದಿನ ಬೇಳೆಯ ಹಿಟ್ಟನ್ನು ಬಳಸಲಾಗುತ್ತದೆ. ಇವುಗಳನ್ನು ಸೇವಿಸಿದಾಗ ಗ್ಯಾಸ್ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ ಎಂದು ಅವರು ತಿಳಿಸಿದ್ದಾರೆ. ಉದ್ದಿನ ಬೇಳೆಯಿಂದ ತಯಾರಿಸುವ ಕೆಲವು ಸಿಹಿತಿನಿಸುಗಳಲ್ಲಿ ಶುಂಠಿ ಪುಡಿಯನ್ನು ಬಳಸಲಾಗುತ್ತದೆ. ಇದರಿಂದಲೂ ಜೀರ್ಣಕ್ರಿಯೆಗೆ ನೆರವಾಗಬಹುದು. ಹಿಟ್ಟಿನಿಂದ ತಯಾರಿಸಿದ ಆಹಾರಗಳನ್ನು ಸೇವಿಸಿದಾಗ ಗ್ಯಾಸ್ ಸಮಸ್ಯೆ ಕಡಿಮೆ ಇರುತ್ತದೆ. ಆದರೆ ಉದ್ದಿನ ಬೇಳೆಯನ್ನು ನೇರವಾಗಿ ಸೇವಿಸಿದಾಗ ಸಮಸ್ಯೆ ಹೆಚ್ಚಾಗಬಹುದು ಎಂಬುದು ಅವರ ಅಭಿಪ್ರಾಯ.






